ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಗಳ ಅಧಃಪತನ ಆತಂಕಕಾರಿ ವಿದ್ಯಮಾನ

ಸಂಪಾದಕೀಯ
Last Updated 15 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಲೈಂಗಿಕ ಹಗರಣದಿಂದಾಗಿ ರಾಜ್ಯದ ಅಬಕಾರಿ ಸಚಿವ ಎಚ್.ವೈ.ಮೇಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಪ್ರಸಂಗ ಸಾರ್ವಜನಿಕ ಬದುಕಿನಲ್ಲಿ ನೈತಿಕತೆಯ ಕುಸಿತಕ್ಕೆ ಸಂಕೇತ. ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಮೌಲ್ಯಗಳ ಅಧಃಪತನಕ್ಕೆ ರೂಪಕವಾಗಿದೆ ಈ ಘಟನೆ. 1973ರಲ್ಲಿ  ರಾಜ್ಯದ ಗೃಹ ಮಂತ್ರಿಯಾಗಿದ್ದ ಆರ್.ಡಿ.ಕಿತ್ತೂರ  ಅವರ ನಿವಾಸದಿಂದ  ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ ಎಂಬ ವಿಚಾರ  ಪತ್ರಿಕೆಗಳಲ್ಲಿ ಪ್ರಕಟವಾದ ನಂತರ ಹಲವು ವದಂತಿಗಳಿಗೆ ಕಾರಣವಾಗಿತ್ತು. ಬರೀ ಈ ವದಂತಿಗಳಿಗಾಗಿಯೇ   ಅವರ ರಾಜೀನಾಮೆಯನ್ನು ಅಂದಿನ ಮುಖ್ಯಮಂತ್ರಿ  ಡಿ. ದೇವರಾಜ ಅರಸು ಅವರು ಪಡೆದಿದ್ದರು.   ಆಗಿನ ಕಾಲದ ಮೌಲ್ಯ ವ್ಯವಸ್ಥೆಗೂ ಈಗಿನ ಕಾಲದ ಮೌಲ್ಯ ವ್ಯವಸ್ಥೆಗೂ ವ್ಯತ್ಯಾಸಗಳಿವೆ ಎಂಬುದು ನಿಜ. ಹೀಗಿದ್ದೂ ಆಡಳಿತಾರೂಢರಲ್ಲಿ ಈಚಿನ ದಿನಗಳಲ್ಲಿ ಭಂಡತನ ಎಷ್ಟೊಂದು ಹೆಚ್ಚಾಗಿದೆ ಎಂದರೆ ಲೈಂಗಿಕ ಹಗರಣದ ಸಿ.ಡಿ. ಸಾರ್ವಜನಿಕವಾಗಿ ಪ್ರದರ್ಶನಗೊಳ್ಳುವವರೆಗೂ ಅಧಿಕಾರ ಸ್ಥಾನವನ್ನು ಉಳಿಸಿಕೊಳ್ಳಲು  ಕಸರತ್ತುಗಳು ನಡೆದಿವೆ.  
 
ಹಗರಣವನ್ನು ಮುಚ್ಚಿಹಾಕಲು ಉನ್ನತ ಅಧಿಕಾರ ಸ್ಥಾನಗಳಲ್ಲಿರುವವರೇ  ಪ್ರಯತ್ನಗಳನ್ನು ನಡೆಸಿದ್ದಾರೆ ಎಂಬುದು ಖಂಡನೀಯ.  ಹಾಗೆಯೇ ಇಂತಹ ಘಟನೆಗಳು ಹಿಂದೆ ಸಮಾಜದ ಮೇಲೆ ಬೀರುತ್ತಿದ್ದಂತಹ  ಪರಿಣಾಮದ ಅಗಾಧತೆ ಇಂದು ಕಂಡುಬರುವುದಿಲ್ಲ ಎಂಬುದು ವಿಷಾದನೀಯ. ಸಾಮಾಜಿಕ ಬದುಕಿನಲ್ಲಿ ಸೂಕ್ಷ್ಮತೆಗಳು ಕಳೆದುಹೋಗಿ  ಇಂತಹ ಪ್ರಕರಣಗಳನ್ನು ಮಾಮೂಲು ಎಂಬಂತೆ  ಸ್ವೀಕರಿಸುವ ರೀತಿ ಕಳವಳಕಾರಿಯಾದುದು.  
 
ಮೌಲ್ಯಗಳನ್ನು ಅಳೆಯುವ ಅಳತೆಗೋಲುಗಳೇ ಬದಲಾಗಿಹೋಗಿರುವುದು ನಮ್ಮ ಸಾಮಾಜಿಕ ವ್ಯವಸ್ಥೆಯೊಳಗೇ ಅಂತರ್ಗತವಾಗುತ್ತಿರುವ ಭ್ರಷ್ಟತೆಯನ್ನು ಬಿಂಬಿಸುತ್ತದೆ. ಸಾರ್ವಜನಿಕ ಹಾಗೂ ವೈಯಕ್ತಿಕ ಬದುಕುಗಳಲ್ಲಿ ಗಂಡಿಗಾಗಲಿ, ಹೆಣ್ಣಿಗಾಗಲಿ ವೈಯಕ್ತಿಕ ಶೀಲ ಎಂಬುದನ್ನು ಗಂಭೀರವಾಗಿ  ಪರಿಗಣಿಸದೆ ಇರುವಂತಹ  ಸ್ಥಿತಿ  ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾದುದು.  ಅದರಲ್ಲೂ ಜನಪ್ರತಿನಿಧಿಗಳೆಂಬ ಬಿರುದು ಹೊತ್ತವರು ತಾವು ಮಾದರಿಗಳಾಗಿರಬೇಕೆಂಬ ಆದರ್ಶವನ್ನು ಮರೆಯುವುದು ಸಲ್ಲದು. ಈ ಹಗರಣವನ್ನು  ಎಲ್ಲಾ ಕೋನಗಳಿಂದಲೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಪ್ರಕರಣಕ್ಕೆ ತಾರ್ಕಿಕ ಅಂತ್ಯವೂ ಆಗಬೇಕು ಎಂಬುದು ಮುಖ್ಯ.  ಆ ಮೂಲಕ ಸಮಾಜಕ್ಕೆ ಸರಿಯಾದ ಸಂದೇಶ ರವಾನೆಯಾಗಬೇಕು.
 
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಎನ್ನಲಾದ  71 ವರ್ಷದ ಮೇಟಿ ಅವರು,  ಇದೇ ವರ್ಷ  ಜೂನ್‌ನಲ್ಲಿ ನಡೆದ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅಬಕಾರಿ ಸಚಿವರಾಗಿ  ಸಂಪುಟಕ್ಕೆ ಸೇರ್ಪಡೆಯಾಗಿದ್ದರು.   ಇತ್ತೀಚೆಗಷ್ಟೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಂತ್ರಿ ತನ್ವೀರ್ ಸೇಠ್ ಅವರು ಸಾರ್ವಜನಿಕ ಸಮಾರಂಭದಲ್ಲಿ ತಮ್ಮ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದರು ಎಂಬುದೂ ಹಗರಣವಾಗಿತ್ತು. ಸಭ್ಯತೆಯನ್ನು ಮೀರಿದ ಇಂತಹ ಹಗರಣಗಳ ಕಳಂಕ ಮೆತ್ತಿಸಿಕೊಂಡಿರುವ ರಾಜಕಾರಣಿಗಳು ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಇದ್ದಾರೆ.  
 
ಹಿಂದಿನ ಬಿಜೆಪಿ ಸರ್ಕಾರದ  ಅವಧಿಯಲ್ಲಿ  ಮಂತ್ರಿಗಳಾಗಿದ್ದ  ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ ಹಾಗೂ ಕೃಷ್ಣ ಪಾಲೆಮರ್ ಅವರು   ವಿಧಾನಸಭೆಯ ಅಧಿವೇಶನ ನಡೆಯುತ್ತಿದ್ದಾಗಲೇ ಅಶ್ಲೀಲ ಚಿತ್ರಗಳನ್ನು ನೋಡಿ ಮಂತ್ರಿ ಹುದ್ದೆಗಳನ್ನು ಕಳೆದುಕೊಂಡಿದ್ದರು.  ಹಾಗೆಯೇ ಬಿಜೆಪಿ ಸಚಿವರಾಗಿದ್ದ ಮತ್ತಿಬ್ಬರು ಎಚ್. ಹಾಲಪ್ಪ ಹಾಗೂ ಎಂ.ಪಿ. ರೇಣುಕಾಚಾರ್ಯ ಅವರೂ ಲೈಂಗಿಕ ಹಗರಣಗಳಲ್ಲಿ ಸಿಲುಕಿದ್ದರು.  ಭಾನಗಡಿಗಳನ್ನು  ಸಾಕ್ಷ್ಯ ಸಮೇತ ಬಯಲು ಮಾಡುವುದು ಆಧುನಿಕ ತಂತ್ರಜ್ಞಾನದ ಬೆಳವಣಿಗೆಯಿಂದ ಇತ್ತೀಚಿನ ದಿನಗಳಲ್ಲಿ ಸುಲಭವೂ ಆಗುತ್ತಿದೆ ಎಂಬುದನ್ನು ಮರೆಯಲಾಗದು.  ಆದರೆ ರಾಜಕೀಯ ಮೇಲಾಟಗಳಿಗಾಗಿ ದುರುದ್ದೇಶಪೂರಿತವಾಗಿ ಕೀಳುಮಟ್ಟದ  ಕಾರ್ಯತಂತ್ರಗಳಿಗೆ  ಬಳಸಿಕೊಳ್ಳಲೂ ಆಧುನಿಕ ಸಲಕರಣೆಗಳು ಅಸ್ತ್ರಗಳಾಗಿ ಬಳಕೆಯಾಗುತ್ತಿವೆ ಎಂಬುದು ವಿಷಾದನೀಯ.
 
ರಾಜಕೀಯದ ಮಾದರಿಗಳು ಜನಪರವಾಗಿರಬೇಕಾದ ಕಾಳಜಿ ಕಾಣಿಸದಿರುವುದು ಜನರ ದೌರ್ಭಾಗ್ಯ.  ಹಾಗೆಯೇ ಒಟ್ಟಾರೆ ಸಮಾಜದಲ್ಲಿ ಸ್ವಸ್ಥ ವ್ಯಕ್ತಿತ್ವಗಳನ್ನು ರೂಪಿಸುವಲ್ಲಿ ನಮ್ಮ ಶೈಕ್ಷಣಿಕ ವ್ಯವಸ್ಥೆಯೂ ಸೋಲುತ್ತಿದೆಯೇ ಎಂಬ ಆತಂಕವೂ ಉಂಟಾಗುತ್ತದೆ. ಸಾರ್ವಜನಿಕ ಆಡಳಿತ ವ್ಯವಸ್ಥೆ ಸ್ವಚ್ಛಗೊಳ್ಳಬೇಕಾದುದು ಅವಶ್ಯ. ರಾಜಕೀಯ ಅಧಿಕಾರದ ಬಲ ಹೊಂದಿದವರು ಆ ಅಧಿಕಾರವನ್ನು ಜನೋಪಯೋಗಿ ಕೆಲಸಗಳಿಗೆ ವಿನಿಯೋಗಿಸಲಿ. ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳಬಾರದು  ಎಂಬುದಕ್ಕೆ ಈ ಪ್ರಕರಣ  ಪಾಠವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT