ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಟಮಿನ್‌ ಕೊರತೆಯಿಂದ ವಿಚ್ಛೇದನ!

Last Updated 16 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಅವರಿಬ್ಬರೂ ಪ್ರೀತಿಸಿ ಮದುವೆ ಆಗಿದ್ದು. ಮದುವೆಗೂ ಮುನ್ನ ಅವರು ಕಂಡ ಕನಸುಗಳಿಗೆ ಲೆಕ್ಕವೇ ಇಲ್ಲ. ಸ್ವರ್ಗಕ್ಕೆ ಕಿಚ್ಚು ಹಚ್ಚುವ ಜೋಡಿ ಎಂದೇ ಕರುಬಿದವರು ಉಂಟು. ಆದರೆ,  ವರ್ಷಗಳಿಂದೀಚೆಗೆ ಇಬ್ಬರು ಹಾವು–ಮುಂಗುಸಿ ಆಗಿದ್ದಾರೆ. ಒಂದೇ ಮನೆಯಲ್ಲಿ  ಅಪರಿಚಿತರಂತೆ ಜೀವನವೆಂಬ ತೆಪ್ಪ ಸಾಗಿಸುತ್ತಿದ್ದಾರೆ.

ಈ ಸ್ಥಿತಿಗೆ ಕಾರಣವೇನು? ಇಬ್ಬರೂ ಚೆನ್ನಾಗಿ ದುಡಿಯುತ್ತಾರೆ. ಹಣಗಳಿಕೆಯಲ್ಲಿ ಹೇಳಿಕೊಳ್ಳುವ ವ್ಯತ್ಯಾಸವಿಲ್ಲ. ಆದರೆ, ಗಂಡನಿಗೆ ಹೆಂಡತಿಯ ಮೇಲೆ  ಸಂಶಯವೆಂಬ ಹುಳು ಮೆದುಳಿಗೆ ಸೇರಿತ್ತು. ಅದು ಯಾವ ಅತಿರೇಕಕ್ಕೆ ಹೋಯಿತೆಂದರೆ ಹೆಂಡತಿಯ ಕಚೇರಿಗೆ ಹೋಗಿ, ಆಕೆಗೆ ಬೈಯ್ದು ರಂಪಾಟ ಮಾಡಿದ್ದ.

ಮುಂದೆ ಗಂಡನೊಂದಿಗೆ ಬಾಳ್ವೆ ನಡೆಸಲಾಗದೇ ಕೆಲಸ ಬಿಟ್ಟು  ಆಕೆ ತವರಿಗೆ ಹೋದಳು. ಇತ್ತ ಗಂಡ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದರೆ. ಅತ್ತ ಹೆಂಡತಿ ಕಣ್ಣೀರಿನ ಕಡಲಲ್ಲಿ ತೇಲುವಂತಾಗಿತ್ತು. ಇವರಿಬ್ಬರನ್ನು ಬಲ್ಲ ವಿಶ್ವಾಸಿಯೊಬ್ಬರು ಮನೋವೈದ್ಯರ ಮೂಲಕ  ಪರಿಹಾರವನ್ನು ಕಂಡುಕೊಳ್ಳಲು ಸೂಚಿಸಿದರು.  ಹೆಂಡತಿ ತಮ್ಮ ಕೌಟುಂಬಿಕ ವಿವರಗಳನ್ನೆಲ್ಲ ವೈದ್ಯರಿಗೆ ತಿಳಿಸಿದರು. ಗಂಡನ ಮನವೊಲಿಸಿ ಕರೆದುಕೊಂಡು ಬರಲು ಸೂಚಿಸಿದರು. 

ಕೌನ್ಸೆಲಿಂಗ್‌ ನಡೆಸಿದ ಬಳಿಕ  ‘ವಿಟಮಿನ್‌’ ಪರೀಕ್ಷೆ ಮಾಡಲಾಯಿತು. ಆ ವ್ಯಕ್ತಿಯಲ್ಲಿ ವಿಟಮಿನ್‌ ಬಿ–12ರ ಕೊರತೆ ತೀವ್ರ ಪ್ರಮಾಣದಲ್ಲಿತ್ತು. ವಿಟಮಿನ್‌ ಬಿ–12ನ್ನು ನೀಡುವ ಮೂಲಕ ಚಿಕಿತ್ಸೆ ಆರಂಭಿಸಲಾಯಿತು. ಕೆಲವೇ ತಿಂಗಳಲ್ಲಿ ಆತನ ಮಾನಸಿಕ ಆರೋಗ್ಯ ಸರಿಯಾಗಿತ್ತು. ಗಂಡ–ಹೆಂಡತಿ ಉತ್ತಮ ಬದುಕು ನಡೆಸುತ್ತಿದ್ದಾರೆ.

ಇದು ಕತೆ ಅಲ್ಲ; ನಡೆದ ಘಟನೆ. ಹಿರಿಯ ಮಿತ್ರರೊಬ್ಬರು ಈ ವಿಷಯ ಕಿವಿಗೆ ಹಾಕಿದ ಬಳಿಕ, ಸಾಕಷ್ಟು ಮನೋವೈದ್ಯರು, ನಿಮ್ಹಾನ್ಸ್‌ನ ತಜ್ಞರನ್ನು ಸಂಪರ್ಕಿಸಿ ‘ವಿಟಮಿನ್‌ ಬಿ–12’ ಬಗ್ಗೆ ಮಾಹಿತಿ ಕೋರಿದಾಗ, ದೇಶದಲ್ಲಿ ಇದು ಅತ್ಯಂತ ಗಂಭೀರ ಸಮಸ್ಯೆಯಾಗಿ ಪರಿಣಮಿಸುತ್ತಿರುವುದು ಬೆಳಕಿಗೆ ಬಂತು. ಆದರೆ,  ಸಾರ್ವಜನಿಕರಾಗಲಿ, ವೈದ್ಯಕೀಯ ಸಮುದಾಯವಾಗಲಿ ಇದನ್ನು ಗಂಭೀರವಾಗಿ ಪರಿಗಣಿಸದೇ ಇರುವುದೂ ಗೊತ್ತಾಯಿತು.

ವಿವಿಧ ಬಗೆಯ ವಿಟಮಿನ್‌ಗಳ ಕೊರತೆ ಭಾರತದಲ್ಲಿ ಪ್ರಮುಖವಾಗಿ ಕಾಡುತ್ತಿರುವ  ಆರೋಗ್ಯ ಸಮಸ್ಯೆಯಾಗಿದೆ. ‘ವಿಟಮಿನ್‌ ಬಿ–12’ ಕೊರತೆಯಿಂದ ಬೆಂಗಳೂರು ಸೇರಿದಂತೆ ನಗರಪ್ರದೇಶಗಳಲ್ಲಿ ಸಾಕಷ್ಟು ಜನರು ಮಾನಸಿಕ  ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಎಲ್ಲರ ಸಮಸ್ಯೆ ಒಂದೇ ರೀತಿ ಅಲ್ಲ. ಕೆಲವರು ಅಲ್ಪಮಟ್ಟದ ಸಮಸ್ಯೆಯಿಂದ ಬಳಲುತ್ತಿದ್ದರೆ, ಇನ್ನು ಕೆಲವರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅರಿವಿನ ಕೊರತೆಯಿಂದ, ಚಿಕಿತ್ಸೆ ಇಲ್ಲದೆ ಸಮಸ್ಯೆಗಳ ಸುಳಿಗೆ ಸಿಲುಕಿದ್ದಾರೆ.

‘ವಿಟಮಿನ್‌ ಬಿ–12’ ಕೊರತೆಯಿಂದ ಉಂಟಾಗುತ್ತಿರುವ  ಮಾನಸಿಕ ಸಮಸ್ಯೆಗಳ ಬಗ್ಗೆ ಗಂಭೀರ ಅಧ್ಯಯನ ಭಾರತದಲ್ಲಿ  ನಡೆದಿಲ್ಲ, ಅಮೆರಿಕದಲ್ಲಿ ಇಂತಹ ಬಹಳಷ್ಟು ಅಧ್ಯಯನಗಳು  ನಡೆದಿವೆ. ನಿಮ್ಹಾನ್ಸ್‌ ಕೂಡ ಬಹಳ ಹಿಂದೆ ಸಣ್ಣ ಮಟ್ಟದ ಅಧ್ಯಯನ ನಡೆಸಿದ್ದರೂ, ವಿಸ್ತೃತ ಅಧ್ಯಯನ ನಡೆಸಿಲ್ಲ.

‘ಮೆಟ್ರೋ ಹೆಲ್ತ್‌ ಕೇರ್‌’ ಸಂಸ್ಥೆಯು  ವಿಟಮಿನ್‌ ಬಿ–12 ಸೇರಿದಂತೆ ವಿವಿಧ ಬಗೆಯ ವಿಟಮಿನ್‌ಗಳ ಕೊರತೆಯ ಬಗ್ಗೆ ವಿಸ್ತೃತ ಅಧ್ಯಯನವೊಂದನ್ನು ನಡೆಸಿದೆ. ಅದರ  ಪ್ರಕಾರ, ಬೆಂಗಳೂರು ಸೇರಿದಂತೆ  ದೇಶದ ಎಲ್ಲ  ನಗರಗಳಲ್ಲಿ  ವಿಟಮಿನ್‌ಗಳ ಕೊರತೆಯಿಂದ ಅಧಿಕ ಪ್ರಮಾಣದಲ್ಲಿ  ಬಳಲುತ್ತಿದ್ದಾರೆ.   ಪ್ರತಿ 10 ಜನರಲ್ಲಿ 7 ಮಂದಿ (ಶೇ. 70) ವಿಟಮಿನ್‌ ಬಿ–12,  ವಿಟಮಿನ್‌–ಡಿ ಮತ್ತು  ವಿಟಮಿನ್‌–9 ಕೊರತೆಯಿಂದ ಬಳಲುತ್ತಿದ್ದಾರೆ.

ವಿಶೇಷವಾಗಿ ವಿಟಮಿನ್‌ ಬಿ–12ರ  ಕೊರತೆಯಿಂದ ಖಿನ್ನತೆ, ಮಾನಸಿಕ ಒತ್ತಡ, ನೆನಪಿನ ಶಕ್ತಿಯ ನಷ್ಟ, ಬಲಹೀನತೆ, ಆ್ಯಸಿಡಿಟಿ, ಅನಿಮಿಯಾ, ಮಾನಸಿಕ ಗೊಂದಲ, ಮತಿವಿಕಲ್ಪತೆ, ಉಸಿರಾಟದ ತೊಂದರೆ, ಭ್ರಮೆಯಂತಹ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ.

ನಗರಗಳಲ್ಲಿ ಹೆಚ್ಚುತ್ತಿರುವ ಕೌಟುಂಬಿಕ  ಸಮಸ್ಯೆಗಳಿಗೂ, ವಿವಾಹ ವಿಚ್ಛೇದನಗಳಿಗೂ ‘ವಿಟಮಿನ್‌ ಬಿ–12’ರ ಕೊರತೆಯಿಂದ ಉದ್ಭವಿಸುತ್ತಿರುವ ಮಾನಸಿಕ ಸಮಸ್ಯೆಯೂ  ಒಂದು ಪ್ರಮುಖ ಕಾರಣವಾಗುತ್ತಿದೆ ಎಂಬ ಅಭಿಪ್ರಾಯ  ವೈದ್ಯಕೀಯ ವಲಯದಲ್ಲಿ ದಟ್ಟವಾಗಿ  ಕೇಳಿ ಬರುತ್ತಿದೆ. 

ಅಚ್ಚರಿಯ ಸಂಗತಿ ಎಂದರೆ, ವಿಟಮಿನ್‌ ಕೊರತೆಯಿಂದ ಮಾನಸಿಕ ಆರೋಗ್ಯ ಹದಗೆಡುತ್ತಿರುವ ವಿಚಾರದ ಗಂಭೀರತೆಯ ಅರಿವು  ಸಾರ್ವಜನಿಕರಲ್ಲೂ ಇಲ್ಲ, ವೈದ್ಯರಲ್ಲೂ  ಇಲ್ಲ.  ವಿಟಮಿನ್‌ ಕೊರತೆ ಫಿಸಿಷಿಯನ್‌ಗಳಿಗೆ  ಸಂಬಂಧಿಸಿದ್ದು ಎಂದು ಮನೋವೈದ್ಯರು ಭಾವಿಸಿದರೆ, ಮಾನಸಿಕ ಸಮಸ್ಯೆ ಮನೋವೈದ್ಯರಿಗೆ ಸಂಬಂಧಿಸಿದ್ದು ಎಂದು ಫಿಸಿಷಿಯನ್‌ಗಳು ಸುಮ್ಮನಾಗಿರುವುದು ಪರಿಸ್ಥಿತಿ ಗಂಭೀರ ಸ್ವರೂಪಕ್ಕೆ ತಲುಪಲು ಕಾರಣ ಎಂಬುದು ಮನೋ ವೈದ್ಯರೊಬ್ಬರ ಅಭಿಪ್ರಾಯ.

ಬೆಂಗಳೂರಿನ ಮನೋವೈದ್ಯ
ಡಾ. ಧನಂಜಯ ಅವರು ಹೇಳುವುದು ಹೀಗೆ:
‘ಖಿನ್ನತೆ, ಮಾನಸಿಕ ಒತ್ತಡ ಅತಿರೇಕಕ್ಕೆ ತಲುಪಿದಾಗ ಸಂಬಂಧಗಳಲ್ಲಿ ಬಿರುಕು ಬರುತ್ತದೆ. ಇದಕ್ಕೂ ಬಿ–12 ಕೊರತೆಗೂ ಸಂಬಂಧವಿದೆ. ಎಲ್ಲ ಕೌಟುಂಬಿಕ ಸಮಸ್ಯೆಗಳಿಗೂ  ಬಿ–12 ಕಾರಣ ಎನ್ನಲು ಆಗುವುದಿಲ್ಲ. ರೋಗಿಯನ್ನು  ತಪಾಸಣೆಗೆ ಒಳಪಡಿಸಿದಾಗಷ್ಟೇ ಕಾರಣ ಪತ್ತೆ ಆಗುತ್ತದೆ.  ಬಿ–12 ರ ಸಮಸ್ಯೆಯನ್ನು ಬಗೆ ಹರಿಸುವುದು ಕಷ್ಟವಲ್ಲ. ಆದರೆ, ಈ ಸಮಸ್ಯೆ ಇದ್ದವರು ಸುಮ್ಮನೆ ಇರಬಾರದು’.

ವಿಟಮಿನ್‌ ಬಿ–12 ಕೊರತೆ  ಇದ್ದವರಿಗೆ  ವಿಟಮಿನ್‌ ಬಿ–12 ಮತ್ತು ಫಾಲಿಕ್‌ ಆ್ಯಸಿಡ್‌ ನೀಡಿದಾಗ ಅವರ ಖಿನ್ನತೆ, ಒತ್ತಡಗಳಂತಹ ಮಾನಸಿಕ ಸಮಸ್ಯೆಗಳಿಂದ ಮುಕ್ತಿ ಹೊಂದಿದ್ದಾರೆ. ವಿಟಮಿನ್‌ ಬಿ–12ರ ಕೊರತೆಯಿಂದ ಸಮಸ್ಯೆ ಅನುಭವಿಸುತ್ತಿದ್ದ ಸಾಕಷ್ಟು ಜನರನ್ನು ಗುಣಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಬಿ–12 ಕೊರತೆಯಿಂದ ಏನಾಗುತ್ತದೆ?
ಮಾನವದೇಹದಲ್ಲಿ ನ್ಯೂರೋ ಟ್ರಾನ್ಸ್‌ಮಿಟರ್‌ಗೆ ಉತ್ಪತ್ತಿಗೆ ವಿಟಮಿನ್‌ ಬಿ–12  ಒಂದು ಬಹು ಮುಖ್ಯ ಅಂಶ.  ನರಮಂಡಲದ ನರಗಳ  ಮೂಲಕ  ಮೆದುಳಿಗೆ ಎಲೆಕ್ಟ್ರಿಕ್‌ ಸಿಗ್ನಲ್‌ಗಳು ತಲುಪುತ್ತವೆ ಮತ್ತು ಅಲ್ಲಿಂದ ವಿವಿಧ ಅಂಗಗಳಿಗೆ ಪ್ರತಿಕ್ರಿಯೆ ಬರಬೇಕು. ದೇಹದಲ್ಲಿ ವೈಯರ್‌ಗಳಂತೆ ಹಾದು ಹೋಗಿರುವ ನರಗಳ ಜಾಲದಲ್ಲಿ  ಅಲ್ಲಲ್ಲಿ ಜಂಕ್ಷನ್‌ ಬಾಕ್ಸ್‌ಗಳಿರುತ್ತವೆ. ಪ್ರತಿ ನರಗಳಲ್ಲಿ ಸಂಚರಿಸುವ ಎಲೆಕ್ಟ್ರಿಕ್‌ ಸಿಗ್ನಲ್‌ಗಳು ಲಯಬದ್ಧವಾಗಿ ಕಾರ್ಯ ನಿರ್ವಹಿಸಿದರಷ್ಟೇ ಮೆದುಳು ಸಮನ್ವಯದಿಂದ ಕೆಲಸ ಮಾಡುತ್ತದೆ.

ಬಿ–12 ವಿಟಮಿನ್‌ ನ್ಯೂರೋ ಟ್ರಾನ್ಸ್‌ಮಿಟರ್‌ ಒಯ್ಯುವ ನರಗಳಿಗೆ  ರಕ್ಷಕ (ಇನ್ಸುಲೇಷನ್‌) ರೀತಿ ಕೆಲಸ ಮಾಡುತ್ತದೆ. ವಿಟಮಿನ್‌  ಕೊರತೆ  ಆದಾಗ ನರಗಳಲ್ಲಿ ಸಾಗುವ ಸಿಗ್ನಲ್‌ಗಳು ಯದ್ವಾತದ್ವಾ ಹಾದು ಹೋಗಲಾರಂಭಿಸುತ್ತವೆ. ಆಗ ಸಮನ್ವಯತೆಯೇ ಇಲ್ಲವಾಗುತ್ತದೆ.  ಇದೇ  ಖಿನ್ನತೆ, ಮಾನಸಿಕ ಒತ್ತಡದಂತಹ ಸಮಸ್ಯೆಗೆ ಕಾರಣವಾಗುತ್ತದೆ ಎನ್ನುತ್ತಾರೆ ಡಾ. ಧನಂಜಯ.

‘ಜನರಲ್ಲಿ ಈ ಕುರಿತು ಅರಿವಿನ ಕೊರತೆ ಕಡಿಮೆ ಇದೆ.  ಕೌಟುಂಬಿಕ ಸಮಸ್ಯೆಗಳಿಗೂ ತುತ್ತಾಗಿರುವ ಕೆಲವು ಪ್ರಕರಣಗಳಲ್ಲಿ ಚಿಕಿತ್ಸೆ ನೀಡಿ ಸರಿಪಡಿಸಿದ್ದೇನೆ. ವಿಟಮಿನ್‌ ಬಿ–12ರ ಕೊರತೆಯ ಲಕ್ಷಣ ಗೊತ್ತಾದ  ತಕ್ಷಣ ಚಿಕಿತ್ಸೆ ಆರಂಭಿಸಲಾಗುತ್ತದೆ.’ ಎನ್ನುತ್ತಾರೆ ಇನ್ನೊಬ್ಬ ಮನೋವೈದ್ಯ ಡಾ. ಮಹೇಶ್‌.

ಶೇ. 35ರಷ್ಟು ವಯಸ್ಕರಲ್ಲಿ ಸಮಸ್ಯೆ: ದೇಶದಲ್ಲಿ ಶೇ. 35ರಷ್ಟು ವಯಸ್ಕರು ಬಿ–12 ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ಕೊರತೆಯಿಂದ ಖಿನ್ನತೆ, ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಬೆಂಗಳೂರು ವಿಟಮಿನ್‌ ಬಿ–12ರ ಕೊರತೆಯ ರಾಜಧಾನಿ ಆಗುತ್ತಿದೆಯೇ ಎಂಬುದಕ್ಕೆ ಸದ್ಯಕ್ಕಂತೂ ಯಾವುದೇ ಅಧ್ಯಯನ ನಡೆದಿಲ್ಲ. ಕೌಟುಂಬಿಕ ಸಮಸ್ಯೆಗಳಿಗೂ ಇದಕ್ಕೂ ಸಂಬಂಧ ಇರುವ ಬಗ್ಗೆಯೂ ಅಧ್ಯಯನಗಳು ನಡೆದಿಲ್ಲ ಎನ್ನುತ್ತಾರೆ,  ನಿಮ್ಹಾನ್ಸ್‌ನ ಸೈಕಿಯಾಟ್ರಿ ವಿಭಾಗದ ಹೆಚ್ಚುವರಿ ಪ್ರೊಫೆಸರ್‌ ಡಾ. ಜಿ. ವೆಂಕಟ ಸುಬ್ರಮಣಿಯನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT