ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯ್ಗುಳಕ್ಕೂ ಪಿಎಚ್.ಡಿ...

Last Updated 14 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಸುಮಾರು ಇಪ್ಪತ್ತೆರಡು ವರ್ಷಗಳಿಂದಲೂ ಹೊಸ ವರ್ಷದಲ್ಲಿ ಒಂದು ಪುಸ್ತಕಪ್ರಕಟಿಸಬೇಕೆಂದು ಪ್ರತಿ ಡಿಸೆಂಬರ್ ತಿಂಗಳಿನಲ್ಲಿ ನಿರ್ಧರಿಸುತ್ತೇನೆ. ಆದರೆ ಇಂದಿಗೂ ಅದನ್ನು ಮಾಡಿ ಪೂರೈಸಿಲ್ಲ. 1994ರಲ್ಲಿ ಡಾ.ಕೆ.ವಿ.ನಾರಾಯಣ ಅವರ ಮಾರ್ಗದರ್ಶನದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ‘ಕನ್ನಡ ಬಯ್ಗುಳಗಳ ಅಧ್ಯಯನ’ ಎಂಬ ನನ್ನ ಸಂಶೋಧನಾ ಬರಹಕ್ಕೆ ಪಿಎಚ್.ಡಿ. ಬಂದಾಗ ಮೆಚ್ಚಿದವರಿಗಿಂತಲೂ ಅಚ್ಚರಿಪಟ್ಟವರೇ ಹೆಚ್ಚು ಮಂದಿ.

ಇಂದಿಗೂ ನನ್ನ ಪಿಎಚ್.ಡಿ. ವಿಷಯ ಕೇಳಿದಾಗ, ಒಂದಲ್ಲ ಒಂದು ಬಗೆಯ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸದಿರುವ ವ್ಯಕ್ತಿಯನ್ನು ನಾನು ಕಂಡಿಲ್ಲ. ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದವರಲ್ಲಿ ಥರಾವರಿ ಜನರಿದ್ದಾರೆ. ಅಂತಹ ನಾಲ್ಕಾರು ಪ್ರಸಂಗಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಯಸುತ್ತೇನೆ.

ಪ್ರಸಂಗ-1: ‘ಬಯ್ಗುಳಕ್ಕೆ ಪಿಎಚ್.ಡಿ. ಪದವಿ’ ಎಂಬ ತಲೆಬರಹದಲ್ಲಿ ಪತ್ರಿಕೆಯೊಂದರಲ್ಲಿ ಸುದ್ದಿ ಪ್ರಕಟವಾದುದನ್ನು ನೋಡಿ, ಓದುಗರೊಬ್ಬರು ‘ಅಯ್ಯೋ! ನಮ್ಮ ವಿಶ್ವವಿದ್ಯಾಲಯದ ಮಟ್ಟ ಇಷ್ಟೊಂದು ಕುಸಿಯಿತೇ?’ಎಂದು ಆತಂಕ ವ್ಯಕ್ತಪಡಿಸಿ ಪತ್ರ ಬರೆದಿದ್ದರು.

ಪ್ರಸಂಗ-2: ಮದುವೆಯ ಮನೆಯೊಂದರಲ್ಲಿ ನನಗೆ ಪರಿಚಯವಿದ್ದ ಕನ್ನಡ ವಿದ್ವಾಂಸರೊಬ್ಬರು ನನ್ನನ್ನು ಕಂಡಕೂಡಲೇ ಮುಖ ಗಂಟಿಕ್ಕಿಕೊಂಡು ‘ಏನಯ್ಯಾ, ನಿನಗೆ ಸ್ಪಲ್ಪನಾದ್ರೂ ವಿವೇಕ ಬೇಡವಾ, ಹೋಗಿ ಹೋಗಿ ಬಯ್ಗುಳದಲ್ಲಿ ಪಿಎಚ್.ಡಿ. ಮಾಡಿದ್ದೀಯಲ್ಲ... ಕನ್ನಡದಲ್ಲಿ ಪಂಪನಿಂದ ಹಿಡಿದು ಕುವೆಂಪುವರೆಗೆ ಎಂಥೆಂಥ ಕವಿಗಳು ಇದ್ದಾರೆ, ಅಂಥಾದ್ದರಲ್ಲಿ ನೀನು... ಬಿಡಪ್ಪ ನನಗಂತೂ ನಿನ್ನ ಬಗ್ಗೆ ಅಯ್ಯೋ ಅನ್ನಿಸ್ತು’ ಎಂದು ಅನುಕಂಪವನ್ನು ಸೂಸಿದರು.

ಪ್ರಸಂಗ-3: ಇಪ್ಪತ್ತು ಇಪ್ಪತೈದು ವರ್ಷಗಳಿಂದಲೂ ಆಸ್ತಿ ಹಂಚಿಕೆಯ ವಿಷಯದಲ್ಲಿ ಹಗೆಯಾಗಿದ್ದ ದಾಯಾದಿಯೊಬ್ಬರು ಕಾಯಿಲೆ ಬಿದ್ದಿದ್ದರು. ಅವರನ್ನು ನೋಡಲೆಂದು ಹೋದಾಗ ‘ನೀನು ಬಯ್ಗುಳದ ಬಗ್ಗೆ ಪುಸ್ತಕ ಬರೆದಿದ್ದೀಯಂತೆ. ವಿಷಯ ತುಂಬಾ ಚೆನ್ನಾಗಿದೆ. ನನಗೆ ಸ್ಪಲ್ಪ ಕೊಡ್ತೀಯಾ... ಓದಿ ಕೊಡ್ತೀನಿ’ ಎಂದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ. ಏಕೆಂದರೆ ಶತ್ರುವಿನ ಮೆಚ್ಚುಗೆಗೆ ಪಾತ್ರವಾದ ಈ ಬರಹವನ್ನು ಆದಷ್ಟು ಬೇಗ ಹೊರತರಬೇಕೆಂದು ಅಂದೇ ನಿರ್ಧರಿಸಿದೆ. ಆದರೆ ಇದು ನಡೆದು ಹತ್ತು ವರ್ಷವಾಗಿದೆ.

ಪ್ರಸಂಗ-4: ಮಂಡ್ಯ ನಗರದಲ್ಲಿ ಭೇಟಿಯಾದ ಮಿತ್ರರೊಬ್ಬರು ನನ್ನನ್ನು ಅವರ ಗೆಳೆಯರೊಬ್ಬರಿಗೆ ಪರಿಚಯ ಮಾಡಿಕೊಡುತ್ತ ‘ಇವರು ಬಯ್ಗುಳದ ಬಗ್ಗೆ ಪಿಎಚ್.ಡಿ. ಮಾಡಿದ್ದಾರೆ’ ಎಂದು ಹೇಳಿದಾಗ, ಅವರು ತುಂಬಾ ಅಚ್ಚರಿ ಹಾಗೂ ಆನಂದವನ್ನು ವ್ಯಕ್ತಪಡಿಸುತ್ತಾ ‘ನನಗೊಂದು ಬಯ್ಗುಳದ ಪುಸ್ತಕ ಕೊಡಿ ಸಾರ್’ ಎಂದರು. ನಾನು ಇನ್ನೂ ಅದನ್ನು ಪುಸ್ತಕರೂಪದಲ್ಲಿ ಪ್ರಕಟಿಸಿಲ್ಲವೆಂದು ಹೇಳಿದಾಗ, ‘ಬೇಗ ಹೊರತನ್ನಿ ಸಾರ್... ಏಕಂದ್ರೆ ನಮ್ಮ ಜಾತೀಲಿ ಎಂಥೆಂಥಾ ಸಾಧನೆ ಮಾಡ್ದೋರು ಇದ್ದಾರೆ ಆಂತ ನಾವು ಹೇಳ್ಕೊಳ್ಳಬಹುದು’ ಎಂದಾಗ , ನನ್ನ ಎದೆಬಡಿತ ಅರೆಗಳಿಗೆ ನಿಂತಂತೆ ಆಯಿತು.

ಪ್ರಸಂಗ-5: ನಾನು ಕೆಲಸ ಮಾಡುತ್ತಿದ್ದ ಊರಿನಲ್ಲಿ ಮತ್ತು ಜಿಲ್ಲೆಯಲ್ಲಿ ಯಾರಾದರೂ ವಿಶ್ವವಿದ್ಯಾಲಯಗಳಿಂದ ಪಿಎಚ್.ಡಿ. ಪಡೆದರೆ, ಅವರನ್ನು ಕೆಲವು ಸಂಸ್ಥೆಯವರು ಕರೆದು ಸನ್ಮಾನಿಸುತ್ತಿದ್ದರು. ಆದರೆ ಯಾವೊಂದು ಸಂಸ್ಥೆಯೂ ನನ್ನ ಹತ್ತಿರಕ್ಕೂ ಬರಲಿಲ್ಲ. ಇಷ್ಟೆಲ್ಲಾ ತಿರಸ್ಕಾರ ಮತ್ತು ಒಂದೆರಡು ಮೆಚ್ಚುಗೆ ಪಡೆದಿರುವ ಬಯ್ಗುಳ ಬರಹದ ಪ್ರಕಟಣೆಯ ನಿರ್ಧಾರ ಕಾರ್ಯರೂಪಕ್ಕೆ ಬರದೆ ಒದ್ದಾಡುತ್ತಲೇ ಇದೆ. ನೋಡೋಣ 2017ರ ಡಿಸೆಂಬರ್ ಹೊತ್ತಿಗಾದರೂ ಕಾರ್ಯರೂಪಕ್ಕೆ ಬರುವುದೇನೋ!
–ಸಿ.ಪಿ.ನಾಗರಾಜ ಬೆಂಗಳೂರು

*
ಬಿಡಲಾಗದ ಈ ನಂಟು
ನನ್ನ ಚಟಗಳಲ್ಲಿ ಅತ್ಯಂತ ಪ್ರಮುಖವಾಗಿದ್ದು ಕುಡಿತ. ಈ ಕುಡಿತದ ಅಭ್ಯಾಸ ಒಬ್ಬ ಗೆಳೆಯನಿಂದ ಬಳುವಳಿಯಾಗಿ ಬಂದಿದ್ದು. ಹೆಚ್ಚು ಕುಡಿಯುವವನಲ್ಲವಾದರೂ ಈ ದುಶ್ಚಟದಿಂದ ಹೇಗಾದರೂ ಮಾಡಿ ದೂರಾಗಬೇಕೆಂದು ಅನೇಕ ಸಾರಿ ಹಟ ತೊಟ್ಟಿದ್ದೇನೆ. ಈ ಸಾರಿ ಗೆಲ್ಲಲೇಬೇಕು ಎಂದು ನಿರ್ಧರಿಸಿ ನನ್ನ ಹುಟ್ಟು ತಾರೀಖಿನಿಂದ ಬಿಡುವುದಾಗಿ ತೀರ್ಮಾನಿಸಿದೆ. ನನ್ನ ದುರದೃಷ್ಟವೋ, ಅದೃಷ್ಟವೋ, ನನ್ನ ಸ್ನೇಹಿತರೆಲ್ಲ ಸೇರಿ ಈ ಬಾರಿ ನನ್ನ ಹುಟ್ಟುಹಬ್ಬ ಆಚರಿಸಲು ಪಾರ್ಟಿ ಇಟ್ಟು ನನ್ನ ಆಹ್ವಾನಿಸಿದರು.

ನಾನು ಪಾರ್ಟಿಗೆ ಹೋಗಲೇಬೇಕಾಯಿತು, ಪ್ರೀತಿಯಿಂದ ಕೊಟ್ಟ ಉಡುಗೊರೆ ಮತ್ತು ಡ್ರಿಂಕ್ಸ್‌ ಅನ್ನು ಸ್ವೀಕರಿಸಲೇಬೇಕಾಯ್ತು. ಹಾಗಾಗಿ ಪಣವನ್ನು ರದ್ದು ಮಾಡದೆ ಮುಂದಿನ ಜನವರಿಗೆ ಮುಂದೂಡಿದೆ. ನಾನು ಮಿತಿಯಲ್ಲಿ ಕುಡಿಯುತ್ತಿದ್ದವ. ನನ್ನ ಆರೋಗ್ಯ ದೃಢವಾಗಿತ್ತು. ‘ಸರ್‌ ನೀವು ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡು ಬಂದಿದೀರ’ ‘ನೀವು ಯಂಗ್‌ ಆಗಿ ಕಾಣಿಸ್ತೀರಾ’, ‘ನಿಮಗೆ ಅಷ್ಟೊಂದು ವಯಸ್ಸಾಗಿದೆ ಎಂದು ಅನ್ನಿಸುವುದೇ ಇಲ್ಲ’ ಮುಂತಾಗಿ ನನ್ನ ಸ್ನೇಹಿತರು ಹೊಗಳುತ್ತಿದ್ದರು. ನನಗೆ ಖುಷಿಯಾಗುತ್ತಿತ್ತು. ಬಹುಶಃ ಇದೂ ನನಗೆ ಪ್ರೇರೇಪಣೆಯೇ ಇರಬೇಕು!.

ಹೀಗಿರುವಾಗ ಒಂದು ದಿನ ಸೀನಿಯರ್‌ ತನಿಖಾಧಿಕಾರಿಯಾಗಿ ಹಾಸನಕ್ಕೆ ವರ್ಗವಾದೆ. ಈಗ ಕುಡಿಯುವುದನ್ನು ಹೇಗಾದರೂ ಮಾಡಿ ಜನವರಿ ಒಂದರಿಂದ ಬಿಡಲೇಬೇಕು ಎಂದು ತೀರ್ಮಾನಿಸಿದೆ. ಆ ದಿನ ಬಂತು. ನನ್ನ ಸಹೋದ್ಯೋಗಿಗಳು ಸೇರಿ  ಹೊಸ ವರ್ಷದ ಶುಭ ಹಾರೈಕೆಗಾಗಿ ಒಂದು ಪಾರ್ಟಿ ಕೊಡುವುದಾಗಿ ತೀರ್ಮಾನಿಸಿ, ‘ಸರ್‌ ನಾವೆಲ್ಲ ಸೇರಿ ನಿಮಗೆ ಹೊಸ ವರ್ಷಕ್ಕೆ ಶುಭ ಕೋರಲು ಪಾರ್ಟಿ ಇಟ್ಟುಕೊಂಡಿದ್ದೇವೆ.  ನೀವು ಖಂಡಿತ ಬರಬೇಕು’ ಎಂದು ಕೇಳಿಕೊಂಡರು. ಇಲ್ಲವೆನ್ನಲಾಗಲಿಲ್ಲ. ಸಂತೋಷದಿಂದ ಒಪ್ಪಿಗೆ ಕೊಟ್ಟೆ. ‘ಆದರೆ ಡ್ರಿಂಕ್‌್ಸ ಇರಕೂಡದು’ ಎಂದು ತಕ್ಷಣ ಹೇಳಿದೆ. ಅದಕ್ಕವರು ಆಯ್ತು ಎಂದು ಹೇಳಿ ಮತ್ತೊಮ್ಮೆ ವಂದಿಸಿ ಹೋದರು.

ಅಲ್ಲಿ ಅವರೆಲ್ಲ ನೀಡಿದ ಆತ್ಮೀಯ ಆದರವನ್ನು ಸಂತೋಷದಿಂದ ಸ್ವೀಕರಿಸಿ ಪ್ರತಿಯಾಗಿ ನಾನು ವಂದಿಸಿ ಪುಟ್ಟ ಭಾಷಣ ಬಿಗಿದು ಮುಗಿಸಿದೆ. ಅಲ್ಲಿಗೆ ಕಾರ್ಯಕ್ರಮ ಮುಗಿಯಿತು. ನಂತರ ಊಟ. ಊಟಕ್ಕೆ ಮುಂಚೆ ದೊಡ್ಡ ದೊಡ್ಡ ಬಾಟ್ಲಿಗಳಲ್ಲಿ ಡ್ರಿಂಕ್‌್ಸ, ಸೋಡಾ, ತಿಂಡಿಗಳನ್ನು ನನ್ನ ಮುಂದೆ ಇರಿಸಿದರು.

ಅವನ್ನು ನೋಡಿ ಬಾಯಲ್ಲಿ ನೀರೂರಿದರೂ, ತೋರ್ಪಡಿಸಿಕೊಳ್ಳದೆ, ‘ನಾನೀಗ ಮದ್ಯವನ್ನು ಬಿಟ್ಟುಬಿಟ್ಟಿದ್ದೇನೆ’ ಎಂದೆ. ಆದರೆ ಆ ಸ್ನೇಹಿತರು ಬಿಡಬೇಕಲ್ಲ. ‘ದಯವಿಟ್ಟು ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು. ನನ್ನ ನಿರ್ಧಾರವನ್ನು ಮುಂದಿನ ವರ್ಷಕ್ಕೆ ಮುಂದೂಡಿದೆ. ಹಾಗೇ ಕುಡಿತ ವರ್ಷದಿಂದ ಮತ್ತೊಂದು ವರ್ಷಕ್ಕೆ ಜಿಗಿಯುತ್ತಾ ಓಡುತ್ತಲೇ ಇದೆ! ಆದರೆ ಈ ಬಾರಿ ಖಂಡಿತ ಬಿಟ್ಟೇ ಬಿಡುವ ಪಣ ತೊಟ್ಟಿದ್ದೇನೆ. 
–ಎನ್‌. ಆರ್‌. ತಮ್ಮಯ್ಯಶೆಟ್ಟಿ ಅರಸೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT