ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಪಿ ಹಾಕಲು ಯತ್ನಿಸಿಲ್ಲ

ನೈಸ್‌ ಅಕ್ರಮ ಆರೋಪ
Last Updated 10 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ಪ್ರೈಸಸ್‌ (ನೈಸ್‌) ಜಾರಿಗೊಳಿಸುತ್ತಿರುವ ಬಿಎಂಐಸಿ ಯೋಜನೆಯಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ನೇತೃತ್ವದ ಸದನ ಸಮಿತಿ ವರದಿ ನೀಡಿದೆ.  ಇತ್ತೀಚೆಗೆ ಈ ವರದಿ ವಿಧಾನಸಭೆಯಲ್ಲಿ ಮಂಡನೆ ಆಗಿದೆ. ನೈಸ್‌ ಸಂಸ್ಥೆ ಮುಖ್ಯಸ್ಥ ಅಶೋಕ್‌ ಖೇಣಿ ಅವರು ‘ಪ್ರಜಾವಾಣಿ’ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

* ನೈಸ್‌ ಯೋಜನೆಗೆ ಆಗಿರುವ ಮೂಲ ಒಪ್ಪಂದ ಏನು? ಅದರ ಅಂಶಗಳನ್ನು ಗಾಳಿಗೆ ತೂರಿದ್ದೀರಿ ಎಂಬ ಆರೋಪ ನಿಮ್ಮ ಮೇಲಿದೆಯಲ್ಲ?
ಕಾರಿಡಾರ್‌ ನಿರ್ಮಾಣದ ಪ್ರಸ್ತಾಪ ಶುರುವಾಗಿದ್ದು 1980ರ ದಶಕದಲ್ಲಿ. ವ್ಯವಸ್ಥೆ ಹೊಲಸಾಗಿತ್ತು. ಹಲವು ಸಂಸ್ಥೆಗಳು ಯೋಜನೆ ಅನುಷ್ಠಾನ ಅಸಾಧ್ಯ ಎಂದು ಕೈಚೆಲ್ಲಿದ್ದವು.ಅಂತಹ ಸಂದರ್ಭದಲ್ಲಿ ರಾಜ್ಯಕ್ಕೆ ಮಹತ್ತರ ಕೊಡುಗೆ ನೀಡಬೇಕು ಎಂಬ ಮಹದಾಸೆಯಿಂದ ಇಲ್ಲಿಗೆ ಬಂದವನು ನಾನು.

ಪ್ರಾಯೋಗಿಕವಾಗಿ ಹುಬ್ಬಳ್ಳಿ– ಧಾರವಾಡ ರಸ್ತೆ ಅಭಿವೃದ್ಧಿ ಮಾಡಿಕೊಟ್ಟೆ. ಬೆಂಗಳೂರು ಮತ್ತು ಮೈಸೂರು ನಡುವೆ ತಡೆರಹಿತ ರಸ್ತೆ ನಿರ್ಮಾಣ ಹಾಗೂ ಏಳು ಟೌನ್‌ಶಿಪ್‌ಗಳ ಅಭಿವೃದ್ಧಿಗೆ 28 ಸಾವಿರ ಎಕರೆ ಜಾಗ ಬೇಕಾಗಿತ್ತು. ಐದು ಟೌನ್‌ಶಿಪ್‌ಗಳ ನಿರ್ಮಾಣಕ್ಕೆ ಒಪ್ಪಂದ ಮಾಡಿಕೊಳ್ಳಲಾಯಿತು. ಇದಕ್ಕೆ 6,956 ಎಕರೆ ಸರ್ಕಾರಿ ಜಾಗ ಹಾಗೂ 13,237 ಎಕರೆ ಖಾಸಗಿ ಜಾಗ ಸೇರಿದಂತೆ ಒಟ್ಟು 20,193 ಎಕರೆ ಭೂಸ್ವಾಧೀನ ಮಾಡಿಕೊಳ್ಳಬೇಕಾಗಿತ್ತು.

ಯೋಜನೆ ಅನುಷ್ಠಾನಕ್ಕಾಗಿ 1997ರ ಏಪ್ರಿಲ್‌ 3ರಂದು ಮೂಲ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಅದುವೇ ಅಂತಿಮ ಒಪ್ಪಂದ. ಯೋಜನೆಯ ಇತಿಹಾಸ ಗೊತ್ತಿಲ್ಲದವರು ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಒಪ್ಪಂದದ ಪ್ರಕಾರವೇ ನಾನು ನಡೆದುಕೊಂಡಿದ್ದೇನೆ. ನನ್ನಿಂದ ಯಾವ ಲೋಪವೂ ಆಗಿಲ್ಲ. ಸರ್ಕಾರಕ್ಕೆ ಟೋಪಿ ಹಾಕುವ ಪ್ರಯತ್ನವನ್ನು ಎಂದೂ ಮಾಡಿಲ್ಲ.

*  ಭೂಸ್ವಾಧೀನ ಸಂದರ್ಭದಲ್ಲಿ ಸರಿಯಾಗಿ ಪರಿಹಾರ ನೀಡದೆ ರೈತರಿಗೂ ಮೋಸ ಮಾಡಿದ್ದೀರಿ ಎಂದು ಕೆಲವರು ದೂರಿದ್ದಾರೆ. ಏನು ಹೇಳುತ್ತೀರಿ?
ರೈತರಿಗೆ ಎಕರೆಗೆ ₹ 2 ಲಕ್ಷ ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿತ್ತು. ಅದೇ ವೇಳೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೂ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಿತ್ತು. ಇದು ಜುಜುಬಿ ಪರಿಹಾರ ಎಂಬುದು ನನ್ನ ಅನಿಸಿಕೆಯಾಗಿತ್ತು. ಎಕರೆಗೆ ₹ 7 ಲಕ್ಷ ಪರಿಹಾರ ನೀಡುತ್ತೇನೆ ಎಂದು ವಾಗ್ದಾನ ಮಾಡಿದ್ದೆ.

ಇದಕ್ಕೆ ಬಿಡಿಎ ಅಧಿಕಾರಿಗಳು ತಕರಾರು ತೆಗೆದರು. ನೀವು ದೊಡ್ಡ ಮೊತ್ತದ ಪರಿಹಾರ ಕೊಟ್ಟರೆ ಪ್ರಾಧಿಕಾರಕ್ಕೆ ಸಮಸ್ಯೆಯಾಗುತ್ತದೆ ಎಂಬುದು ಅವರ ಆತಂಕವಾಗಿತ್ತು.ಕೊನೆಗೆ ಎಕರೆಗೆ ₹ 6 ಲಕ್ಷ ಪರಿಹಾರ ನಿಗದಿಪಡಿಸಲಾಯಿತು. ಆ ಪ್ರಕಾರವೇ ಪರಿಹಾರ ಕೊಟ್ಟೆ. ಜತೆಗೆ, ಒಂದು ಎಕರೆ ಭೂಮಿ ಬಿಟ್ಟುಕೊಟ್ಟವರಿಗೆ ಒಂದು ನಿವೇಶನ, ಕುಟುಂಬದ ಸದಸ್ಯರೊಬ್ಬರಿಗೆ ನೈಸ್‌ನಲ್ಲಿ ಉದ್ಯೋಗ ನೀಡಿದೆ. ಇದರಿಂದ ರೈತರೆಲ್ಲ ಸಂತುಷ್ಟರಾದರು. ಅವರೆಲ್ಲ ಈಗಲೂ ನನ್ನ ಜತೆ ಇದ್ದಾರೆ. ನನ್ನ ವಿರುದ್ಧ ಹೋರಾಟ ಮಾಡುತ್ತಿರುವವರೇ ಬೇರೆ. ಅವರಿಗೆ ಸ್ಥಾಪಿತ ಹಿತಾಸಕ್ತಿಗಳಿವೆ. 

* ಟೋಲ್ ರಸ್ತೆಗಾಗಿ ಸ್ವಾಧೀನಪಡಿಸಿಕೊಂಡು ಹಸ್ತಾಂತರಿಸಿದ ಖಾಸಗಿ ಜಮೀನಿನಲ್ಲಿ 756.33 ಎಕರೆಯನ್ನು ನೀವು ರಿಯಲ್ ಎಸ್ಟೇಟ್ ವಹಿವಾಟಿಗೆ ಬಳಸಿದ್ದೀರಿ ಎಂದು ಸದನ ಸಮಿತಿ ವರದಿಯಲ್ಲಿ ಉಲ್ಲೇಖ ಮಾಡಿದೆಯಲ್ಲ?
ಈ ಆರೋಪ ಹಸಿ ಸುಳ್ಳು. ಕಾರಿಡಾರ್‌ ನಿರ್ಮಾಣದ ಸಂದರ್ಭದಲ್ಲಿ ಅನೇಕ ಜನಪರ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇನೆ. 400 ಎಕರೆಯಲ್ಲಿ ರೈತರಿಗೆ ನಿವೇಶನ ಕೊಟ್ಟಿದ್ದೇನೆ. ತುಮಕೂರು ರಸ್ತೆಯಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ ಅಭಿವೃದ್ಧಿಪಡಿಸಿದ್ದೇನೆ. ಇವೆಲ್ಲ ರಿಯಲ್‌ ಎಸ್ಟೇಟ್‌ ಚಟುವಟಿಕೆಯೇ? ಮನುಷ್ಯ ಅಬ್ಬಬ್ಬಾ ಎಂದರೆ 80 ವರ್ಷ ಬದುಕಬಹುದು. ನನಗೀಗ 67 ವರ್ಷ. ನಾನಿನ್ನು 13 ವರ್ಷ ಬದುಕಬಹುದು.

ನನಗೆ ಅಕ್ರಮದ ಹಣ ಬೇಕಾಗಿಲ್ಲ. ಬೆಂಗಳೂರು ಎಂದರೆ ಗಾರ್ಬೇಜ್‌ ಸಿಟಿ, ಸಂಚಾರ ದಟ್ಟಣೆಯ ನಗರ ಎಂಬ ಕುಖ್ಯಾತಿಗೆ ಒಳಗಾಗಿತ್ತು. ನಗರವನ್ನು ವಿಶ್ವಮಟ್ಟದಲ್ಲಿ ಅಭಿವೃದ್ಧಿಪಡಿಸಬೇಕು ಎಂಬ ಅಭಿಲಾಷೆ ಹೊಂದಿದವ ನಾನು. ಇಲ್ಲಿಂದ ಅಮೆರಿಕಕ್ಕೆ ಮರಳುವಾಗ ನಯಾಪೈಸೆ ಹಿಡಿದುಕೊಂಡು ಹೋಗುವುದಿಲ್ಲ. ಮತ್ತೆ ನಾನೇಕೆ  ರಿಯಲ್‌ ಎಸ್ಟೇಟ್‌ ಚಟುವಟಿಕೆ ನಡೆಸಲಿ?

* ಮಾತು ಮಾತಿಗೂ ನ್ಯಾಯಾಲಯಕ್ಕೆ ಹೋಗುವ ಮಾತನಾಡುತ್ತೀರಿ. ಸದನ ಸಮಿತಿ ವರದಿ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ವರದಿಯಲ್ಲಿ ಉಲ್ಲೇಖಿಸಿದ ಎಲ್ಲ ಪ್ರಕರಣಗಳೂ ವಿವಿಧ ನ್ಯಾಯಾಲಯಗಳಲ್ಲಿ ಇತ್ಯರ್ಥಗೊಂಡಿವೆ. ದಶಕಗಳಿಂದ ಮಾಡಿರುವ ಆರೋಪಗಳೇ ಇಲ್ಲಿ ಮತ್ತೆ ಪ್ರಸ್ತಾಪವಾಗಿವೆ.

ಪಾತ್ರಗಳು ಮಾತ್ರ ಬದಲಾಗಿವೆ ಅಷ್ಟೆ. ಈ ವರದಿಯ  ಶಿಫಾರಸುಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಸದನಕ್ಕೆ ಗೌರವ ಕೊಡುತ್ತೇನೆ. ಕೆಲವು ಕಟು ಸತ್ಯಗಳನ್ನು ಇಲ್ಲಿ ಹೇಳಲು ಆಗುವುದಿಲ್ಲ, ಕ್ಷಮಿಸಿ. ಯೋಜನೆಗೆ ಸಂಬಂಧಿಸಿದ ಪ್ರಕರಣವೊಂದು 2017ರ ಫೆಬ್ರುವರಿ 23ರಂದು ಸುಪ್ರೀಂ ಕೋರ್ಟ್‌ನಲ್ಲಿ ಹಾಗೂ ಫೆಬ್ರುವರಿ 13ರಂದು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ನನಗೆ ಅಲ್ಲಿ ನ್ಯಾಯ ಸಿಗುವ ವಿಶ್ವಾಸ ಇದೆ. ನಾಡಿನ ಸೇವೆಗೆ ಬಂದವನಿಗೆ ಅನ್ಯಾಯವಾದಾಗ ಕೋರ್ಟ್‌ ಮೆಟ್ಟಿಲೇರುವುದು ಅನಿವಾರ್ಯ ಅಲ್ಲವೇ. ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಏಕೆ ಹೆದರಲಿ?

* ಸದನದಲ್ಲಿ ನೈಸ್‌ ಅಕ್ರಮದ ವರದಿ ಮಂಡಿಸದಂತೆ ಪ್ರಭಾವಿ ಸಚಿವರ ಮೂಲಕ ಒತ್ತಡ ಹೇರಿದ್ದೀರಿ ಎಂಬ ಆರೋಪವೂ ನಿಮ್ಮ ಮೇಲಿದೆಯಲ್ಲ?
ಹಿಂದೊಮ್ಮೆ ಭೂಗತ ಪಾತಕಿ ರವಿ ಪೂಜಾರಿಯಿಂದ ನನಗೆ ಬೆದರಿಕೆ ಬಂತು. ಅರ್ಧ ಗಂಟೆಯಲ್ಲೇ ನಾನು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದೆ. ಒಂದು ವೇಳೆ ಸದನ ಸಮಿತಿಯ ಸದಸ್ಯರಿಗೆ ಬೆದರಿಕೆ, ಒತ್ತಡ ಬಂದಿದ್ದರೆ ಅವರೂ ದೂರು ಕೊಡಬಹುದಿತ್ತು.

ಸದನ ಸಮಿತಿ ಅಧ್ಯಕ್ಷ ಜಯಚಂದ್ರ ಕಾನೂನು ಸಚಿವರು. ಮೇಲಾಗಿ ಕಾನೂನು ಪಂಡಿತರು. ಇಡೀ ಇಲಾಖೆಯೇ ಅವರ ಕೈಯಲ್ಲಿ ಇದೆ. ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್ ಅವರಿಗೆ ಬೆದರಿಕೆ ಹಾಕಲು ಯಾರಿಗಾದರೂ ಸಾಧ್ಯವೇ? ನೀವೇ ಹೇಳಿ.

* ಈವರೆಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ನಿಮ್ಮ ಸಂಸ್ಥೆಯ ವಿರುದ್ಧ ಆರೋಪ ಮಾಡುತ್ತಿದ್ದರು. ಈಗ ಇಡೀ ಸದನ ಸಮಿತಿಯೇ ನಿಮ್ಮ ವಿರುದ್ಧ ನಿಂತಿದೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?
ದೇವೇಗೌಡರ ಚಿತಾವಣೆಯಿಂದಲೇ ಈ ವರದಿ ಸಿದ್ಧವಾಗಿದೆ. ವರದಿಯ ಎಲ್ಲ ಶಿಫಾರಸುಗಳು ಅವರಿಗೆ ಮೊದಲೇ ಗೊತ್ತಿತ್ತು. ಅದನ್ನು ಮೂರು ತಿಂಗಳ ಹಿಂದೆಯೇ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಅವರು ಸದನ ಸಮಿತಿಯ ಸದಸ್ಯರಿಗೆ ವಿವಿಧ ರೀತಿಯ ಆಮಿಷ ಒಡ್ಡಿದ್ದಾರೆ. ಮುಂದಿನ ಮುಖ್ಯಮಂತ್ರಿ ಮಾಡುವುದಾಗಿ ಸಚಿವರಾದ ಡಾ. ಎಚ್‌.ಸಿ.ಮಹದೇವಪ್ಪ ಹಾಗೂ ಟಿ.ಬಿ.ಜಯಚಂದ್ರ ಅವರಿಗೆ ಗಾಳಿ ಹಾಕಿ ಉಬ್ಬಿಸಿದ್ದಾರೆ. ಹೀಗಾಗಿ ಗೌಡರ ತಾಳಕ್ಕೆ ತಕ್ಕಂತೆ ಅವರು ಕುಣಿಯುತ್ತಿದ್ದಾರೆ.

* ನೈಸ್‌ ಸಂಸ್ಥೆಯಲ್ಲಿ ಕೆಲವು ಸಚಿವರು ಪಾಲುದಾರರಾಗಿದ್ದಾರೆ ಎಂಬ ಆರೋಪ ನಿಜವೇ?
ಹ್ಹ...ಹ್ಹ...ಹ್ಹ... ಸಚಿವರನ್ನು ನಾನ್ಯಾಕೆ ಪಾಲುದಾರರನ್ನಾಗಿ ಮಾಡಿಕೊಳ್ಳಲಿ. ನನ್ನ ವಿರುದ್ಧ ಆರಂಭದಿಂದಲೂ ಆರೋಪ ಮಾಡುತ್ತಿರುವವರು ದೇವೇಗೌಡರು. ಪಾಲುದಾರರ ಅಗತ್ಯ ಬಿದ್ದಿದ್ದರೆ ಗೌಡರನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಆಗ ವೃಥಾ ಆರೋಪವೂ ನಿಲ್ಲುತ್ತಿತ್ತು. ಗೌಡರ ಸಾಮ್ರಾಜ್ಯಕ್ಕೆ ರಕ್ಷಣೆಯೂ ಸಿಗುತ್ತಿತ್ತು. ನಾನು ಇಷ್ಟೊಂದು ಅಡ್ಡಿ– ಆತಂಕ ಎದುರಿಸಬೇಕಿರಲಿಲ್ಲ. ನನ್ನ ಕನಸಿನ ಒಳ್ಳೆ ಯೋಜನೆಯೊಂದು ಕಾಲಮಿತಿಯಲ್ಲಿ ಪೂರ್ಣಗೊಳ್ಳುತ್ತಿತ್ತು.

* ಕೆಲವು ಸಚಿವರು ಹಾಗೂ ಅಧಿಕಾರಿಗಳನ್ನು ಖರೀದಿ ಮಾಡಿದ್ದೀರಿ ಎನ್ನಲಾಗುತ್ತಿದೆ. ಲೋಕೋಪಯೋಗಿ ಇಲಾಖೆ ಹಾಗೂ ಕೆಐಎಡಿಬಿಯ ನಿವೃತ್ತ ಅಧಿಕಾರಿಗಳು  ನಿಮ್ಮ ಸಂಸ್ಥೆ ಸೇರಿಕೊಂಡಿದ್ದಾರೆ. ನಿಮಗೆ ಅನುಕೂಲ ಮಾಡಿಕೊಟ್ಟಿದ್ದಕ್ಕೆ ಇದು ಪ್ರತಿಫಲವೇ?
ನಾನು ಯಾರನ್ನೂ ಖರೀದಿ ಮಾಡಿಲ್ಲ. ಅದರ ಅಗತ್ಯವೂ ನನಗಿಲ್ಲ. ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ರಮೇಶ್‌ ಅವರು ಮಾತ್ರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ತಾಂತ್ರಿಕ ಸಲಹೆ ನೀಡುತ್ತಿದ್ದಾರೆ ಅಷ್ಟೆ. ಮುಖ್ಯಮಂತ್ರಿಯಾಗಿದ್ದ ಜೆ.ಎಚ್‌.ಪಟೇಲ್‌ ಅವರ ಸಲಹೆ ಪ್ರಕಾರವೇ ರಮೇಶ್‌ ಅವರನ್ನು ಸೇರಿಸಿಕೊಂಡಿದ್ದೆ.

ಟೊಯೊಟಾ ಕಿರ್ಲೋಸ್ಕರ್‌ ಸಂಸ್ಥೆ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ನಿವೃತ್ತ ಐಎಎಸ್‌ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಈ ಸಂಸ್ಥೆಗಳೆಲ್ಲ ಅಕ್ರಮ ನಡೆಸುತ್ತಿವೆ ಎಂದು ಅರ್ಥವೇ. ನನ್ನದು ಅಕ್ರಮವಾದರೆ ಅವರದ್ದೂ ಅಕ್ರಮವೆ.

* ನೈಸ್‌ ಅಕ್ರಮವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಸದನ ಸಮಿತಿ ಶಿಫಾರಸು ಮಾಡಿದೆಯಲ್ಲ?
ನಮ್ಮ ಸಂಸ್ಥೆ ಹೆಚ್ಚುವರಿ ಭೂಮಿ ಸ್ವಾಧೀನಪಡಿಸಿಕೊಂಡಿದೆ ಎಂದು ಆರೋಪಿಸಿ ಈ ಹಿಂದೆ ಜೆ.ಸಿ.ಮಾಧುಸ್ವಾಮಿ ಕೋರ್ಟ್‌ ಮೆಟ್ಟಿಲೇರಿದ್ದರು. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದೂ ಆಗ್ರಹಿಸಿದ್ದರು. ಕೋರ್ಟ್‌ ಪ್ರಕರಣವನ್ನು ವಜಾ ಮಾಡಿತ್ತು ಹಾಗೂ ಅರ್ಜಿದಾರರಿಗೆ ₹ 50 ಸಾವಿರ ದಂಡ ವಿಧಿಸಿತ್ತು. ಈ ಅಂಶ ಸದನ ಸಮಿತಿಯ ವರದಿಯಲ್ಲೇ ಇದೆ. ಮತ್ತೆ ಸಿಬಿಐ ತನಿಖೆಯ ಪ್ರಶ್ನೆ ಉದ್ಭವಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT