ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಬರಿಯಾಗದಿರಿ, ಮಗುವಿನ ಆತಂಕ ಕಂಡು!!

Last Updated 13 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

‘ಪುಟ್ಟ ಕವನ ಐದು ವರ್ಷದ ಮುದ್ದು ಹುಡುಗಿ, ಎಲ್ಲ ಚಟುವಟಿಕೆಗಳಲ್ಲೂ ಚುರುಕು. ಓದಿನಲ್ಲಿ ಮೊದಲು. ತನ್ನ ಎಲ್ಲ ಕೆಲಸಗಳನ್ನೂ ತಾನೆ ಮಾಡಿಕೊಳ್ಳುವಷ್ಟು ಜಾಣೆ. ಆದರೆ ಕತ್ತಲೆಂದರೆ ಭಯ. ರಾತ್ರಿ ಮಲಗುವಾಗ ಟೂಬ್‌ಲೈಟ್ ಆರಿಸುವಂತಿಲ್ಲ. ಕತ್ತಲಾಗಿದ್ದರೆ ತಾಸುಗಟ್ಟಲೇ ಮೂತ್ರ ಮಾಡದೇ ಇರುತ್ತಾಳೆಯೇ ಹೊರತು, ಯಾರಾದರೂ ಜೊತೆಯಿಲ್ಲದಿದ್ದರೆ, ಬಾತ್‌ರೂಂಗೆ ಹೋಗುವುದಿಲ್ಲ’.

‘ಕುಶಲ್ ಏಳು ವರ್ಷದ ಪುಟ್ಟ ಬಾಲಕ. ಮನೆಯಲ್ಲಿ ಎಲ್ಲರ ಮುದ್ದಿನ ಕಣ್ಮಣಿ. ತಾಯಿಯೇ ಪಾಠ ಹೇಳಿಕೊಡುವವಳು. ಎಲ್ಲ ಉತ್ತರಗಳನ್ನೂ ಮನೆಯಲ್ಲಿ ಚೆನ್ನಾಗಿ ಹೇಳುತ್ತಾನೆ.

ಶಾಲೆಯಲ್ಲಿ ಟೀಚರ್ ಮುಂದೆ ಮಾತ್ರ ಬಾಯಿಯೇ ಬಿಡುವುದಿಲ್ಲ. ಪರೀಕ್ಷೆಗಳು ಬಂತೆಂದರೆ ಗಾಬರಿಯೇ ಜಾಸ್ತಿ. ತುಂಬ ಬೆವರುತ್ತದೆ, ಕೈ ನಡುಗುತ್ತದೆ. ಆತಂಕ ಮತ್ತು ಭಯ ಎನ್ನುವುದು ಒಂದು ಮಗುವಿನ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲಿ ಬರಬಹುದಾದ ಸಹಜ ಭಾವನೆ. ಮಕ್ಕಳಲ್ಲಿ ಸಾಮಾನ್ಯವಾದ ಎಷ್ಟೊಂದು ತರಹದ ಭಯ/ಗಾಬರಿಗಳನ್ನು ಕಾಣುತ್ತೇವೆ, ಅಲ್ಲವೇ? ಹೌದು.

ಇವು ಯಾವುವೂ ಕಾಯಿಲೆಯಲ್ಲ. ಆದರೆ ಬಹಳಷ್ಟು ತಂದೆ-ತಾಯಿಯರಿಗೆ, ಈ ಭಯ/ಆತಂಕಗಳು ಸಹಜ ಬೆಳವಣಿಗೆಯ ಭಾಗವೇ ಅಲ್ಲವೇ ಎಂದು ನಿರ್ಧರಿಸುವುದೇ ಕಷ್ಟವಾಗುತ್ತದೆ. ಸಹಜ ಬೆಳವಣಿಗೆಯ ಭಾಗವಾಗಿದ್ದರೆ, ಅವುಗಳನ್ನು ಕಡಿಮೆ ಮಾಡುವ ಬಗೆ ಅರಿಯುವುದು ಮತ್ತು ಸಮಸ್ಯೆಯಾಗದಂತೆ ತಡೆಯುವುದು ನಮ್ಮ ಜವಾಬ್ದಾರಿ. ಹಾಗೆಯೇ ಮಕ್ಕಳು ಈಗಾಗಲೇ ಆತಂಕದ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಅದನ್ನು ಗುರುತಿಸುವುದೂ ಆವಶ್ಯಕ. ಈ ನಿಟ್ಟಿನಲ್ಲಿ ಉತ್ತರ ಹುಡುಕಲು ಈ ಲೇಖನ ಪ್ರಯತ್ನಿಸುತ್ತಿದೆ.

ಮಕ್ಕಳಿಗೆ ಸಂಬಂಧಿಸಿದ ಯಾವುದೇ ಮಾನಸಿಕ ಸಮಸ್ಯೆಗಳನ್ನು ನೋಡುವ ರೀತಿಯೇ ವಿಭಿನ್ನವಾದದ್ದು. ಮಕ್ಕಳಿಗೆ ಸರಿಯಾಗಿ ಭಾವನೆಗಳನ್ನು ವ್ಯಕ್ತಪಡಿಸಲು ಆಗಲಿಕ್ಕಿಲ್ಲ. ಮಕ್ಕಳ ಬೆಳವಣಿಗೆಯ ವಯಸ್ಸನ್ನು ಗಮನದಲ್ಲಿರಿಸಿಯೇ ಈ ಸಮಸ್ಯೆಗಳ ಬಗ್ಗೆ ಯೋಚಿಸಬೇಕು. ಮಕ್ಕಳ ಸಮಸ್ಯೆಗಳಲ್ಲಿ ಸುತ್ತಲಿನ ಪರಿಸರ,  ಎಂದರೆ ಪೋಷಕರು, ಕುಟುಂಬ, ಶಾಲೆಗಳ ಪಾತ್ರವನ್ನು ಕೂಲಂಕಷವಾಗಿ ನೋಡಬೇಕು. ಅನಂತರವಷ್ಟೆ ಆ ಸಮಸ್ಯಯೆ ಬಗ್ಗೆ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾದೀತು.

ಆತಂಕ ಎಂದರೇನು?
ಅಪಾಯದ ಹಿನ್ನೆಲೆಯಲ್ಲಿ ನಮ್ಮಲ್ಲಿ ಉಂಟಾಗುವ ಭಾವನೆಗಳು ಭಯ/ಆತಂಕ; ಈ ಅಪಾಯ ನಿರ್ದಿಷ್ಟವಾಗಿ ಇದೇ ಎಂದು ತಿಳಿದಿದ್ದರೆ, ಅದನ್ನು ‘ಭಯ’ (Fear) ಎನ್ನುತ್ತೇವೆ.ಅಕಸ್ಮಾತ್ ಅಪಾಯ ಏನು ಎಂಬ ಅರಿವಿಲ್ಲದಿದ್ದರೆ, ಅದನ್ನು ‘ಆತಂಕ’ (Anxiety) ಎನ್ನುತ್ತೇವೆ. ಇದನ್ನು ಉದಾಹರಣೆಯೊಂದಿಗೆ ನೋಡೋಣ. ಹಾವೊಂದು ನಮ್ಮ ಮುಂದೆ ತಟ್ಟನೆ ಪ್ರತ್ಯಕ್ಷವಾಯಿತೆನ್ನಿ!  ಆಗ ಮನಸ್ಸಿಗೆ ಆಗುವುದು ‘ಭಯ’.

ಅದೇ ಕತ್ತಲಿನ ಗುಹೆಯಲ್ಲಿ ಒಳಹೋಗುವಾಗ, ಅಲ್ಲಿ ಎದುರಾಗುವ ನಿರ್ದಿಷ್ಟ ಅಪಾಯ ಏನು ಎಂದು ತಿಳಿಯದಿದ್ದರೂ ಮನಸ್ಸಿಗೆ ಆಗುವುದು ‘ಆತಂಕ’. ಆದರೆ ಎಷ್ಟೋ ಬಾರಿ ಭಯ-ಆತಂಕ ಶಬ್ದಗಳನ್ನು ಒಂದಕ್ಕೊಂದು ಅದಲು ಬದಲು ಆಗಿ ಕೂಡ ಉಪಯೋಗಿಸುತ್ತೇವೆ. ಮಕ್ಕಳಿಗಂತೂ ಇದರ ವ್ಯತ್ಯಾಸ ತಿಳಿಯುವುದಿಲ್ಲ.

ನಿಮ್ಮ ಮಗುವಿನ ಸ್ವಭಾವ ಲಕ್ಷಣ ಆತಂಕದ್ದೇ?
ಕೆಲವು ಮಕ್ಕಳಿಗೆ ಸ್ವಭಾವದಿಂದಲೇ ಸ್ವಲ್ಪ ನಾಚಿಕೆ/ಆತಂಕ ಇರಬಹುದು. ಇದನ್ನು ‘Shy temperament’/ ‘Trait Anxiety’  ಎನ್ನುತ್ತೇವೆ. ಹೊಸಮುಖಗಳನ್ನು ಮಾತನಾಡಿಸಲು ಹಿಂಜರಿಕೆ, ವೇದಿಕೆಯ ಮೇಲೆ ಹೋಗಿ ನರ್ತಿಸಲು/ ಹಾಡಲು ನಾಚಿಕೆ, ಯಾವುದೇ ಹೊಸ ವಾತಾವರಣದಲ್ಲಿ ಬೇರೆಯವರೊಂದಿಗೆ ಬೆರೆಯಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು ಇತ್ಯಾದಿ. ಸಾಮಾನ್ಯವಾಗಿ ಇದು ಸಮಸ್ಯೆಯಾಗಬಾರದು. ನಿಧಾನವಾಗಿ ಮಕ್ಕಳೇ ಇದರಿಂದ ಹೊರಬರುತ್ತಾರೆ. ನಮ್ಮ ಸಕಾರಾತ್ಮವಾದ ಪ್ರೋತ್ಸಾಹ ಅಗತ್ಯ ಅಷ್ಟೇ.

ಬೆಳವಣಿಗೆಯ ಹಂತದ ಭಯ-ಆತಂಕಗಳು
ಪ್ರತಿಯೊಂದು ಮಗುವಿನ ಬೆಳವಣಿಗೆಯ ವಿವಿಧ ಹಂತಗಳಲ್ಲಿ, ಬೇರೆ ಬೇರೆ ವಯಸ್ಸಿನಲ್ಲಿ, ಭಿನ್ನ ಭಿನ್ನ ಕಾರಣಗಳಿಗೆ ಆತಂಕ-ಭಯ ಕಾಡುತ್ತದೆ. ಜೋರಾದ ಶಬ್ದಗಳು, ತಟ್ಟನೆ ಎದುರಾಗುವ ಯಾವುದೇ ಸಂವೇದನಾ ಪ್ರಚೋದಕಗಳು (Sensory stimuli), ಆರು ತಿಂಗಳಿನ ಮಗುವಿನಲ್ಲಿ ಭಯ ಉಂಟು ಮಾಡಿದರೆ, ಅಪರಿಚಿತರು, ಮುಖಕ್ಕೆ ಹಾಕಿಕೊಂಡ ಮುಸುಕು, ಎತ್ತರದ ಜಾಗಗಳು, ತಾಯಿಯಿಂದ ದೂರ ಆಗುವುದು ಒಂದು ವರ್ಷದ ಮಗುವಿನಲ್ಲಿ ಭಯ ತರಿಸುತ್ತದೆ.

ಎರಡು-ಮೂರು ವರ್ಷದ ಮಕ್ಕಳಲ್ಲಿ ಸಾವು, ಕಳ್ಳರು, ಕಾಲ್ಪನಿಕ ವ್ಯಕ್ತಿಗಳು ಆತಂಕ ಹುಟ್ಟಿಸಿದರೆ, ಕತ್ತಲು, ಒಂಟಿಯಾಗಿರುವುದರ ಬಗ್ಗೆ, ನಾಲ್ಕು-ಐದು ವರ್ಷದವರು ಭಯ ಪಡುತ್ತಾರೆ. ಶಾಲೆಯ ಬಗ್ಗೆ ಗಾಬರಿ, ಗಾಯಗಳಾಗುವ ಕುರಿತು ಹೆದರಿಕೆ, ಸಾಮಾಜಿಕ ಆತಂಕ ಇವೆಲ್ಲ 6–12 ವರ್ಷಗಳ ವಯಸ್ಸಿನಲ್ಲಿ ಹೆಚ್ಚಾಗಿ ಇರಬಹುದು. ಆದ್ದರಿಂದ ಈ ಭಯ-ಆತಂಕಗಳು ಇದೆ ಎಂದ ಮಾತ್ರಕ್ಕೆ ಅದು ಕಾಯಿಲೆಯಲ್ಲ.

ಅಕಸ್ಮಾತ್, ಈ ನಿರ್ದಿಷ್ಟ ಭಯ-ಆತಂಕಗಳು ಎರಡು ವರ್ಷಗಳಿಗೂ ಮೀರಿ ಉಳಿದರೆ ಅಥವಾ ಕೆಲವೇ ದಿನಗಳಿದ್ದರೂ, ದಿನನಿತ್ಯದ ಕೆಲಸ-ಕಾರ್ಯಚಟುವಟಿಕೆಗಳಲ್ಲಿ ತೊಂದರೆ ಕೊಡಲಾರಂಭಿಸಿದರೆ, ಆಗ ಮನೋವೈದ್ಯರನ್ನು ಕಾಣಬೇಕಾಗುತ್ತದೆ.

ಆತಂಕದ ವಿವಿಧ ಮುಖಗಳು
ಮಕ್ಕಳಲ್ಲಿ ಆತಂಕ ಉಂಟಾದರೆ ‘ನನಗೆ ಗಾಬರಿಯಾಗುತ್ತದೆ’ ಎಂದು ನೇರವಾಗಿ ಹೇಳುವುದಿಲ್ಲ. ಸುಪ್ತವಾದ ಆತಂಕ ಬೇರೆ ಬೇರೆ ರೀತಿಯಲ್ಲಿ ಪ್ರಕಟವಾಗಬಹುದು. ಅತಿ ಚಟುವಟಿಕೆ, ಮಾತನಾಡುವಾಗ ಉಗ್ಗು, ಕಲಿಕಾ ಸಮಸ್ಯೆಗಳು, ಹಾಸಿಗೆಯಲ್ಲಿ ಮೂತ್ರ ಮಾಡುವುದು, ಕೋಪ / ಆಕ್ರಮಣಶೀಲತೆ – ಇವೆಲ್ಲವೂ ಒಳಮನಸ್ಸಿನ ಆತಂಕದ ಮೇಲ್ಮೈ ಲಕ್ಷಣಗಳಾಗಿರಬಹುದು. ಇನ್ನೂ ಕೆಲವು ಮಕ್ಕಳಲ್ಲಿ ಖಿನ್ನತೆಯ ಲಕ್ಷಣಗಳೂ ಆತಂಕದ ಜೊತೆಜೊತೆಗೆ ಇರಬಹುದು. ಇನ್ನು ನಿರ್ದಿಷ್ಟವಾದ ಆತಂಕದ ಸಮಸ್ಯೆಗಳನ್ನು ಮನಃಶಾಸ್ತ್ರ ಗುರುತಿಸುತ್ತದೆ.

ಸಪರೇಷನ್ ಆತಂಕ
ಸಪರೇಷನ ಆತಂಕ (Separation Anxiety Disorder) ಸಾಮಾನ್ಯವಾಗಿ ಚಿಕ್ಕ ವಯಸ್ಸಿನ ಮಕ್ಕಳಲ್ಲಿ ತಂದೆ-ತಾಯಿಯಿಂದ ಬೇರ್ಪಡಿಸಿದಾಗ ಕಾಣಿಸಿಕೊಳ್ಳುವಂಥದ್ದು. ಹೆಚ್ಚಾಗಿ ಶಾಲೆಗೆ ಹೋಗಲು ನಿರಾಕರಿಸುವಂಥ ಸಂದರ್ಭದಲ್ಲಿ, ಈ ಆತಂಕ ಇದೆಯೇ ಎಂಬುದನ್ನು ನೋಡಬೇಕು. ಮಕ್ಕಳು ಮನೆಯಲ್ಲಿ ಪೋಷಕರ ಮುಂದೆ ಚೆನ್ನಾಗಿ ಆಟವಾಡಿಕೊಂಡು ಇದ್ದು, ಯಾವಾಗ ಶಾಲೆಗೆ ಹೋಗಬೇಕೋ, ಆಗ ಆತಂಕದ ಲಕ್ಷಣಗಳನ್ನು ವ್ಯಕ್ತಪಡಿಸುತ್ತಾರೆ.

ಸಾಮಾಜಿಕ ಆತಂಕದ ತೊಂದರೆ
ಹೊಸಬರನ್ನು ಮಾತನಾಡಿಸುವಾಗ, ಹೊಸ ಜಾಗಗಳಲ್ಲಿ, ವೇದಿಕೆಯ ಮೇಲೆ ಹೋದಾಗ, ಹೆಚ್ಚು ಜನರು ಸೇರಿರುವ  ಕಡೆ,  ಆಗುವಂಥ ಆತಂಕ, ಇದು ಸಾಮಾಜಿಕ ಆತಂಕದ ತೊಂದರೆ (Social Anxiety Disorder). ಈ ಮಕ್ಕಳು ಬೇರೆಯ ಪರಿಚಿತ ಜನರೊಂದಿಗೆ ಆರಾಮವಾಗಿ ಮಾತನಾಡುತ್ತಾರೆ. ಮನೆಯಲ್ಲಿ ಓದಿಗೆ ಸಂಬಂಧಿಸಿದ ಎಲ್ಲ ಉತ್ತರಗಳನ್ನು ಹೇಳುತ್ತಾರೆ. ಯಾವಾಗ ಶಾಲೆಯಲ್ಲಿ ಎಲ್ಲ ಮಕ್ಕಳ ಮುಂದೆ, ಕ್ಲಾಸಿನಲ್ಲಿ ಟೀಚರ್ ಪ್ರಶ್ನೆ ಕೇಳುತ್ತಾರೋ ಆಗ ಆತಂಕದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಪ್ಯಾನಿಕ್ ಡಿಸಾರ್ಡರ್
ಸಾಂದರ್ಭಿಕವಾಗಿ ಕೆಲವು ನಿಮಿಷಗಳ ಕಾಲ ತೀವ್ರತರವಾದ ಆತಂಕದ ಲಕ್ಷಣಗಳು ಕಾಣುತ್ತವೆ. ಇದಕ್ಕೆ ‘ಪ್ಯಾನಿಕ್ ಅಟ್ಯಾಕ್’ ಎಂದು ಕರೆಯುತ್ತಾರೆ.

ಗೀಳು
ಗೀಳು  (Obsessive Compulsive Disorder) ಕೂಡ ಒಂದು ರೀತಿಯ ವಿಶೇಷವಾದ ಆತಂಕದ ತೊಂದರೆ. ಬೇಡದ, ಅರ್ಥಹೀನವಾದ ಯೋಚನೆಗಳು ಮಕ್ಕಳನ್ನು ಕಾಡುತ್ತವೆ. ಇದರಿಂದಾಗಿ ಆತಂಕ ಉಂಟಾಗಿ, ಆತಂಕವನ್ನು ತಡೆಯಲು ಕೆಲವು ಕ್ರಿಯೆಗಳನ್ನು ಮತ್ತೆ ಮತ್ತೆ ಮಾಡುತ್ತಾರೆ. ಉದಾಹರಣೆಗೆ: ಎಂಟು ವರ್ಷದ ರೂಪಳಿಗೆ ಇತ್ತೀಚೆಗೆ ಊಟವಾದ ನಂತರ ತನ್ನ ಕೈಗಳು ಒಂದು ಸಲ ಸೋಪು ಹಾಕಿ ತೊಳೆದ ನಂತರವೂ ಕೊಳೆಯಾಗಿದೆಯೇ ಎಂಬ ಯೋಚನೆ ಪದೇಪದೇ ಕಾಡುತ್ತಿದೆ.

ಆಗ ಅವಳಿಗೆ ಆಗುವ  ಆತಂಕವೂ ಕೂಡ ಅಸಹನೀಯವಾಗಿದೆ. ಆ ಕ್ಷಣಕ್ಕೆ ಆತಂಕ ಕಡಿಮೆ ಮಾಡಲು, ಅವಳು ಮತ್ತೆ ಮತ್ತೆ ಕೈ ತೊಳೆಯುತ್ತಾಳೆ. ಇದು ಹೆಚ್ಚಾಗಿ10–15 ಸಲ ಕೈ ತೊಳೆದರೂ ಅವಳಿಗೆ ಸಮಾಧಾನವಾಗುತ್ತಿಲ್ಲ. ಮನೋವೈದ್ಯರು ರೂಪಳನ್ನು ನೋಡಿ, ಇದು ‘ಗೀಳು ’ ಕಾಯಿಲೆಯೆಂದು, ಚಿಕಿತ್ಸೆ ನೀಡಿದ ನಂತರ ಈಗ ಚೆನ್ನಾಗಿದ್ದಾಳೆ.

ಪರಿಹಾರ ಏನು?
*  ಮೊದಲು ಈ ಆತಂಕ-ಭಯ ಮಗುವಿನ ಜೀವನದಲ್ಲಿ ಸಮಸ್ಯೆಯಾಗುತ್ತಿದೆಯೇ ಎಂಬುದನ್ನು ತಿಳಿಯಿರಿ.

*  ಇತ್ತೀಚೆಗೆ ಮನೆಯಲ್ಲಿ / ಶಾಲೆಯಲ್ಲಿ ಏನಾದರೂ ಪ್ರಮುಖ ಬದಲಾವಣೆಗಳಾಗಿವೆಯೇ ಮತ್ತು ಇದು ಮಗುವಿನ ಮೇಲೆ ಯಾವ ಪರಿಣಾಮ ಬೀರಿದೆ ಎಂದೂ ಅರಿಯಬೇಕು.

* ಕೆಲವು ವರ್ತನಾ ಬದಲಾವಣೆಗಳಿಂದ ಈ ಆತಂಕ ಹೋಗಲಾಡಿಸಬಹುದು.

* ‘Graded Exposure’ ಎಂಬುದು ಆತಂಕಗಳಿಗೆ ನಿರ್ದಿಷ್ಟವಾದ ಮತ್ತು ಪರಿಣಾಮಕಾರಿಯಾದ ಚಿಕಿತ್ಸೆ. ಉದಾಹರಣೆಗೆ, ನಿಮ್ಮ ಮಗುವಿಗೆ ಸಾಮಾಜಿಕ ಆತಂಕ (Social anxiety) ಇದ್ದರೆ, ಒಂದೇ ಬಾರಿ ಮಗುವನ್ನು ವೇದಿಕೆಯ ಮೇಲೆ ಕಳಿಸಿ ತುಂಬ ಜನರ ಮುಂದೆ ಹಾಡಿಸುವುದಕ್ಕಿಂತ, ಮನೆಯಲ್ಲಿ ಇತರ ಸದಸ್ಯರ ಮುಂದೆ ಹಾಡಿಸಿ, ತರಬೇತಿ ನೀಡುವುದು. ಹಂತ, ಹಂತವಾಗಿ ಆ ಮಗುವಿಗಿರುವ ಭಯ/ಆತಂಕದ ವಸ್ತುವನ್ನು ಮಗು ಎದುರಿಸುವಂತೆ ಮಾಡುವುದು.

*  ನಿರ್ದಿಷ್ಟವಾದ ಆತಂಕದ ಸಮಸ್ಯೆಗಳು ಇದ್ದರೆ, ಮನೋವೈದ್ಯರ ಸಲಹೆ ಪಡೆಯಬಹುದು. ಆಟದ ಚಿಕಿತ್ಸೆ (Play therapy) ಮತ್ತು ವರ್ತನಾ ಚಿಕಿತ್ಸೆ(Behavioural therapy)ಯನ್ನು ಮನಃಶಾಸ್ತ್ರಜ್ಞರು ಮಾಡಿದಾಗ ಮಗು ಆತಂಕದಿಂದ ಹೊರಬರಲು ಸಹಾಯಕವಾಗುತ್ತದೆ. ಮನೋವೈದ್ಯರು ಮಗುವಿಗೆ ಅಗತ್ಯವಿದ್ದಲ್ಲಿ ಔಚಧಗಳಿಂದಲೂ ಚಿಕಿತ್ಸೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT