ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯವೆಂಬುದು ಒಂದು ಮಾತ್ರವೇ?

Last Updated 14 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಹಗ್ಗ ಮತ್ತು ಆಕಾಶದ ರೂಪಕವೊಂದನ್ನು ಮುಲ್ಲಾ ನಾಸಿರುದ್ದೀನ್ ಬಳಸುತ್ತಾನೆ. ಇದೊಂದು ಸರಳವಾದ ಕಥೆ. ದಾರಿಯಲ್ಲಿ ಹೋಗುತ್ತಿರುವಾಗ ಮುಲ್ಲಾನನ್ನು ಭೇಟಿಯಾಗುವ ಸಾಧಕನೊಬ್ಬ ‘ಎಲ್ಲವನ್ನೂ ಆವರಿಸಿ ಅರ್ಥೈಸಬಹುದಾದ ಸತ್ಯವೊಂದಿದೆಯೇ’ ಎಂಬ ಪ್ರಶ್ನೆ ಕೇಳುತ್ತಾನೆ. ಇದಕ್ಕೆ ಮುಲ್ಲಾ ಉತ್ತರಿಸುವುದಿಲ್ಲ. ಬದಲಿಗೆ ತನ್ನ ಜೋಳಿಗೆಯಿಂದ ಹಗ್ಗ ತೆಗೆದು ಜೊತೆಗಾರನನ್ನು ಉದ್ದೇಶಿಸಿ ಹೇಳುತ್ತಾನೆ ‘ಇವನು ಹೆಚ್ಚು ಕುಣಿದಾಡಿದರೆ ಅವನನ್ನು ಕಟ್ಟಿ ಹಾಕೋಣ’.

ಈ ಮಾತುಗಳು ಸಾಧಕನಿಗೆ ಅರ್ಥವಾಗುತ್ತದೆ. ಅವನು ತನ್ನ ದಾರಿಯನ್ನು ಹಿಡಿಯುತ್ತಾನೆ. ಮುಲ್ಲಾ ಹೇಳಿದ್ದೇನೆಂದು ಅವನ ಜೊತೆಗಾರನಿಗೆ ಅರ್ಥವಾಗುವುದಿಲ್ಲ. ಮುಲ್ಲಾನ ಹುಚ್ಚಾಟಗಳನ್ನು ಅರಿತಿದ್ದ ಸಹಾಯಕ ಅದೇನೆಂಬ ವಿವರಣೆಯನ್ನೂ ಕೇಳುವುದಿಲ್ಲ. ಬಹುಕಾಲ ಕಳೆದ ನಂತರ ಒಂದು ದಿನ ಮುಲ್ಲಾನ ಜೊತೆಗಾರನಿಗೂ ‘ಎಲ್ಲವನ್ನೂ ಒಳಗೊಳ್ಳುವ ಸತ್ಯವೊಂದಿರಬಹುದೇ?’ ಎಂಬ ಸಂಶಯ ಬರುತ್ತದೆ. ಇದನ್ನೇ ಅವನು ಮುಲ್ಲಾನ ಬಳಿ ಕೇಳುತ್ತಾನೆ. ಮುಲ್ಲಾ ಮತ್ತೆ ಹಗ್ಗ ತೆಗೆದು ಹೆಚ್ಚು ಕುಣಿದಾಡಿದರೆ ಕಟ್ಟಿ ಹಾಕುತ್ತೇನೆ ಎನ್ನುತ್ತಾನೆ.

ಜೊತೆಗಾರನಿಗೆ ಮುಲ್ಲಾ ಹೇಳಿದ್ದೇನೆಂದು ಅರ್ಥವಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳುವುದು ದೊಡ್ಡ ಸಾಧನೆಯೇನೂ ಅಲ್ಲ. ಎಲ್ಲವನ್ನೂ ಒಳಗೊಳ್ಳುವ ಒಂದು ಸತ್ಯವಿದೆಯೇ ಎಂಬ ಪ್ರಶ್ನೆಯ ಕುರಿತು ಆಲೋಚಿಸುತ್ತಾ ಹೋದಂತೆ ಮುಲ್ಲಾ ಯಾಕೆ ಹಾಗೆ ಹೇಳಿದ ಎಂಬುದು ನಮಗೂ ಅರ್ಥವಾಗುತ್ತದೆ. ಎಲ್ಲವನ್ನೂ ಒಂದಕ್ಕೆ ಕಟ್ಟಿಬಿಡುವ ಅಥವಾ ಎಲ್ಲ ಸತ್ಯಗಳಿಗೂ ಅತೀತವಾದ ಒಂದು ಸತ್ಯದ ಹುಡುಕಾಟ ಇಂದು ನಿನ್ನೆಯದೇನೂ ಅಲ್ಲ.

ಸತ್ಯದ ಸ್ವರೂಪವನ್ನು ಅದರ ಸಹಜತೆಯಲ್ಲಿ ಅರ್ಥ ಮಾಡಿಕೊಳ್ಳುವ ಯಾರಿಗೂ ಒಂದೇ ಸತ್ಯಕ್ಕೆ ಎಲ್ಲವನ್ನೂ ಕಟ್ಟಿಬಿಡುವ ಆತುರ ಇರುವುದಿಲ್ಲ. ಮುಲ್ಲ ಹಗ್ಗದ ರೂಪಕದಲ್ಲಿ ಹೇಳುತ್ತಿದ್ದುದು ಅದನ್ನೇ. ಆಕಾಶವನ್ನು ಚಾಪೆಯಂತೆ ಸುತ್ತಿ ಕಟ್ಟಿಡಲು ಸಾಧ್ಯವಿಲ್ಲ ಎಂದು ಮುಲ್ಲಾನ ಒಗಟಿನಂಥ ಮಾತುಗಳಲ್ಲಿದ್ದ ಅರ್ಥವೂ ಇದುವೇ.

ಸತ್ಯವನ್ನು ಅರ್ಥೈಸಿಕೊಳ್ಳಬೇಕಿರುವುದು ಅದರ ಸೂಕ್ಷ್ಮದಲ್ಲಿ ಮಾತ್ರ ಅಲ್ಲ. ಅದರ ಸ್ಥೂಲ ಸ್ವರೂಪದಲ್ಲಿಯೂ ಹೌದು. ಅದರ ಬಹುತ್ವದಲ್ಲಿಯೂ ಅದು ನಿಜವೇ. ಈ ಸರಳ ವಾಸ್ತವವನ್ನು ಅರಿಯದೇ ಇರುವುದರ ಪರಿಣಾಮವೇ ಒಂದು ಸತ್ಯದ ಹುಡುಕಾಟ. ಯಾವುದೋ ಒಂದು ಮಂತ್ರ ಶಕ್ತಿ ದೊರೆತರೆ, ಒಂದು ಸ್ಪರ್ಶ ಮಣಿ ದೊರೆತರೆ ಎಂಬ ಆಸೆಗಳೆಲ್ಲವೂ ಮತ್ತೆ ತಂದು ನಮ್ಮನ್ನು ನಿಲ್ಲಿಸುವುದು ಲೌಕಿಕದ ಸಣ್ಣ ಪುಟ್ಟ ಆಸೆಗಳ ಬಳಿಗೇ ಅಲ್ಲವೇ?

ವರ್ತಮಾನವನ್ನು ವರ್ತಮಾನದಂತೆಯೇ ಗ್ರಹಿಸುವ ಮನಃಸ್ಥಿತಿಯೊಂದನ್ನು ಬೆಳೆಸಿಕೊಂಡರೆ ಸಾಕು ಎಂಬುದು ಮುಲ್ಲಾನ ಹಗ್ಗ ಹೇಳುತ್ತಿದೆ. ಆತ್ಯಂತಿಕವಾದ ಒಂದು ಸತ್ಯವನ್ನು ಹುಡುಕಲು ಹೊರಡುವುದು ನಮ್ಮನ್ನು ನಾವು ಕಟ್ಟಿ ಹಾಕಿಕೊಳ್ಳುವ ಕ್ರಿಯೆ ಎಂಬುದು ಅದರ ಅರ್ಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT