ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐಗೆ ಪೂರ್ಣಾವಧಿ ನಿರ್ದೇಶಕರ ನೇಮಕ ಮಾಡದ ಕ್ರಮ ಸರಿಯಲ್ಲ

ಸಂಪಾದಕೀಯ
Last Updated 11 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ದೇಶದ ಅತ್ಯಂತ ಪ್ರಮುಖ ಮತ್ತು ಶಕ್ತಿಶಾಲಿ ತನಿಖಾ ಸಂಸ್ಥೆಯಾದ ಸಿಬಿಐಗೆ ಈಗ ಪೂರ್ಣಾವಧಿ ನಿರ್ದೇಶಕರೇ ಇಲ್ಲ. ನಿರ್ದೇಶಕರಾಗಿದ್ದ ಅನಿಲ್‌ ಸಿನ್ಹಾ ನಿವೃತ್ತಿಯಾಗಿದ್ದು ಡಿ. 2ರಂದು. ಹೆಚ್ಚುವರಿ ನಿರ್ದೇಶಕ ರಾಕೇಶ್‌ ಆಸ್ತಾನಾ ಅಂದಿನಿಂದ  ಹಂಗಾಮಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೂರ್ಣಾವಧಿ ನಿರ್ದೇಶಕರನ್ನು ನೇಮಕ ಮಾಡದೇ ಇರುವುದು ಸಿಬಿಐ ಇತಿಹಾಸದಲ್ಲಿ ಇದು ಎರಡನೇ ಸಲ ಮತ್ತು 10 ವರ್ಷಗಳಲ್ಲಿ ಇದು ಮೊದಲನೇ ಸಲ. ಗುಜರಾತ್‌ ಕೇಡರ್‌ಗೆ ಸೇರಿದ ಆಸ್ತಾನಾ ಅವರನ್ನು ಈ ಜಾಗಕ್ಕೆ ತಂದು ಕೂರಿಸಿರುವ ವಿಧಾನ ಅನುಮಾನಗಳಿಗೆ ಕಾರಣವಾಗಿದೆ.
 
ನರೇಂದ್ರ ಮೋದಿಯವರ ಎನ್‌ಡಿಎ ಸರ್ಕಾರಕ್ಕೆ ಆಸ್ತಾನಾ ಮೇಲೆ ತುಂಬ ಒಲವು ಎಂಬುದು ಅನೇಕ ಸಂದರ್ಭಗಳಲ್ಲಿ ಸಾಬೀತಾಗಿರುವ ಕಾರಣ ಈ ಅನುಮಾನ ಹೆಚ್ಚುತ್ತಲೇ ಹೋಗುತ್ತದೆ. ಆಸ್ತಾನಾ ಅವರಿಗೆ ನಿರ್ದೇಶಕರಾಗುವ ಅರ್ಹತೆ ನಿಯಮಾವಳಿ ಪ್ರಕಾರ ಇನ್ನೂ ಬಂದಿಲ್ಲ. ಆ ಹುದ್ದೆಗೆ ಅರ್ಹರಾದ  ಆರು ಅಧಿಕಾರಿಗಳಲ್ಲಿ  ಅವರ ಹೆಸರು ಇಲ್ಲ. ಸೇವಾ ಹಿರಿತನ ಪರಿಗಣಿಸುವುದಾದರೆ ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿ ಆರ್‌.ಕೆ. ದತ್ತ ಹೆಸರು ಮೊದಲಿಗೆ ಬರಬೇಕು. ಅವರು ಆಸ್ತಾನಾಗಿಂತ ಮೇಲಿನ ಅಂದರೆ ವಿಶೇಷ ನಿರ್ದೇಶಕರ ಹುದ್ದೆಯಲ್ಲಿದ್ದರು. ಆದರೆ ಸಿನ್ಹಾ ನಿವೃತ್ತಿಗೆ ಎರಡೇ ದಿನ ಮೊದಲು ತರಾತುರಿಯಲ್ಲಿ ಕೇಂದ್ರ ಗೃಹ ಖಾತೆಯಲ್ಲಿ ಎರಡನೇ ವಿಶೇಷ ಕಾರ್ಯದರ್ಶಿ ಹುದ್ದೆ ಸೃಷ್ಟಿಸಿ ದತ್ತಾ ಅವರನ್ನು ವರ್ಗಾವಣೆ ಮಾಡಲಾಯಿತು.  ಸಿನ್ಹಾ ಮತ್ತು ದತ್ತ  ನಂತರದ ಸ್ಥಾನದಲ್ಲಿ ಇದ್ದ ಆಸ್ತಾನಾ ಅವರನ್ನು  ಹೆಚ್ಚುವರಿ ನಿರ್ದೇಶಕರನ್ನಾಗಿ  ಮಾಡಿ ನಿರ್ದೇಶಕರ ಹೊಣೆಯ ಉಸ್ತುವಾರಿ  ವಹಿಸಿಕೊಳ್ಳಲು  ಹಾದಿ ಸುಗಮಗೊಳಿಸಲಾಯಿತು.  
 
ಮಹತ್ವದ ಅನೇಕ ಪ್ರಕರಣಗಳನ್ನು ಸಿಬಿಐ ತನಿಖೆ ಮಾಡುತ್ತಿದೆ. ಕಲ್ಲಿದ್ದಲು ಹಂಚಿಕೆ ಮತ್ತು 2 ಜಿ ಹಗರಣದ ಕುರಿತ ತನಿಖೆ ದತ್ತ ಅವರ ವ್ಯಾಪ್ತಿಯ ಒಳಗಿತ್ತು. ಈ ಎರಡೂ ಪ್ರಕರಣಗಳ ತನಿಖೆಗೆ ಸಂಬಂಧಪಟ್ಟ ಯಾವುದೇ ಅಧಿಕಾರಿಯನ್ನು ವರ್ಗಾವಣೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿಯೇ ಹೇಳಿದೆ. ಆದರೆ, ‘ದತ್ತ ಈ ಪ್ರಕರಣದ ತನಿಖಾಧಿಕಾರಿ ಅಲ್ಲ; ಬರೀ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು’ ಎಂದು ಕೇಂದ್ರ ಸರ್ಕಾರ ವರ್ಗಾವಣೆಯನ್ನು ಸಮರ್ಥಿಸಿಕೊಳ್ಳುತ್ತಿದೆ. ಆಸ್ತಾನಾ ಅವರು ಆಗಸ್ಟಾ ವೆಸ್ಟ್‌ಲ್ಯಾಂಡ್‌ ಮತ್ತು ವಿಜಯ ಮಲ್ಯ ಪ್ರಕರಣ ನೋಡಿಕೊಳ್ಳುತ್ತಿದ್ದಾರೆ.  ಅವರ ಕೈಗೆ ಸಿಬಿಐಯನ್ನು ಒಪ್ಪಿಸಲು ಇಷ್ಟೆಲ್ಲ ಸರ್ಕಸ್‌ ಮಾಡುವುದು ಬೇರೆ ಅರ್ಥ ಕೊಡುತ್ತದೆ ಎಂಬುದನ್ನು ಕೇಂದ್ರ ಸರ್ಕಾರ ಅರಿತುಕೊಳ್ಳಬೇಕು.  
 
ಸಿಬಿಐ ನಿರ್ದೇಶಕರ ಅಧಿಕಾರಾವಧಿಯನ್ನು ಎರಡು ವರ್ಷ ಎಂದು ನಿಗದಿಪಡಿಸಲಾಗಿದೆ. ಅವರ ನಿವೃತ್ತಿಗೆ ಸಾಕಷ್ಟು ಮೊದಲೇ ಆಯ್ಕೆ ಪ್ರಕ್ರಿಯೆ ಆರಂಭವಾಗಬೇಕು. ಪ್ರಧಾನಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಇರುವ ಸಮಿತಿ ಅರ್ಹ ಅಭ್ಯರ್ಥಿಯನ್ನು ಹೆಸರಿಸಬೇಕು. ಇಷ್ಟೆಲ್ಲ ಬಿಗಿ ನಿಯಮ ಇದ್ದರೂ ಸರ್ಕಾರ ಇದುವರೆಗೂ ಸಮಿತಿಯ ಸಭೆಯನ್ನೇ ಕರೆದಿಲ್ಲ. ಲೋಕಸಭೆಯ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ವಿಳಂಬಕ್ಕೆ ಅಸಮಾಧಾನ ಸೂಚಿಸಿ ಪತ್ರ ಬರೆದಿದ್ದಾರೆ. ಈ ವಿಳಂಬ ಉದ್ದೇಶಪೂರ್ವಕ ಎಂದು ಕಾಮನ್‌ ಕಾಸ್‌ ಎಂಬ ಸ್ವಯಂ ಸೇವಾ ಸಂಸ್ಥೆ ಸುಪ್ರೀಂ ಕೋರ್ಟ್‌ಗೆ ದೂರು ಸಲ್ಲಿಸಿದೆ. ಈ ಬಗ್ಗೆ ಉತ್ತರಿಸುವಂತೆ ಸುಪ್ರೀಂ ಕೋರ್ಟ್ ಪೀಠ ಕಟುವಾಗಿ ಸೂಚಿಸಿದ ನಂತರ ಸರ್ಕಾರ ಸಭೆ ಕರೆಯುವ ಪ್ರಕ್ರಿಯೆಗೆ ಮುಂದಾಗಿದೆ. ಲೋಕಪಾಲರ ನೇಮಕ ಆಗಿಲ್ಲ, ಜಾರಿ ನಿರ್ದೇಶನಾಲಯದ ನಿರ್ದೇಶಕರ ಹುದ್ದೆಯನ್ನೂ ತುಂಬಿಲ್ಲ. ಸೇನೆಯ ಹೊಸ ಮುಖ್ಯಸ್ಥರನ್ನು ಎರಡು ತಿಂಗಳ ಮೊದಲೇ ಹೆಸರಿಸಬೇಕು. ಅದೂ ಆಗಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಟ, ಪಾರದರ್ಶಕ ಆಡಳಿತ ತಮ್ಮ ಗುರಿ ಎನ್ನುವ ಮೋದಿ ನೇತೃತ್ವದ ಸರ್ಕಾರದಿಂದ ಜನ ಇಂತಹ ವಿಳಂಬವನ್ನು ನಿರೀಕ್ಷಿಸಿರಲಿಲ್ಲ.  
 
 ಆಯಕಟ್ಟಿನ ಉನ್ನತ ಹುದ್ದೆಗಳಿಗೆ ಪೂರ್ಣಾವಧಿ ಅಧಿಕಾರಿಗಳ ನೇಮಕ ಮಾಡದೇ ಇರುವುದು ಕೇಂದ್ರಕ್ಕೆ ಮಾತ್ರವಲ್ಲ ರಾಜ್ಯಗಳಿಗೂ ಅಂಟಿಕೊಂಡ ವ್ಯಾಧಿ. ನಮ್ಮ ರಾಜ್ಯವೂ ಅದಕ್ಕೆ ಒಂದು ಉದಾಹರಣೆ. ಲೋಕಾಯುಕ್ತರ ಹುದ್ದೆ ಭರ್ತಿಯಾಗದೆ ಅನೇಕ ತಿಂಗಳುಗಳೇ ಕಳೆದವು. ಕೆಪಿಎಸ್‌ಸಿಗೆ, ರಾಜ್ಯ ಮಾನವ ಹಕ್ಕು ಆಯೋಗಗಳಿಗೆ ಅಧ್ಯಕ್ಷರಿಲ್ಲ. ಮುಖ್ಯ ಮಾಹಿತಿ ಆಯುಕ್ತ ಹುದ್ದೆಯೂ  ಖಾಲಿ ಇದೆ. ಇಂತಹ ನೇಮಕಾತಿಗಳನ್ನು ಮುಂದೂಡುತ್ತಾ  ಹೋಗುವುದು ಸರಿಯಲ್ಲ. ಆಡಳಿತ ವ್ಯವಸ್ಥೆ ಸುಗಮವಾಗಿ ಸಾಗಲು ರೂಪಿಸಿಕೊಳ್ಳಲಾಗಿರುವ ಸಂಪ್ರದಾಯ, ನೀತಿ ನಿಯಮ ಪಾಲಿಸಿದರೆ ಮಾತ್ರ ಜನರಿಗೂ ವ್ಯವಸ್ಥೆಯಲ್ಲಿ ನಂಬಿಕೆ ಬರುತ್ತದೆ ಎಂಬುದನ್ನು ಸರ್ಕಾರಗಳು ಅರಿತುಕೊಳ್ಳಬೇಕು.     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT