ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗು ನಗುತಾ ನಲಿ ನಲಿ

Last Updated 13 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ನಗು ಎನ್ನುವುದು ಸರ್ವ ಕಾಯಿಲೆಗೂ ಔಷಧವಿದ್ದಂತೆ. ಎಂತಹವರನ್ನಾದರೂ ತನ್ನೆಡೆಗೆ ಸೆಳೆಯುವ ಸಾಮರ್ಥ್ಯ ನಗುವಿಗಿದೆ. ‘ನಗು ನಗುತ್ತಾ ನೂರು ವರ್ಷ ಬಾಳಿ’ ಎನ್ನುವ ನಮ್ಮ ಹಿರಿಯರ ಆಶೀರ್ವಾದ ಎಷ್ಟು ಅರ್ಥಪೂರ್ಣವಾಗಿದೆಯಲ್ಲವೇ? ಸ್ನಾಯುಗಳ ಚಲನೆಯಿಂದ ಮುಖದಲ್ಲಿ ವ್ಯಕ್ತವಾಗುವ ಸುಂದರವಾದ ಭಾವನೆಯೇ ನಗು.

ನಗುವಿನಂತೆಯೇ ಮನುಷ್ಯ ಇನ್ನೂ ಹಲವಾರು ಭಾವನೆಗಳ ಮೂಟೆಗಳನ್ನು ಹೊತ್ತಿದ್ದಾನೆ. ಈ ಮೂಟೆಗಳಲ್ಲಿ ನಗುವಿನ ಚೀಲದ ಬಾಯನ್ನು ತೆರೆದಿಟ್ಟರೆ ಸಾಕು. ಬೇಡದ ಭಾವನೆಗಳೂ ಹಾಗೂ ಅದರಿಂದುಂಟಾಗುವ ದುಷ್ಪರಿಣಾಮಗಳು ತನ್ನಿಂದ ತಾನೇ ಬಾಯನ್ನು ಹೊಲಿದುಕೊಳ್ಳುತ್ತವೆ. ದಾರಿಯಲ್ಲಿ ನೆಡೆದು ಹೋಗುತ್ತಿರುವಾಗ, ಪರಿಚಯವಿರುವವರು ನಕ್ಕು ಮಾತನಾಡಿಸುವುದು ಸಹಜ. ಅದೇ ದಾರಿಯಲ್ಲಿ ಪರಿಚಯವೇ ಇಲ್ಲದವರೊಬ್ಬರು ಮುಗುಳ್ನಗೆ ಬೀರಿದಾಗ, ಆಗುವ ಭಾವನೆಯೇ ಬೇರೆ.

ಅಚ್ಚರಿಯಾದರೂ ನಮ್ಮ ಅಧರದಂಚಿನಲ್ಲಿ ಕಿರುನಗು ಮೂಡುತ್ತದೆ. ಈ ಹೊಸ ಭಾವನೆಯ ಉದಯ ನಮ್ಮಿಂದಲೇ ಆದರೆ ಎಷ್ಟು ಚೆನ್ನವಲ್ಲವೇ? ನೆಮ್ಮದಿಯ ಜೀವನಕ್ಕೆ ಸುಂದರವಾದ, ಸರಳವಾದ ವಿಧಾನವೆಂದರೆ ನಗು. ಹೌದು! ಬೆಳಗ್ಗೆ ಎದ್ದ ಕೂಡಲೇ ಕನ್ನಡಿಯಲ್ಲಿ ಮುಖವನ್ನು ನೋಡಿಕೊಳ್ಳುತ್ತಾ ಒಮ್ಮೆ ನಿಮ್ಮೆಡೆಗೆ ನೀವೇ ಮುಗುಳ್ನಗಿ.

ನಂತರ ಆಗುವ ಪರಿಣಾಮವೇ ಬೇರೆ. ನಗು ನಗುತ್ತಾ ನಿಮ್ಮ ದಿನದ ಖಾತೆಯನ್ನು ತೆರೆಯಿರಿ. ಆ ಒಂದು ಮುಗುಳ್ನಗೆಯ ನೆನಪು ಬಡ್ಡಿ ಹಾಗೂ ಚಕ್ರಬಡ್ಡಿಯ ರೂಪದಲ್ಲಿ ನಿಮ್ಮ ಇಡೀ ದಿನವನ್ನು ಸಂತೋಷದಾಯಕವನ್ನಾಗಿ ಮಾಡಬಲ್ಲದು.

ನಗುವಿನಲ್ಲಿ ಬಹಳಷ್ಟು ವಿಧಗಳಿವೆ. ಮುಗುಳ್ನಗು, ನಸುನಗು, ಹುಸಿನಗು, ಅಟ್ಟಹಾಸದ ನಗು, ವ್ಯಂಗ್ಯದ ನಗು, ವಿಕಟನಗು  – ಹೀಗೆ ಹಲವಾರು ರೀತಿಯ ನಗೆಯ ಬಗೆಗಳಿವೆ.

ಎಲ್ಲರ ಜೀವನವೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ನೋವು-ನಲಿವುಗಳ ವರ್ತುಲದಲ್ಲಿ ಸಿಕ್ಕಿ ಸುತ್ತುವುದೇ ಜೀವನ. ಬದುಕಿನಲ್ಲಿ ಸಂತೋಷ ಬಂದಾಗ ನಕ್ಕು ನಲಿದಾಡಿ, ದುಃಖವಾದಾಗ ಪ್ರಪಂಚವೇ ತಲೆ ಮೇಲೆ ಬಿದ್ದಿದೆಯೇನೋ ಎಂಬಂತೆ ಕೂರುವುದೇ ಜೀವನವಲ್ಲ. ದುಃಖವಾದಾಗಲೂ ಅದರಿಂದ ನಮ್ಮನ್ನು ಹೊರ ತರುವ ಶಕ್ತಿ ಇರುವುದು ನಗುವಿಗೆ ಮಾತ್ರ.

ಬೇಸರವಾದಾಗ ಹಳೆಯ ನೆನಪುಗಳನ್ನು ಹೊಕ್ಕು, ನಗುವಿನ ಕ್ಷಣಗಳನ್ನು ಹೆಕ್ಕಿ ತೆಗೆಯಿರಿ. ನಗುವಿನ ಸ್ಮರಣೆಯಿಂದಲೇ ಕಿರುದಾದ ನಗುವೊಂದು ನಮಗೆ ತಿಳಿಯದಂತೆಯೇ ಮುಖದ ಮೇಲೆ ಮೂಡುತ್ತದೆ. ಆ ನಗು ಕೃತ್ರಿಮವಾದರೂ ಸರಿ, ಮುಖದಲ್ಲಿ ಉಂಟಾಗುವ ಮಂಸಖಂಡಗಳ ಸಡಿಲತೆಯಿಂದ ಮನಸ್ಸಿನ ಕಿರಿ ಕಿರಿ ಕಡಿಮೆಯಂತೂ ಆಗುತ್ತದೆ.

ನಗು ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ! ವಿಚಿತ್ರ ಎನಿಸಬಹುದು, ಆದರೂ ನಿಜ. ಅಪರಿಚಿತರಾದರೂ ಸರಿ, ಅವರೆಡೆಗೊಂದು ನಗು ಬೀರಿ.ಗೊಂದಲಗೊಂಡಾದರೂ ಅವರು ನಿಮ್ಮೆಡೆಗೆ ಮರುನಗು ಬೀರುತ್ತಾರೆ. ಸ್ವಲ್ಪವೂ ಖರ್ಚಿಲ್ಲದೆ, ದೇಹವನ್ನೂ ಮನಸ್ಸನ್ನೂ ಆರೋಗ್ಯಯುತವಾಗಿ ಇಡುವ ಸಾಮರ್ಥ್ಯ ನಗುವಿಗಿದೆ. ನಗುವುದರಿಂದ ಮುಖದ ಸ್ನಾಯುಗಳು ಸಡಿಲಗೊಂಡು ನರಮಂಡಲವನ್ನು ಶಾಂತಸ್ಥಿತಿಗೆ ತರುತ್ತದೆ. ನಗು ಮೆದುಳಿಗೆ ಹೆಚ್ಚಿನ ಆಮ್ಲಜನಕವನ್ನು ಪೂರೈಸುತ್ತದೆ.

ಇದರಿಂದ ‘ಎಂಡಾರ್ಫಿನ್ಸ್’ ಎಂಬ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ. ಈ ‘ಎಂಡಾರ್ಫಿನ್ಸ್’ನಿಂದ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ಮತ್ತು ಖಿನ್ನತೆ ದೂರವಾಗುತ್ತದೆ. ‘ಎಂಡಾರ್ಫಿನ್ಸ್’ನ ಏರಿಕೆಯಿಂದ ಮತ್ತೊಂದು ರಾಸಾಯನಿಕವಾದ ’ಕಾರ್ಟಿಸಾಲ್’ನ ಉತ್ಪಾದನೆ ಕುಗ್ಗುತ್ತದೆ. ಒತ್ತಡಕ್ಕೊಳಗಾದಾಗ ಈ ‘ಕಾರ್ಟಿಸಾಲ್’ ಎನ್ನುವ ರಾಸಾಯನಿಕ ಹೆಚ್ಚು ಕ್ರಿಯಾಶೀಲವಾಗಿರುತ್ತದೆ. 

ಕೋಪಗೊಂಡಾಗ ನಮ್ಮ ದೇಹದಲ್ಲಿ ಬಳಕೆಯಾಗುವ ಮಾಂಸಖಂಡಗಳ ಶಕ್ತಿಗಿಂತ, ಅರ್ಧದಷ್ಟು ಮಾಂಸಖಂಡಗಳ ಉಪಯೋಗ  ನಾವು ನಕ್ಕಾಗ ಆಗುತ್ತದೆ. ಯೋಚಿಸಿ ನೋಡಿ, ಮುನಿಸು ಹಿತವೋ ಅಥವಾ ಮಂದಸ್ಮಿತವೋ?

ನಗು ಶಾಂತಿಯ ಸಂಕೇತ. ಒಬ್ಬರಿಗೊಬ್ಬರು ಪರಸ್ಪರ ಭೇಟಿಯಾದಾಗ, ಮಾತಿಗೂ ಮುಂಚೆ ಶುರುವಾಗುವುದು ನಗುವಿನ ಸಂವಾದ! ಪದಗಳಿಲ್ಲದ ಸಂಭಾಷಣೆಯೇ ನಗು.ನಗುವಿಗೆ ಭಾಷೆಯ ಹಂಗಿಲ್ಲ. ಸಂಭಾಷಣೆಗೆ ರಹದಾರಿಯೇ ಮಂದಹಾಸ. ನಗು ಮೊಗದಿಂದ ಮಾತನಾಡುವವರು ಅಪರಿಚಿತರಾದರೂ ಅವರೊಂದಿಗೆ ಗೊಂದಲ, ತಳಮಳವಿಲ್ಲದೆ ಮಾತನಾಡಬಹುದು.

ಅದೇ ಗಂಭೀರ ಪ್ರವೃತ್ತಿಯುಳ್ಳವರು ಪರಿಚಿತರೇ ಆದರೂ ಅವರೊಂದಿಗೆ ಸಲೀಸಾಗಿ ಮಾತುಕತೆ ಸಾಧ್ಯವಿಲ್ಲ. ಒಂದು ಸಣ್ಣ ಮಂದಹಾಸದಿಂದ ಎಂತಹ ದ್ವೇಷವನ್ನಾದರೂ ಹತ್ತಿಕ್ಕಬಹುದು. ಮನಸ್ಸು ಅಶಾಂತಿಯ ಗೂಡಾಗಿದ್ದಾಗ, ನಮ್ಮಲ್ಲಿ ನಗೆಯ ಬುಗ್ಗೆಯನ್ನುಕ್ಕಿಸಿ ಮನಸ್ಸಿಗೆ ನೆಮ್ಮದಿ ತಂದುಕೊಟ್ಟವರು ಪ್ರಮುಖರಾಗುತ್ತಾರೆ. ಅಲ್ಲಿ ಬೇಸರದ ಕಾರಣ ಗಣನೆಗೆ ಬರುವುದಿಲ್ಲ. ಎಂತಹ ನೋವನ್ನಾದರೂ ಮರೆಸುವ ಶಕ್ತಿ ಒಂದು ಸಣ್ಣ ನಗುವಿಗಿದೆ. ಮತ್ತೊಬ್ಬರ ಮುಖದಲ್ಲಿ ಮಂದಹಾಸ ಮೂಡಿಸುವುದು ಸುಲಭವಲ್ಲ.

ಬೇರೊಬ್ಬರನ್ನು ಅಳಿಸಿದಷ್ಟು ಬೇಗ ನಗಿಸಲು ಸಾಧ್ಯವಿಲ್ಲ. ತುಟಿಯಂಚಿನಲ್ಲಿ ಮೂಡುವ ಸಣ್ಣ ತಿರುವಿಗೆ ಮಂಕುತನವನ್ನು ತೊಲಗಿಸಿ ಉಲ್ಲಾಸದಾಯಕವನ್ನಾಗಿ ಮಾಡುವ ಶಕ್ತಿಯಿದೆ. ನಗು ನಗುತ್ತಾ ಇರುವವರೆಲ್ಲಾ ಸದಾ ಕಾಲ ಸಂತೋಷದಿಂದಿರುತ್ತಾರೆಂದಲ್ಲ. ನಗುವಿನ ಹಿಂದಿರುವ ನೋವನ್ನು ಮರೆಮಾಚಲು ಎಷ್ಟೋ ಜನ ನಗುವಿನ ಮುಖವಾಡವನ್ನು ಹಾಕಿಕೊಂಡಿರುತ್ತಾರೆ.

ತಮ್ಮ ನೋವಿನ ಬಾಧೆ ಬೇರೆಯವರಿಗೆ ತಟ್ಟದಂತೆ ನೋಡಿಕೊಳ್ಳುವುದು ಅವರ ಉದ್ದೇಶ. ಒಬ್ಬ ವ್ಯಕ್ತಿಯ ಮುಖದಲ್ಲಿ ಮಂದಹಾಸ ಮೂಡಿಸಿದರೆ, ಅದು ಆತನ ಸದ್ಯದ ಪ್ರಾಪಂಚಿಕ ಸ್ಥಿತಿಯನ್ನೇ ಬದಲಾಯಿಸಿ ಬಿಡುತ್ತದೆ. ನಿಮ್ಮ ನಗುವಿನಿಂದ ಬೇರೆಯವರ ಪರಿಸ್ಥಿತಿಯನ್ನು ಬದಲಾಯಿಸಿ. ಆದರೆ ಮತ್ತೊಬ್ಬರ ಕಾರಣದಿಂದ ನಿಮ್ಮ ನಗುವನ್ನು ಮಾಸಲು ಬಿಡಬೇಡಿ.

ಮುಗುಳುನಗೆಯಿಂದ ಕೂಡಿದ ಮುಖ ಯಾವಾಗಲೂ ಸುಂದರವಾಗಿ ಕಾಣುತ್ತದೆ ಎಂಬುದನ್ನು ನೆನಪಿಡಿ. ಎಷ್ಟೇ ಸಿಂಗರಿಸಿಕೊಂಡರೂ ಮುಖದಲ್ಲಿ ಪುಟ್ಟದೊಂದು ಮಂದಹಾಸವಿಲ್ಲದಿದ್ದರೆ, ಅಲಂಕಾರ ಪೂರ್ಣವಾಗುವುದಿಲ್ಲ. ಇಂಗ್ಲಿಷ್‌ನ ನಾಣ್ನುಡಿಯೊಂದು ಹೇಳುವಂತೆ ‘ಅತಿ ಸುಂದರವಾದ ಆಭರಣವೆಂದರೆ ನಗು’. ಎಂತಹ ಕೆಟ್ಟ ಮನಃಸ್ಥಿತಿಯಾದರೂ ಅದನ್ನು ಬದಲಾಯಿಸುವ ಸಾಮರ್ಥ್ಯ ನಗುವಿಗಿದೆ.

ಸಾಮಾನ್ಯವಾಗಿ ಸಂದರ್ಭ ಯಾವುದಾದರೂ ಮನಸ್ಸಿಗೆ ಮೊದಲು ಬರುವುದು ಕೆಟ್ಟ ಆಲೋಚನೆಗಳೇ! ಮಾನವನ ಮೆದುಳು ಯಾಂತ್ರಿಕವಾಗಿ ನಕಾರಾತ್ಮಕ ಚಿಂತನೆಗಳತ್ತ ವಾಲಿಬಿಟ್ಟದೆ. ನಿತ್ಯಜೀವನದಲ್ಲಿ ಸತತ ಅಭ್ಯಾಸದಿಂದ ನಗುವನ್ನು ರೂಢಿಸಿಕೊಂಡಲ್ಲಿ, ಮನಸ್ಸು ಸಕಾರಾತ್ಮಕ ಚಿಂತನೆಗಳತ್ತ ಹೆಚ್ಚು ಒಲವು ತೋರಲು ಪ್ರಾರಂಭಿಸುತ್ತದೆ. ನೀವು ನಗುವಿನ ಉಪಯೋಗ ಮಾಡಿಕೊಳ್ಳದಿದ್ದರೆ, ಅದು ಚೆಕ್‌ಬುಕ್ ಇಲ್ಲದ ನಿಮ್ಮ ಬ್ಯಾಂಕಿನಲ್ಲಿರುವ ಹಣಕ್ಕೆ ಸಮ!

ಮನಸ್ಸಿನ ಭಾವನೆಗಳು ಯಾವುದೇ ರೂಪದಲ್ಲಿದ್ದರೂ ಅದನ್ನು ಒಳ್ಳೆಯ ಸ್ಥಿತಿಗೆ ತರಲು ಇರುವ ಸರಳ ಉಪಾಯವೆಂದರೆ ಒಂದು ನಸುನಗು. ಮುಖದ ಮೇಲಿರುವ ಹುಬ್ಬಿನ ಗಂಟನ್ನು ಸಡಿಲಿಸಿ ತುಟಿಯಂಚಿನಲ್ಲಿ ಕಿರು ನಗುವೊಂದನ್ನು ತೇಲಿ ಬಿಡಿ. ನಂತರ ನೋಡಿ ಜಾದು! ಈ ವಿಧಾನ ಎಷ್ಟು ಸುಲಭವಲ್ಲವೇ? ಪ್ರಯತ್ನಿಸಿ ನೋಡಿ. ನೀವೂ ನಕ್ಕು, ಮತ್ತೊಬ್ಬರನ್ನೂ ನಗಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT