ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಿಥಿ’ಯ ತಿಥಿ

Last Updated 16 ಡಿಸೆಂಬರ್ 2016, 11:33 IST
ಅಕ್ಷರ ಗಾತ್ರ

ಚಿತ್ರ: ತರ್ಲೆ ವಿಲೇಜ್

ನಿರ್ಮಾಪಕ: ಶಿವ ಎಸ್‌.ಬಿ.
ನಿರ್ದೇಶಕ: ಕೆ.ಎಂ. ರಘು
ತಾರಾಗಣ: ಸಿಂಗ್ರಿಗೌಡ, ಚನ್ನೇಗೌಡ, ತಮ್ಮೇಗೌಡ, ಅಭಿಷೇಕ್, ಹರ್ಷಿತಾ

ಒಂದು ಯಶಸ್ವಿ ಸಿನಿಮಾ ಹಲವು ಸಿನಿಮಾಗಳ ಹುಟ್ಟಿಗೆ ಪ್ರೇರಣೆಯಾಗುತ್ತದೆ. ಹೀಗೆ ರೂಪುಗೊಳ್ಳುವ ಸಿನಿಮಾಗಳು  ಮೂಲ ಚಿತ್ರದ ಪ್ರಭಾವಳಿಯಿಂದ ಹೊರಗೆ ಬರಲಾಗದ ಸಂಕಟವನ್ನೂ ಉಂಟುಮಾಡುತ್ತವೆ. ಇಂಥದೊಂದು ಸಿನಿಮಾ ಕೆ.ಎಂ. ರಘು ನಿರ್ದೇಶನದ ‘ತರ್ಲೆ ವಿಲೇಜ್’. ಇದು ‘ತಿಥಿ’ ಚಿತ್ರದ ಕಥೆಯ ಪ್ರಭಾವಲಯದಿಂದ ಪಾರಾಗಿದ್ದರೂ, ಪಾತ್ರಗಳ ಪ್ರಭಾವಳಿಯಲ್ಲಿ ನಲುಗಿದೆ.

‘ತಿಥಿ’ ಚಿತ್ರದ ನಾಲ್ಕು ತಲೆಮಾರಿನ ಪ್ರತಿನಿಧಿಗಳಾದ ಸೆಂಚುರಿಗೌಡ, ಗಡ್ಡಪ್ಪ, ತಮ್ಮಣ್ಣ ಮತ್ತು ಅಭಿ ‘ತರ್ಲೆ ವಿಲೇಜ್’ನಲ್ಲಿ ಸಂಬಂಧಗಳನ್ನು ಕಳಚಿಕೊಂಡಿದ್ದಾರೆ. ಪಾತ್ರಗಳ ನಡುವಣ ಸಂಬಂಧಗಳು ಬದಲಾದರೂ ಅವುಗಳ ಗುಣ ಬದಲಾಗಿಲ್ಲ. ಇವು ‘ತಿಥಿ’ಯ ಪಾತ್ರಗಳ ವಿಸ್ತೃತ ವರದಿಯಂತೆ ಕಾಣಿಸುತ್ತವೆ. ನಿರೂಪಣೆಯ ಶೈಲಿಯಲ್ಲಿಯೂ ಆ ಚಿತ್ರ ನಿರ್ದೇಶಕರನ್ನು ಕಾಡಿರುವುದು ಸ್ಪಷ್ಟ. ಆಳಕ್ಕಿಳಿಯುವ ಪ್ರಯತ್ನ ಸಾಧ್ಯವಾಗಿಲ್ಲ ಅಷ್ಟೇ. ಇಲ್ಲಿ ಕಥೆ ಗೌಣ. ಸಂಭಾಷಣೆಗಳೇ ಪ್ರತಿ ಸನ್ನಿವೇಶಕ್ಕೊಂದು ಕಥೆಯನ್ನು ಹುಟ್ಟಿಸುವ ಮತ್ತು ಅಲ್ಲಿಯೇ ಅಂತ್ಯಗೊಳಿಸುವ ಹೊಣೆಯನ್ನು ನಿರ್ವಹಿಸುತ್ತವೆ. ಗಂಭೀರ ಎನಿಸುವ ಅಂಶಗಳನ್ನೂ ಲಘುವಾಗಿಸಿ ನಗಿಸುವ ಹಟ ಕೆಲವೆಡೆ ಯಶಸ್ವಿಯಾದರೂ, ಅದು ಸಿನಿಮಾದ ಭಾಗವಾಗದೆ ಹಲವು ಬಿಡಿ ಪ್ರಹಸನಗಳ ಜೋಡಣೆಯಾಗಿ ತೋರುತ್ತದೆ. ಗಂಭೀರ ದೃಶ್ಯಗಳು ವಿರಳವಾಗಿದ್ದರೂ ಗಮನ ಸೆಳೆಯುತ್ತವೆ.

ಗಡ್ಡಪ್ಪ (ಚನ್ನೇಗೌಡ) ಮತ್ತು ಸೆಂಚುರಿ ಗೌಡ (ಸಿಂಗ್ರಿಗೌಡ) ಊರಿನ ಹಿರೀಕರು. ಊರಿನ ಹಿತವನ್ನು ಕಾಯುವ, ತಪ್ಪುಗಳಾದರೆ ರಾಜಿ ಪಂಚಾಯ್ತಿ ಮಾಡುವುದು ತಮ್ಮ ಅಧಿಕಾರ ಎಂದು ಭಾವಿಸಿರುವವರು. ಜನಪ್ರಿಯತೆಯ ಕಾರಣಕ್ಕಾಗಿಯೇ ಇಬ್ಬರಿಗೂ ತೆರೆಯ ಮೇಲೆ ಹೆಚ್ಚು ಅವಕಾಶ ಕಲ್ಪಿಸಲಾಗಿದೆ. ತಂದೆ ತಾಯಿಯನ್ನು ನೋಡಿಕೊಳ್ಳುವುದಿಲ್ಲ ಎನ್ನುವ ಮಕ್ಕಳಿಗೆ ಬುದ್ಧಿವಾದ ಹೇಳುವ ಗಡ್ಡಪ್ಪ ಹೆಚ್ಚು ಪ್ರಬುದ್ಧನಾಗಿ ಕಾಣಿಸುತ್ತಾರೆ.
ಹಳ್ಳಿಯೊಂದರ ಜನರ ನಂಬಿಕೆಗಳು, ಚುನಾವಣಾ ರಾಜಕೀಯ, ಅನೈತಿಕ ಸಂಬಂಧಗಳಿಗೆ ಒತ್ತು ನೀಡುವ ಚಿತ್ರ, ಹಳ್ಳಿಗೆ ಇರಬೇಕಾದ ಭೌತಿಕ ಚಹರೆಯನ್ನು ಸೂಕ್ಷ್ಮವಾಗಿ ಕಟ್ಟಿಕೊಡುವಲ್ಲಿ ಚಿತ್ರ ವಿಫಲವಾಗಿದೆ. ‘ತರ್ಲೆ ವಿಲೇಜ್‌’ ಎಂಬುದು ಹಳ್ಳಿಯೊಂದರ ಜನಜೀವನದ ತುಂಟತನ, ಕಿಡಿಗೇಡಿತನಗಳನ್ನು ಬಿಂಬಿಸುವ ಶೀರ್ಷಿಕೆಯಾಗಿರದೆ, ಆ ಹಳ್ಳಿಯ ಹೆಸರೇ ಆಗಿದೆ.

ಸಿನಿಮಾ ಹೆಚ್ಚು ಸುತ್ತುವುದು ಅನೈತಿಕ ಸಂಬಂಧಗಳ ನಡುವೆ. ಅವೂ ಕೂಡ ಇಲ್ಲಿ ಹಾಸ್ಯದ ವಸ್ತುಗಳಾಗಿವೆ. ಗ್ರಾಮೀಣ ಬದುಕನ್ನು ಲಘುವಾಗಿ ಚಿತ್ರಿಸುವಾಗ ಅದರೊಳಗಿನ ತಾಕಲಾಟ, ತಲ್ಲಣಗಳನ್ನು ನಿರ್ದೇಶಕರು ಪರಿಗಣಿಸಿಲ್ಲ. ಗುಡ್ಡದಲ್ಲಿರುವ ದೇವರು ಮತ್ತು ಅಲ್ಲಿ ಹೋದವರು ಸಾಯುವ ಘಟನೆಗಳಿಗೆ ತಾರ್ಕಿಕ ಅಂತ್ಯವೇ ಇಲ್ಲ. ಚಿತ್ರದಲ್ಲೊಂದು ಹಾರರ್‌ ಅಂಶವೂ ಇರಲಿ ಎಂದು ನಿರ್ದೇಶಕರು ಬಯಸಿರಬಹುದು. ಆದರೆ, ಹಾರರ್ ದೃಶ್ಯಗಳಿಗಿಂತಲೂ ಹಾಸ್ಯವೇ ಹೆಚ್ಚು ಬೆಚ್ಚಿಬೀಳಿಸುವ ಸಾಮರ್ಥ್ಯ ಹೊಂದಿದೆ.

ತಾಂತ್ರಿಕವಾಗಿ ಸಹ ಸಿನಿಮಾ ಗಟ್ಟಿತನ ಹೊಂದಿಲ್ಲ. ನಾಟಕದ ದೃಶ್ಯವನ್ನು ಆತುರದಲ್ಲಿ ಸೆರೆಹಿಡಿದಂತೆ ಕೆಲವು ಸನ್ನಿವೇಶಗಳು ಭಾಸವಾಗುತ್ತವೆ. ಸಂಗೀತ (ವೀರ್‌ ಸಮರ್ಥ್‌) ಕೂಡ ಮನಸಿನಲ್ಲಿ ಉಳಿಯುವುದಿಲ್ಲ. ಜನಪ್ರಿಯ ಚಿತ್ರವೊಂದು ಸೃಷ್ಟಿಸಿದ ವಿಶಿಷ್ಟ ಪಾತ್ರಗಳ ಜನಪ್ರಿಯತೆಯ ಲಾಭ ಪಡೆದುಕೊಳ್ಳಲು ಹವಣಿಸುವ ತಾರಾತುರಿಯ ನಾಟಕದ ರೂಪದಂತೆ ‘ತರ್ಲೆ ವಿಲೇಜ್’ ಕಾಣಿಸುತ್ತದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT