ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರರ ಹರೆಯದ ಯುವಿಸಿಇ ಭವಿಷ್ಯ ಅಡಕತ್ತರಿಯಲ್ಲಿ

ನಗರದ ಮೊದಲ ಎಂಜಿನಿಯರಿಂಗ್‌ ಕಾಲೇಜಿಗೆ ವಿಶ್ವವಿದ್ಯಾಲಯ ವಿಭಜನೆ ತಂದ ಇಕ್ಕಟ್ಟು l ಪ್ರಾಧ್ಯಾಪಕರು– ವಿದ್ಯಾರ್ಥಿಗಳಲ್ಲಿ ಆತಂಕ
Last Updated 12 ಡಿಸೆಂಬರ್ 2016, 20:03 IST
ಅಕ್ಷರ ಗಾತ್ರ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ವಿಭಜನೆ ಅಡಿಯಲ್ಲಿ ಸರ್ಕಾರ ಈಗಾಗಲೇ ವಿ.ವಿ ಆಸ್ತಿಗಳ ಹಂಚಿಕೆ ಪ್ರಕ್ರಿಯೆಗೆ ಚಾಲನೆ ನೀಡಿದೆ. ಆದರೆ, ಶತಮಾನೋತ್ಸವ ಸಂಭ್ರಮದಲ್ಲಿರುವ  ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ (ಯುವಿಸಿಇ) ಭವಿಷ್ಯ ಮಾತ್ರ ಅಡಕತ್ತರಿಯಲ್ಲಿ ಸಿಲುಕಿದೆ.
 
ಬೆಂಗಳೂರು ವಿ.ವಿ ಅಧಿಕಾರಿಗಳು ಮತ್ತು ವಿಭಜನೆ ಸಮಿತಿ ಸದಸ್ಯರು ಮೂರರಲ್ಲಿ ಒಂದು ವಿ.ವಿ ಅಡಿಯಲ್ಲಿ ಯುವಿಸಿಇ ಕಾರ್ಯನಿರ್ವಹಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಯುವಿಸಿಇ ಅಧಿಕಾರಿಗಳು ಮಾತ್ರ ಸ್ವಾಯತ್ತ ಸಂಸ್ಥೆಯಾಗಬೇಕೆಂದು ಬಯಸಿದ್ದಾರೆ.  
 
ಸೆಂಟ್ರಲ್‌ ಕಾಲೇಜು ಆವರಣದಲ್ಲಿರುವ ಯುವಿಸಿಇ ಯನ್ನು ಜ್ಞಾನಭಾರತಿ ಆವರಣಕ್ಕೆ ಸ್ಥಳಾಂತರಿಸುವ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ.
 
‘ವಿಶ್ವೇಶ್ವರಯ್ಯ ಅವರ ಕನಸಿನಂತೆ ಈ ಕಾಲೇಜನ್ನು ನಿರ್ಮಿಸಲಾಗಿದೆ. ಇದನ್ನು ಸ್ಥಳಾಂತರಿಸುವುದು ಸರಿಯಲ್ಲ. ಶತಮಾನೋತ್ಸವ ಆಚರಣೆ ಹೊಸ್ತಿಲಲ್ಲಿ ಇರುವ ಕಾಲೇಜನ್ನು ಜ್ಞಾನಭಾರತಿ ಆವರಣಕ್ಕೆ ಸ್ಥಳಾಂತರಿಸುವ ಬದಲು ಅಲ್ಲಿಯೇ ಹೊಸ ಕಾಲೇಜನ್ನು ಸ್ಥಾಪಿಸಲಿ’ ಎನ್ನುವುದು ಕಾಲೇಜು ಉಪನ್ಯಾಸಕರ ಅಭಿಪ್ರಾಯ.
 
‘ಯುವಿಸಿಇಯಲ್ಲಿ ಒಟ್ಟು 4,500 ವಿದ್ಯಾರ್ಥಿಗಳಿದ್ದಾರೆ. ಪ್ರಯೋಗಾಲಯದ ಉಪಕರಣಗಳು ನೂರು ವರ್ಷಗಳಷ್ಟು ಹಳೆಯದಾಗಿವೆ. ಅವುಗಳನ್ನೆಲ್ಲ ಸ್ಥಳಾಂತರಿಸಲು ಹೋದರೆ ಹಾಳಾಗುತ್ತವೆ. ಕೆಲವರಷ್ಟೇ ಜ್ಞಾನಭಾರತಿ ಆವರಣಕ್ಕೆ ವರ್ಗಾವಣೆ ಆಗಬೇಕು ಎನ್ನುವ ಇಂಗಿತ ವ್ಯಕ್ತಪಡಿಸಿದ್ದಾರೆ’ ಎಂದು ಕಾಲೇಜಿನ ಹಿರಿಯ ಪ್ರಾಧ್ಯಾಪಕರೊಬ್ಬರು ಹೇಳಿದರು.
 
‘2017ರಲ್ಲಿ ಶತಮಾನೋತ್ಸವ ಆಚರಿಸಿಕೊಳ್ಳಲಿರುವ ಯುವಿಸಿಇಗೆ ಸ್ವಾಯತ್ತತೆ ನೀಡಬೇಕು. ಶತಮಾನೋತ್ಸವ ಸಂಸ್ಥೆಯಾಗಿರುವ ನಮ್ಮ ಕಾಲೇಜಿಗೆ ಪ್ರತ್ಯೇಕ ವಿ.ವಿ ಮಾನ್ಯತೆ ನೀಡುವಂತೆ ಕೇಳುವ ಹಕ್ಕಿದೆ’ ಎಂದು ತಿಳಿಸಿದರು.
 
ತಜ್ಞರ ಸಮಿತಿ ಸದಸ್ಯರೊಬ್ಬರು ‘ಕೆ.ಆರ್‌. ವೃತ್ತದ ಬಳಿಯಿರುವ ಯುವಿಸಿಇ ಸೆಂಟ್ರಲ್‌ ಕಾಲೇಜಿಗೆ ಹತ್ತಿರದಲ್ಲಿದೆ. ಇದನ್ನು ಪರಿಗಣಿಸಿ ಕ್ಷೇತ್ರವಾರು ವಿಭಜನೆ ಪ್ರಕಾರ ಯುವಿಸಿಇ ಬೆಂಗಳೂರು ಕೇಂದ್ರ ವಿ.ವಿ. ಆಡಳಿತಕ್ಕೆ ಒಳಪಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಕಾಲೇಜಿನ ನೌಕರರಿಗೆ ವಿ.ವಿ ಆಯ್ಕೆಗೆ ಅವಕಾಶ ಒದಗಿಸಲಾಗಿದೆ’ ಎಂದು ತಿಳಿಸಿದರು.
 
ಮೆಕ್ಯಾನಿಕಲ್‌, ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯೂನಿಕೇಷನ್‌, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಿಕಲ್‌ ಅಂಡ್‌ ಎಲೆಕ್ಟ್ರಾನಿಕ್ಸ್‌ – ನಾಲ್ಕು ಎಂಜಿನಿಯರಿಂಗ್‌ ವಿಭಾಗಗಳು ಯುವಿಸಿಇ ಕ್ಯಾಂಪಸ್‌ನಲ್ಲಿವೆ. ವಾಸ್ತುಶಿಲ್ಪ ಮತ್ತು ಸಿವಿಲ್‌ ಎಂಜಿನಿಯರಿಂಗ್‌ ವಿಭಾಗಗಳು ಜ್ಞಾನಭಾರತಿ ಆವರಣದಲ್ಲಿವೆ. 
 
‘ಒಂದು ವೇಳೆ ಯುವಿಸಿಇ ಬೆಂಗಳೂರು ಕೇಂದ್ರ ವಿ.ವಿಗೆ ಸೇರಿದರೆ ಜ್ಞಾನ ಭಾರತಿ ಆವರಣದಲ್ಲಿರುವ ಎರಡು ವಿಭಾಗಗಳು ಇಲ್ಲಿಯೇ ಇರುತ್ತವೆ’ ಎಂದು ಬೆಂಗಳೂರು ವಿ.ವಿ ಕುಲಪತಿ ಪ್ರೊ. ಬಿ. ತಿಮ್ಮೇಗೌಡ ತಿಳಿಸಿದರು.
 
ವಿಶ್ವವಿದ್ಯಾಲಯ ವಿಭಜನೆ: ವಿ.ವಿ ವ್ಯಾಪ್ತಿಯಲ್ಲಿ 600ಕ್ಕೂ ಹೆಚ್ಚು ಕಾಲೇಜುಗಳು ಇದ್ದು, ಕ್ಷೇತ್ರವಾರು ತಲಾ 200 ಕಾಲೇಜುಗಳಿಗೆ ಒಂದೊಂದು ವಿವಿ ರಚಿಸಲು ನಿರ್ಧರಿಸಲಾಗಿದೆ. ಬೆಂಗಳೂರು ದಕ್ಷಿಣ, ಕೇಂದ್ರ ಮತ್ತು ಬೆಂಗಳೂರು ಉತ್ತರ ಎಂದು ವಿಶ್ವವಿದ್ಯಾಲಯಗಳಿಗೆ ನಾಮಕರಣ ಮಾಡಲು ತೀರ್ಮಾನಿಸಲಾಗಿದೆ.
 
ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಬೆಂಗಳೂರು ದಕ್ಷಿಣ ವಿ.ವಿ ಕಚೇರಿ ಕಾರ್ಯನಿರ್ವಹಿಸಲಿದೆ. ಸೆಂಟ್ರಲ್‌ ಕಾಲೇಜು ಆವರಣದಲ್ಲಿ ಬೆಂಗಳೂರು ಕೇಂದ್ರ ಮತ್ತು ಕೋಲಾರದ ಸ್ನಾತಕೋತ್ತರ ಕೇಂದ್ರದಲ್ಲಿ ಬೆಂಗಳೂರು ಉತ್ತರ ವಿ.ವಿ ಕಾರ್ಯ ನಿರ್ವಹಿಸಲಿವೆ ಎಂದು ವಿಭಜನೆ ಸಮಿತಿ ತಿಳಿಸಿದೆ.
 
 
**
ಶತಮಾನೋತ್ಸವ ಆಚರಣೆಗೆ ವಿವಿಧ ಯೋಜನೆ
‘ದೇಶದ ಹಳೆಯ ಕಾಲೇಜುಗಳು  ಈಗಾಗಲೇ ಸ್ವಾಯತ್ತತೆ ಪಡೆದಿವೆ. ನಮ್ಮ ಕಾಲೇಜು ಹೀಗೆಯೇ ಮುಂದುವರಿದರೆ ಅಭಿವೃದ್ಧಿ ಹೊಂದುವುದು ಕಷ್ಟ’ ಎಂದು ಯುವಿಸಿಇ ಪ್ರಾಂಶುಪಾಲರಾದ ಕೆ.ಆರ್‌.ವೇಣುಗೋಪಾಲ್ ಹೇಳಿದರು.
 
‘ಶತಮಾನೋತ್ಸವದ ಅಂಗವಾಗಿ ಕಾಲೇಜು ಆವರಣದಲ್ಲಿ ಶತಮಾನೋತ್ಸವ ಭವನ, ಹಾಸ್ಟೆಲ್‌ ಬ್ಲಾಕ್‌, ಮೆಟ್ರೊ ಬ್ಲಾಕ್‌, ಮೆಕ್ಯಾನಿಕಲ್‌ ಬ್ಲಾಕ್‌ ನಿರ್ಮಿಸುವ ಉದ್ದೇಶ ಹೊಂದಲಾಗಿದೆ.  ಅನುದಾನ ಬಿಡುಗಡೆಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’
 
‘ರಾಜ್ಯ ಸರ್ಕಾರದಿಂದ ₹100  ಕೋಟಿ, ಕೇಂದ್ರ ಸರ್ಕಾರದ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ (ರುಸಾ) ಯೋಜನೆ ಅಡಿಯಲ್ಲಿ ₹ 80 ಕೋಟಿ, ಹಳೆ ವಿದ್ಯಾರ್ಥಿಗಳಿಂದ ₹20 ಕೋಟಿ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ₹ 14.55 ಕೋಟಿ, ವಿಶ್ವಸಂಸ್ಥೆ ತಾಂತ್ರಿಕ ಶಿಕ್ಷಣ ಗುಣಮಟ್ಟ ಸುಧಾರಣೆ ಕಾರ್ಯಕ್ರಮದಿಂದ 68.50 ಕೋಟಿ ಒಟ್ಟು ₹ 283.05 ಕೋಟಿ ಅನುದಾನ ನಿರೀಕ್ಷಿಸಲಾಗಿದೆ’ ಎಂದು ತಿಳಿಸಿದರು. 
 
**
ಕಾರ್ಯಸೂಚಿ ಏನು?
* ಏಳು ನೂತನ ಕಟ್ಟಡಗಳ ಜತೆಗೆ ಹಳೆ ಕಟ್ಟಡ ರಿಪೇರಿ
* ವಿದ್ಯಾರ್ಥಿ ಉತ್ತೀರ್ಣ ಪ್ರಮಾಣವನ್ನು ಶೇ 100ರಷ್ಟು ಕಾಯ್ದುಕೊಳ್ಳುವುದು
* ಸಂಶೋಧನೆ ಮತ್ತು ಅಭಿವೃದ್ಧಿಗಾಗಿ 120 ವಿ.ವಿಗಳೊಂದಿಗೆ ಒಪ್ಪಂದ
* ಶಿಕ್ಷಕರಿಗೆ ತರಬೇತಿ, ಸಂಶೋಧನಾ ನಿಯಕಾಲಿಕೆಗಳನ್ನು 200ರಿಂದ 800ಕ್ಕೆ ಏರಿಕೆ
* ವಿದ್ಯಾರ್ಥಿಗಳ ಉದ್ಯೋಗಕ್ಕಾಗಿ ಕೈಗಾರಿಕೆಗಳ ಜೊತೆ ಒಪ್ಪಂದ
 
**
ಹಳೆಯ ವಿದ್ಯಾರ್ಥಿಗಳು ಏನಂತಾರೆ?
ಪಾರಂಪರಿಕ ಕಳೆ ಮರುಕಳಿಸಬೇಕು
1949ರಲ್ಲಿ ಬಿ.ಇ ಮೆಕ್ಯಾನಿಕಲ್‌ಗೆ  ಯುವಿಸಿಇಗೆ ಸೇರಿಕೊಂಡೆ. ಅಲ್ಲಿ ಓದಿದ ನಾಲ್ಕು ವರ್ಷವೂ ನನಗೆ ಉತ್ತಮ ಅನುಭವ ನೀಡಿದೆ. ನನ್ನ ಗುರುಗಳಾದ ಬಿ.ಆರ್‌. ನಾರಾಯಣ ಅಯ್ಯಂಗಾರ್, ಗೋಪಾಲಕೃಷ್ಣ, ಹಬೀಬುಲ್ಲಾ ಇವರನ್ನೆಲ್ಲ ನಾನು ಮರೆಯಲು ಸಾಧ್ಯವೇ ಇಲ್ಲ.
 
ಸಿವಿಲ್‌ ಎಂಜಿನಿಯರಿಂಗ್‌ ಓದಲು ಬೇರೆ ಬೇರೆ ರಾಜ್ಯಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದರು. ಸ್ವಾತಂತ್ರ್ಯ ಬಂದ ನಂತರ ಕೆಲ ವರ್ಷಗಳು ಸಿವಿಲ್‌ ಪ್ರಾಜೆಕ್ಟ್‌ಗಳಲ್ಲಿ ಬಹುತೇಕರು ಮೈಸೂರಿನ ಎಂಜಿನಿಯರ್‌ಗಳೇ ಇರುತ್ತಿದ್ದರು. ಯುವಿಸಿಇ ಪಾರಂಪರಿಕ ಶಿಕ್ಷಣ ಸಂಸ್ಕೃತಿಯನ್ನೇ ಕಳೆದುಕೊಂಡಿದೆ. ಅದನ್ನು ಮರುಕಳಿಸುವ ಪ್ರಯತ್ನ ಮಾಡಬೇಕು. 
–ರೊದ್ದಂ ನರಸಿಂಹ, ವಿಜ್ಞಾನಿ  
 
**
ಸ್ವಾಯತ್ತ ಸಂಸ್ಥೆ ಆಗಬೇಕು
ಯುವಿಸಿಇ ಕಾಲೇಜು ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಬಹಳಷ್ಟು ಪ್ರಮುಖರು ಈ ಕಾಲೇಜಿನಲ್ಲಿ ಓದಿದ್ದಾರೆ. ಇದೊಂದು  ಪಾರಂಪರಿಕ ತಾಣ ಎಂಬ ಭಾವನೆಯೇ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಇರಲಿಲ್ಲ. ಕಾಲೇಜನ್ನು ಹೊರಗಿನಿಂದ ನೋಡಿದರೆ ಒಳಗೆ ಹೋಗಲು ಮನಸ್ಸೇ ಬರುವುದಿಲ್ಲ. ಆ ರೀತಿ ಇದನ್ನು ಬೆಂಗಳೂರು ವಿ.ವಿ ನಿರ್ವಹಿಸುತ್ತಿದೆ. 
 
ಇದನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡಿದರೆ ನಿಜಕ್ಕೂ ಅಭಿವೃದ್ಧಿ ಕಾಣುತ್ತದೆ. ಇಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳೇ ಅಭಿವೃದ್ಧಿಗೆ ಕೈಜೋಡಿಸುತ್ತಾರೆ. ಸೆಂಟ್ರಲ್‌ ಕಾಲೇಜು ಸಹ ಪಾರಂಪರಿಕ ಕಟ್ಟಡ ಆಗಿರುವುದರಿಂದ ಅದರೊಟ್ಟಿಗೆ ಯುವಿಸಿಇ ಇದ್ದರೆ ಬಹಳ ಒಳ್ಳೆಯದು. ಯಾವುದೇ ಕಾರಣಕ್ಕೂ ಜ್ಞಾನ ಭಾರತಿ ಆವರಣಕ್ಕೆ ಸ್ಥಳಾಂತರಿಸುವುದು ಸರಿಯಲ್ಲ.
–ಪ್ರಕಾಶ್‌ ಬೆಳವಾಡಿ, ರಂಗಕರ್ಮಿ
 
**
ಯಾವ ವಿ.ವಿ ವ್ಯಾಪ್ತಿ, ಎಷ್ಟು?
ಬೆಂಗಳೂರು ವಿಶ್ವವಿದ್ಯಾಲಯ: ವಿಜಯನಗರ, ಪದ್ಮನಾಭನಗರ, ಬೊಮ್ಮನಹಳ್ಳಿ, ಆನೇಕಲ್‌, ಬೆಂಗಳೂರು ದಕ್ಷಿಣ, ಯಶವಂತಪುರ, ರಾಜರಾಜೇಶ್ವರಿನಗರ, ದಾಸರಹಳ್ಳಿ, ಮಹಾಲಕ್ಷ್ಮಿ ಬಡಾವಣೆ ಮತ್ತು ಗೋವಿಂದರಾಜನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ರಾಮನಗರ ಜಿಲ್ಲೆಯ ಮಾಗಡಿ, ರಾಮನಗರ, ಕನಕಪುರ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ.
 
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ: ಬೆಂಗಳೂರಿನ ಶಾಂತಿನಗರ, ಬ್ಯಾಟರಾಯನಪುರ, ಯಲಹಂಕ, ಮಲ್ಲೇಶ್ವರ, ಹೆಬ್ಬಾಳ, ಶಿವಾಜಿನಗರ, ಗಾಂಧಿನಗರ,  ಬಸವನಗುಡಿ, ಬಿಟಿಎಂ ಲೇಔಟ್‌, ಜಯನಗರ ಮತ್ತು ರಾಜಾಜಿನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ.
 
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ: ಶ್ರೀನಿವಾಸಪುರ, ಮುಳಬಾಗಿಲು, ಕೋಲಾರ ಚಿನ್ನದ ಗಣಿ, ಬಂಗಾರಪೇಟೆ, ಕೋಲಾರ, ಮಾಲೂರು ಮತ್ತು ಕೋಲಾರ ಸ್ನಾತಕೋತ್ತರ ಕೇಂದ್ರ, ಬೆಂಗಳೂರು ಜಿಲ್ಲೆಯ ಕೆ.ಆರ್‌.ಪುರ, ಪುಲಕೇಶಿನಗರ, ಸರ್ವಜ್ಞನಗರ, ಸಿ.ವಿ. ರಾಮನ್‌ನಗರ ಮತ್ತು ಮಹಾದೇವಪುರ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಮತ್ತು ಚಿಂತಾಮಣಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ಹೊಸಕೋಟೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ
(ವಿ.ವಿ ವಿಭಜನಾ ಮಸೂದೆಯಲ್ಲಿ ಪ್ರಸ್ತಾಪಿಸಿದಂತೆ)
 
**
ಯುವಿಸಿಇ ಇತಿಹಾಸದತ್ತ ನೋಟ
ರಾಜ್ಯದಲ್ಲಿ ಎಂಜಿನಿಯರ್‌ಗಳ ಬೇಡಿಕೆಗಳನ್ನು ಪೂರೈಸಲು ಮೈಸೂರು ಸರ್ಕಾರ 1913ರಲ್ಲಿ ನಗರದ ಕೆ.ಆರ್‌.ವೃತ್ತದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಶಾಲೆ ಪ್ರಾರಂಭಿಸಿತು. ಎಸ್‌.ವಿ.ಶೆಟ್ಟಿ ಅದರ ಅಧೀಕ್ಷಕರಾಗಿದ್ದರು. ದಿವಾನರಾಗಿದ್ದ ಸರ್‌ ಎಂ. ವಿಶ್ವೇಶ್ವರಯ್ಯ ಅವರ ಪ್ರಸ್ತಾವದಂತೆ 1917ರಲ್ಲಿ ಅದನ್ನು ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಎಂದು ನಾಮಕರಣ ಮಾಡಲಾಯಿತು. ಆಗ ಸಿವಿಲ್‌ ಮತ್ತು ಮೆಕ್ಯಾನಿಕಲ್‌ ಎಂಜಿನಿಯರಿಂಗ್ ವಿಭಾಗ ಮಾತ್ರ ಇತ್ತು.  
 
ಕೆ.ಆರ್‌.ಎಸ್‌ ಜಲಾಶಯ ನಿರ್ಮಾಣದಲ್ಲಿ ಮುಖ್ಯ ಎಂಜಿನಿಯರ್ ಆಗಿದ್ದ ಕೆ.ಆರ್‌. ಶೇಷಾಚಾರ್ ಅವರು ಯುವಿಸಿಇ ಮೊದಲ ಪ್ರಾಂಶುಪಾಲರಾಗಿದ್ದರು. 1924ರಲ್ಲಿ ಮೂರನೇ ವಿಭಾಗವಾಗಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಆರಂಭಿಸಲಾಯಿತು. ಆ ಮೂಲಕ ಮೈಸೂರು ವಿಶ್ವವಿದ್ಯಾಲಯ ದೇಶದಲ್ಲಿಯೇ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ಗೆ ಪ್ರತ್ಯೇಕ ವಿಭಾಗ ಹೊಂದಿದ ಮೊದಲ ವಿಶ್ವವಿದ್ಯಾಲಯ ಎಂಬ ಹೆಮ್ಮೆಗೆ ಭಾಜನವಾಯಿತು.
 
1947ರಲ್ಲಿ ಎಂಜಿನಿಯರಿಂಗ್‌ ಕಾಲೇಜಿಗಾಗಿಯೇ ಪ್ರತ್ಯೇಕವಾಗಿ ಒಕ್ಕೂಟ  ಸ್ಥಾಪಿಸಲಾಯಿತು. 1949ರಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ರಚಿಸಲಾಯಿತು. ಪ್ರೊ. ಸಿ. ಗೋಪಾಲಕೃಷ್ಣ ಅದರ ಅಧ್ಯಕ್ಷರಾಗಿದ್ದರು.
 
**
ಬಹುತೇಕ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಯುವಿಸಿಇ ಸ್ಥಳಾಂತರಿಸುವುದು ಬೇಡ ಎಂದು ಸಹಿ ಮಾಡಿದ್ದಾರೆ. ಇದನ್ನೇ ತಜ್ಞರ ಸಮಿತಿಗೆ ನೀಡಿದ್ದೇವೆ
–ಪ್ರೊ. ಕೆ.ಆರ್‌. ವೇಣುಗೋಪಾಲ್
ಯುವಿಸಿಇ ಪ್ರಾಂಶುಪಾಲ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT