ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಐವಿ ಸೋಂಕಿತರ ಭರವಸೆಯ ಬೆಳಕು

Last Updated 12 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

‘ನಾನು ಬದುಕುವ ಬಗ್ಗೆಯೇ ಭರವಸೆ ಇರಲಿಲ್ಲ. ಈಗ ಬದುಕಬಹುದು ಅನ್ನಿಸ್ತಿದೆ’
–ಬಳ್ಳಾರಿಯ ವಿದ್ಯಾನಗರದಲ್ಲಿರುವ ಎಚ್‌ಐವಿ ಸೋಂಕಿತರ ಜಿಲ್ಲಾ ಸಂಘ ‘ನಿತ್ಯಜೀವನ’ ಕಚೇರಿಯಲ್ಲಿ ಕುಳಿತು ಈ ಮಾತು ಹೇಳಿದ ರಾಜಮ್ಮ ಅವರ ಮಡಿಲಲ್ಲಿ ವರ್ಷದ ಕೂಸು ನಗುತ್ತಿತ್ತು. ಅವರ ಪಕ್ಕದಲ್ಲೇ ಪತಿ ಗಣೇಶ್‌ ಮುಖದಲ್ಲೂ ಅಪ್ಪನ ಸಂತೃಪ್ತಿ ಹೊಳೆದಿತ್ತು. ಅದೇ ಕ್ಷಣ, ಈ ದಂಪತಿಯ ಪಕ್ಕ ಕುಳಿತಿದ್ದ ಸಂಘದ ಅಧ್ಯಕ್ಷ ಶ್ರೀನಿವಾಸ್‌ ಅವರಲ್ಲೂ ಧನ್ಯತಾಭಾವ ತುಂಬಿತ್ತು.

ಸೋಂಕಿತರನ್ನು ಅಸ್ಪೃಶ್ಯರಂತೆ ನೋಡುವ, ಮುಖ್ಯವಾಹಿನಿಯಿಂದ ದೂರವೇ ಇಡುವ ಪ್ರಯತ್ನಗಳು ಇನ್ನೂ ಮುಂದುವರೆಯುತ್ತಿರುವ ಈ ಹೊತ್ತಿನಲ್ಲಿ, ಈ ಜಿಲ್ಲೆಯಲ್ಲಿ ಸೋಂಕಿತರ ನಡುವೆ ಮದುವೆಯೂ ನಡೆಯುತ್ತಿದೆ. ಸೋಂಕಿತರ ಕುಟುಂಬಗಳು ವೃದ್ಧಿಯಾಗುತ್ತಿವೆ.

ರಾಜಮ್ಮ ಅವರ ಕುರಿತು ಇನ್ನೂ ಹೇಳಬೇಕು. ಅವರು ಹುಟ್ಟುತ್ತಲೇ ಸೋಂಕಿದ್ದ ಕೂಸು. ತಂದೆ ತಾಯಿ ಇಲ್ಲದೆ ಸಂಬಂಧಿಕರ ಆಶ್ರಯದಲ್ಲಿ ಬೆಳೆದ ಅವರಿಗೆ ಬದುಕುವ ಆಸೆ ಇರಲಿಲ್ಲ. ಔಷಧಿ ಸೇವಿಸುತ್ತ ದಿನದೂಡುತ್ತಿದ್ದ ಅವರ ಬಾಳಿಗೆ ಹೊಸ ಬೆಳಕು ತಂದಿದ್ದು ‘ನಿತ್ಯ ಜೀವನ’.

ತಮಿಳುನಾಡು ಮೂಲದ ಗಣೇಶ್‌ ತಮಗೆ ಎಚ್‌ಐವಿ ಸೋಂಕಿದೆ ಎಂದು ಗೊತ್ತಾದ ಕೂಡಲೇ ಮದುವೆಯೇ ಬೇಡ ಎಂದು ನಿರ್ಧರಿಸಿದ್ದರು. ಆಮೇಲೆ, ಸೋಂಕಿರುವವರು ಸಿಕ್ಕರೆ ಮಾತ್ರ ಮದುವೆಯಾಗುವ ನಿರ್ಧಾರ ಕೈಗೊಂಡವರು. ಅವರ ಆಸೆ ಈಡೇರಲು ಕಾರಣವಾಗಿದ್ದು, ನಿತ್ಯಜೀವನ ಸಂಘ ಏರ್ಪಡಿಸಿದ್ದ ಎಚ್‌ಐವಿ ಸೋಂಕಿತರ ಮದುವೆ ಸಮ್ಮೇಳನ. ಇದುವರೆಗೆ ಎರಡು ಸಮ್ಮೇಳನ ನಡೆಸಿರುವ ಸಂಘದ ಆಶ್ರಯದಲ್ಲಿ 28 ಜೋಡಿಗಳ ಮದುವೆಯಾಗಿದೆ. ಬಹುತೇಕರಿಗೆ ಮಕ್ಕಳಾಗಿವೆ.

ಸಂಘ ವಹಿಸಿದ ಮುಂಜಾಗ್ರತೆ ಮತ್ತು ನೀಡಿದ ಮಾರ್ಗದರ್ಶನ, ಆರೈಕೆ ಪರಿಣಾಮವಾಗಿ ಎಲ್ಲ ದಂಪತಿಗಳ ಮಕ್ಕಳು ಸೋಂಕಿನಿಂದ ಮುಕ್ತರಾಗಿದ್ದಾರೆ. ಇದು ಸೋಂಕಿತರ ಹೊಸ ತಲೆಮಾರಿನ ಆರೋಗ್ಯದ ಮಾತು. ಅವರ ಮುಂದೆ ಹೊಸ ಭವಿಷ್ಯವೂ ಇದೆ. ನಿತ್ಯಜೀವನ ಸಂಘ ಸ್ಥಾಪನೆಗೂ ಮುನ್ನ, ಅವಿವಾಹಿತರಾಗಿದ್ದ ಶ್ರೀನಿವಾಸ್‌, ತಾವು ಒಬ್ಬ ಸೋಂಕಿತ ಮಹಿಳೆಯನ್ನೇ ಮದುವೆಯಾಗಬೇಕು ಎಂದು ನಿರ್ಧರಿಸಿ, ಹಾಗೆ ಮಾಡದೇ ಹೋಗಿದ್ದರೆ, ಇಂದು ಸೋಂಕಿತ ದಂಪತಿಗಳ ಸಂತತಿ ಹುಟ್ಟಲು ಸಾಧ್ಯವಾಗುತ್ತಿರಲಿಲ್ಲ.

ಅವರು ಮದುವೆಯಾದಾಗ ಸೋಂಕಿತ ವಿಧವೆ ಮೀನಾಕ್ಷಿ ಅವರಿಗೆ ಇಬ್ಬರು ಮಕ್ಕಳಿದ್ದರು. ನಂತರ ಈ ದಂಪತಿ ಮತ್ತೊಂದು ಮಗುವನ್ನು ಪಡೆದರು. ಈಗ ಅವರಿಗೆ ಆರು ವರ್ಷದ ಮಗ ನಿದ್ದಾನೆ. ಮೊದಲ ಇಬ್ಬರು ಮಕ್ಕಳಲ್ಲಿ ಒಬ್ಬರು ಪಿಯುಸಿ, ಮತ್ತೊಬ್ಬರು 9ನೇ ತರಗತಿಯಲ್ಲಿದ್ದಾರೆ.

‘ನನ್ನಂತೆಯೇ ಸೋಂಕಿತರಾಗಿರುವ ಇತರರೂ ಕೌಟುಂಬಿಕ ಜೀವನ ನಡೆಸಬಹುದಲ್ಲವೇ ಎಂಬ ಆಲೋಚನೆಯೇ, ಸೋಂಕುಳ್ಳವರ ಮದುವೆ ಕಾರ್ಯಕ್ಕೆ ಮುಂದಾಗಲು ನನ್ನನ್ನು ಪ್ರೇರೇಪಿಸಿತು’ ಎಂಬುದು ಶ್ರೀನಿವಾಸ ಅವರ ನೆನಪು.

‘ಸೋಂಕಿತರಲ್ಲಿ ಹಲವರಿಗೆ ತಾವೂ ಮದುವೆಯಾಗಿ ಸಾಂಸಾರಿಕ ಜೀವನ ನಡೆಸಬಹುದು ಎಂಬುದೇ ಗೊತ್ತಿರುವುದಿಲ್ಲ. ಸೋಂಕಿಗೆ ನಿಗದಿತ
ವಾದ ಚಿಕಿತ್ಸೆಯನ್ನು ಕಡ್ಡಾಯವಾಗಿ ಪಡೆಯುತ್ತಾ, ಸೋಂಕುಳ್ಳವರೂ ಸತಿ–ಪತಿಗಳಾಗಿ ಜೀವನ ಸಾಗಿಸಬಹುದು ಎಂಬ ಸಂದೇಶವನ್ನು ಸಂಘ ಯಶಸ್ವಿಯಾಗಿ ಸಾರುತ್ತಿದೆ’ ಎಂಬ ಹೆಮ್ಮೆಯನ್ನು ವ್ಯಕ್ತಪಡಿಸುತ್ತಾರೆ.

ಅವರ ಈ ಪ್ರಯತ್ನಕ್ಕೆ ಕೆಲವು ವೈದ್ಯರ ವಿರೋಧವೂ ಉಂಟು. ‘ನಿಮ್ಮ ಬದುಕೇ ಅನಿಶ್ಚಿತ, ನೀವು ಮತ್ತೆ ಮದುವೆಯಾಗುವುದು ಏಕೆ?’ ಎಂದು ಕೆಲವು ವೈದ್ಯರು ಅವರನ್ನು ಆಕ್ಷೇಪಿಸಿದ್ದಾರೆ. ಮದುವೆ ಸಮ್ಮೇಳನಗಳ ಕುರಿತು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. ಅವರೆಲ್ಲರಿಗೂ ಶ್ರೀನಿವಾಸ್‌ ನೀಡಿರುವ ಉತ್ತರ ‘ಸೋಂಕಿತರೂ ಮನುಷ್ಯರಲ್ಲವೇ? ಅವರಿಗೂ ಆಸೆ, ಆಕಾಂಕ್ಷೆಗಳು ಇರುತ್ತವಲ್ಲವೇ? ಸೋಂಕಿತರಲ್ಲದವರನ್ನು ಮದುವೆಯಾಗುವುದು ತಪ್ಪು.

ಸೋಂಕಿತರನ್ನೇ ಮದುವೆಯಾಗಿ ಸಂಸಾರ ನಡೆಸುವುದು ಹೇಗೆ ತಪ್ಪು? ಸೋಂಕಿತರು ಮದುವೆಯಾಗಿ ಸಂತೋಷವಾಗಿದ್ದಾರೆ. ಬದುಕುವ ಭರವಸೆ ಅವರ ಕೈ ಹಿಡಿದಿದೆ. ಅಷ್ಟು ನಮಗೆ ಸಾಕು’ ಎಂಬುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT