ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿಯಲ್ಲಿ ಮದ್ಯದಂಗಡಿ ಬಂದ್‌ ಜಾಗೃತಿ ಮೂಡಿಸುವುದು ಮುಖ್ಯ

Last Updated 16 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಎರಡೂ ಬದಿಗಳಲ್ಲಿ 500 ಮೀಟರ್ ವ್ಯಾಪ್ತಿಯೊಳಗಿನ ಎಲ್ಲ ಮದ್ಯದಂಗಡಿಗಳನ್ನು ಮುಚ್ಚುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.  ಅಷ್ಟೇ ಅಲ್ಲ, ಈಗಾಗಲೇ ಇರುವ ಮದ್ಯದಂಗಡಿಗಳ ಪರವಾನಗಿಗಳನ್ನು ಮುಂದಿನ ಮಾರ್ಚ್ 31ರ ನಂತರ ನವೀಕರಿಸಬಾರದು ಎಂದೂ ಕೋರ್ಟ್ ಕಟ್ಟುನಿಟ್ಟಾಗಿ ಹೇಳಿದೆ. ಬೊಕ್ಕಸಕ್ಕೆ ವರಮಾನ ತಂದುಕೊಡುವ ಪ್ರಮುಖ ಮೂಲ ಎಂಬ ಕಾರಣಕ್ಕಾಗಿ  ಮದ್ಯದ ಅಂಗಡಿಗಳಿಗೆ ಉದಾರವಾಗಿ  ರಾಜ್ಯ ಸರ್ಕಾರಗಳು ಪರವಾನಗಿ ನೀಡುತ್ತಿವೆ ಎಂಬುದು ನಿಜ. ಇದು ಈಗ ಸುಪ್ರೀಂ ಕೋರ್ಟ್‌ನ ಕೆಂಗಣ್ಣಿಗೆ ಗುರಿಯಾಗಿದೆ.  

ಹೆದ್ದಾರಿ ಪಕ್ಕದಲ್ಲಿ ಮದ್ಯದ ಅಂಗಡಿಗಳು ಇರಬಾರದು ಎಂಬ ಸೂಚನೆ ಪಾಲಿಸಲು 10 ವರ್ಷಗಳಿಂದಲೂ  ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬ ಆಕ್ಷೇಪವನ್ನೂ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದೆ. ಆರೋಗ್ಯಕ್ಕೆ ಹಾನಿಕರವಾದ ಅಮಲೇರಿಸುವ ಪಾನೀಯಗಳು ಹಾಗೂ ಮಾದಕವಸ್ತುಗಳನ್ನು ಔಷಧೀಯ ಉದ್ದೇಶಗಳಿಗಲ್ಲದೆ ಪೂರ್ಣ ಪಾನನಿಷೇಧ ಜಾರಿಗೊಳಿಸಲು ಸರ್ಕಾರಗಳು ಪ್ರಯತ್ನ ಪಡಬೇಕು ಎಂದು ಸಂವಿಧಾನದ  ರಾಜ್ಯ ನೀತಿಯ ಮಾರ್ಗದರ್ಶಿ ತತ್ವಗಳ 47ನೇ ವಿಧಿ ಹೇಳುತ್ತದೆ. ಹೀಗಾಗಿ ಈ ಸಾಂವಿಧಾನಿಕ ಹೊಣೆ ನಿಭಾಯಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಸುಪ್ರೀಂ ಕೋರ್ಟ್ ಟೀಕಿಸಿದೆ.

ರಸ್ತೆ ಸುರಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನ ಈ ಆದೇಶ ಒಂದು ಸಣ್ಣ ಹೆಜ್ಜೆ.  ಸಾರ್ವಜನಿಕರು ಮತ್ತು ಬಳಕೆದಾರರ ಪಾಲಿಗೆ ನಮ್ಮ ರಸ್ತೆಗಳು ಸುರಕ್ಷಿತವಾಗಿರಬೇಕು ಎಂಬ ಸದಾಶಯಕ್ಕೆ ಈ ಆದೇಶ ಪೂರಕವಾಗಿದೆ.  ಆದರೆ ಕುಡಿದು ವಾಹನ ಚಲಾಯಿಸುವುದೇ  ಎಲ್ಲಾ ಅಪಘಾತಗಳಿಗೆ ಕಾರಣ ಎಂದೂ ಹೇಳಲಾಗುವುದಿಲ್ಲ.

ರಸ್ತೆಗಳ  ಕಳಪೆ ಗುಣಮಟ್ಟ, ರಸ್ತೆಗಳ ಅಸಮರ್ಪಕ  ನಿರ್ವಹಣೆ, ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆ, ಅವೈಜ್ಞಾನಿಕ ರಸ್ತೆ ತಂತ್ರಜ್ಞಾನ, ವಾಹನ ಓಡಿಸುವವರ ಮನಸ್ಥಿತಿ, ವಾಹನಗಳ ಸ್ಥಿತಿಗತಿ ಮುಂತಾದ ಅಂಶಗಳೂ ರಸ್ತೆ ಅಪಘಾತಗಳಿಗೆ ಕಾರಣ ಎಂಬುದನ್ನು ಮರೆಯಲಾಗದು.  ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿನ ಭ್ರಷ್ಟಾಚಾರದಿಂದಾಗಿ  ಅನರ್ಹರಿಗೆ ಚಾಲನಾ ಪರವಾನಗಿ ಸಿಗುತ್ತಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ.

ಅವನ್ನೆಲ್ಲ ಪರಿಗಣನೆಗೆ ತೆಗೆದುಕೊಂಡಲ್ಲಿ ಸಾರಾಸಗಟಾಗಿ ಅಪಘಾತಗಳಿಗೆ ಕುಡಿತದ ಚಾಲನೆಯೇ ಕಾರಣ ಎಂದು ಹೇಳಲಾಗದು. ಎಲ್ಲಾ ಅಪಘಾತಗಳ ತಾಂತ್ರಿಕ,  ವೈಜ್ಞಾನಿಕ ಅಧ್ಯಯನ ನಡೆಯುವುದೂ ಮುಖ್ಯ. ಲಭ್ಯ ಅಂಕಿಅಂಶಗಳ ಪ್ರಕಾರ ರಸ್ತೆ ಅಪಘಾತಗಳಲ್ಲಿ ವರ್ಷಕ್ಕೆ ಸುಮಾರು 1.5 ಲಕ್ಷ ಜನ ಅಸುನೀಗುತ್ತಿದ್ದಾರೆ. ಆದರೆ ಈ ಪೈಕಿ ಕುಡುಕ ಚಾಲಕರು ಓಡಿಸುತ್ತಿದ್ದ ವಾಹನಗಳ ಅಪಘಾತದಲ್ಲಿ ಸತ್ತವರ ಸಂಖ್ಯೆ ಎಷ್ಟು ಎಂಬುದರ ನಿಖರ ಮಾಹಿತಿ ಕಲೆ ಹಾಕಬೇಕು.

ಸಂಚಾರ ಸುರಕ್ಷತೆಗಾಗಿ ಈಗಿರುವ ಕಾನೂನುಗಳೂ ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂಬುದು ವಿಷಾದನೀಯ. ಸಂಚಾರ ನಿಯಮಗಳ ಉಲ್ಲಂಘನೆ ತಡೆಗೆ ನಡೆಯುವ ತಪಾಸಣೆಗಳು ಬಹುಪಾಲು ನಗರ ಪ್ರದೇಶಗಳಿಗೆ ಸೀಮಿತವಾಗಿವೆ. ಹೆದ್ದಾರಿಗಳಲ್ಲಂತೂ ಇಂತಹ ತಪಾಸಣೆಗಳು  ತೀರಾ ಕಡಿಮೆ ಎನ್ನುವುದು ವಾಸ್ತವ ಸಂಗತಿ. ಹೀಗಾಗಿ ಸಂಚಾರ ಸುರಕ್ಷತೆಗೆ, ಅಸ್ತಿತ್ವದಲ್ಲಿರುವ ಕಾಯ್ದೆಗಳನ್ನು ಮೊದಲು ಸಮರ್ಪಕವಾಗಿ ಅನುಷ್ಠಾನಗೊಳ್ಳಲಿ.  ಹೆದ್ದಾರಿಗಳಲ್ಲಿನ ಮದ್ಯದ ಅಂಗಡಿಗಳನ್ನು ಮುಚ್ಚುವುದರ ಜತೆಗೆ ಈ ಲೋಪಗಳನ್ನೆಲ್ಲ ಸರಿಪಡಿಸುವುದು ಅಗತ್ಯ. ಇಲ್ಲದಿದ್ದರೆ ಕೋರ್ಟ್ ಸೂಚನೆ ಜಾರಿಗೆ ಬಂದರೂ ಹೆಚ್ಚು ಪ್ರಯೋಜನ ಆಗುವುದಿಲ್ಲ.

ನಮ್ಮ ರಾಜ್ಯದಲ್ಲಿಯೇ ಹೆದ್ದಾರಿಯ ಇಕ್ಕೆಲಗಳ 220 ಮೀಟರ್‌ ವ್ಯಾಪ್ತಿಯಲ್ಲಿ 280 ಮದ್ಯದಂಗಡಿಗಳು ಇವೆ. ಕೋರ್ಟ್ ಆದೇಶದಂತೆ 500 ಮೀಟರ್‌ ವ್ಯಾಪ್ತಿ ಪರಿಗಣಿಸಿದರೆ ಇವುಗಳ ಸಂಖ್ಯೆ ಹೆಚ್ಚುತ್ತದೆ. ಬಹಳಷ್ಟು ತಾಲ್ಲೂಕು ಕೇಂದ್ರಗಳ, ಹೋಬಳಿ ಮುಖ್ಯ ಕೇಂದ್ರಗಳ ಮಧ್ಯದಲ್ಲಿಯೇ ಒಂದಲ್ಲ ಒಂದು ಹೆದ್ದಾರಿ ಹಾದು ಹೋಗುತ್ತದೆ. 500 ಮೀಟರ್‌ ಷರತ್ತನ್ನು ಅನ್ವಯಿಸಲು ಹೋದರೆ ಅಲ್ಲಿ ಒಂದೇ ಒಂದು ಮದ್ಯದ ಅಂಗಡಿಗೂ ಪರವಾನಗಿ ಕೊಡುವಂತಿಲ್ಲ.

ಮದ್ಯಪಾನದ ಚಟ ಬೆಳೆಸಿಕೊಂಡವರು ತಮ್ಮ ಬಯಕೆ ಈಡೇರಿಸಿಕೊಳ್ಳಲು ಆಗ ಪರ್ಯಾಯ ಮಾರ್ಗಗಳ ಮೊರೆ ಹೋಗಬಹುದು. ಅವನ್ನೆಲ್ಲ ಹೇಗೆ ತಡೆಯುವುದು? ಮದ್ಯ ಸೇವಿಸಿ ವಾಹನ ಓಡಿಸುವುದರ ಹಿಂದೆ ಸಾಮಾಜಿಕ, ಮಾನಸಿಕ ಮತ್ತು ನಡವಳಿಕೆಯ ಸಮಸ್ಯೆಯೂ ಇದೆ.   ಅದಕ್ಕಾಗಿ ಕಾಯ್ದೆ, ಕಟ್ಟಳೆಗಳ ಕಟ್ಟುನಿಟ್ಟು ಜಾರಿಯ ಜತೆಗೆ  ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಸ್ವಯಂ ನಿಯಂತ್ರಣವಂತೂ ಬಹಳ ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT