ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಸಕ್ರಮ: ಬಡವರಿಗೆ ಇರಲಿ ವಾಣಿಜ್ಯ ಕಟ್ಟಡಗಳಿಗೆ ಏಕೆ?

Last Updated 14 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ರಾಜ್ಯದ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಅಕ್ರಮವಾಗಿ ನಿರ್ಮಿಸಿದ ನಿವೇಶನಗಳು ಮತ್ತು ಕಟ್ಟಡಗಳು  ಕೆಲವು ಷರತ್ತಿಗೆ ಒಳಪಟ್ಟು ಸಕ್ರಮಗೊಳ್ಳುವ  ಮುಹೂರ್ತ ಕೊನೆಗೂ ಕೂಡಿಬಂದಿದೆ. ‘ಕರ್ನಾಟಕ ನಗರ ಮತ್ತು ಗ್ರಾಮೀಣ ಯೋಜನಾ ಕಾಯ್ದೆ ತಿದ್ದುಪಡಿ’ಗೆ ಅನುಸಾರವಾಗಿ 2014 ಮೇ 28ರಂದು ರಾಜ್ಯ ಸರ್ಕಾರ ಈ ಕುರಿತು ಹೊರಡಿಸಿದ್ದ ಅಧಿಸೂಚನೆಯನ್ನು  ಹೈಕೋರ್ಟ್ ಎತ್ತಿ ಹಿಡಿದಿದೆ.

ಸಾರ್ವಜನಿಕ ವಲಯದಲ್ಲಿ ‘ಅಕ್ರಮ– ಸಕ್ರಮ’ ಎಂದೇ ಜನಜನಿತವಾದ ಈ ಅಧಿಸೂಚನೆ ಜಾರಿಯಿಂದ ಲಕ್ಷಾಂತರ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಏಕೆಂದರೆ, ಕಾನೂನಿನ ದೃಷ್ಟಿಯಲ್ಲಿ ಅಕ್ರಮ ಎಂದು ಪರಿಗಣಿಸಲಾದ ನಿವೇಶನಗಳನ್ನು ಅವರು ಖರೀದಿಸಿದ್ದಾರೆ ಅಥವಾ ಅನಧಿಕೃತವಾಗಿ ಮನೆ ಕಟ್ಟಿಕೊಂಡಿದ್ದಾರೆ. ಸ್ಥಳೀಯ ಸಂಸ್ಥೆಗಳಿಗೆ ಆಸ್ತಿ ತೆರಿಗೆಯನ್ನೂ ಪಾವತಿಸುತ್ತಿದ್ದಾರೆ. ಆದರೂ ಇಂತಹ ಲಕ್ಷಾಂತರ ನಿವೇಶನ, ಕಟ್ಟಡಗಳಿಗೆ ಕಾನೂನಿನ ಮಾನ್ಯತೆ ಇರಲಿಲ್ಲ.  ಮಾಲೀಕರು ಆತಂಕದಿಂದಲೇ ದಿನ ದೂಡುವಂತಾಗಿತ್ತು. ಅವರ ಅನಿಶ್ಚಯ ಕೊನೆಗೊಳ್ಳಲಿದೆ. ಮಾನವೀಯ ನೆಲೆಯಲ್ಲಿ ಅಷ್ಟರಮಟ್ಟಿಗೆ ಕೋರ್ಟ್ ತೀರ್ಪು ಸ್ವಾಗತಾರ್ಹ.

2013ರ ಅಕ್ಟೋಬರ್‌ 19ಕ್ಕಿಂತ ಮುಂಚೆ ನಡೆದ ಭೂ ಬಳಕೆ ಮತ್ತು ಕಟ್ಟಡಗಳ ನಕ್ಷೆ ಉಲ್ಲಂಘನೆ, ನಿವೇಶನಗಳ ಅನಧಿಕೃತ ವಿಭಜನೆ,  ಪರವಾನಗಿ ಪಡೆಯದೆ ನಿರ್ಮಾಣವಾದ ಹಾಗೂ ವಾಸಯೋಗ್ಯ ಪ್ರಮಾಣ ಪತ್ರ ಅಥವಾ ಖಾತಾ ಸಂಖ್ಯೆ ಹೊಂದಿದ ಕಟ್ಟಡಗಳ ಮಾಲೀಕರು ಇನ್ನು ಸರ್ಕಾರ ಪರಿಷ್ಕೃತ ಅಧಿಸೂಚನೆ ಹೊರಡಿಸಿದ ನಂತರ  ನಿಗದಿತ ದಂಡ ತೆತ್ತು ತಮ್ಮ ಆಸ್ತಿಯನ್ನು ಕಾನೂನುಬದ್ಧ ಮಾಡಿಕೊಳ್ಳಬಹುದು.  

ಆದರೆ ಆ  ದಿನದ ನಂತರ ಕಟ್ಟಿಕೊಂಡವರ ಗತಿ ಏನು? ಅದು ಕೂಡ ಮುಂದೊಂದು ದಿನ ದೊಡ್ಡ ಸಮಸ್ಯೆಯಾಗದಂತೆ ಈಗಲೇ ನಿಗಾ ವಹಿಸಬೇಕು.  ಕೆರೆ ಅಂಗಳ ಸೇರಿದಂತೆ ಕೆಲ ಒತ್ತುವರಿಗಳನ್ನು ಸಕ್ರಮದ ವ್ಯಾಪ್ತಿಯಿಂದ ಹೊರಗಿಟ್ಟಿರುವುದು  ಒಳ್ಳೆಯ ಕ್ರಮ.  ಇಲ್ಲಿ ಅಕ್ರಮ ಸಕ್ರಮದ ವಿಷಯದಲ್ಲಿ ಕೋರ್ಟ್ ಸಹ ಹೆಚ್ಚು ಔದಾರ್ಯ ಪ್ರದರ್ಶಿಸಿದೆ. ಏಕೆಂದರೆ ಬೆಂಗಳೂರು ನಗರವೊಂದರಲ್ಲಿಯೇ 1.35 ಲಕ್ಷಕ್ಕೂ ಹೆಚ್ಚು ಮನೆ, ನಿವೇಶನಗಳು ಅಕ್ರಮ ಎನಿಸಿಕೊಂಡಿವೆ. ರಾಜ್ಯದ ಇತರೆಡೆಯೂ  ಇವುಗಳ ಸಂಖ್ಯೆ ದೊಡ್ಡದಿದೆ. ಅವನ್ನೆಲ್ಲ ಕೆಡವಿದರೆ ಸಾಮಾಜಿಕ, ಆರ್ಥಿಕ ಸಮಸ್ಯೆಯಾಗಬಹುದು.

ಲಕ್ಷಾಂತರ ಕುಟುಂಬಗಳು  ಬೀದಿಗೆ ಬೀಳಬಹುದು. ಅದು  ನಿರುದ್ಯೋಗ, ಕಾನೂನು ಸುವ್ಯವಸ್ಥೆ ಸಮಸ್ಯೆ ತಂದೊಡ್ಡಬಹುದು ಎಂಬುದನ್ನೂ ಅದು ಪರಿಗಣನೆಗೆ ತೆಗೆದುಕೊಂಡಿರುವುದು ಸರಿ.  ಬಡವರು ಮತ್ತು ಮಧ್ಯಮ ವರ್ಗದವರು ಅನಿವಾರ್ಯವಾಗಿ, ಅಸಹಾಯಕತೆಯಿಂದ ವಾಸಕ್ಕೋಸ್ಕರ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದರೆ ಮಾನವೀಯತೆಯ ನೆಲೆಯಲ್ಲಿ ಅದನ್ನು ಸಕ್ರಮಗೊಳಿಸಲು ಯಾವುದೇ ತಕರಾರು ಇರಲಾರದು.

ಆದರೆ ವಾಣಿಜ್ಯ ಕಟ್ಟಡಗಳಿಗೂ ಈ ಅನುಕೂಲ ಕಲ್ಪಿಸುವುದು ಸರಿಯಲ್ಲ. ಅವುಗಳಿಂದ ಬಾಡಿಗೆ ಪಡೆಯುತ್ತಿರುವವರ, ಲಾಭ ಮಾಡಿಕೊಂಡವರ ಬಗ್ಗೆ ಅನುಕಂಪ ಪ್ರದರ್ಶಿಸುವುದು ಅನಗತ್ಯ. ಸಕ್ರಮದ ಲಾಭವನ್ನು ಭೂ ಮಾಫಿಯಾಗಳು ಕಬಳಿಸಿ ಕೊಬ್ಬಲು ಬಿಡಕೂಡದು. ನಗರ ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಹೀಗಾಗಿ ಇದು ಮಾಫಿಯಾ, ಭೂಗತ ಪಾತಕಿಗಳು, ರೌಡಿಗಳ ಚಟುವಟಿಕೆ ಬೆಳೆಯಲು ಕಾರಣವಾಗಿದೆ. ಆದ್ದರಿಂದ ಸರ್ಕಾರ ಇಲ್ಲಿ ಅತಿ ಹೆಚ್ಚಿನ ಎಚ್ಚರಿಕೆ, ವಿವೇಚನೆ ಪ್ರದರ್ಶಿಸಬೇಕು.

ಈ ಯೋಜನೆಯ ದುರುಪಯೋಗ ಮಾಡಿಕೊಳ್ಳಲು ಸಮಾಜದ್ರೋಹಿಗಳಿಗೆ ಅವಕಾಶ ಇರಬಾರದು.   ಕೆಲ ವರ್ಷಗಳ ಹಿಂದೊಮ್ಮೆ ಇದೇ ರೀತಿ ಅಕ್ರಮ– ಸಕ್ರಮಕ್ಕೆ ಅನುಮತಿ ನೀಡಲಾಗಿತ್ತು. ಆ ನಂತರವೂ ಲಕ್ಷಾಂತರ ಅಕ್ರಮ ನಿವೇಶನಗಳು, ಕಟ್ಟಡಗಳು ಅಸ್ತಿತ್ವಕ್ಕೆ ಬಂದಿವೆ ಎನ್ನುವುದೇ ಸೋಜಿಗ.   ಅಂದರೆ, ಇದರಲ್ಲಿ ಆಡಳಿತ ವ್ಯವಸ್ಥೆಯ ವೈಫಲ್ಯ ಎದ್ದು ಕಾಣುತ್ತಿದೆ. ಇದೊಂದು ರೀತಿಯಲ್ಲಿ ಹಗಲು ದರೋಡೆಗೆ ಸಮ.  ರಾಜಕಾರಣಿಗಳು ಮತ್ತು ಅಧಿಕಾರಶಾಹಿ ಶಾಮೀಲಾಗಿರುವುದು ಎಲ್ಲರಿಗೂ ಗೊತ್ತಿರುವಂತಹದ್ದು. ಅವರ ಕುಮ್ಮಕ್ಕಿಲ್ಲದೆ ಹೋಗಿದ್ದರೆ ಈ ಸಮಸ್ಯೆ ಪದೇ ಪದೇ ಉದ್ಭವಿಸುತ್ತಿರಲಿಲ್ಲ. 

ಜೊತೆಗೆ ಎಲ್ಲರಿಗೂ ವಸತಿ ಅಥವಾ ನಿವೇಶನಗಳನ್ನು ನಗರ ಅಭಿವೃದ್ಧಿ ಪ್ರಾಧಿಕಾರಗಳು ಪಾರದರ್ಶಕವಾಗಿ ವಿತರಿಸುವಂತಹ ಕ್ರಮ ಕೈಗೊಂಡಿದ್ದಲ್ಲಿ  ಈ ಪ್ರಮಾಣದ ಅಕ್ರಮಗಳಿಗೆ ಅವಕಾಶವಾದರೂ ಎಲ್ಲಿರುತ್ತಿತ್ತು? ಸರ್ಕಾರಗಳ ದೊಡ್ಡ ವೈಫಲ್ಯ ಇದು. ಇನ್ನು ಮುಂದಾದರೂ ಅನಧಿಕೃತ ನಿವೇಶನಗಳಾಗಲಿ, ಕಟ್ಟಡಗಳಾಗಲಿ ತಲೆ ಎತ್ತದಂತೆ ನೋಡಿಕೊಳ್ಳುವುದು ಸರ್ಕಾರದ, ಸ್ಥಳೀಯ ಸಂಸ್ಥೆಗಳ ಹೊಣೆ. ಅದಕ್ಕೆ ಬೇಕಿರುವುದು ದೂರಾಲೋಚನೆ, ದೀರ್ಘಾವಧಿಯ ಕಾರ್ಯ ಯೋಜನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT