ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ನೀಡಿದಾತನಿಗೆ ನ್ಯಾಯ ಒದಗಿಸಿದಾಗ...

ಕಟಕಟೆ–44
Last Updated 10 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ನಾನಾಗ ಮೂರನೆಯ ತರಗತಿಯಲ್ಲಿದ್ದೆ. ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನೆಲ್ಲೆಡೆ ಆಗ ಮೆದುಳು ಜ್ವರ ವ್ಯಾಪಕವಾಗಿತ್ತು. ನಮ್ಮ ಅಕ್ಕಪಕ್ಕದ ಮನೆಯ 11 ಮಂದಿಗೂ ಜ್ವರ ಅಂಟಿಕೊಂಡಿತು. ಅವರಲ್ಲಿ ನಾನೂ ಒಬ್ಬ. ನೋಡನೋಡುತ್ತಿದ್ದಂತೆಯೇ ಜ್ವರ ಉಲ್ಬಣಗೊಂಡು ಒಂಬತ್ತು ಮಂದಿ ಸತ್ತು ಹೋದರು.

ಒಬ್ಬಾಕೆಯ ಕೈ–ಕಾಲು ಊನವಾಗಿ ಬದುಕಿಯೂ ಸತ್ತಂತಾದಳು. ನಾನು ಆಸ್ಪತ್ರೆಯಲ್ಲಿ ಪ್ರಜ್ಞಾಹೀನವಾಗಿ ಬಿದ್ದಿದ್ದೆ. 11 ದಿನವಾದರೂ ಪ್ರಜ್ಞೆ ಬಾರದ ಕಾರಣ, ಬದುಕುವ ಆಸೆಯನ್ನೇ ಮನೆಯವರು ಬಿಟ್ಟುಬಿಟ್ಟಿದ್ದರು. ಆಗ ದೇವರಂತೆ ಬಂದವರು ಅಲ್ಲಿಯ ವೈದ್ಯ ಡಾ. ವೆಂಕಟರಾಮನ್‌. ನನಗೆ ಸೂಕ್ತ ಚಿಕಿತ್ಸೆ ನೀಡಿದರು. ಸಾವಿನ ದವಡೆಗೆ ಹೋಗಿದ್ದ ನನ್ನನ್ನು ಬದುಕಿಸಿದರು...

ಈ ಘಟನೆಯಾಗಿ ಈಗ ಸುಮಾರು 35–40 ವರ್ಷ ಕಳೆದಿದೆ. ನಮ್ಮೂರಿನಿಂದ ಬೆಂಗಳೂರಿಗೆ ಬಂದು ಕೆಲಸ, ಕುಟುಂಬ–ಸಂಸಾರ ಎಲ್ಲದರ ನಡುವೆ ಆಗೀಗ ಈ ವೈದ್ಯರನ್ನು ನೆನಪಿಸಿಕೊಳ್ಳುತ್ತಿದ್ದೆ. ನೆನಪಾದಾಗಲೆಲ್ಲಾ ಅವರ ಋಣ ಹೇಗೆ ತೀರಿಸಲಿ ಎಂದುಕೊಳ್ಳುತ್ತಿದ್ದೆ.

ಎರಡು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆಯೇ ಡಾ. ವೆಂಕಟರಾಮನ್‌ ಅವರು ನನ್ನ ಕಚೇರಿಗೆ ಬಂದುಬಿಟ್ಟರು!  ಆಗ ಅವರು ಕೋಲಾರ ಜಿಲ್ಲಾ ಆರೋಗ್ಯ ಅಧಿಕಾರಿಯಾಗಿದ್ದರು.

ನನ್ನಂಥ ಅದೆಷ್ಟೋ ರೋಗಿಗಳ ಜೀವವನ್ನು ಅವರು ಉಳಿಸಿದ್ದರಿಂದ ಅವರಿಗೆ ನನ್ನ ನೆನಪು ಇರಲಿಲ್ಲ, ಆದರೆ ನಾನು ಅವರನ್ನು ಮರೆಯಲಾದೀತೇ? ಅವರು ತಮ್ಮ ಪರಿಚಯ ಮಾಡಿಕೊಂಡ ನಂತರ, ನನ್ನ ‘ಹಳೆಯ ಸಂಬಂಧ’ ಅವರಿಗೆ ತಿಳಿಸಿದೆ.

ಅಂದು ನಾನು ಜೀವನ್ಮರಣದ ನಡುವೆ ಒದ್ದಾಡುತ್ತಿದ್ದ ಹಾಗೆ ಇಂದು ಅವರದ್ದು ಅಳಿವು–ಉಳಿವಿನ ಸ್ಥಿತಿಯಾಗಿತ್ತು. ಅವರ ನೋವಿನ ಮುಖವನ್ನು ನೋಡಲಾಗದ ನಾನು ವಿಷಯ ಕೇಳಿದಾಗ, ತಂದಿದ್ದ ಎಲ್ಲಾ ದಾಖಲೆಗಳನ್ನು ನನ್ನ ಮುಂದಿಟ್ಟರು. ‘ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಲ್ಲಿ ಇದ್ದೇನೆ’ ಎಂದರು! ಒಂದು ಕ್ಷಣ ನಾನು ಸ್ತಬ್ಧನಾಗಿಬಿಟ್ಟೆ. ಅವರು ಕೊಟ್ಟ ದಾಖಲೆ ತಿರುವಿಹಾಕಿದೆ. 

ಅವರ ಮೇಲಿದ್ದ ಆರೋಪದ ಸಾರಾಂಶ ಹೀಗಿತ್ತು...
ಡಾ. ವೆಂಕಟರಾಮನ್‌ ಅವರ ಇಲಾಖೆಯಲ್ಲಿ ಉಮಾ ಎನ್ನುವವರು ನರ್ಸ್‌ ಆಗಿ ಕೆಲಸ ಮಾಡುತ್ತಿದ್ದರು. 1998ರಲ್ಲಿ ಉಮಾ ಅವರು ಅಪಘಾತವೊಂದರಲ್ಲಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದರಿಂದ 10 ತಿಂಗಳು ಕಚೇರಿಗೆ ಗೈರುಹಾಜರಾಗಿದ್ದರು. ನಂತರ ಕೆಲಸಕ್ಕೆ ಹಾಜರಾಗಲು ಬಂದ ಅವರು, ಈ 10 ತಿಂಗಳ ಸಂಬಳವನ್ನು ನೀಡುವಂತೆ ತಮ್ಮ ಮೇಲಧಿಕಾರಿಯಾಗಿದ್ದ ಡಾ. ವೆಂಕಟರಾಮನ್‌ ಅವರಿಗೆ ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ ಇನ್ನೊಂದು ಅರ್ಜಿಯೂ ವೈದ್ಯರ ಕೈಸೇರಿತ್ತು. ಅದರಲ್ಲಿ ಉಮಾ ಅವರು ತಮ್ಮನ್ನು ತಮ್ಮೂರಿಗೆ ವರ್ಗಾವಣೆ ಮಾಡುವಂತೆ ಕೋರಿಕೊಂಡಿದ್ದರು.

ಆದರೆ ವರ್ಗಾವಣೆ ಬೇಕು ಎಂದರೆ 10 ಸಾವಿರ ರೂಪಾಯಿ ಲಂಚ ನೀಡುವಂತೆ ಡಾ. ವೆಂಕಟರಾಮನ್‌ ಅವರು ಕೇಳಿದ್ದಾರೆ ಎನ್ನುವುದು ಉಮಾ ಅವರ ಆರೋಪ. ಈ ಸಂಬಂಧ ಅವರು 2015ರ ಮೇ 21ರಂದು ಲೋಕಾಯುಕ್ತ ಇಲಾಖೆಯಲ್ಲಿ ಡಾ. ವೆಂಕಟರಾಮನ್‌ ಅವರ ವಿರುದ್ಧ ದೂರು ದಾಖಲಿಸಿದರು. ಈ 10 ಸಾವಿರ ರೂಪಾಯಿ ಲಂಚದಲ್ಲಿ ಐದು ಸಾವಿರ ರೂಪಾಯಿಯನ್ನು ಅದೇ 31ರಂದು ನೀಡಬೇಕೆಂದು ಹೇಳಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದರು.

ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು, 31ರಂದು ಡಾ. ವೆಂಕಟರಾಮನ್‌ ಅವರನ್ನು ಸಾಕ್ಷಿ ಸಮೇತ  ಹಿಡಿಯಲು ಯೋಜನೆ ರೂಪಿಸಿದರು. ಅದರಂತೆಯೇ ಉಮಾ ಅವರು ಡಾ. ವೆಂಕಟರಾಮನ್‌  ಅವರ ಕಚೇರಿಗೆ ಅಂದು ಹೋದರು. ಅವರ ಜೊತೆ ಹೋಗಿದ್ದ ಲೋಕಾಯುಕ್ತ ಸಿಬ್ಬಂದಿ ಹೊರಗೆ ನಿಂತಿದ್ದರು. ಉಮಾ ಅವರು ಐದು ಸಾವಿರ ರೂಪಾಯಿಯನ್ನು ಡಾ. ವೆಂಕಟರಾಮನ್‌ ಅವರಿಗೆ ನೀಡಿದರು. ಅವರು ಅದನ್ನು ಪಡೆದ ನಂತರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಣವನ್ನು ತಮ್ಮ ವಶಕ್ಕೆ ಪಡೆದುಕೊಂಡರು.

ಉಮಾ ಅವರ ಬಳಿಯಿದ್ದ ಐದು ಸಾವಿರ ರೂಪಾಯಿಯೇ ಡಾ. ವೆಂಕಟರಾಮನ್‌ ಅವರ ಬಳಿ ಇದ್ದುದು ಎಂಬ ಸತ್ಯ ಪರೀಕ್ಷೆಯಿಂದ ಸಾಬೀತಾಯಿತು. ಅಲ್ಲಿಗೆ  ಡಾ. ವೆಂಕಟರಾಮನ್‌ ಅವರು ಲಂಚ ಪಡೆದಿರುವುದು ನಿಜ ಎಂದು ಪೊಲೀಸರು ಬಂಧಿಸಿದರು.

ಮುಂದಿನದು ತನಿಖೆಯ ಹಂತ. ತನಿಖೆ ನಡೆಸಲು ಇನ್ನೇನೂ ಹೆಚ್ಚಿಗೆ ಉಳಿದಿರಲಿಲ್ಲ. ಏಕೆಂದರೆ ಎಲ್ಲವೂ ಕಣ್ಣೆದುರಿಗೇ ನಡೆದಿತ್ತು. ಉಮಾ ಅವರ ಜೊತೆ ಹೋಗಿದ್ದ ಲೋಕಾಯುಕ್ತ ಸಿಬ್ಬಂದಿ ಕೂಡ ತಾವು ಈ ಘಟನೆಯನ್ನು ಕಣ್ಣಾರೆ ಕಂಡಿರುವುದಾಗಿ ವಿವರಿಸಿದರು. ಅದಕ್ಕಿಂತ ಮಿಗಿಲಾಗಿ ಉಮಾ ಅವರು ನೀಡಿದ್ದ ಐದು ಸಾವಿರ ರೂಪಾಯಿಯೇ ವೈದ್ಯರ ಬಳಿ ಇದ್ದುದು ಎಂದು ಸಾಬೀತಾಗಿದ್ದರಿಂದ ಅವರ ವಿರುದ್ಧ ದೋಷಾರೋಪ ಪಟ್ಟಿಯನ್ನು ಕೋರ್ಟ್‌ಗೆ ಪೊಲೀಸರು ಸಲ್ಲಿಸಿದರು.

ಅಧೀನ ಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು. ಎಲ್ಲ ಸಾಕ್ಷ್ಯಾಧಾರಗಳೂ ಡಾ. ವೆಂಕಟರಾಮನ್‌ ಅವರ ವಿರುದ್ಧ ಇದ್ದ ಕಾರಣ ಲಂಚದ ಆರೋಪದ ಮೇಲೆ ಅವರಿಗೆ ನ್ಯಾಯಾಧೀಶರು ಮೂರು ವರ್ಷಗಳ ಶಿಕ್ಷೆ ವಿಧಿಸಿದರು. ಜಾಮೀನಿನ ಮೇಲೆ ಡಾ. ವೆಂಕಟರಾಮನ್‌ ಬಿಡುಗಡೆಗೊಂಡು ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ತಮ್ಮ ಪರ ಹೈಕೋರ್ಟ್‌ನಲ್ಲಿ ವಕಾಲತ್ತು ವಹಿಸುವಂತೆ ಕೋರಿ ನನ್ನ ಬಳಿ ಬಂದಿದ್ದರು...

***
ಈ ವಿಷಯ ಕೇಳಿ ನನಗೆ ವಿಚಿತ್ರ ಎನಿಸಿತು. ತುಂಬಾ ಒಳ್ಳೆಯ ಹೆಸರು ಮಾಡಿದ್ದ ಡಾ. ವೆಂಕಟರಾಮನ್‌ ಅವರು ಲಂಚ ಕೇಳಲು ಸಾಧ್ಯವೇ ಎನಿಸಿತು. ಆದರೆ ಎಲ್ಲಾ ಸಾಕ್ಷ್ಯಾಧಾರಗಳೂ ಅವರ ವಿರುದ್ಧ ಸ್ಪಷ್ಟವಾಗಿ ಇದ್ದವು. ಆದ್ದರಿಂದ ಅವರನ್ನು ದೋಷಮುಕ್ತಗೊಳಿಸುವುದು ಆ ಕ್ಷಣದಲ್ಲಿ ಕಷ್ಟ ಎನಿಸಿತು.

ಯಾವುದೇ ಆರೋಪಿಯಾದರೂ ವಕೀಲರ ಬಳಿ ಸತ್ಯವನ್ನೇ ನುಡಿಯಬೇಕಲ್ಲ.  ಆದ್ದರಿಂದ ಅಂದು ನಡೆದದ್ದು ಏನು ಎಂದು ನಾನು ಕೇಳಿದಾಗ ಅವರು, ಉಮಾ ತಮಗೆ ದುಡ್ಡು ನೀಡಿದ್ದು ನಿಜ, ಅದನ್ನು ತಾವು ಪಡೆದದ್ದೂ ನಿಜ, ಆದರೆ ಅದು ಲಂಚದ ಹಣ ಅಲ್ಲ ಎಂದು ವಿವರಣೆ ನೀಡಿದರು. ಆದರೆ ಅವರು ಹೇಳಿದ್ದನ್ನು ನಾನು ನಂಬಬಹುದಿತ್ತೇ ವಿನಾ ಯಾವುದೇ ಸಾಕ್ಷ್ಯಾಧಾರ ಇರಲಿಲ್ಲ. ಹಾಗೆಂದು ನನ್ನ ಕಕ್ಷಿದಾರರನ್ನು ಅದರಲ್ಲೂ ನನ್ನ ಪಾಲಿನ ಜೀವದಾತರನ್ನು  ಹಾಗೆಯೇ ಬಿಡಲಾದೀತೆ?

ಕೆಳ ಕೋರ್ಟ್‌ನಲ್ಲಿ ನಡೆದ ಸವಾಲು, ಪಾಟಿ ಸವಾಲಿನ ದಾಖಲೆಗಳ ಆಧಾರದ ಮೇಲಷ್ಟೇ ಡಾ. ವೆಂಕಟರಾಮನ್‌ ಅವರನ್ನು ಬಚಾವು ಮಾಡಬಹುದಿತ್ತು. ಅದನ್ನು ಬಿಟ್ಟರೆ ಬೇರಾವ ದಾರಿಯೂ ಇರಲಿಲ್ಲ. ಎಲ್ಲವೂ ಇವರ ವಿರುದ್ಧವೇ ಇತ್ತು. ಆದ್ದರಿಂದ ಅವರು ನೀಡಿದ್ದ ದಾಖಲೆಗಳನ್ನು, ಅದರಲ್ಲಿ ಉಲ್ಲೇಖಗೊಂಡ ಸಾಕ್ಷಿಗಳು ನೀಡಿದ ಹೇಳಿಕೆಗಳ ಕುರಿತು ‘ಅಧ್ಯಯನ’ ನಡೆಸಿದೆ!

ಕೊನೆಗೂ ನನಗೆ ಬೇಕಿದ್ದ ಚಿಕ್ಕದೊಂದು ಬೆಳಕು ಆ ದಾಖಲೆಯಲ್ಲಿ ಕಂಡಿತು. ಅದರ ಜಾಡನ್ನೇ ಹಿಡಿದು ಕೇಸಿನ ಬಗ್ಗೆ  ಮತ್ತಷ್ಟು ಅಧ್ಯಯನ ಮಾಡಿದಾಗ ಡಾ. ವೆಂಕಟರಾಮನ್‌ ಅವರನ್ನು ಆರೋಪಮುಕ್ತಗೊಳಿಸಬಹುದು ಎಂಬ ಆಶಾಭಾವ ಬಂತು. ಮುಳುಗುವವನಿಗೆ ಹುಲ್ಲೇ ಆಸರೆ ಎನ್ನುತ್ತಾರಲ್ಲ ಹಾಗೆ... ಆ ಅಂಶಗಳನ್ನು ಹೈಕೋರ್ಟ್‌ನಲ್ಲಿ ಮಂಡಿಸಿದೆ.

ಅದೇನೆಂದರೆ, ಪೊಲೀಸರಿಗೆ ಹೇಳಿಕೆ ನೀಡುವಾಗ ಉಮಾ ಅವರು ತಾವು ಎರಡು ಅರ್ಜಿಗಳನ್ನು ಡಾ. ವೆಂಕಟರಾಮನ್‌ ಅವರಿಗೆ ನೀಡಿದುದಾಗಿ ಹೇಳಿದ್ದರು. ಒಂದನೆಯದ್ದು 10 ತಿಂಗಳ ಸಂಬಳ ನೀಡುವ ಕೋರಿಕೆ ಹಾಗೂ ಇನ್ನೊಂದು ವರ್ಗಾವಣೆಯ ಕೋರಿಕೆ. ಆದರೆ ಈ ಎರಡೂ ಅರ್ಜಿಗಳಲ್ಲಿ ಕೈಬರಹ ಬೇರೆಬೇರೆಯಾಗಿತ್ತು. ಈ ಬಗ್ಗೆ ಅಧೀನ ಕೋರ್ಟ್‌ನಲ್ಲಿ ಪಾಟಿಸವಾಲು ಮಾಡುವಾಗ ವಕೀಲರು ಪ್ರಶ್ನಿಸಿದ್ದರು.

ಅದಕ್ಕೆ ಉಮಾ ಅವರು, ‘ಸಂಬಳ ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ಇದ್ದುದು ನನ್ನ ಕೈಬರಹ, ಆದರೆ ವರ್ಗಾವಣೆ ಕೋರಿದ್ದ ಅರ್ಜಿಯಲ್ಲಿ ಇದ್ದುದು ಡಾ. ಉಸ್ಮಾನ್‌ ಅವರ ಕೈಬರಹ. ನನಗೆ ರಜೆ ಬೇಕು ಎಂದು ಸಹಿ ಮಾಡಿ ಒಂದು ಅರ್ಜಿ  ಉಸ್ಮಾನ್‌ ಅವರ ಬಳಿ ಕೊಟ್ಟಿದ್ದೆ. ಆ ಅರ್ಜಿಯಲ್ಲಿ ಉಸ್ಮಾನ್‌ ಅವರು ರಜೆ ಬದಲು ವರ್ಗಾವಣೆ ಬೇಕು ಎಂಬಂತೆ ಬರೆದಿದ್ದಾರೆ’ ಎಂದಿದ್ದರು (ಡಾ. ಉಸ್ಮಾನ್‌ ಅವರು  ಡಾ. ವೆಂಕಟರಾಮನ್‌ ಅವರ ಅಧೀನದಲ್ಲಿ ಇದ್ದ ವೈದ್ಯ. ಅಂದರೆ ಡಾ. ವೆಂಕಟರಾಮನ್‌ ಅವರ ನಂತರದ ಅಧಿಕಾರಿ).

ಆದರೆ ಇದನ್ನು ಅಧೀನ ಕೋರ್ಟ್‌ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ‘ವರ್ಗಾವಣೆ ಬೇಕೆಂದು ನಾನೇ ಹೇಳಿದ್ದೆ. ಅದನ್ನು ಡಾ. ಉಸ್ಮಾನ್‌ ಅವರು ತಮ್ಮ ಕೈಬರಹದಿಂದ ಬರೆದುಕೊಟ್ಟಿದ್ದರು ಅಷ್ಟೆ’ ಎಂದು ಉಮಾ ಅವರು  ಏನಾದರೂ ಅಧೀನ ಕೋರ್ಟ್‌ನಲ್ಲಿ (ಸುಳ್ಳು) ಹೇಳಿಬಿಟ್ಟಿದ್ದರೆ ನಮಗೆ ಕಷ್ಟ ಆಗುತ್ತಿತ್ತು. ಆದರೆ ಅವರಿಗೆ ಸುಳ್ಳು ಹೇಳಲು ಯಾರು ಹೇಳಿಕೊಡಬೇಕಿತ್ತೋ ಅವರು ಹೇಳಿಕೊಟ್ಟಿರಲಿಲ್ಲ. ಅದಕ್ಕಾಗಿ ಉಮಾ ನಿಜವನ್ನೇ ನುಡಿದಿದ್ದರು! ಇರಲಿ. ಅಂತೂ ಅದು ನನಗೆ ಅನುಕೂಲ ಆಯಿತು. ಅಲ್ಲಿ ಏನೋ ಪಿತೂರಿ ನಡೆದಿದೆ ಎಂಬ ಬಗ್ಗೆ ಕೋರ್ಟ್‌ಗೆ ಮನವರಿಕೆ ಮಾಡಿದೆ.

ಇದರ ಜೊತೆಗೆ, ಉಮಾ ಅವರು ‘ಲಂಚದ ಹಣ’ ನೀಡಲು ಡಾ. ವೆಂಕಟರಾಮನ್‌ ಅವರ ಕಚೇರಿಗೆ ಹೋದ ಸಂದರ್ಭದಲ್ಲಿ ಅವರ ಜೊತೆಗಿದ್ದ ಇಬ್ಬರು ಲೋಕಾಯುಕ್ತ ಸಿಬ್ಬಂದಿ ಮೊದಲು ನೀಡಿದ್ದ ಹೇಳಿಕೆಯಲ್ಲಿ ‘ಉಮಾ ಅವರಿಂದ ಡಾ. ವೆಂಕಟರಾಮನ್‌ ಹಣ ಪಡೆಯುತ್ತಿದ್ದುದನ್ನು ಖುದ್ದಾಗಿ ನೋಡಿದ್ದೇವೆ’ ಎಂದಿದ್ದರು. ಆದರೆ ಪಾಟಿ ಸವಾಲಿನ ವೇಳೆ ‘ಅಂದು ನಾವು ಹೊರಗೆ ನಿಂತಿದ್ದೆವು. ಯೋಜನೆ ಪ್ರಕಾರ ಉಮಾ ಒಬ್ಬರೇ ಒಳಗೆ ಹೋಗಿದ್ದರು’ ಎಂದಿದ್ದರು.

ಈ ವ್ಯತಿರಿಕ್ತ ಹೇಳಿಕೆಯೂ ನನಗೆ ಅನುಕೂಲ ಆಯಿತು. ಇಷ್ಟೇ ಅಲ್ಲ... ಉಮಾ ಅವರು ತಾವು ‘ಲಂಚದ ಹಣ’ವನ್ನು ಡಾ. ವೆಂಕಟರಾಮನ್‌ ಅವರ ಜೇಬಿನಲ್ಲಿ ಇರಿಸಿದುದಾಗಿ ಪೊಲೀಸರ ಎದುರು ಹೇಳಿದ್ದರು. ಆದರೆ ವಿಚಾರಣೆ ವೇಳೆ ಲೋಕಾಯುಕ್ತ ಪೊಲೀಸರು ಆ ಹಣವನ್ನು ತಾವು ಟೇಬಲ್‌ ಮೇಲಿನಿಂದ ವಶಪಡಿಸಿಕೊಂಡಿದ್ದಾಗಿ ಹೇಳಿದ್ದರು. 

ಇವುಗಳನ್ನೆಲ್ಲ ಅಧೀನ ಕೋರ್ಟ್‌ ಗಣನೆಗೆ ತೆಗೆದುಕೊಂಡಿರಲಿಲ್ಲ. ಇಂಥ ಚಿಕ್ಕಪುಟ್ಟ ಲೋಪಗಳನ್ನು ನಾನು ಹೈಕೋರ್ಟ್‌ಗೆ ಎತ್ತಿತೋರಿಸಿದೆ. ಜೊತೆಗೆ ಡಾ. ವೆಂಕಟರಾಮನ್‌ ಅವರು ದುಡ್ಡು ಪಡೆದದ್ದು ಏಕೆ ಎಂಬುದನ್ನೂ  ಸಾಬೀತು ಮಾಡಿದೆ. ಹೀಗೆ ಒಂದಕ್ಕೊಂದು ಕೊಂಡಿಯನ್ನು ಜೋಡಿಸುತ್ತಾ ಹೋದಾಗ ತನಿಖೆಯಲ್ಲಿ ಲೋಪವಾಗಿರುವುದು ನ್ಯಾಯಮೂರ್ತಿಗಳ ಗಮನಕ್ಕೆ ಬಂದು ಡಾ.ವೆಂಕಟರಾಮನ್‌ ಅವರನ್ನು ಆರೋಪಮುಕ್ತಗೊಳಿಸಿದರು. 

ಆದೇಶ ಪ್ರಕಟಗೊಳ್ಳುತ್ತಿದ್ದಂತೆಯೇ ಡಾ. ವೆಂಕಟರಾಮನ್‌ ಅವರ ಮೊಗದಲ್ಲಿ ಕಂಡ ಸಂತೋಷ ನೋಡಿ, ನನ್ನ ಜೀವ ಉಳಿದಾಗ ನನ್ನ ಪೋಷಕರಲ್ಲಿ ಆದ ಸಂತೋಷದಂತೆ ಕಂಡಿತು! ಅಷ್ಟಕ್ಕೂ ಡಾ. ವೆಂಕಟರಾಮನ್‌ ಅವರು ಉಮಾ ಅವರಿಂದ ಅಂದು ಐದು ಸಾವಿರ ರೂಪಾಯಿ ಹಣ ಪಡೆದದ್ದು ನಿಜವೆ. ಆದರೆ ಅದು ಲಂಚದ ಹಣ ಆಗಿರಲಿಲ್ಲ.

ಅಪಘಾತದ ನಂತರ ಉಮಾ ಅವರ ಬಳಿ ಹಣ ಇರಲಿಲ್ಲ. ಡಾ. ವೆಂಕಟರಾಮನ್‌ ಅವರು ಉಮಾ ಅವರಿಗೆ ಐದು ಸಾವಿರ ರೂಪಾಯಿ ನೀಡಿದ್ದರು. ಅದನ್ನು ಅಂದು ಉಮಾ ವಾಪಸ್‌ ಮಾಡಿದ್ದರು ಅಷ್ಟೆ. ಆದರೆ ಡಾ. ವೆಂಕಟರಾಮನ್‌ ಅವರು ಜೈಲಿಗೆ ಹೋದರೆ ತಾವು ಆ ಸ್ಥಾನಕ್ಕೆ ಬರಬಹುದು ಎಂದು ಯೋಜನೆ ರೂಪಿಸಿದ್ದ ಉಸ್ಮಾನ್‌ ಅವರು ಉಮಾ ಅವರಿಗೆ ಆಮಿಷ ಒಡ್ಡಿ ಅವರನ್ನು ಈ ರೀತಿಯಾಗಿ ಬಳಸಿಕೊಂಡಿದ್ದರು!

ಅಂತೂ ನಿರಪರಾಧಿ ಡಾ. ವೆಂಕಟರಾಮನ್‌ ಆರೋಪಮುಕ್ತಗೊಂಡರು. ಅವರಿಗೆ ದಕ್ಕಬೇಕಿದ್ದ ಎಲ್ಲಾ ಸೌಲಭ್ಯವೂ ಆರೋಗ್ಯ ಇಲಾಖೆಯಿಂದ ಸಿಕ್ಕಿತು. ಜೀವ ಉಳಿಸಿದ್ದ ವೈದ್ಯರಿಗೆ ನ್ಯಾಯ ದೊರಕಿಸಿಕೊಟ್ಟ ಸಂತೃಪ್ತಿ ನನ್ನದಾಯಿತು. ಆದರೆ ದುರದೃಷ್ಟವಶಾತ್‌, ಅದಾಗಲೇ ಅವರ ನಿವೃತ್ತಿ ವಯಸ್ಸು ಆಗಿದ್ದರಿಂದ ಅವರಿಗೆ ಬರಬೇಕಿದ್ದ ಬಡ್ತಿಯಿಂದ ವಂಚಿತರಾದರು. ದೈವಲೀಲೆ ನೋಡಿ... ಇದಾದ ಕೆಲವೇ ತಿಂಗಳಿನಲ್ಲಿ ಇದೇ ಉಸ್ಮಾನ್‌,  ಭ್ರಷ್ಟಾಚಾರದ ಆರೋಪದ ಅಡಿ ಜೈಲು ಸೇರಿದ ಸುದ್ದಿ ಬಂತು!

(ಡಾ. ವೆಂಕಟರಾಮನ್‌ ಅವರ ಹೆಸರು ಹೊರತುಪಡಿಸಿ ಉಳಿದವರ ಹೆಸರು ಬದಲಾಯಿಸಲಾಗಿದೆ)
ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT