ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದಾನೊಂದು ಕಾಲದಲ್ಲಿ...

Last Updated 16 ಡಿಸೆಂಬರ್ 2016, 11:54 IST
ಅಕ್ಷರ ಗಾತ್ರ

ಚಿತ್ರ: ಒನ್ ಟೈಮ್
ನಿರ್ಮಾಪಕ: ಕಿರಣ್ ವಾಸುದೇವನ್
ನಿರ್ದೇಶಕ: ರಾಜು ಬಿ.ಎನ್.
ತಾರಾಗಣ: ತೇಜಸ್, ನೇಹಾ ಸಕ್ಸೇನ, ಗಡ್ಡ ವಿಜಿ, ಟಿ.ಎಸ್. ನಾಗಾಭರಣ, ವಿಜಯಲಕ್ಷ್ಮಿ ಸಿಂಗ್

ಪ್ರೀತಿ ಎಲ್ಲರನ್ನೂ ಆವರಿಸಿಕೊಂಡಿರುವ ಮಾಯೆಯೇ ಆಗಿದ್ದರೂ ಆ ಮಾಯೆಯಲ್ಲಿ ಮೈ ಮರೆತು ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು. ಪ್ರೀತಿಯ ಗುಂಗಿನಲ್ಲಿ ಹೆತ್ತವರನ್ನೇ ಮರೆತು ಮನೆ ಬಿಟ್ಟು ಓಡಿಹೋಗಬಾರದು; ತಂದೆ ತಾಯಿಯ ಆಶೀರ್ವಾದ ಪಡೆದು ಅವರ ಮುಂದೆಯೇ ಚೆನ್ನಾಗಿ ಬಾಳಬೇಕು. ಈ ರೀತಿಯ ಸಂದೇಶವನ್ನು ಯುವಜನಕ್ಕೆ ನೀಡುವ ಪ್ರಯತ್ನ ‘ಒನ್ ಟೈಮ್’ ಸಿನಿಮಾ.

ನಾಯಕ ವಿಜಯ್‌ಗೆ (ತೇಜಸ್) ಡರ್ಟ್ ಬೈಕ್ ರೇಸ್ ಎಂದರೆ ಇಷ್ಟ. ಆದರೆ ಮಗನ ಆಸೆಗೆ ಸೊಪ್ಪು ಹಾಕದ ತಂದೆ ಜಿಪುಣ. ಮಗಳ ಮದುವೆ ಮಾಡಲು ಮಗನನ್ನು ಕುಂಟ ಹುಡುಗಿಗೆ ಕಟ್ಟಲೂ ಆತ ಸಿದ್ಧ. ಆದರೆ ಇದಕ್ಕೂ ಮುನ್ನವೇ ನಂದಿನಿ (ನೇಹಾ) ಎಂಬ ಹುಡುಗಿಯನ್ನು ವಿಜಯ್ ಪ್ರೀತಿಸಿರುತ್ತಾನೆ. ಇವರಿಬ್ಬರ ಪ್ರೀತಿಗೆ ಎರಡೂ ಕುಟುಂಬದಿಂದ ವಿರೋಧ ವ್ಯಕ್ತವಾದಾಗ ಓಡಿಹೋಗಿ ಮದುವೆ ಆಗುವ ಯೋಚನೆ ಮೂಡಿದರೂ – ಅದು ತಪ್ಪು, ಎಲ್ಲರನ್ನೂ ಒಪ್ಪಿಸಿಯೇ ಮದುವೆ ಆಗಬೇಕು ಎಂಬ ನಿರ್ಧಾರಕ್ಕೆ ಬರುತ್ತಾನೆ ನಾಯಕ. ಈ ಹಿಂದೆ ಮನೆಯವರ ವಿರೋಧ ಕಟ್ಟಿಕೊಂಡಿದ್ದ ತನ್ನ ಸ್ನೇಹಿತನಿಗೆ ಮದುವೆ ಮಾಡಿಸಿದ ನಾಯಕ ತನ್ನ ಪ್ರಕರಣದಲ್ಲಿ ಆದರ್ಶ ಮೆರೆಯುತ್ತಾನೆ.

ಹಳೆಯ ಕಥೆಯನ್ನು ಹೊಸದಾಗಿ ನಿರೂಪಿಸುವಲ್ಲಿ ನಿರ್ದೇಶಕ ರಾಜು ಅವರ ಪ್ರಯತ್ನ ಯಶಸ್ವಿಯಾಗಿಲ್ಲ. ಹೆತ್ತವರ ಒಪ್ಪಿಗೆಯಿಂದಲೇ ಪ್ರೇಮಿಗಳು ಒಂದಾಗಬೇಕು ಎಂಬುದನ್ನು ಪ್ರತಿಪಾದಿಸುವ ಉತ್ಸಾಹದಲ್ಲಿ ಪ್ರೀತಿಸುವವರಿಗೆಲ್ಲ ಮನೆಯಲ್ಲಿ ವಿರೋಧವೇ ಎದುರಾಗುತ್ತದೆ. ಮನೆ ಬಿಟ್ಟು ಹೋದವರು ಒಳ್ಳೆಯ ರೀತಿಯಲ್ಲಿ ಬಾಳಲು ಸಾಧ್ಯವಿಲ್ಲ, ಸಮಾಜ ಪ್ರೇಮಿಗಳನ್ನು ಒಪ್ಪಿಕೊಳ್ಳುವುದಿಲ್ಲ ಎನ್ನುವ ಧಾಟಿಯಲ್ಲಿ ಚಿತ್ರಕಥೆ ರೂಪುಗೊಂಡಿದೆ. ಯಾವ ತರ್ಕವೂ ಇಲ್ಲದೆ ಏಕಮುಖಿ ವಿಚಾರಧಾರೆಯಲ್ಲಿ ಸಿನಿಮಾ ಸಾಗುತ್ತದೆ.

ಹಳೆಯ ದೃಶ್ಯ–ಸಂಭಾಷಣೆಗಳೇ ಚಿತ್ರವನ್ನು ಆವರಿಸಿಕೊಂಡಿವೆ. ತಾಜಾತನದ ಯಾವ ಸುಳಿವೂ ಎಲ್ಲೂ ಇಲ್ಲ. ಸುಮ್ಮನೇ ಬಂದುಹೋಗುವ ಪಾತ್ರಗಳು ಮನಸಿನಲ್ಲಿ ಉಳಿಯುವುದೇ ಇಲ್ಲ. ಹದಿನೈದು ನಿರ್ದೇಶಕರು ಚಿತ್ರದಲ್ಲಿ ನಟಿಸಿದ್ದಾರೆ ಎಂಬುದು ವಿಶೇಷವೇ ಆಗಿದ್ದರೂ ಒಂದೆರಡು ಪಾತ್ರಗಳ ಹೊರತಾಗಿ ಉಳಿದವುಗಳಿಗೆ ಸೂಕ್ತ ಹಿನ್ನೆಲೆ ಇಲ್ಲ. ನಾಯಕ–ನಾಯಕಿ ಇಬ್ಬರೂ ತಮಗೆ ಸಿಕ್ಕ ನಟನೆಯ ಅವಕಾಶವನ್ನು ಸದುಪಯೋಗ ಮಾಡಿಕೊಂಡಿಲ್ಲ. ಸಂಭಾಷಣೆಗಳೆಲ್ಲ ಗಿಣಿಪಾಠ ಒಪ್ಪಿಸಿದಂತೆ ಭಾಸವಾಗುತ್ತವೆ. ಅಭಿಮಾನ್ ರಾಯ್ ಸಂಗೀತದಲ್ಲಿ ಒಂದು ಹಾಡು ಇಂಪಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT