ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳೆ ಎಲೆಯಲ್ಲಿ ಅಮರಾವತಿ ಊಟ

ರಸಾಸ್ವಾದ
Last Updated 16 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಬಲ್‌ ಮೇಲೆ ಹಾಕಿದ ಬಾಳೆ ಎಲೆಯಲ್ಲಿ ಮಸಾಲೆ ಮಿರ್ಚಿ ಭಜ್ಜಿ, ಮಾವಿನ ಉಪ್ಪಿನಕಾಯಿ, ಪುದೀನಾ ಚಟ್ನಿ, ಟೊಮೆಟೊ ಚಟ್ನಿ, ಶುಂಠಿ ಪರಿಮಳದ ಅಲ್ಲಂ ಚಟ್ನಿಯನ್ನು ಒಂದಾದ ಮೇಲೊಂದರಂತೆ ವೇಟರ್‌ ತಂದು ಬಡಿಸುತ್ತಿದ್ದರು. ನಂತರ ಬಂದದ್ದು ಅನ್ನ ಮತ್ತು ಪಪ್ಪು. ಗ್ರಾಹಕರು ಕೇಳಿದಂತೆ ಮತ್ತೆ ಮತ್ತೆ ತಂದು ಬಡಿಸುತ್ತಿದ್ದರು.

‘ಭೋಜನದಲ್ಲಿ ಆನಂದ’ ಎಂಬ ತತ್ವದೊಂದಿಗೆ ಅಚ್ಚುಕಟ್ಟಾದ ಆಂಧ್ರ ಶೈಲಿಯ ತಿನಿಸುಗಳನ್ನು ಒದಗಿಸುತ್ತಾ ಬಂದಿರುವ ನಂದನ ಪ್ಯಾಲೆಸ್ ಈಗ ಗ್ರಾಹಕರಿಗಾಗಿ ಊಟದಲ್ಲಿ ಕೆಲವು ಹೊಸ ಪಚಡಿಗಳನ್ನು ಸೇರಿಸಿದೆ. ಸಹಕಾರನಗರದಲ್ಲಿ ಈಚೆಗೆ ಆರಂಭಿಸಿರುವ ಶಾಖೆಗಾಗಿ ಈ ಬದಲಾವಣೆ ಮಾಡಿದೆ.
ಆಂಧ್ರ ಶೈಲಿಯ ಮಾಂಸಾಹಾರವೆಂದರೆ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಮೈನಡುಗುವ ಚಳಿಯಲ್ಲಿ ಘಂ ಎನ್ನುವ ಮಸಾಲೆಯೊಂದಿಗೆ ಕಣ್ಣೀರು ತರಿಸುವಂಥ ಕಾರವಿದ್ದರೂ ಬಹಳಷ್ಟು ಮಂದಿ ಮಾಂಸಾಹಾರಿಗಳಿಗೆ ಈ ಆಂಧ್ರ ಶೈಲಿಯ ಆಹಾರ  ಇಷ್ಟವಾಗುತ್ತದೆ.

ಮಟನ್ ಬೋನ್‌ ಸೂಪ್, ಆಂಧ್ರ ರಾಯಲು (ಸಿಗಡಿ ಖಾದ್ಯ), ಅಮರಾವತಿ ಬೋನ್ ಲೆಸ್ ಚಿಕನ್, ಮಟನ್ ನಲ್ಲಿ ರೋಸ್ಟ್, ಬ್ಯಾಂಬೂ ಚಿಕನ್ ಹಾಗೂ ಹೈದರಾಬಾದಿ ದಮ್ ಬಿರಿಯಾನಿ ಈ ರೆಸ್ಟೊರೆಂಟ್‌ನ ಸಿಗ್ನೇಚರ್ ಖಾದ್ಯಗಳು.

‘ನಂದನ ಪ್ಯಾಲೆಸ್ ಆಂಧ್ರ ಶೈಲಿಯ ತಿನಿಸುಗಳಿಗೆ ಹೆಸರುವಾಸಿ.  ಸಹಕಾರನಗರ ಮತ್ತು ಸುತ್ತಮುತ್ತಲಿನ ಭಾಗದ ಗ್ರಾಹಕರು ಕೇಳಿಕೊಂಡಿದ್ದರಿಂದ 13ನೇ  ಶಾಖೆಯನ್ನು ಇಲ್ಲಿ ಆರಂಭಿಸಿದೆವು. ಈ ಶಾಖೆಗಾಗಿ ಊಟದಲ್ಲಿ ಬದಲಾವಣೆ ಮಾಡಿದ್ದೇವೆ. ಆಂಧ್ರದ ರುಚಿಯಲ್ಲಿ ನಾಲ್ಕು ಪಚಡಿಗಳನ್ನು ಹೊಸದಾಗಿ ಸೇರ್ಪಡೆ ಮಾಡಿದ್ದೇವೆ. ಮಾಂಸಾಹಾರದಲ್ಲಿ ಅಮರಾವತಿ, ಗೋದಾವರಿ ಭಾಗದ ತಿನಿಸುಗಳು ನಮ್ಮ ವಿಶೇಷ’ ಎನ್ನುತ್ತಾರೆ ನಂದನ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್.ರವಿಚಂದರ್.

ರಾತ್ರಿ ಊಟಕ್ಕೆ ವಿಶೇಷವಾಗಿ ದೋಸೆ, ಇಡ್ಲಿಯೊಂದಿಗೆ ನೆಂಜಿಕೊಳ್ಳಲು ಚಿಕನ್,  ಮಟನ್ ಹಾಗೂ ಮೀನಿನ ಸಾರು  (ಸಂಜೆ 7 ರಿಂದ ರಾತ್ರಿ 11ಗಂಟೆ) ಸಿಗುತ್ತದೆ. ಹೆಚ್ಚು ಖಾರ ಇಷ್ಟಪಡುವವರಿಗಾಗಿ ನಾಟಿಕೋಳಿ ಬಿರಿಯಾನಿ, ಹೈದರಾಬಾದಿ ಚಿಕನ್, ನೆಲ್ಲೂರು ಮಟನ್ ಬಿರಿಯಾನಿಯಿದೆ.

ಗುಂಟೂರು ಮೆಣಸಿನಕಾಯಿ ಬಳಸಿ ಮಾಡುವ ‘ಗುಂಟೂರು ಚಿಕನ್ ಫ್ರೈ’ ಬಹಳಷ್ಟು ಮಂದಿ ಇಷ್ಟಪಡುತ್ತಾರೆ.   ಪೂರ್ವ ಗೋದಾವರಿ ಭಾಗದ ಜನಪ್ರಿಯ ತಿನಿಸು ಬ್ಯಾಂಬೂ ಚಿಕನ್  ಇಲ್ಲಿನ ಮತ್ತೊಂದು ವಿಶೇಷ ತಿನಿಸಾಗಿದೆ. ಮರುಡುಮಲ್ಲಿ ಅರಣ್ಯ ಪ್ರದೇಶದ ವಾಸಿಗಳ ತಿನಿಸು ಇದು. 

ಇಲ್ಲಿ ಮಾಡುವ ನೆಲ್ಲೂರು ಬಿರಿಯಾನಿಗೆ ಎರಡು ವರ್ಷಗಳ ಹಳೆಯ ಬಾಸ್ಮತಿ ಅಕ್ಕಿ ಬಳಸಲಾಗುತ್ತದೆ. ಹೀಗೆ ಬಳಸುವುದರಿಂದ ಪರಿಮಳ ಮತ್ತು ರುಚಿ ಚೆನ್ನಾಗಿರುತ್ತದೆಯಂತೆ.   ಬಿರಿಯಾನಿಗಾಗಿ ಒಂದೊಂದು ಮಟನ್ ತುಂಡು 50ರಿಂದ 60 ಗ್ರಾಂ ಇರುವಂತೆ ಕತ್ತರಿಸಿ ಬಳಸಲಾಗುತ್ತದೆ. ಅದಕ್ಕೆಂದೇ ಆರು ಮಂದಿ ಮಟನ್ ಕತ್ತರಿಸುವ ಕೆಲಸಗಾರರನ್ನು ನೇಮಿಸಿದ್ದಾರೆ.

‘ನಮ್ಮಲ್ಲಿ ಹೈದರಾಬಾದಿ ಬಿರಿಯಾನಿಗೆ ತುಂಬ ಬೇಡಿಕೆ ಇದೆ. ಬಿರಿಯಾನಿಯನ್ನು ತಯಾರಿಸಲು ಕಟ್ಟಿಗೆ ಬಳಸುತ್ತಿದ್ದೇವೆ. ಹಾಗಾಗಿ, ನೈಸರ್ಗಿಕ ಸುವಾಸನೆಯ ಜೊತೆಗೆ ಒಳ್ಳೆ ರುಚಿಯೂ ನಮ್ಮ ಬಿರಿಯಾನಿಯಲ್ಲಿದೆ’ ಎಂದು ಹೇಳುತ್ತಾರೆ ಆರ್.ರವಿಚಂದರ್.

ಸಸ್ಯಾಹಾರಿಗಳಿಗೂ ಇಲ್ಲಿ ವಿಪುಲ ಆಯ್ಕೆಗಳಿವೆ. ಹಲವು ಹೊಸ ಹೊಸ ರೆಸಿಪಿಗಳನ್ನು ಪರಿಚಯಿಸಿದ್ದಾರೆ. ನಂದನ ಸ್ಪೆಷಲ್‌ ಪನ್ನೀರ್‌ ಡ್ರೈ, ಕೊತ್ತಂಬರಿ ಪನ್ನೀರ್‌ ಕರ್ರಿ, ಮಶ್ರೂಮ್‌ ಮಸಾಲ, ನುಗ್ಗೇಕಾಯಿ ಸೂಪ್‌, ಟೊಮೆಟೊ ಸೂಪ್‌ ಮುಖ್ಯವಾಗಿವೆ.

ಊಟದಲ್ಲೇನಿದೆ....
₹165 ಸಸ್ಯಾಹಾರಿ ಊಟದಲ್ಲಿ ಪಪ್ಪು, ತುಪ್ಪ, ವೆಪ್ಪುಡು, ಸಂಬಾರ್‌, ಗನ್‌ ಪೌಡರ್‌, ಅಕ್ಕುರಪಪ್ಪು, ರಸಂ, ಉಪ್ಪಿನಕಾಯಿ, ಕರಿದ ಮೆಣಸಿನಕಾಯಿ, ಹಪ್ಪಳ, ಸಿಹಿತಿನಿಸು, ನಾಲ್ಕು ಬಗೆಯ ಪಚಡಿ, ಗೊಂಗುರ ಚಟ್ನಿ,  ಅನ್ನವನ್ನು ಅನಿಯಮಿತವಾಗಿ ನೀಡುತ್ತಾರೆ.

ನಂದನಾ ಪ್ಯಾಲೆಸ್‌ ಮುಖ್ಯವಾಗಿ ಆಂಧ್ರ ತಿನಿಸುಗಳನ್ನು ಒದಗಿಸಿದರೂ ಕೂಡ ನಾರ್ಥ್ ಇಂಡಿಯನ್‌ ಹಾಗೂ ಚೈನೀಸ್‌ಪ್ರಿಯರಿಗೆ ಇಷ್ಟವಾಗುವಂತಹ  ಆಯ್ಕೆಯನ್ನು ಒದಗಿಸಿದೆ. 

ರೆಸ್ಟೊರೆಂಟ್‌: ನಂದನ ಪ್ಯಾಲೆಸ್
ಶೈಲಿ: ಆಂಧ್ರ,  ಅಮರಾವತಿ ಆಹಾರ
ವಿಶೇಷತೆ: ಮಟನ್‌ ನಲ್ಲಿ  ಸೂಪ್‌, ಅಮರಾವತಿ ಚಿಕನ್, ನೆಲ್ಲೂರು ಚಿಕನ್‌ ಬಿರಿಯಾನಿ, ಗುಂಟೂರು ಚಿಕನ್ ಡ್ರೈ.
ಸಮಯ: ಬೆಳಿಗ್ಗೆ 11.30ರಿಂದ 4.30
ಸಂಜೆ 6.30ರಿಂದ 11
ಇಬ್ಬರಿಗೆ: ₹600
ಸ್ಥಳ: ಮೊದಲನೆ ಮಹಡಿ ನಂ.28/1, ನೇಚರ್ ಬಾಸ್ಕೆಟ್ ಹಿಂಭಾಗ, 5ನೇ ಮೇನ್, 1ನೇ ಕ್ರಾಸ್, ಸಹಕಾರನಗರ.
ಸ್ಥಳ ಕಾಯ್ದಿರಿಸಲು: 98800 85894

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT