ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುವಿ’ಯ ಗೂಡಿನಲ್ಲಿ

Last Updated 15 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ನಾವು ಮೊದಲು ಕೂಡು ಕುಟುಂಬದಲ್ಲಿ ಇದ್ದೆವು. ಮೂವತ್ತು ವರ್ಷದ ಒಳಗೆ ಮನೆ ಕಟ್ಟಿಸಬೇಕು ಎಂಬುದು ನನ್ನ ಆಸೆಯಾಗಿತ್ತು. ಅಂತೂ ಮೂವತ್ತಾರು ವರ್ಷದ ಒಳಗೆ ಮನೆ ಕಟ್ಟಿಸಿದೆ.

ನಮ್ಮ ಮನೆ ಇರುವುದು ನಾಗರಬಾವಿಯಲ್ಲಿ. 30X40 ಅಳತೆಯ ನಿವೇಶನದಲ್ಲಿ ಮನೆ ಕಟ್ಟಿಸಿದ್ದೇವೆ. ಈ ಜಾಗವನ್ನು ನನ್ನ ತಂದೆ ಕೊಟ್ಟಿದ್ದು. ಅವರು ಇದನ್ನು ನೀಡಿದ ವರ್ಷವೇ ಮನೆ ಕಟ್ಟಲು ಶುರು ಮಾಡಿದೆವು.

ನಿವೇಶನದ ಸ್ಥಳ ಸಣ್ಣದಾದರೂ, ಪ್ರತಿಯೊಬ್ಬರ ಅವಶ್ಯಕತೆಗಳನ್ನು ಪೂರೈಸುವ ರೀತಿಯಲ್ಲಿ ಮನೆಯನ್ನು ನಿರ್ಮಿಸಿದ್ದೇವೆ. ಮನೆ ಸರಳವಾಗಿದ್ದರೂ, ಅದರ ಅಂದ ಚೆಂದದೊಂದಿಗೆ ಯಾವುದೇ ರಾಜಿ ಮಾಡಿಕೊಂಡಿಲ್ಲ.

ಸಾಮಾನ್ಯವಾಗಿ ಚಿಕ್ಕವರಿರುವಾಗ ಕಾರು ಕೊಂಡುಕೊಳ್ಳಬೇಕು ಎಂಬ ಆಸೆಯಿರುತ್ತದೆ. ಆದರೆ ನನಗೆ ವಿಶಾಲವಾದ ಮನೆ ಕಟ್ಟಿಸಬೇಕು ಎಂಬ ಆಸೆಯಿತು. ನನ್ನ ಆದ್ಯತೆಗಳಿಗೆ ಅನುಗುಣವಾಗಿಯೇ ಮನೆ ನಿರ್ಮಾಣವಾಗಿದೆ.

2003ರಲ್ಲಿ ಮನೆ ಕಟ್ಟಲು ಶುರು ಮಾಡಿದೆವು. ಹತ್ತು ತಿಂಗಳಿನಲ್ಲಿಯೇ ಮನೆ ನಿರ್ಮಾಣ ಕಾರ್ಯ ಮುಕ್ತಾಯವಾಯಿತು. ಅಂದುಕೊಂಡಿದ್ದಕ್ಕಿಂತ ಬೇಗ ಕೆಲಸ ಮುಗಿದಿತ್ತು.

ಬ್ಯಾಂಕಿನಲ್ಲಿ ಸಾಲ ಸಹ ಸುಲಭವಾಗಿಯೇ ದೊರಕಿತು. ನಾನು ತುಂಬಾ ಬ್ಯುಸಿಯಾಗಿದ್ದರಿಂದ  ಬ್ಯಾಂಕಿನ ಮ್ಯಾನೇಜರ್‌ ನಾನಿರುವ ಸ್ಥಳಕ್ಕೇ ಬಂದು ನನ್ನ ಸಿಗ್ನೇಚರ್‌ ತೆಗೆದುಕೊಂಡು ಹೋಗಿದ್ದರು. ನಮ್ಮ ಬಜೆಟ್‌ ಇದ್ದಿದ್ದು 15 ಲಕ್ಷ. ಆದರೆ ಅದಕ್ಕಿಂತ 5 ಲಕ್ಷ ಹೆಚ್ಚೇ ಖರ್ಚಾಯಿತು. ಸ್ನೇಹಿತರು  ಹೆಚ್ಚಿನ ಹಣದ ಸಹಾಯವನ್ನು ಮಾಡಿದರು.

ಮನೆ ಕಟ್ಟುವುದು ಅಂದುಕೊಂಡಷ್ಟು ಸುಲಭವಲ್ಲ. ಆದರೆ ನನಗೆ ತೀರಾ ಕಷ್ಟವೇನು ಆಗಲಿಲ್ಲ. ಆ ವೇಳೆಯಲ್ಲಿ ನನಗೆ ಸಮಯವೇ ಇರುತ್ತಿಲ್ಲವಾದ್ದರಿಂದ ಮನೆಯ ನಿರ್ಮಾಣಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳಲು ಆಗಲಿಲ್ಲ. ನನ್ನ ಹೆಂಡತಿ ಅದರ ಮುತುವರ್ಜಿ ವಹಿಸಿದಳು.

ನಮ್ಮದು ಡ್ಯೂಪ್ಲೆಕ್ಸ್‌ ಮನೆ. ಗೋಡೆಗಳು ಹೆಚ್ಚಿದಷ್ಟು ಮನಸ್ಸುಗಳ ನಡುವಿನ ಅಂತರ ಹೆಚ್ಚುತ್ತದೆ ಎಂಬ ಕಾರಣಕ್ಕೆ ತಳಮಹಡಿಯಲ್ಲಿ ಗೋಡೆಗಳನ್ನೇ ಹಾಕಿಸಿಲ್ಲ. ಇದರಿಂದ ನಿವೇಶನದ ಸ್ಥಳ ಚಿಕ್ಕದಾದರೂ, ಮನೆ ವಿಶಾಲವಾಗಿ ಕಾಣುತ್ತದೆ. ಅಡುಗೆ ಮನೆ, ಡೈನಿಂಗ್‌ ಹಾಲ್‌, ಹಾಲ್‌ ಇದೆ. ಹಾಗಾಗಿ ನೋಡಲು ದೊಡ್ಡದೆನ್ನಿಸುತ್ತದೆ.

ನಮ್ಮನೆಯ ಕಿಟಕಿ ಹಲವು ರಂಧ್ರಗಳ ಜಾಲರಿಯಂತಿದೆ. ಅದಕ್ಕೆ ಬಾಗಿಲುಗಳೇ ಇಲ್ಲ. ಹಾಗಾಗಿ ಯಾವಾಗಲೂ ಗಾಳಿ, ಬೆಳಕು ಸರಾಗವಾಗಿ ಹರಿದಾಡುತ್ತದೆ. ಸೊಳ್ಳೆಗಳು ಬರಬಾರದು ಎಂಬ ಉದ್ದೇಶಕ್ಕೆ ಇತ್ತೀಚೆಗೆ ಮೆಷ್‌ ಹಾಕಿಸಿದ್ದೇನೆ.

ಮನೆಗೆ ನೇರವಾಗಿ ಸೂರ್ಯನ ಕಿರಣಗಳು ಬೀಳಬೇಕು ಎಂಬ ಉದ್ದೇಶದಿಂದ 10X6 ಜಾಗದಲ್ಲಿ ಸ್ಕೈಲೈಟ್‌ ವ್ಯವಸ್ಥೆ ಮಾಡಿದ್ದೇವೆ. ಸೂರ್ಯ, ಚಂದ್ರರ ಬೆಳಕು ಮನೆಯೊಳಗೇ ಬರುವುದರಿಂದ ಪ್ರಕೃತಿ ಮಡಿಲಲ್ಲಿ ಇದ್ದೇವೆ ಎಂಬ ಭಾವ ಉಂಟಾಗುತ್ತದೆ. ಬೇಸಿಗೆಯಲ್ಲಂತೂ ಸಂಜೆ ಏಳರವರೆಗೂ ಕೃತಕ ಲೈಟ್‌ ಹಾಕುವ ಪರಿಸ್ಥಿತಿಯೇ ಎದುರಾಗುವುದಿಲ್ಲ.

ನಮ್ಮ ಮನೆ ವಿನ್ಯಾಸಕ್ಕೆ ನಾನೇ ವಾಸ್ತುಶಿಲ್ಪಿ. ಸಾಕಷ್ಟು ಮನೆಯನ್ನು ಗಮನಿಸುತ್ತಿದ್ದರಿಂದ ನಮ್ಮ ಅಗತ್ಯಕ್ಕೆ ಅನುಗುಣವಾಗಿ ಹೇಗೆ ಮನೆ ನಿರ್ಮಿಸಬೇಕೆಂದು ಮನೆಯವರೊಂದಿಗೆ ಚರ್ಚಿಸಿ ಅದರ ವಿನ್ಯಾಸವನ್ನು ಮಾಡಿದೆ.

ವಾಸ್ತುವಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಮೂಲ ವಾಸ್ತುವನ್ನಷ್ಟೇ ನಂಬಿದ್ದೇವೆ. ಮನೆಯಲ್ಲಿ ದೇವರಿಗಾಗಿಯೇ ಪ್ರತ್ಯೇಕ ಕೋಣೆಯಿಲ್ಲ. ಡೈನಿಂಗ್‌ ಹಾಲ್‌ನಲ್ಲಿ ಪುಟ್ಟ ಗೂಡನ್ನು ದೇವರ ಮೂರ್ತಿ ಇಡಲು ಮೀಸಲಿಟ್ಟಿದ್ದೇವೆ. ಇದರ ಹೊರತಾಗಿ ಮನೆಯಲ್ಲಿ ಮೂರು ಬೆಡ್‌ ರೂಮ್‌, ಎರಡು ಹಾಲ್‌, ಸ್ಟೋರ್‌ ರೂಮ್‌ ಇದೆ. ನಾನು ಹೆಚ್ಚಿನ ಸಮಯ ಕಳೆಯುವುದು ಸ್ಟಡಿ ರೂಮ್‌ನಲ್ಲಿ. ನನ್ನ ಓದು, ಬರವಣಿಗೆ ಅಲ್ಲಿಯೇ ಆಗುತ್ತದೆ.

ಮನೆ ಕಟ್ಟಿಬಿಟ್ಟರೆ  ಸಾಲದು, ಅದಕ್ಕೆ ತಕ್ಕಂತೆ ಬಣ್ಣ, ಇನ್ನಿತರ ಅಲಂಕಾರಿಕ ವಸ್ತುಗಳೂ ಮುಖ್ಯವಾಗುತ್ತವಲ್ಲ. ಅದಕ್ಕೆಂದೇ ಮನೆಗೆ ವಿಶೇಷ ಲುಕ್ ಬರಲು ನೈಸರ್ಗಿಕ ಬಣ್ಣಗಳಿಗೆ ಆದ್ಯತೆ ನೀಡಿದ್ದೇನೆ. ಜೊತೆಗೆ ನಮ್ಮ ಕುಟುಂಬದ ಪೋರ್ಟ್ರೇಟ್‌ ಮಾಡಿಸಿದ್ದೇನೆ. ಇವೆಲ್ಲ ಮನೆಯ ಅಂದಕ್ಕೆ ಇನ್ನಷ್ಟು ಮೆರುಗು ನೀಡಿದೆ.

ಪ್ರತಿಯೊಬ್ಬರ ಅಗತ್ಯಗಳಿಗೂ ಆದ್ಯತೆ ನೀಡಿ ಮನೆ ವಿನ್ಯಾಸ ಮಾಡಿದ್ದೇನೆ.  ನನ್ನ ಹೆಂಡತಿ ವೀಣಾಸುಂದರ್‌ ಧಾರಾವಾಹಿಯಲ್ಲಿ ನಟಿಸುವುದರಿಂದ ಆಕೆಯ ಉಡುಪಿನ ಸಂಗ್ರಹ ಹೆಚ್ಚುತ್ತಲೇ ಇರುತ್ತದೆ. ಅದಕ್ಕಾಗಿ ಬೆಡ್‌ರೂಮ್‌ನಲ್ಲಿ ದೊಡ್ಡ ವಾರ್ಡ್‌ರೊಬ್‌ ಮಾಡಿಸಿದ್ದೇನೆ. ನನ್ನ ಮಗನಿಗೋಸ್ಕರವೇ ಪುಟ್ಟ ಬಾತ್‌ರೂಮ್‌ ನಿರ್ಮಿಸಿ, ಅದರ ಸುತ್ತ ಕಾರ್ಟೂನ್‌ ಟೈಲ್ಸ್‌ ಹಾಕಿಸಿದ್ದೇವೆ. ಆಗ ಅವನು ಚಿಕ್ಕವನಿದ್ದ, ಅವನಿಗೆ ಬಾತ್‌ರೂಮ್‌ ತುಂಬಾ ಇಷ್ಟವಾಗಿತ್ತು.

ಸಾಂಪ್ರದಾಯಿಕ ಸ್ಪರ್ಶ
ಹಳೆಯ ಕಾಲದ ಮಲೆನಾಡಿನ ಮನೆಗಳಲ್ಲಿ ಕಂಬಗಳು ಸಾಮಾನ್ಯ. ಇದು ಪರಂಪರೆಯ ಜೊತೆಗೆ ಆಧುನಿಕತೆಯ ಪ್ರತೀಕವೂ ಹೌದು. ಹಾಗಾಗಿ ಮನೆಯಲ್ಲಿ ಕಂಬವನ್ನು ಅಳವಡಿಸಿದ್ದೇವೆ. ಇದು ವಿಭಿನ್ನ ಶೈಲಿ. ನಮ್ಮ ಮನೆಯ ಹೈಲೈಟ್‌ ಕೂಡ ಇದುವೇ. ತಳಮಹಡಿಯಲ್ಲಿ ಕಂಬದ ಜೊತೆಗೆ ಮರದ ಉಯ್ಯಾಲೆಯೂ ಇದೆ. ಇದು ಮನೆಗೆ ವಿಭಿನ್ನವಾದ ನೋಟವನ್ನು ನೀಡಿದೆ. 

ಮನೆಯಲ್ಲಿಯೇ ರಂಗಮಂದಿರ
ರಂಗಪ್ರೀತಿಯನ್ನು ಬೆಳೆಸಿಕೊಂಡಿದ್ದರಿಂದ ಮನೆಯಲ್ಲಿ ಚಿಕ್ಕದೊಂದು  ರಂಗಮಂದಿರ ಇರಬೇಕೆಂಬುದು ನನ್ನ ಕನಸಾಗಿತ್ತು. ಅದಕ್ಕಾಗಿಯೇ ಸಣ್ಣ ಸ್ಥಳವನ್ನು ಮನೆಯಲ್ಲಿ ಮೀಸಲಿಟ್ಟಿದ್ದೇನೆ. ಮನೆಯಲ್ಲಿ ರಂಗಗೀತೆ ಮತ್ತು ಕೆಲವು ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡುತ್ತಿರುತ್ತೇವೆ. ಆ ಕೋಣೆಯಲ್ಲಿ ಮೆಟ್ಟಿಲ್ಲಿತ್ತು. ಅದನ್ನು  ಇಳಿದು  ಹೋಗಬೇಕಾಗಿತ್ತು. ಹಾಗಾಗಿ ಯಾರೂ ಅದನ್ನು ಹೆಚ್ಚು ಬಳಸುತ್ತಿರಲಿಲ್ಲ. ಪೇಪರ್‌ ಓದುವುದಕ್ಕೆ ಮಾತ್ರ ನಾನು ಬಳಸುತ್ತಿದ್ದೆ. ಮಗಳು ಚಿಕ್ಕವಳಿದ್ದರಿಂದ ಅವಳು ಮೆಟ್ಟಿಲಿನಿಂದ ಬೀಳಬಹುದು ಎಂಬ ಕಾರಣಕ್ಕೆ ಅದನ್ನು ತೆಗೆದು ಸಮತಟ್ಟಾಗಿ ಮಾಡಿದ್ದೇವೆ.

ಮನೆಯ ಪ್ರತಿ ಜಾಗವನ್ನೂ ಕ್ರಿಯಾತ್ಮಕವಾಗಿ, ಬುದ್ಧಿವಂತಿಕೆಯಿಂದ, ಎಲ್ಲೂ ವ್ಯರ್ಥವಾಗದಂತೆ ಕಟ್ಟಲಾಗಿದೆ.  ಮನೆಗೆ ಸುವಿ ಎಂದು ಹೆಸರಿಟ್ಟಿದ್ದೇವೆ. ‘ಸು’ ಎಂದರೆ ಸುಂದರ್‌, ‘ವಿ’ ಎಂದರೆ ವೀಣಾ. ಜೊತೆಗೆ ಹಕ್ಕಿಯ ಕಲರವವನ್ನು ಬಿಂಬಿಸುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT