ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ದಿನದ ನೋವಿದು ಡಿಸ್‌ಮೆನೊರಿಯಾ

Last Updated 16 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

* ಡಿಸ್‌ಮೆನೊರಿಯಾ: ಎಂದರೇನು?
ಲೈಂಗಿಕ ಕಾಯಿಲೆ ಮತ್ತು ಎಂಡೊಮೆಟ್ರಿಯಾಸಿಸ್ ಸಮಸ್ಯೆಯಿಂದ ಕಾಣಿಸಿಕೊಳ್ಳುವ ಮುಟ್ಟಿನ ನೋವನ್ನು ವೈದ್ಯಕೀಯ ಭಾಷೆಯಲ್ಲಿ ‘ಡಿಸ್‌ಮೆನೊರಿಯಾ’ ಎನ್ನಲಾಗುತ್ತದೆ.

ಮುಟ್ಟಿನ ನೋವು ತೀವ್ರ, ಕಡಿಮೆ ಅಥವಾ ಅತಿ ಉಗ್ರರೂಪದ್ದಾಗಿರುತ್ತದೆ. ಅತಿಯಾದ ನೋವು, ವಾಕರಿಕೆಯ ಅನುಭವ, ಯಾವ ಕೆಲಸ ಮಾಡಲೂ ಸಾಧ್ಯವಾಗದು. ಇದು ಮುಟ್ಟು ಶುರುವಾಗುವ ಕೆಲವು ದಿನಗಳ ಮೊದಲು, ಕೆಲವು ಗಂಟೆಗಳ ಮೊದಲು ಅಥವಾ ಮುಟ್ಟಿನೊಂದಿಗೇ ಕಾಣಿಸಿಕೊಳ್ಳಬಹುದು. ಸ್ರಾವ ಕಡಿಮೆಯಾದಂತೆ ನೋವು ಕಡಿಮೆಯಾಗುತ್ತ ಹೋಗುತ್ತದೆ. ಇಷ್ಟೇ ಆಗಿದ್ದರೆ ಮೂರು ದಿನ ನೋವು ತಿಂದು ಸುಮ್ಮನಾಗಬಹುದಿತ್ತು. ಆದರೆ ಈ ಸಮಸ್ಯೆ ಕೆಲವು ಸಂದರ್ಭಗಳಲ್ಲಿ ಸಂತಾನಹೀನತೆಗೂ ದಾರಿಮಾಡಿಕೊಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸೂಕ್ತ ತಪಾಸಣೆ ಮತ್ತು ಚಿಕಿತ್ಸೆಗೆ ಮುಂದಾಗುವುದು ಸೂಕ್ತ.

* ಇದರಲ್ಲಿ ಎಷ್ಟು ವಿಧ?
ಎರಡು ವಿಧ. ಸಾಮಾನ್ಯ ನೋವು ಕಾಣಿಸಿಕೊಂಡರೆ ಅದನ್ನು ‘ಪ್ರಾಥಮಿಕ ಡಿಸ್‌ಮೆನೊರಿಯಾ’ ಎನ್ನುತ್ತೇವೆ. ಈ ನೋವು ಆಂತರಿಕವಾಗಿ ರೋಗ ಅಥವಾ ಇನ್ನೊಂದು ಆರೋಗ್ಯಸಮಸ್ಯೆಗೆ ಸಂಬಂಧಪಟ್ಟಲ್ಲಿ ಅದನ್ನು ‘ಸೆಕೆಂಡರಿ ಡಿಸ್‌ಮೆನೊರಿಯಾ’ ಎನ್ನುತ್ತೇವೆ.

* ಸೆಕೆಂಡರಿ ಡಿಸ್‌ಮೆನೊರಿಯಾಕ್ಕೆ ಕಾರಣಗಳೇನು?
ಸೆಕೆಂಡರಿ ಡಿಸ್‌ಮೆನೊರಿಯಾಕ್ಕೆ ಸಾಮಾನ್ಯ ಕಾರಣಗಳೆಂದರೆ ಎಂಡೊಮೆಟ್ರಿಯಾಸಿಸ್, ಗರ್ಭಕೋಶದಲ್ಲಿನ ಗಡ್ಡೆಗಳು ಮತ್ತು ಲೈಂಗಿಕ ರೋಗಗಳು.

* ಇದು ವಂಶಪಾರಂಪರ್ಯವಾಗಿ ಬರುವಂಥದ್ದೇ? ಹಾಗಾದರೆ ಸಾಧ್ಯತೆಯ ಪ್ರತಿಶತ ಎಷ್ಟು?
ಒಬ್ಬ ಮಹಿಳೆಯು ಎಂಡೊಮೆಟ್ರಿಯಾಸಿಸ್‌ಗೆ ಒಳಗಾಗಿದ್ದರೆ ಆಕೆಯ ಹೆಣ್ಣುಮಕ್ಕಳು ಶೇ. 8, ಸಹೋದರಿಯರು ಶೇ. 6, ಸೋದರ ಸಂಬಂಧಿಗಳು ಮತ್ತು ಮೊದಲ ಹಂತದ ರಕ್ತಸಂಬಂಧಿಗಳು ಶೇ. 7ರಷ್ಟು ಎಂಡೊಮೆಟ್ರಿಯಾಸಿಸ್‌ಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಎಂಡೊಮೆಟ್ರಿಯಾಸಿಸ್‌ಗೆ ಒಳಗಾದ ಮಹಿಳೆಯರಲ್ಲಿ ಶೇ. 30ರಿಂದ 30ರಷ್ಟು ಜನರು ಬಂಜೆತನದಿಂದ ಬಳಲುತ್ತಾರೆ. ಎಂಡೊಮೆಟ್ರಿಯಾಸಿಸ್‌ಗೆ ಒಳಗಾದವರಲ್ಲಿ ಬಂಜೆತನದ ಪ್ರಮಾಣವು 2ರಿಂದ 3 ಪಟ್ಟು ಜಾಸ್ತಿಯಾಗಿರುತ್ತದೆ.

* ಇದರ ಪ್ರಮುಖ ಲಕ್ಷಣಗಳನ್ನು ಗುರುತಿಸುವುದು ಹೇಗೆ?
ಲಕ್ಷಣಗಳು ವ್ಯಕ್ತಿಯಿಂದ, ವ್ಯಕ್ತಿಗೆ ಭಿನ್ನವಾಗಿರುತ್ತದೆ. ರೋಗದ ಗಂಭೀರತೆಗೂ ಮತ್ತು ಲಕ್ಷಣದ ಪ್ರಮಾಣಕ್ಕೂ ಸಂಬಂಧವೂ ಕಾಣದಿರಬಹುದು. ಸಾಮಾನ್ಯ ಲಕ್ಷಣಗಳೆಂದರೆ ನೋವು. ಶ್ರೋಣಿಯ ನೋವು ಮುಟ್ಟಿನ ಅವಧಿಯಲ್ಲಿ ಅಥವಾ ಮುಟ್ಟಿಗಿಂತ ಸ್ವಲ್ಪ ಮೊದಲು ಕಾಣಿಸಿಕೊಂಡು ಋತುಚಕ್ರದ ನಂತರ ಕ್ಷೀಣಿಸಬಹುದು. ಕೆಲವು ಮಹಿಳೆಯರಿಗೆ ಸಂಭೋಗದ ಸಮಯದಲ್ಲಿ, ಮಲಮೂತ್ರ ವಿಸರ್ಜಿಸುವಾಗಲೂ ನೋವುಂಟಾಗಬಹುದು. ಮಲಮೂತ್ರ ವಿಸರ್ಜನೆಯ ಸಂದರ್ಭದಲ್ಲಿ ರಕ್ತಸ್ರಾವವಾಗಬಹುದು. ಇಂತಹ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಕಾಣುವುದು ಉತ್ತಮ. ಕೆಲವರಲ್ಲಿ ಇದು ಬಂಜೆತನಕ್ಕೂ ಕಾರಣವಾಗಬಹುದು.

* ಯಾವ ವಯಸ್ಸಿನವರಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ?
ಸಂತಾನೋತ್ಪತ್ತಿಯ ಸಾಮರ್ಥ್ಯವಿರುವ ಅವಧಿಯಲ್ಲಿ ಅಂದರೆ ಮುಟ್ಟು ಕಾಣಿಸಿಕೊಂಡ ನಂತರದಿಂದ ಋತುಬಂಧದ ಅವಧಿಯವರೆಗೆ ಅಥವಾ ಋತುಬಂಧವುಂಟಾದ ನಂತರದ ವರ್ಷಗಳಲ್ಲಿ ಕಾಣಿಸಿಕೊಳ್ಳಬಹುದು. ಸುಮಾರು 25ರಿಂದ 35 ವರ್ಷದ ಒಳಗಿನ ಮಹಿಳೆಯರಲ್ಲಿ ಸಾಮಾನ್ಯವಾಗಿ ವರದಿಯಾಗುತ್ತದೆ. ಆದರೂ ಇದು 11 ವರ್ಷ ವಯಸ್ಸಿನ ಎಳೆಯ ಹೆಣ್ಣು ಮಕ್ಕಳಲ್ಲಿಯೂ ಕಾಣಿಸಿಕೊಳ್ಳಬಹುದು.

* ಚಿಕಿತ್ಸೆಯ ಆಯ್ಕೆಗಳೇನು?
ಔಷಧ ಅಥವಾ ಶಸ್ತ್ರಚಿಕಿತ್ಸೆಯ ಮೂಲಕ ಎಂಡೊಮೆಟ್ರಿಯಾಸಿಸ್‌ನ್ನು ವಾಸಿಮಾಡಬಹುದು. ಔಷಧೀಯ ಚಿಕಿತ್ಸೆಯು ನೋವುನಿವಾರಕಗಳು ಅಥವಾ ಋತುಚಕ್ರವನ್ನು ನಿಯಂತ್ರಿಸುವ ಔಷಧಗಳನ್ನು ಒಳಗೊಂಡಿರುತ್ತದೆ. ಸಾಮಾನ್ಯ ಅರವಳಿಕೆಯನ್ನು ನೀಡಿ ಹೊಕ್ಕಳಿನ ಮೂಲಕ ಚಿಕ್ಕ ಟೆಲಿಸ್ಕೋಪನ್ನು ಹೊಟ್ಟೆಯಲ್ಲಿ ತೂರಿಸಿ ಎಂಡೊಮೆಟ್ರಿಯಾಸಿಸ್ ಅನ್ನು ಹೊರತೆಗೆಯುವ ಲ್ಯಾಪ್ರೊಸ್ಕೋಪಿ ಶಸ್ತ್ರಚಿಕಿತ್ಸೆಯು ಈ ಸಮಸ್ಯೆಗೆ ಲಭ್ಯವಿರುವ ಒಂದು ಶಸ್ತ್ರಚಿಕಿತ್ಸಾ ವಿಧಾನವಾಗಿದೆ. ಮೂಲ ಉದ್ದೇಶ ನೋವು ನಿವಾರಿಸುವುದೇ ಅಥವಾ ಬಂಜೆತನ ನಿವಾರಿಸುವುದೇ ಎನ್ನುವುದರ ಮೇಲೆ ಚಿಕಿತ್ಸೆ ಅವಲಂಬಿಸಿರುತ್ತದೆ.

* ಎಂಡೊಮೆಟ್ರಿಯಾಸಿಸ್ ಮತ್ತು ಬಂಜೆತನಕ್ಕಿರುವ ಸಂಬಂಧಗಳೇನು?
ಎಂಡೊಮೆಟ್ರಿಯೊಸಿಸ್‌ನ ಮಧ್ಯಮ ಮತ್ತು ಗಂಭೀರ ಸ್ಥಿತಿಗಳಲ್ಲಿ ಶ್ರೋಣಿಯಲ್ಲಾಗುವ ಗಾಯ ಅಥವಾ ಅಂಟಿಕೊಳ್ಳುವಿಕೆಯಿಂದ ಬಂಜೆತನ ಉಂಟಾಗಬಹುದು. ಫಾಲೊಪಿಯನ್ ಟ್ಯೂಬುಗಳು ಅಥವಾ ಅಂಡಾಶಯ ಶ್ರೋಣಿಯ ಗೋಡೆಯನ್ನು ಅಂಟಿಕೊಂಡು ಸರಿದಾಡಲು ಅವಕಾಶವಿಲ್ಲದಂತಾಗಬಹುದು. ಇದರಿಂದ  ಅಂಡನಾಳ (ಫಾಲೊಫಿಯನ್ ನಳಿಕೆ) ಮತ್ತು ಅಂಡಾಶಯಗಳು ತಮ್ಮ ಸೂಕ್ತ ಸ್ಥಳದಿಂದ ಪಲ್ಲಟಗೊಳ್ಳುವುದರಿಂದ ಮೊಟ್ಟೆಯು ಅಂಡನಾಳವನ್ನು ಪ್ರವೇಶಿಸುವುದು ಸಾಧ್ಯವಾಗುವುದಿಲ್ಲ. ಅಲ್ಲದೇ ಎಂಡೊಮೆಟ್ರಿಯಾಸಿಸ್ ಅಂಡನಾಳದಲ್ಲಿ ತಡೆ ಅಥವಾ ಇನ್ನಿತರ ಹಾನಿಯನ್ನುಂಟು ಮಾಡುವುದರಿಂದ ಮೊಟ್ಟೆಯು ಅಂಡನಾಳದಿಂದ ಗರ್ಭಾಶಯಕ್ಕೆ ಚಲಿಸುವುದು ಅಸಾಧ್ಯವಾಗುತ್ತದೆ.

* ಇಂತಹ ಸ್ಥಿತಿಯಲ್ಲಿ ಲಭ್ಯವಿರುವ ಆಯ್ಕೆಗಳೇನು?
ಎಂಡೊಮೆಟ್ರಿಯಾಸಿಸ್‌ಗೆ ತುತ್ತಾಗಿರುವ ಮಹಿಳೆಯರಲ್ಲಿ ಪ್ರನಾಳ ಶಿಶು ಚಿಕಿತ್ಸೆಯು ಬಂಜೆತನವನ್ನು ನಿವಾರಿಸುವಲ್ಲಿ ಪರಿಣಾಮಕಾರಿಯೆನಿಸಿದೆ. ಪ್ರನಾಳಶಿಶು ವಿಧಾನದಲ್ಲಿ ವೀರ್ಯಾಣು ಮತ್ತು ಅಂಡಾಣುಗಳನ್ನು ಪ್ರಯೋಗ ಶಾಲೆಯಲ್ಲಿ  ಫಲಿತಗೊಳಿಸಿ ಅದರಿಂದ ಉದ್ಭವಿಸುವ ಭ್ರೂಣವನ್ನು ಗರ್ಭಾಶಯಕ್ಕೆ ಸೇರಿಸುವುದು ಸಾಧ್ಯವಿದೆ.

* ಈ ಚಿಕಿತ್ಸೆಯಿಂದ ಗರ್ಭಧಾರಣೆಯ ಯಶಸ್ಸಿನ ಪ್ರಮಾಣವೇನು?
ತಜ್ಞವೈದ್ಯರ ಪ್ರಕಾರ, ಎಂಡೊಮೆಟ್ರಿಯಾಸಿಸ್‌ಗೆ ಲ್ಯಾಪ್ರೊಸ್ಕೊಪಿ ಚಿಕಿತ್ಸೆಯನ್ನು ಪಡೆದ ನಂತರ 6ರಿಂದ 9 ತಿಂಗಳಲ್ಲಿ ಮಹಿಳೆಯರು ಗರ್ಭಧರಿಸುವ ಸಾಧ್ಯತೆಯಿರುತ್ತದೆ. ಕೆಲವು ನಿರ್ದಿಷ್ಟ ಚಿಕಿತ್ಸಾ ವಿಧಾನದ ನಂತರ ಪ್ರನಾಳಶಿಶು ಚಿಕಿತ್ಸೆಯ ಮೂಲಕ ಗರ್ಭಧರಿಸುವ ಸಾಧ್ಯತೆಯು ಶೇ. 40ರಿಂದ 50ರಷ್ಟು  ಇರುತ್ತದೆ.
ವೈದ್ಯರ ಸಂಪರ್ಕಕ್ಕೆ:  080-26673585 / 080-41312600.

ಉಪಶಮನಕ್ಕೆ ಇಲ್ಲಿವೆ ಉಪಾಯಗಳು
* ಬಿಸಿ ದ್ರವಪದಾರ್ಥಗಳ ಸೇವನೆ ಅತ್ಯುತ್ತಮ. ಈ ಪದಾರ್ಥಗಳು ರಕ್ತಪರಿಚಲನೆಯ ವೇಗವನ್ನು ಚುರುಕುಗೊಳಿಸಿ, ಮುಟ್ಟಿನ ನೋವನ್ನು ಶಮನಗೊಳಿಸುತ್ತವೆ. ಆದರೆ, ಚಹಾ ಮತ್ತು ಕಾಫಿಯಿಂದ ದೂರವಿರಿ.
* ನಿಯಮಿತ ವ್ಯಾಯಾಮ ಮಾಡಿ. ಇದರಿಂದ ಪಿಟ್ಯೂಟರಿ ಗ್ರಂಥಿಯು ಉತ್ತೇಜಿತಗೊಂಡು ಹೆಚ್ಚು ಎಂಡೋರ್ಫನ್‌ಗಳನ್ನು ಉತ್ಪಾದಿಸುತ್ತದೆ. ಇವು ನೈಸರ್ಗಿಕ ನೋವು ನಿವಾರಕಗಳಾಗಿ ಕೆಲಸ ಮಾಡುತ್ತವೆ.
* ಲೋಳೆಸರ ಉತ್ತಮ ಮನೆಮದ್ದು. ಇದರಲ್ಲಿರುವ ಸಂಯುಕ್ತಗಳು ಮುಟ್ಟಿನ ಏರುಪೇರನ್ನು ಸರಿಪಡಿಸಬಲ್ಲವು.
*  ಆಹಾರದಲ್ಲಿ ಹಾಲಿನ ಉತ್ಪನ್ನಗಳನ್ನು ಕಡಿಮೆ ಬಳಸಿ.
* ಹೊಟ್ಟೆಯ ಮೇಲೆ ಬಿಸಿನೀರಿನ ಬಾಟಲಿಯನ್ನು ಇಟ್ಟುಕೊಳ್ಳಿ. ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿದ ಒದ್ದೆ ಬಟ್ಟೆಯನ್ನು ಕೂಡ ಬಳಸಬಹುದು.
* ಸಾಕಷ್ಟು ನೀರು ಕುಡಿಯಿರಿ. ನಿರ್ಜಲೀಕರಣದಿಂದ ಮುಟ್ಟಿನ ನೋವಿನ ಸಮಸ್ಯೆಯು ಇನ್ನಷ್ಟು ಜಾಸ್ತಿಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT