ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲುಗಳ ನಡುವೆ ಉಲ್ಲಾಸ್ ಸಾಧನೆ

Last Updated 11 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

‘ಹುಟ್ಟಿನಿಂದಲೇ ಪುತ್ರನಿಗೆ ಶ್ರವಣ ದೋಷವಿದೆ. ಆದರೆ, ಎಲ್ಲರಂತೆ ಜೀವನ ಸಾಗಿಸಲು ಹಾಗೂ ಅಂದುಕೊಂಡ ಗುರಿ ಮುಟ್ಟಲು ಈ ಸಮಸ್ಯೆ ಯಾವತ್ತೂ ಅಡ್ಡಿ ಆಗಿಲ್ಲ. ಅದನ್ನು ದೌರ್ಬಲ್ಯ ಎಂದು ಯಾವತ್ತೂ ಭಾವಿಸಿಲ್ಲ. ಏನಾದರೂ ಸಾಧನೆ ಮಾಡಲು ಆತ ಆಯ್ಕೆ ಮಾಡಿಕೊಂಡ ಕ್ಷೇತ್ರ ಟೇಬಲ್‌ ಟೆನಿಸ್‌’

–ವಿಶ್ವ ಕಿವುಡರ ಟೇಬಲ್‌ ಟೆನಿಸ್‌ ಅಂಗಳದಲ್ಲಿ ಮಿಂಚುತ್ತಿರುವ ಉಲ್ಲಾಸ್‌ ನಾಯಕ್‌ ಅವರ ತಾಯಿ ಪ್ರಫುಲ್ಲಾ ಅವರ ಮಮತೆಯ ನುಡಿಗಳಿವು.
ಮಂಗಳೂರು ಮೂಲದ ಹಾಗೂ ಮೈಸೂರಿನಲ್ಲಿ ನೆಲೆಸಿರುವ ಉಲ್ಲಾಸ್‌ ಅವರ ಆ ಭರವಸೆ, ವಿಶ್ವಾಸ, ಇಚ್ಛಾ ಶಕ್ತಿಗೆ ಶಹಬ್ಬಾಸ್ ಹೇಳಲೇಬೇಕು. ಟೇಬಲ್‌ ಟೆನಿಸ್‌ನಲ್ಲಿ ಶಾಲಾ ಟೂರ್ನಿಗಳಿಂದ ಹಿಡಿದು ವಿಶ್ವಮಟ್ಟದ ಟೂರ್ನಿಗಳವರೆಗೆ ಪಾಲ್ಗೊಂಡು ಪದಕ ಜಯಿಸಿದ್ದಾರೆ. ಸ್ಫೂರ್ತಿಯ ಚಿಲುಮೆಯಾಗಿ ಹೊರಹೊಮ್ಮಿದ್ದಾರೆ.

ಟರ್ಕಿಯ ಸ್ಯಾಮ್ಸನ್‌ನಲ್ಲಿ ಈಚೆಗೆ ನಡೆದ ವಿಶ್ವ ಕಿವುಡರ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿನ ಡಬಲ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಪಶ್ಚಿಮ ಬಂಗಾಳದ ತನುಜ್ ಮುಖರ್ಜಿ ಜೊತೆಗೂಡಿ ಆಡಿ ಈ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲ; ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆದ್ದಿದ್ದಾರೆ. ಸಮರ್ಥರೊಂದಿಗೆ ಆಡಿ ಯಶಸ್ಸು ಕಂಡಿರುವ ಅವರು ಅಖಿಲ ಭಾರತ ವಿಶ್ವವಿದ್ಯಾಲಯ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಮೈಸೂರು ವಿ.ವಿ ಪ್ರತಿನಿಧಿಸುತ್ತಿದ್ದಾರೆ. ಕ್ರೀಡಾಪಟುವಾಗಬೇಕು ಎಂಬ ಅವರ ಕನಸಿಗೆ, ಆ ಛಲಕ್ಕೆ ಶ್ರವಣ ದೋಷ ಯಾವತ್ತೂ ಅಡ್ಡಿಯಾಗಿಲ್ಲ. ಶ್ರವಣದೋಷ ಕಾರಣ ಸರಿಯಾಗಿ ಮಾತನಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ.

25 ವರ್ಷ ವಯಸ್ಸಿನ ಉಲ್ಲಾಸ್‌ ಮೈಸೂರು ವಿಶ್ವವಿದ್ಯಾನಿಲಯದ ಸ್ಕೂಲ್‌ ಆಫ್‌ ಡಿಸೈನ್‌ನಲ್ಲಿ ಐದನೇ ಸೆಮಿಸ್ಟರ್‌ನಲ್ಲಿ (ಬಿ.ಆರ್ಕ್‌) ಓದುತ್ತಿದ್ದಾರೆ. ತಂದೆ ಉದಯಶಂಕರ್‌ ಅವರು ಉದ್ಯೋಗ ನಿಮಿತ್ತ ವಿಜಯವಾಡದಲ್ಲಿ ಇದ್ದರು. ಆದರೆ, ಪುತ್ರನ ಕ್ರೀಡಾ ಒಲವಿಗೆ ಪ್ರೋತ್ಸಾಹ ನೀಡಲು ಮೈಸೂರಿಗೆ ಬಂದು ನೆಲೆಸಿದ್ದಾರೆ.

‘ಓದಿಗೆ ತೊಂದರೆ ಆಗುತ್ತೆ ಎಂದು ನಾವೇ ಅವನನ್ನು ಕ್ರೀಡೆಯಿಂದ ಬಿಡಿಸಲು ಮುಂದಾದೆವು. ಆದರೆ, ಆತ ಅದಕ್ಕೆ ಒಪ್ಪುತ್ತಿಲ್ಲ. ಈಗಂತೂ ಟೇಬಲ್ ಟೆನಿಸ್‌ ಆತನ ಉಸಿರಾಗಿದೆ. ಅದಕ್ಕಾಗಿ ಅವನು ಯಾವುದೇ ಸವಾಲು ಎದುರಿಸಲು ಸಿದ್ಧನಿದ್ದೇನೆ’ ಎಂದು ಉಲ್ಲಾಸ್‌ ತಾಯಿ ಪ್ರಫುಲ್ಲಾ ಹೇಳುತ್ತಾರೆ.

ಹೋದ ವರ್ಷ ನೆಲ್ಲೂರಿನಲ್ಲಿ ನಡೆದ ಅಂತರ ವಿಶ್ವವಿದ್ಯಾಲಯ ದಕ್ಷಿಣ ವಲಯ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಮೈಸೂರು ವಿ.ವಿ ಕ್ವಾರ್ಟರ್‌ ಫೈನಲ್ ಪ್ರವೇಶಿಸಿತ್ತು. ಆ ತಂಡದಲ್ಲಿ ಉಲ್ಲಾಸ್‌ ಪ್ರಮುಖ ಭೂಮಿಕೆ ನಿಭಾಯಿಸಿದ್ದರು. ಈ ಬಾರಿಯ ಟೂರ್ನಿ ಚೆನ್ನೈನಲ್ಲಿ ಡಿಸೆಂಬರ್‌ 23ರಂದು ಆರಂಭವಾಗಲಿದೆ. ಆ ತಂಡದಲ್ಲೂ ಸ್ಥಾನ ಪಡೆದಿದ್ದಾರೆ.

2006ರಲ್ಲಿ ಪಾಕಿಸ್ತಾನದಲ್ಲಿ ನಡೆದ ಸೌಹಾರ್ದ ಟೇಬಲ್ ಟೆನಿಸ್‌ ಟೂರ್ನಿಯಲ್ಲಿ ಪಾಲ್ಗೊಂಡು ಚಿನ್ನದ ಪದಕ ಗೆದ್ದಿದ್ದಾರೆ. 2007ರಲ್ಲಿ ಮಿಜೋರಾಂನಲ್ಲಿ ನಡೆದ ರಾಷ್ಟ್ರೀಯ ಶಾಲಾ ಟಿಟಿ ತಂಡ ವಿಭಾಗದಲ್ಲಿ ಪದಕ ಜಯಿಸಿದ್ದಾರೆ. 2017ರಲ್ಲಿ ಟರ್ಕಿಯಲ್ಲಿ ನಡೆಯಲಿರುವ ಕಿವುಡರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಗುರಿ ಹೊಂದಿದ್ದಾರೆ. ಅದಕ್ಕಾಗಿ ವಿಶೇಷ ತರಬೇತಿ ಪಡೆಯಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT