ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 12–12–1966

50 ವರ್ಷಗಳ ಹಿಂದೆ
Last Updated 11 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಪುರಿ ಶ್ರೀಗಳ ದೇಹಸ್ಥಿತಿ ಮತ್ತಷ್ಟು ವಿಷಮ: ನಿರ್ಧಾರ ಅಚಲ
ಪುರಿ, ಡಿ. 11– ಪುರಿ ಶ್ರೀ ಶಂಕರಾಚಾರ್ಯ ಅವರ ದೇಹಸ್ಥಿತಿ ಮತ್ತಷ್ಟು ವಿಷಮಿಸಿದೆ. ಕೇಂದ್ರ ಸರ್ಕಾರವು ಗೋಹತ್ಯೆಯನ್ನು ನಿಷೇಧಿಸುವವರೆಗೆ ಉಪವಾಸವನ್ನು ಮುಂದುವರಿಸುವುದಾಗಿ ಅವರು ಇಂದು ಪುನಃ ಸ್ಪಷ್ಟಪಡಿಸಿದರು.
 
ಉಪವಾಸದ 20ನೇ ದಿನಕ್ಕೆ ಕಾಲಿರಿಸಿದ ಶ್ರೀಗಳವರನ್ನು ಇಂದು ಪರೀಕ್ಷಿಸಿದ ಆರೋಗ್ಯ ಸೇವಾ ವಿಭಾಗದ ಡೈರೆಕ್ಟರರು ಅವರ ದೇಹ ಸ್ಥಿತಿ ಬಹಳ ಕೆಟ್ಟಿದೆ ಎಂದು ತಿಳಿಸಿದ್ದಾರೆ. ಗಂಗಾ ಜಲವನ್ನು ಬಿಟ್ಟು ಬೇರೆ ಏನನ್ನೂ ಸೇವಿಸಲು ಶ್ರೀಗಳು ನಿರಾಕರಿಸಿದರು.
 
 
***
ದಕ್ಷಿಣ ಆಫ್ರಿಕಾಕ್ಕೆ ಶಸ್ತ್ರಾಸ್ತ್ರ ಸರಬರಾಜು ಆರೋಪ: ಅಮೆರಿಕದ ನಿರಾಕರಣೆ
ವಿಶ್ವಸಂಸ್ಥೆ, ಡಿ. 11– ದಕ್ಷಿಣ ಆಫ್ರಿಕದ ವರ್ಣಭೇದ ನೀತಿ ಅಸಮರ್ಥನೀಯ ಹಾಗೂ ಅಪಾಯಕಾರಿಯಾಗಿದೆ ಎಂದು ಅಮೆರಿಕ ನಿನ್ನೆ ಆರೋಪಿಸಿತಾದರೂ ಅದರ ವಿರುದ್ಧ ಆರ್ಥಿಕ ದಿಗ್ಬಂಧನ ವಿಧಿಸುವ ಹಕ್ಕನ್ನು ಕಾದಿರಿಸಿಕೊಂಡಿದೆ.
 
ತಮ್ಮ ರಾಷ್ಟ್ರ ದಕ್ಷಿಣ ಆಫ್ರಿಕಾಕ್ಕೆ ಶಸ್ತ್ರಾಸ್ತ್ರಗಳನ್ನು ರವಾನಿಸುತ್ತಿದೆ ಎಂಬ ಆರೋಪವನ್ನು ಅಮೆರಿಕದ ಪ್ರತಿನಿಧಿ ಜಾರ್ಜ್‌ ಕಿಲ್ಲಿಯನ್‌ ನಿನ್ನೆ ವಿಶೇಷ ರಾಜಕೀಯ ಸಮಿತಿಯ ಸಭೆಯಲ್ಲಿ ನಿರಾಕರಿಸಿದರು.
 
***
ಸಿಖ್ಖರಿಗೊಂದು ‘ಮಾತೃಭೂಮಿ?’
ಲೂಧಿಯಾನ, ಡಿ. 11– ಸಿಖ್ಖರೂ ಒಂದು ರಾಷ್ಟ್ರ. ಅವರು ಸಾಧ್ಯವಾದರೆ ಭಾರತದೊಳಗೇ ಅಥವಾ ಸಾಧ್ಯವಾಗದಿದ್ದಲ್ಲಿ ಭಾರತದ ಹೊರಗೆ ‘ರಾಷ್ಟ್ರೀಯ ಸ್ಥಾನಮಾನ’ವನ್ನು ಪಡೆಯಬೇಕು.
 
ಇದು ಇಂದು ಇಲ್ಲಿ ಮುಕ್ತಾಯಗೊಂಡ 17ನೆಯ ಅಖಿಲ ಭಾರತ ಅಕಾಲಿ ದಳದ (ತಾರಾ ಸಿಂಗರ ಪಂಗಡ) ಅಧಿವೇಶನದ ಪಲ್ಲವಿಯಾಗಿತ್ತು.
 
ಸಮ್ಮೇಳನದಲ್ಲಿ ಮಾತನಾಡಿದ ಅನೇಕ ನಾಯಕರು ಹೊಸ ‘ಛೋಟಾ’ ಪಂಜಾಬ್‌ ರಾಜ್ಯವು ರಾಷ್ಟ್ರೀಯ ಸ್ಥಾನಮಾನವನ್ನು ಪಡೆಯುವ ಸಿಖ್ಖರ ಆಕಾಂಕ್ಷೆಗಳನ್ನು ಈಡೇರಿಸಿಲ್ಲವೆಂದೂ, ‘ಸಿಖ್ಖರ ಮಾತೃಭೂಮಿ’ಯೊಂದರ ರಚನೆಯೇ ಮಾಸ್ಟರ್‌ ತಾರಾಸಿಂಗರ ಅನುಯಾಯಿಗಳ ಹೊಸ ದೃಷ್ಟಿ ಕೋನವಾಗಬೇಕೆಂದೂ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT