ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಡಮಾರುತ: ಸನ್ನದ್ಧತೆ ಸುಧಾರಣೆ ಸುಸ್ಥಿರ ಅಭಿವೃದ್ಧಿ ಆದ್ಯತೆಯಾಗಲಿ

ಸಂಪಾದಕೀಯ
Last Updated 13 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ತಮಿಳುನಾಡು ಕರಾವಳಿಯಲ್ಲಿ ಚೆನ್ನೈ ಸಮೀಪ ಅಪ್ಪಳಿಸಿದ ವಾರ್ದಾ ಚಂಡಮಾರುತದಿಂದಾಗಿ ತಮಿಳುನಾಡು ಹಾಗೂ ಆಂಧ್ರ ಪ್ರದೇಶಗಳಲ್ಲಿ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ಸಂಚಾರ ವ್ಯವಸ್ಥೆ ಸ್ತಬ್ಧವಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.  ಚಂಡಮಾರುತದ ಪರಿಣಾಮ ಬೆಂಗಳೂರು ನಗರದ ಮೇಲೂ ಆಗಿದ್ದು ವ್ಯಾಪಕ ಮಳೆಯಾಗಿದೆ. ಎರಡು ದಶಕಗಳಲ್ಲಿ ಚೆನ್ನೈಗೆ ಅಪ್ಪಳಿಸಿದ ಅತ್ಯಂತ ತೀವ್ರವಾದ ಚಂಡಮಾರುತ ಇದು.  ಆದರೆ ಚಂಡಮಾರುತ ಎದುರಿಸುವ ಸನ್ನದ್ಧತೆ ಸುಧಾರಣೆಯಾಗಿದೆ ಎಂಬುದು ಈ ಬಾರಿಯೂ ಸಾಬೀತಾದದ್ದು ಸಮಾಧಾನಕರ. 1999ರಲ್ಲಿ ಒಡಿಶಾ ಸೂಪರ್ ಚಂಡಮಾರುತದಿಂದ 10,100 ಜನರು ಸತ್ತಿದ್ದರು. ಆ ನಂತರ ಒಡಿಶಾದಲ್ಲಿ 2013ರಲ್ಲಿ ಅಪ್ಪಳಿಸಿದ ಫಾಲಿನ್ ಚಂಡಮಾರುತ ಹಾಗೂ 2014ರಲ್ಲಿ ಆಂಧ್ರಪ್ರದೇಶದಲ್ಲಿ ಅಪ್ಪಳಿಸಿದ್ದ ಹುಡ್‌ಹುಡ್ ಚಂಡಮಾರುತಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಸಂಕಷ್ಟಗಳನ್ನು ಕಡಿಮೆ ಮಾಡಲು ಪ್ರಯತ್ನಗಳನ್ನು ಮಾಡಿದ್ದು ಫಲ ನೀಡಿದೆ.
 
ಹುಡ್‌ಹುಡ್ ಚಂಡಮಾರುತದಿಂದಾಗಿ ಮೂಲಸೌಕರ್ಯಗಳಿಗೆ ಹಾನಿಯಾಯಿತು. ಆದರೆ ತೆರವುಗೊಳಿಸುವ ಕಾರ್ಯಾಚರಣೆ ಸುಧಾರಣೆ ಆಗಿದ್ದರಿಂದ ಜೀವಹಾನಿ ಕಡಿಮೆಯಾಯಿತು ಎಂಬುದನ್ನು ಗಮನಿಸಬೇಕು. ಚಂಡಮಾರುತದಿಂದಾಗಿ ಕರಾವಳಿಯಲ್ಲಿ  ಹಿಂದೆಲ್ಲಾ ದೊಡ್ಡ ಹಾವಳಿ ಆಗುತ್ತಿತ್ತು. ಅಪಾರ ಸಾವುನೋವುಗಳು ಉಂಟಾಗುತ್ತಿದ್ದವು.  ಈಗ ಅದು ನಿಯಂತ್ರಣಕ್ಕೆ ಬಂದಿದೆ. ಚಂಡಮಾರುತದ ಮುನ್ಸೂಚನೆ ನೀಡುವಲ್ಲಿಯೂ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುಧಾರಣೆ ಆಗಿದೆ. ವಾರ್ದಾ ಚಂಡಮಾರುತದ ಚಲನೆಯನ್ನು ನಿರ್ದಿಷ್ಟವಾಗಿ ಗುರುತಿಸಿ ರಾಜ್ಯ ಸರ್ಕಾರಗಳು ಹಾಗೂ ಜಿಲ್ಲಾಡಳಿತಗಳಿಗೆ ಎಚ್ಚರಿಕೆ ನೀಡಲು ಭಾರತೀಯ ಹವಾಮಾನ ಇಲಾಖೆಗೆ ಸಾಧ್ಯವಾಗಿದೆ. ಹೀಗಾಗಿ ಸಾವಿರಾರು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅಪಾಯಕಾರಿ ಸ್ಥಳಗಳಲ್ಲಿ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯನ್ನೂ ನಿಯೋಜಿಸಲಾಗಿದೆ.
 
‘ಹವಾಮಾನ ಬದಲಾವಣೆ’ ಸದ್ಯದ ಸಂದರ್ಭದಲ್ಲಿ ಜಾಗತಿಕವಾದ ಸವಾಲು. ಹೀಗಾಗಿ ಹೆಚ್ಚು ತೀವ್ರತೆಯ ಚಂಡಮಾರುತಗಳು ಮುಂದಿನ ದಿನಗಳಲ್ಲೂ ನಿರೀಕ್ಷಿತವೇ.  ಆದರೆ ಇಂತಹ ವಿದ್ಯಮಾನಗಳನ್ನು ಎದುರಿಸಲು ನಮ್ಮ ನಗರಗಳು ಸಜ್ಜಾಗಿವೆಯೇ ಎಂಬುದು ಮುಖ್ಯ. ಇಂತಹ  ಹವಾಮಾನ ವೈಪರೀತ್ಯದ ಬಿಕ್ಕಟ್ಟುಗಳನ್ನು ಎದುರಿಸಲು ನಮ್ಮ ನಗರಗಳು ಸಜ್ಜಾಗಬೇಕಾದುದು ಅಗತ್ಯ. ಸಣ್ಣ ಮಳೆಗೂ ನಗರಗಳಲ್ಲಿ ಪ್ರವಾಹ ಬಂದ ಸ್ಥಿತಿ ಸೃಷ್ಟಿಯಾಗಬಾರದು. ಹೀಗಾಗಿ ಇದನ್ನು ತುರ್ತಾಗಿ ಪರಿಗಣಿಸಬೇಕು.  ಕಳೆದ ವರ್ಷದ   ಚೆನ್ನೈ  ಪ್ರವಾಹ ಹಾಗೂ ಈಗಿನ ಚಂಡಮಾರುತ ಎರಡೂ ಭಿನ್ನ ಬಗೆಯ ಬಿಕ್ಕಟ್ಟುಗಳು. ಮಳೆ, ಪ್ರವಾಹ, ಚಂಡಮಾರುತ, ಬಿಸಿಲಿನ ಏರಿಕೆ ಹೀಗೆ ವಿವಿಧ ಬಗೆಗಳಲ್ಲಿ ಹವಾಮಾನ ವೈಪರೀತ್ಯಗಳನ್ನು ಎದುರಿಸಬೇಕಾಗಿದೆ.
 
ಚಂಡಮಾರುತ ಅಪ್ಪಳಿಸುವ ಮೊದಲು ಅದರ ಚಲನೆಯನ್ನು ಗಮನಿಸುವುದು ಸಾಧ್ಯ. ಜೊತೆಗೆ ವಿಶ್ವಬ್ಯಾಂಕ್ ನೆರವಿನ ರಾಷ್ಟ್ರೀಯ ಚಂಡಮಾರುತ ಅಪಾಯ ತಗ್ಗಿಸುವ ಕಾರ್ಯಕ್ರಮವೂ ಅನೇಕ ರಾಜ್ಯಗಳಲ್ಲಿ ಅನುಷ್ಠಾನವಾಗುತ್ತಿದೆ. ಮ್ಯಾಂಗ್ರೋವ್‌ಗಳನ್ನು ಬೆಳೆಸುವುದಿರಬಹುದು ಅಥವಾ  ಸಮುದಾಯ ಆಧಾರಿತ ಸಂಕಷ್ಟ ಸನ್ನದ್ಧತೆ ಕ್ರಮಗಳಿರಬಹುದು ಅವೂ  ಕೂಡ ಫಲ ನೀಡುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ ಹವಾಮಾನ ಎಂಬುದು ನಮ್ಮ  ಸರ್ಕಾರಗಳ ಯೋಜನೆಗಳ ಭಾಗವಾಗಬೇಕು. ಕಟ್ಟಡ, ರಸ್ತೆಗಳ ನಿರ್ಮಾಣ ಸೇರಿದಂತೆ ನಗರಗಳ ಯೋಜನೆಗಳಲ್ಲಿ  ಇದು ಅಂತರ್ಗತವಾಗಬೇಕು. ಜೊತೆಗೆ ಭೂಕಂಪ, ಪ್ರವಾಹ, ಭೂಕುಸಿತ ಮತ್ತಿತರ ನೈಸರ್ಗಿಕ ವಿಕೋಪಗಳ ನಿರ್ವಹಣೆಯಲ್ಲೂ ಇಂತಹದೇ ಸನ್ನದ್ಧತೆ ಸಾಧ್ಯವಾಗಬೇಕು. ಈಗಿರುವ ವೈಜ್ಞಾನಿಕ ಜ್ಞಾನದ ಹಂತದಲ್ಲಿ ಭೂಕಂಪದ ಮುನ್ನೆಚ್ಚರಿಕೆ ನೀಡುವುದು ಸಾಧ್ಯವಿಲ್ಲ. ಪ್ರವಾಹ ಎಚ್ಚರಿಕೆ ವ್ಯವಸ್ಥೆಯೂ ಇನ್ನೂ ಆರಂಭದ ಹಂತದಲ್ಲಿದೆ. ಭೂ ಕುಸಿತದ ಎಚ್ಚರಿಕೆ ಇನ್ನೂ ಹಲವು ಪ್ರಯೋಗಗಳನ್ನು ಹಾದು ಬರಬೇಕಿದೆ.  ಈ ಎಲ್ಲದರ ನಡುವೆ ನಗರಗಳ ಅಭಿವೃದ್ಧಿ ಪರಿಸರಕ್ಕೆ ಮಾರಕವಾಗಬಾರದು ಎಂಬ ಎಚ್ಚರಿಕೆ ಇರುವುದು ಮುಖ್ಯ. ಹೀಗಾಗಿ ಅಭಿವೃದ್ಧಿಯನ್ನು ಮರು ಆಲೋಚಿಸಿ, ಮರು ವಿವರಣೆ ನೀಡಬೇಕು. ಸುಸ್ಥಿರ ಅಭಿವೃದ್ಧಿಯತ್ತ ಸಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT