ನಳಪಾಕ

ಹೋಳಿಗೆ – ಬರ್ಫಿ ಸವಿ

ಹಬ್ಬದ ವಾತಾವರಣ ಮಾಯವಾದರೂ ಸಿಹಿಯುಣ್ಣುವ ಹಂಬಲಕ್ಕೆ ಕೊನೆ ಇಲ್ಲ. ಅಂತೆಯೇ ಸಿಹಿ ಸಿಹಿಯಾದುದು ಏನಾದರೂ ಸವಿಯಬೇಕು ಎಂದು ಮನಸ್ಸಾದಾಗ ದಿಢೀರನೇ ಮಾಡಿ, ಬಾಯಿ ಸಿಹಿ ಮಾಡಬಹುದಾದ ಕೆಲವು ಖಾದ್ಯಗಳನ್ನು ಪರಿಚಯಿಸಿದ್ದಾರೆ ಸುಮನಾ ಜಿ. ಪ್ರಸಾದ್‌.

ಅಕ್ಕಿ ಬರ್ಫಿ

ಅಕ್ಕಿ ಬರ್ಫಿ
ಬೇಕಾಗುವ ಸಾಮಗ್ರಿಗಳು: ಅಕ್ಕಿ 150 ಗ್ರಾಂ, ಕಾಯಿ ಹಾಲು ಒಂದು ಕಪ್‌, ಏಲಕ್ಕಿ 3–4, ಬೆಲ್ಲ ಪುಡಿ ಒಂದು ಕಪ್‌, ಗೋಡಂಬಿ ಸ್ವಲ್ಪ, ತುಪ್ಪ ನಾಲ್ಕು ಚಮಚ.

ಮಾಡುವ ವಿಧಾನ: ಅಕ್ಕಿಯನ್ನು ಒಂದು ಗಂಟೆ ಕಾಲ ನೆನೆಸಿ. ಇದನ್ನು ಕಾಯಿಹಾಲು ಜೊತೆಗೆ ಮಿಕ್ಸಿ ಮಾಡಿ. ಈಗ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಬೆಲ್ಲ, ಏಲಕ್ಕಿ ಪುಡಿ ಹಾಕಿ ಮಿಕ್ಸ್‌ ಮಾಡಿ. ಒಲೆ ಮೇಲೆ ಒಂದು ಪ್ಯಾನ್‌ ಇಟ್ಟು ತುಪ್ಪ ಹಾಕಿ ಈ ಹಿಟ್ಟನ್ನು ಹಾಕಿ ಬೇಯಿಸಿ. ಗಟ್ಟಿಯಾಗುತ್ತಾ ಬರುವಾಗ ತುಪ್ಪದಲ್ಲಿ ಹುರಿದ ಗೋಡಂಬಿ ಹಾಕಿ. ತುಪ್ಪ ಸವರಿದ ತಟ್ಟೆಗೆ ಹಾಕಿ. ಆರಿದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ.

ಆ್ಯರೊರೂಟ್‌ ಬರ್ಫಿ
ಬೇಕಾಗುವ ಸಾಮಗ್ರಿಗಳು:
ಆ್ಯರೊರೂಟ್‌ ಪೌಡರ್‌ ಒಂದು ಕಪ್‌, ಕಲ್ಲುಸಕ್ಕರೆ ಪುಡಿ ಒಂದು ಕಪ್‌, ಹಾಲು ಒಂದು ಕಪ್‌, ನೀರು ಅರ್ಧ ಕಪ್‌, ತುಪ್ಪ ಒಂದು ಚಮಚ, ಏಲಕ್ಕಿ ಪುಡಿ ಚಿಟಿಕೆ, ಕಸ್ತೂರಿ ಅರಿಶಿಣ ಚಿಟಿಕೆ.

ಮಾಡುವ ವಿಧಾನ: ಆ್ಯರೊರೂಟ್‌ ಪುಡಿಯನ್ನು ಗಂಟಿಲ್ಲದಂತೆ ಜರಡಿಯಾಡಿಸಿ. ಅರ್ಧ ಕಪ್‌ ನೀರನ್ನು ಕುದಿಯಲು ಇಟ್ಟು ಜರಡಿಯಾಡಿದ ಆ್ಯರೊರೂಟ್‌ ಪುಡಿಯನ್ನು ಅದಕ್ಕೆ ಹಾಕಿ ಸಣ್ಣ ಉರಿಯಲ್ಲಿ ತಿರುಗಿಸುತ್ತಾ ಇರಿ. ಅರ್ಧ ಬೆಂದ ಬಳಿಕ ಹಾಲು ಹಾಕಿ ತಿರುಗಿಸಿ. ಆಮೇಲೆ ಕಲ್ಲುಸಕ್ಕರೆ ಪುಡಿ ಹಾಕಿ. ಕಸ್ತೂರಿ ಅರಿಶಿಣ ಪುಡಿ ಹಾಕಿ ಚೆನ್ನಾಗಿ ತಿರುಗಿಸಿ. ಕೊನೆಗೆ ಏಲಕ್ಕಿ ಪುಡಿ ಹಾಕಿ. ಬರ್ಫಿ ತಳ ಬಿಟ್ಟುಕೊಂಡು ಬರುವಾಗ ಒಂದು ಚಮಚ ತುಪ್ಪ ಹಾಕಿ. ಒಂದು ತಾಟಿಗೆ ತುಪ್ಪ ಸವರಿ ಬೆಂದ ಬರ್ಫಿಯನ್ನು ಹಾಕಿ. ಬೇಕಾದ ಆಕಾರಕ್ಕೆ ಕತ್ತರಿಸಿ. ಸಂಜೆಯ ಕಾಫಿಗೆ ಸೂಕ್ತವಾದ ತಿಂಡಿ ಇದು.

ರವೆ ಹೋಳಿಗೆ
ಬೇಕಾಗುವ ಸಾಮಗ್ರಿಗಳು:
ಬಾಂಬೆ ರವೆ ಎರಡು ಕಪ್‌, ಸಕ್ಕರೆ ಎರಡು ಕಪ್‌, ಮೈದಾ ಒಂದೂವರೆ ಕಪ್‌, ಎಣ್ಣೆ ಎರಡು ಚಮಚ, ಬೇಕಿದ್ದರೆ ಕೇಸರಿ ಎರಡು ಎಸಳು ಸೇರಿಸಿಕೊಳ್ಳಿ.

ಮಾಡುವ ವಿಧಾನ: ಬಾಂಬೆ ರವೆಗೆ ಸ್ವಲ್ಪ ತುಪ್ಪ ಸೇರಿಸಿ ಘಂ ಎನ್ನುವಂತೆ ಹದವಾದ ಉರಿಯಲ್ಲಿ ಹುರಿಯಿರಿ. ಸಕ್ಕರೆಯನ್ನು ಎಳೆಪಾಕ ಮಾಡಿಟ್ಟುಕೊಳ್ಳಿ. ಇದಕ್ಕೆ ರವೆಯನ್ನು ಸೇರಿಸಿ ಎರಡು ಚಮಚ ಮೈದಾ ಹಿಟ್ಟನ್ನೂ ಸೇರಿಸಿ ಚೆನ್ನಾಗಿ ಕಲಸಿ ಹೂರಣ ಮಾಡಿಟ್ಟುಕೊಳ್ಳಿ. ಮೈದಾವನ್ನು ಎಣ್ಣೆ ಮತ್ತು ನೀರು ಹಾಕಿ ಕಲಸಿ ಕಣಕ ತಯಾರಿಸಿಡಿ. ಈಗ ಹೂರಣಕ್ಕೆ ಕೇಸರಿ ಸೇರಿಸಿ ಉಂಡೆ ಮಾಡಿ. ಮೈದಾ ಉಂಡೆ ಒಳಗೆ ಹೂರಣ ಇಟ್ಟು ತೆಳ್ಳಗೆ ಲಟ್ಟಿಸಿ ಸಣ್ಣ ಉರಿಯಲ್ಲಿ ತವಾದ ಮೇಲೆ ಬೇಯಿಸಿ ತೆಗೆಯಿರಿ.

ಕೊಬ್ಬರಿ ಹೋಳಿಗೆ
ಬೇಕಾಗುವ ಸಾಮಗ್ರಿಗಳು:
ಕೊಬ್ಬರಿ ತುರಿ ಎರಡು ಕಪ್‌, ಬೆಲ್ಲ ಎರಡು ಕಪ್‌, ಕಡಲೆಹಿಟ್ಟು ನಾಲ್ಕು ಚಮಚ, ಬಾಂಬೆ ರವೆ ಅರ್ಧ ಕಪ್‌, ಮೈದಾ ಒಂದು ಕಪ್‌, ಎಣ್ಣೆ ಅಥವಾ ತುಪ್ಪ ಎರಡು ಚಮಚ. ಏಲಕ್ಕಿ ಪರಿಮಳಕ್ಕೆ.

ಮಾಡುವ ವಿಧಾನ: ಕೊಬ್ಬರಿ ತುರಿಯನ್ನು ಬಾಣಲೆಯಲ್ಲಿ ಬೆಚ್ಚಗೆ ಮಾಡಿಕೊಳ್ಳಿ. ಇದಕ್ಕೆ ಬಾಂಬೆ ರವೆ ಹಾಕಿ ಜೊತೆಗೆ ಸ್ವಲ್ಪ ತುಪ್ಪ ಹಾಕಿ, ಕಡಲೆಹಿಟ್ಟು ಹಾಕಿ ಕಲಸಿ, ಬೆಲ್ಲವನ್ನು ಎಳೆ ಪಾಕ ಮಾಡಿ ಈ ಮಿಶ್ರಣಕ್ಕೆ ಸೇರಿಸಿ. ಸಣ್ಣ ಸಣ್ಣ ಹೂರಣದ ಉಂಡೆ ಮಾಡಿ ಇಟ್ಟುಕೊಳ್ಳಿ. ಇತ್ತ ಮೈದಾವನ್ನು ನೀರಿನಲ್ಲಿ ಹದವಾಗಿ ಕಲಸಿ ಕಣಕ ತಯಾರಿಸಿ. ಇದನ್ನೂ ಸಣ್ಣ ಉಂಡೆಗಳಾಗಿ ಮಾಡಿಟ್ಟುಕೊಳ್ಳಿ. ಈಗ ಮೈದಾ ಉಂಡೆ ಒಳಗೆ ಹೂರಣದ ಉಂಡೆ ಇಟ್ಟು ಕೈಯಲ್ಲಿ ತಟ್ಟಿ. ಈ ಹೋಳಿಗೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.

ಜೋಳದ ಹಿಟ್ಟಿನ ಬರ್ಫಿ
ಬೇಕಾಗುವ ಸಾಮಗ್ರಿಗಳು:
ಜೋಳದ ಹಿಟ್ಟು ಒಂದು ಕಪ್‌, ಬೆಲ್ಲದ ಪುಡಿ ಒಂದು ಕಪ್‌, ಹಾಲು ಒಂದು ಕಪ್‌, ಏಲಕ್ಕಿ ಪುಡಿ ಚಿಟಿಕೆ, ಕೇಸರಿ ಎರಡು ಎಸಳು, ತುಪ್ಪ ಒಂದು ಚಮಚ.

ಮಾಡುವ ವಿಧಾನ: ಜೋಳದ ಹಿಟ್ಟನ್ನು ಘಂ ಎನ್ನುವಂತೆ ಹುರಿಯಿರಿ. ಇದಕ್ಕೆ ಬೆಲ್ಲದ ಪುಡಿ ಹಾಕಿ ಮಿಕ್ಸ್‌ ಮಾಡಿ ಹಾಲು ಹಾಕಿ ಬೇಯಿಸಿ. ತಳ ಹಿಡಿಯದಂತೆ ತುಪ್ಪ ಹಾಕಿ ಮಿಕ್ಸ್‌ ಮಾಡಿ. ಪರಿಮಳಕ್ಕೆ ಏಲಕ್ಕಿ ಪುಡಿ, ಕೇಸರಿ ದಳ ಹಾಕಿ. ತುಪ್ಪ ಸವರಿದ ತಟ್ಟೆಗೆ ಹಾಕಿ ಬೇಕಾದ ಆಕಾರಕ್ಕೆ ಕತ್ತರಿಸಿ. ಇದು ಕೂಡ ಮಕ್ಕಳಿಗೆ ಪರಿಪೂರ್ಣ ಆಹಾರ.

Comments
ಈ ವಿಭಾಗದಿಂದ ಇನ್ನಷ್ಟು
ಸಿಂಪಲ್ಲಾಗಿ ರವೆ ಇಡ್ಲಿ ಮಾಡಿ ನೋಡಿ!

ಪ್ರಜಾವಾಣಿ ರೆಸಿಪಿ
ಸಿಂಪಲ್ಲಾಗಿ ರವೆ ಇಡ್ಲಿ ಮಾಡಿ ನೋಡಿ!

19 Jul, 2017
ಬಿಸಿ ಬಿಸಿ ಈರುಳ್ಳಿ ದೋಸೆ !

ಪ್ರಜಾವಾಣಿ ರೆಸಿಪಿ
ಬಿಸಿ ಬಿಸಿ ಈರುಳ್ಳಿ ದೋಸೆ !

14 Jul, 2017
ರಾಗಿ ಮುದ್ದೆಗೆ ಬೇಕು ಎಲೆಕೋಸಿನ ಬಸ್ಸಾರು!

ಪ್ರಜಾವಾಣಿ ರೆಸಿಪಿ
ರಾಗಿ ಮುದ್ದೆಗೆ ಬೇಕು ಎಲೆಕೋಸಿನ ಬಸ್ಸಾರು!

12 Jul, 2017
ಬಾಯಲ್ಲಿ ಕರಗುವ ತರಕಾರಿ ಕಲ್ಮಿ ಕಬಾಬ್‌

ಪ್ರಜಾವಾಣಿ ರೆಸಿಪಿ
ಬಾಯಲ್ಲಿ ಕರಗುವ ತರಕಾರಿ ಕಲ್ಮಿ ಕಬಾಬ್‌

7 Jul, 2017
ಮುದ್ದೆಗೂ ಸೈ, ಅನ್ನಕ್ಕೂ ಸೈ ಮಜ್ಜಿಗೆ ಹುಳಿ!

ಪ್ರಜಾವಾಣಿ ರೆಸಿಪಿ
ಮುದ್ದೆಗೂ ಸೈ, ಅನ್ನಕ್ಕೂ ಸೈ ಮಜ್ಜಿಗೆ ಹುಳಿ!

4 Jul, 2017