ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ತನಿಖೆಯೇ ಸೂಕ್ತ ಟೋಪಿ ಹಾಕಲು ಯತ್ನಿಸಿಲ್ಲ

ನೈಸ್‌ ಅಕ್ರಮ ಆರೋಪ
Last Updated 10 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ಪ್ರೈಸಸ್‌ (ನೈಸ್‌) ಜಾರಿಗೊಳಿಸುತ್ತಿರುವ ಬಿಎಂಐಸಿ ಯೋಜನೆಯಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ನೇತೃತ್ವದ ಸದನ ಸಮಿತಿ ವರದಿ ನೀಡಿದೆ.  ಇತ್ತೀಚೆಗೆ ಈ ವರದಿ ವಿಧಾನಸಭೆಯಲ್ಲಿ ಮಂಡನೆ ಆಗಿದೆ. ಈ ಬಗ್ಗೆ ಸದನ ಸಮಿತಿ ಸದಸ್ಯ ಕೆ.ಎಂ.ಶಿವಲಿಂಗೇಗೌಡ ‘ಪ್ರಜಾವಾಣಿ’ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

* ನೈಸ್‌ ಅಕ್ರಮ ಕುರಿತು ಸರ್ವಸಮ್ಮತ ವರದಿ ಕೊಟ್ಟಿದ್ದೀರಾ, ಮುಂದೇನು?
ನೈಸ್‌ ಅಕ್ರಮ ಕುರಿತು ಮೂರು ಪಕ್ಷಗಳ ಸದಸ್ಯರಲ್ಲಿ ಯಾವುದೇ ತಕರಾರು ಇಲ್ಲದೆ ವರದಿ ಕೊಟ್ಟಿದ್ದೇವೆ.ಒಪ್ಪಂದದ ಜಾರಿಯಲ್ಲಿ ಲೋಪದೋಷ ಆಗಿರುವುದು ಸಾಬೀತಾಗಿದೆ.ಈ ಬಗ್ಗೆ ಸಿಬಿಐ ತನಿಖೆ ನಡೆದರೆ ಸತ್ಯ ಬಯಲಿಗೆ ಬರಲಿದೆ.

* ಅಕ್ರಮದಲ್ಲಿ ಯಾವ ಸರ್ಕಾರ, ಸಚಿವರು ಭಾಗಿಯಾಗಿದ್ದಾರೆ? ಸಮಿತಿ ವರದಿಯಲ್ಲಿ ಆಗಿನ ನಗರಾಭಿವೃದ್ಧಿ ಸಚಿವರ ಪಾತ್ರದ ಬಗ್ಗೆ ಮಾತ್ರ ಪ್ರಸ್ತಾಪವಿದೆ. ಅವರೊಬ್ಬರೇ ಆರೋಪಿಯೇ?
ನೈಸ್‌ ಸಂಸ್ಥೆ ಮತ್ತು ಸರ್ಕಾರದ ನಡುವೆ ಒಡಂಬಡಿಕೆ ಏರ್ಪಟ್ಟಾಗ 1995ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಆಗಿದ್ದರು. 1997ರಲ್ಲಿ ರೂಪುಗೊಂಡ ಕ್ರಿಯಾ ಒಪ್ಪಂದದಲ್ಲೇ ಮೂಲ ತಪ್ಪು ಇರುವುದನ್ನು ಹಲವಾರು ಉದಾಹರಣೆಗಳನ್ನು ಕೊಟ್ಟು ಸಮಿತಿ ಪ್ರಶ್ನಿಸಿದೆ. ಆಗ ಒಪ್ಪಂದ ಮಾಡಿಕೊಂಡವರು ಅಂದಿನ ಮುಖ್ಯ ಕಾರ್ಯದರ್ಶಿ ಬಿ.ಎಸ್‌.ಪಾಟೀಲ್‌ ಮತ್ತು ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌. ಇದು ಸಂಪುಟದಲ್ಲೂ ಚರ್ಚೆಯಾಗಿ ಅನುಮೋದನೆ ಆಗಿದೆ. ಆದರೆ, ಕರಡು ಕ್ರಿಯಾ ಒಪ್ಪಂದದ ಪ್ರತಿಯೇ ನಾಪತ್ತೆಯಾಗಿದೆ. ಯಾರ ಬಳಿ ಕೇಳಿದರೂ ಉತ್ತರ ಇಲ್ಲ.

ಯೋಜನೆಗೆ ಎಷ್ಟು ಜಮೀನು ಬೇಕು ಎಂಬ ಸಮೀಕ್ಷೆ ನಡೆಸಲು ಖಾಸಗಿ ಸಂಸ್ಥೆಗೆ ಹೊಣೆ ವಹಿಸಲಾಗಿತ್ತು. 111 ಕಿ.ಮೀ ಎಕ್ಸ್‌ಪ್ರೆಸ್‌ ವೇ, 41 ಕಿ.ಮೀ ಪೆರಿಫೆರಲ್‌, 10 ಕಿ.ಮೀ. ಲಿಂಕ್‌ ರಸ್ತೆಗೆ 18,313 ಎಕರೆ ಅಗತ್ಯವಿದೆ ಎಂದು ಅದು ವರದಿ ನೀಡಿತ್ತು. ಆದರೆ, ಯೋಜನೆಗೆ ಅನುಮೋದನೆ ಪಡೆಯುವ ವೇಳೆಯಲ್ಲಿ 20,193 ಎಕರೆಗೆ ಹೆಚ್ಚಿಸಲಾಗಿದೆ.

* ನಿಮ್ಮ ಸಮಿತಿ ವರದಿಯಲ್ಲಿ ಅನೇಕ ಗೊಂದಲಗಳಿವೆ. ಇಂತಹ ವರದಿಯಿಂದ ಏನು ಪ್ರಯೋಜನ?
ಕ್ರಿಯಾ ಒಪ್ಪಂದದಲ್ಲಿ ಆಗಿರುವ 22 ಅನುಚ್ಛೇದಗಳ ಪೈಕಿ 16 ಉಲ್ಲಂಘನೆ ಆಗಿರುವ ಬಗ್ಗೆ ಅಂಕಿಅಂಶ ಸಮೇತ ವಿವರಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. 25 ಅಧಿಕಾರಿಗಳ ಹೆಸರನ್ನು ಪ್ರಸ್ತಾಪಿಸಲಾಗಿದೆ.

ರಾಜಕಾರಣಿಗಳು ತಪ್ಪು ಮಾಡಿದ್ದಾರೆಯೇ ಎಂಬುದನ್ನು ಸಿಬಿಐ ತನಿಖೆ ಹೇಳಬೇಕು. ಅಧಿಕಾರಿಗಳ ತಪ್ಪು ಮೇಲ್ನೋಟಕ್ಕೆ ಕಾಣುತ್ತಿದೆ. ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬರಲು ಸಾಧ್ಯ. ಸರ್ಕಾರಕ್ಕೆ ಬದ್ಧತೆ ಇದ್ದರೆ ಯೋಜನೆಯನ್ನು ಸಿಬಿಐ ತನಿಖೆಗೆ ಒಪ್ಪಿಸಲಿ.

* ಈ ಸರ್ಕಾರ ಸಿಬಿಐ ತನಿಖೆಗೆ ವಹಿಸಲಿದೆ ಎಂಬ ವಿಶ್ವಾಸ ಇದೆಯೇ?
ಎರಡೂವರೆ ವರ್ಷ ಸದನ ಸಮಿತಿ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಸಮಿತಿಗೆ  ದೊರೆತಿರುವ ಪ್ರೋತ್ಸಾಹ ನೋಡಿದರೆ ಶೇಕಡ 100ರಷ್ಟು ಸಿಬಿಐಗೆ ವಹಿಸಲಿದೆ ಎಂಬ ವಿಶ್ವಾಸ ಇದೆ. ಇಲ್ಲವಾದಲ್ಲಿ ಸರ್ಕಾರವೇ ಜವಾಬ್ದಾರಿ ಹೊರಬೇಕಾಗುತ್ತದೆ.

* ಮೂಲ ಒಪ್ಪಂದದ ಪ್ರಕಾರ ಏನಿತ್ತು? ಏನು ಮಾಡಬೇಕಿತ್ತು? ಏನು ಆಗಿದೆ?
ಅಶೋಕ ಖೇಣಿ ಆರಂಭದಲ್ಲಿ ಮುಂಬೈ, ಜಪಾನ್‌, ಅಮೆರಿಕ ತೋರಿಸಿ ಕಲ್ಯಾಣಿ ಸಂಸ್ಥೆ ಕಟ್ಟಿದರು. ತಾಂತ್ರಿಕ ಮತ್ತು ಆಡಳಿತ ವಿಭಾಗ ನೋಡಿಕೊಳ್ಳಲು ಶ್ರಾವ್‌ ಎಂಜಿನಿಯರಿಂಗ್‌ ವರ್ಕ್ಸ್‌ ಮತ್ತು ವಿಎಚ್‌ಪಿ ಸಂಸ್ಥೆಯನ್ನು ಸೇರಿಸಿಕೊಳ್ಳಲಾಯಿತು. ಈ ಮೂರು ಸಂಸ್ಥೆಗಳನ್ನು ಸೇರಿಸಿ ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ (ನೈಸ್‌) ಎಂದು ಹೆಸರಿಟ್ಟರು.

ಆಮೇಲೆ ಖೇಣಿ ಒಂದು ರೂಪಾಯಿ ಬಂಡವಾಳ ಇಲ್ಲದೆ ಬುಗುರಿ ಆಡಿಸಿರುವುದು ಇತಿಹಾಸ. ಕ್ರಮೇಣ ಒಪ್ಪಂದದಲ್ಲಿ ಸಾಕಷ್ಟು ಉಲ್ಲಂಘನೆ ಮತ್ತು ಬದಲಾವಣೆ ಆಯಿತು.ಎಲ್ಲದಕ್ಕೂ ಅಧಿಕಾರಿಗಳು ಬೆಂಬಲ ನೀಡಿದರು. ಈ ನಡುವೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಂಡು ಲಿಂಕ್‌ ರಸ್ತೆಗೆ ಸ್ವಾಧೀನಪಡಿಸಿಕೊಂಡ ಜಮೀನು ಮಾರಾಟಕ್ಕೆ ಅವಕಾಶ ಮಾಡಲಾಯಿತು.

* ಸರ್ಕಾರ ಎಷ್ಟು ಭೂಮಿ ಕೊಟ್ಟಿದೆ? ಎಷ್ಟು ಸ್ವಾಧೀನ ಆಗಬೇಕಿದೆ?
ಪ್ರಸ್ತುತ ‘ಎ’ ಭಾಗದಲ್ಲಿ ಪೆರಿಫೆರಲ್‌ ರಸ್ತೆಗೆ 2,115 ಎಕರೆ ಕೊಡುವ ಬದಲು 2,700 ಎಕರೆ ನೀಡಲಾಗಿದೆ. 605 ಎಕರೆಯನ್ನು ಹೆಚ್ಚುವರಿಯಾಗಿ ಕೊಡಲಾಗಿದೆ. 2,767 ಎಕರೆಯನ್ನು ಸಂಸ್ಥೆ ಸ್ವಾಧೀನಕ್ಕೆ ತೆಗೆದುಕೊಂಡಿದೆ.
 
* ಹೆಚ್ಚುವರಿ ಭೂಮಿಯನ್ನು ಏನು ಮಾಡಬೇಕು?
ಹೆಚ್ಚುವರಿ 605 ಎಕರೆ ವಾಪಸ್‌ ಪಡೆಯಬೇಕು. ವಿಚಿತ್ರವೆಂದರೆ 605 ಎಕರೆಯನ್ನು ಖೇಣಿ ಮಾರಾಟ ಮಾಡಿದ್ದಾರೆ. ಉಳಿದ ಜಾಗದಲ್ಲಿ ಪ್ರಮೋದ್‌ ಎಂಬ ಹೆಸರಿನಲ್ಲಿ ಬಡಾವಣೆ ನಿರ್ಮಿಸಿ ನೈಸ್‌ ಸಂಸ್ಥೆ ಆಸ್ತಿ ಎಂದು ಬರೆದುಕೊಡಲಾಗಿದೆ.

* ಅಧಿಕಾರಿಗಳು ಹೆಚ್ಚುವರಿ ಭೂಮಿ ಹೇಗೆ ಕೊಟ್ಟರು?
ಮಾರಾಟಕ್ಕೆ  ಅನುಮತಿ ನೀಡಿದವರು ಯಾರು? ಕ್ರಿಯಾ ಒಪ್ಪಂದ ಹೇಗೆ ಉಲ್ಲಂಘನೆ ಆಯಿತು? ಈ ಬಗ್ಗೆ ತನಿಖೆ ನಡೆಸಿ ಎಂದು ಶಿಫಾರಸು ಮಾಡಲಾಗಿದೆ. ಒಟ್ಟಾರೆ 5,700 ಎಕರೆ ಸರ್ಕಾರಿ ಜಮೀನು ಸ್ವಾಧೀನಪಡಿಸಿಕೊಂಡು ತಂತಿ ಬೇಲಿ ಹಾಕಿಕೊಂಡಿದ್ದಾರೆ. ಪೆರಿಫೆರಲ್‌, ಲಿಂಕ್‌ ರಸ್ತೆ ಆಸುಪಾಸು ಸರ್ಕಾರಿ ಜಮೀನು ತೆಗೆದುಕೊಳ್ಳಬೇಕು. ಆದರೆ, ಎರಡು ಕಿ.ಮೀ ದೂರದ ಸರ್ಕಾರಿ ಜಮೀನು ತೆಗೆದುಕೊಂಡು ವಸತಿಗೃಹ ನಿರ್ಮಿಸಲಾಗುತ್ತಿದೆ.

*  ಯೋಜನೆಗೆ ಜಮೀನು ಕಳೆದುಕೊಂಡ ರೈತರ ಭವಿಷ್ಯವೇನು?
ಪೆರಿಫೆರಲ್‌, ಎಕ್ಸ್‌ಪ್ರೆಸ್‌, ಲಿಂಕ್ ರಸ್ತೆಗೆ  6,999 ಎಕರೆ ಭೂಮಿ ನೀಡಬೇಕು ಎಂದು ಸೋಮಶೇಖರ್‌ ರೆಡ್ಡಿ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಎತ್ತಿ ಹಿಡಿಯಿತು. ಐದು ಟೌನ್‌ಶಿಪ್‌ ನಿರ್ಮಾಣಕ್ಕೆ 13 ಸಾವಿರ ಎಕರೆ ಜಮೀನು ಸೇರಿದಂತೆ ಒಟ್ಟು 20,193 ಎಕರೆ ಭೂಮಿ ನೀಡುವಂತೆ ಆದೇಶ ನೀಡಿತು. ಆದರೆ 13 ಸಾವಿರ ಎಕರೆ ಬದಲು 23 ಸಾವಿರ ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಂಡು ನೈಸ್‌ ಸಂಸ್ಥೆಗೆ ಹಸ್ತಾಂತರ ಮಾಡಿತು. ರೈತರು ತಮ್ಮ  ಜಮೀನು ಮಾರಲೂ ಆಗದ, ಬಿಡಲೂ ಆಗದ ಅತಂತ್ರ ಸ್ಥಿತಿಯಲ್ಲಿದ್ದಾರೆ. ಸದ್ಯ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾರೆ. ಅವರಿಗೆ ಪರ್ಯಾಯ ಮಾರ್ಗ ಇಲ್ಲ.

*  ಯೋಜನೆ ರದ್ದು ಮಾಡಬೇಕು ಎನ್ನುವುದು ನಿಮ್ಮ ಅಭಿಪ್ರಾಯವೇ? ಈ  ಸಾಧ್ಯತೆ ಇದೆಯೇ?
ಕ್ರಿಯಾ ಒಪ್ಪಂದದ ಪ್ರಕಾರ ಕಾಂಕ್ರೀಟ್‌ ರಸ್ತೆ ನಿರ್ಮಿಸಿ, ಟೋಲ್‌ ಶುಲ್ಕ ವಸೂಲು ಮಾಡುವುದಾಗಿ ಸಂಸ್ಥೆ ಹೇಳಿತ್ತು. 2012ರವರೆಗೂ ಟೋಲ್‌ ಶುಲ್ಕ ಸಂಗ್ರಹಿಸಲು ಕಾಲಾವಕಾಶ ನೀಡಬೇಕು ಎಂದು 2002ರಲ್ಲಿ ಸಂಪುಟದ ಅನುಮತಿ ಪಡೆದುಕೊಂಡಿತು. 2012ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಿಸಿಕೊಡಲಾಗುವುದು ಎಂದು ಖೇಣಿ ಬರೆದುಕೊಟ್ಟರು. ಇಲ್ಲಿಯವರೆಗೂ ಕೆಲಸ ಆಗಿಲ್ಲ. ಒಪ್ಪಂದ ಉಲ್ಲಂಘನೆ ಮಾಡಿರುವವರನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ. ತಪ್ಪು ಮಾಡಿದವರನ್ನು ಜೈಲಿಗೆ  ಹಾಕಬೇಕು.

* ಯೋಜನೆ ರದ್ದಾದರೆ ಮುಂದೇನು?
ಅಧಿಕಾರಿಗಳ ತಪ್ಪಿನಿಂದ ಹೀಗಾಗಿದೆ. ಯೋಜನೆ ರದ್ದು ಮಾಡಿ ಸರ್ಕಾರವೇ ಅನುಷ್ಠಾನಗೊಳಿಸಬೇಕು. ಈ ಯೋಜನೆಗೆ ಬೃಹತ್‌ ಪ್ರಮಾಣದ ಭೂಮಿ ಕೊಡುವ ಅವಶ್ಯಕತೆ ಇಲ್ಲ.

* ಯೋಜನೆ ಯಾವಾಗ ಮುಗಿಯಬೇಕಿತ್ತು? ಇನ್ನು ಎಷ್ಟು ವರ್ಷವಾಗಬಹುದು? ಖೇಣಿ ಅವರಿಂದ ಈ ಕೆಲಸ ಆಗುವುದೇ?
2014ರ ವೇಳೆಗೆ ಯೋಜನೆ ಮುಗಿಯಬೇಕಿತ್ತು. 41 ಕಿ.ಮೀ ಪೆರಿಫೆರಲ್‌ ರಸ್ತೆ ಸಹ ಅಪೂರ್ಣವಾಗಿದೆ. ಖೇಣಿ ಬಳಿ ದುಡ್ಡಿಲ್ಲ. ಅವರಿಂದ ಕೆಲಸ ಆಗುವುದೂ ಇಲ್ಲ. ವಿದೇಶಿ ಹಣ ತರುತ್ತೇನೆ ಎಂದು ಹೇಳಿ, ಒಂದು ನಯಾಪೈಸೆ ತಂದಿಲ್ಲ. ಸ್ವಂತ ಬಂಡವಾಳ ಹಾಕಿಲ್ಲ. ಕರ್ನಾಟಕ ಅಭಿವೃದ್ಧಿಪಡಿಸಲು ಅವರು ಬಂದಿಲ್ಲ. ಅವರು ಬಂದಿರುವುದು ಹಣ ಮಾಡಲು ಅಷ್ಟೆ.

ನೈಸ್‌ ಸಂಸ್ಥೆ ಎಸಗಿರುವ ಅಕ್ರಮಗಳ ಬಗ್ಗೆ  ಬಹಿರಂಗ ಚರ್ಚೆಗೆ ಖೇಣಿ ಬರಲಿ. ಅವರು ಕೇಳುವ ಪ್ರಶ್ನೆಗೆ ನಾವು ಉತ್ತರ ಹೇಳುತ್ತೇವೆ, ನಾವು ಕೇಳುವ ಪ್ರಶ್ನೆಗೆ ಅವರು ಉತ್ತರ ಹೇಳಲಿ. ಜನರಿಗೂ ಅವರ ನಿಜವಾದ ಬಣ್ಣ ಗೊತ್ತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT