ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ರದ್ದತಿ– ಸಾತ್ವಿಕ ಜಿಪುಣತನ

Last Updated 16 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

‘ಮನುಷ್ಯ ಹಣ ಸೃಷ್ಟಿಸಿದ. ಆದರೆ ಹಣ ಅವನನ್ನು ಹುಚ್ಚನನ್ನಾಗಿಸಿತು’ ಎಂದಿದ್ದಾನೆ ಅರಿಸ್ಟಾಟಲ್. ನಮ್ಮ ಮನೆಯ ಬೀದಿಗೆ ಬರುವ ಸೊಪ್ಪಿನ ಗಾಡಿಯವ ಚಿಲ್ಲರೆಯಿಲ್ಲದ ಕಾರಣಕ್ಕೆ ‘ಪರವಾಗಿಲ್ಲ ನಾಳೆಯೇ ಹದಿನೈದು ರೂಪಾಯಿ ಕೊಡಿ’ ಅಂದ. ಕ್ಷಣ ಅವನಿಗೆ ಏನನ್ನಿಸಿತೋ? ಗೇಟಿಗೆ ನೇತುಹಾಕಿದ್ದ ಬುಟ್ಟಿಯಲ್ಲಿದ್ದ ತಲಾ ಅರ್ಧ ಲೀಟರಿನ ಮೂರು ಹಾಲಿನ ಪ್ಯಾಕೆಟ್ಟುಗಳನ್ನು ಗಮನಿಸಿದವ ‘ಸ್ವಾಮಿ, ಒಂದು ಪ್ಯಾಕೆಟ್ ಕೊಟ್ಬುಡಿ ಸರೋಗುತ್ತೆ’ ಎಂದ. ಆಯ್ತು ಅಂತ ಕೊಟ್ಟಿದ್ದಾಯಿತು. ನಗದಿಲ್ಲದ ವ್ಯವಹಾರವೆಂದರೆ ಇದೇ ಅಲ್ಲವೆ ಅನ್ನಿಸಿತು. ಅದಕ್ಕೂ ಮಿಗಿಲಾಗಿ ‘ವಸ್ತು ವಿನಿಮಯ ವ್ಯಾಪಾರ’ದಲ್ಲಿನ (ಬಾರ್ಟರ್ ಸಿಸ್ಟಮ್‌) ಆತ್ಮೀಯತೆಯ ಪರಿಚಯವಾಗಿತ್ತು.

₹ 500  ಮತ್ತು 1000 ಮುಖಬೆಲೆಯ ನೋಟುಗಳು ಅಮಾನ್ಯವಾಗಿ ನಲವತ್ತು ದಿನಗಳು ಸಂದಿವೆ. ತತ್ಸಂಬಂಧ ಬ್ಯಾಂಕಿನ ಖಾತೆಗೆ ಜಮಾ ಮಾಡಬಹುದಾದರ ಹೊರತಾಗಿ ಎಲ್ಲ ರೀತಿ, ರಿಯಾಯಿತಿ ಮುಗಿದಿದೆ. ದೇಶದ ಪ್ರಜೆ ತಾನು ಅನುಭವಿಸಿದ ನಾನಾ ತೊಂದರೆಗಳ ನಡುವೆಯೂ, ‘ಹೌದು ಈ ಕ್ರಮ ಎಂದೋ ಆಗಬೇಕಿತ್ತು’ ಎಂದು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾನೆನ್ನುವುದನ್ನು ಅಲ್ಲಗಳೆಯಲಾಗದು. ಭಾವೀ ದಿನಗಳು ಉತ್ತಮವಾಗಿರುವುವೆಂಬ ಭರವಸೆ ಹೊತ್ತಿದ್ದಾನೆ.

ಸರ್ಕಾರದ ಕಾರ್ಯಕ್ರಮದ ಸಾಧಕ, ಬಾಧಕಗಳನ್ನು ಪಕ್ಷ, ರಾಜಕಾರಣದಾಚೆಗೆ ಅವಲೋಕಿಸುವ ಜರೂರಿದೆ. ಹಣದ ಪರಿಚಲನೆ ಆಯಾಸಗೊಂಡರೆ ಮಾರುಕಟ್ಟೆಯಲ್ಲಿ ದರಗಳು ನಿಯಂತ್ರಣಗೊಂಡು ಗ್ರಾಹಕರಿಗೆ ನಿರಾಯಾಸ ಎನ್ನುವುದು ಅರ್ಥಶಾಸ್ತ್ರದ ಸರಳ ಪಾಠ. ಇದಕ್ಕೊಂದು ಮಿತಿಯಿದೆ ಒಪ್ಪೋಣ.

ಕ್ರಿ.ಪೂ. 4ನೇ ಶತಮಾನದ, ಭಾರತದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಚಾಣಕ್ಯನ ಸಿದ್ಧಾಂತಗಳು ಸಾರ್ವಕಾಲಿಕ. ಸಹನೆ ಯಶಸ್ಸಿನ ರಹಸ್ಯ. ಯೋಜನೆ ಎನ್ನುವುದು ಕತ್ತಲೆಯಲ್ಲಿ ದಾರಿ ತೋರುವ ದೀಪ. ಯೋಜನೆಯಿಲ್ಲದೆ ಯಾವುದೇ ಕಾರ್ಯಕ್ರಮಕ್ಕೆ ಮುಂದಾಗಬಾರದು. ಸಂಪಾದನೆಗೆ ತಕ್ಕಂತೆ ಹಣ ವೆಚ್ಚ ಮಾಡಬೇಕು. ದುಂದಿನಿಂದ ದುಃಖವೇ- ಇವು ಆ ಮೇಧಾವಿಯ ಕಿವಿಮಾತು. ಅದೆಷ್ಟು ಪ್ರಖರ, ಮೌಲಿಕವೆನ್ನಲು ಉದಾಹರಣೆಗಳು. ನಿಮ್ಮ ಆರ್ಥಿಕ ಸ್ಥಿತಿ ನೋಡಿಕೊಂಡು ಆಭರಣ ಧರಿಸಿ ಎನ್ನುತ್ತಾನೆ ಜಗಜ್ಜಾಣ ಚಾಣಕ್ಯ.

ಇದು, ಕಾಲು ಶತಮಾನದ ಹಿಂದಿನ ಮಾತು. ಮೈಸೂರಿನ ಅಗ್ರಹಾರದಲ್ಲಿ ರುಚಿ, ಶುಚಿಗೆ ಮನೆಮಾತಾಗಿದ್ದ ಹೋಟೆಲ್ಲದು. ಕೇಸರಿಬಾತ್ ಸೇವಿಸಲು ಚಮಚಕ್ಕೆ ಪರ್ಯಾಯವಾಗಿ ಊಟದೆಲೆಯ ಚೂರನ್ನು ಬಳಸಿದರೇನೆ ಅದರ ತುತ್ತು ಸಲೀಸಾಗಿ ಬಾಯಿ ತಲುಪುವಷ್ಟು ತುಪ್ಪದ ಜಿಡ್ಡು!

ಒಮ್ಮೆ ಗಿರಾಕಿಯೊಬ್ಬರು ಇಷ್ಟು ಕೇಸರಿಬಾತ್‌ನಲ್ಲಿ ರವೆ, ತುಪ್ಪ, ಸಕ್ಕರೆ ವಗೈರೆ ಸೇರಿ ಹೆಚ್ಚೆಂದರೆ ಒಟ್ಟು ನಾಲ್ಕು ರೂಪಾಯಿಯಷ್ಟು ಪದಾರ್ಥಗಳಿರಬಹುದು. ಆದರೆ ನೀವು ಹನ್ನೆರಡು ರೂಪಾಯಿ ತೆಗೆದುಕೊಳ್ಳುತ್ತೀರಲ್ಲ ಅಂತ ಪ್ರಶ್ನಿಸಿದರು. ಮಾಲೀಕನ ಉತ್ತರ ಮಾರ್ಮಿಕವಾಗಿತ್ತು: ‘ಸರಿಯೆ, ಆದರೆ ಆ ಪದಾರ್ಥಗಳನ್ನೆಲ್ಲ ಸೇರಿಸಿ ಪಾಕ ಇಳಿಸುವ ಕಲೆಗಾರಿಕೆಗೆ ನೀವು ಕಿಮ್ಮತ್ತು ನೀಡದೆ ಹೋದಿರಲ್ಲ ಸಾರ್?’

ಕಿರು ಗಾತ್ರದ ನಿಂಬೆ ಹಣ್ಣು, ಮನೆಯಂಗಳದಲ್ಲೇ ಬೆಳೆದ ಕೊತ್ತಂಬರಿ, ಕರಿಬೇವಿನ ಸೊಪ್ಪಿನ ಎಸಳುಗಳನ್ನೇ ಬಳಸಿಕೊಂಡು ಬಾಯಲ್ಲಿ ನೀರೂರಿಸುವ ಉಪ್ಪಿಟ್ಟು, ಅವಲಕ್ಕಿ ವಗೈರೆ ಸಿದ್ಧಪಡಿಸಲು ನಮ್ಮಲ್ಲಿ ಹದಬದ್ಧ ಸಾಂಪ್ರದಾಯಿಕ ವಿಧಾನಗಳಿಗೇನು ಬರವೇ? ಬೇಕಾದ್ದು ಅಚ್ಚುಕಟ್ಟುತನ. ಅಂದಹಾಗೆ ಮಾರುಕಟ್ಟೆಯಿಂದ ತಂದ ಅದೆಷ್ಟೋ ಪರಿಕರಗಳನ್ನು ನಾವು ಬಳಸುವುದೇ ಇಲ್ಲ. ಯಾರನ್ನೋ ಮೆಚ್ಚಿಸುವ ಸಲುವಾಗಿ ನಮಗೆ ಅಗತ್ಯವೇ ಅನಗತ್ಯವೇ ಎಂದು ಪರ್ಯಾಲೋಚಿಸದೆ ಖರೀದಿಸುವ ಸಂದರ್ಭಗಳೇ ಹೆಚ್ಚು.  ಹೊಸ ಪದಾರ್ಥಗಳನ್ನಿರಿಸಲು ಮನೆಯಲ್ಲಿ ಸ್ಥಳಾವಕಾಶ ಉಂಟೆ ಅಂತ ಕೂಡ ಚಿಂತಿಸದೆ ಖರೀದಿಗೆ ಹಪಹಪಿಸಿರುತ್ತೇವೆ.

‘ಶಾಪಿಂಗ್ ಈಸ್ ಬಯಿಂಗ್ ಥಿಂಗ್ಸ್ ವಿ ಡೋಂಟ್ ನೀಡ್’ ಎಂಬ ವ್ಯಂಗ್ಯೋಕ್ತಿಯುಂಟು! ಈಳಿಗೆ ಮಣೆ, ಬಾಣಲೆ, ಸೌಟು, ಮೊಗಚುವ ಕೈ, ಜರಡಿ, ಚಾಪೆ, ಪಟದ ಚೌಕಟ್ಟು, ಇಕ್ಕಳ ಅಥವಾ ನುಸಿ ಗುಳಿಗೆ, ಇಲಿ ಹಿಡಿಯುವ ಬೋನು ಯಾವುದೇ ಇರಲಿ ಪ್ರತಿಯೊಂದನ್ನೂ ಸಮರ್ಥವಾಗಿ ಬಳಸಿದಾಗಲೇ ಅದರ ಸಾರ್ಥಕ್ಯ, ಅಲ್ಲವೇ?

ಒಂದು ವಾಸ್ತವ ಉದಾಹರಣಾರ್ಹ. ಮನೆಯಲ್ಲಿ ಪೊರಕೆಗಳು ಸಾಕಷ್ಟಿದ್ದರೂ ಹೊಸ ಪೊರಕೆಗಳನ್ನು ಕೊಂಡು ತರುತ್ತೇವೆನ್ನಿ. ಯಾವ್ಯಾವ ಮೂಲೆ, ಸಂದುಗೊಂದುಗಳಲ್ಲಿ ಎಷ್ಟೆಷ್ಟು ದೂಳು, ಕಸವಿದೆ ಎನ್ನುವುದು ನಿಖರವಾಗಿ ಗೊತ್ತಿರುವುದು ಹಳೆಯ ಪೊರಕೆಗಳಿಗೇ! ಕಷ್ಟಪಟ್ಟು ದುಡಿದ ಹಣವನ್ನು ತೆತ್ತು ಖರೀದಿಸಿ ತಂದ ವಸ್ತು, ವೈವಿಧ್ಯಗಳನ್ನು ಪೂರ್ಣವಾಗಿ ದುಡಿಸಿಕೊಂಡಾಗಲೇ ನಮ್ಮ ದುಡಿಮೆ, ದುಡ್ಡಿನ ಸಾಕಾರವೆನ್ನಲು ಈ ನಿದರ್ಶನಗಳು. ಇರುವುದನ್ನು ದಕ್ಷವಾಗಿ ಉಪಯೋಗಿಸಿದರೆ ಇಲ್ಲದಿರುವುದಕ್ಕೆ ಕೊರಗಬೇಕಿಲ್ಲ ಎನ್ನುವುದು ಅನುಭವೋಕ್ತಿ. ನೋಡಿ, ಈ ಕತ್ತರಿ ಎಂಬತ್ತು ವರ್ಷ ಹಳೆಯದು, ಮೂರನೇ ತಲೆಮಾರಿಗೆ ಉಪಯೋಗವಾಗುತ್ತಿದೆ ಎಂದು ಯಾರಾದರೂ ಆಪ್ತರು ಹೇಳಿದಾಗ ಆಗುವ ಕುತೂಹಲ, ಸಂತಸ ಬಣ್ಣನೆಗೆ ಮೀರಿದ್ದು. ನೆನಪಿನ ಬುತ್ತಿಯಿಂದ ಆ ಸಂಗತಿ ಆಗಿಂದಾಗ್ಗೆ ಇಣುಕುತ್ತದೆ.

ಅಂದಕಾಲತ್ತಲೆ ಮನೆ ಮನೆಗಳಲ್ಲಿ ಅಡುಗೆ ತಯಾರಿಕೆಗೆ ಇದ್ದಿಲೇ ತಾನೆ ಇಂಧನ? ಇದ್ದಿಲು ಒಲೆಯಲ್ಲಿ ಅಡುಗೆ ಮಾಡಿದ ನಂತರ ಒಂದೊಂದಾಗಿ ಅರೆ ಉರಿದ ಇದ್ದಿಲನ್ನು ನಾಜೂಕಿನಿಂದ ಹೊರತೆಗೆಯಲಾಗುತ್ತಿತ್ತು. ನೀರು ಸಿಂಪಡಿಸಿ ಆರಿಸಿಟ್ಟುಕೊಂಡು ಮುಂದಿನ ಅಡುಗೆಗೆ ಉರಿಸಲಾಗುತ್ತಿತ್ತು. ಸೌದೆ ಒಲೆಯಿಂದ ಧಾರಾಳವಾಗಿಯೇ ಬೇಕಾದ ಇದ್ದಿಲಿನ ಪೂರೈಕೆ. ಸ್ವಾವಲಂಬನೆ ಮನೆಯಿಂದಲೇ ಆರಂಭವಾಗಬೇಕೆನ್ನುವುದು ಸ್ಫಟಿಕದಷ್ಟೆ ದಿಟ.

ಪ್ರಸ್ತುತ ‘ಕೈನಲ್ಲಿ ಹಣದ ಅಭಾವ’ ಪರಿಸ್ಥಿತಿ ‘ಸಾತ್ವಿಕ ಜಿಪುಣತನ’ಕ್ಕೆ ದೂಡಿದೆಯೆನ್ನಬಹುದು! ತನ್ಮೂಲಕ ಕೊಳ್ಳುಬಾಕತನದ ಹುಚ್ಚು ನರ್ತನಕ್ಕೆ ಅಷ್ಟರಮಟ್ಟಿಗೆ ಲಗಾಮು ಪ್ರಯೋಗವಾಗಿದೆ. ಶಹರಿನಲ್ಲಿ ಅಡ್ಡಾಡುವಾಗ ಮೊದಲು ಪದಾರ್ಥ, ನಂತರ ಕಿಸೆ ನೋಡುತ್ತಿದ್ದೆವು. ಈಗ ತದ್ವಿರುದ್ಧ. ಇರಿ, ಇರುವ ಹಣಕ್ಕೆ ಕೊಳ್ಳಲಾದೀತೆ ಯೋಚಿಸುತ್ತೇನೆ ಎನ್ನುವ ನಿಲುವು. ವೃಥಾ ಖರೀದಿ ಉಳ್ಳವರು ಇಲ್ಲದವರ ನಡುವೆ ಎಂತಹ ಕಂದಕ ಸೃಜಿಸಬಲ್ಲದು, ಆ ಕಂದಕ ಈಗ ಸ್ವಲ್ಪವಾದರೂ ಕಿರಿದಾಗುತ್ತಿದೆ ಎಂಬ ಅರಿವು ಮೂಡುತ್ತಿದೆಯೆನ್ನುವುದರಲ್ಲಿ ಎರಡು ಮಾತಿಲ್ಲ. ಹಣದ ಆರ್ಭಟಕ್ಕೂ ತುಸು ವಿಶ್ರಾಂತಿ ಅಗತ್ಯವೆಂಬ ಪ್ರಜ್ಞೆ ಹಾಗೂ ಹಿತಮಿತ ಹಣದ ವ್ಯಯವೆಷ್ಟು ಮೌಲಿಕ ಎನ್ನುವ ಜಾಗೃತಿ ಹಿಂದೆಂದಿಗಿಂತಲೂ ಘನವಾಗಿ ಮೂಡಿದೆ. ಪದಾರ್ಥ, ಪರಿಕರವೆ ಹಣ ಎನ್ನುವಂತಹ ವಾತಾವರಣವನ್ನು ಯಾವುದೇ ಸರ್ಕಾರ ನಿರ್ಮಿಸಿದರೆ ಅದು ಸ್ವಾಗತಾರ್ಹ. ಮುಖ್ಯ, ಸ್ಥಿತಿಗತಿಯ ದುರುಪಯೋಗವಾಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT