ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆದುಹೋಗುವ ಹಾದಿಯಲ್ಲಿ...

Last Updated 12 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಹೌದು! ಇಲ್ಲೊಂದು ಅಪರೂಪದ ಸ್ಮಾರಕ ವರ್ಷದಿಂದ ವರ್ಷಕ್ಕೆ ತನ್ನ ಒಂದೊಂದೇ ಅಂಗಾಂಗವನ್ನು ಕಳೆದುಕೊಳ್ಳುತ್ತಾ ಸಾವಿನ ಸುಳಿಗೆ ಸಿಲುಕಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣಕ್ಕೆ ಸಮೀಪದ ಚಂದಗಾಲು ರಸ್ತೆಯಲ್ಲಿರುವ ‘ಗುಲಾಂ ಅಲಿಖಾನ್‌ ಗುಂಬಸ್‌’ ಹೆಸರಿನ ಬೃಹತ್‌ ಸ್ಮಾರಕ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಅವನತಿಯ ಹಾದಿ ಹಿಡಿದಿದೆ. ಟಿಪ್ಪು ಸುಲ್ತಾನನ ಆಡಳಿತದಲ್ಲಿ ಗೃಹ ಸಚಿವನಾಗಿದ್ದ ಲಂಗ್ಡೆ (ಕುಂಟ) ಗುಲಾಂ ಅಲಿಖಾನ್‌ ಈ ಸ್ಮಾರಕವನ್ನು 1790ರ ಸುಮಾರಿಗೆ ನಿರ್ಮಿಸಿದ್ದು, 2005ರವರೆಗೆ ಇದು ಸುಸ್ಥಿತಿಯಲ್ಲೇ ಇತ್ತು. ನಂತರದ ದಿನಗಳಲ್ಲಿ ಈ ಸ್ಮಾರಕ ಶಿಥಿಲವಾಗತೊಡಗಿದೆ.

ಗುಮ್ಮಟ ಮತ್ತು ಚಾವಣಿ ಮೇಲೆ ಬೆಳೆದ ಆಲ, ಅರಳಿ ಇತರ ಮರಗಳು ತಳಗುಂಟು ತಮ್ಮ ಬೇರು ಬಿಟ್ಟು ಸ್ತಂಭ ಮತ್ತು ಚಾವಣಿಗಳನ್ನು ಛಿದ್ರಗೊಳಿಸಿವೆ. ನಾಲ್ಕು ಪ್ರಾಂಗಣದ ಈ ಸ್ಮಾರಕದ ಎರಡು ಭಾಗಗಳು ಸಂಪೂರ್ಣ ನೆಲ ಕಚ್ಚಿದ್ದು, ಉಳಿದೆರಡು ಭಾಗಗಳಲ್ಲಿ ಕೂಡ ಬಿರುಕುಗಳು ಮೂಡಿವೆ. 36 ಕಂಬಗಳ ಮೇಲೆ ನಿಂತಿದ್ದ ಬೃಹತ್‌ ಗುಂಬಸ್‌ನ 16 ಕಂಬಗಳು ಮುರಿದು ಬಿದ್ದಿವೆ. ಗುಂಬಸ್‌ ಒಳಗಿರುವ ಗುಲಾಂ ಅಲಿಖಾನ್‌ ಮತ್ತು ಆತನ ಪತ್ನಿ ಸಮಾಧಿ ಪಕ್ಷಿಗಳ ಹಿಕ್ಕೆಗಳಿಂದ ಮುಚ್ಚಿಹೋಗಿವೆ. ನೆಲಮಟ್ಟದಿಂದ ಸುಮಾರು 70 ಅಡಿ ಎತ್ತರ ಇರುವ ಈ ಸ್ಮಾರಕದ ಸುತ್ತಲೂ ಗಿಡಗಂಟಿಗಳು ಬೆಳೆದಿದ್ದು, ಹಾವು, ಹಲ್ಲಿಗಳ ಆವಾಸ ಸ್ಥಾನವಾಗಿದೆ. ಹಾಗಾಗಿ ಜನರು ಈ ಸ್ಮಾರಕದ ಬಳಿ ಕಾಲಿಡಲು ಹೆದರುತ್ತಿದ್ದಾರೆ.

ವಾರಸುದಾರರೇ ಇಲ್ಲ: ಪಟ್ಟಣದಲ್ಲಿರುವ ಕೋಟೆ, ಮದ್ದಿನ ಮನೆ, ಅರಮನೆ–ಸೆರೆಮನೆ, ಉದ್ಯಾನಗಳ ಬಳಿ ಒಂದು ಹಿಡಿಮಣ್ಣು ತೆಗೆದುಕೊಂಡರೂ ಒಂದಿಲ್ಲೊಂದು ಇಲಾಖೆಗಳು ಆಕ್ಷೇಪ ವ್ಯಕ್ತಪಡಿಸುತ್ತವೆ. ಅಂತಹವರನ್ನು ಶಿಕ್ಷೆಗೆ ಗುರಿಪಡಿಸುವುದಾಗಿ ಎಚ್ಚರಿಸುತ್ತವೆ. ಅಚ್ಚರಿಯ ಸಂಗತಿ ಎಂದರೆ ಗುಲಾಂ ಅಲಿಖಾನ್‌ ಗುಂಬಸ್‌ನಂತಹ ಬೃಹತ್‌ ಸ್ಮಾರಕಕ್ಕೆ ವಾರಸುದಾರರೇ ಇಲ್ಲ! ಹಾರೆಯಿಂದ ಮೀಟಿ ಅದನ್ನು ಉರುಳಿಸಿದರೂ ಇಲ್ಲಿ ಕೇಳುವವರಿಲ್ಲ.

ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ, ರಾಜ್ಯ ಪ್ರಾಚ್ಯವಸ್ತು ಇಲಾಖೆ ಮಾತ್ರವಲ್ಲದೆ ಟಿಪ್ಪು ವಕ್ಫ್‌ ಎಸ್ಟೇಟ್‌ ಕೂಡ ಗುಲಾಂ ಅಲಿಖಾನ್‌ ಗುಂಬಸ್‌ ಸ್ಮಾರಕವನ್ನು ನಿರ್ಲಕ್ಷಿಸಿವೆ. ಯಾವ ಇಲಾಖೆಯೂ ಇದನ್ನು ‘ಸ್ಮಾರಕ’ ಎಂದು ಇದುವರೆಗೆ ಪರಿಗಣಿಸಿಯೇ ಇಲ್ಲ. ಹಾಗಾಗಿ ಅಪರೂಪದ ರಚನೆಯಿಂದ ಕೂಡಿರುವ, 225 ವರ್ಷಗಳಿಂದ ಐತಿಹಾಸಿಕ ಮಹತ್ವದ ಘಟನಾವಳಿಗಳಿಗೆ ಸಾಕ್ಷಿಯಾಗಿರುವ ಬೃಹತ್‌ ಸ್ಮಾರಕ ಅಕ್ಷರಶಃ ಪಾಳು ಬಿದ್ದಿದೆ. ಅದರ ಒಳಗೆ ಕಾಡು ಪಾರಿವಾಳಗಳು ಮತ್ತು ಬಾವಲಿಗಳು ಮನೆ ಮಾಡಿಕೊಂಡಿವೆ. ಗವ್ವೆನ್ನುವ ಕತ್ತಲೆಯನ್ನು ಸೀಳಿಕೊಂಡು ಒಳಗೆ ಅಡಿಯಿಟ್ಟರೆ ಸಹಿಸಲು ಅಸಾಧ್ಯವಾದ ಗಬ್ಬು ವಾಸನೆ ಮೂಗಿಗೆ ಬಡಿಯುತ್ತದೆ. ಪಕ್ಷಿಗಳ ಹಿಕ್ಕೆಗಳ ರಾಶಿ, ಮೂಳೆಗಳು, ಹಾವಿನ ಪೊರೆಗಳು ಕಾಲಿಗೆ ಎಡತಾಕುತ್ತವೆ. ಕಸದ ಮಧ್ಯೆ ಮುಚ್ಚಿ ಹೋಗಿರುವ ಗೃಹಮಂತ್ರಿ ಗುಲಾಂ ಅಲಿಖಾನನ ಗೋರಿ ಭಾಗಶಃ ವಿರೂಪಗೊಂಡಿದೆ.


‘ಟಿಪ್ಪು ಸುಲ್ತಾನ್‌ ಸುನ್ನಿ ಪಂಗಡದ ಅನುಯಾಯಿ. ಆತ ತನ್ನ ತಂದೆ ಹೈದರ್‌ ಅಲಿಖಾನ್‌ ಮತ್ತು ತಾಯಿ ಫಕ್ರುನ್ನೀಸಾ ಬೇಗಂ ಅವರಿಗಾಗಿ ಕಾವೇರಿ ನದಿ ದಡದಲ್ಲಿ ಸಮಾಧಿ ಕಟ್ಟಿಸುವ ಜವಾಬ್ದಾರಿಯನ್ನು ತನ್ನ ಗೃಹ ಸಚಿವ ಗುಲಾಂ ಅಲಿಖಾನ್‌ಗೆ ವಹಿಸಿದ್ದ. ಷಿಯಾ ಪಂಗಡಕ್ಕೆ ಸೇರಿದ್ದ ಗುಲಾಂ ಅಲಿಖಾನ್‌ ತನ್ನ ಪಂಗಡದ ಸಂಪ್ರದಾಯದಂತೆ 5 ಬಾಗಿಲುಗಳುಳ್ಳ ಗುಂಬಸ್‌ ನಿರ್ಮಿಸಿದ. ಸುನ್ನಿ ಪಂಗಡದ ಪ್ರಕಾರ ಸಮಾಧಿಯು 4 ದ್ವಾರಗಳನ್ನು ಮಾತ್ರ ಹೊಂದಿರಬೇಕು. ಹಾಗಾಗಿ ಈ ಗುಂಬಸ್‌ನ ಒಳಗೆ ತನ್ನ ತಂದೆ, ತಾಯಿಯರ ಗೋರಿ ನಿರ್ಮಿಸುವುದು ಸರಿಯಲ್ಲ ಎಂದು ಮುಲ್ಲಾಗಳು ಟಿಪ್ಪುವಿಗೆ ಹೇಳಿದರಲ್ಲದೆ ಪ್ರತ್ಯೇಕ ಸಮಾಧಿ ನಿರ್ಮಿಸುವಂತೆ ಸಲಹೆ ನೀಡಿದರು. ಧರ್ಮಭೀರುವಾಗಿದ್ದ ಟಿಪ್ಪು ಮುಲ್ಲಾಗಳ ಮಾತಿಗೆ ಓಗೊಟ್ಟು ಕಾವೇರಿ ನದಿಯ ಎಡ ಸೀಳಿನ ದಡದಲ್ಲಿ ಪ್ರತ್ಯೇಕ ಸಮಾಧಿ ನಿರ್ಮಿಸಿದ’ ಎಂದು ಸಂಶೋಧಕ ಪ್ರೊ.ಎಂ. ಕರಿಮುದ್ದೀನ್‌ ಹೇಳುತ್ತಾರೆ.

‘ಗುಲಾಂ ಅಲಿಖಾನ್‌ ಐದಾರು ವರ್ಷಗಳ ಕಾಲ ಶ್ರಮ ವಹಿಸಿ ನಿರ್ಮಿಸಿದ್ದ ಬೃಹತ್‌ ಗುಂಬಸ್‌ ಹಾಗೇ ಉಳಿಯಿತು. ಈ ಗುಂಬಸ್‌ ಮತ್ತು ಆಸುಪಾಸಿನ ಹತ್ತಾರು ಎಕರೆ ಜಾಗವನ್ನು ತಾನೇ ಖರೀಸಿದ್ದ ಗುಲಾಂ ಅಲಿ ಅಲ್ಲಿ ಸುಂದರವಾದ ತೋಟ ನಿರ್ಮಿಸಿದ್ದ. ಈಗಲೂ ಕೆಲವರು ಅದನ್ನು ‘ಗುಲಾಂ ಅಲಿ ತೋಟ’, ‘ಗುಂಬ್ಚಿ ತೋಟ’, ‘ಗುಲಾಂ ಅಲಿ ಮಖಾನ’–ಹೀಗೆ ವಿವಿಧ ಹೆಸರುಗಳಿಂದ ಕರೆಯುತ್ತಾರೆ. 1799ರಲ್ಲಿ ಶ್ರೀರಂಗಪಟ್ಟಣ ಪತನಗೊಂಡ ನಂತರ ಗುಲಾಂ ಅಲಿಖಾನ್‌ ತಮಿಳುನಾಡಿನತ್ತ ಪಲಾಯನ ಮಾಡಿದ. 30 ವರ್ಷಗಳ ಕಾಲ ಬದುಕಿದ್ದ ಆತ ಸತ್ತ ಸುದ್ದಿ ತಿಳಿದು ಆತನ ಬಂಧುಗಳು ಶವವನ್ನು ಶ್ರೀರಂಗಪಟ್ಟಣಕ್ಕೆ ತಂದು ಆತನೇ ನಿರ್ಮಿಸಿದ್ದ ಗುಂಬಸ್‌ ಒಳಗೆ, ಷಿಯಾ ಪಂಗಡದ ಇಮಾಂಗಳ ಸೂಚನೆಯಂತೆ ಗುಲಾಂ ಅಲಿಯ ದೇಹವನ್ನು ಮಣ್ಣು ಮಾಡಿದರು’ ಎಂದು ಅವರು ವಿವರಣೆ ನೀಡುತ್ತಾರೆ.

‘ಈ ಗುಂಬಸ್‌ ನಿರ್ಮಾಣದ ಹಿಂದೆ ನೂರಾರು ಜನರ ಶ್ರಮವಿದೆ. ವಿಶಿಷ್ಟ ವಾಸ್ತು ಶೈಲಿಯನ್ನೂ ಹೊಂದಿದೆ. ಹಾಗಾಗಿ ಷಿಯಾ, ಸುನ್ನಿ ಪಂಗಡ ಎಂಬ ಭೇದ ಮಾಡದೆ ಮುಂದಿನ ಪೀಳಿಗೆಗೆ ಈ ಸ್ಮಾರಕವನ್ನು ಉಳಿಸಬೇಕಾದ ಅಗತ್ಯವಿದೆ’ ಎಂದು ಪ್ರೊ.ಕರಿಮುದ್ದೀನ್‌ ಹಂಬಲ ವ್ಯಕ್ತಪಡಿಸುತ್ತಾರೆ. ಪ್ರಾಚ್ಯವಸ್ತು ಇಲಾಖೆ ಸಹಾಯಕ ಅಧಿಕಾರಿ ಎನ್‌.ಎನ್‌. ಗೌಡ ಪ್ರಕಾರ ಇದನ್ನು ಸ್ಮಾರಕ ಎಂದು ಇದುವರೆಗೆ ಪರಿಗಣಿಸಿಲ್ಲ. ‘ಗುಲಾಂ ಅಲಿಖಾನನ ಸಮಾಧಿ ಇರುವ ಗುಂಬಸ್‌ ಸ್ಮಾರಕಗಳ ಪಟ್ಟಿಯಲ್ಲಿ ಇಲ್ಲ. ಯಾವ ಕಾರಣಕ್ಕೆ ಅದನ್ನು ಸ್ಮಾರಕ ಎಂದು ಪರಿಗಣಿಸಿಲ್ಲ ಎಂಬುದು ಗೊತ್ತಿಲ್ಲ. ವಕ್ಫ್‌ ಮಂಡಳಿಗೆ ಸೇರಿರುವ ಜಮೀನಿಗೆ ಈ ಗುಮ್ಮಟ ಹೊಂದಿಕೊಂಡಿದೆ. ಹಾಗಾಗಿ ಅದರ ಬಗ್ಗೆ ನಮ್ಮ ಇಲಾಖೆ ಗಮನ ಹರಿಸಿಲ್ಲ ಎಂದು ತೋರುತ್ತದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ವರದಿ ಸಿದ್ಧಪಡಿಸಿ ಮೇಲಧಿಕಾರಿಗಳಿಗೆ ಸಲ್ಲಿಸುತ್ತೇನೆ’ ಎಂದು ಹೇಳುತ್ತಾರೆ.

‘ಗೃಹ ಸಚಿವ ಗುಲಾಂ ಅಲಿಖಾನ್‌ ನಾಲ್ಕನೇ ಆಂಗ್ಲೋ– ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್‌ಗೆ ವಿರುದ್ಧವಾಗಿ ಬ್ರಿಟಿಷರಿಗೆ ಸಹಾಯ ಮಾಡಿದ್ದ. ಮೀರ್‌ಸಾಧಕ್‌ ಜತೆಗೂಡಿ ಒಳಸಂಚು ರೂಪಿಸಿ ಟಿಪ್ಪುವಿನ ಸಾವಿಗೆ ಮತ್ತು ಮೈಸೂರು ರಾಜ್ಯದ ಅವನತಿಗೆ ಕಾರಣನಾಗಿದ್ದಾನೆ. ಈತ ಟಿಪ್ಪುಗೆ ದ್ರೋಹ ಮಾಡಿದ ಎಂಬುದಕ್ಕೆ ಸಾಕಷ್ಟು ಪುರಾವೆಗಳೂ ಇವೆ. ಈ ಕಾರಣದಿಂದಲೇ ಟಿಪ್ಪು ಸುಲ್ತಾನ್‌ ವಕ್ಫ್‌ ಎಸ್ಟೇಟ್‌ ಗುಲಾಂ ಅಲಿಯ ಸ್ಮಾರಕವನ್ನು ಕಡೆಗಣಿಸಿದೆ’ ಎನ್ನುವುದು ಟಿಪ್ಪು ವಕ್ಫ್‌ ಎಸ್ಟೇಟ್‌ ಕಾರ್ಯದರ್ಶಿ ಇರ್ಫಾನ್‌ ಮಾತು.

ಇಂಡೋ–ಇಸ್ಲಾಮಿಕ್‌ ಶೈಲಿ: ಗುಲಾಂ ಅಲಿಖಾನ್‌ ಗುಂಬ್ಚಿ ಕಾವೇರಿ ನದಿಯ ಬಲ ಸೀಳಿನ ದಡದಲ್ಲಿ ನಿರ್ಮಾಣಗೊಂಡಿದ್ದು, ಸ್ಮಾರಕದ ಸುತ್ತ ಎರಡೂವರೆ ಅಡಿ ಚಚ್ಚೌಕಾಕಾರದ ಜಗತಿ ಇದೆ. ಅದರ ಮಧ್ಯೆ 36 ಕಂಬಗಳ ಗುಂಬಸ್‌ ನಿರ್ಮಿಸಲಾಗಿತ್ತು ಎಂಬುದಕ್ಕೆ ಕುರುಹುಗಳಿದ್ದು, ಈಗ 20 ಕಂಬಗಳು ಮಾತ್ರ ಉಳಿದಿವೆ. ಗುಂಬಸ್‌ನ ಮಧ್ಯ ಭಾಗದಲ್ಲಿ ಎತ್ತರವಾದ ಗುಮ್ಮಟವಿದೆ. ಗೋಲಾಕಾರದಲ್ಲಿ ನಿರ್ಮಿಸಿರುವ ಈ ಗುಮ್ಮಟದ ತುತ್ತ ತುದಿಯಲ್ಲಿ ಕಳಶದ ಮಾದರಿಯಿದೆ. ಗುಮ್ಮಟದ ನಾಲ್ಕೂ ದಿಕ್ಕುಗಳಲ್ಲಿ ಸಣ್ಣ ಗಾತ್ರದ ಎಂಟು ಗೋಲಗಳನ್ನು ನಿರ್ಮಿಸಲಾಗಿದ್ದು, ಕೆಲವು ಕುಸಿದು ಬಿದ್ದಿವೆ.

ಉಳಿದ ಗೋಲಗಳ ಸುತ್ತಲೂ ಕುಸುರಿ ಕೆತ್ತನೆ ಕಂಡು ಬರುತ್ತದೆ. ಮಣ್ಣಿನ ಇಟ್ಟಿಗೆ, ಕಲ್ಲು ಮತ್ತು ಚುರುಕಿ ಗಾರೆ (ಸಿಮೆಂಟ್‌, ಸುಟ್ಟ ಇಟ್ಟಿಗೆ ಚೂರು ಮತ್ತು ಮರ ವಜ್ರದ ಮಿಶ್ರಣ) ಬಳಸಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ. ಇದರ ಐದೂ ದ್ವಾರಗಳಿಗೆ ಕಲ್ಲುಗಳನ್ನು ಅಳವಡಿಸಲಾಗಿದೆ. ಗುಮ್ಮಟದ ಒಳ ಮಧ್ಯೆ ಇಸ್ಲಾಮಿಕ್‌ ಶೈಲಿಯ ಕಮಾನು ಇತರ ರಚನೆಗಳಿದ್ದು, ನಿರ್ವಹಣೆ ಕೊರತೆಯಿಂದ ಅದರ ನೈಜ ಸೌಂದರ್ಯ ಮಸುಕಾಗಿವೆ.

ಸ್ಥಳೀಯರ ಬಾಯಲ್ಲಿ ‘ಗುಂಬ್ಚಿ’ ಎಂದು ಕರೆಸಿಕೊಳ್ಳುವ ಗುಲಾಂ ಅಲಿಖಾನ್‌ ಗುಂಬಸ್‌ ಕೃಷಿ ಜಮೀನಿನ ಮಧ್ಯೆ ಇದೆ. ಅದರ ಬಳಿ ಇತರರು ಹೋಗದಂತೆ ಮುಖ್ಯ ದ್ವಾರಕ್ಕೆ ಸದಾ ಕಾಲ ಬೀಗ ಹಾಕಲಾಗಿರುತ್ತದೆ. ಈ ಸ್ಮಾರಕವನ್ನು ಹತ್ತಿರದಿಂದ ನೋಡಬೇಕಾದರೆ ಜಮೀನು ಮಾಲೀಕರ ಅನುಮತಿ ಪಡೆಯಬೇಕು. ಅನುಮತಿ ಸಿಗದವರು ಈ ಬೃಹತ್‌ ಗುಂಬಸ್‌ ಅನ್ನು ಫರ್ಲಾಂಗು ದೂರದಿಂದ ಕಣ್ತುಂಬಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT