ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯಪುಸ್ತಕ ಗೊಂದಲ ಸ್ಪಷ್ಟ ನಿಲುವು ಅಗತ್ಯ

Last Updated 12 ಡಿಸೆಂಬರ್ 2016, 20:32 IST
ಅಕ್ಷರ ಗಾತ್ರ

ಶೈಕ್ಷಣಿಕ ವರ್ಷದ ಆರಂಭದಲ್ಲಿ ಪಠ್ಯಪುಸ್ತಕಗಳ ಕೊರತೆ ತಲೆದೋರುವುದು ರೂಢಿ. ಆದರೆ, ಮುಂದಿನ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಯಾವ ಪಠ್ಯಪುಸ್ತಕಗಳು ಇರಬೇಕು ಎನ್ನುವ ಬಗ್ಗೆಯೇ ಸರ್ಕಾರ ಗೊಂದಲ ಸೃಷ್ಟಿಸಿಕೊಂಡಿದೆ. ಪಠ್ಯಪುಸ್ತಕಗಳ ಪರಿಷ್ಕರಣಾ ಸಮಿತಿಯ ವರದಿ ವಿಳಂಬದ ಕಾರಣ ನೀಡಿ, ಮುಂದಿನ ಶೈಕ್ಷಣಿಕ ವರ್ಷದಲ್ಲೂ ಈಗಿರುವ ಪಠ್ಯಪುಸ್ತಕಗಳನ್ನೇ ಮುಂದುವರಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಬೆಳಗಾವಿ ಅಧಿವೇಶನದಲ್ಲಿ ಹೇಳಿದ್ದರು.

ಈಗ, ‘ವರದಿ ಕೈಸೇರಿದ ನಂತರ ಪರಿಶೀಲಿಸಿ ಮುಂದಿನ ವರ್ಷ ಯಾವ ಪಠ್ಯಕ್ರಮ ಇರಬೇಕು ಎನ್ನುವುದನ್ನು ತೀರ್ಮಾನಿಸಲಾಗುವುದು’ ಎಂದು ಹೊಸ ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ, ‘ವರದಿಯ ವಿಳಂಬಕ್ಕೆ ಶಿಕ್ಷಣ ಇಲಾಖೆಯೇ ಕಾರಣ’ ಎಂದು ಪರಿಷ್ಕರಣಾ ಸಮಿತಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

‘ಈ ಕೆಲಸಕ್ಕೆ ನಿಯೋಜನೆಯಾಗಿದ್ದ ಸಿಬ್ಬಂದಿಗೆ ಬೇರೆ ಜವಾಬ್ದಾರಿ ವಹಿಸಿದ್ದರಿಂದ ಪರಿಷ್ಕೃತ ಅಂತಿಮ ಪ್ರತಿಗಳನ್ನು ನೀಡುವುದು ವಿಳಂಬ ಆಗುತ್ತಿದೆ’ ಎನ್ನುವುದು ಅವರ ದೂರು. ಈ ಹೇಳಿಕೆ – ಪ್ರತಿ ಹೇಳಿಕೆಗಳನ್ನು ಗಮನಿಸಿದರೆ, ಪರಿಷ್ಕರಣಾ ಸಮಿತಿ ಹಾಗೂ ಸರ್ಕಾರದ ನಡುವೆ ಸಮನ್ವಯದ ಕೊರತೆ ಇರುವಂತಿದೆ. ಕೂತು ಚರ್ಚಿಸಿ ಸ್ಪಷ್ಟಪಡಿಸಿಕೊಳ್ಳಬೇಕಾದ ಸಂಗತಿ ಗೊಂದಲವಾಗಿ ರೂಪುಗೊಂಡಿದೆ.

ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡುವ ಮುನ್ನ, ಇದು ಸರ್ಕಾರವೇ ನೇಮಿಸಿದ ಸಮಿತಿ ಎನ್ನುವುದನ್ನು ಶಿಕ್ಷಣ ಸಚಿವರು ನೆನಪಿನಲ್ಲಿಡಬೇಕಾಗಿದೆ. 1ರಿಂದ 10ನೇ ತರಗತಿಯವರೆಗಿನ ಪಠ್ಯಪುಸ್ತಕಗಳಲ್ಲಿ ಅನೇಕ ಲೋಪದೋಷಗಳಿವೆ ಎನ್ನುವ ದೂರುಗಳು ವ್ಯಕ್ತವಾಗಿದ್ದವು. ಧರ್ಮ, ಜಾತಿ, ಸಿದ್ಧಾಂತಗಳನ್ನು ಪಠ್ಯಗಳಲ್ಲಿ ತುರುಕಿರುವುದರ ಜೊತೆಗೆ ಲಿಂಗ ಅಸಮಾನತೆಗೆ ಪೂರಕವಾದ ಅಂಶಗಳೂ ಪಠ್ಯಗಳಲ್ಲಿರುವ ಕುರಿತು ಚರ್ಚೆಯಾಗಿತ್ತು. ಈ ಆಕ್ಷೇಪಗಳನ್ನೆಲ್ಲ ಪರಿಶೀಲಿಸಿ ಪರಿಷ್ಕೃತ ಪಠ್ಯಪುಸ್ತಕಗಳನ್ನು ನೀಡಲು ಸಮಿತಿಯನ್ನು ಸರ್ಕಾರ ರಚಿಸಿತ್ತು.

ಇದಕ್ಕಾಗಿ ಪ್ರತ್ಯೇಕ ಕಚೇರಿಯೊಂದನ್ನೂ ರೂಪಿಸಲಾಗಿತ್ತು. ಈಗ ಸಮಿತಿಯ ಅಂತಿಮ ವರದಿ ಸಲ್ಲಿಕೆ ಆಗಬೇಕಿರುವ ಸಂದರ್ಭದಲ್ಲಿ ಅನಗತ್ಯ ಚರ್ಚೆ ಶುರುವಾಗಿದೆ. ವರದಿಯನ್ನು ಶೀಘ್ರ ಸಲ್ಲಿಸುವಂತೆ ಒತ್ತಾಯಿಸಲು ಸರ್ಕಾರಕ್ಕೆ ಹಕ್ಕಿದೆ. ವರದಿಯ ಬಗ್ಗೆ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳಬೇಕಾದ ಹೊಣೆಗಾರಿಕೆಯೂ ಸರ್ಕಾರದ್ದಾಗಿದೆ. ಆದರೆ, ವರದಿ ಸಲ್ಲಿಸಲು ಅನುವಾಗುವಂತೆ ಸಮಿತಿಗೆ ಸೂಕ್ತ ಸವಲತ್ತುಗಳನ್ನು ಒದಗಿಸಿಕೊಡಬೇಕಾಗಿದೆ.

‘ಡಿಟಿಪಿ, ಕಾಗುಣಿತ ದೋಷ ತಿದ್ದುವುದು, ಪುಟ ವಿನ್ಯಾಸ, ಚಿತ್ರಗಳನ್ನು ಅಳವಡಿಸುವುದು ಸೇರಿದಂತೆ ಮುದ್ರಣಕಾರರು ಮಾಡಬೇಕಾದ ಎಲ್ಲ ಕೆಲಸಗಳನ್ನು ಸಮಿತಿ ಮಾಡುತ್ತಿದೆ’ ಎನ್ನುವ ಬರಗೂರರ ಮಾತುಗಳನ್ನು ಗಮನಿಸಿದರೆ, ಸಮಿತಿಯ ಮೇಲೆ ಹೆಚ್ಚಿನ ಕಾರ್ಯ ಒತ್ತಡ ಇರುವಂತಿದೆ. ಇಂಥ ಸಮಯದಲ್ಲಿ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಬೇಕೇ ಹೊರತು, ಇರುವ ಸಿಬ್ಬಂದಿಯನ್ನು ಬೇರೆಡೆಗೆ ನಿಯೋಜಿಸುವುದು ಸರಿಯಲ್ಲ.

ಸವಲತ್ತುಗಳನ್ನು ಕಲ್ಪಿಸಿಕೊಡದೆಯೇ ವರದಿ ವಿಳಂಬವಾಗುತ್ತಿದೆ ಎಂದು ಹೇಳುವುದು ಜವಾಬ್ದಾರಿಯುತ ಸರ್ಕಾರಕ್ಕೆ ಶೋಭೆ ತರುವಂತಹದ್ದೂ ಅಲ್ಲ. ಪರಿಷ್ಕೃತ ಪಠ್ಯಪುಸ್ತಕಗಳು ಸಿದ್ಧವಾಗಿವೆ ಎಂದು ಸಮಿತಿ ಹೇಳುತ್ತಿರುವಾಗ, ಅವುಗಳನ್ನು ಜಾರಿಗೆ ತರುವ ಬಗೆಗಿನ ಅನಿಶ್ಚಯ, ಶಿಕ್ಷಣ ನೀತಿಯ ಬಗ್ಗೆ ಸರ್ಕಾರದ ಸ್ಪಷ್ಟ ನಿಲುವಿನ ಅಭಾವವನ್ನು ಸೂಚಿಸುತ್ತದೆ.

ಪಠ್ಯಪುಸ್ತಕ ಪರಿಷ್ಕರಣೆಯ ಭಾಗವಾಗಿ, ಎನ್‌ಸಿಇಆರ್‌ಟಿ ಮುದ್ರಿಸುವ 9 ಮತ್ತು 10ನೇ ತರಗತಿಗಳ ಸಿಬಿಎಸ್‌ಇ ಪಠ್ಯವನ್ನು ಕನ್ನಡಕ್ಕೆ ಭಾಷಾಂತರ ಮಾಡಲು ಸರ್ಕಾರ ಮುಂದಾಗಿದೆ. ರಾಷ್ಟ್ರದಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಲು ಏಕರೂಪ ಶಿಕ್ಷಣ ಸಾಕಾರಗೊಳ್ಳುವುದು ಅಗತ್ಯ. ಹೀಗಾಗಿ ಕನ್ನಡದ ಮಕ್ಕಳು ವೃತ್ತಿಪರ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ತೊಡಗಿಕೊಳ್ಳಲು ಸಿಬಿಎಸ್‌ಇ ಪಠ್ಯದ ಕನ್ನಡೀಕರಣ ಅನುಕೂಲಕರ. ಆದರೆ, ಪಠ್ಯದ ‘ಯಥಾವತ್‌ ಅನುವಾದ’ದ ಬಗ್ಗೆ ಸರ್ಕಾರ ಮತ್ತೊಮ್ಮೆ ಯೋಚಿಸಬೇಕಿದೆ.

ಪಠ್ಯಗಳಲ್ಲಿ ಸ್ಥಳೀಯತೆಯನ್ನು ಉಳಿಸಿಕೊಳ್ಳುವ ಅವಕಾಶವನ್ನು ‘ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು’ (ಎನ್‌ಸಿಎಫ್‌) ನೀಡಿದೆ. ಸಮಾಜ ವಿಜ್ಞಾನ, ಇತಿಹಾಸದಂತಹ ಪಠ್ಯಗಳಲ್ಲಿ  ಪ್ರಾದೇಶಿಕ ಅಸ್ಮಿತೆ ಉಳಿಸಿಕೊಳ್ಳಲು ಸಾಧ್ಯವಿದೆ. ಹೀಗಾಗಿ ಏಕರೂಪ ಶಿಕ್ಷಣ ಕ್ರಮಕ್ಕೆ ಅಗತ್ಯವಾದ ಪಠ್ಯಗಳನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಪಠ್ಯಗಳ ಭಾಷಾಂತರ ಸೃಜನಶೀಲವಾಗಬೇಕಿದೆ. ಸದ್ಯಕ್ಕೆ, ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಹಳೆಯ ಪಠ್ಯಪುಸ್ತಕಗಳು ಮುಂದುವರೆಯುತ್ತವೆಯೇ ಇಲ್ಲವೇ ಎನ್ನುವುದನ್ನು ಸರ್ಕಾರ ಮೊದಲು ಖಚಿತಪಡಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಸಹಕಾರವೂ ಅಗತ್ಯ. ಇದು ಪರಸ್ಪರ ಚರ್ಚೆ ಹಾಗೂ ಸಮನ್ವಯದ ಮೂಲಕ ಆಗಬೇಕಿರುವ ಕೆಲಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT