ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ‍್ಯಾಲಿಗೆ ಹರಿಯಿತು ಕೋಟಿ ಕಾಂಚಾಣ

Last Updated 11 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

‘ಮೋಟಾರ್ ಕಾರು ರ‍್ಯಾಲಿ ದುಬಾರಿ ಕ್ರೀಡೆ! ಇದರಲ್ಲಿ ಉಳ್ಳವರಿಗೆ ಮಾತ್ರ ಭಾಗವಹಿಸಲು ಸಾಧ್ಯ ಮತ್ತು ಪ್ರಾಯೋಜಕರ ನೆರವಿನಿಂದಷ್ಟೇ ಸಂಘಟಿಸಲು ಸಾಧ್ಯ’ ಎಂದು ರ‍್ಯಾಲಿಪಟುಗಳು ಹೇಳುವ ಮಾತು ಒಪ್ಪಲೇಬೇಕು.

ಚಿಕ್ಕಮಗಳೂರ ಪ್ರದೇಶದಲ್ಲಿ ಪ್ರತಿ ವರ್ಷ ನಡೆಯುವ ರಾಷ್ಟ್ರಮತ್ತು ಅಂತರರಾಷ್ಟ್ರೀಯ ಮಟ್ಟದ ಮೋಟಾರ್‌ ಕಾರು ರ‍್ಯಾಲಿಯಲ್ಲಿ ಕೋಟ್ಯಂತರ ಹಣ ನೀರಿನಂತೆ ಖರ್ಚಾಗುತ್ತದೆ. ಇತ್ತೀಚೆಗೆ ಮೂರು ದಿನಗಳ ಕಾಲ ನಡೆದ ಏಷ್ಯಾ ಪೆಸಿಫಿಕ್‌, ಐಆರ್‌ಸಿ ಹಾಗೂ ಐಎನ್‌ಆರ್‌ಸಿ ರ‍್ಯಾಲಿಗೆ ಕೋಟಿಗೂ ಮೀರಿ ಹಣ ವೆಚ್ಚವಾಗಿದೆ! ಅಧಿಕೃತ ಮೂಲದ ಪ್ರಕಾರ ಸುಮಾರು ₹80 ಲಕ್ಷ ಹಣವನ್ನು ಕಾಫಿ ಡೇ ಗ್ಲೋಬಲ್‌ ಕಂಪನಿ ಭರಿಸಿದರೆ, ಸುಮಾರು ₹50 ಲಕ್ಷ ಹಣವನ್ನು ಚಿಕ್ಕಮಗಳೂರು ಮೋಟಾರ್‌ ಸ್ಪೋರ್ಟ್ಸ್‌ ಕ್ಲಬ್‌ ಭರಿಸಿದೆ.

2003, 2004ರಲ್ಲಿ ನಡೆದ ಎಪಿಆರ್‌ಸಿ ರ‍್ಯಾಲಿಗಳು ಅಷ್ಟಾಗಿ ಯಶ ಕಂಡಿರಲಿಲ್ಲ. ಇದರಿಂದ ಎಪಿಆರ್‌ಸಿಯಂತಹ ದೊಡ್ಡ ರ್‍ಯಾಲಿಗೆ ಆತಿಥ್ಯವಹಿಸುವ ಅವಕಾಶ ಭಾರತಕ್ಕೆ ಸಿಕ್ಕಿರಲಿಲ್ಲ. 2008–2009ರಲ್ಲಿ ದೇಶಕ್ಕೆ ಮತ್ತೊಮ್ಮೆ ಎಪಿಆರ್‌ಸಿ ರ್‍ಯಾಲಿಗೆ ಆತಿಥ್ಯ ವಹಿಸುವ ಅವಕಾಶ ಒದಗಿಬಂದರೂ ರ‍್ಯಾಲಿ ನಡೆಸಲು ಆಯ್ಕೆಯಾಗಿದ್ದ ಸ್ಥಳ ಬೆಂಗಳೂರಿಗೆ ಭೇಟಿ ನೀಡಿದ್ದ ಎಫ್‌ಐಎ ವೀಕ್ಷಕರು ಟ್ರ್ಯಾಕ್‌ ಚಾಲಕರಿಗೆ ಸುರಕ್ಷಿತವಾಗಿಲ್ಲ ಎನ್ನುವ ವರದಿ ನೀಡಿದ್ದರು. ಇದರಿಂದಾಗಿ ನಮ್ಮ ದೇಶಕ್ಕೆ ಎಪಿಆರ್‌ಸಿ ಆತಿಥ್ಯ ವಹಿಸುವ ಅವಕಾಶ ಮರೀಚಿಕೆಯಾಗಿತ್ತು.

ಕಳೆದ ವರ್ಷ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಎಪಿಆರ್‌ಸಿ ಅರ್ಹತಾ ಸುತ್ತಿನ ಸ್ಪರ್ಧೆ ಎಂದೇ ಪರಿಗಣಿಸಿದ್ದ ಏಷ್ಯಾ ಕಪ್‌ ರ‍್ಯಾಲಿ ಯಶಕಂಡಿತು. ಇದರ ಫಲದಿಂದಾಗಿ ಚೊಚ್ಚಲ ಬಾರಿಗೆ ಚಿಕ್ಕಮಗಳೂರು ಜಿಲ್ಲೆ ಎಪಿಆರ್‌ಸಿ ರ‍್ಯಾಲಿ ಸಂಘಟಿಸಿ ಇತಿಹಾಸ ನಿರ್ಮಿಸಿತು. ನಾವು ಸಂಘಟಿಸುವ ರ‍್ಯಾಲಿಗೆ ಉದ್ಯಮಿ ಸಿದ್ಧಾರ್ಥ ಹೆಗ್ಡೆ ಅವರಂತಹ ಉದಾರಿ ಪ್ರಾಯೋಜಕರ ಬೆಂಬಲ ಮತ್ತು ಉತ್ಸಾಹಿ ಪದಾಧಿಕಾರಿಗಳಿರುವ ಚಿಕ್ಕಮಗಳೂರು ಮೋಟಾರ್‌ ಸ್ಪೋರ್ಟ್ಸ್‌ ಕ್ಲಬ್‌ ಕ್ರಿಯಾಶೀಲ ಚಟುವಟಿಕೆ ಎಫ್‌ಐಎ ಮತ್ತು ಎಫ್‌ಎಂಎಸ್‌ಸಿಐ 2017ರ (ನವೆಂಬರ್‌ 24, 25 ಹಾಗೂ 26)ಸಾಲಿನ ಅಂತಿಮ ಸುತ್ತಿನ ಸ್ಪರ್ಧೆ ನಡೆಸಲು ಅವಕಾಶ ಕೊಟ್ಟಿದೆ ಎಂದು ಈ ಸಾಲಿನ ರ‍್ಯಾಲಿ ಅಧ್ಯಕ್ಷರಾಗಿದ್ದ ಫಾರೂಕ್‌ ಅಹಮದ್‌ ಹೆಮ್ಮೆಪಡುತ್ತಾರೆ.

ಪ್ರಾಯೋಜಕರಿಗೆ ಭರವಿಲ್ಲ
ಇಂತಹ ಕ್ರೀಡೆಗಳಿಗೆ ಸರ್ಕಾರದಿಂದ ಹೆಚ್ಚಿನ ಅನುದಾನದ ನೆರವು ಸಿಗುತ್ತಿಲ್ಲ. ಆಟೋಮೊಬೈಲ್‌ ಕಂಪನಿಗಳು, ಕಾರ್ಪೋರೇಟ್‌ ಕಂಪನಿಗಳ ಪ್ರಾಯೋಜಕತ್ವದ ಮೇಲೆ ರ್‍ಯಾಲಿಗಳ ಭವಿಷ್ಯ ನಿಂತಿದೆ. 1995ರಿಂದಲೂ ನಮಗೆ ಕಾಫಿ ಡೇ ಕಂಪನಿಯ ನಿರಂತರ ಪ್ರಾಯೋಜಕತ್ವ ಸಿಗುತ್ತಿದೆ. ಜತೆಗೆ ಎಂಆರ್‌ಎಫ್‌, ಹಿಂದೂಸ್ತಾನ್‌ ಪೆಟ್ರೋಲಿಯಂ ಲಿಮಿಟೆಡ್‌, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಫೋಗ್ಸ್‌ ವ್ಯಾಗನ್‌ ಆಟೋ ಮೊಬೈಲ್‌ ಸಂಸ್ಥೆ ಪ್ರಮುಖ ಪ್ರಾಯೋಜಕರಾಗಿದ್ದಾರೆ. ಮುಂದಿನ ರ‍್ಯಾಲಿಗೆ ಇನ್ನಷ್ಟು ಕಂಪನಿಗಳು ಪ್ರಾಯೋಜಕತ್ವ ವಹಿಸಲು ಆಸಕ್ತಿ ತೋರಿವೆ ಎನ್ನುತ್ತಾರೆ ಅವರು.

ರ‍್ಯಾಲಿ ಮಾರ್ಗ
ಒಟ್ಟು 519.91 ಕಿ.ಮೀ. ದೂರದ ಕಾಫಿ ಡೇ ಎಪಿಆರ್‌ಸಿ ರ‍್ಯಾಲಿ ಬಹುತೇಕ ಕಾಫಿ ಎಸ್ಟೇಟ್‌ಗಳ ಒಳಗೆ ಸಾಗುತ್ತದೆ. ಮೂಡಿಗೆರೆ ಸಮೀಪದ ಚಟ್ನಹಳ್ಳಿ, ಕಮರಗೋಡು, ಚಂದ್ರಾಪುರ, ಜಾಗೀರಮನೆ, ಮೂಡಸಸಿ ತೋಟಗಳಲ್ಲಿ ರ‍್ಯಾಲಿಗಾಗಿಯೇ ನಿರ್ಮಿಸಿರುವ ಟ್ರ್ಯಾಕ್‌ಗಳು ಚಾಂಪಿಯನ್‌ ಚಾಲಕರಿಗೂ ಅಗ್ನಿ ಪರೀಕ್ಷೆ ಒಡ್ಡುತ್ತವೆ. ಎಪಿಆರ್‌ಸಿ ಚಾಂಪಿಯನ್‌ ಚಾಲಕ ದೆಹಲಿಯ ಗೌರವ್‌ ಗಿಲ್‌ ಕಾಫಿ ಎಸ್ಟೇಟ್‌ ಒಳಗೆ ಸಾಗುವ ಟ್ರ್ಯಾಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಲೇ, ಈ ಟ್ರ್ಯಾಕಿನಲ್ಲಿ ಎದುರಾಗುವ ಒಂದು ಸಾವಿರಕ್ಕೂ ಹೆಚ್ಚಿನ ತಿರುವುಗಳು, ಇಕ್ಕಟ್ಟಾದ ಮಾರ್ಗಗಳು ಎಂತಹವರಿಗೂ ದೊಡ್ಡ ಸವಾಲೇ ಎನ್ನುತ್ತಾರೆ.

ತಮ್ಮದೇ ಒಡೆತನದ ಕಾಫಿ ತೋಟಗಳಲ್ಲಿ ಕಾರು ರ‍್ಯಾಲಿ ಮಾರ್ಗ ನಿರ್ಮಿಸಲು ಆಸಕ್ತಿ ತೋರಿರುವ ಸಿದ್ಧಾರ್ಥ ಹೆಗ್ಡೆ ಅವರು ಪ್ರತಿ ವರ್ಷವೂ ಟ್ರ್ಯಾಕ್‌ ಉತ್ತಮಪಡಿಸಲು ಮತ್ತು ಟ್ರ್ಯಾಕ್‌ ನಿರ್ವಹಣೆಗೆ ನೆರವು ನೀಡುತ್ತಿದ್ದಾರೆ. ಹೆಚ್ಚು ಕಾಫಿಗಿಡ ಮತ್ತು ಮರಗಳನ್ನು ನಾಶಪಡಿಸದೆ ಖಾಲಿ ಜಾಗಗಳನ್ನು ಬಳಸಿಕೊಂಡೇ ಟ್ರ್ಯಾಕ್‌ ನಿರ್ಮಿಸಲಾಗಿದೆ. ಕಾರು ರ‍್ಯಾಲಿಗೂ ಉಪಯೋಗವಾಗುವ ಜತೆಗೆ ತೋಟದ ಮಾಲೀಕರಿಗೂ ಗೊಬ್ಬರ, ಔಷಧ, ಕಾಫಿ ಹಣ್ಣು ಸಾಗಣೆ ಮಾಡಲು ರ‍್ಯಾಲಿ ರಸ್ತೆಯಿಂದ ಅನುಕೂಲವಾಗಲಿದೆ. ಅಕ್ಕಪಕ್ಕದ ತೋಟದ ಮಾಲೀಕರು ರ್‍ಯಾಲಿ ಮಾರ್ಗಕ್ಕೆ ಸಂಪೂರ್ಣ ನೆರವು ನೀಡುತ್ತಿದ್ದಾರೆ. ಮುಂಬರುವ ರ್‍ಯಾಲಿಗೆ ಇನ್ನು 50 ಕಿ.ಮೀ. ಹೊಸ ರಸ್ತೆ ನಿರ್ಮಿಸುವ ಆಲೋಚನೆ ಇದೆ. ಹೊಸ ಟ್ರ್ಯಾಕ್‌ ನಿರ್ಮಿಸಿ, ಈಗಿನ ಮಾರ್ಗದಲ್ಲಿ ನಡೆಯುತ್ತಿರುವ ‘ರಿವರ್ಸ್‌ ಆರ್ಡರ್‌’ ರ್‍ಯಾಲಿ ಕೊನೆಗಾಣಿಸುವ ಚಿಂತನೆ ಇದೆ.  ಎನ್ನುತ್ತಾರೆ ರ್‍ಯಾಲಿ ಸಂಘಟಕರು.

ಸ್ವಯಂಸೇವಕರೇ ಬಲ
ಕಾಫಿ ಡೇ ರ‍್ಯಾಲಿ ವೇಳಾಪಟ್ಟಿ ನಿಗದಿಯಾಗುತ್ತಿದ್ದಂತೆ ನಮ್ಮ ಸಂಪರ್ಕದಲ್ಲಿರುವ ರಾಷ್ಟ್ರದೆಲ್ಲೆಡೆಯ ಮೋಟಾರ್‌ ಸ್ಪೋರ್ಟ್ಸ್‌ ಕ್ಲಬ್‌ಗಳಿಗೆ ಇ–ಮೇಲ್‌ ಸಂದೇಶ ರವಾನಿಸಲಾಗುತ್ತದೆ. ಬೆಂಗಳೂರು, ಮಂಗಳೂರು, ದೆಹಲಿ, ನಾಸಿಕ್‌, ಕೊಯಮತ್ತೂರು, ಕೇರಳ, ಪುಣೆಯಿಂದ ‘ಸ್ವಯಂ ಸೇವಕರು’ ರ‍್ಯಾಲಿಯಲ್ಲಿ ತಮಗೆ ವಹಿಸುವ ಜವಾಬ್ದಾರಿ ನಿಭಾಯಿಸಲು ಬರುತ್ತಾರೆ. ಮಾರ್ಷಲ್ಸ್‌, ರೇಡಿಯೋ ಕಮ್ಯುನಿಕೇಷನ್ಸ್‌ ಮಾರ್ಷಲ್ಸ್‌ ಸೇರಿದಂತೆ ಸುಮಾರು 425 ರಿಂದ 450 ಮಂದಿ ನೇರವಾಗಿ ಜವಾಬ್ದಾರಿ ನಿಭಾಯಿಸುತ್ತಾರೆ.

ವಾರಾಂತ್ಯದ ಮೋಜು
ವಾರಂತ್ಯದಲ್ಲಿ ರ‍್ಯಾಲಿ ನಡೆಯುವುದರಿಂದ ರ್‍ಯಾಲಿ ನೋಡಿಕೊಂಡು ರಜೆಯ ಮೋಜು ಅನುಭವಿಸಲು ಬೆಂಗಳೂರು, ಕೊಡಗು, ಮೈಸೂರು, ದಕ್ಷಿಣ ಕನ್ನಡ ಜಿಲ್ಲೆಯಿಂದ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಐಆರ್‌ಸಿ, ಐಎನ್‌ ಆರ್‌ಸಿ ರ‍್ಯಾಲಿಗಳಲ್ಲಿ ಭಾಗವಹಿಸುವ ಸಹ ಚಾಲಕರಲ್ಲಿ ಬಹುತೇಕರು ಸಾಫ್ಟ್‌ವೇಟ್‌ ಮತ್ತು ಕಾರ್ಪೋರೇಟ್‌ ಕಂಪನಿ ಉದ್ಯೋಗಿಗಳು. ಬಹುತೇಕ ಎಲ್ಲರೂ ವಾರಾಂತ್ಯ ರಜೆ ಸ್ಮರಣೀಯಗೊಳಿಸಲು ಚಿಕ್ಕಮಗಳೂರಿನ ರ‍್ಯಾಲಿಗೆ ತಪ್ಪದೆ ಬರುತ್ತಾರೆ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT