ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಮಾನತೆ ಅಳಿಯಲಿ

ಶಾಲಾ ಪಠ್ಯಕ್ರಮ ಹೇಗಿರಬೇಕು?
Last Updated 16 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ನೀಡುವ ಪರಿಷ್ಕೃತ ಪಠ್ಯಕ್ರಮವನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ (2017–18) ಜಾರಿಗೊಳಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಇದರಿಂದ ಈ ಕುರಿತು ಎದ್ದಿದ್ದ ಗೊಂದಲ ಬಗೆಹರಿದಿದೆ. 9 ಮತ್ತು 10ನೇ ತರಗತಿಗೆ ಎನ್‌ಸಿಇಆರ್‌ಟಿ  ಪಠ್ಯಪುಸ್ತಕವನ್ನು ಯಥಾವತ್‌ ಕನ್ನಡಕ್ಕೆ ತರ್ಜುಮೆ ಮಾಡಿ ಬಳಸಲು ಶಿಕ್ಷಣ ಇಲಾಖೆ ಮುಂದಾಗಿದ್ದುದು ಗೊಂದಲ ಹುಟ್ಟುಹಾಕಿತ್ತು. ಇಂತಹ ಗೊಂದಲಗಳೇಕೆ? ಶಿಕ್ಷಣ ನೀತಿಯ ಬಗ್ಗೆ ಸರ್ಕಾರದ ಖಚಿತ ನಿಲುವು ಏನಾಗಿರಬೇಕು? ಭವಿಷ್ಯದ ಪೀಳಿಗೆಯನ್ನು ರೂಪಿಸಬೇಕಾದ ಪಠ್ಯಪುಸ್ತಕಗಳು ನಿಜಕ್ಕೂ ಹೇಗಿರಬೇಕು? ಈ ಬಗ್ಗೆ ಶಿಕ್ಷಣ ತಜ್ಞರು ಹೇಳುವುದೇನು?
 
***
ದೇಶದ ನಾಳೆಗಳನ್ನು ಕಟ್ಟುವ ಕಾರ್ಯ ನಡೆಯುವುದು ತರಗತಿಗಳಲ್ಲಿ. ಉಳಿದೆಲ್ಲ ವಿಚಾರಗಳಿಗಿಂತ ಸರ್ಕಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕಿತ್ತು. ಆದರೆ ಹಾಗೆ ಆಗುತ್ತಿಲ್ಲ. ಅಚ್ಚರಿಯೆಂದರೆ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ಏನನ್ನು ಕಲಿಸಬೇಕು, ಏನನ್ನು ಕಲಿಸಬಾರದು ಎಂಬ ಕುರಿತು ಸ್ಪಷ್ಟವಾದ ನೀತಿ ಅನುಸರಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಇನ್ನೂ ಸಾಧ್ಯವಾಗಿಲ್ಲ. 
 
ಒಂದು ಕಡೆ ಪಠ್ಯಪುಸ್ತಕಗಳಲ್ಲಿ  ನುಸುಳಿರುವ ತಪ್ಪುಗಳನ್ನು  ಹುಡುಕಿ ಪರಿಷ್ಕರಿಸಲು ಸರ್ಕಾರ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುತ್ತದೆ.  ಇನ್ನೊಂದೆಡೆ ಎನ್‌ಸಿಇಆರ್‌ಟಿಯ ಒಂಬತ್ತು ಹಾಗೂ 10ನೇ  ತರಗತಿಯ ಪಠ್ಯಗಳನ್ನು ಯಥಾವತ್‌ ಕನ್ನಡಕ್ಕೆ ಭಾಷಾಂತರ ಮಾಡಿ ಬೋಧಿಸಲು ಇಲಾಖೆ ಮುಂದಾಗುತ್ತದೆ. ಒಂದರಿಂದ ಎಂಟನೇ ತರಗತಿಯವರೆಗೆ ರಾಜ್ಯ ಪಠ್ಯಕ್ರಮದಲ್ಲಿ ಕಲಿತ ವಿದ್ಯಾರ್ಥಿಗಳು, ಅದರಲ್ಲೂ ಗ್ರಾಮೀಣ ವಿದ್ಯಾರ್ಥಿಗಳು ಇದರಿಂದ ಎಷ್ಟರಮಟ್ಟಿಗೆ ವಿಚಲಿತರಾಗಲಿದ್ದಾರೆ ಎಂಬ ಪರಿವೆಯೂ ಇಲ್ಲದೆ ಇಂತಹದ್ದೊಂದು ನಿರ್ಧಾರಕ್ಕೆ ಬರುತ್ತದೆ. ಪರಿಷ್ಕೃತ ಪಠ್ಯಪುಸ್ತಕಗಳನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲೇ (2017–18) ಕಲಿಕೆಗೆ ಬಳಸಬೇಕೇ ಬೇಡವೇ ಎಂಬ ಬಗ್ಗೆ ನಿರ್ಧಾರ ತಳೆಯಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ನಡೆದುಕೊಂಡ ರೀತಿ, ಎನ್‌ಸಿಇಆರ್‌ಟಿ  ಪಠ್ಯಪುಸ್ತಕವನ್ನೇ ಯಥಾವತ್‌ ಕನ್ನಡಕ್ಕೆ ತರ್ಜುಮೆ ಮಾಡಿ ಬಳಸಲು ಇಲಾಖೆ ಮುಂದಾಗಿದ್ದುದು ಶಿಕ್ಷಣ ವ್ಯವಸ್ಥೆಯ ಗೊಂದಲಗಳಿಗೆ ಕನ್ನಡಿ ಹಿಡಿದಿತ್ತು.  
 
ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವ ಮೂಲಕ ನೆರೆಹೊರೆಯ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಬಡವ ಬಲ್ಲಿದರೆಂಬ ಭೇದವಿಲ್ಲದೆ ಎಲ್ಲಾ ವಿದ್ಯಾರ್ಥಿಗಳಿಗೂ ಶಿಕ್ಷಣ ಪಡೆಯಲು ಸಮಾನ ಅವಕಾಶ ಸಿಗಬೇಕು ಎಂದು ಒತ್ತಾಯಿಸಿ  ದಶಕಗಳಿಂದ ಹೋರಾಟ ನಡೆಯುತ್ತಿದೆ. ಅದರತ್ತ ಚಿತ್ತ ಹರಿಸದ ಸರ್ಕಾರಗಳು ಪದೇ ಪದೇ ಹೊಸ ನೀತಿಗಳನ್ನು ಅಪ್ಪಿಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿ ವಿದ್ಯಾರ್ಥಿಗಳನ್ನು ಬಲಿಪಶು ಮಾಡುತ್ತಿವೆ. 
 
ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್‌) ರಾಜ್ಯಗಳಲ್ಲಿ ಪಠ್ಯಕ್ರಮ ರಚಿಸುವುದಕ್ಕೆ ಮಾರ್ಗಸೂಚಿ ನಿಗದಿಪಡಿಸುತ್ತದೆ. ಆಯಾ ತರಗತಿಯ ವಿದ್ಯಾರ್ಥಿಗಳ ಕಲಿಕೆ ಸಾಮರ್ಥ್ಯಕ್ಕೆ ಅನುಗುಣವಾಗಿ ಪಠ್ಯದಲ್ಲಿ ಯಾವ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ಸೂಚಿಸುತ್ತದೆ. ಅದರ ಆಧಾರದಲ್ಲಿ ರಾಜ್ಯಗಳು ಪಠ್ಯಕ್ರಮ ರೂಪಿಸಿಕೊಳ್ಳಬೇಕು. ಕೆಲವು ನ್ಯೂನತೆಗಳ ಹೊರತಾಗಿಯೂ ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸದ್ಯಕ್ಕಂತೂ ಇದೊಂದು ಸರಿಯಾದ ವಿಧಾನ. ಎನ್‌ಸಿಎಫ್‌ ಆಶಯಕ್ಕೆ ವ್ಯತಿರಿಕ್ತ ಅಂಶಗಳು ರಾಜ್ಯ ಸರ್ಕಾರ ರೂಪಿಸಿದ ಪಠ್ಯಗಳಲ್ಲಿ ಸೇರಿಕೊಂಡಿವೆ. ಅದನ್ನು ಹುಡುಕಿ ಸರಿಪಡಿಸುವ ಸಲುವಾಗಿಯೇ ಬರಗೂರು ನೇತೃತ್ವದ ಸಮಿತಿಯ ರಚನೆ ಆಗಿರುವುದು. ಇನ್ನೇನು ಪಠ್ಯಪುಸ್ತಕಗಳ ದೋಷಗಳು ನಿವಾರಣೆ ಆಗಲಿವೆ ಎನ್ನುವಾಗ ಎನ್‌ಸಿಇಆರ್‌ಟಿಯ ಪಠ್ಯವನ್ನು ಯಥಾವತ್‌ ಕನ್ನಡಕ್ಕೆ ತರ್ಜುಮೆ ಮಾಡಿ ಬಳಸುವ ‘ಗುಮ್ಮ’ ಎದುರಾಗಿತ್ತು.
 
ನಿರ್ದಿಷ್ಟ ತರಗತಿಯ ಮಕ್ಕಳ ಕಲಿಕೆ ಸಾಮರ್ಥ್ಯ ಎಷ್ಟು, ಅವರು ಏನನ್ನೆಲ್ಲ ಕಲಿಯಬೇಕು ಎಂಬುದನ್ನು ಎನ್‌ಸಿಎಫ್‌ ಹೇಳಿದರೂ ಎಲ್ಲಾ ರಾಜ್ಯಗಳ ಪಠ್ಯಪುಸ್ತಕ ಒಂದೇ ಇರಬೇಕು ಎಂದು ಅದು ಹೇಳುವುದಿಲ್ಲ. ಮಕ್ಕಳ ಮೇಲಿನ ದೈಹಿಕ ಹಾಗೂ ಶೈಕ್ಷಣಿಕ ಹೊರೆಯನ್ನು ಇಳಿಸಬೇಕು, ವಿಷಯಗಳನ್ನು ಸ್ಥಳೀಯ ಜ್ಞಾನದ ಆಧಾರದಲ್ಲಿ ಕಲಿಸುವ ಪ್ರಯತ್ನಗಳಾಗಬೇಕು  ಎನ್ನುತ್ತದೆ ಎನ್‌ಸಿಎಫ್‌.  ಸಿಬಿಎಸ್‌ಇ ಪಠ್ಯಗಳನ್ನೇ ಯಥಾವತ್‌ ತರ್ಜುಮೆ ಮಾಡುವುದು ಈ ಆಶಯಗಳಿಗೆ ವ್ಯತಿರಿಕ್ತ. ಮಕ್ಕಳ ಮೇಲಿನ ಹೊರೆ ಹೆಚ್ಚಳಕ್ಕೆ ಇದು ಕಾರಣವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.
 
‘ಪಠ್ಯಪುಸ್ತಕವೆಂದರೆ ರಾಷ್ಟ್ರೀಯ ವಿಷಯಗಳಿಂದ ಹಿಡಿದು ಸ್ಥಳೀಯ ಗ್ರಾಮ ಮಟ್ಟದವರೆಗಿನ ಅನೇಕ ವೈವಿಧ್ಯಮಯ ವಿಷಯಗಳು, ಸಂಸ್ಕೃತಿ, ಆಚರಣೆಗಳನ್ನು ಒಳಗೊಂಡಿರುತ್ತದೆ. ಅದು ಬಹುತ್ವ ತತ್ವವನ್ನು ಪ್ರತಿನಿಧಿಸುತ್ತದೆ. ಈ ರೀತಿ ರಚನೆಗೊಂಡ ಪಠ್ಯಗಳು ಬಹುರೂಪಿಯಾಗಿರುತ್ತವೆ. ಪಠ್ಯಪುಸ್ತಕಗಳನ್ನು ರೂಪಿಸುವಾಗ ಅದರಲ್ಲಿ ಸ್ಥಳೀಯವಾಗಿ ಬೇರು ಬಿಡುತ್ತಲೇ, ಸಾವಿರಾರು ಸಂಸ್ಕೃತಿಯ ಕೊಂಬೆಗಳಾಗಿ ವಿಸ್ತರಿಸುತ್ತಾ, ಬೆಳೆಯುತ್ತಾ ಜಾಗತಿಕವಾಗಿ ಹಬ್ಬಿಕೊಳ್ಳುವಂತೆ ಗಮನ ಹರಿಸಲೇಬೇಕಾಗುತ್ತದೆ. ಇದೇ ಸಮಾನ ಶಿಕ್ಷಣದ ಆಶಯ. ಇದೇ ಸಮಾನ ಶಿಕ್ಷಣ ರೂಪಿಸ ಬಯಸುವ ಕಲಿಕೆಯ ತತ್ವ. ಇದು ಮಕ್ಕಳಲ್ಲಿ ಹುದುಗಿರುವ ಕೀಳರಿಮೆಯನ್ನು ತೊಡೆದುಹಾಕುತ್ತದೆ. ಇದು ಬಹುತ್ವ ಸಂಸ್ಕೃತಿ ಜೊತೆಗೆ ಮಕ್ಕಳಿಗೆ ಕಳ್ಳುಬಳ್ಳಿ ಸಂಬಂಧ ಕಲ್ಪಿಸುತ್ತದೆ’ ಎನ್ನುತ್ತಾರೆ  ‘ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ’ದ ಸಂಚಾಲಕ ಶ್ರೀಪಾದ ಭಟ್‌. 
 
‘ಸಮಾನ ಶಾಲಾ ವ್ಯವಸ್ಥೆ ಪರಿಕಲ್ಪನೆಯ ಅರ್ಥ ಏಕರೂಪತೆ ತರುವುದಲ್ಲ. ವೈವಿಧ್ಯ ಉಳಿಸಿಕೊಂಡು, ಗುಣಮಟ್ಟವನ್ನು ಕಾಪಾಡಿಕೊಂಡು ಮಕ್ಕಳ ಶಿಕ್ಷಣಕ್ಕೆ ಸಮಾನ ಅವಕಾಶ ಕಲ್ಪಿಸುವುದು ಅದರ ಮುಖ್ಯ ಧ್ಯೇಯ. ಈ ಬಗ್ಗೆ ಶಿಕ್ಷಣ ಇಲಾಖೆಗೆ ಸ್ಪಷ್ಟತೆ ಇಲ್ಲ’ ಎನ್ನುತ್ತಾರೆ ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ.
 
‘ಒಕ್ಕೂಟ ವ್ಯವಸ್ಥೆಯಲ್ಲಿ ಶಿಕ್ಷಣ ಹೇಗಿರಬೇಕು ಎಂದು ನಿರ್ಧರಿಸುವ ಅಧಿಕಾರ ರಾಜ್ಯಗಳಿಗೂ ಇದೆ.  ಪ್ರತಿ ರಾಜ್ಯಕ್ಕೂ ಒಂದು ಸಂಸ್ಕೃತಿ ಇರುತ್ತದೆ. ಅದರ ಆಧಾರದಲ್ಲೇ ಪಠ್ಯ ರಚನೆ ಆಗಬೇಕು. ಪಠ್ಯಪುಸ್ತಕಗಳು ಸ್ಥಳೀಯ ಮೌಲ್ಯಗಳಿಗೆ ಅನುಗುಣವಾಗಿ ರೂಪುಗೊಳ್ಳಬೇಕು’ ಎಂದು ಅವರು ಪ್ರತಿಪಾದಿಸುತ್ತಾರೆ. ‘ಪ್ರಾಥಮಿಕ ಹಂತದಲ್ಲಿ ಇಡೀ ರಾಜ್ಯಕ್ಕೆ ಒಂದೇ ಪಠ್ಯಪುಸ್ತಕ ಇರಬಾರದು. ಜಿಲ್ಲೆಗೊಂದು ಪಠ್ಯಪುಸ್ತಕ ಇರಬೇಕು. ಮಗುವು ಮೊದಲು ಅದರ ಊರಿನ ಬಗ್ಗೆ ತಿಳಿದುಕೊಳ್ಳಬೇಕು. ಊರಿನ ಇತಿಹಾಸ ಕಲಿಸದೆಯೇ ಫ್ರಾನ್ಸ್‌ ಮತ್ತು ರಷ್ಯಾದ ಇತಿಹಾಸ ಕಲಿಸುವುದರಲ್ಲಿ ಏನು ಅರ್ಥವಿದೆ? ಊರಿನ ಜೊತೆ ಗುರುತಿಸಿಕೊಳ್ಳುವುದನ್ನು ಕಲಿಸದಿದ್ದರೆ ಸ್ಥಳೀಯ ಸಾಮಾಜಿಕ, ಸಾಂಸ್ಕೃತಿಕ ಮೌಲ್ಯಗಳಿಂದ ಮಗು ಹೊರಗುಳಿಯುತ್ತದೆ’ ಎನ್ನುತ್ತಾರೆ ಅವರು.
 
 ‘ನಿರ್ದಿಷ್ಟ  ತರಗತಿಯ ಮಕ್ಕಳು ಇಂತಿಷ್ಟು ಜ್ಞಾನ ಸಂಪಾದಿಸಬೇಕು ಎಂಬುದಕ್ಕೆ ಮಾನದಂಡ ನಿಗದಿಪಡಿಸುವುದರಲ್ಲಿ ತಪ್ಪಿಲ್ಲ. ಉದಾಹರಣೆಗೆ, ಒಂದನೇ ತರಗತಿ ಮಕ್ಕಳಿಗೆ  ಪ್ರಾಸ ಗೀತೆ  ಹೇಳಲು ಬರಬೇಕು. ಅಂದ ಮಾತ್ರಕ್ಕೆ ಇಡೀ ರಾಜ್ಯದ ಎಲ್ಲ ಜಿಲ್ಲೆಗಳ ಮಕ್ಕಳು ‘ನಾಯಿ ಮರಿ, ನಾಯಿ ಮರಿ ತಿಂಡಿ ಬೇಕೇ?’ ಎಂಬ ಪದ್ಯವನ್ನೇ ಕಲಿಯಬೇಕಿಲ್ಲ. ಬೇರೆ ಬೇರೆ ಜಿಲ್ಲೆಯಲ್ಲಿ ಬೇರೆ ಬೇರೆ ಪ್ರಾಸಗಳನ್ನು ಕಲಿಸಬಹುದು’ ಎಂದು ಅವರು ವಿವರಿಸುತ್ತಾರೆ.
 
ಸಿಬಿಎಸ್‌ಇ ಪಠ್ಯವನ್ನು ಏಕಾಏಕಿ ಒಂಬತ್ತನೇ ತರಗತಿಗೆ ಜಾರಿಗೊಳಿಸುವುದರಿಂದ ಎಂಟನೇ ತರಗತಿವರೆಗೆ ರಾಜ್ಯ ಪಠ್ಯಕ್ರಮದಲ್ಲಿ ಕಲಿತ ಮಕ್ಕಳು ಎದುರಿಸುವ ಒತ್ತಡ ಹೇಗಿರುತ್ತದೆ ಎಂದು ಅಧಿಕಾರಿಗಳು ಚಿಂತನೆಯನ್ನೇ ಮಾಡಲಿಲ್ಲ. ಶಿಕ್ಷಣ ಎಂಬುದು ನಿರಂತರ ಪ್ರಕ್ರಿಯೆ. ಎಂಟನೇ ತರಗತಿಯಲ್ಲಿ ಕಲಿಯುವುದಕ್ಕೂ ಒಂಬತ್ತನೇ ತರಗತಿಯಲ್ಲಿ ಕಲಿಯುವುದಕ್ಕೂ ಪರಸ್ಪರ ಸಂಬಂಧ ಇರುತ್ತದೆ. ಸಿಬಿಎಸ್‌ಇ ಪಠ್ಯವನ್ನೇ ಯಥಾವತ್‌ ನಕಲು ಮಾಡುವ ಅನಿವಾರ್ಯ ಇದ್ದರೆ ಅದನ್ನು ಪೂರ್ವ ಪ್ರಾಥಮಿಕ ಹಂತದಿಂದಲೇ ಜಾರಿಗೊಳಿಸಬೇಕು ಎಂಬುದು ತಜ್ಞರ ಅಭಿಪ್ರಾಯ. ಸಿಬಿಎಸ್‌ಇ ಪಠ್ಯಕ್ರಮದ ಯಥಾ ನಕಲನ್ನು ಜಾರಿಗೆ ತರಲು ಹೊರಟಿರುವ ಇಲಾಖೆ ಇದಕ್ಕೆ ನೀಡಿರುವ ಕಾರಣ, ವೃತ್ತಿಪರ ಶಿಕ್ಷಣ ಪ್ರವೇಶ ಪರೀಕ್ಷೆಗಳಲ್ಲಿ ನಮ್ಮ ರಾಜ್ಯದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಆಗುವುದಕ್ಕೆ ಅನುಕೂಲವಾಗುತ್ತದೆ ಎಂಬುದು. 
 
ಶಿಕ್ಷಣವನ್ನು ಸ್ಪರ್ಧೆಯ ದೃಷ್ಟಿಯಲ್ಲಿ ಪರಿಭಾವಿಸುವುದೇ ಅವಿವೇಕ. ಶಿಕ್ಷಣ ಪೈಪೋಟಿಯ ವಸ್ತುವಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದಾಗ ನಮ್ಮ ರಾಜ್ಯದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚು ಯಶಸ್ಸು ಗಳಿಸದಿದ್ದರೆ ಅದು ವಿದ್ಯಾರ್ಥಿಗಳ ಲೋಪವಲ್ಲ. ವ್ಯವಸ್ಥೆಯ ಲೋಪ. ಅದನ್ನು ಮುಚ್ಚಿಕೊಳ್ಳಲು ಅಧಿಕಾರಿಗಳು ಇಂತಹ ಪ್ರಯತ್ನಗಳಿಗೆ ಮುಂದಾಗುತ್ತಿದ್ದಾರೆ ಎಂಬುದು ಶಿಕ್ಷಣದ ಸುಧಾರಣೆಗೆ ಹೋರಾಟ ನಡೆಸುತ್ತಿರುವವರ ಆರೋಪ.  
 
‘ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವ ಮಕ್ಕಳಿಗೆ ಸಮಾನ ಅವಕಾಶ ಸಿಕ್ಕಿದೆಯೇ? ಒಂದು ಶಾಲೆಯಲ್ಲಿ ನಿರ್ದಿಷ್ಟ ವಿಷಯಕ್ಕೆ ಶಿಕ್ಷಕರೇ ಇಲ್ಲದಿದ್ದರೆ, ಆ ಶಾಲೆಯ ವಿದ್ಯಾರ್ಥಿ ಉಳಿದ ವಿದ್ಯಾರ್ಥಿಗಳ ಜತೆ ಪೈಪೋಟಿಗೆ ಇಳಿಯುವುದಾದರೂ ಹೇಗೆ’ ಎಂದು ಪ್ರಶ್ನಿಸುತ್ತಾರೆ ಅವರು.
 
‘ದೇಶದಾದ್ಯಂತ ಸಿಬಿಎಸ್‌ಇ, ಐಸಿಎಸ್ಇ, ಆಕ್ಸ್‌ಫರ್ಡ್‌ – ಕೇಂಬ್ರಿಜ್‌ ಎಂದು ನಾನಾ ಪಠ್ಯಕ್ರಮಗಳನ್ನು ಅನುಸರಿಸಲು ಅವಕಾಶ ಕಲ್ಪಿಸಿರುವುದೇ ಅಕ್ರಮ. ಇಂಥ ಅಸಮಾನ ವ್ಯವಸ್ಥೆಯೇ ಅನಾರೋಗ್ಯಕರ ಸ್ಪರ್ಧೆ ಸೃಷ್ಟಿಸುತ್ತಿದೆ. ಸಮಾನ ಶಾಲೆ ಪರಿಕಲ್ಪನೆ ಜಾರಿಯಾಗಬೇಕು. ಶಾಸಕ, ಮುಖ್ಯಮಂತ್ರಿ, ಅಧಿಕಾರಿ, ಬಡ ಕೂಲಿ ಕಾರ್ಮಿಕನ ಮಕ್ಕಳು ಒಂದೇ ಶಾಲೆಯಲ್ಲಿ ಕಲಿಯುವ ವಾತಾವರಣ ಸೃಷ್ಟಿಯಾದರೆ ಮಾತ್ರ ಎಲ್ಲ ಮಕ್ಕಳಿಗೂ ಸಮಾನ ಅವಕಾಶ, ಸಮಾನ ಮೌಲ್ಯಗಳು ಸಿಗುತ್ತವೆ’ ಎನ್ನುತ್ತಾರೆ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಕಾರ್ಯದರ್ಶಿ ಮಂಡಳಿ ಸದಸ್ಯ ವಿ.ಎನ್‌.ರಾಜಶೇಖರ್‌.
 
‘ಜ್ಞಾನ, ಕೌಶಲ ಹಾಗೂ ಮೌಲ್ಯ ಇವು ಶಿಕ್ಷಣದ ಮೂರು ಬಹುಮುಖ್ಯ ಆಶಯಗಳು. ಆದರೆ, ಅದೇ ಈಡೇರುತ್ತಿಲ್ಲ. ಈಗ ಮಕ್ಕಳ ತಲೆಗೆ ಕೇವಲ ಮಾಹಿತಿಯನ್ನು ತುಂಬಲಾಗುತ್ತಿದೆ. ಸಮಗ್ರ ಶಿಕ್ಷಣದಿಂದ ಅವರನ್ನು ವಂಚಿತರನ್ನಾಗಿ ಮಾಡಲಾಗುತ್ತಿದೆ. ಹೆಚ್ಚಿನ ಮಕ್ಕಳು ಪ್ರಾಥಮಿಕ ಹಾಗೂ ಪ್ರೌಢ ಹಂತದಲ್ಲೇ ಶಾಲೆಗಳನ್ನು ತೊರೆಯುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗುತ್ತಿದೆ’ ಎಂದು ದೂರುತ್ತಾರೆ ನಿರಂಜನಾರಾಧ್ಯ. 
 
ಜನರಲ್ಲೂ ಶಿಕ್ಷಣದ ಬಗ್ಗೆ ತಪ್ಪು ಪರಿಕಲ್ಪನೆ ಇದೆ. ಯಾವ ಮಾರ್ಗದ ಮೂಲಕ ಹೋದರೆ ಬೇಗ ಶ್ರೀಮಂತರಾಗಬಹುದು ಎಂಬ ಬಗ್ಗೆ ಮಾತ್ರ ವಿದ್ಯಾರ್ಥಿಗಳ ಪೋಷಕರು ಯೋಚಿಸುತ್ತಿದ್ದಾರೆ. ರಾಜ್ಯ ಪಠ್ಯಕ್ರಮದಲ್ಲಿ ಕಲಿಯುವುದಕ್ಕಿಂತ ಐಸಿಎಸ್‌ಇ ಪಠ್ಯಕ್ರಮದಲ್ಲಿ ಕಲಿತರೆ ಹೆಚ್ಚು ಅವಕಾಶ ಸಿಗುತ್ತದೆ ಎಂದು ಪೋಷಕರು ಭಾವಿಸುವುದರಲ್ಲಿ ತಪ್ಪಿಲ್ಲ. ಇದು ರಾಜ್ಯ ಪಠ್ಯಕ್ರಮದ ದೋಷವಲ್ಲ. ಸಿಬಿಎಸ್ಇ ಹಾಗೂ ಐಸಿಎಸ್‌ಇ ಪಠ್ಯಕ್ರಮದಲ್ಲಿ ಕಲಿಸುವ ಶಾಲೆಗಳಲ್ಲಿ ಇರುವ ಮೂಲಸೌಕರ್ಯ, ಸವಲತ್ತುಗಳು ರಾಜ್ಯ ಪಠ್ಯಕ್ರಮವನ್ನು ಬೋಧಿಸುವ ಶಾಲೆಗಳಲ್ಲಿ ಇಲ್ಲದಿರುವುದೇ ಇಂತಹ ಭಾವನೆ ಸೃಷ್ಟಿಯಾಗುವುದಕ್ಕೆ ಕಾರಣ ಎಂದು ದೂರುತ್ತಾರೆ ಶಿಕ್ಷಣದಲ್ಲಿ ಸಮಾನತೆಗಾಗಿ ಹೋರಾಟ ನಡೆಸುತ್ತಿರುವವರು.
 
‘ಹಳ್ಳಿಗಳಲ್ಲಿ ಪೋಷಕರು ಮಕ್ಕಳನ್ನು ಸಮೀಪದ ಸರ್ಕಾರಿ ಶಾಲೆ ಬಿಟ್ಟು  ದೂರದ ಖಾಸಗಿ ಶಾಲೆಗೆ ಏಕೆ  ಸೇರಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಶಿಕ್ಷಣ ಇಲಾಖೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿಲ್ಲ. ಒಂದನೇ ತರಗತಿಗೆ 25 ಮಕ್ಕಳು ದಾಖಲಾದರೆ ಪದವಿವರೆಗೆ ವಿದ್ಯಾಭ್ಯಾಸ ಮುಂದುವರಿಸುವುದು 5 ಮಂದಿ ಮಾತ್ರ. ಶಾಲಾ ಹಂತದಲ್ಲೇ ಇಷ್ಟು ಪ್ರಮಾಣದ ಮಕ್ಕಳು ಶಿಕ್ಷಣವನ್ನು ತೊರೆಯುವುದಕ್ಕೆ ಕಾರಣ ಏನೆಂಬ ಬಗ್ಗೆಯೂ ಸಮರ್ಪಕ ಉತ್ತರ ಕಂಡುಕೊಳ್ಳಲು ಸಾಧ್ಯವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಶ್ರೀಪಾದ ಭಟ್.
 
‘ಕೇಂದ್ರೀಯ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿರುವುದಕ್ಕೆ ಕಾರಣ ಅವುಗಳಲ್ಲಿರುವ ಮೂಲಸೌಕರ್ಯ ಹಾಗೂ ಅಲ್ಲಿ ಪಠ್ಯಕ್ಕೆ ನೀಡಿದಷ್ಟೇ ಮಹತ್ವವನ್ನು ಪಠ್ಯೇತರ ಚಟುವಟಿಕೆಗೂ ನೀಡುತ್ತಿರುವುದು. ನಮ್ಮ ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳ ಈ ಎಲ್ಲ ಕೊರತೆಗಳನ್ನು ನೀಗಿಸುವುದು ಬಿಟ್ಟು ಕೇವಲ ಸಿಬಿಎಸ್ಇ ಪಠ್ಯಕ್ರಮವನ್ನು ಜಾರಿಗೊಳಿಸಿದರೆ ಪರಿಸ್ಥಿತಿ ಸರಿ ಹೋಗುತ್ತದೆಯೇ’ ಎಂದು  ಪ್ರಶ್ನಿಸುತ್ತಾರೆ ನಿರಂಜನಾರಾಧ್ಯ.
 
‘ಎನ್‌ಸಿಇಆರ್‌ಟಿ ಪಠ್ಯಕ್ರಮವನ್ನೇ ರಾಜ್ಯವು ಯಥಾವತ್‌ ತರ್ಜುಮೆ ಮಾಡಿ ಬಳಸಿದರೆ ಈಗಾಗಲೇ  ಅವಕಾಶ ವಂಚಿತರಾಗುತ್ತಿರುವ ಗ್ರಾಮೀಣ ಪ್ರದೇಶದ ಮಕ್ಕಳು ಇನ್ನಷ್ಟು ಸಮಸ್ಯೆಗೆ ಒಳಗಾಗುತ್ತಾರೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ರಾಜಶೇಖರ್‌. 
 
‘ಎನ್‌ಸಿಇಆರ್‌ಟಿ ಪಠ್ಯ ರಚಿಸುವವರಿಗೆ ಗ್ರಾಮೀಣ ವಿದ್ಯಾರ್ಥಿಯ ತುಮುಲಗಳು ಅರ್ಥವಾಗುವುದಿಲ್ಲ. ಅವರು ಸ್ಪರ್ಧೆಯಲ್ಲಿ ಇನ್ನಷ್ಟು ಹಿಂದೆ ಬೀಳುತ್ತಾರೆಯೇ ವಿನಾ, ಪಟ್ಟಣದವರ ಜೊತೆ ಹೆಜ್ಜೆಹಾಕಲು ಸಾಧ್ಯವಾಗುವುದಿಲ್ಲ.  ಇದರಿಂದ ಇನ್ನೊಂದು ಅಪಾಯವೂ ಇದೆ. ಶಿಕ್ಷಣ ವ್ಯವಸ್ಥೆಯ ಕೇಂದ್ರೀಕರಣಕ್ಕೂ ಇದು ದಾರಿ ಮಾಡಿಕೊಡಲಿದೆ. ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳ ಮಾದರಿಗಳು ಸಿಬಿಎಸ್‌ಇ, ಐಸಿಎಸ್‌್ಇ ಪಠ್ಯಕ್ರಮದಲ್ಲಿ ಕಲಿತವರಿಗೆ ಪೂರಕವಾಗಿವೆ. ಇದು ಗ್ರಾಮೀಣ ಮತ್ತು ನಗರ ವಿದ್ಯಾರ್ಥಿಗಳ ನಡುವಿನ ಕಂದಕವನ್ನು ಇನ್ನಷ್ಟು ಹೆಚ್ಚಿಸಲಿದೆ’ ಎಂದು ವಿವರಿಸಿದರು.
 
ಸಿಬಿಎಸ್‌ಇ ಪಠ್ಯಕ್ರಮ ಬೋಧಿಸಲು ಮುಂದಾಗುವ ಇಲಾಖೆ ಶಿಕ್ಷಕರಿಗೆ ಈ ಬಗ್ಗೆ ತರಬೇತಿ ನೀಡಿ ಅವರನ್ನು ಸಜ್ಜುಗೊಳಿಸಿದೆಯೇ? ಅಧ್ಯಾಪಕರ ಕೌಶಲ, ವಿಷಯ ಸಾಮರ್ಥ್ಯ ಹೆಚ್ಚಿಸುವ ಕಾರ್ಯಾಗಾರಗಳು ನಡೆದಿವೆಯೇ? ಇಂತಹ ಪೂರ್ವಸಿದ್ಧತೆ ಇಲ್ಲದೆ ನಡೆಸುವ ಪ್ರಯೋಗಗಳಿಂದ ಆಗುವ ಪರಿಣಾಮಗಳ ಬಗ್ಗೆಯಾದರೂ ಇಲಾಖೆ ಅಧಿಕಾರಿಗಳಿಗೆ ಪರಿವೆ ಇದೆಯೇ? ಶಿಕ್ಷಣ ಕುರಿತ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಅರ್ಹತೆ ಇರುವುದು ಶಿಕ್ಷಕರಿಗೆ. ಒಬ್ಬಿಬ್ಬರು ಅಧಿಕಾರಿಗಳು ತಳೆಯುವ ನಿರ್ಧಾರ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಗೊಂದಲದಲ್ಲಿ ದೂಡುತ್ತಿದೆ ಎಂಬುದು ಶಿಕ್ಷಣ ತಜ್ಞರ ಆರೋಪ.
 
**
 
**
ಸರ್ಕಾರದ ಜವಾಬ್ದಾರಿಯಾಗಲಿ
ಶಿಕ್ಷಣ ಮತ್ತು ಆರೋಗ್ಯದ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು. ಕ್ಯೂಬಾದಂತಹ ದೇಶದಲ್ಲಿ  ಇದು ಸಾಧ್ಯವಾಗುವುದಾದರೆ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಎಂದು ಕರೆಸಿಕೊಳ್ಳುವ ನಮ್ಮ ದೇಶದಲ್ಲಿ ಏಕೆ ಸಾಧ್ಯವಿಲ್ಲ?
 
 2005ರವರೆಗೆ, 14ನೇ ವಯಸ್ಸಿನ ಮಕ್ಕಳವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಸಿಗಬೇಕು ಎಂಬುದು ಸಂವಿಧಾನದ ನಿರ್ದೇಶಕ ತತ್ವಗಳಲ್ಲಿ ಮಾತ್ರ ಜಾರಿಯಲ್ಲಿತ್ತು. 86ನೇ ತಿದ್ದುಪಡಿ ಮೂಲಕ ಅದನ್ನು ಸಂವಿಧಾನದ ಕಲಂ 21ಎ ಅಡಿಗೆ ತರಲಾಗಿದೆ. ಇಷ್ಟೆಲ್ಲ ಕಸರತ್ತುಗಳನ್ನು ಮಾಡಿದ ಬಳಿಕವೂ ಸರ್ಕಾರಗಳು ಈ ತಿದ್ದುಪಡಿಯ ಹಿಂದಿನ ಆಶಯ ಈಡೇರಿಕೆಗೆ ಬದ್ಧತೆ  ಪ್ರದರ್ಶಿಸಿಲ್ಲ.  ಇಂದಿಗೂ ಆಶಯ ಜಾರಿ ಆಗದಿರುವುದಕ್ಕೆ ಮುಖ್ಯ ಕಾರಣ ಸರ್ಕಾರಗಳಲ್ಲಿ ಇಚ್ಛಾಶಕ್ತಿಯ ಕೊರತೆ. 
-ಬಿ.ಶ್ರೀಪಾದ ಭಟ್, ಸಂಚಾಲಕ, ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ 
 
**
ಮೂರ್ಖತನದ ಪರಮಾವಧಿ
ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಸಮಿತಿ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡುವ ಹಂತದಲ್ಲಿ ಸಿಬಿಎಸ್‌ಇ ಪಠ್ಯಪುಸ್ತಕವನ್ನು ಯಥಾವತ್‌ ತರ್ಜುಮೆ ಮಾಡುವಂತಹ ಗೊಂದಲ ಮೂಡಿಸುವ ಹೇಳಿಕೆಗಳನ್ನು ಶಿಕ್ಷಣ ಇಲಾಖೆ ನೀಡಲೇಬಾರದು. ಸರ್ಕಾರವೇ ರಚಿಸಿರುವ ಸಮಿತಿ ವರದಿ ನೀಡುವ ಮುನ್ನವೇ ಅದನ್ನು ಧಿಕ್ಕರಿಸುವ ಮಾತುಗಳು ಸರಿಯಲ್ಲ.  
 
ಇದು ಎನ್‌ಸಿಎಫ್‌ ಅನ್ನೂ ಅಣಕಿಸಿದಂತೆ. ಬಹುಭಾಷೆ, ಬಹುಸಂಸ್ಕೃತಿಯನ್ನು ಹೊಂದಿರುವ ನಮ್ಮ ದೇಶದಲ್ಲಿ ದೇಶದಾದ್ಯಂತ ಒಂದೇ ಪಠ್ಯ ಇರಬೇಕು ಎಂದು ಬಯಸುವುದು ಮೂರ್ಖತನದ ಪರಮಾವಧಿ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೂ ಅಪಾಯಕಾರಿ.  
–ಡಾ. ವಿ.ಪಿ.ನಿರಂಜನಾರಾಧ್ಯ, ಶಿಕ್ಷಣ ತಜ್ಞ 
 
**
ಮುದ್ರಣ ದೋಷ ತಪ್ಪಿಸಿ
ಬರಗೂರು ಸಮಿತಿ ಪಠ್ಯಪುಸ್ತಕ ಪರಿಷ್ಕರಣೆಯನ್ನು ಅತ್ಯಂತ ಸಮರ್ಥವಾಗಿ ಮಾಡಿರಬಹುದು. ಆದರೆ ಅವರಿಂದ ವಿಳಂಬವಾಗಿರುವುದಂತೂ ಸತ್ಯ. ಜನವರಿ ವೇಳೆಗೆ ಪಠ್ಯಪುಸ್ತಕ ಸಿದ್ಧವಾಗಬೇಕು ಎಂಬ ಅರಿವು ಅವರಿಗೆ ಇರಬೇಕಿತ್ತು. ಪ್ರಾಥಮಿಕ ಹಂತದಲ್ಲಿ ವಿವಿಧ ಭಾಷೆ ಹಾಗೂ ವಿಷಯಗಳ ಪಠ್ಯಪುಸ್ತಕಗಳು ಸೇರಿ 300ಕ್ಕೂ ಅಧಿಕ ವಿಧದ ಪಠ್ಯಪುಸ್ತಕಗಳು  ರಚನೆ ಆಗಬೇಕು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪುಸ್ತಕಗಳನ್ನು ಮುದ್ರಿಸುವುದೂ ಸವಾಲು. 
 
ಸಮಿತಿಯು ಪಠ್ಯಪುಸ್ತಕ ಪರಿಷ್ಕರಿಸಿದ ಬಳಿಕವೂ ಮುದ್ರಣ ದೋಷಗಳು ಕಾಣಿಸಿಕೊಳ್ಳುವ ಅಪಾಯವಿದೆ. ಇದು ಮರುಕಳಿಸುವುದನ್ನು ತಪ್ಪಿಸಲು ಇನ್ನು ಮುಂದೆಯಾದರೂ ಮುನ್ನೆಚ್ಚರಿಕೆ ವಹಿಸಬೇಕು. ಪಠ್ಯಪುಸ್ತಕದ ಕರಡನ್ನು  ಮುದ್ರಿಸಿ ಎಲ್ಲಾ ಶಾಲೆಗಳಿಗೆ ಅದರ ಒಂದೊಂದು ಪ್ರತಿಯನ್ನು ಕಳುಹಿಸಬೇಕು. ಪಾಠ ಮಾಡಬೇಕಾದ ಶಿಕ್ಷಕರು ಅದರಲ್ಲಿರುವ ಲೋಪಗಳನ್ನು ಪತ್ತೆ ಹಚ್ಚಿ ಸಮಿತಿಗೆ ಡಿಸೆಂಬರ್‌ ಅಂತ್ಯದ ಒಳಗೆ ಕಳುಹಿಸಬೇಕು. 
 
ಪಠ್ಯದಲ್ಲಿ ಪಾಠ ಮಾಡಲು ಸಮಸ್ಯೆಯಾಗುವ ವಿಚಾರಗಳಿದ್ದರೆ ಆ ಬಗ್ಗೆಯೂ  ಅಭಿಪ್ರಾಯ ಪಡೆಯಬೇಕು. ಬಳಿಕವೇ  ಅಂತಿಮ ಮುದ್ರಣಕ್ಕೆ  ಕಳುಹಿಸಬೇಕು. ಎಲ್ಲ ಶಾಲೆಗಳಿಂದಲೂ ಇದಕ್ಕೆ ಪ್ರತಿಕ್ರಿಯೆ ಬಾರದಿರಬಹುದು. ಆದರೆ, ಪುಸ್ತಕದಲ್ಲಿ ಲೋಪಗಳು ನುಸುಳುವುದನ್ನು ತಕ್ಕಮಟ್ಟಿಗೆ ತಡೆಯಬಹುದು. 
 
ಈಗಲೂ ಜೂನ್‌ ಅಂತ್ಯದವರೆಗೂ ಕೆಲವು ಶಾಲೆಗಳಿಗೆ ಪಠ್ಯಪುಸ್ತಕ ತಲುಪುವುದಿಲ್ಲ. ಅನುದಾನರಹಿತ ಶಾಲೆಗಳಿಂದ ಪಠ್ಯಕ್ಕೆ ಹಣ ಪಡೆಯಲಾಗುತ್ತದೆ. ಆದರೆ, ಸರ್ಕಾರಿ ಶಾಲೆಗಳಿಗೆಲ್ಲ ಪುಸ್ತಕ ಪೂರೈಕೆ ಆದ ಬಳಿಕ ಅವರಿಗೆ ಪುಸ್ತಕ ಕಳುಹಿಸಲಾಗುತ್ತದೆ. ಈ ತಾರತಮ್ಯ ಸರಿಯಲ್ಲ. 
 
ರಾಜ್ಯದ ಶಾಲೆಗಳಲ್ಲಿ 2012–13ರಲ್ಲಿ ಸಿಬಿಎಸ್‌ಇ ಅವರು ಅನುಸರಿಸುವ ಆಂತರಿಕ ಮೌಲ್ಯಮಾಪನ ವಿಧಾನವನ್ನು ಜಾರಿಗೆ ತರಲಾಯಿತು. ಇದರ ಪ್ರಕಾರ ವಿದ್ಯಾರ್ಥಿ ಶೇ 80ರಷ್ಟು ಅಂಕಕ್ಕೆ ಪರೀಕ್ಷೆ ಎದುರಿಸಬೇಕಿತ್ತು. ಉಳಿದ ಶೇ 20ರಷ್ಟು ಅಂಕವನ್ನು ಆಂತರಿಕ ಮೌಲ್ಯಮಾಪನದಿಂದ ಪಡೆಯಬೇಕಿತ್ತು.  ಈಗ ಈ ವಿಧಾನ ಸರಿ ಇಲ್ಲ ಎಂದು ಸಿಬಿಎಸ್‌ಇ ಅವರೇ ಅದನ್ನು ಕೈಬಿಡಲು ಮುಂದಾಗಿದ್ದಾರೆ. 
 
ನಮ್ಮವರು ಈ ವಿಧಾನವನ್ನು ನಕಲು ಮಾಡುವಾಗ ಅದರ ಔಚಿತ್ಯದ ಬಗ್ಗೆ ಪ್ರಶ್ನೆಯನ್ನೇ ಮಾಡಿಲ್ಲ. ಈಗ ಸಿಬಿಎಸ್‌ಇ ಪಠ್ಯವನ್ನು ಯಥಾವತ್‌ ತರ್ಜುಮೆ ಮಾಡಲು ಹೊರಟಿದ್ದು ದುರದೃಷ್ಟಕರ.
-ಚಂದ್ರಶೇಖರ ದಾಮ್ಲೆ, ಶಿಕ್ಷಣ ತಜ್ಞ, ಸುಳ್ಯ
 
**
ಆಶಯ ಒಳ್ಳೆಯದು; ಜಾರಿ ಕಷ್ಟ
ರಾಷ್ಟ್ರದಾದ್ಯಂತ  ಎಲ್ಲ ವಿದ್ಯಾರ್ಥಿಗಳಿಗೂ ಶಿಕ್ಷಣಕ್ಕೆ ಸಮಾನ ಅವಕಾಶ ಸಿಗಬೇಕು ಎಂಬುದು ಒಂದು ಸುಂದರ ಕನಸು. ಆದರೆ, ಈಗಾಗಲೇ ಸಿಬಿಎಸ್‌ಇ,  ಐಸಿಎಸ್‌ಇ ಎಂದೆಲ್ಲ ಬೇರೆ ಬೇರೆ ಪಠ್ಯಕ್ರಮದ ಶಾಲೆಗಳಿವೆ.  ಇಂತಹ ಸಂದರ್ಭದಲ್ಲಿ ಶಿಕ್ಷಣದಲ್ಲಿ ಸಮಾನತೆ ತರುವುದು ಸುಲಭದ ಮಾತಲ್ಲ. ಇದನ್ನು ಜನ ಒಪ್ಪುತ್ತಾರಾ ಎಂಬ ಪ್ರಶ್ನೆಯೂ ಇದೆ. ಇದನ್ನು  ಜಾರಿಗೊಳಿಸಲು ಹೊರಟರೆ, ಗರಿಷ್ಠ ಮುಖಬೆಲೆಯ ನೋಟು ರದ್ದತಿಯಿಂದ ಉಂಟಾದ ಪರಿಸ್ಥಿತಿ ಎದುರಾಗಬಹುದು.  
ಪ್ರಾಥಮಿಕ ಹಂತದಲ್ಲಿ ಮಾತೃಭಾಷಾ ಶಿಕ್ಷಣ ಮಾಧ್ಯಮ ಜಾರಿಗೊಳಿಸಲು ಸಂವಿಧಾನ ತಿದ್ದುಪಡಿ ಆಗಬೇಕು ಎಂಬ ವಿಚಾರದಲ್ಲಿ  ಎಲ್ಲಾ ರಾಜಕೀಯ ಪಕ್ಷಗಳು  ಒಂದೇ ಅಭಿಪ್ರಾಯ ಹೊಂದಿವೆ. ಆದರೆ ಈ ನಿಟ್ಟಿನಲ್ಲಿ ರಾಜಕೀಯ ಇಚ್ಛಾಶಕ್ತಿ ಕಾಣಿಸುತ್ತಿಲ್ಲ. ಪ್ರಬಲ ಹೋರಾಟವೂ ನಡೆಯುತ್ತಿಲ್ಲ. ಹಾಗಾಗಿ ಶಿಕ್ಷಣದಲ್ಲಿ ಸಮಾನ ಅವಕಾಶ ಸದ್ಯಕ್ಕಂತೂ ಮರೀಚಿಕೆ.
 
ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಆಧಾರದಲ್ಲೇ ರಾಜ್ಯ ಸರ್ಕಾರ ಪಠ್ಯಪುಸ್ತಕಗಳನ್ನು ರಚಿಸಿದೆ. ಅವುಗಳು ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಷ್ಟೇ ಸಮರ್ಥವಾಗಿವೆ. ಪಠ್ಯಕ್ರಮದಲ್ಲಿ ಶೇಕಡ 10ರಷ್ಟಾದರೂ ಸ್ಥಳೀಯ ಒಲವುಗಳಿಗೆ ಅವಕಾಶ ಇರಬೇಕು. ಎನ್‌ಸಿಇಆರ್‌ಟಿ ಪಠ್ಯಕ್ರಮದ ಯಥಾವತ್‌ ಅನುವಾದ ಅರ್ಥಹೀನ. ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬದಲಾವಣೆ ತರುವ ಪ್ರಯತ್ನಕ್ಕೆ ಮುಂದಾಗಿದ್ದು, ಈ ಬಗ್ಗೆ ತಳಮಟ್ಟದಿಂದ ಅಭಿಪ್ರಾಯ ಸಂಗ್ರಹಿಸುತ್ತಿದೆ. ಶಿಕ್ಷಣ ಇಲಾಖೆಯಲ್ಲಿ ಪದೇಪದೇ ಪ್ರಯೋಗಗಳನ್ನು ಮಾಡುತ್ತಾ ಹೋದರೆ ಅದಕ್ಕೆ ಬಲಿಯಾಗುವುದು ವಿದ್ಯಾರ್ಥಿಗಳು. 
-ಡಾ. ಮಹಾಬಲೇಶ್ವರ ರಾವ್‌
ಪ್ರಾಂಶುಪಾಲ, ಡಾ. ಟಿ.ಎಂ.ಎ. ಪೈ ಶಿಕ್ಷಣ ಮಹಾವಿದ್ಯಾಲಯ, ಉಡುಪಿ
 
**
ಪ್ರಜಾಪ್ರಭುತ್ವಕ್ಕೆ ಮಾರಕ
ಭಾರತ ಒಂದು ಉಪಖಂಡವಿದ್ದಂತೆ.  ನಾವು ಒಕ್ಕೂಟ ವ್ಯವಸ್ಥೆಯನ್ನು ಅಪ್ಪಿಕೊಂಡಿದ್ದೇವೆ. ನಮ್ಮಲ್ಲಿ ವೈವಿಧ್ಯತೆ ಇದೆ. ಅಂತೆಯೇ ಅಸಮಾನತೆಗಳೂ ಇವೆ. ಶಿಕ್ಷಣದ ವಿಚಾರದಲ್ಲೂ ಇದು ಅನ್ವಯವಾಗುತ್ತದೆ.  ಬೆಂಗಳೂರಿನ ಮಕ್ಕಳ ಕಲಿಕೆ ಸಾಮರ್ಥ್ಯ ಬೇರೆ, ಕಲಬುರ್ಗಿಯ ಮಕ್ಕಳ ಕಲಿಕಾ ಸಾಮರ್ಥ್ಯ ಬೇರೆ. ನಾಗಾಲ್ಯಾಂಡ್‌ ಅಥವಾ ಅಸ್ಸಾಂ ಮಕ್ಕಳ ಕಲಿಕಾ ಸಾಮರ್ಥ್ಯ ಬೇರೆ.
 
ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ  ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ರಚಿಸಲಾಗುತ್ತದೆ. ಅದನ್ನು ಎಲ್ಲಾ ರಾಜ್ಯಗಳು ಪರಿಪಾಲಿಸುತ್ತವೆ. ಎನ್‌ಸಿಎಫ್‌ ಅನ್ನು ಮಾನದಂಡವನ್ನಾಗಿ ಇಟ್ಟುಕೊಂಡು ಅಸಮಾನತೆ ಕಡಿಮೆ ಮಾಡುವುದಕ್ಕೆ ಪೂರಕವಾದ ಪಠ್ಯವನ್ನು ರಾಜ್ಯಗಳು ರಚಿಸಬೇಕು.  
 
ಎನ್‌ಸಿಇಆರ್‌ಟಿ, ಡಿಎಸ್‌ಇಆರ್‌ಟಿಗಳನ್ನು ಇನ್ನಷ್ಟು ಪ್ರಜಾಸತ್ತಾತ್ಮಕಗೊಳಿಸಬೇಕು. ಅಧ್ಯಾಪಕರು, ಶಿಕ್ಷಣ ತಜ್ಞರನ್ನು ಅದು ಒಳಗೊಳ್ಳಬೇಕು. ಪ್ರಾದೇಶಿಕ ಪ್ರಾತಿನಿಧ್ಯ ಕಲ್ಪಿಸಬೇಕು. ಪಠ್ಯಗಳನ್ನು ಆಯ್ಕೆ ಮಾಡುವಾಗಲೂ ವಿವಾದಕ್ಕೆ ಆಸ್ಪದ ಇರಬಾರದು. ಸ್ಥಾಪಿತ ಸತ್ಯಗಳನ್ನು ಮಾತ್ರ ಮಕ್ಕಳಿಗೆ ಕಲಿಸಬೇಕೇ ಹೊರತು ಮೂಢನಂಬಿಕೆಗಳನ್ನಲ್ಲ. ಅದು ಸಂವಿಧಾನದ ಆಶಯಗಳಿಗೆ ಪೂರಕವಾಗಿರಬೇಕು. ಈ ಎಲ್ಲ ಎಚ್ಚರ ಪಠ್ಯಪುಸ್ತಕ ಸಮಿತಿಯಲ್ಲಿರುವವರಿಗೆ ಇರಬೇಕು.
–ವಿ.ಎನ್‌.ರಾಜಶೇಖರ್‌
ಕಾರ್ಯದರ್ಶಿ ಮಂಡಳಿ ಸದಸ್ಯ, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT