ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂತಾ ಸಿಂಗಾರ

Last Updated 13 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಹೋದಲ್ಲೆಲ್ಲ ಏನಾದರೂ ಅಪರೂಪದ ವಸ್ತುವೊಂದನ್ನು ತಂದು ತಮ್ಮ ಸಂಗ್ರಹಪಟ್ಟಿಗೆ ಸೇರಿಸುವ ಹವ್ಯಾಸ ಪ್ರತಾಪ್‌ ಕುಮಾರ್‌ ಅವರದು. ‘ಚೇತೋಹಾರಿಯಾದ ಮತ್ತು ಅನನ್ಯ ಮೌಲ್ಯವನ್ನು ಹೊಂದಿರುವ ವಸ್ತುಗಳ ಮೇಲೆ ಸದಾ ನನ್ನ ಗಮನವಿರುತ್ತದೆ’ ಎನ್ನುವ ಪ್ರತಾಪ್‌, ಆಯಾ ಸ್ಥಳದ ಬಲವಾದ ನೆನಪುಗಳನ್ನು ಹಿಡಿದಿಡುವಂತಹ ವಿನೂತನ ವಸ್ತುಗಳನ್ನು ಖರೀದಿಸುವಲ್ಲಿ ಆಸಕ್ತಿ ಹೊಂದಿದ್ದಾರೆ.

ಪ್ರತಾಪ್ ಮನೆಯ ಯಾವ ಮೂಲೆಯನ್ನು ನೋಡಿದರೂ ಅಲ್ಲಿ ಜಗತ್ತಿನ ಯಾವುದೊ ಒಂದು ಭಾಗದ ಒಂದಿಲ್ಲೊಂದು ಅಲಂಕಾರಿಕ ವಸ್ತುಗಳು ರಾರಾಜಿಸುತ್ತಿರುತ್ತವೆ. ಮನೆಯೊಳಗೆ ಅಡಿ ಇಟ್ಟ ತಕ್ಷಣ ನಮ್ಮ ಗಮನವನ್ನು ‘ಸಾಂತಾ ಕ್ಲಾಸ್’ನ ವಿವಿಧ ರೂಪಗಳು ಸೆರೆ ಹಿಡಿಯುತ್ತವೆ.

ಪ್ರತಾಪ್ ಅವರ ಈ ಸಾಂತಾ ಪ್ರೀತಿ ಆರಂಭವಾದುದು ಸುಮಾರು ಎಂಟು ವರ್ಷಗಳ ಹಿಂದೆ. ಅಂದು ಸಾಂತಾ ಕ್ಲಾಸ್‌ನ ಚಿಕ್ಕ ಚಿಕ್ಕ ಮಾದರಿಗಳನ್ನು ಸಂಗ್ರಹಿಸಲು ಆರಂಭಿಸಿದ ಪ್ರತಾಪ್‌ ಅವರ ಕಣಜದಲ್ಲೀಗ ಸುಮಾರು 50 ವಿಭಿನ್ನ ಸಾಂತಾಗಳು ಬೀಡು ಬಿಟ್ಟಿದ್ದಾರೆ. ಅದೂ ಜಗತ್ತಿನ ಮೂಲೆ–ಮೂಲೆಗಳಿಂದ ಬಂದ ಸಾಂತಾಗಳವರು.

‘ಮೊದಲು ಸಾಂತಾ ಮನೆಗೆ ಬಂದ ಗಳಿಗೆ ನನಗಿನ್ನೂ ನೆನಪಿದೆ. ಕ್ರಿಸ್‌ಮಸ್‌ ಖರೀದಿಗೆಂದು ಇಲ್ಲೇ ಸ್ಥಳೀಯ ಮಾರುಕಟ್ಟೆಗೆ ಹೋಗಿದ್ದಾಗ ಪುಟ್ಟ ಸಾಂತಾನನ್ನು ಮನೆಗೆ ಕರೆತಂದಿದ್ದೆ. ತನ್ನ ಎಂದಿನ ದಿರಿಸಿನಲ್ಲಿದ್ದ ಸಾಂತಾ ಕೆಂಪು ಕೋಟು, ಬಿಳಿ ದಾಡಿ ಮತ್ತು ರೌಂಡ್‌ ಗ್ಲಾಸುಗಳಿಂದ ನನ್ನನ್ನು ಆಕರ್ಷಿಸಿದ್ದ. ಸಾಂತಾ ಪ್ರೀತಿ ಇಂದಿಗೂ ಮುಂದುವರಿದಿದೆ. ಕ್ರಿಸ್‌ಮಸ್‌ ಬಂತೆಂದರೆ ಹೋದಲ್ಲೆಲ್ಲ ವಿಶಿಷ್ಟ ರೂಪದೊಂದಿಗೆ ಜನಾಕರ್ಷಣೆಯ ಕೇಂದ್ರವಾಗಿರುವ ಸಾಂತಾನನ್ನು ಮನೆಗೆ ಹೊತ್ತು ತರುತ್ತೇನೆ’ ಎನ್ನುತ್ತಾರೆ ಪ್ರತಾಪ್‌.

ಸಾಂತಾನನ್ನು ಆರಿಸುವಾಗ ಪ್ರತಾಪ್‌ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಾರೆ ಎನ್ನುವುದು ಅವರ ಸಂಗ್ರಹವನ್ನು ನೋಡಿದೊಡನೆಯೇ ಸ್ಪಷ್ಟವಾಗುತ್ತದೆ.
‘ನಾನು ಸಾಂತಾ ಕ್ಲಾಸ್‌ನ ಸಾಮಾನ್ಯ ಮಾದರಿಗಳನ್ನು ನೋಡುವುದೇ ಇಲ್ಲ. ಎಲ್ಲಿ ಹೋದರೂ ಅಪರೂಪದವನ್ನೇ ಹುಡುಕುತ್ತೇನೆ. ಸಾಮಾನ್ಯವಾಗಿ ಅಂತಹ ಒಬ್ಬ ಸಾಂತಾನನ್ನಾದರೂ ಜೊತೆಗೆ ತಾರದೇ ಪ್ರವಾಸದಿಂದ ಮರಳುವುದೇ ಇಲ್ಲ. ಸಾಂತಾ ಹುಡುಕಾಟಕ್ಕೆ ಡಿಸೆಂಬರ್‌ ಅತ್ಯಂತ ಸೂಕ್ತ ಸಮಯ.’ ಎನ್ನುತ್ತಾರೆ ಪ್ರತಾಪ್‌.

ಪ್ರತಾಪ್‌ ಅವರ ಸಂಗ್ರಹದಲ್ಲಿ ವಿಶೇಷ ಎನ್ನುವಂತಹ ಸಾಂತಾಗಳಿದ್ದಾರೆ. ‘ಜಿನೀವಾದಿಂದ ತಂದ ಸಾಂತಾ ನನ್ನ ಸಂಗ್ರಹದ ಪ್ರಮುಖ ಆಕರ್ಷಣೆ. ಸಾಂಪ್ರದಾಯಿಕ ಕೆಂಪು ಕೋಟ್‌ನ ಬದಲು ಈ ಸಾಂತಾ ಉದ್ದವಾದ ಗುಲಾಬಿ ಬಣ್ಣದ ಕೋಟ್‌ ಧರಿಸಿದ್ದಾನೆ. ಹಾಗೆಯೇ ಮೂರು ಅಡಿ ಎತ್ತರದ ಚೀನೀ ಸಾಂತಾ ಕೂಡ ಅಪರೂಪದ ಸಂಗ್ರಹದಲ್ಲಿದ್ದಾನೆ. ಈತನ ವಿಶೇಷತೆ ಎಂದರೆ ನಮ್ಮ ಅನುಕೂಲಕ್ಕೆ ತಕ್ಕಂತೆ ಅವನ ಎತ್ತರವನ್ನು ಸರಿ ಹೊಂದಿಸಬಹುದು’ ಎನ್ನುವ ವಿವರಣೆ ಅವರದು.

ಪ್ರತಾಪ್‌ ಅವರು ಅಮೆರಿಕದ ಪ್ರವಾಸದಲ್ಲಿ ಕರೆತಂದ ಇನ್ನೊಬ್ಬ ಸಾಂತಾ ತನ್ನ ಅಸಾಧಾರಣ ಉದ್ದದ ಕಾಲುಗಳು ಮತ್ತು ಮೋಟಾರ್‌ ಬೈಕ್‌ ಮೇಲೆ ಕುಳಿತಿರುವ ಭಂಗಿಯಿಂದ ಗಮನ ಸೆಳೆಯುತ್ತಾನೆ. ಅವರ ಸಂಗ್ರಹದಲ್ಲಿರುವ ಸಾಂತಾ ಕೇವಲ ವಿನ್ಯಾಸಗಳಲ್ಲಿ ಆಕರ್ಷಕವಾಗಿರುವುದದಷ್ಟೇ ಅಲ್ಲ, ಮಣ್ಣು, ಬಟ್ಟೆ, ಪ್ಲಾಸ್ಟರ್ ಆಫ್ ಪ್ಯಾರಿಸ್, ಪಿಂಗಾಣಿ ಮತ್ತು ಮೇಣದಂತಹ ವಿವಿಧ ವಸ್ತುಗಳನ್ನು ಬಳಸಿ ತಯಾರಿಸಲಾಗಿರುತ್ತದೆ ಎನ್ನುವುದು ಮತ್ತೊಂದು ವೈಶಿಷ್ಟ್ಯ.
ಹೀಗೆ ವಿಶೇಷವೂ, ವಿಭಿನ್ನವೂ ಆದ ಸಂತಾಗಳನ್ನು ತಂದಿಡುವುದು ಮಾತ್ರವಲ್ಲ, ಅವರನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವುದೂ ಸಹ ಮುಖ್ಯ. ಈ ಕೆಲಸವನ್ನು ಎಚ್ಚರಿಕೆಯಿಂದ ಮಾಡುವುದು ಪ್ರತಾಪ್ ಅವರ ಪತ್ನಿ ಕಲಾ.

‘ವಾಸ್ತವವಾಗಿ, ಸಾಂತಾ ಆಯ್ಕೆಯಲ್ಲಿ ಕಲಾ ಸಕ್ರಿಯ ಪಾತ್ರ ವಹಿಸುತ್ತಾರೆ. ಕೆಲವೊಮ್ಮೆ ಇಬ್ಬರೂ ಸೇರಿಯೇ ಸಾಂತಾ ಖರೀದಿಗೆ ಹೋಗುವುದಿದೆ. ಆಗೆಲ್ಲ ಅಂತಿಮ ನಿರ್ಧಾರ ಕಲಾಳದ್ದೇ ಆಗಿರುತ್ತದೆ’ ಎನ್ನುತ್ತಾರೆ ಅವರು.

‘ಕ್ಲಾಸಿಕ್‌ ಎನ್ನುವ ಪದಕ್ಕೆ ತನ್ನದೇ ಆದ ಅರ್ಥವಿದೆ. ಇದು ರಸ್ತೆಗಳಲ್ಲೆಲ್ಲ ಸಿಗುವುದಿಲ್ಲ. ಹಾಗೆಯೇ ಇಂಥ ವಸ್ತುಗಳಿಗೆ ಒಂದಷ್ಟು ಹೆಚ್ಚಿನ ಹಣವನ್ನೇ ಖರ್ಚು ಮಾಡಬೇಕಾಗುತ್ತದೆ’ ಎನ್ನುವ ವಿವರಣೆ ನೀಡುತ್ತಾರೆ.

ಪ್ರತಾಪ್‌ ಅವರ ಸಾಂತಾ ಸಂಗ್ರಹ ಪ್ರೀತಿಯನ್ನು ಪೊರೆಯುವ ಸ್ನೇಹಿತರು, ಬಂಧುಗಳೂ ಇದ್ದಾರೆ. ಅವರೂ ವಿಶೇಷವಾದ ಸಾಂತಾ ಸಂಗ್ರಹಕ್ಕೆ ಕೈಜೋಡಿಸುವುದಿದೆ. ಅವರೂ ಸಹ ಪ್ರವಾಸಕ್ಕೆ ಹೋದಲ್ಲೆಲ್ಲ ಸಂತಾನನ್ನು ಖರೀದಿಸಿ ತಂದು ಕೊಡುತ್ತಾರೆ. ಏಕೆಂದರೆ ಪ್ರತಾಪ್‌ ಅವರ ಮುಖದ ಮೇಲೆ ಸಂತಸ ಮೂಡಿಸಲು ಇದಕ್ಕಿಂತ ಉತ್ತಮ ಉಡುಗೊರೆ ಮತ್ತೊಂದಿಲ್ಲ ಎನ್ನುವುದು ಅವರಿಗೂ ಗೊತ್ತು.
(ಸಂಪರ್ಕಕ್ಕೆ: pratapkmr@yahoo.co.uk)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT