ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೋದ್ಯಮ ಸಂಯಮವಿದ್ದರೆ ಮಾತ್ರ ಯಶಸ್ಸು

Last Updated 13 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ದೇಶದ ಉದ್ಯಮಗಳ ಸೇವಾ ಪೂರೈಕದಾರ ಸಂಸ್ಥೆಯಾಗಿರುವ ಟಾಟಾ ಡೊಕೊಮೊ ಬಿಸಿನೆಸ್‌ ಸರ್ವೀಸ್‌ (ಟಿಡಿಬಿಎಸ್‌) ಕರ್ನಾಟಕದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ ಬೆಳವಣಿಗೆಗೆ ಡಿಜಿಟಲ್‌ ಸೇವೆ  ಒದಗಿಸಲು ಮುಂದಾಗಿದೆ.  ರಾಜ್ಯದಲ್ಲಿ ನವೋದ್ಯಮ ಸ್ಥಾಪನೆಗೆ ಇರುವ ಅವಕಾಶಗಳ ಬಗೆಗೆ ಟಾಟಾ ಟೆಲಿಸರ್ವೀಸಸ್‌ನ ದಕ್ಷಿಣ ವಿಭಾಗದ ಪ್ರಾದೇಶಿಕ ವ್ಯವಹಾರಗಳ ಮುಖ್ಯಸ್ಥ ಜಾಯ್‌ಜೀತ್ ಬೋಸ್‌ ಅವರು ಇಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ರಾಜ್ಯದಲ್ಲಿ ನವೋದ್ಯಮ ಸ್ಥಾಪನೆಗೆ ಉತ್ತಮ ಅವಕಾಶವಿದೆ. ಅದರಲ್ಲಿಯೂ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ. ಸಣ್ಣ  ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ  (ಎಸ್‌ಎಂಇ) ಡಿಜಿಟಲ್‌ ಸಹಯೋಗ ನೀಡುವುದು ನಮ್ಮ ಆದ್ಯತೆಯಾಗಿದೆ’ ಎನ್ನುತ್ತಾರೆ ಅವರು.

‘ರಾಜ್ಯದಲ್ಲಿ ಎಸ್‌ಎಂಇಗಳ ಅಭಿವೃದ್ಧಿಗೆ ಮತ್ತು ಹೊಸ ಉದ್ದಿಮೆ ಸ್ಥಾಪನೆಗೆ ಡಿಜಿಟಲ್‌ ಪಾಲುದಾರಿಕೆ ನೀಡಲು ಮುಂದಾಗಿದ್ದೇವೆ. ಮಾಹಿತಿ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನೇತರ, ಶಿಕ್ಷಣ, ಆರೋಗ್ಯ ಸೇವೆ ಸೇರಿದಂತೆ ಇನ್ನೂ ಹಲವು ಕ್ಷೇತ್ರಗಳಲ್ಲಿ ಹೊಸ ಉದ್ದಿಮೆಗಳು ತಲೆಎತ್ತುತ್ತಿವೆ.

‘ಸ್ಟಾರ್ಟ್‌ಅಪ್‌ ಸ್ಥಾಪನೆಗೆ ಬೆಂಗಳೂರು ಪ್ರಮುಖ ತಾಣವಾಗಿದೆ. ಬಂಡವಾಳ ಹೂಡಿಕೆ, ಸ್ಟಾರ್ಟ್‌ಅಪ್ ಸ್ಥಾಪನೆಗೆ ಇರುವ ಆಸಕ್ತಿ ಮತ್ತು ತಂತ್ರಜ್ಞಾನ ಅಳವಡಿಕೆ ಮೂಲಕ ಪ್ರಗತಿ ಸಾಧಿಸಬೇಕು ಎನ್ನುವ ಮನೋಭಾವ ಇರುವವರ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

‘ಮಿಂಚಿನ ವೇಗದಲ್ಲಿ ನವೋದ್ಯಮ ಸ್ಥಾಪನೆ ನಡೆಯುತ್ತಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಬೆಂಗಳೂರಿನಲ್ಲಿಯೇ ಪ್ರತಿ ತಿಂಗಳು 40 ರಿಂದ 45 ಹೊಸ ಉದ್ದಿಮೆಗಳು ಆರಂಭವಾಗುತ್ತಿವೆ. ಇವುಗಳಿಗೆ ಜಾಗತಿಕ ಮಟ್ಟದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಹೊಸ ತಂತ್ರಜ್ಞಾನದ ಅಳವಡಿಕೆ ಅಗತ್ಯ. ಆಗ ಮಾತ್ರವೇ ಉತ್ತಮ ಪ್ರಗತಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನದ ಸಹಭಾಗಿತ್ವ ನೀಡುತ್ತಿರುವ ಪ್ರಮುಖ ಸಂಸ್ಥೆ ಎಂದು ಟಾಟಾ ಟೆಲೆಸರ್ವೀಸಸ್‌ ಗುರುತಿಸಿಕೊಂಡಿದೆ’ ಎಂದು ಅವರು ಹೇಳುತ್ತಾರೆ.

ತಾಳ್ಮೆಯ ಕೊರತೆ
‘ಕೆಲವೇ ಕೆಲವು ಸ್ಟಾರ್ಟ್‌ಅಪ್‌ಗಳು ವಿಫಲವಾಗಿವೆ ಎಂದಾಕ್ಷಣ ಪ್ರಗತಿಯೇ ಇಲ್ಲ ಎಂದು ಹೇಳುವುದು ಸರಿಯಲ್ಲ.  ವೈಫಲ್ಯಕ್ಕೆ ಹಲವು ಕಾರಣಗಳಿರುತ್ತವೆ. ರಾಜ್ಯದ ಮಟ್ಟಿಗೇ ಹೇಳುವುದಾದರೆ ನವೋದ್ಯಮ ಪ್ರಗತಿ ಹಾದಿಯಲ್ಲಿದೆ.

‘ನವೋದ್ಯಮ ಸ್ಥಾಪಿಸುವವರಿಗೆ ತಾಳ್ಮೆ ಅಗತ್ಯ. ಒಂದೆರಡು ವರ್ಷದೊಳಗೆ ಪ್ರಗತಿ/ಯಶಸ್ಸು ಸಾಧಿಸಲು ಆಗದು. ಹಾಗೆಂದ ಮಾತ್ರಕ್ಕೆ ನಿರೀಕ್ಷೆ ಇಟ್ಟುಕೊಳ್ಳುವುದೇ ತಪ್ಪು ಎಂದಲ್ಲ. ಆ ಅವಧಿಯಲ್ಲಿ ಅದು ಈಡೇರಲಿಲ್ಲ ಎಂದಾಗ ನಿರಾಸೆಗೆ ಒಳಗಾಗಬಾರದು. ಸಂಯಮದಿಂದ ಪ್ರಯತ್ನ ಮುಂದುವರಿಸಿದರೆ ಮಾತ್ರವೇ ಪ್ರಗತಿಯ ಮೆಟ್ಟಿಲೇರಲು ಸಾಧ್ಯ’ ಎನ್ನುವುದು ಅವರ ಖಚಿತ ಅಭಿಪ್ರಾಯವಾಗಿದೆ.

ಪ್ರಮುಖ ಅಂಶಗಳು
ನವೋದ್ಯಮ ಸ್ಥಾಪನೆಗೆ ಪ್ರಮುಖವಾಗಿ ಮೂರು ಅಂಶಗಳು ಅಗತ್ಯ.

1. ಮಾನವ ಸಂಪನ್ಮೂಲ
2. ಬಂಡವಾಳ
3. ತಂತ್ರಜ್ಞಾನ

‘ಮೊದಲೆರಡು ಅಂಶಗಳ ಬಗ್ಗೆ ಕೊರತೆ ಇದೆ ಎಂದು ಅನ್ನಿಸುತ್ತಿಲ್ಲ. ಆದರೆ, ಬಹಳ ಮುಖ್ಯವಾಗಿರುವುದು ತಂತ್ರಜ್ಞಾನ. ಹೊಸ ಉದ್ದಿಮೆ ಸ್ಥಾಪಿಸುವವರಲ್ಲಿ ಬಹಳಷ್ಟು ಜನರು ತಂತ್ರಜ್ಞಾನ ಅಳವಡಿಕೆಯ ಬಗ್ಗೆ ಹೆಚ್ಚು ಗಮನ ನೀಡುತ್ತಿಲ್ಲ. ಬಹುಶಃ ಇದರಿಂದಾಗಿಯೇ ಕೆಲವರು ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಕಾಣಲು ಸಾಧ್ಯವಾಗಿಲ್ಲ ಎಂದೆನಿಸುತ್ತಿದೆ.

‘ಎಸ್‌ಎಂಇಗಳಲ್ಲಿ ತಂತ್ರಜ್ಞಾನದ ಸಹಭಾಗಿತ್ವ ಅಗತ್ಯವಿರುವ ಕಡೆಗಳಲ್ಲಿ ನಾವು ಕೆಲಸ ಮಾಡುತ್ತೇವೆ. ತಂತ್ರಜ್ಞಾನದ ಸಹಭಾಗಿತ್ವದಿಂದ ಹೇಗೆ ಯಶಸ್ಸನ್ನು ಸಾಧಿಸಬಹುದು ಎನ್ನುವುದಕ್ಕೆ ಫ್ಲಿಪ್‌ಕಾರ್ಟ್‌, ಓಲಾ ಕಂಪೆನಿಗಳು ಉತ್ತಮ ಉದಾಹರಣೆಗಳಾಗಿವೆ.

‘ಕಂಪೆನಿ ಒಂದು ನಿರೀಕ್ಷಿತ ಮಟ್ಟ ತಲುಪಿತು ಎಂದಾಕ್ಷಣ ಅಲ್ಲಿಗೆ ನಮ್ಮ ಸಹಭಾಗಿತ್ವ ಮುಗಿಯುವುದಿಲ್ಲ. ಆಗ ನಮ್ಮ ಸಹಭಾಗಿತ್ವದ ಸ್ವರೂಪದಲ್ಲಿ ಬದಲಾವಣೆ ಆಗುತ್ತದೆ. ಸುಸ್ಥಿರ ಪ್ರಗತಿ ಮುಂದುವರಿಸಿಕೊಂಡು ಹೋಗಲು ಆ ಕಂಪೆನಿಗೆ ಅಗತ್ಯವಿರುವ ಸಲಹೆ ಮತ್ತು ತಾಂತ್ರಿಕ ನೆರವು ನೀಡುತ್ತೇವೆ.

‘ತಂತ್ರಜ್ಞಾನದ ಸಹಭಾಗಿತ್ವ ಎಂದಾಕ್ಷಣ ನಮ್ಮ ಪಾಲಿನ ಕೆಲಸ ನಾವು ಮಾಡುತ್ತೇವೆ ಅಥವಾ ನಾವು ನೀಡಿದ್ದನ್ನು ಅವರು ಒಪ್ಪಿಕೊಳ್ಳಬೇಕು ಎಂದಲ್ಲ. ಕಂಪೆನಿಯ ಸರ್ವತೋಮುಖ ಬೆಳವಣಿಗೆಗೆ ಪರಸ್ಪರ ವಿಚಾರ ವಿನಿಮಯ, ಸಲಹೆ ಮತ್ತು ಸೂಚನೆಗಳ ಮೂಲಕ ಕೆಲಸ ಮಾಡುತ್ತೇವೆ.

ತಂತ್ರಜ್ಞಾನ ಆಧಾರಿತ ವಲಯಗಳಲ್ಲದೆ, ತಂತ್ರಜ್ಞಾನದ ಅಳವಡಿಕೆ ಅಗತ್ಯವಿರುವ ವಲಯಗಳಲ್ಲಿಯೂ ಸಹಭಾಗಿತ್ವ ಮುಂದುವರಿಸಲು ಹೆಚ್ಚು ಆಸಕ್ತಿ ಹೊಂದಿದ್ದೇವೆ. ಎಲ್ಲಿ ತಂತ್ರಜ್ಞಾನದ ಮೂಲಕ ಒಂದು ಉದ್ಯಮದ ಬೆಳವಣಿಗೆಗೆ ನೆರವಾಗಬಹುದು ಎಂದು ಅನ್ನಿಸುತ್ತದೆಯೋ ಅಂತಹ ಕಡೆಗಳಲ್ಲಿ ನಾವು ಇರುತ್ತೇವೆ. ಸಹಭಾಗಿತ್ವಕ್ಕೆ ಯಾವುದೇ ಮಿತಿ ಇಲ್ಲ. ಎಲ್ಲರಿಗೂ ಮುಕ್ತವಾಗಿದೆ ’ ಎಂದು ಬೋಸ್‌ ಹೇಳುತ್ತಾರೆ.

‘ಆನ್‌ಲೈನ್‌ ಕಲಿಕಾ ತಾಣ byjus.com ಜತೆ ಕೆಲಸ ಮಾಡುತ್ತಿದ್ದೇವೆ. ಸಾಂಪ್ರದಾಯಿಕ ರೀತಿಯಲ್ಲಿ ಆರಂಭವಾದ ಸಂಸ್ಥೆ ಇಂದು ಡಿಜಿಟಲ್‌ ತಂತ್ರಜ್ಞಾನ ಅಳವಡಿಕೆ ಮೂಲಕ ಹೊಸ ರೀತಿಯ ಕಲಿಕಾ ಮಾದರಿಗಳನ್ನು ಅನುಸರಿಸತೊಡಗಿದೆ.

‘ಚಾಯ್‌ ಪಾಯಿಂಟ್‌ ಬಹಳ ವೃತ್ತಿಪರವಾಗಿ, ವ್ಯವಸ್ಥಿತವಾಗಿ ಸೇವೆ ಒದಗಿಸುತ್ತಿದೆ. ತಂತ್ರಜ್ಞಾನ ಅಳವಡಿಕೆಯಿಂದ ಕೆಲಸ ಸರಳವಾಗಿದೆ. ಪ್ರಗತಿ ವೇಗವೂ ಹೆಚ್ಚಾಗಿದೆ.ಮಾನವ ಸಂಪನ್ಮೂಲದಿಂದ ಇದು ಸಾಧ್ಯವಿಲ್ಲ ಎಂದಲ್ಲ. ಆದರೆ ಪ್ರಗತಿಯ ವೇಗ ತಂತ್ರಜ್ಞಾನದ ಅಳವಡಿಕೆಯಿಂದ ಆಗುವಂತೆ ಇರುವುದಿಲ್ಲ. ಆರು ತಿಂಗಳು ಅಥವಾ ಒಂದು ವರ್ಷದ ಹಿಂದೆ ಆರಂಭವಾಗಿರುವ ನವೋದ್ಯಮಗಳ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದೇವೆ. ಏಕೆಂದರೆ ಮುಂದೊಂದು ದಿನ ಆದೂ ಸಹ ಫ್ಲಿಪ್‌ಕಾರ್ಟ್‌, ಓಲಾ ರೀತಿಯಲ್ಲಿ ಜನಪ್ರಿಯತೆ ಗಳಿಸಬಹುದು’ ಎನ್ನುವುದು ಅವರ ಆಶಾವಾದವಾಗಿದೆ.

***
* 15% 2015–16ರಲ್ಲಿ ಟಿಡಿಬಿಎಸ್‌ ಬೆಳವಣಿಗೆ ಪ್ರಮಾಣ
* 8% 2015–16ಲ್ಲಿ ಎಸ್‌ಎಂಇ ವಲಯದಲ್ಲಿ ಟಿಡಿಬಿಎಸ್‌ ಬೆಳವಣಿಗೆ
* 6 ಸಾವಿರ ದಕ್ಷಿಣ ಭಾರತದಲ್ಲಿ ಹೊಂದಿರುವ ಸ್ಟಾರ್ಟ್‌ಅಪ್‌ಗಳು
* 2,800 ಬೆಂಗಳೂರಿನಲ್ಲಿ  ಇರುವ ಸ್ಟಾರ್ಟ್‌ಅಪ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT