ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ್ನಾರ್‌ಗುಡಿಯ ‘ಮಂತ್ರಗಾತಿ’

ವ್ಯಕ್ತಿ
Last Updated 10 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ತಮಿಳುನಾಡಿನ ರಾಜಕೀಯ ಇತಿಹಾಸ ಬರೆಯುವ ಯಾರೇ ಆದರೂ ಜೆ.ಜಯಲಲಿತಾ ಅವರ ಹೆಸರಿನ ಬೆನ್ನಲ್ಲೇ ನಮೂದಿಸಬೇಕಾದ ಇನ್ನೊಂದು ಹೆಸರು ಶಶಿಕಲಾ ನಟರಾಜನ್‌ ಅವರದ್ದು. ನಿರಂತರ ಮೂರು ದಶಕಗಳ ಕಾಲ ಪರಸ್ಪರ ಸುಖ–ದುಃಖಗಳನ್ನು ಹಂಚಿಕೊಂಡ ಈ ಅಪೂರ್ವ ಗೆಳತಿಯರ ಜೀವನದ ಅಧ್ಯಾಯಗಳತ್ತ ಕಣ್ಣು ಹೊರಳಿಸಿದರೆ ಅದು ಇನ್ನೊಂದು ‘ಶೋಲೆ’ ಸಿನಿಮಾದ ಚಿತ್ರಕತೆಯಾದೀತು!

ಹುಟ್ಟಿ ಬೆಳೆದದ್ದು ಬೇರೆಯಾದರೂ, 80ರ ದಶಕದಲ್ಲಿ ಇವರಿಬ್ಬರ ಮಧ್ಯೆ ಬೆಳೆದ ಸ್ನೇಹಸೇತು ಎಷ್ಟು ಗಟ್ಟಿಯಾಗಿತ್ತೆಂದರೆ, ತಮಿಳುನಾಡಿನ ಮಾಧ್ಯಮಗಳು ಶಶಿಕಲಾ ಅವರನ್ನು ಮುಖ್ಯಮಂತ್ರಿ ಜಯಲಲಿತಾ ಅವರ ‘ಆತ್ಮಸೋದರಿ’ ಎಂದೇ ಬಣ್ಣಿಸಿದವು.

ಹುಟ್ಟಿದ್ದು ತಮಿಳುನಾಡಿನ ಮನ್ನಾರ್‌ಗುಡಿಯ ಬಳಿ ವ್ಯಾಸರ್‌ಪಡಿಯಲ್ಲಿ. ಶಾಲೆ ಮೆಟ್ಟಿಲು ಹತ್ತಿದರೂ ವಿದ್ಯೆ ತಲೆಗೆ ಹತ್ತಲಿಲ್ಲ. ಅರ್ಧದಲ್ಲೇ ಶಾಲೆ ಬಿಟ್ಟ ಶಶಿಕಲಾ ಎಂಬ ಹೆಣ್ಣುಮಗಳು, (ಹತ್ತನೇ ತರಗತಿಯಲ್ಲಿ ರಾಜ್ಯಕ್ಕೇ ಅತ್ಯಧಿಕ ಅಂಕ ಗಳಿಸಿ ಪಾಸಾದ, ಕಾನೂನು ಪದವಿ ತರಗತಿಗಳಿಗೂ ಹಾಜರಾಗಿದ್ದ) ಜಯಲಲಿತಾಗೆ ಸಲಹೆಗಾರ್ತಿಯಾಗಿದ್ದೇ ಒಂದು ಸೋಜಿಗ. ಅದೂ ಮುಖ್ಯಮಂತ್ರಿಯ ಅನಧಿಕೃತ ಸಲಹೆಗಾರ್ತಿ.

ಶಶಿಕಲಾ ಜೀವನದ ಆರಂಭದ ಘಟ್ಟ ಸಂಘರ್ಷಮಯವೇ ಆಗಿತ್ತು. ತಮಿಳುನಾಡು ಸರ್ಕಾರದಲ್ಲಿ ಪಬ್ಲಿಕ್‌ ರಿಲೇಷನ್‌ ಆಫೀಸರ್‌ ಹುದ್ದೆಯಲ್ಲಿ ತಾತ್ಕಾಲಿಕ ನೇಮಕ ಹೊಂದಿದ್ದ ಎಂ.ನಟರಾಜನ್‌ ಜತೆಗೆ ಮದುವೆಯಾದ ಬಳಿಕ ಮದ್ರಾಸ್‌ಗೆ ಪಯಣ. ನಟರಾಜನ್‌ ಆಗಿನ ಕಡಲೂರು ಜಿಲ್ಲಾಧಿಕಾರಿ ವಿ.ಎಸ್‌.ಚಂದ್ರಲೇಖಾ ಅವರಿಗೆ ಆಪ್ತರಾಗಿದ್ದವರು. ಈ ಚಂದ್ರಲೇಖಾ ಆಗಿನ ಮುಖ್ಯಮಂತ್ರಿ ಡಾ. ಎಂ.ಜಿ.ರಾಮಚಂದ್ರನ್‌ ಅವರ ಪರಮಾಪ್ತೆ.

ದೇಶದಾದ್ಯಂತ ತುರ್ತುಪರಿಸ್ಥಿತಿ ಹೇರಿದಾಗ ನಟರಾಜನ್‌ ಕೆಲಸ ಕಳೆದುಕೊಂಡರು. 1980ರಲ್ಲಿ ಮತ್ತೆ ಕೆಲಸಕ್ಕೆ ಸೇರ್ಪಡೆಯಾದರು. ಈ ಹಂತದಲ್ಲೇ ಸಂಸಾರದ ಖರ್ಚು ವೆಚ್ಚ ತೂಗಿಸಲೆಂದು ಶಶಿಕಲಾ ಪುಟ್ಟದೊಂದು ವಿಡಿಯೊ ಕ್ಯಾಸೆಟ್‌ ಬಾಡಿಗೆಗೆ ಕೊಡುವ ಅಂಗಡಿ ತೆರೆದರು. ಅದರ ಆದಾಯ ಸಾಲದು ಎಂದಾದಾಗ, ಕ್ಯಾಮೆರಾವೊಂದನ್ನು ಖರೀದಿಸಿ ಮದುವೆಗಳ ವಿಡಿಯೊ ರೆಕಾರ್ಡಿಂಗ್‌ ಬಿಸಿನೆಸ್‌ ಶುರು ಮಾಡಿದರು.

ಅದು 80ರ ದಶಕ. ಮುಖ್ಯಮಂತ್ರಿ ಎಂಜಿಆರ್‌ಗೆ ನಿಕಟವಾಗಿದ್ದ ಚಿತ್ರನಟಿ ಜಯಲಲಿತಾ ಅಣ್ಣಾಡಿಎಂಕೆ ಪಕ್ಷದ ಪ್ರಚಾರ ಕಾರ್ಯದರ್ಶಿ ಆಗಿದ್ದರು. ಶಶಿಕಲಾ ಅಣ್ಣಾಡಿಎಂಕೆ ಪಕ್ಷದಲ್ಲಿ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದು, ಅದಾಗಲೇ ಪಕ್ಷದ ಕೆಲವು ಸಮಾರಂಭಗಳ ವಿಡಿಯೊ ಮಾಡಿಕೊಟ್ಟಿದ್ದರು.

ಅದೊಂದು ದಿನ ಶಶಿಕಲಾ ತನ್ನ ಗಂಡನ ಮುಂದೆ ಇಟ್ಟ ಪ್ರಸ್ತಾಪ– ‘ನನ್ನನ್ನು ಜಯಲಲಿತಾ ಅವರಿಗೆ ಪರಿಚಯ ಮಾಡಿಕೊಡಿ’ ಎಂದು. ಬಹುಶಃ ಶಶಿಕಲಾ ಜೀವನದ ಅತಿದೊಡ್ಡ ‘ಟರ್ನಿಂಗ್‌ ಪಾಯಿಂಟ್‌’ ಅದು ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಚಂದ್ರಲೇಖಾ ಅವರ ಮೂಲಕ ನಟರಾಜನ್‌ ತನ್ನ ಪತ್ನಿಯನ್ನು ಜಯಲಲಿತಾ ಅವರಿಗೆ ಪರಿಚಯ ಮಾಡಿಸಿಕೊಟ್ಟರು.

ಹೆಣ್ಣುಮಕ್ಕಳ ನಡುವೆ ಗಾಢ ಗೆಳೆತನ ಅದ್ಹೇಗೆ ಬೆಳೆಯುತ್ತದೆ ಎನ್ನುವುದು ಈಗಲೂ ಸಮಾಜ ವಿಜ್ಞಾನಿಗಳಿಗೆ ಅರ್ಥವಾಗದ ಒಗಟು. ಜಯಲಲಿತಾ ಮತ್ತು ಶಶಿಕಲಾ ಗೆಳೆತನದ ಬಗ್ಗೆ ನೂರೆಂಟು ಕತೆಗಳಿವೆ. ಅದೇನೇ ಇದ್ದರೂ ಒಬ್ಬರು ಇನ್ನೊಬ್ಬರನ್ನು ಬಿಟ್ಟು ಇರುತ್ತಿರಲಿಲ್ಲ ಎನ್ನುವುದಂತೂ ಸತ್ಯ. 2014ರಲ್ಲಿ ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಲಲಿತಾ ಜೊತೆಗೆ ಶಶಿಕಲಾ ಅವರೂ ಜೈಲುವಾಸ ಅನುಭವಿಸಿದರು. ಬಳಿಕ ಹೈಕೋರ್ಟ್‌ ಕ್ಲೀನ್‌ಚಿಟ್‌ ನೀಡಿತು. ಅದಕ್ಕೂ ಮುನ್ನ ಕಲರ್‌ ಟಿ.ವಿ ಹಗರಣದಲ್ಲೂ 30 ದಿನ ನ್ಯಾಯಾಂಗ ಬಂಧನ ಅನುಭವಿಸಿದ್ದರು ಶಶಿಕಲಾ.

1987ರಲ್ಲಿ ಎಂಜಿಆರ್‌ ಸಾವಿಗೀಡಾದರು. ಎಂಜಿಆರ್‌ ಶವಯಾತ್ರೆಯುದ್ದಕ್ಕೂ ತಲೆಪಕ್ಕದಲ್ಲಿ ನಿಂತಿದ್ದ ಜಯಲಲಿತಾ ಅವರನ್ನು ಎಂಜಿಆರ್‌ ಪತ್ನಿ ಜಾನಕಿಯಮ್ಮನ ಕಡೆಯವರು ತಳ್ಳಾಡಿದರು, ಹಲ್ಲೆ ನಡೆಸಿದರು. ಅವಮಾನ ತಡೆಯಲಾರದೆ ಸ್ಥಳಬಿಟ್ಟು ತೆರಳಿದ ಜಯಲಲಿತಾ ಪರವಾಗಿ ಎಂಜಿಆರ್‌ ಅಭಿಮಾನಿಗಳ ಸಹಾನುಭೂತಿ ಹರಿಯಿತು.

ಕಷ್ಟಕಾಲದಲ್ಲಿ ಶಶಿಕಲಾ ಜತೆಯಾಗಿ ನಿಂತರು. ಅಭಿಮಾನಿಗಳನ್ನು ಸಂಘಟಿಸಿದರು. ವಿಧಾನಸಭೆಯಲ್ಲಿ ವಿಶ್ವಾಸಮತ ಸೋತ ಮುಖ್ಯಮಂತ್ರಿ ಜಾನಕಿಯಮ್ಮ ಪಟ್ಟ ಬಿಟ್ಟುಕೊಡಲೇ ಬೇಕಾಯಿತು. ಜಯಲಲಿತಾ ಮುಖ್ಯಮಂತ್ರಿಯಾದರು. ಅಲ್ಲಿಂದೀಚೆಗೆ ಶುರುವಾಯಿತು ಶಶಿಕಲಾ ರಾಜ್ಯಭಾರ. ಅದು ತೆರೆಯ ಹಿಂದಿನ ಅಧಿಕಾರಕೇಂದ್ರ.

ಜಯಲಲಿತಾ ಮುಖ್ಯಮಂತ್ರಿಯಾದ ಬಳಿಕ ಶಶಿಕಲಾ ಅವರು ತಮ್ಮ ಹುಟ್ಟೂರಿನಿಂದ ಸುಮಾರು 40 ಮಂದಿಯನ್ನು ಪೋಯಸ್‌ ಗಾರ್ಡನ್‌ನ ಮುಖ್ಯಮಂತ್ರಿ  ಅರಮನೆಗೆ ಕರೆತಂದರು. ಮುಖ್ಯಮಂತ್ರಿ ನಿವಾಸದಲ್ಲಿ ಶಶಿಕಲಾ ಅವರ ಪ್ರಭಾವ ಎಷ್ಟಿತ್ತೆಂದರೆ ಅಲ್ಲಿ ಜವಾನರು, ಮನೆಕೆಲಸದವರು, ಸೆಕ್ಯೂರಿಟಿಯವರು, ಡ್ರೈವರ್‌, ಸಂದೇಶವಾಹಕರು– ಹೀಗೆ ಎಲ್ಲರೂ ಮನ್ನಾರ್‌ಗುಡಿಯವರೆ.

ಅರ್ಧಕ್ಕರ್ಧ ಮಂದಿ ಶಶಿಕಲಾ ಸಂಬಂಧಿಕರು. ಈ ಸಂಬಂಧಿಕರು ಅಧಿಕಾರ ಕೇಂದ್ರದ ಸುತ್ತ ಅನಧಿಕೃತ ವ್ಯವಹಾರಗಳನ್ನು ಶುರು ಮಾಡಿದರು. ಪತ್ರಿಕೆಗಳಲ್ಲಿ ಟೀಕಾಪ್ರಹಾರ ಶುರುವಾಯಿತು. ಡಾ. ಸುಬ್ರಮಣಿಯನ್ ಸ್ವಾಮಿ ಇದನ್ನು ನೇರವಾಗಿ ‘ಮನ್ನಾರ್‌ಗುಡಿ ಮಾಫಿಯಾ’ ಎಂದೇ ಜರೆದರು.

ಜಯಲಲಿತಾ ಮುಖ್ಯಮಂತ್ರಿಯಾಗಿದ್ದ ಸತತ ಮೂರು ಅವಧಿಗಳಲ್ಲೂ ತೆರೆಮರೆಯ ಸೂತ್ರಧಾರಿಯಾಗಿ ಮೆರೆದಾಕೆ ಶಶಿಕಲಾ. ಸರ್ಕಾರದಲ್ಲೂ ಶಶಿಕಲಾ ಪ್ರಭಾವ ಎಷ್ಟು ಗಾಢವಾಯಿತೆಂದರೆ, ಹಲವಾರು ಮಂತ್ರಿಗಳು ನೇರವಾಗಿ ಶಶಿಕಲಾ ಅವರಿಂದಲೇ ಆದೇಶ ಪಡೆಯುವಷ್ಟರ ಮಟ್ಟಿಗೆ ಮುಂದುವರಿಯಿತು.

1996ರ ಚುನಾವಣೆಯಲ್ಲಿ ಸೋಲುಂಡ ಜಯಲಲಿತಾ, 1998ರಲ್ಲಿ ತಮ್ಮ ಲೋಕಸಭಾ ಸದಸ್ಯರ ಮೂಲಕ ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ವಾಜಪೇಯಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂತು. ಆಗೆಲ್ಲ ಶಶಿಕಲಾ ಜತೆಗೆ ಅನಧಿಕೃತ ಸಭೆಗಳನ್ನು ನಡೆಸಿದವರು ಕೇಂದ್ರದ ಮಂತ್ರಿ ಪ್ರಮೋದ್‌ ಮಹಾಜನ್‌! ಎನ್‌ಡಿಎ ಮೈತ್ರಿ ಬೆಳೆದಂತೆ ಶಶಿಕಲಾ ಅವರ ಹಣಕಾಸು ವ್ಯವಹಾರಗಳೂ ಬೆಳೆದವು.

ಕೊನೆಗೊಮ್ಮೆ ಶಶಿಕಲಾ ಬೇಡಿಕೆಗಳನ್ನು ಈಡೇರಿಸುವಲ್ಲಿ ಸುಸ್ತಾದ ಮಹಾಜನ್‌, ಆಕೆಯನ್ನು ನಿರ್ಲಕ್ಷಿಸಲು ಆರಂಭಿಸಿದರು. ಶಶಿಕಲಾ ಟ್ರಂಪ್‌ಕಾರ್ಡ್‌ ಬೀಸಿದ್ದೇ ಆವಾಗ.ದೆಹಲಿಯಲ್ಲಿ ಟೀಪಾರ್ಟಿ ಏರ್ಪಡಿಸಿ ಸೋನಿಯಾ ಗಾಂಧಿಯವರ ಜತೆಗೆ ಜಯಲಲಿತಾ ಮೀಟಿಂಗ್‌ ಫಿಕ್ಸ್‌ ಮಾಡಿದರು. ವಾಜಪೇಯಿ ನೇತೃತ್ವದ ಸರ್ಕಾರ ಕೇವಲ ಒಂದು ಮತದಿಂದ ಪತನಗೊಂಡಿತು.

2001 ಶಶಿಕಲಾ ಜೀವನದಲ್ಲಿ ಮತ್ತೊಂದು ನಾಟಕೀಯ ತಿರುವು! ಶಶಿಕಲಾ ಸಂಬಂಧಿಕರು ಎಷ್ಟೊಂದು ಚಿಗುರಿಕೊಂಡಿದ್ದರೆಂದರೆ, ಅಕ್ರಮ ಆಸ್ತಿ ಮೊಕದ್ದಮೆಯಲ್ಲಿ ಜಯಲಲಿತಾ ಜೈಲು ಪಾಲಾಗುವುದು ಖಚಿತವಾದೊಡನೆಯೇ ಮುಖ್ಯಮಂತ್ರಿ ಕುರ್ಚಿಯಲ್ಲಿ ಶಶಿಕಲಾ ಅವರನ್ನು ಕೂರಿಸುವ ಸಂಚು ರೂಪಿಸಿದರು. ಬೆಂಗಳೂರಿನಲ್ಲಿ ಈ ಬಗ್ಗೆ ನಡೆದ ರಹಸ್ಯ ಸಭೆಯ ಮಾಹಿತಿ ಜಯಲಲಿತಾ ಅವರಿಗೆ ಸಿಕ್ಕಿತು. ಆ ಸಂದರ್ಭದಲ್ಲಿ ಸಂಚಿನ ಬಗ್ಗೆ ಜಯಲಲಿತಾ ಅವರನ್ನು ಎಚ್ಚರಿಸಿದವರು  ನರೇಂದ್ರ ಮೋದಿ ಎನ್ನುವವರಿದ್ದಾರೆ! ಎಚ್ಚೆತ್ತ ಜಯಲಲಿತಾ, ಶಶಿಕಲಾ ಸಹಿತ 13 ಮಂದಿಯನ್ನು ಪಕ್ಷದಿಂದ ಸಸ್ಪೆಂಡ್‌ ಮಾಡಿದರು. ಹಣಕಾಸು ಅಕ್ರಮ ಆರೋಪದ ಮೇಲೆ ಶಶಿಕಲಾ ಅವರ ಕೆಲವು ಸಂಬಂಧಿಕರನ್ನು ಜೈಲಿಗಟ್ಟಿದರು.

ಆದರೆ ನಾಲ್ಕೇ ತಿಂಗಳಲ್ಲಿ ಮತ್ತೆ ಶಶಿಕಲಾ ಮುಖ್ಯಮಂತ್ರಿಯ ಮನೆ ಸೇರಿದರು. ‘ನನಗೆ ಈ ಸಂಚುಗಳ್ಯಾವುದೂ ಗೊತ್ತಿರಲಿಲ್ಲ. ಸಂಬಂಧಿಕರನ್ನು ಯಾರನ್ನೂ ಮತ್ತೆ ಹತ್ತಿರ ಸೇರಿಸುವುದಿಲ್ಲ’ ಎಂದು ಮುಚ್ಚಳಿಕೆ ಬರೆದುಕೊಟ್ಟರು. ಮತ್ತೆ ‘ಶೋಲೆ’ ಗೆಳೆತನ. ಜಯಲಲಿತಾ ಸಾಯುವವರೆಗೆ ಶಶಿಕಲಾ ಗಂಡ ಕೂಡ ಪೋಯಸ್‌ ಗಾರ್ಡನ್‌ ಹತ್ತಿರ ಸುಳಿಯಲಿಲ್ಲ!

ಈಗ ಜಯಲಲಿತಾ ಅವರ ಸಾವಿನ ಸಂದರ್ಭದಲ್ಲೂ ತನ್ನದೇ ಥೇವರ್‌ ಸಮುದಾಯದ ಪನ್ನೀರ್‌ ಸೆಲ್ವಂಗೆ ಮುಖ್ಯಮಂತ್ರಿ ಪಟ್ಟ ಕಟ್ಟುವಲ್ಲಿ ಶಶಿಕಲಾ ನಡೆಸಿದ ‘ಮಧ್ಯರಾತ್ರಿ ಕಾರ್ಯಾಚರಣೆ’ಯ ಬಗ್ಗೆ ಚರ್ಚೆ ನಡೆದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅಣ್ಣಾಡಿಎಂಕೆಯ ಮಹಾಪ್ರಧಾನ ಕಾರ್ಯದರ್ಶಿಯಾಗಿ 60ರ ಹರೆಯದ ಶಶಿಕಲಾ ನೇಮಕಗೊಂಡರೂ ಆಶ್ಚರ್ಯವಿಲ್ಲ. ತಮಿಳುನಾಡಿನ ಮೂರನೇ ಮಹಿಳಾ ಮುಖ್ಯಮಂತ್ರಿಯಾಗಿ ಶಶಿಕಲಾ ಉದ್ಭವಿಸಬಹುದೆ? ಉತ್ತರ ಸಿಗುವ ಕಾಲ ದೂರವಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT