ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡು-ಹೆಣ್ಣಿನ ಸಂಬಂಧದ ಸುತ್ತಮುತ್ತ

Last Updated 16 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಹೆಣ್ಣಿನ–ಗಂಡು ಸಂಬಂಧ ಸುಂದರವೂ ಹೌದು; ಸಂಕೀರ್ಣವೂ ಸಹ.  ಪ್ರೀತಿ, ಪ್ರೇಮ, ಸರಸ, ವಿರಸ, ಕಾಮ, ವಾತ್ಸಲ್ಯ, ಕಾರುಣ್ಯ, ದ್ವೇಷ, ಅಸೂಯೆ, ಉದಾಸ... ಅಬ್ಬಾ! ಎಷ್ಟು ಇದರ ವೈಲಕ್ಷಣ್ಯಗಳು!!

ಪ್ರಕೃತಿ ಸಹಜ.  ಅದರ ಉತ್ಪನ್ನ ಪ್ರಕ್ರಿಯೆಯಾದ ಗಂಡು-ಹೆಣ್ಣಿನ ಸಂಬಂಧ ಕೂಡ ಸಹಜ ಅಲ್ಲವೇ? ಇದರಲ್ಲಿ ಮಳೆಗಾಲದ ಭೋರ್ಗರೆತ, ಸುಡುವ ಬಿಸಿಲಿನ ಬರಡು, ಚಳಿಗಾಲದ ಇಬ್ಬನಿಯ ಇನಿಸ್ಪರ್ಶವೂ ಇರುತ್ತವೆ.  ಕುಸುಮಗಳು ಅರಳುತ್ತವೆ, ಮೂಲೆ ಸೇರುತ್ತವೆ ಕೂಡ. ಅಮಾವಾಸ್ಯೆ–ಹುಣ್ಣಿಮೆಗಳು ಆವರಿಸಿಕೊಳ್ಳುತ್ತವೆ.  ಉದಯ, ಅಸ್ತಮಾನದ ಸೊಬಗು, ಬೆರಗು, ಕೊರಗು, ವಿಷಾದ ಎಲ್ಲವೂ ಇರುತ್ತವೆ.

ಸಮಾಜ ಹಾಕಿದರೂ ಬೇಲಿ, ಕಟ್ಟಿದರೂ ಕಂದರ, ಗೋಡೆಗಳು, ಈ ಸಂಬಂಧ ಒಂದರ್ಥದಲ್ಲಿ ಸೀಮಾತೀತ.  ಯಾವುದು ಪವಿತ್ರ? ಅಪವಿತ್ರ? ಉತ್ಕೃಷ್ಟ? ನಿಕೃಷ್ಟ? ವ್ಯಾಖ್ಯೆಗಳ ಬಂಧನಕ್ಕೆ, ಧೃತರಾಷ್ಟ್ರ ಆಲಿಂಗನಕ್ಕೆ ಪಕ್ಕಾಗುವುದೇ ಈ ಸಂಬಂಧ? ಹಾರ್ಮೋನುಗಳ ಸ್ರವಿಸುವಿಕೆಗಳಿಂದ ಉಂಟಾಗುವ ಗಂಡು_ಹೆಣ್ಣಿನ ನಡುವಿನ ಆಕರ್ಷಣೆಯನ್ನು ವಿಜ್ಞಾನ ತಿಳಿಸುತ್ತದೆ. 

ಸಿಗ್ಮಂಡ್ ಫ್ರಾಯ್ಡ್, ಕಾರ್ಲ್‌ ಯೂಂಗ್, ಎರಿಕ್ ಫ್ರಾಮ್ ಮುಂತಾದ ಮನಃಶಾಸ್ತ್ರಜ್ಞರು, ನಮ್ಮವರೇ ಆದ ಶಿವರಾಮ ಕಾರಂತರು ಮತ್ತು ಅನೇಕರು ಇದರ ಬಗೆಗೆ ತಮ್ಮ ಕೃತಿಗಳಲ್ಲಿ ಬೆಳಕನ್ನು ಚೆಲ್ಲಿದ್ದಾರೆ.  ಅಸಮಾನ ವ್ಯವಸ್ಥೆಯಲ್ಲಿನ ಈ ಸಂಬಂಧ ಕುರಿತು ಕಾರ್ಲ್‌ ಮಾರ್ಕ್ಸ್‌ ಮತ್ತಿತರರು ವ್ಯಾಖ್ಯಾನಿಸಿದ್ದಾರೆ. ಇರಲಿ..

ಆದರೆ ನಮ್ಮ ಪಿತೃಪ್ರಧಾನಸಮಾಜದಲ್ಲಿ ಗಂಡು-ಹೆಣ್ಣಿನ ಸಂಬಂಧ ಇಂದಿಗೂ ಹೆಚ್ಚಾಗಿ ಗಂಡಿನ ಪರವಾಗಿಯೇ ಇದೆ ಎಂದರೆ ಅತಿಶಯೋಕ್ತಿಯಾಗುವುದಿಲ್ಲ.  ಶಿಕ್ಷಿತ ಕುಟುಂಬಗಳಲ್ಲೂ ಬಾಲ್ಯದಿಂದಲೇ ಹೆಣ್ಣಿಗೆ ತಗ್ಗಿ ಬಗ್ಗಿ ನಡೆಯಬೇಕು ಎಂಬುದನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ತಿಳಿಸಿಕೊಡಲಾಗುತ್ತದೆ. ಆದರೆ ಗಂಡಿಗೆ ಸ್ವಾತಂತ್ರ್ಯದ ಪರಿಧಿ ಹೆಚ್ಚಿರುತ್ತದೆ. 

ಹೆಣ್ಣಿಗೆ ಅನೇಕ ತೆರನಾದ ಕಟ್ಟುಪಾಡುಗಳನ್ನು ಹಾಕಲಾಗುತ್ತದೆ. ಇದರಲ್ಲಿ ತಾಯಿಯ ಪಾತ್ರವೂ ಇರುತ್ತದೆ. ಏಕೆ ಹೀಗಾಗುತ್ತದೆಯೆಂದರೇ,  ಆಕೆ ಕೂಡ ಪಿತೃಪ್ರಧಾನತೆಯ ಭಾಗವಾಗಿಯೇ ತನ್ನ ಜೀವನವನ್ನು ರೂಪಿಸುಕೊಂಡಿರುತ್ತಾಳೆ; ನಡೆಸುತ್ತಿರುತ್ತಾಳೆ.

ನಮ್ಮ ಸಮಾಜದಲ್ಲಿ ಇಂದಿಗೂ ಹೆಣ್ಣಿನ ಸ್ಥಾನಮಾನವನ್ನು ಗಂಡಿನ ಅಧಿಕಾರದ ನೆಲೆಯಿಂದಲೇ ಗುರುತಿಸಲಾಗುತ್ತದೆ.  ಚಿಕ್ಕಂದಿನಿಂದಲೇ ಗಂಡಿನ ಬೆಳವಣಿಗೆ ಅಧಿಕಾರದ ಆಯಾಮಕ್ಕೆ ಆತುಕೊಂಡಿರುತ್ತದೆ.  ಗಂಡಿಗೆ ಆಯ್ಕೆಯ ಸ್ವಾತಂತ್ರ್ಯವೂ ಹೆಚ್ಚಿನ ಮಟ್ಟದಲ್ಲಿರುತ್ತದೆ. ನಾಲ್ಕು ಗೋಡೆಗಳಿಂದ ಆಚೆ ಬಂದ ಹಲವು ಮಹಿಳೆಯರು ಸಾರ್ವಜನಿಕ ಜೀವನದಲ್ಲಿ ಗಂಡಸರ ನೆರಳಿನಲ್ಲೇ ಮುಂದುವರೆದಾಗ ಮಾತ್ರ ಅವರಿಗೆ ಒಂದು ಅಸ್ಮಿತೆ ಸಿಗುತ್ತದೆ ಎಂದರೆ ತಪ್ಪಾಗುವುದಿಲ್ಲ.

ಮಹಿಳೆ ಸ್ವಲ್ಪ ಜೋರಾಗಿದ್ದರೇ, ಅವಳಿಗೆ ಗಂಡುಬೀರಿಯ ಪಟ್ಟವನ್ನು ದಯಪಾಲಿಸಲಾಗುತ್ತದೆ.  ಆದರೆ ಗಂಡು ಹಾಗಿದ್ದರೇ, ಅದು ಆತನ ಪುರುಷತ್ವದ ಸಂಕೇತವಾಗುತ್ತದೆ.  ಆಕೆ ಪುರುಷರೊಂದಿಗೆ ಸಲಿಗೆಯಿಂದ ವರ್ತಿಸಿದರೇ, ಆಕೆಯನ್ನು ಕೀಳಾಗಿ ಕಾಣಲಾಗುತ್ತದೆ.  ಅದೇ ಗಂಡಿಗೆ, ಈ ವಿಷಯಕ್ಕೆ ಸಂಬಂಧಿಸಿದಂತೆ, ಹೆಚ್ಚಿನ ವಿನಾಯಿತಿ ತೋರಿಸಲಾಗುತ್ತದೆ! ಇದು ಇಬ್ಬಂದಿತನದ ಧೋರಣೆಯಲ್ಲದೆ ಮತ್ತೇನು?

‘ಹಡಬೆ’, ’ಜಾರಿಣಿ’, ’ನಾಯಿ ಮುಟ್ಟಿದ ಮಡಕೆ’, ‘ಸೂಳೇಮಗ’, ‘ಬೋಳೀಮಗ’, ‘ರಂಡೇಮಗ’ ... ಇತ್ಯಾದಿ ಬಯ್ಗಳತ್ತ ಗಮನವನ್ನು ಹರಿಸಿದಾಗ ಅವು ಹೆಚ್ಚಾಗಿ ಹೆಣ್ಣಿನ ಸುತ್ತವೇ ಕೇಂದ್ರೀಕೃತವಾಗಿರುವುದರ ಅರಿವಾಗುವುದು.  ಗಂಡನ್ನು ನಿಂದಿಸುವ ಬಯ್ಗಳು ತೀರ ಕಡಿಮೆ! ಸಾರ್ವಜನಿಕ ಜೀವನದಲ್ಲಿ ನಾವು ಈ ಹೇಳಿಕೆಯನ್ನು ಆಗಾಗ್ಗೆ ಕೇಳುತ್ತಿರುತ್ತೇವೆ: ‘ನಾವೇನೂ ಕೈಗಳಿಗೆ ಬಳೆಗಳನ್ನು ಹಾಕಿಕೊಂಡಿಲ್ಲ.’ ರಾಜಾರೋಷವಾಗಿ ವೇದಿಕೆಯಲ್ಲಿ ಹಲವು ಕ್ಷೇತ್ರಗಳಿಗೆ ಸೇರಿದ ಪ್ರಜ್ಞಾಶೂನ್ಯ ಪುರುಷಸಿಂಹರು ಗುಡುಗುತ್ತಿರುತ್ತಾರೆ.  ಸಭೆಗಳಲ್ಲಿರುವ ಮಹಿಳೆಯರಿಗೆ ಈ ಹೇಳಿಕೆ ಅವಮಾನಕಾರಿ ಎಂಬ ಸಾಮಾನ್ಯ ಜ್ಞಾನವೂ ಅಂತಹವರಿಗೆ ಇರುವುದಿಲ್ಲ! ಇವೆಲ್ಲ ಗಂಡು-ಹೆಣ್ಣಿನ ಸಂಬಂಧದಲ್ಲಿ ಗಂಡಿನ ಮೇಲ್ಗೈಯನ್ನು ಬಿಂಬಿಸುವ ಚಿತ್ರಣಗಳು.

ಗಂಡು-ಹೆಣ್ಣಿನ ಸಂಬಂಧವನ್ನು ಸಂಕುಚಿತ ದೃಷ್ಟಿಕೋನದಿಂದ ಕಾಣುವ ಹಲವು ಪುರುಷರು, ಮಹಿಳೆಯರು ನಮ್ಮ ನಡುವೆ ಇದ್ದಾರೆ.  ಒಬ್ಬ ವಿವಾಹಿತ ಮಹಿಳೆ ಮತ್ತೊಬ್ಬ ವಿವಾಹಿತ ಪುರುಷನ ಜೊತೆ ನಿಕಟವಾಗಿದ್ದರೇ, ಅವರನ್ನು ಬಲ್ಲವರ ನಾಲಿಗೆಗಳು ಉದ್ದವಾಗುತ್ತವೆ; ಪುಕಾರುಗಳು ಹಬ್ಬುತ್ತವೆ. ಅಂತೆಕಂತೆಗಳು ಬೆಸೆದು ಕಥೆಗಳಾಗುತ್ತವೆ.  ಹೆಚ್ಚಾಗಿ ವಿವಾಹೇತರ ಸಂಬಂಧದ ಅಳತೆಗೋಲಿಂದಲೇ ಮೌಲ್ಯಮಾಪನ ಮಾಡಲಾಗುತ್ತದೆ.

ಸುಶಿಕ್ಷಿತರು(?) ಎನಿಸಿಕೊಂಡವರದ್ದೂ ಇದೇ ಬಗೆಯ ನಡವಳಿಕೆ.  ಆದರೆ ಇದಕ್ಕಿಂತಲೂ ಖೇದದ ಸಂಗತಿಯೆಂದರೇ - ಪುರೋಗಾಮಿಯೆನಿಸಿಕೊಂಡವರು, ಮಹಿಳಾ ಚಳವಳಿಗಳನ್ನೊಳಗೊಂಡು ಇತರ ಪ್ರಗತಿಗಾಮಿ ಚಳವಳಿಗಳಲ್ಲಿ ಸಕ್ರಿಯವಾಗಿರುವ ಕೆಲವರು ಇಂತಹ ಸಂಬಂಧವನ್ನು ಕೀಳು ದೃಷ್ಟಿಯಿಂದ ಕಾಣುತ್ತಾರೆ; ಹಗುರವಾಗಿ ಮಾತನಾಡುತ್ತಾರೆ!

ಇದೊಂದು ಸ್ವಾನುಭವ. ನಾನು ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ವಾಟ್ಸ್‌–ಆ್ಯಪ್‌ನ ಕೆಲವು ಗುಂಪುಗಳಲ್ಲಿ ಇದ್ದೇನೆ.  ಸಾಮಾಜಿಕ/ರಾಜಕೀಯ  ಹೋರಾಟಗಾರರು, ಶಿಕ್ಷಕ–ಶಿಕ್ಷಕಿಯರು, ಪತ್ರಕರ್ತರು, ಸಾಹಿತಿಗಳು, ವಕೀಲರು ಮತ್ತು ಇತರ ಪುರೋಗಾಮಿಗಳು ಇರುವ ಎರಡು ಗುಂಪುಗಳಲ್ಲಿರುವ ನನ್ನ ಇಬ್ಬರು ಕಿರಿಯ ಗೆಳತಿಯರು ನನ್ನನ್ನು ವೈಯಕ್ತಿಕವಾಗಿ ಸಂಪರ್ಕಿಸುವಾಗ ಏಕವಚನವನ್ನು ಬಳಸುತ್ತಾರೆ.

ಆದರೆ ಮೇಲೆ ಪ್ರಸ್ತಾಪಿಸಿರುವ ಗುಂಪುಗಳಲ್ಲಿ ನನ್ನನ್ನು ಸಂಬೋಧಿಸುವಾಗ ಸರ್ ಮತ್ತು ಬಹುವಚನದ ಪ್ರಯೋಗವಾಗುತ್ತದೆ! ಹೀಗೇಕೆಂದು ವಿಚಾರಿಸಿದಾಗ, ಅವರು ಹೇಳಿದ್ದು: ‘ಅಲ್ಲಿ ನಮ್ಮ ನಿಡುಗಾಲದ ಗೆಳೆಯ, ಗೆಳತಿಯರಿದ್ದಾರೆ.  ಅವರು ಅಪಾರ್ಥ ಮಾಡಿಕೊಳ್ಳಬಹುದು!’ ಈ ರೀತಿಯ ಆತಂಕ, ಭಯ ನಮ್ಮ ಸಮಾಜದಲ್ಲಿರುವ ರೂಢಿಗತ ದೃಷ್ಟಿಕೋನ/ನಡವಳಿಕೆಯ ಬಗೆಗೆ ಕ್ಷಕಿರಣವನ್ನು ಬೀರುತ್ತವೆ.  ಇವು ಎಂದು ಬದಲಾಗುತ್ತವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT