ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಕೃಷಿಗೆ ಭಟ್ಟರ ಸೂತ್ರ...

Last Updated 12 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಹಿರಿಯರಿಂದ ಬಂದ14 ಎಕರೆ ಜಮೀನಿನಲ್ಲಿ ಅಡಿಕೆ, ಗೇರು, ಭತ್ತದ ಕೃಷಿ ಮಾಡುತ್ತಿದ್ದರು. ಅಡಿಕೆಯ ಬೆಲೆ 1998-99ರಲ್ಲಿ 160 ರೂಪಾಯಿ ಇದ್ದದ್ದು, 2001ರಲ್ಲಿ 35 ರೂಪಾಯಿಗೆ ಇಳಿದಾಗ ಕೃಷಿಯನ್ನೇ ನಂಬಿದ ನಾರಾಯಣ ಭಟ್ಟರ ಕಣ್ಣು ಕಟ್ಟಿದಂತಾಯಿತು. ಜೀವನಕ್ಕಾಗಿ ಬೇರೆ ಬೇರೆ ಮಾರ್ಗದತ್ತ ಆಲೋಚಿಸತೊಡಗಿದಾಗ ಎದುರಿಗೆ ಕಂಡದ್ದು ತರಕಾರಿ ಕೃಷಿ.

ಮನೆಯ ಸುತ್ತ ಮುತ್ತ ಇರುವ ಸುಮಾರು 35ಸೆಂಟ್ಸ್ ಅಂಗಳದಲ್ಲೇ ತರಕಾರಿ ಕೃಷಿ ಮಾಡತೊಡಗಿದರು. ಮಣ್ಣು ಫಲವತ್ತಾಗಿದ್ದು, ನೀರಿನ ಆಶ್ರಯ ಸಾಕಷ್ಟು ಇರುವ ಭೂಮಿಯಲ್ಲಿ ತರಕಾರಿ ಚೆನ್ನಾಗಿ ಬಂದರೂ ಹಲವು ಅಡಚಣೆಗಳು ಕಾಣಿಸಿಕೊಂಡವು. ತರಕಾರಿಗಳನ್ನು ಬೆಳೆಯುತ್ತಿದ್ದಂತೆ ಕೀಳಬೇಕು, ಕಿತ್ತ ಮೂರ್ನಾಲ್ಕು ದಿವಸದಲ್ಲೇ ಗ್ರಾಹಕನ ಕೈ ಸೇರಬೇಕು, ಭಟ್ಟರ ಊರು ಪೇಟೆಯಿಂದ ಸಾಕಷ್ಟು ದೂರ ಇದ್ದು, ತರಕಾರಿಗಳ ಮಾರಾಟಕ್ಕಾಗಿ ಮಧ್ಯವರ್ತಿಗಳನ್ನು ಅವಲಂಬಿಸಬೇಕಾಯಿತು.

ಮಧ್ಯವರ್ತಿಗಳು ಮಧ್ಯ ಬಂದಾಗ ಸಿಕ್ಕಿದ್ದು ಅಲ್ಪ ಬೆಲೆ. ಇದರಿಂದಾಗಿ ನಾರಾಯಣ ಭಟ್ಟರು ತರಕಾರಿ ಬೀಜಗಳ ಮಾರಾಟದತ್ತ ಹೊರಳಿದರು, 2004ರಲ್ಲಿ ನಾಟಿ ಬೀಜಗಳ ಮಾರಾಟಕ್ಕೆ ತೊಡಗಿದರು. ಇಷ್ಟು ವರ್ಷಗಳಲ್ಲಿ ಬೀಜಸಂರಕ್ಷಣೆ ಕುರಿತು ಸಾಕಷ್ಟು ಅನುಭವಗಳು ಅವರಲ್ಲಿವೆ. ಈ ಕುರಿತು ಅವರು ಇಲ್ಲಿ ಮಾತನಾಡಿದ್ದಾರೆ.

* ಹೈಬ್ರೀಡ್‌ ಮತ್ತು ನಾಟಿ ಬೀಜಗಳ ವ್ಯತ್ಯಾಸವೇನು?
ನಾಟಿ ಬೀಜಗಳಲ್ಲಿ ನಾವು ಸ್ವಾವಲಂಬಿಗಳಾಗಬಹುದು, ಹೈಬ್ರೀಡ್‌ ಬೀಜಗಳಾದರೆ ಬೀಜಗಳಿಗಾಗಿ ಪ್ರತೀ ಸಲ ಮಾರುಕಟ್ಟೆಯನ್ನು ಅವಲಂಬಿಸಬೇಕು. ಹೈಬ್ರೀಡ್‌ ಬೀಜ ಉಪಯೋಗಿಸಿ ಎಷ್ಟು ಉತ್ಪತ್ತಿಯಿದೆಯೋ ಅಷ್ಟೇ ಬೆಳೆಯನ್ನು ನಾಟಿ ಬೀಜ ಉಪಯೋಗಿಸಿ ಸಾಕಷ್ಟು ಗೊಬ್ಬರ ಹಾಕಿದರೆ ತೆಗೆಯಬಹುದು. ಸತ್ವಯುತ, ಉತ್ತಮ ಮತ್ತು ಶುದ್ಧ ಆಹಾರಕ್ಕಾಗಿ ನಾಟಿ ಬೀಜಗಳನ್ನೇ ಉಪಯೋಗಿಸಬೇಕು.

*ನಾಟಿ ಬೀಜಗಳ ಸಂರಕ್ಷಣೆ ಹೇಗೆ?
ನಾಟಿ ಬೀಜಗಳನ್ನು ಹಲವು ವರ್ಷಗಳ ಕಾಲ ಕೆಡದಂತೆ ಇಡಬಹುದು. ಬಿದಿರಿನ ನಳಿಗೆಯಲ್ಲಿ ಬೀಜಗಳೊಡನೆ ವಿಭೂತಿ ಸೇರಿಸಿ ಇಟ್ಟರೆ ಒಂದು ವರ್ಷದವರೆಗೆ ಕೆಡದಂತೆ ಇಡಬಹುದು, ಇದರೊಂದಿಗೆ ಒಣಗಿದ ಬೇವಿನಎಲೆ ಅಥವಾ ನೆಕ್ಕಿ ಎಲೆ ಸೇರಿಸಿದರೆ ಇನ್ನೂ ಉತ್ತಮ. ಬೀಜಗಳನ್ನು  ಪೇಪರಿನಲ್ಲಿ ಸುತ್ತಿ, ಪ್ಲಾಸ್ಟಿಕ್ ತೊಟ್ಟೆಯಲ್ಲಿಡಬೇಕು, ಪ್ಲಾಸ್ಟಿಕ್ ತೊಟ್ಟೆಯನ್ನು ಪ್ಲಾಸ್ಟಿಕ್ ಡಬ್ಬಿಯಲ್ಲಿಟ್ಟು ಮುಚ್ಚಳ ಮುಚ್ಚಿ ಫ್ರಿಜ್‌ನಲ್ಲಿಟ್ಟರೆ ಹಲವರ್ಷಗಳವರೆಗೆ ಕೆಡದಂತೆ ಇಡಬಹುದು.

* ನಿಮ್ಮ ‘ಬೀಜ ಸಿರಿ’ ಬ್ಯಾಂಕ್‌ ವೈಶಿಷ್ಟ್ಯವೇನು?
ಇದರಲ್ಲಿ ಸುಮಾರು 35 ತರಕಾರಿ ತಳಿಗಳ ಬೀಜಗಳಿವೆ. ಬೆಂಡೆಕಾಯಿ, ಅಲಸಂದೆ, ಹೀರೇಕಾಯಿ, ಬೀನ್ಸ್, ಕುಂಬಳಕಾಯಿ, ಮುಳ್ಳುಸೌತೆ ಸೇರಿದಂತೆ ಹಲವು ವಿಧದ ಬೀಜಗಳಿವೆ. ಕೆಂಪು ಬಣ್ಣದ ಮತ್ತು ಸದಾ ಬೇಡಿಕೆ ಇರುವ ಬಿಳಿ ಬೆಂಡೆಕಾಯಿ, ಮೀಟರ್‌ ಅಲಸಂದೆ, ಸ್ವರ್ಡ್ ಬೀನ್ಸ್, ಬಹು ವಾರ್ಷಿಕ ಬದನೆ, ಅಲ್ಲದೆ ಆಳೆತ್ತರದ ಮುಳ್ಳುಸೌತೆಯೂ ಲಭ್ಯ. ಈ ಬೀಜಗಳನ್ನು ಕೃಷಿಮೇಳಗಳಲ್ಲಿ ರೈತರಿಗೆ ಮತ್ತು ಗ್ರಾಹಕರಿಗೆ ನೇರವಾಗಿ ಮಧ್ಯವರ್ತಿಗಳಿಲ್ಲದೆ ಮಾರಾಟ ಮಾಡುತ್ತಿದ್ದೇನೆ.

* ಬೀಜ ಮಾರಾಟದಿಂದ ರೈತರಿಗೆ ಸಿಗುವ ಲಾಭವೆಷ್ಟು?
ಒಂದು ಬದನೆಕಾಯಿಯ ಬೀಜದಿಂದ ₹500, ಒಂದು ಬೆಂಡೆಕಾಯಿಯಿಂದ ₹200, ಒಂದು ಅಲಸಂದೆಯಿಂದ ₹50ರವರೆಗೂ ಲಾಭ ಗಳಿಸಬಹುದು. ತರಕಾರಿಗಳನ್ನು ಗಿಡಗಳಲ್ಲಿಯೇ ಬೆಳೆಯಲು ಬಿಟ್ಟು, ಒಣಗಿಸಿ ಮಾರಿದರೆ ಸಿಗುವ ಲೆಕ್ಕವಿದು. ನೀವು ಬ್ಯಾಂಕಿನಲ್ಲಿಟ್ಟ ಹಣ ದ್ವಿಗುಣವಾಗಲು ಏಳೆಂಟು ವರ್ಷಗಳು ಬೇಕಾದರೆ, ಬೀಜಗಳ ವ್ಯಾಪಾರದಲ್ಲಿ ಹಣ ಹಲವು ಪಟ್ಟು ಜಾಸ್ತಿಯಾಗಲು ನಾಲ್ಕೈದು ತಿಂಗಳುಗಳು ಸಾಕು.

* ‘ಬೀಜ ಸಿರಿ’ಗೆ ಸರ್ಕಾರದಿಂದ ಸಹಾಯಧನ ಸಿಕ್ಕಿದೆಯೇ?
ಶೂನ್ಯ ಬಂಡವಾಳದಿಂದ ತರಕಾರಿ ಬೀಜಗಳ ವ್ಯಾಪಾರ ಶುರು ಮಾಡಿದ್ದೇನೆ. ಇದುವರೆಗೆ ಸರ್ಕಾರದಿಂದ ಯಾವ ಸಹಾಯಧನವೂ ಸಿಕ್ಕಿಲ್ಲ. ಬೀಜಗಳು ಹಲವು ವರ್ಷಗಳು ಕೆಡದಂತೆ ಇಡಲು  ದೊಡ್ಡ ರೀತಿಯಲ್ಲಿ ಶೀತಲೀಕರಣದ ವ್ಯವಸ್ಥೆ ಮಾಡಬೇಕು. ಅದಕ್ಕಾಗಿ ಆಧುನಿಕ ಉಪಕರಣದ ಅಗತ್ಯವಿದೆ, ಖರ್ಚು ₹ 25 ಲಕ್ಷ ಆಗಬಹುದೇನೋ. ಇದಕ್ಕೆ ಸರ್ಕಾರದ ಸಹಾಯ ಅಗತ್ಯ.

* ಬೀಜ ಕೊಳ್ಳುವವರಿಗೆ ನಿಮ್ಮ ಸಲಹೆಯೇನು?
ಬೀಜಗಳನ್ನು ಖರೀದಿಸುವಾಗ ಮಧ್ಯವರ್ತಿಗಳನ್ನು ದೂರವಿಡಿ.  ನೇರವಾಗಿ ಬೆಳೆಸಿದ ರೈತರಿಂದಲೇ ಖರೀದಿಸಿ. ಇದರಿಂದ ಉತ್ತಮ ತಳಿಯ ಬೀಜಗಳನ್ನೇ ಖರೀದಿಸಬಹುದು. ಜೊತೆಗೆ ಸಾಕಷ್ಟು ಮಾಹಿತಿಗಳೂ ಸಿಗುತ್ತದೆ.

* ಕೀಟನಾಶಕ ಹಾಗೂ ಬಿತ್ತನೆ ಬಗ್ಗೆ ಮಾಹಿತಿ ನೀಡಿ...
ಗಿಡ ಮತ್ತು ತರಕಾರಿಗೆ ಬರುವ ಹೇನು ರೋಗಕ್ಕೆ 50ಮಿಲಿ ಬೇವಿನ ಎಣ್ಣೆ, 50ಗ್ರಾಂ ಸೋಪಿನ ಹುಡಿಯನ್ನು ಒಂದು ಲೀಟರ್ ನೀರಿನಲ್ಲಿ ಕಲೆಸಿ ಚೂರು ಹೊಗೆಸೊಪ್ಪಿನೊಂದಿಗೆ ಚೆನ್ನಾಗಿ ಕುದಿ ಬರಿಸಿ ಸೋಸಿ ಗಿಡಗಳಿಗೆ ಸಿಂಪಡಿಸಿದರೆ ರೋಗ ಮಾಯ. ಬದನೆಕಾಯಿಯ ಹುಳುರೋಗಕ್ಕೆ ಬಟ್ಟೆ ಒಗೆದ ನಂತರದ ಸೋಪಿನ ನೀರನ್ನು ಗಿಡದ ಬುಡಕ್ಕೆ ಹಾಕಿದಾಗ ಬದನೆಕಾಯಿಗೆ ಬರುವ ಹುಳುವನ್ನು ದೂರ ಇಡಬಹುದು. ದನದ ಮೂತ್ರಕ್ಕೆ ಹತ್ತು ಪಟ್ಟು ನೀರು ಸೇರಿಸಿ ಗಿಡಗಳಿಗೆ ಸಿಂಪಡಿಸಿದರೆ ಕಂಬಳಿ ಹುಳುಗಳನ್ನು ದೂರವಿಡಬಹುದು, ಅಲ್ಲದೆ ಇದು ಗಿಡಕ್ಕೆ ಉತ್ತಮ ಸಾರವೂ ಹೌದು.

ಬೀಜವನ್ನು ಅಮವಾಸ್ಯೆಯ ಹತ್ತಿರದ ದಿನಗಳಲ್ಲೇ ಬಿತ್ತಬೇಕು,  ಶನಿವಾರ ಮತ್ತು ಮಂಗಳವಾರ ಉತ್ತಮ ದಿನ. ಪ್ಲಾಸ್ಟಿಕ್ ಕಪ್ಪಿನಲ್ಲಿ ಸುಡುಮಣ್ಣು, ಹೊಯಿಗೆ, ಸೆಗಣಿಯನ್ನು ಸಮ ಪ್ರಮಾಣದಲ್ಲಿ ಸೇರಿಸಿ ಬೀಜ ಬಿತ್ತಬೇಕು, ಗಿಡಗಳಿಗೆ ಒಂದೆರಡು ವಾರವಾಗುತ್ತಿದ್ದಂತೆ ತೋಟದಲ್ಲಿ ಉತ್ತರದಿಂದ ದಕ್ಷಿಣ ದಿಕ್ಕಿನತ್ತ ನೆಡಬೇಕು, ಇದರಿಂದ ಸೂರ್ಯನ ಬೆಳಕು ಸಾಕಷ್ಟು ಸಿಗುತ್ತದೆ.  ವಿವಿಧ ಬಗೆಯ ತರಕಾರಿಯನ್ನು ಒಟ್ಟಿಗೆ ಬೆಳೆಸುವ ಬದಲು, ಋತುಮಾನಕ್ಕೆ ಅನುಗುಣವಾಗಿ ತರಕಾರಿಗಳ ಬೀಜ ನೆಟ್ಟು ಬೆಳೆಸಿದರೆ ವರ್ಷಪೂರ್ತಿ ತೊಂದರೆ ಇಲ್ಲದೆ ಬೆಳಸಬಹುದು.
ಅವರ ಸಂಪರ್ಕಕ್ಕೆ: 08255 270266 (ಸಂಜೆ 7 ಗಂಟೆ)
 

ಹಾರ್ಮೋನ್ಸ್‌ ಟ್ರೀಟ್‌ಮೆಂಟ್: 6 ಕೋಳಿಮೊಟ್ಟೆಗಳು ಮುಳುಗುವಷ್ಟು ಲಿಂಬೆಹುಳಿ ರಸ ಹಾಕಿ 28 ದಿವಸಗಳು ಗಾಳಿ ಆಡದ ಜಾರಿನಲ್ಲಿಡಬೇಕು, 29ನೇ ದಿನ ದ್ರಾವಣವನ್ನು ಸೋಸಬೇಕು. ಒಂದು ಪಟ್ಟು ದ್ರಾವಣಕ್ಕೆ 20 ಪಟ್ಟು ನೀರು ಸೇರಿಸಿ ಗಿಡಗಳ ಮೇಲೆ ಸ್ಪ್ರೇ ಮಾಡಬೇಕು, ಇದೇ, ಗಿಡಗಳ ಹಾರ್ಮೋನ್ಸ್‌ ಟ್ರೀಟ್‌ಮೆಂಟ್. ನೀರು ಸೇರಿಸದೆ ಇಟ್ಟ ದ್ರಾವಣವು ಕೆಡದಂತೆ ವರ್ಷಗಟ್ಟಲೆ ಇಡಬಹುದು.

ಫಿಷ್ ವೈನ್: 2ಕೆ.ಜಿ. ಮೀನು, 2ಕೆ.ಜಿ. ಬೆಲ್ಲ, ಈ ಮಿಶ್ರಣವನ್ನು ಚೆನ್ನಾಗಿ ಕಲೆಸಿ ಗಾಳಿ ಆಡದ ಪ್ಲಾಸ್ಟಿಕ್ ಡಬ್ಬಿಯಲ್ಲಿ 22 ದಿನ ಇಡಬೇಕು. 23ನೇ ದಿನ ಪರಿಮಳ ಬೀರುವ 2ಲೀಟರ್ ‘ಫಿಷ್ ವೈನ್’ ಸಿದ್ಧ. ಇದು ಸುಲಭದಲ್ಲಿ ಮಾಡಬಹುದಾದ ಉತ್ತಮ ಗೊಬ್ಬರ. 1 ಲೀಟರ್ ದ್ರಾವಣಕ್ಕೆ 50 ಲೀಟರ್ ನೀರನ್ನು ಸೇರಿಸಿ ಗಿಡಗಳಿಗೆ ಉಣಿಸಿ, ತೆಂಗಿನ ಮರಕ್ಕೆ 2 ಲೀಟರ್, ಅಡಿಕೆಗೆ 1 ಲೀಟರ್, ಬಾಳೆಗೆ 1/2 ಲೀಟರ್ ಮತ್ತು ತರಕಾರಿ ಹಾಗೂ ಹೂವಿನ ಗಿಡಕ್ಕೆ ಚೆಲ್ಲಿಕೊಂಡು ಹಾಕಿದರೂ ಸಾಕು.

ಜೀವಾಮೃತ: 200 ಲೀಟರಿನ ಒಂದು ಡ್ರಮ್ ತೆಗೆದುಕೊಂಡು 180 ಲೀಟರ್ ನೀರು ಹಾಕಿ, 10 ಕೆ.ಜಿ. ಸೆಗಣಿ, 10 ಲೀಟರ್ ಗೋಮೂತ್ರ, 2 ಕೆ.ಜಿ. ಬೆಲ್ಲ, 2 ಕೆ.ಜಿ. ದ್ವಿದಳ ಧಾನ್ಯದ ಪುಡಿ, 2 ಬೊಗಸೆ ಕೃಷಿ ಮಣ್ಣು ಸೇರಿಸಿ ಚೆನ್ನಾಗಿ ಕರಡಬೇಕು. ಮೂರು ದಿನಗಳ ಕಾಲ ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯದಲ್ಲಿ ಪ್ರದಕ್ಷಿಣಾಕಾರದಲ್ಲಿ ಕರಡಿದಾಗ ನಾಲ್ಕನೇ ದಿವಸಕ್ಕೆ ಗಿಡಗಳಿಗೆ ಅಮೃತವಾದ ಜೀವಾಮೃತ ಸಿದ್ಧ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT