ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಕೂಲಗಳ ನಡುವೆಯೂ ಬಾನೆತ್ತರ ನಿಂತವರು...

Last Updated 11 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

‘ಕೊಕ್ಕೊ ನಮಗೆ ರಕ್ತಗತವಾಗಿ ಬಂದಿದೆ. ಇದರಿಂದಲೇ ನಾವು ದಕ್ಷಿಣ ಭಾರತದಲ್ಲಿ ಅಗ್ರಸ್ಥಾನದಲ್ಲಿದ್ದೇವೆ’ ಎಂದು ಕೇರಳ ಕೊಕ್ಕೊ ತಂಡದ ಹಿರಿಯ ಕೋಚ್‌ ಜಯನ್ ಕರ್ನಾಟಕ ತಂಡದ ವಿರುದ್ಧದ ಪಂದ್ಯಕ್ಕೂ ಮುನ್ನ ಎದೆ ತಟ್ಟಿ ಹೇಳಿದ್ದರು.

ಕಲಬುರ್ಗಿಯಲ್ಲಿ ಈಚೆಗೆ ನಡೆದ ದಕ್ಷಿಣ ವಲಯ ಅಂತರರಾಜ್ಯ ಕೊಕ್ಕೊ ಟೂರ್ನಿಯಲ್ಲಿ ಅಮೋಘ ಆಟದ ಮೂಲಕ ಮಹಿಳೆಯರು ಮತ್ತು ಪುರುಷರ ವಿಭಾಗದಲ್ಲಿ ಕೇರಳ ತಂಡಗಳನ್ನು ಮಣಿಸಿ ಕರ್ನಾಟಕ ತಂಡಗಳು ಚಾಂಪಿಯನ್‌ ಆಗುವ ಮೂಲಕ ಜಯನ್‌ ಅವರಿಗೆ ನಿರಾಸೆ ಉಂಟು ಮಾಡಿದವು.

ಹಾಸನದಲ್ಲಿ ನಡೆದಿದ್ದ ಕೇವಲ ನಾಲ್ಕು ದಿನಗಳ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ತಂಡಗಳು, ತಿರುವನಂತಪುರದಲ್ಲಿ 15 ದಿನ ತಾಲೀಮು ನಡೆಸಿದ್ದ ಕೇರಳ ತಂಡಗಳನ್ನು ಮಣಿಸುವುದು ಸುಲಭದ ಮಾತಾಗಿರಲಿಲ್ಲ. ಶಿಬಿರಕ್ಕಾಗಿಯೇ ಕೇರಳ ಸರ್ಕಾರ ಬರೋಬ್ಬರಿ ₹1.5 ಲಕ್ಷ ಖರ್ಚು ಮಾಡಿದೆ ಎಂದಿದ್ದರು ಜಯನ್. ಆರ್ಥಿಕವಾಗಿ ಸಂಕಷ್ಟದಲ್ಲಿರುವ ರಾಜ್ಯ ಕೊಕ್ಕೊ ಸಂಸ್ಥೆ ಈ ಟೂರ್ನಿಗೆ ಆಟಗಾರರನ್ನು ಒಗ್ಗೂಡಿಸ ಲಿಕ್ಕಾಗಿಯೇ ಸಾಕಷ್ಟು ಪಡಿಪಾಟಲು ಪಟ್ಟಿದೆ.

ಆದರೆ, ಕೇರಳ ಸರ್ಕಾರ ಕೊಕ್ಕೊ ಆಟ ದ ಅಭಿವೃದ್ಧಿಗೆ ಸಾಕಷ್ಟು ಶ್ರಮ ವಹಿಸಿದೆ.  ಮಲಪ್ಪುರಂನಲ್ಲಿ 30 ಬಾಲಕರಿಗೆ ಮತ್ತು ತಿರುವನಂತಪುರದಲ್ಲಿ 34 ಬಾಲಕಿಯರಿಗೆ ಉಳಿಯಲು ಕ್ರೀಡಾ ಹಾಸ್ಟೆಲ್‌ ತೆರೆದಿದ್ದು, ಆಟಗಾರರಿಗೆ ವಿಮಾ ವ್ಯವಸ್ಥೆ ಕಲ್ಪಿಸಿದೆ. ರಾಷ್ಟ್ರಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದವರಿಗೆ ಸರ್ಕಾರ ಉದ್ಯೋಗ ನೀಡುತ್ತದೆ. ‘ಕಳೆದ ವರ್ಷ ಇಬ್ಬರು ಮಹಿಳೆಯರು ಮದುವೆಯಾಗಿದ್ದರೂ ರಾಜ್ಯ ತಂಡದಲ್ಲಿದ್ದರು. ಅವರಿಗೂ  ಸರ್ಕಾರ ಈಚೆಗೆ ಉದ್ಯೋಗ ನೀಡಿದೆ. ಸದ್ಯ ಬಾಲಕರು ಮತ್ತು ಬಾಲಕಿಯರ ವಿಭಾಗದಲ್ಲಿ ತಲಾ ನಾಲ್ಕು ತಂಡಗಳಿವೆ’ ಎನ್ನುತ್ತಾರೆ ಜಯನ್‌. 

‘ಪ್ರತಿಯೊಬ್ಬ ಆಟಗಾರನ ಮೇಲೆ ಕೇರಳ ಸರ್ಕಾರ ಪ್ರತಿವರ್ಷ ಕನಿಷ್ಠ ₹1 ಲಕ್ಷ ವೆಚ್ಚ ಮಾಡುತ್ತದೆ. ₹5 ಸಾವಿರ ಮೌಲ್ಯದ ಸಮವಸ್ತ್ರ ನೀಡುವುದರ ಜೊತೆಗೆ ಟೂರ್ನಿಯಲ್ಲಿ ಪಾಲ್ಗೊಂಡವರಿಗೆ ₹300 ಭತ್ಯೆ ನೀಡುತ್ತದೆ. ಓಣಂ ಮತ್ತು ಕ್ರಿಸ್‌ಮಸ್‌ ಸಂದರ್ಭದಲ್ಲಿ ಒಂದು ವಾರ ಪ್ರವಾಸ ಭತ್ಯೆಯನ್ನೊಳಗೊಂಡ ರಜೆ ನೀಡಲಾಗುತ್ತದೆ. ಇವೆಲ್ಲವೂ ಕೇರಳದ ಮಕ್ಕಳು ಈ ಕ್ರೀಡೆಯ ಬಗ್ಗೆ ಆಸಕ್ತಿ ಹೊಂದಲು ನೆರವಾಗಿದೆ. ಈ ರೀತಿಯ ಪ್ರೋತ್ಸಾಹ ಎಲ್ಲಾ ಕ್ರೀಡೆಗಳಿಗೂ ಇದೆ.

ವಿವಿಧ ಕ್ರೀಡೆಗಳಿಗಾಗಿ ಒಟ್ಟು 200ಕ್ಕೂ ಹೆಚ್ಚು ಕ್ರೀಡಾವಸತಿ ನಿಲಯಗಳಿವೆ. 250 ಮಂದಿ ಕಾಯಂ ಕೋಚ್‌ಗಳಿದ್ದು, ಸುಮಾರು 150 ಮಂದಿ ಗುತ್ತಿಗೆ ಆಧಾರದಲ್ಲಿ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಪಿ.ಟಿ. ಉಷಾ ಸೇರಿದಂತೆ ಹಲವು ಕ್ರೀಡಾ ತಾರೆಗಳು ಖಾಸಗಿ ಅಕಾಡೆಮಿಗಳನ್ನು ಆರಂಭಿಸಿ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ’ ಎಂದೂ ಅವರು ಹೇಳಿದರು.

ಆದರೆ, ರಾಜ್ಯದ ಕೊಕ್ಕೊ ಸಂಸ್ಥೆಯು ಆಂತರಿಕ ಕಚ್ಚಾಟ, ರಾಜಕೀಯ ಮೇಲಾಟ, ಒಣ ಪ್ರತಿಷ್ಠೆ, ಅನುದಾನದ ಕೊರತೆಯಿಂದ ನರಳುತ್ತಿದ್ದು, ಸಾಕಷ್ಟು ಏಳು–ಬೀಳುಗಳ ನಡುವೆ ಚೇತರಿಕೆ ಕಾಣುತ್ತಿದೆ.

‘ಸರ್ಕಾರದಿಂದ ₹3 ಲಕ್ಷ ಸಿಗುವುದೇ ಕಷ್ಟ. ಇಷ್ಟು ಅನುದಾನದಲ್ಲಿ ಕ್ರೀಡೆಯನ್ನು ಬೆಳೆಸುವುದು ಹೇಗೆ? ಸಂಸ್ಥೆಯ ಪದಾಧಿಕಾರಿಗಳು ತಮ್ಮ ಕೈಯಿಂದ ಹಣ ಹಾಕಿ  ತಂಡಗಳನ್ನು ಟೂರ್ನಿಗೆ ಕಳುಹಿಸುತ್ತಿದ್ದೇವೆ’ ಎನ್ನುತ್ತಾರೆ ರಾಜ್ಯ ಕೊಕ್ಕೊ ಸಂಸ್ಥೆಯ ಕಾರ್ಯಾಧ್ಯಕ್ಷ ಕೆ.ಆರ್‌. ರಾಜಗೋಪಾಲ.
‘ಆಟಗಾರರಿಗೆ ಉದ್ಯೋಗ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ರಾಜಕಾರಣಿಗಳು ಹಾಗೂ ಆಡಳಿತಶಾಹಿ ಇಚ್ಛಾಶಕ್ತಿ ತೋರುತ್ತಿಲ್ಲ. ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ಪ್ರಧಾನ ಕಚೇರಿ ಇದೆಯಾದರೂ ಒಬ್ಬನೇ ಒಬ್ಬ ಕೊಕ್ಕೊ ಆಟಗಾರನಿಗೆ ಉದ್ಯೋಗ ನೀಡಿಲ್ಲ’ ಎಂದು  ಭಾರತೀಯ ಕೊಕ್ಕೊ ಒಕ್ಕೂಟದ ಉಪಾಧ್ಯಕ್ಷರೂ ಆದ ರಾಜಗೋಪಾಲ ಹೇಳುತ್ತಾರೆ.

‘ದಾವಣಗೆರೆಯಲ್ಲಿ ಮಾತ್ರ ಏಕೈಕ ಕೊಕ್ಕೊ ಕ್ರೀಡಾ ಹಾಸ್ಟೆಲ್‌ ಇದೆ. ಅಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಯಾರಿಗೂ ತಿಳಿದಿಲ್ಲ. ಸರ್ಕಾರಕ್ಕೆ ನಿಜಕ್ಕೂ ಕ್ರೀಡಾ ಕ್ಷೇತ್ರದ ಬಗ್ಗೆ ಒಲವು ಇದ್ದರೆ ಆಟಗಾರರು, ಸಂಸ್ಥೆಗಳ ಪದಾಧಿಕಾರಿ, ಕ್ರೀಡಾ ಆಡಳಿತಗಾರರನ್ನೊಳಗೊಂಡ ಕಾವಲುಪಡೆ ರಚಿಸಿ, ಎಲ್ಲ ಆಟಗಾರರು ಸಂಸ್ಥೆಗಳ ಸಮಸ್ಯೆ ಆಲಿಸಿ, ಸ್ಪಂದಿಸಬೇಕು. ಇಲ್ಲವಾದರೆ ಈ ಪರಿಸ್ಥಿತಿ ಬದಲಾಗದು’ ಎನ್ನುತ್ತಾರೆ ಅವರು.

ನಾಯಕ ಗುತ್ತಿಗೆ ಕಾರ್ಮಿಕ!
‘ಅಸ್ಸಾಂನ ಗುವಾಹಟಿಯಲ್ಲಿ ನಡೆದ ದಕ್ಷಿಣ ಏಷ್ಯಾ ಕೊಕ್ಕೊ ಟೂರ್ನಿಯಲ್ಲಿ ಭಾರತ ತಂಡದ ಉಪ ನಾಯಕನಾಗಿದ್ದೆ. ಆದರೆ, ಶಿವಮೊಗ್ಗ ಹಾಲು ಒಕ್ಕೂಟದಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದೇನೆ. ಕೆಲಸ ಮಾಡಿದ ದಿನಕ್ಕೆ ₹150 ಕೂಲಿ ಸಿಗುತ್ತದೆ. ಇದುವರೆಗೆ ಸರ್ಕಾರದ ಯಾವ ಸೌಕರ್ಯವೂ ನನಗೆ ಸಿಕ್ಕಿಲ್ಲ. ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ನನ್ನ ಸ್ಥಿತಿಯೇ ಹೀಗಾದರೆ ಉಳಿದ ಆಟಗಾರರ ಸ್ಥಿತಿ ಹೇಗಿರುತ್ತದೆ ಎಂದು ಊಹಿಸಿ’ ಎನ್ನುತ್ತಾರೆ ಕರ್ನಾಟಕದ ತಂಡದ ನಾಯಕ ಮುನೀರ್ ಪಾಷಾ.

‘ಟೂರ್ನಿಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಪ್ರವಾಸ ಭತ್ಯೆ ನೀಡುತ್ತಾರೆ. ಇದು ಬಿಟ್ಟು ಯಾವುದೇ ತೆರನಾದ ನೆರವು ನಮಗೆ ಇಲ್ಲ. ನನ್ನನ್ನೇ ಅವಲಂಬಿಸಿದ ಕುಟುಂಬವಿದೆ. ಬಿ.ಎ ಅಂತಿಮ ವರ್ಷದಲ್ಲಿ ಕಲಿಯುತ್ತಿದ್ದೇನೆ. ಈಗಾಗಲೇ 26 ವರ್ಷ ವಯಸ್ಸು ಮುಗಿಯುತ್ತಾ ಬಂದಿದೆ. ಒಂದು ನೌಕರಿ ಸಿಕ್ಕರೆ ಆಟದ ಜೊತೆಗೆ ಕುಟುಂಬಕ್ಕೆ ನೆರವಾಗಬಹುದು. ಇಲ್ಲವಾದರೆ ಆಟದಲ್ಲಿ ಮುಂದುವರಿಯುವುದು ಕಷ್ಟ’ ಎನ್ನುತ್ತಾರೆ ಅವರು.

ಜನರ ಸ್ಪಂದನೆ ಇಲ್ಲ..
ಕಲಬುರ್ಗಿಯಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ವಲಯ ಅಂತರರಾಜ್ಯ ಕೊಕ್ಕೊ ನಡೆಯಿತು. ಟೂರ್ನಿಯಲ್ಲಿ ಕೋಚ್‌ ಹಾಗೂ ರೆಫರಿಗಳಾಗಿದ್ದ ತವರಿನ ಕ್ರೀಡಾ ಅಧಿಕಾರಿಗಳೇ ಆಟದ ಮೈದಾನವನ್ನು ಸಿದ್ಧಪಡಿಸುವುದರ ಜೊತೆಗೆ ಪ್ರವಾಸಿ ತಂಡಗಳಿಗೆ ನೆರವಾದರು. ರೋಚಕವಾಗಿದ್ದ ಫೈನಲ್‌ ಪಂದ್ಯದಲ್ಲಿ ಮಾತ್ರ ಬೆರಳೆಣಿಕೆಯಷ್ಟು ಜನರು ಮಾತ್ರ ಪಾಲ್ಗೊಂಡಿದ್ದರು. ‘ಹೈದರಾಬಾದ್‌–ಕರ್ನಾಟಕ ಭಾಗದಲ್ಲಿ ಕೊಕ್ಕೊ ಬೆಳೆಸುವ ಗುರಿಯೊಂದಿಗೆ ಟೂರ್ನಿ ಆಯೋಜಿಸಲಾಗಿತ್ತು. ಆದರೆ, ಜನರು ನಿರೀಕ್ಷಿತ ಪ್ರಮಾಣದಲ್ಲಿ ಆಟ ನೋಡಲು ಬರಲಿಲ್ಲ. ಅಂದಮಾತ್ರಕ್ಕೆ ನಾವು ಈ ಪ್ರಯತ್ನ ನಿಲ್ಲಿಸುವುದಿಲ್ಲ. ಇದನ್ನು ಮುಂದುವರಿಸುತ್ತೇವೆ’ ಎಂದು ಜಿಲ್ಲಾ ಕೊಕ್ಕೊ ಸಂಸ್ಥೆಯ ಪೋಷಕ ಶಶೀಲ್‌ ನಮೋಶಿ ಹೇಳುತ್ತಾರೆ.

ಕುರುಬೂರು ಬಾಲೆಯರ ಮೇಲುಗೈ
ರಾಜ್ಯ ಕೊಕ್ಕೊ ತಂಡದಲ್ಲಿ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಕುರುಬೂರಿನ ಎಂಟು ಹೆಣ್ಣು ಮಕ್ಕಳು ಇದ್ದಾರೆ. ತಂಡದ ನಾಯಕಿಯಾದ ಕೆ.ಎಸ್‌. ಮೇಘಾ ಹಾಗೂ ವೀಣಾ ಭಾರತದ ವಾಯುಪಡೆಯ ತಂಡವನ್ನು ಪ್ರತಿನಿಧಿಸುತ್ತಿದ್ದು, ಪ್ರತಿ ತಿಂಗಳು ₹25 ಸಾವಿರ ಪ್ರೋತ್ಸಾಹಧನ ಪಡೆಯುತ್ತಿದ್ದಾರೆ. ಉಳಿದಂತೆ ಸಿಂಧು, ಸಹನಾ, ಸುಷ್ಮಾ, ಲತಾ, ಜಯಶ್ರೀ ಹಾಗೂ ಪಲ್ಲವಿ ರಾಜ್ಯ ತಂಡ ಪ್ರತಿನಿಧಿಸುತ್ತಿದ್ದಾರೆ. ಆದರೆ ಇವರಿಗೆ ಯಾವುದೇ ನೆರವೂ ಇಲ್ಲ.

‘ಶಾಲೆ ಹಾಗೂ ಕಾಲೇಜುಗಳೂ ಈ ಆಟಗಾರ್ತಿಯರು ಟೂರ್ನಿ ಆಡಲು ಹೋಗುತ್ತೇವೆ ಎಂದರೆ ಒಪ್ಪುತ್ತಿಲ್ಲ. ಇದು ನಮ್ಮಲ್ಲಿ ಕ್ರೀಡೆಗೆ ನೀಡುವ ಪ್ರೋತ್ಸಾಹ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರಾಜ್ಯ ಮಹಿಳಾ ಕೊಕ್ಕೊ ತಂಡದ ಕೋಚ್‌ ಎಚ್‌.ಆರ್‌. ಪಾಲಾಕ್ಷ.

‘ವರ್ಷಕ್ಕೆ ಒಮ್ಮೆ ಯಾರೋ ಒಬ್ಬರಿಗೆ ಕ್ರೀಡಾ ರತ್ನ ಪ್ರಶಸ್ತಿ ನೀಡುತ್ತಾರೆ. ಒಂದು ಪುಟ್ಟ ಗ್ರಾಮದ ಎಂಟು ಆಟಗಾರ್ತಿಯರು ರಾಜ್ಯ ತಂಡದಲ್ಲಿದ್ದಾರೆ. ಅದರಲ್ಲೂ ಮೇಘಾ ಹಾಗೂ ವೀಣಾ ರಾಷ್ಟ್ರೀಯ ತಂಡದಲ್ಲಿ ಆಡಿದ್ದಾರೆ. ಆಟಗಾರರಿಗೆ ಒಂದು ವಿಮಾ ವ್ಯವಸ್ಥೆಯೂ ಇಲ್ಲ. ಆಟಗಾರರಿಗೆ ಕನಿಷ್ಠ ಶೂ ಸಹ ಇಲ್ಲ’ ಇದು ಇಲ್ಲಿನ ಸ್ಥಿತಿ ಎಂದು ನುಡಿಯುತ್ತಾರೆ ಅವರು.

‘ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೊಕ್ಕೊ ಕೋಚ್‌ಗಳೇ ಇಲ್ಲ. ಈಚೆಗೆ ಎನ್‌ಐಎಸ್‌ ಮುಗಿಸಿ ಬಂದ ಕೋಚ್‌ ಸಿ.ಎ. ಮನೋಹರ್‌ ಅವರು ರಾಜ್ಯ ತಂಡವನ್ನು ಮುನ್ನಡೆಸುತ್ತಿದ್ದಾರೆ. ಬದುಕು ನಡೆಸಲು ಅವರು ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT