ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವಿಗೂ ಬೇಕು ಹೆಣ್ಣಿನ ದೇಹ–ಮನಸ್ಸು

Last Updated 16 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ನನ್ನ ದೇಹ ಹಾಗೂ ಮನಸ್ಸುಗಳು ನನ್ನವೇ ಆಗಿಲ್ಲ ಎಂಬ ಅರಿವಿನ ಆಸ್ಫೋಟವೇ ಹೆಣ್ತನದ ಅರಿವಿನ ಆವಿಷ್ಕಾರದ ಮೊದಲ ಹೆಜ್ಜೆ. ಎಲ್ಲ ಅರಿವುಗಳು ಹುಟ್ಟುವುದೇ ಬಹುಶಃ ಇಂಥ ಸಂಕಟಗಳಲ್ಲಿ. ರೂಢಿಗತ ನಂಬಿಕೆಗಳೆಂಬ ಕವಚವನ್ನು ಭೇದಿಸಿಕೊಳ್ಳದೇ ನಮ್ಮನ್ನು ನಾವು ನೋಡಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಆದ್ದರಿಂದ ‘ಹೆಣ್ಣು–ಅರಿವಿ’ನ ಶೋಧವೆಂಬುದು ಇದುವರೆಗೂ ವಿಸ್ಮೃತಿಯ ಕತ್ತಲಲ್ಲಿ ಕಳೆದಿದ್ದ ನಿಜದ ಶೋಧವೂ ಹೌದು.

ಇತ್ತೀಚೆಗೆ ಜಾಗೃತ ಮನಃಸ್ಥಿತಿಯ ಹೆಣ್ಣುಮಕ್ಕಳು ತಮ್ಮ ದೇಹ-ಮನಸ್ಸುಗಳ ಸ್ವಾಯತ್ತತೆ-ಸ್ವಾತಂತ್ರ್ಯದ ಪ್ರಶ್ನೆಗಳನ್ನು ಕೇಳುವಾಗಲೆಲ್ಲ ಅವರನ್ನು ಹಠಮಾರಿಗಳೆಂದೋ, ಸಂಸ್ಕೃತಿ ವಿರೋಧಿಗಳೆಂದೋ ಅಥವಾ ಅನೈತಿಕ ಧೋರಣೆ ಹೊಂದಿದವರೆಂದೋ ಬ್ರ್ಯಾಂಡ್ ಮಾಡಲಾಗುತ್ತದೆ. ಸ್ತ್ರೀವಾದವೆಂಬ ಮನೆಹಾಳು ಸಿದ್ಧಾಂತದಿಂದ ಪ್ರಭಾವಿತರಾದವರೆಂದು ದೂರಲಾಗುತ್ತದೆ. ವಾದಕ್ಕಾಗಿ ವಾದಗಳು ಬೆಳೆಯುತ್ತ ಸೋತವರು ಯಾರು, ಗೆದ್ದವರು ಯಾರು ಎಂಬ ಲೆಕ್ಕಾಚಾರದಲ್ಲಿ ಅರಿವು ಅರೆಬರೆಯಾಗಿಯೇ ಉಳಿದುಬಿಡುತ್ತದೆ.

ಹಾಗಾದರೆ ‘ಹೆಣ್ಣು–ಅರಿವು’ ಎಂಬುದು ಇದೆಯೇ? ಎಂದರೆ, ಖಂಡಿತ ಇದೆ. ಹೆಣ್ಣು ಎಂಬುದನ್ನು ಹೆಣ್ಣುದೇಹ ಹಾಗೂ ಪ್ರಜ್ಞೆ – ಈ ಎರಡೂ ನೆಲೆಗಳಲ್ಲಿ ಅರ್ಥೈಸುತ್ತೇವೆ. ಹೆಣ್ಣಿಗೆ ಭಿನ್ನ ದೇಹವಿರುವುದರಿಂದ ಅವಳ ಅನುಭವಗಳೂ ಭಿನ್ನವೇ. ಅನುಭವಗಳ ಮೂಲಕವೇ ಲೋಕಗ್ರಹಿಕೆಯು ಮೂಡುವುದರಿಂದ ಹೆಣ್ಣು–ಅರಿವು ಬೇರೆಯೇ ಎಂಬುದು ಒಂದು ನೆಲೆ. ಹೆಣ್ಣು ಅನುಭವ, ಹೆಣ್ಣು ಅರಿವುಗಳೇ ಬೇರೆ; ಹೆಣ್ತನದ ಕುರಿತ ಮಾನಸಿಕ ಪರಿಕಲ್ಪನೆಗಳೇ ಬೇರೆ. ಜೈವಿಕವಾಗಿ ಹೆಣ್ಣಾದವಳು ಹೆಣ್ಣುತನದ ಕುರಿತಾದ ಸಾಮಾಜಿಕ ನಿರೀಕ್ಷೆಗಳನ್ನು ಧಾರಣೆ ಮಾಡಬೇಕಾದ ಒತ್ತಡವಿದೆ.

ಇಂಥ ಒತ್ತಡದಲ್ಲಿ ರೂಪಿಸಲ್ಪಡುವ ಹೆಣ್ಣುಜೀವಕ್ಕೆ ನಿಜಕ್ಕೂ ತಾನು ಏನಾಗಿದ್ದೇನೆ ತನಗೇನು ಬೇಕಾಗಿದೆ? ಎಂಬುದೇ ತಿಳಿಯದ ವಿಸ್ಮೃತಿ, ಕಣ್ಕಟ್ಟು ಆವರಿಸಿದೆ. ಹೌದು, ನಾವು ಹೆಣ್ಣೋ, ಗಂಡೋ, ತೃತೀಯ ಲಿಂಗಿಯೋ ಆಗಿರುವುದು ಪ್ರಕೃತಿಯ ಆಯ್ಕೆಯೇ ವಿನಾ ನಮ್ಮದಲ್ಲ. ಆದರೆ ಹೆಣ್ಣಾಗುವುದು ಸಮಾಜೋ ಸಾಂಸ್ಕೃತಿಕ ಪ್ರಕ್ರಿಯೆ.

ಹೆಣ್ಣುದೇಹದ ಸುತ್ತ ನಡೆದ ಅಧಿಕಾರ ರಾಜಕಾರಣದ ಚಾರಿತ್ರಿಕತೆ ದೀರ್ಘವಾದುದು. ನಮ್ಮ ಪರಂಪರೆಯನ್ನೇ ಗಮನಿಸಿದರೆ, ಹೆಣ್ತನದ ಬಹುದೊಡ್ಡ ಆದರ್ಶ ಮಾದರಿಯೆಂದರೆ ಪಾತಿವ್ರತ್ಯ. ಹೆಣ್ಣಿಗೆ ಅಲೌಕಿಕ ಶಕ್ತಿ ಆರೋಪಿತವಾಗಿರುವುದು ಕೂಡ ಅವಳು ಪತಿವ್ರತೆಯಾದಾಗಲೇ! ಈ ಪಾವಿತ್ರ್ಯ-ಪಾತಿವ್ರತ್ಯಗಳ ಏಕಮುಖ ಹೇರಿಕೆ ಇಂದು ಪ್ರಶ್ನಿಸಲ್ಪಡುತ್ತಿದೆ. ಏಕೆಂದರೆ ಗಂಡಿನ ಪಾವಿತ್ರ್ಯವನ್ನು ಅಳೆಯುವ ಮಾನದಂಡಗಳು ಇನ್ನೂ ಹುಟ್ಟಿಯೇ ಇಲ್ಲ! ಇದು ಅಕಾಡೆಮಿಕ್ ಬುದ್ಧಿಜೀವಿಗಳ ಚರ್ವಿತಚರ್ವಣ ಚರ್ಚೆಯೆಂದು ಮುಖತಿರುಗಿಸುವಂತಿಲ್ಲ.

ಇಂದು ಸರ್ವವ್ಯಾಪಕವಾಗಿರುವ ಅತ್ಯಾಚಾರ ಪ್ರಕರಣಗಳು, ಕೌಟುಂಬಿಕ ಹಿಂಸೆ, ಧಾರ್ಮಿಕ ಸಂದಿಗ್ಧತೆಗಳನ್ನು ಅರಿಯಲು ಈ ಚರ್ಚೆಗಳು ಅಗತ್ಯ. ಸ್ತ್ರೀದೇಹವು ಪಾವಿತ್ರ್ಯ, ಪಾತಿವ್ರತ್ಯ ಎಂಬ ಪರಿಕಲ್ಪನೆಗಳ ಮೂಲಕ ಗಂಡಿನ ಹಕ್ಕಾಗಿ ಅವನ ಒಡೆತನಕ್ಕೆ ಒಳಗಾದಾಗಲೇ ಹೆಣ್ಣು ತನ್ನ ದೇಹ, ಆ ಮೂಲಕ ಮನಸ್ಸಿನ ಸ್ವಾಯತ್ತತೆಯನ್ನು ಕಳೆದುಕೊಳ್ಳಲಾರಂಬಿಸಿದಳು. ಪುರಾಣ, ಮಹಾಕಾವ್ಯ ಮುಂತಾದ ಸಾಂಸ್ಕೃತಿಕ ರಚನೆಗಳು ಹೆಣ್ಣನ್ನು ಸಿದ್ಧಮಾದರಿಗಳಲ್ಲಿ ಸ್ಥಿರಗೊಳಿಸಿದವು. ಆ ಮಾದರಿಗಳು ಜನಾಂಗದ ಸ್ಮೃತಿಯಾಗಿ ಖಾಯಂ ಆದವು.

ಹೆಣ್ಣು-ಗಂಡಿನ ಸಂಬಂಧ ಅತ್ಯಂತ ವೈಯಕ್ತಿಕವೂ, ಸೂಕ್ಷ್ಮವೂ ಆದುದು. ಅದು ವಿವಾಹದ ಮೂಲಕ ಕೌಟುಂಬಿಕ ಚೌಕಟ್ಟಿಗೆ ಒಳಪಟ್ಟಾಗ ದಾಂಪತ್ಯವಾಗಿ ಪ್ರೇಮ, ಸಾಂಗತ್ಯ, ಬದ್ಧತೆ, ಕರ್ತವ್ಯ ಮುಂತಾದ ಮೌಲ್ಯಗಳ ಅಡಿಯಲ್ಲಿ ವಿಕಾಸವಾಗುತ್ತ ನಡೆಯಿತು. ಅಲ್ಲಿ ಭಾವನಾತ್ಮಕ ಹಾಗೂ ನೈತಿಕ ಆಯಾಮಗಳು ಪ್ರಾಪ್ತವಾದವು. ಆದರೆ, ಕುಟುಂಬ-ವಿವಾಹವೆಂಬ ಸಂಸ್ಥೆಯನ್ನು ಕಟ್ಟುವ ಹಿಂದಿರುವ ಪಿತೃಪ್ರಧಾನ ಚಿಂತನೆಯು ಈ ಸಂಬಂಧವನ್ನು ಅಧಿಕಾರ ಸಂಬಂಧವಾಗಿ ಭಾವಿಸಲು ತೊಡಗಿದಾಗ ಯಾಜಮಾನ್ಯವು ತಲೆದೋರಿತು.

ವಂಶಪಾವಿತ್ರ್ಯದ ಪರಿಕಲ್ಪನೆಯು ಸ್ತ್ರೀದೇಹ-ಮನಸ್ಸುಗಳನ್ನು ಸೀಮಿತ ಚೌಕಟ್ಟಿನಲ್ಲಿ ಕುಬ್ಜಗೊಳಿಸಿತು. ಹೆಣ್ಣಿನ ಮೇಲೆ ಅಧಿಕಾರ ಸ್ಥಾಪಿಸುವುದು ಅನಿವಾರ್ಯವಾದಾಗ ನಿರ್ಬಂಧಗಳ ಹೇರಿಕೆ, ಹಿಂಸೆ, ಕ್ರೌರ್ಯಗಳು ಸಹಜವಾಗುತ್ತ ನಡೆದವು. ಈ ಹಿಂಸೆ ವ್ಯಕ್ತ ಹಾಗೂ ಅವ್ಯಕ್ತ ನೆಲೆಗಳಲ್ಲಿ ಬೆಳೆಯುತ್ತ ಹೋಯಿತು. ಕುಟುಂಬದ ಒಳಗಿನ ಈ ಮನೋಭಾವವು ಸಮಾಜದಲ್ಲೂ ವಿಸ್ತರಿಸುತ್ತ ವ್ಯಾಪಕವಾಯಿತು. ಧರ್ಮಶಾಸ್ತ್ರಗಳು ಅದಕ್ಕೆ ಕಾನೂನಿನ ಚೌಕಟ್ಟು ತೊಡಿಸಿ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಿದವು.

ಸ್ತ್ರೀದೇಹದ ಸ್ವಾಯತ್ತತೆಯ ಕುರಿತ ಪ್ರಶ್ನೆಗಳನ್ನು ಇತ್ತೀಚಿನ ‘ಪಿಂಕ್’ ಸಿನಿಮಾ ಸೂಕ್ಷ್ಮವಾಗಿ ಎತ್ತುತ್ತದೆ. ಹೆಣ್ಣಿಗೆ ತನ್ನ ದೇಹದ ಮೇಲಾಗುವ ಆಕ್ರಮಣವನ್ನು ಪ್ರತಿರೋಧಿಸುವ ಹಕ್ಕು ಇಲ್ಲವೆಂದು ಭಾವಿಸುವ ಸಮಾಜದ ರೂಕ್ಷಮನೋಭಾವಕ್ಕೆ ಅದು ಕನ್ನಡಿ ಹಿಡಿಯುತ್ತದೆ. ಮದುವೆಯ ಹಂಗಿಲ್ಲದೆ, ಆರ್ಥಿಕ ಅವಲಂಬನೆಯಿಲ್ಲದೆ ಬದುಕುತ್ತಿರುವ ಮೂವರು ಸ್ವಾವಲಂಬಿ ಹೆಣ್ಣುಮಕ್ಕಳನ್ನು ಸುತ್ತಲಿನ ಸಮಾಜ ಒಪ್ಪಿಕೊಳ್ಳಲಾರದು. ಇಂಥ ಮುಕ್ತಸಾಧ್ಯತೆಯೇ ಸಮಾಜಕ್ಕೆ ಅರಗಿಸಿಕೊಳ್ಳಲಾಗದ ಸಂಗತಿ.

ಇನ್ನೂ ಲಿಂಗಪೂರ್ವಗ್ರಹಗಳಲ್ಲೇ ನೆಲೆನಿಂತ ಸಾಂಪ್ರದಾಯಿಕ ಸಮಾಜದಲ್ಲಿ ಲಿಂಗಸಂವೇದನಾಶೀಲತೆಯೆಂಬುದು ಹುಟ್ಟಿಯೇ ಇಲ್ಲ ಎಂಬುದನ್ನು ‘ಪಿಂಕ್’ ಸಿನಿಮಾ ಧ್ವನಿಸುತ್ತದೆ. ಅಂಥ ಸಮಾಜಕ್ಕೆ ಈ ಹೆಣ್ಣುಮಕ್ಕಳು ಅನ್ಯರೆನಿಸುತ್ತಾರೆ. ಹೆಣ್ಣಿಗೆ ಅವಳ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ನೆರವಾಗಬೇಕಾದ ಪೊಲೀಸ್‌ವ್ಯವಸ್ಥೆ, ನ್ಯಾಯವ್ಯವಸ್ಥೆಗಳು ಕೂಡ ಲಿಂಗಸಂವೇದನಾಶೀಲ ಆಗಿಲ್ಲ ಎಂಬುದೇ ಪ್ರಸ್ತುತ ಬಿಕ್ಕಟ್ಟು.

ಹೆಣ್ಣನ್ನು ಭೋಗವಸ್ತುವಾಗಿ ಕಾಣುವ ಅನಾರೋಗ್ಯಕರ ಮನಃಸ್ಥಿತಿಯಿಂದಾಗಿ ಸಿನಿಮಾದಲ್ಲಿನ ಈ ಮೂವರು ಹೆಣ್ಣುಮಕ್ಕಳಲ್ಲೊಬ್ಬಳು ಅತ್ಯಾಚಾರಕ್ಕೆ ತುತ್ತಾಗುತ್ತಾಳೆ. ಅತ್ಯಾಚಾರದ ಮೂಲಕ ಹೆಣ್ಣಿನ ಮನೋಲೋಕವನ್ನು ಭಗ್ನಗೊಳಿಸುವ ಹುನ್ನಾರವನ್ನು ವಿಫಲಗೊಳಿಸುವಲ್ಲಿ ಈ ಚಿತ್ರದ ಗೆಲುವಿದೆ. ಇಲ್ಲಿನ ಅತ್ಯಾಚಾರಿಗಳು ತಮ್ಮ ಮನೆಯೊಳಗೆ ಕಟ್ಟುಪಾಡುಗಳನ್ನು ಒಪ್ಪಿ ಬದುಕುವ ಸ್ತ್ರೀಯರ ರಕ್ಷಕರಾಗಿಯೂ, ಕಟ್ಟುಪಾಡಿನಾಚೆ ಬದುಕುವ ಸ್ತ್ರೀಯರಿಗೆ ಬುದ್ಧಿ ಕಲಿಸುವ ಶಿಕ್ಷಕರಾಗಿಯೂ ಉದ್ಭವಿಸುತ್ತಾರೆ! ಕಟ್ಟುಪಾಡಿಗೆ ಒಳಪಡದ ಸ್ತ್ರೀಯನ್ನು ಹೇಗೆಬೇಕಾದರೂ ಬಳಸಿಕೊಳ್ಳಬಹುದು ಎಂಬ ಭಾವನೆ ಅವರಲ್ಲಿ ದಟ್ಟವಾಗಿದೆ. ಇಲ್ಲಿ ಲೈಂಗಿಕ ತೃಪ್ತಿಗಿಂತ ಪುರುಷಾಹಂಕಾರವೇ ಪ್ರಧಾನವಾಗಿ ಕಾಣುತ್ತದೆ.

ಅಧಿಕಾರಕ್ಕೆ ನಿಲುಕದ ಸ್ತ್ರೀಯರಿಗೆ ಬುದ್ಧಿಕಲಿಸುವ ಸಾಂಸ್ಕೃತಿಕ ಜವಾಬ್ದಾರಿಯನ್ನು ಅದರ ಸ್ವಯಂಘೋಷಿತ ವಕ್ತಾರರು ತೆಗೆದುಕೊಂಡುಬಿಡುತ್ತಾರೆ. ಅವಳ ದೇಹ ಅವಳದು. ಲೈಂಗಿಕತೆ ಹೇಗೆ ಅವಳಿಗೆ ಸಹಜವೋ, ಅವಳ ಒಪ್ಪಿಗೆಯಿಲ್ಲದೆ ನಡೆಯುವ ಲೈಂಗಿಕ ಆಕ್ರಮಣವನ್ನು ನಿರಾಕರಿಸುವುದೂ ಅವಳ ಸಹಜ ಹಕ್ಕು. ಅದು ಸಮಾಜದ ಯಾರಿಂದಲೇ ನಡೆಯಲಿ; ಸ್ವತಃ ಗಂಡನಿಂದಲೂ! – ಎಂದು ಸಿನಿಮಾದ ಕೊನೆಯಲ್ಲಿ ಅಮಿತಾಭ್‌ ಬಚ್ಚನ್ ಮೂಲಕ ಆಡಿಸಿರುವ ಮಾತುಗಳು ಅನುರಣಿಸುತ್ತವೆ. ಇದನ್ನು ಅವಳ ಮೇಲೆ ನಡೆಯುವ ಕೌಟುಂಬಿಕ ಹಿಂಸೆಗೂ ಅನ್ವಯಿಸಬಹುದು.

ವರ್ಷಗಳ ಹಿಂದೆ ದೀಪಿಕಾ ಪಡುಕೋಣೆ ಪ್ರಸ್ತುತ ಪಡಿಸಿದ ‘ಮೈ ಚಾಯ್ಸ್ ’ ಎಂಬ ವಿಡಿಯೊ ಯೂಟ್ಯೂಬ್‌ನಲ್ಲಿ ಹರಿದಾಡಿ ಅನೇಕರನ್ನು ಥ್ರಿಲ್ ಆಗಿಸಿತು. ರೂಢಿಗತ ಚಿಂತನಕ್ರಮಕ್ಕೆ ಹೆಣ್ಣೊಬ್ಬಳು ನನ್ನ ಆಯ್ಕೆ ಎಂದು ಹೇಳುವುದು ಹಟಮಾರಿತನವಾಗಿ ಕಾಣಿಸುತ್ತದೆ. ತಿದ್ದಿತೀಡಿ ರೂಪಿಸಲ್ಪಟ್ಟ ಅವಳು ಹೀಗೆ ತನ್ನ ಅಸೀಮ ಸಾಧ್ಯತೆಗಳನ್ನು ಅರಿಯುವುದು ದಿಗಿಲು ಹುಟ್ಟಿಸುತ್ತದೆ. ಹೆಣ್ಣಿನ ಅರಿವನ್ನು ಒಪ್ಪದೆ ಅವಳನ್ನು ಬರಿ ದೇಹವಾಗಿ ಕಾಣುವ ಮನೋಭಾವವನ್ನು ಈ ಪ್ರಸ್ತುತಿ ನಿರಾಕರಿಸುತ್ತ ನಡೆಯುತ್ತದೆ.

ಪುರುಷನ ಕಣ್ಣಿಂದ ಹುಟ್ಟಿದ ಸೌಂದರ್ಯಮೀಮಾಂಸೆ ನೀಡಿದ ದೇಹದ ಅಳತೆಯ ಮಾನದಂಡಗಳನ್ನು ನಿರಾಕರಿಸುತ್ತ ಅವಳ ಚೈತನ್ಯಕ್ಕೆ ಸೈಜ್ ಇದೆಯಾ? ಎಂದು ಪ್ರಶ್ನಿಸುತ್ತದೆ. ತಾನು ಯಾವ ರೀತಿಯ ದೈಹಿಕ ಸಂಬಂಧವನ್ನು ಹೊಂದಬೇಕು? ಮದುವೆ ಬೇಕೋ, ಬೇಡವೋ? ಮಕ್ಕಳು ಬೇಕೋ ಬೇಡವೊ? ಬೇಕಾದರೆ ಎಷ್ಟು, ಯಾವಾಗ? ಇದೆಲ್ಲ ನನ್ನ ಆಯ್ಕೆ ಎಂದಾಗ ಸಿದ್ಧಮನಃಸ್ಥಿತಿಗೆ ನಡುಕ ಆರಂಭವಾಗುತ್ತದೆ. ಇವೆಲ್ಲ ಸಾಮಾಜಿಕ ಹಿತಕ್ಕೆ ವಿರುದ್ಧವಾದ ಮಾತುಗಳಾಗಿ, ಸಂಸ್ಕೃತಿಭಂಜಕ ಚಿಂತನೆಗಳಾಗಿ ಕಾಣತೊಡಗುತ್ತವೆ.

ಅದೇ ಈ ವಿಡಿಯೊವನ್ನು ಸಮಗ್ರವಾಗಿ ನೋಡಿದಾಗ ಪ್ರೇಮ, ಕಾಮ, ಹಕ್ಕು, ಕರ್ತವ್ಯಗಳ ಬಂಧನದಾಚೆ ಇದು ಹೆಣ್ತನದ ಅವಿರತ ಆವಿಷ್ಕಾರವಾಗಿ ಕಾಣುತ್ತದೆ. ನಾನು ವಿಶ್ವದ ಭಾಗ. ನಾನು ವಿಶ್ವದ ವಿಸ್ತರಣೆ. ನಾನು ಎಲ್ಲೆಡೆಯಿಂದಲೂ ಅನಂತ. ನಾನು ಅನನ್ಯ. ಎಂಬ ಮಾತುಗಳು ಹೊಸ ಹೊಳಹನ್ನು ಹೊಮ್ಮಿಸುತ್ತವೆ. ಎಲ್ಲ ಆವರಣಗಳನ್ನು ಕಿತ್ತೊಗೆದಾಗ ಕಾಣಬಲ್ಲ ಹೆಣ್ಣಿನ ನಿಜರೂಪದ ಹಂಬಲವಾಗಿ, ಅಂಥ ನಿರ್ವಾಣಸ್ಥಿತಿಯನ್ನು ಕಾಣಲು ಬೇಕಾದ ನಿರ್ಭಯತೆಯಾಗಿ ಅದು ಕಾಣಿಸತೊಡಗುತ್ತದೆ. ಇಂಥ ಅರಿವು ಸ್ತ್ರೀದೇಹ, ಹೆಣ್ಣುತನದ ಕುರಿತ ಕೀಳರಿಮೆಯನ್ನು ಓಡಿಸುವಂಥದು; ಅಬಲತ್ವದ ಪರಿಕಲ್ಪನೆಯನ್ನು ನಿರಾಕರಿಸುವಂಥದು.

ಹೆಣ್ಣಿಗೆ ಅವಳ ದೇಹದ ಬಗ್ಗೆ ಕೀಳರಿಮೆ ಹುಟ್ಟಿಸುವ ಮೂಲಕ ಕಟ್ಟುಪಾಡಿಗೊಳಪಡಿಸುವ ದೇಹರಾಜಕಾರಣ ಧರ್ಮದ ಮೂಲಕವೂ ವ್ಯವಸ್ಥಿತವಾಗಿ ನಡೆಯುತ್ತ ಬಂದಿದೆ. ಇದಕ್ಕೆ ಇತ್ತೀಚೆಗಿನ ಕೆಲವು ಘಟನೆಗಳನ್ನು ಉದಾಹರಿಸಬಹುದು. ಶಬರಿಮಲೈ ಹಾಗೂ ಶನಿಸಿಂಗ್ಣಾಪುರಗಳಲ್ಲಿ ಸ್ತ್ರೀಯರು ದೇವಾಲಯ ಪ್ರವೇಶಿಸುವಂತಿಲ್ಲ. ಮುಟ್ಟಬಾರದು ಎಂದು ವಿಧಿಸಿದ್ದನ್ನು ಮುಟ್ಟಿಯೇ ನೋಡಬೇಕೆಂಬುದು ಇನ್ಸ್ಟಿಂಕ್ಟಿವ್ ಆದ ಒಳ ಒತ್ತಡ. ಅಥವಾ ತಂತ್ರಕ್ಕೆ ಪ್ರತಿ ತಂತ್ರ ಒಡ್ಡುವ ಬಂಡಾಯ. ಈ ಸಂದರ್ಭದಲ್ಲಿ ಕವಯಿತ್ರಿ ಲಲಿತಾ ಸಿದ್ಧಬಸವಯ್ಯನವರ ಕವಿತೆಯ ಸಾಲು ನೆನಪಿಗೆ ಬರುತ್ತವೆ:

ಸದ್ಯ ಮುಗಿಯಿತು
ಶಬರಿಮಲೆ ಹುಡುಗ ದೇವರಿಗೆ ದರ್ಶನ ಕೊಡಬಹುದು
ಅದು ಪಾಪ, ಬೆಟ್ಟದ ಮೇಲೂ ಹದಿನೆಂಟು ಮೆಟ್ಟಿಲು ದೂರ ಕೂತಿದೆ
ಹೆಂಗಸರಿಗೆ ಹೆದರಬೇಡವೊ ಮರಿ
ಅಂಡ ಪಿಂಡ ಬ್ರಹ್ಮಾಂಡವೆಂದರೆ ಇಷ್ಟೆ ಹೆಂಗಸರ ಹೊಟ್ಟೆ
ಹುಲಿತಾಯಿ ಆಗಿನ್ನು ಈಯ್ದಿತ್ತು ಹತ್ತಿ ಕೂತು ನೀನು ವೀರನಾಗಿಬಿಟ್ಟೆ


ಕವಿತೆ ತನ್ನೊಳಗಿರುವ ಅಗಾಧ ಪ್ರಕೃತಿಯನ್ನು ಕಟ್ಟುಹಾಕಿ ನಿರ್ಬಂಧಿಸುವ ಕ್ರಮವನ್ನು ಲೇವಡಿ ಮಾಡುತ್ತದೆ. ಇಂಥ ಅಹಂ ತುಂಬಿದ ಅರಿವನ್ನು ಕಂಡು ಪಾಪ! – ಎನ್ನುವ ಮೂಲಕ ಎತ್ತರಕ್ಕೇರುತ್ತದೆ. ಇಲ್ಲಿ ಪುರುಷನಿಗೆ ಸಮಾನನೆಲೆಯನ್ನು ಸ್ಥಾಪಿಸಿಕೊಳ್ಳುವ ತುಡಿತಕ್ಕಿಂತ ಅದಕ್ಕಿಂತಲೂ ಘನವಾದ ನೆಲೆಯೊಂದರಲ್ಲಿ ತನ್ನನ್ನು ಪ್ರತಿಷ್ಠಾಪಿಸಿಕೊಂಡ ಅರಿವಿನ ವಿಸ್ತಾರವಿದೆ. ಇದು ಒಣ ಹಮ್ಮೊ, ಹೆಮ್ಮೆಯೊ ಆಗದೆ ಹೆಣ್ಣು–ಅರಿವಿನ ಮೂಲಕ ದಕ್ಕಿದ ಹೊಸನೋಟವಾಗಿ ಕಾಣುತ್ತದೆ. ಹೆಣ್ತನದ ಘನತೆಯನ್ನು ಕಾಣುವ, ಕಟ್ಟುವ ಈ ನೆಲೆಯಿಂದ ಶನಿಸಿಂಗ್ಣಾಪುರದ ಘಟನೆಯನ್ನು ನೋಡಬಹುದು. ಆಗ ಶನಿಯನ್ನು ಮುಟ್ಟುವುದಕ್ಕಿಂತ ತಿರಸ್ಕರಿಸುವುದೇ ಒಳಿತೆನಿಸುತ್ತದೆ!

ಮುಸ್ಲಿಂ ಮಹಿಳೆಯರ ಬುರ್ಖಾ ವಿವಾದ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಅದು ಅವರ ಆಯ್ಕೆ ಎಂದು ಹೇಳುತ್ತಿರುವುದು ವೈಯಕ್ತಿಕವನ್ನು ರಾಜಕೀಯಗೊಳಿಸುವ ಕ್ರಮ. ತಾವು ಬುರ್ಖಾದಿಂದ ಬಿಡುಗಡೆಯಾಗಬೇಕೆಂಬ ಮುಸ್ಲಿಂ ಮಹಿಳೆಯರ ಒಳಒತ್ತಡವನ್ನು ಮುಚ್ಚಿಹಾಕುತ್ತಿರುವುದು ಧಾರ್ಮಿಕ ಒತ್ತಡ. ಧಾರ್ಮಿಕ ಅಸ್ಮಿತೆಯನ್ನು ಸ್ಥಾಪಿಸಲೇಬೇಕಾದ ಕಾಲದ ಒತ್ತಡ. ಧರ್ಮವನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದರಿಂದ ಈ ಸಿಕ್ಕುಗಳು ಇನ್ನಷ್ಟು ಜಟಿಲವಾಗುತ್ತವೆ.

ಧಾರ್ಮಿಕ ಸ್ವಾತಂತ್ರ್ಯವನ್ನು ಮಾನ್ಯಮಾಡುವ ಭರಾಟೆಯಲ್ಲಿ ಬುರ್ಖಾ ಪ್ರಬಲವಾಗುತ್ತಿದೆ. ಬಹುತ್ವದ ಸಂಸ್ಕೃತಿಯ ಕುರಿತು ಮಾತನಾಡುತ್ತಿರುವ ಸಂದರ್ಭವು ಬುರ್ಖಾವನ್ನು ಬಹುಸಂಸ್ಕೃತಿಯ ಭಾಗವಾಗಿ  ನೋಡುತ್ತ ಬೆಂಬಲಿಸಬೇಕೆ? ಅಥವಾ ಹೆಣ್ಣಿನ ವೈಯಕ್ತಿಕ ಬಿಡುಗಡೆಗಾಗಿ ಅದನ್ನು ನಿರಾಕರಿಸಬೇಕೆ? ಎಂಬ ಗೊಂದಲ ಮೂಡಿಸಿದೆ. ಇದು ಬಾಹ್ಯ ಒತ್ತಡಗಳು ಮೂಡಿಸಿದ ಬಿಕ್ಕಟ್ಟು. ತಮಗೇನು ಬೇಕಾಗಿದೆ ಎಂಬುದನ್ನು ಬುರ್ಖಾದೊಳಗಿನ ಧ್ವನಿಗಳೇ ಹೇಳಬೇಕಾಗಿದೆ.

ಧರ್ಮ, ಜಾತಿ ಅಸ್ಮಿತೆಗಳು ಪ್ರಬಲವಾಗುತ್ತಿರುವ ಈ ಸಂದರ್ಭದಲ್ಲಿ ಅವೇ ಕಾರಣಗಳು ‘ಹೆಣ್ಣು–ಅರಿವ’ನ್ನು ವಿಭಜಿಸುತ್ತಿವೆ. ಹಾಗೆ ನೋಡಿದರೆ ಹೆಣ್ತನವೇ ಒಂದು ಧರ್ಮ. ಅದು ಪ್ರಕೃತಿಧರ್ಮಕ್ಕೆ ಸನಿಹ. ಅದು ಅಧಿಕಾರ ಧರ್ಮಕ್ಕೆ ವಿರುದ್ಧ. ಗಂಡಿಗೆ ಅಧಿಕಾರವು ಆಳುವ, ನಿಯಂತ್ರಿಸುವ ಆಕ್ರಮಣಶೀಲತೆಯಾಗಿ ಕಂಡರೆ, ಹೆಣ್ಣಿಗದು ಸಲಹುವ ಕರ್ತವ್ಯಪರ ಪೋಷಕಭಾವ. ಇಂಥ ಅರಿವು ಅವಳ ತಾಯ್ತನದಿಂದ ಹುಟ್ಟಿದೆ ಎಂಬುದು ಒಂದು ಅಭಿಪ್ರಾಯ. ಸೃಷ್ಟಿಶಕ್ತಿ ಹೆಣ್ಣಿನ ಸ್ವಾಯತ್ತ ನೆಲೆಗಳಲ್ಲಿ ಒಂದು. ಆ ಅರ್ಥದಲ್ಲಿ ಅವಳು ಪ್ರಕೃತಿಯೇ. ಆದರೆ ಅದಕ್ಕೆ ವಂಶೋದ್ಧಾರದ, ವಂಶಪಾವಿತ್ರ್ಯದ ಹಂಗಿಲ್ಲ. ತಾಯ್ತನವನ್ನು ಅನುಭವದ ವಿಸ್ತರಣೆಯಾಗಿ, ಸೃಷ್ಟಿಶೀಲ ಚೈತನ್ಯವಾಗಿ ನೋಡುವುದಕ್ಕೂ, ಮೌಲ್ಯವಾಗಿ ಹೇರಿಕೊಳ್ಳುವುದಕ್ಕೂ ವ್ಯತ್ಯಾಸವಿದೆ.

ಕೊನೆಗೂ ‘ಹೆಣ್ಣು–ಅರಿವು’ ಎಂಬುದು ಇದೆಯಾದರೆ ಅದು ಏಕೆ ಬೇಕು? ಎಂಬ ಪ್ರಶ್ನೆಗೆ ಉತ್ತರಿಸಿಕೊಳ್ಳದಿದ್ದರೆ ಈ ಚಿಂತನೆ ಅಪೂರ್ಣವಾದೀತು. ‘ಹೆಣ್ಣು–ಅರಿವ’ನ್ನು ಪ್ರತಿಮಿಸುವ ಅದ್ಭುತ ಕಲ್ಪನೆಯೊಂದು ನಮ್ಮ ಪರಂಪರೆಯಲ್ಲೇ ಇದೆ. ಅದು ಅರ್ಧನಾರೀಶ್ವರ ಕಲ್ಪನೆ. ಅದು ಮೂಲತಃ ದೇಹಕ್ಕೆ ಸಂಬಂಧಿಸಿದ್ದಾದರೂ, ತಾತ್ವಿಕವಾಗಿ ರೂಪಕಾತ್ಮಕ ನೆಲೆಯಲ್ಲಿ ವಿಸ್ತರಿಸುತ್ತ ಅನಂತವಾಗುತ್ತದೆ. ಸ್ತ್ರೀದೇಹದ ಮೂಲಕ ಹೊಮ್ಮುವ ವಿಶಿಷ್ಟ ಅರಿವು ಲೋಕವನ್ನು ಗ್ರಹಿಸುವ ಲೋಕಮೀಮಾಂಸೆಯೊಂದನ್ನು ಕಟ್ಟುತ್ತಿರುತ್ತದೆ.

‘ಹೆಣ್ಣುಅರಿವಿ’ನಿಂದ ನೋಡಿದಾಗ ಸಮಾಜ, ಸಂಸ್ಕೃತಿ, ಚರಿತ್ರೆ, ರಾಜಕೀಯ, ಅಧಿಕಾರ, ಆರ್ಥಿಕತೆ ಎಲ್ಲವೂ ಭಿನ್ನವಾಗಿ ಕಾಣುವುದು ಸಾಧ್ಯವಿದೆ. ಆದ್ದರಿಂದ ನಮ್ಮ ಒಕ್ಕಣ್ಣಿನ ಜ್ಞಾನ ಪೂರ್ಣವಾಗಬೇಕಾದರೆ ಅರ್ಧನಾರೀಶ್ವರರಾಗಬೇಕು. ‘ಹೆಣ್ಣು–ಅರಿವು’ ಜ್ಞಾನನಿರ್ಮಾಣ, ಜ್ಞಾನಮೀಮಾಂಸೆಗೂ ಸಲ್ಲುವಂತೆ ಬೆಳೆದಾಗ ಅನೇಕ ಪೂರ್ವಗ್ರಹಗಳು ತಂತಾನೆ ಕಳಚಿಹೋಗುತ್ತವೆ. ಲೋಕವನ್ನು ಅರಿಯುವ ಕ್ರಮ ಸಮಗ್ರವಾಗುತ್ತದೆ. ಆ ಅರಿವನ್ನು ಬರಿಯ ಅವಳ ಬಿಡುಗಡೆಯ ದಾರಿಯಾಗಿಸದೆ, ಸಮಗ್ರಲೋಕದ ಬಿಡುಗಡೆಯ ದಾರಿಯಾಗಿ ಕಾಣುವುದು ಇಂದು ಬೇಕಾಗಿದೆ. 
(ಲೇಖಕಿ ಸಹಾಯಕ ಪ್ರಾಧ್ಯಾಪಕಿ)

ಸ್ತ್ರೀದೇಹದ ಘನತೆಯನ್ನು ಎತ್ತಿಹಿಡಿಯುವ ಲಲಿತಾ ಸಿದ್ಧಬಸವಯ್ಯ ಅವರ ಕವಿತೆಯ ಸಾಲುಗಳು:

ದೇವರೇ,
ನಾವು ನಿನ್ನನ್ನು ಅನುವಾದಿಸುತ್ತಿದ್ದೇವೆ
ಕ್ಷಣಕ್ಷಣವೂ ನೀನು ಅನುವಾದಗೊಳ್ಳುತ್ತೀಯಾ...
ಎಲ್ಲ ತಾಯಂದಿರ ಅಪ್ರಕಟಿತ ಸಾಹಿತ್ಯದಲ್ಲಿ
ನಮಗೆ ಗೊತ್ತಿಲ್ಲ ಇದರ ಲಿಪಿ
ನಮ್ಮ ಅಂಗೈಗಳ ನೇವರಿಕೆಯಲ್ಲಿ
ನಮ್ಮ ತೋಳುಗಳ ಬಿಗಿ ಮಡಿಕೆಯಲ್ಲಿ
ನಮ್ಮ ತೊಡೆಗಳು ರಚಿಸುವ ತೊಟ್ಟಿಲ ತಗ್ಗಿನಲ್ಲಿ
ನಮ್ಮ ಹಾಲುದುಂಬಿದ ಮೊಲೆಗಳಲ್ಲಿ
ಅದಕ್ಕೂ ಮೊದಲು ಮಾಂಸಮಜ್ಜೆಯ ಗರ್ಭಚೀಲದಲ್ಲಿ
ನಾವು ನಿನ್ನನ್ನು ಅನುವಾದಿಸುತ್ತಿರುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT