ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳೇ ಬದುಕಿನ ದಾರಿ ದೀಪಗಳು…

Last Updated 14 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಕೆಲ ಪ್ರತ್ಯೇಕತಾವಾದಿ ಉಗ್ರರ ಜತೆ ಸೇರಿಕೊಂಡು ಸೇನೆಯ ಜತೆ ಸದಾ ಸಂಘರ್ಷ ನಡೆಸುತ್ತಿರುವ ಯುವಕರಿಗೆ ಒಂದು ನೆಲೆ ಕಲ್ಪಿಸಬೇಕು ಎಂಬ ಹಂಬಲ ಅವರದಾಗಿತ್ತು.

ಈ ನಿಟ್ಟಿನಲ್ಲಿ ಮುಂದಡಿ ಇಟ್ಟು, ಈಶಾನ್ಯ ಭಾರತದ 15 ಸಾವಿರಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ಕಲ್ಪಿಸಿಕೊಟ್ಟ ಸಾಧಕ ನಿಚುಟೆ ಡೌಲೊ ಅವರ ಯಶಸ್ವಿ ಸಾಧನೆಯ ಕಥೆ ಇದು. ಇವರ ಅಮೂಲ್ಯ ಸಾಧನೆಗೆ ಚ್ವಬ್‌ ಫೌಂಡೇಶನ್್ ಅಂತರರಾಷ್ಟ್ರೀಯ ಸಂಸ್ಥೆ 2016ನೇ ಸಾಲಿನ ‘ಸಾಮಾಜಿಕ ವಾಣಿಜ್ಯೋದ್ಯಮಿ’ ಎಂಬ ಪುರಸ್ಕಾರ ನೀಡಿ ಗೌರವಿಸಿದೆ.

40ರ ಹರೆಯದ ನಿಚುಟೆ ಡೌಲೊ ನಾಗಾಲ್ಯಾಂಡ್‌ನವರು. ‘ಅರ್ಥಶಾಸ್ತ್ರ’ದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸ್ಥಳೀಯ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದರು. ಈ ವೃತ್ತಿ ಅವರಿಗೆ ತೃಪ್ತಿ ತರಲಿಲ್ಲ! ಇಂದಿನ ಯುವ ಜನರನ್ನು ನಿರುದ್ಯೋಗದಿಂದ ಪಾರು ಮಾಡಿ ಅವರಿಗೆ ಉದ್ಯೋಗದ ದಾರಿ ತೋರಬೇಕು ಎಂಬುದು ನಿಚುಟೆ ಡೌಲೊ ಅವರ ಹಂಬಲ ಮತ್ತು ಗುರಿಯೂ ಆಗಿತ್ತು. ಅದಕ್ಕಾಗಿ ಅವರ ಬಳಿ ಸಾಕಷ್ಟು ಹಣವಿರಲಿಲ್ಲ. ನಿರುದ್ಯೋಗಿಗಳ ಏಳಿಗೆಗಾಗಿ ಗಟ್ಟಿ ಮನಸ್ಸು ಮಾಡಿದ ನಿಚುಟೆ, ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ‘ಎಂಟರ್‌ಪ್ರೆನ್ಯೂರ್ಸ್್ ಅಸೋಸಿಯೇಟ್ಸ್’ (ಇಎ)ಎಂಬ ಸಂಸ್ಥೆಯನ್ನು ಕೇವಲ 7500 ರೂಪಾಯಿ ಬಂಡವಾಳದಲ್ಲಿ ಹುಟ್ಟುಹಾಕಿದರು.

ನಿರುದ್ಯೋಗಿಗಳಿಗೆ ಉದ್ಯಮ ಆರಂಭಿಸಲು ಕಡಿಮೆ ಬಡ್ಡಿ ದರದಲ್ಲಿ ಹಣಕಾಸು ನೆರವು ಒದಗಿಸುವುದು ಮತ್ತು ಕೌಶಲಾಭಿವೃದ್ಧಿ ತರಬೇತಿ ನೀಡುವುದು ಇಎ ಸಂಸ್ಥೆಯ ಮುಖ್ಯ ಕೆಲಸವಾಗಿದೆ. ನಾಗಾಲ್ಯಾಂಡ್ ಮತ್ತು ಮಣಿಪುರ ರಾಜ್ಯಗಳ 15 ಸಾವಿರಕ್ಕೂ ಹೆಚ್ಚು ಯುವಕರು ಈ ಸಂಸ್ಥೆಯಿಂದ ಹಣಕಾಸು ನೆರವು ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಮಹಿಳೆಯರು ಮತ್ತು ಅಂಗವಿಕಲರಿಗೆ ಆದ್ಯತೆ ನೀಡುವ ಮೂಲಕ ಉದ್ಯಮಿಗಳಾಗುವಂತೆ ಡೌಲೊ ಪ್ರೇರೇಪಣೆ ನೀಡುತ್ತಿದ್ದಾರೆ.

ಈಶಾನ್ಯ ಭಾರತ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ತೊಲಗಿಸುವುದೇ ನಮ್ಮ ಸಂಸ್ಥೆಯ ಮುಖ್ಯ ಧ್ಯೇಯ ಎನ್ನುತ್ತಾರೆ ಡೌಲೊ. ಸುಮಾರು 2700 ಸಣ್ಣ ಉದ್ಯಮಗಳಿಗೆ ಸಾಲ ಸೌಲಭ್ಯ ಕಲ್ಪಿಸಲಾಗಿದ್ದು, ವಾರ್ಷಿಕ 150 ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಸಲಾಗುತ್ತಿದೆ ಎಂದು ಅವರು ಹೇಳುತ್ತಾರೆ. ಪ್ರಸ್ತುತ ನಾಗಾಲ್ಯಾಂಡ್ ಮತ್ತು ಮಣಿಪುರದಲ್ಲಿ ಇಎ ಸಂಸ್ಥೆ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈಶಾನ್ಯ ಭಾರತದ ಎಲ್ಲ ರಾಜ್ಯಗಳಿಗೂ ಈ ಸೇವೆಯನ್ನು ವಿಸ್ತರಿಸುವುದಾಗಿ ಡೌಲೊ ಹೇಳುತ್ತಾರೆ.
www.facebook.com/eanagaland

*
ನೇಹಾ  ಬಗಾರಿಯಾ
ಮಹಿಳೆಯರಿಗೆ ಉದ್ಯೋಗ ಕೊಡಿಸುವ ಕಾಯಕದಲ್ಲಿ ನಿರತರಾಗಿರುವ ನೇಹಾ ಬಗಾರಿಯಾ ಅವರ ಕಥೆ ಇದು. ನೇಹಾ ಬಗರಿಯಾ ಮೂಲತಃ ಮುಂಬೈನವರು. ಬೆಂಗಳೂರಿಗೆ ವಲಸೆ ಬಂದು ಮಹಿಳೆಯರಿಗೆ ಉದ್ಯೋಗ ಕೊಡಿಸುವ ಮತ್ತು  ಔದ್ಯೋಗಿಕ ಕೌಶಲದ ಬಗ್ಗೆ ತರಬೇತಿ ನೀಡುವಂತಹ ಸ್ಟಾರ್ಟ್ಅಪ್ ಸ್ಥಾಪಿಸಿದ್ದಾರೆ. ನೇಹಾ ತೆರೆದಿರುವ ‘ಜಾಬ್ ಫಾರ್ ಹರ್’ ಕಂಪೆನಿಯ ಮುಖಾಂತರ ಇಲ್ಲಿಯವರೆಗೂ ಸಾವಿರಕ್ಕೂ ಹೆಚ್ಚು ಮಹಿಳೆಯರು ಉದ್ಯೋಗಾವಕಾಶಗಳನ್ನು ಪಡೆದುಕೊಂಡಿದ್ದಾರೆ.

ನೇಹಾ, ಮಾರ್ಕೆಟಿಂಗ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಪದವಿ ಬಳಿಕ ಕೆಲವು ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡಿದ್ದರು. ಮದುವೆಯ ನಂತರ ನೇಹಾ ಬೆಂಗಳೂರಿಗೆ ವಲಸೆ ಬಂದರು. ಅವರ ಪತಿ ಬೆಂಗಳೂರಿನಲ್ಲಿ ಕಂಪೆನಿಯನ್ನು ನಡೆಸುತ್ತಿದ್ದು, ಅದರಲ್ಲೂ ಕೆಲವು ತಿಂಗಳು ಕೆಲಸ ಮಾಡಿದರು.

ಗರ್ಭಿಣಿಯಾದ್ದರಿಂದ ನೇಹಾ ಕೆಲಸ ಬಿಟ್ಟು ಮನೆ ಸೇರಬೇಕಾಯಿತು. ಮಕ್ಕಳ ಲಾಲನೆ ಪಾಲನೆ ಮಾಡುತ್ತ ಮನೆಯಲ್ಲಿ ಸಮಯ ಕಳೆಯುವುದು ಅವರಿಗೆ ಬೋರ್ ಹೊಡೆಯತೊಡಗಿತ್ತು. ಈ ವೇಳೆ ಕೆಲಸಕ್ಕಾಗಿ ಹುಡುಕಿದರೂ ನೇಹಾಗೆ ಹೊಂದಿಕೆಯಾಗುವಂತಹ ಕೆಲಸ ಎಲ್ಲಿಯೂ ಸಿಗಲಿಲ್ಲ! ಮಹಿಳೆಯರಿಗಾಗಿ ಉದ್ಯೋಗದ ಬಗ್ಗೆ ಮಾಹಿತಿ ನೀಡುವ ಯಾವುದೇ ಕಂಪೆನಿಗಳು ಇಲ್ಲಿ ಇರಲಿಲ್ಲ!

ಜತೆಗೆ ಸಾಕಷ್ಟು ಮಹಿಳೆಯರು ನೇಹಾ ಎದುರಿಸುತ್ತಿದ್ದ ಸಮಸ್ಯೆಯನ್ನೇ ಎದುರಿಸುತ್ತಿರುವುದು ಅವರ ಗಮನಕ್ಕೆ ಬಂತು! ಈ ಸಮಸ್ಯೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಮಹಿಳೆಯರಿಗಾಗಿ ಉದ್ಯೋಗದ ಮಾಹಿತಿ ನೀಡುವ ‘ಜಾಬ್ ಫಾರ್ ಹರ್’ ಎಂಬ ಸ್ಟಾರ್ಟ್ಅಪ್ ಆರಂಭಿಸುವ ಮೂಲಕ ಹೊಸ ಬದುಕಿಗೆ ಮುನ್ನುಡಿ ಬರೆದರು. ಬಹುರಾಷ್ಟ್ರೀಯ ಮತ್ತು ಕಾರ್ಪೊರೇಟ್ ಕಂಪೆನಿಗಳು ಸೇರಿದಂತೆ ಹಲವಾರು ಸಂಸ್ಥೆಗಳಲ್ಲಿ ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ಕೊಡಿಸಿದ್ದಾರೆ. ಜತೆಗೆ ತಮ್ಮ ಕಂಪೆನಿಯಲ್ಲಿ 30ಕ್ಕೂ ಹೆಚ್ಚು ಜನರಿಗೆ ಕೆಲಸ ಕೊಟ್ಟಿದ್ದಾರೆ.

ಕಚೇರಿಗಳಿಗೆ ಮಹಿಳೆಯರ ಅಲೆದಾಟವನ್ನು ತಪ್ಪಿಸಿ ಅವರ ಬೆರಳ ತುದಿಯಲ್ಲೇ ಉದ್ಯೋಗದ ಮಾಹಿತಿ ನೀಡುವುದು ‘ಜಾಬ್ ಫಾರ್ ಹರ್’ ಕಂಪೆನಿಯ ಮುಖ್ಯ ಕೆಲಸ. ಜತೆಗೆ ಉದ್ಯೋಗಕ್ಕಾಗಿ ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು, ಉದ್ಯೋಗದ ಕೌಶಲಗಳು, ಸಂದರ್ಶನವನ್ನು ಎದುರಿಸುವ ಬಗೆಗಳ ಕುರಿತು ತರಬೇತಿ ನೀಡುತ್ತಿದ್ದಾರೆ. ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡುವುದೇ ನಮ್ಮ ಕಂಪೆನಿ ಉದ್ದೇಶ ಎನ್ನುತ್ತಾರೆ ನೇಹಾ.
www.jobsforher.com

*
ತಾರಾ ಪಾಟ್ಕರ್ 
ಬುಂದೇಲ್ ಖಂಡ್ ಪ್ರಾಂತ್ಯದ ಪ್ರಬುದ್ಧ ಮನಸ್ಸಿನ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ತಾರಾ ಪಾಟ್ಕರ್ ಅವರ ಸಾಧನೆಯ ಕಥೆ ಇದು. ಸಮಾನಮನಸ್ಕ ಗೆಳೆಯರ ಜತೆ ಸೇರಿಕೊಂಡು ಹಸಿದವರಿಗೆ ರೊಟ್ಟಿ ಕೊಡುವ ‘ರೊಟ್ಟಿ ಬ್ಯಾಂಕ್’ ಆರಂಭಿಸುವ ಮೂಲಕ ತಾರಾ ಪಾಟ್ಕರ್ ದೇಶದ ಗಮನ ಸೆಳೆದಿದ್ದಾರೆ.

42ರ ಹರೆಯದ ತಾರಾ ಪಾಟ್ಕರ್ ಮೂಲತಃ ಬುಂದೇಲ್ ಪ್ರಾಂತ್ಯದವರು. ತೀರಾ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಈ ಪ್ರಾಂತ್ಯದಲ್ಲಿ ಈಗಲೂ ಬಡತನ, ನಿರುದ್ಯೋಗ, ಹಸಿವು ತಾಂಡವವಾಡುತ್ತಿದೆ. ಈ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಿರುವ ತಾರಾ ಪಾಟ್ಕರ್, ಮೊದಲು ಹಸಿದವರಿಗೆ ರೊಟ್ಟಿ ಕೊಡುವ ಉದ್ದೇಶದಿಂದ ‘ರೊಟ್ಟಿ ಬ್ಯಾಂಕ್’ ಆರಂಭಿಸಿದ್ದಾಗಿ ಹೇಳುತ್ತಾರೆ. ರೊಟ್ಟಿ ಬ್ಯಾಂಕ್ ತಂಡದ ಸದಸ್ಯರ ಜತೆ ಸೇರಿಕೊಂಡು ಮನೆ ಮನೆಗೆ ತೆರಳಿ ರೊಟ್ಟಿಗಳನ್ನು ಸಂಗ್ರಹಿಸಿ ಅವುಗಳನ್ನು ಬಡವರು ಮತ್ತು ನಿರ್ಗತಿಕರಿಗೆ ಹಂಚುತ್ತಾರೆ.

‘ದಯನೀಯ ಸ್ಥಿತಿಯಲ್ಲಿ ಬದುಕುತ್ತಿರುವ ನಿರ್ಗತಿಕರು, ದಲಿತರು, ಬುಡಕಟ್ಟು ಜನರು, ಅರಣ್ಯವಾಸಿಗಳಿಗೆ ಮೊದಲು ಹೊಟ್ಟೆ ತುಂಬಿಸುವ ವ್ಯವಸ್ಥೆ ಮಾಡಬೇಕು. ನಂತರ ಶಿಕ್ಷಣ ಕೊಡಿಸಬೇಕು’ ಎನ್ನುತ್ತಾರೆ ತಾರಾ ಪಾಟ್ಕರ್. ಮಧ್ಯವರ್ತಿಗಳ ಹಾವಳಿಯಿಂದ ಈ ಪ್ರದೇಶದ ಜನರಿಗೆ ಸರ್ಕಾರಿ ಸವಲತ್ತುಗಳು ಸರಿಯಾಗಿ ತಲುಪುತ್ತಿಲ್ಲವಾದ್ದರಿಂದ ಅಭಿವೃದ್ಧಿ ಕಾಣದೇ ಹಿಂದುಳಿದಿದೆ ಎಂಬುದು ತಾರಾ ಪಾಟ್ಕರ್ ಅವರ ಅಭಿಮತ. ಸರ್ಕಾರಿ ಯೋಜನೆಗಳಿಗಾಗಿ ಕಾದು ಕುಳಿತರೆ ಬಡವರ ಹೊಟ್ಟೆ ತುಂಬುವುದಿಲ್ಲ ಎಂಬುದನ್ನು ಅರಿತು ಈ ರೊಟ್ಟಿ ಬ್ಯಾಂಕ್ ತೆರೆದಿರುವುದಾಗಿ ಅವರು ಹೇಳುತ್ತಾರೆ.

‘ನಮ್ಮ ರೊಟ್ಟಿ ಬ್ಯಾಂಕ್ ವ್ಯವಸ್ಥೆ ತಾತ್ಕಾಲಿಕವಾದುದು, ಬಡವರಿಗೆ ಉದ್ಯೋಗ ವ್ಯವಸ್ಥೆ ಕಲ್ಪಿಸಿ ಅವರ ಅನ್ನಕ್ಕೆ ಒಂದು ದಾರಿ ಮಾಡಿಕೊಡುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳು, ಸ್ಥಳೀಯ ಸರ್ಕಾರಗಳ ಜೊತೆ ಸೇರಿ ಉದ್ಯೋಗ ಸೃಷ್ಟಿಗೆ ಪ್ರಯತ್ನಿಸಲಾಗುತ್ತಿದೆ’ ಎಂದು ತಾರಾ ಪಾಟ್ಕರ್ ಹೇಳುತ್ತಾರೆ.
www.facebook.com/tara.patkar

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT