ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿಯ ಹೆದ್ದಾರಿಯಲ್ಲಿ ಕೋಟಿ ಕೋಟಿ ಹೆಜ್ಜೆ

Last Updated 17 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಸಂತೆಗೆ ಗುಂಪಾಗಿ ಹೊರಟವರ ಹಾಗೆ ತಲೆಯ ಮೇಲೆ ಒಂದರ ಬೆನ್ನಹಿಂದೆ ಮತ್ತೊಂದರಂತೆ  ಮೋಡಗಳ ಮೆರವಣಿಗೆ. ‘ತೆಳ್ಳನೆ ಹಿಂಜಿದ ಬೂರುಗದರೆಳೆಯ ಬಿಸಿಲಿಗೆ ಕೆದರಿಹರೇನಮ್ಮ’ ಎನ್ನುವ ಕುವೆಂಪು ಅವರ ರೂಪಕ ಹೆಜ್ಜೆ–ಹೆಜ್ಜೆಗೂ ನೆನಪಾಗುವ ಕ್ಷಣ.

ಹೊನ್ನಿನ ತೇರು ಏರಿ ಬರುವ ಸೂರ್ಯನ ಸೊಬಗನ್ನು ಮೋಡಗಳ ಪರದೆ ಸರಿಸಿ ತೋರಿಸುತ್ತಲೇ ಚಳಿ ಹೆಚ್ಚಿಸಿ ನಡುಕ ಉಂಟು ಮಾಡುವ ಕುಳಿರ್ಗಾಳಿ. ಎದುರಿನ ಬೆಟ್ಟಗಳನ್ನೂ ಅಕ್ಕಪಕ್ಕದ ಮರಗಿಡಗಳನ್ನೂ ಇದ್ದಕ್ಕಿದ್ದಂತೆ ಅದೃಶ್ಯ ಮಾಡಿಬಿಡುವ ಮಂಜಿನ ರಾಜ್ಯಭಾರ.

ಅಯ್ಯಪ್ಪನನ್ನು ಆರಾಧಿಸುವವರಿಗೆ, ಪ್ರಕೃತಿಯನ್ನು ಪ್ರೀತಿಸುವವರಿಗೆ ಪಶ್ಚಿಮಘಟ್ಟದ ಶಬರಿಮಲೆಯಲ್ಲಿ ಎದುರಾಗುವ ಯಾವ ಪ್ರತಿಕೂಲ ಸನ್ನಿವೇಶವೂ ಲೆಕ್ಕಕ್ಕಿಲ್ಲ ಬಿಡಿ. ಹೀಗಾಗಿಯೇ ಎಲ್ಲ ಲೆಕ್ಕಾಚಾರ ಮೀರಿ ನಿಸರ್ಗದ ಈ ತೊಟ್ಟಿಲಿಗೆ ಜನಸ್ತೋಮ ಹರಿದುಬರುತ್ತದೆ.

‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂಬ ಘೋಷಣೆ ಹಾಕುತ್ತಾ, ಬರಿಮೈಯಲ್ಲಿ, ಬರಿಗಾಲಲ್ಲಿ ಕಾಡಿನ ದಾರಿಯೊಳಗೆ ಜನ ದಂಡಿ–ದಂಡಿಯಾಗಿ ಹೋಗುವುದನ್ನು ಕಂಡಾಗ ಮೈರೋಮ ಸೆಟೆದೆದ್ದು ನಿಲ್ಲುತ್ತದೆ. ಕಪ್ಪು ಲುಂಗಿ ಧರಿಸಿದ ಭಕ್ತಸಾಗರದ ಮಧ್ಯೆ ದ್ವೀಪಗಳಂತೆ ಕಾಣುವ ಜೀನ್ಸ್‌ಧಾರಿಗಳು ಎತ್ತೆತ್ತಲೋ ಕ್ಯಾಮೆರಾ ಕಣ್ಣನ್ನು ನೆಟ್ಟು ಕಚಗುಳಿ ಇಡುತ್ತಾರೆ, ಮತ್ತೆ!

ಕೇರಳದ ಪಟ್ಟನಂತಿಟ್ಟ ಜಿಲ್ಲೆಯ ಪೆರಿನಾಡು ಗ್ರಾಮದಲ್ಲಿದೆ ಶಬರಿಮಲೆ. ಪೆರಿಯಾರ್‌ ಹುಲಿ ಅಭಯಾರಣ್ಯದ ಈ ರುದ್ರ ರಮಣೀಯ ತಾಣದ ಬಗೆಗಿನ ಆಕರ್ಷಣೆ ಹೇಗಿದೆ ಎಂದರೆ ವರ್ಷದಿಂದ ವರ್ಷಕ್ಕೆ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ತಲೆಯ ಮೇಲೆ ಇರುಮುಡಿ ಹೊತ್ತವರ ಪಾಲಿಗೆ ಇಲ್ಲಿನ ಕಲ್ಲು–ಮುಳ್ಳಿನ ದಾರಿ ಹೂವಿನ ಹಾಸಿಗೆಯಂತೆ ಗೋಚರಿಸುತ್ತದೆ.

ಬರಿಗಾಲಿನಲ್ಲಿ ಬೆಟ್ಟ ಏರುವಾಗ ಅವರ ಪಾದಗಳಿಗೆ ನೋವಾಗುವುದಿಲ್ಲ, ಕಾಲುಗಳು ದಣಿಯುವುದಿಲ್ಲ, ಅಷ್ಟೇ ಏಕೆ? ದೇಹಕ್ಕೆ ಚಳಿ ಸಹ ಸೋಕುವುದಿಲ್ಲ. ಅವರನ್ನು ಅಷ್ಟೊಂದು ಭಾವಪರವಶರನ್ನಾಗಿ ಮಾಡುತ್ತದೆ ಇಲ್ಲಿನ ಯಾತ್ರೆ.

ದೇವಾಲಯದ ಗರ್ಭಗುಡಿಯಲ್ಲಿ ಧ್ಯಾನಾವಸ್ಥೆಯಲ್ಲಿ ಕುಳಿತಿರುವ ಅಯ್ಯಪ್ಪನಿಗೂ ಇಲ್ಲಿನ ಅಭಯಾರಣ್ಯಕ್ಕೂ ಅವಿನಾಭಾವ ಸಂಬಂಧವಂತೆ. ಅರಣ್ಯವನ್ನು ಅಯ್ಯಪ್ಪ ರಕ್ಷಣೆ ಮಾಡಿದರೆ, ಅಯ್ಯಪ್ಪನ ಧ್ಯಾನಕ್ಕೆ ಬೇಕಾದ ವಾತಾವರಣವನ್ನು ನಿರ್ಮಾಣ ಮಾಡಿಕೊಡುವುದು ಅರಣ್ಯದ ಕೆಲಸವಂತೆ. ಹೌದು, ಪರಿಸರದ ಸಂರಕ್ಷಣೆಗಾಗಿ ಹಾಕಿದ ಈ ಅಲಿಖಿತ, ಅಲೌಕಿಕ ಚೌಕಟ್ಟು ಎಷ್ಟೊಂದು ಚೆನ್ನ!

ಹೇಳಿ–ಕೇಳಿ ಭಾರತೀಯರು ತೀರ್ಥಯಾತ್ರೆ ಪ್ರಿಯರು. ಪಶ್ಚಿಮಘಟ್ಟದ ಈ ಮಳೆಕಾಡಿನ ಹಾದಿಯಲ್ಲಿ ತಲೆತಲಾಂತರದಿಂದ ನಡೆದುಕೊಂಡು ಬಂದಿದೆ ಅಂತಹ ಯಾತ್ರೆ. ದಕ್ಷಿಣ ಭಾರತದ – ಅದರಲ್ಲೂ ಆಂಧ್ರ ಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ಕೇರಳದ – ಪ್ರತಿ ಊರಿನಲ್ಲೂ ಶಬರಿಮಲೆ ಯಾತ್ರಾರ್ಥಿಗಳು ಸಿಕ್ಕೇ ಸಿಗುತ್ತಾರೆ. ಅಂದಹಾಗೆ, ಪಶ್ಚಿಮಘಟ್ಟದ ಆಸುಪಾಸಿನ ಇತರ ತೀರ್ಥಕ್ಷೇತ್ರಗಳಲ್ಲಿ ಇರುವಂತೆ ಜಾತಿಭೇದ, ಪಂಕ್ತಿಭೇದಗಳ ರಗಳೆ ಇಲ್ಲಿಲ್ಲ. ಆದರೆ, ಲಿಂಗ ತಾರತಮ್ಯ ಮಾತ್ರ ಸದ್ದು ಮಾಡುತ್ತಿದೆಯಲ್ಲ!

ದಶಕಗಳ ಹಿಂದೆ ಈ ದೇವಾಲಯವನ್ನು ತಲುಪುವುದು ತುಂಬಾ ಕಷ್ಟವಾಗಿತ್ತು. ಇರುಮೇಲಿಯಿಂದ ದಟ್ಟಕಾಡಿನ ದುರ್ಗಮ ಹಾದಿಯಲ್ಲಿ ಅಯ್ಯಪ್ಪನ ನೆಲೆಯನ್ನು ಹುಡುಕುವ ಸಲುವಾಗಿ ಯಾತ್ರಿಗಳು ಹಲವು ಬೆಟ್ಟಗಳನ್ನು ಹತ್ತಿ, ಇಳಿಯಬೇಕಿತ್ತು. ಕಡಿದಾದ ಬೆಟ್ಟ–ಗುಡ್ಡಗಳ ನಡುವೆ ಒಟ್ಟಾರೆ 56 ಕಿ.ಮೀ. ದೂರದ ಪಯಣ ಅದಾಗಿತ್ತು. ಈಗ ಪಂಪಾ ನದಿವರೆಗೆ ವಾಹನದಲ್ಲೇ ಹೋಗಬಹುದು. ಅಲ್ಲಿಂದ ನೀಲಿಮಲೆ ಏರಿದರೆ ಅಯ್ಯಪ್ಪನ ದರ್ಶನಭಾಗ್ಯ ಸಿಗುತ್ತದೆ. ಯಾತ್ರೆ ಈಗ ತುಂಬಾ ಸುಲಭವಾಗಿದ್ದರೂ ನಾಲ್ಕು ಕಿ.ಮೀ. ದೂರದವರೆಗೆ ನಡೆಯಲೇಬೇಕು. ಬೆಟ್ಟವನ್ನು ಏರಲೇಬೇಕು. ‘ಪವಿತ್ರ ಮಾರ್ಗ’ (ಅಯ್ಯಪ್ಪನೇ ನೀಲಿಮಲೆವರೆಗೆ ನಡೆದುಹೋದ ದಾರಿಯಂತೆ!) ಎಂಬ ಭಾವನೆಯಿಂದ ಈಗಲೂ ಇರುಮೇಲಿಯಿಂದ ಕಾಡಿನ ಹಾದಿಯಲ್ಲೇ ಪರಿಕ್ರಮಣ ನಡೆಸಿ, ದೇವಾಲಯ ತಲುಪುವ ಭಕ್ತರ ಸಾಹಸಗಳಿಗೆ ಲೆಕ್ಕವಿಲ್ಲ.

ಪ್ರಶಾಂತ ವಾತಾವರಣದಲ್ಲಿ ಧ್ಯಾನ ಬಯಸುವ ಅಯ್ಯಪ್ಪ ಸ್ವಾಮಿ ನವೆಂಬರ್‌ನಿಂದ ಜನವರಿವರೆಗಿನ ಮೂರು ತಿಂಗಳುಗಳಲ್ಲಿ –ಮಂಡಲಂ ಮಕರವಿಳಕ್ಕು ಉತ್ಸವದಲ್ಲಿ – ಮಾತ್ರ ಸುದೀರ್ಘ ಅವಧಿಯವರೆಗೆ ತನ್ನ ಭಕ್ತರಿಗೆ ದರ್ಶನ ನೀಡುತ್ತಾನೆ. ಆದ್ದರಿಂದ ಈ ಅವಧಿಯಲ್ಲಿ 5–6 ಕೋಟಿ ಜನ ಅಕ್ಷರಶಃ ಇಲ್ಲಿಗೆ ಮುತ್ತಿಗೆ ಹಾಕುತ್ತಾರೆ. ಪ್ರತಿವರ್ಷ ಇಲ್ಲಿನ ಪ್ರವಾಸಿಗರ ಸಂಖ್ಯೆಯಲ್ಲಿ ಶೇ 20ರಷ್ಟು ಏರಿಕೆ ಆಗುತ್ತಲೇ ಇದೆ.

ಟೊಮೆಟೊದಂತಹ ಕೆಂಪುಬಣ್ಣದ ಕೇರಳ ಬಸ್‌ಗಳು ಓಡಾಡುವ ಟಾರು ರಸ್ತೆ ದಾಟಿಕೊಂಡು ಇರುಮೇಲಿಯಿಂದ ಕಾಡಿನ ಹಾದಿ ಹಿಡಿದರೆ ಜಗತ್ತಿನಲ್ಲೇ ಅಪರೂಪವಾದ ಅಗಲಬಾಲದ ಪಕ್ಷಿಗಳು (Broad tailed Grassbird), ‘ಕೃಷ್ಣ ಪರುಂದು’ಗಳು (ಹದ್ದುಗಳು), ಮಲಬಾರ್‌ ಹಾರ್ನ್‌ಬಿಲ್‌ಗಳು, ನೀಲಗಿರಿ ಮುಸುವಗಳು, ದೈತ್ಯಗಾತ್ರದ ಅಳಿಲುಗಳ ಬಿಡಾರಗಳಿವೆ. ಯಾತ್ರಿಗಳ ಅದೃಷ್ಟ ಚೆನ್ನಾಗಿದ್ದರೆ ಅಯ್ಯಪ್ಪ ಸ್ವಾಮಿಗಿಂತ ಮುಂಚೆಯೇ ಅವುಗಳ ದರ್ಶನ ಆಗುತ್ತದೆ. ಪಕ್ಷಿಪ್ರಿಯರು ಇಲ್ಲಿನ ಹುಲ್ಲುಗಾವಲು ಪ್ರದೇಶದಲ್ಲಿ ಅವುಗಳಿಗಾಗಿ ಜಪಿಸಿ ಕೂರುತ್ತಾರೆ. ಪ್ರತಿ ‘ಮಕರವಿಳಕ್ಕು’ ಉತ್ಸವದ ಸಂದರ್ಭದಲ್ಲಿ ಅವರು ಇರುಮೇಲಿಯತ್ತ ಧಾವಿಸುತ್ತಾರೆ. ಸನ್ನಿಧಾನದವರೆಗೆ ಅವರ ಪಯಣ ಮುಂದುವರಿಯದೆ ಇದ್ದರೂ ಬಾನಾಡಿಗಳ ದರ್ಶನಕ್ಕಾಗಿ ಇಲ್ಲಿನ ಹುಲ್ಲುಗಾವಲಿನಲ್ಲಿ ದಿನಗಟ್ಟಲೆ ಇದ್ದೇ ಇರುತ್ತಾರೆ.

ಮಳೆಗಾಲದಲ್ಲಿ ಮಿಂದೆದ್ದ ಪೆರಿಯಾರ್‌ ಅರಣ್ಯಧಾಮ ಮಾಗಿ ಚಳಿಯ ಆಗಮನದೊಂದಿಗೆ, ಅದುವರೆಗಿನ ವಿಶ್ರಾಂತಿಗೆ ವಿರಾಮ ನೀಡಿ, ಇದ್ದಕ್ಕಿದ್ದಂತೆ ಲೆಕ್ಕವಿಲ್ಲದಷ್ಟು ಚಟುವಟಿಕೆಗಳ ತಾಣವಾಗಿ ಬಿಡುತ್ತದೆ. ಮಲೆಯಾಳಿ ಸಂವತ್ಸರದ ವೃಶ್ಚಿಕ ಮಾಸದ ಮೊದಲ ದಿನದ ಪೂಜೆಗೆ ಪ್ರಧಾನ ತಂತ್ರಿ (ಪ್ರಧಾನ ಅರ್ಚಕ; ಐಎಎಸ್‌ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗೆ ನಡೆಯುವಂತೆ ಇವರ ಆಯ್ಕೆಗೂ ಸುದೀರ್ಘ ಸಂದರ್ಶನ ನಡೆಯುತ್ತದೆ, ಧರ್ಮಶಾಸ್ತ್ರ ಎಷ್ಟು ಗೊತ್ತು ಎಂಬುದನ್ನು ಪರೀಕ್ಷಿಸಲಾಗುತ್ತದೆ!) ಸಿದ್ಧತೆ ಮಾಡಿಕೊಳ್ಳುವ ವೇಳೆಗಾಗಲೇ ಭಕ್ತರಿಗೆ ದೇವಾಲಯದ ಬಾಗಿಲು ತೆರೆಯುತ್ತದೆ. ಆಗ ಕೇರಳದ ಎಲ್ಲ ದಾರಿಗಳೂ ಶಬರಿಮಲೆಯತ್ತಲೇ ತಿರುಗುತ್ತವೆ. ದಾರಿಯುದ್ದಕ್ಕೂ ಬಿಡಾರ ಹೂಡಿರುವ ಡಬ್ಬಿ ಅಂಗಡಿಗಳಲ್ಲಿ ಮೂರು ತಿಂಗಳುಗಳಿಗೆ ಬೇಕಾದಷ್ಟು ಸಾಮಗ್ರಿಗಳ ದಾಸ್ತಾನು ತುಂಬಿ ತುಳುಕುತ್ತಿರುತ್ತದೆ. ಪ್ರವಾಸೋದ್ಯಮದಲ್ಲಿ ತೊಡಗಿದವರಿಗೆ ಸುಗ್ಗಿ ಕಾಲ ಇದು.

ಶಬರಿಮಲೆ ತಲುಪಲು 2–3 ದಾರಿಗಳಿದ್ದರೂ ಅವುಗಳಿಗೆ ಇರುಮೇಲಿ ಗ್ರಾಮವೇ ಆರಂಭಿಕ ಬಿಂದು. ಉಳಿದ ಒಂಬತ್ತು ತಿಂಗಳವರೆಗೆ ಮಲಗಿ ಗಡದ್ದಾಗಿ ನಿದ್ದೆ ಹೊಡೆಯುವ ಈ ಊರು ನವೆಂಬರ್‌ ಬಂತೆಂದರೆ ಪುಟಿದೆದ್ದು ನಿಲ್ಲುತ್ತದೆ. ವಾರೊಪ್ಪತ್ತಿನಲ್ಲಿ 400 ಮಳಿಗೆಗಳು ಹೊಸ ಚಪ್ಪರ ಹಾಕಿಕೊಂಡು ಸನ್ನದ್ಧವಾಗುತ್ತವೆ. ಟೆಂಟ್‌ ಹೋಟೆಲ್‌ಗಳು ನಾಯಿಕೊಡೆಗಳಂತೆ ಏಳುತ್ತವೆ. ಕೇರಳ ಮಾತ್ರವಲ್ಲದೆ ತಮಿಳುನಾಡು ಹಾಗೂ ಆಂಧ್ರ ಪ್ರದೇಶದಿಂದಲೂ ಭಿಕ್ಷುಕರ ದೊಡ್ಡ ಪಡೆಯೇ ಲಗ್ಗೆ ಇಡುತ್ತದೆ. ಭಕ್ತರಿಗೆ ನೆರವು ನೀಡಲು, ಗದ್ದಲ ನಿಯಂತ್ರಿಸಲು ಮೂರು ಸಾವಿರ ಪೊಲೀಸರು, ಅಷ್ಟೇ ಸಂಖ್ಯೆಯ ಸ್ವಯಂಸೇವಕರು ಧಾವಿಸುತ್ತಾರೆ.

ಅಣೆಕಟ್ಟೆಯ ಎಲ್ಲ ಗೇಟುಗಳನ್ನು ಏಕಕಾಲಕ್ಕೆ ತೆರೆದಂತೆ ವೃಶ್ಚಿಕ ಮಾಸದ ಮೊದಲ ದಿನವೇ ಲಕ್ಷಾಂತರ ಪ್ರವಾಸಿಗರು ಪೆರಿಯಾರ್‌ ಅರಣ್ಯದೊಳಗೆ ನುಗ್ಗುತ್ತಾರೆ. ಇಲ್ಲಿನ ಇಕ್ಕಟ್ಟಾದ ರಸ್ತೆಗಳು ಒಟ್ಟಿಗೇ ನುಗ್ಗುವ ಸಾವಿರಾರು ವಾಹನಗಳ ಒತ್ತಡ ತಾಳಲಾಗದೆ ಕುಯ್ಯೊ ಮರ್ರೊ ಎನ್ನುತ್ತವೆ. ‘ಮಂಡಲ ಪೂಜೆ’ಗೆ ದೇವಾಲಯ ತೆರೆದಿರುವ ಮೂರು ತಿಂಗಳ ಅವಧಿಯಲ್ಲಿ ಸುಮಾರು ಎಂಟು ಲಕ್ಷ ವಾಹನಗಳು ಪಂಪಾ ನದಿ ತೀರದವರೆಗೆ ಬಂದುಹೋಗುತ್ತವೆ ಎನ್ನುವುದು ಕೇರಳ ಪ್ರವಾಸೋದ್ಯಮ ನಿಗಮದ ಅಂದಾಜು. ಆದರೆ, ಹಾಗೆ ಲಗ್ಗೆ ಹಾಕುವ ವಾಹನಗಳ ನಿಲುಗಡೆಗೆ ತಕ್ಕಷ್ಟು ಸ್ಥಳಾವಕಾಶ ಈ ದಟ್ಟ ಅರಣ್ಯದಲ್ಲಿಲ್ಲ. ಹೀಗಾಗಿ ಇಲ್ಲಿನ ಜೀವವೈವಿಧ್ಯ ಸಹ ಈ ಒತ್ತಡದಿಂದ ಅಪಾಯ ಎದುರಿಸುತ್ತಿದೆ. ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಿದಂತೆ ದಟ್ಟ ಕಾಡಿನಲ್ಲಿ ಅಭಿವೃದ್ಧಿ ಚಟುವಟಿಕೆಗಳು ಹೆಚ್ಚುತ್ತಲೇ ಇವೆ.

ಶಬರಿಮಲೆಗೆ ಬಂದವರಿಗೆಲ್ಲ ಕುಡಿಯುವ ಶುದ್ಧ ನೀರು ಪೂರೈಸಲು ಆಗುತ್ತಿಲ್ಲ. ಆಹಾರ ಗುಣಮಟ್ಟದ ನಿಯಂತ್ರಣಕ್ಕೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ದೂರುಗಳಿಗೆ ಲೆಕ್ಕವಿಲ್ಲ. ಶುಚಿತ್ವದ ಅಭಾವ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗದ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳ ಸೌಕರ್ಯವಿಲ್ಲ.

ಇನ್ನು ಇರುಮೇಲಿ, ಪೆರಿನಾಡು ಮೊದಲಾದ ಗ್ರಾಮಗಳ ಸ್ಥಳೀಯ ಆಡಳಿತಕ್ಕೆ ಕೊಳಚೆ ನೀರನ್ನು ಹೇಗೆ ಸಂಸ್ಕರಿಸುವುದು, ಸಂಸ್ಕರಿಸಿದ ನೀರನ್ನು ಎಲ್ಲಿ ಕಳುಹಿಸುವುದು ಎನ್ನುವ ಚಿಂತೆ. ಪ್ರತಿದಿನ ಹತ್ತಾರು ಟನ್‌ಗಳಷ್ಟು ಗುಡ್ಡದಂತೆ ಬೀಳುವ ಘನತ್ಯಾಜ್ಯದ ನಿರ್ವಹಣೆ ಹೇಗೆಂಬುದು ಸ್ಥಳೀಯ ಆಡಳಿತಕ್ಕೆ ತೋಚದೆ ತಲೆನೋವಾಗಿ ಪರಿಣಮಿಸಿದೆ. ನಿಷೇಧದ ಹೊರತಾಗಿಯೂ ತೂರಿಕೊಂಡು ಬರುವ ಪ್ಲಾಸ್ಟಿಕ್‌ ಕೂಡ ಕಳವಳ ಮೂಡಿಸಿದೆ.

ಶಬರಿಮಲೆ ದೇವಾಲಯದ ನಿರ್ವಹಣೆಯ ಹೊಣೆಯನ್ನು ‘ತಿರುವಾಂಕೂರು ದೇವಸ್ಥಾನ ಮಂಡಳಿ’ (ಟಿಡಿಬಿ) ಹೊತ್ತಿದೆ. ಸಾವಿರಕ್ಕೂ ಅಧಿಕ ದೇವಾಲಯಗಳ ಹೊಣೆ ಹೊತ್ತಿರುವ ಮಂಡಳಿಗೆ ಶಬರಿಮಲೆಯೇ ಆದಾಯದ ಮುಖ್ಯ ಮೂಲ. ಕಳೆದ ‘ಮಂಡಲಂ ಮಕರವಿಳಕ್ಕು’ ಋತುವಿನಲ್ಲಿ (2015ರ ನವೆಂಬರ್‌ನಿಂದ 2016ರ ಜನವರಿ) ₹ 175 ಕೋಟಿಯಷ್ಟು ದೇಣಿಗೆ ದೇವಾಲಯದ ಹುಂಡಿಗಳಲ್ಲಿ ಸಂಗ್ರಹವಾಗಿತ್ತು. ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿಯಿಂದ ದೇಣಿಗೆ ಸಂಗ್ರಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು ಎಂಬ ಮುಂದಾಲೋಚನೆಯಿಂದ ಮಂಡಳಿ ‘ಇ–ಹುಂಡಿ’ ವ್ಯವಸ್ಥೆಯನ್ನೂ ಮಾಡಿದೆ. ಭಕ್ತರಿಗೆ ಈಗ ತಮ್ಮ ಖಾತೆಗಳಿಂದ ನೇರವಾಗಿ ದೇವರ ಖಾತೆಗೆ ಹಣ ವರ್ಗ ಮಾಡುವ ಖುಷಿ.

ಅಯ್ಯಪ್ಪನ ಭಕ್ತರು – ವಿಶೇಷವಾಗಿ ಮೊದಲ ಯಾತ್ರೆ ಕೈಗೊಂಡ ‘ಕಣ್ಣಿ ಅಯ್ಯಪ್ಪ’ರು – ತಮ್ಮ ಆರಾಧ್ಯ ದೈವವನ್ನು ನೆನೆಯುತ್ತಾ ನರ್ತಿಸುವ ‘ಪೆಟ್ಟ ತುಳ್ಳಲ್‌’ ಬಲು ಆಕರ್ಷಕ ಉತ್ಸವ. ಬೆಟ್ಟದ ತಪ್ಪಲಿನ ವಾವರ್‌ ಮಸೀದಿಗೂ ‘ಪೆಟ್ಟ ತುಳ್ಳಲ್‌’ ಮೆರವಣಿಗೆ ಹೋಗಿಬರುತ್ತದೆ. ನರ್ತನಕ್ಕೆ ಬೇಕಾದ ಶರಕ್ಕೋಲ್‌ ಸಿದ್ಧಪಡಿಸಿಕೊಡುವ ಕರಕುಶಲ ಕರ್ಮಿಗಳಿಗೆ ಈ ಅವಧಿಯಲ್ಲಿ ಬಿಡುವಿಲ್ಲದ ಕೆಲಸ. ಭಾವೈಕ್ಯದ ಪಾಠ ಕಲಿತುಕೊಂಡೇ ಯಾತ್ರಿಗಳು ಅಯ್ಯಪ್ಪನ ದರ್ಶನದ ಹಾದಿ ಹಿಡಿಯುತ್ತಾರೆ. ಬೆಟ್ಟದ ದಾರಿಯುದ್ದಕ್ಕೂ ಸಿಗುವ ನೂರಾರು ಮಳಿಗೆಗಳಲ್ಲಿ ದಿನಸಿ, ರಬ್ಬರ್‌, ಫ್ಯಾನ್ಸಿ ಸಾಮಗ್ರಿಗಳ ಮಾರಾಟದ ಭರಾಟೆ. ಕ್ಯಾಮೆರಾ, ಚಿಪ್‌ ಜೊತೆಗೆ ವಾಹನಗಳ ಬಿಡಿಭಾಗಗಳ ಮಾರಾಟ ಸಹ ಬಲು ಜೋರಾಗಿರುತ್ತದೆ.

ಅಲ್ಲಲ್ಲಿ ಔಷಧ ಅಂಗಡಿಗಳಿವೆ. ನೋವು ನಿವಾರಕ ಬಾಮ್‌ಗಳು ತೆರಪಿಲ್ಲದಂತೆ ಖರ್ಚಾಗುತ್ತವೆ. ಮೂರು ತಿಂಗಳಲ್ಲಿ ಕೇರಳ ಪ್ರವಾಸೋದ್ಯಮಕ್ಕೆ ಶಬರಿಮಲೆ ಯಾತ್ರಿಕರಿಂದ ಮೂರು ಸಾವಿರ ಕೋಟಿ ರೂಪಾಯಿಯಷ್ಟು ವರಮಾನ ಹರಿದುಬರುತ್ತದೆ. ಎಲ್ಲವನ್ನೂ ಬಿಟ್ಟು ಕಾಡಿನಲ್ಲಿರುವ ದೇವರ ದರ್ಶನಕ್ಕೆ ಬಂದವರಿಗೂ ವಾಪಸ್‌ ಹೋಗುವಾಗ ಮನರಂಜನೆಗಾಗಿ ಸಿನಿಮಾ ಬೇಕು. ಇರುಮೇಲಿಯ ‘ಶ್ರೀ ಅಯ್ಯಪ್ಪನ್‌’ ಚಿತ್ರಮಂದಿರ ಸದಾ ಗಿಜಿಗುಡುವುದಂತೆ!

ಪರಿಸರಕ್ಕೆ ಯಾವುದೇ ಹಾನಿ ಉಂಟುಮಾಡದಂತೆ ಪ್ರವಾಸಿಗರಿಗೆ ಹೇಗೆ ಅನುಕೂಲ ಕಲ್ಪಿಸಬಹುದು ಎಂಬ ವಿಷಯವಾಗಿ ಅಧ್ಯಯನ ನಡೆಸಲು ವಾಸ್ತುಶಾಸ್ತ್ರಜ್ಞ ಹಾಗೂ ವನ್ಯಜೀವಿ ಪ್ರೇಮಿ ಲೂರಿ ಬೇಕರ್‌ ಅವರನ್ನು ಕೇರಳ ಸರ್ಕಾರ ಕೇಳಿಕೊಂಡಿತ್ತು. ಅಯ್ಯಪ್ಪನ ಭಕ್ತರೊಂದಿಗೆ ಕಾಡಿನ ಹಾದಿಯಲ್ಲಿ ಓಡಾಡಿದ ಲೂರಿ ಬೇಕರ್‌, ಸರ್ಕಾರ ಏನೆಲ್ಲ ಮಾಡಬಹುದು ಎಂಬ ವಿಷಯವಾಗಿ ಸುದೀರ್ಘ ವರದಿಯನ್ನೇ ನೀಡಿದ್ದರು.

ಆದರೆ, ಅವರ ಯಾವುದೊಂದು ಶಿಫಾರಸ್ಸೂ ಕಾರ್ಯರೂಪಕ್ಕೆ ಬರಲಿಲ್ಲ. ಕೇರಳ ಸರ್ಕಾರ ಈಗ ಹೊಸ–ಹೊಸ ಯೋಜನೆ ರೂಪಿಸಲು ಹೊರಟಿದೆ. ಶಬರಿಮಲೆಯನ್ನು ‘ರಾಷ್ಟ್ರೀಯ ಪ್ರವಾಸೋದ್ಯಮ ತಾಣ’ವನ್ನಾಗಿ ಘೋಷಿಸಿ, ಅದರ ಸಮಗ್ರ ಅಭಿವೃದ್ಧಿಗಾಗಿ ಅನುದಾನ ನೀಡುವಂತೆ ದೇವಸ್ಥಾನ ಮಂಡಳಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ಐದು ವರ್ಷಗಳ ಹಿಂದೆ ಮಕರವಿಳಕ್ಕು ಉತ್ಸವದ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿ ನೂರಕ್ಕೂ ಅಧಿಕ ಜನ ಸಾವನ್ನಪ್ಪಿದ ದುರ್ಘಟನೆ ಇನ್ನೂ ಹಸಿರಾಗಿದೆ. ಇಂತಹ ನೂಕುನುಗ್ಗಲು ತಪ್ಪಿಸಲು ವರ್ಷದ ಎಲ್ಲ ದಿನಗಳಲ್ಲೂ ದೇವಾಲಯವನ್ನು (ಪ್ರತಿಕೂಲ ಹವಾಮಾನದ ದಿನಗಳನ್ನು ಹೊರತುಪಡಿಸಿ) ಭಕ್ತರಿಗಾಗಿ ತೆರೆಯುವ ಕುರಿತು ಯೋಚಿಸಬೇಕು ಎಂಬುದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ದೇವಸ್ಥಾನ ಮಂಡಳಿಗೆ ನೀಡಿರುವ ಸಲಹೆ.

ಅಮೆರಿಕ, ಯುರೋಪ್‌, ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಅಯ್ಯಪ್ಪನ ಭಕ್ತರಿಗೆ ಪೆರಿಯಾರ್‌ ಅರಣ್ಯದ ಜೀರುಂಡೆ ಸದ್ದು ಸಹ ಮೋಹನ ಮುರಳಿಯಂತೆ ಕೇಳುವುದಂತೆ. ನವೆಂಬರ್‌ ತಿಂಗಳಿಗಾಗಿ ಕಾತರಿಸುವ ಅಲ್ಲಿನ ಸಾವಿರಾರು ಭಕ್ತರು, ದೇವಾಲಯದಲ್ಲಿ ವೃಶ್ಚಿಕ ಮಾಸದ ಮೊದಲ ಗಂಟಾನಾದ ಮೊಳಗುವ ವೇಳೆಗೆ ನೀಲಿಮಲೆಗೆ ಧಾವಿಸುತ್ತಾರೆ. ಭಾರತದ ವಿಮಾನ ಏರುವ ಮುಂಚೆ 41 ದಿನಗಳ ಕಠಿಣ ವ್ರತವನ್ನೂ ಕೈಗೊಂಡಿರುತ್ತಾರಂತೆ.

ಶಬರಿಮಲೆಗೆ ಹೋಗುವ ಕರ್ನಾಟಕದ ಪ್ರವಾಸಿಗರ ಸಂಖ್ಯೆಯೇನೂ ಕಡಿಮೆಯಿಲ್ಲ. ಆ ದಟ್ಟಕಾಡಿನ, ದಿಟ್ಟಸ್ವಾಮಿಯ ಮೋಹಪಾಶಕ್ಕೆ ಬಿದ್ದವರಲ್ಲಿ ರಾಜ್ಯದ ಎಲ್ಲ ಭಾಗಗಳ ಜನರೂ ಇದ್ದಾರೆ. ಉತ್ತರ ಕರ್ನಾಟಕದ ಭಕ್ತರ ಪಾಲಿಗೆ ಅಯ್ಯಪ್ಪನ ದರ್ಶನಕ್ಕೆ ಹೋಗುವುದೆಂದರೆ ಅದೊಂದು ಹತ್ತಾರು ದಿನಗಳ ತೀರ್ಥಯಾತ್ರೆ. ಶಿರಸಿ ಮಾರಿಕಾಂಬೆಯ ದರ್ಶನದಿಂದ ಆರಂಭವಾಗುವ ಅವರ ಪಯಣ, ಇಡಗುಂಜಿ, ಗೋಕರ್ಣ, ಮುರ್ಡೇಶ್ವರ, ಕೊಲ್ಲೂರು, ಉಡುಪಿ, ಧರ್ಮಸ್ಥಳದ ಮೂಲಕ ಮಕರಸಂಕ್ರಾಂತಿ ಜ್ಯೋತಿಯ ದರ್ಶನದ ವೇಳೆಗೆ ನೀಲಿಮಲೆಯನ್ನು ತಲುಪುತ್ತದೆ.

ರಾಜ್ಯದ ಜನ ಸಾಮಾನ್ಯವಾಗಿ ಹೀಗೆ ಯಾತ್ರೆಗೆ ಹೋಗುವುದು ಮ್ಯಾಕ್ಸಿ ಕ್ಯಾಬ್‌ಗಳಂತಹ ವಾಹನಗಳಲ್ಲಿ. ಅದೂ ಗುಂಪು–ಗುಂಪಾಗಿ, ಗುರುಸ್ವಾಮಿಗಳ ನೇತೃತ್ವದಲ್ಲಿ. ರಾಜ್ಯದಿಂದ ಹೋಗುವ ವಾಹನಗಳಿಗೆ ಕೇರಳದ ಗಡಿಯಲ್ಲಿ ಭಾರಿ ಪ್ರಮಾಣದ ತೆರಿಗೆ ವಿಧಿಸಲಾಗುತ್ತದೆ. ಇದರಿಂದ ತೀರ್ಥಯಾತ್ರೆ ಈಗೀಗ ದುಬಾರಿಯಾಗಿದೆ.

ಹೆಚ್ಚಿನ ಖರ್ಚಿಲ್ಲದಂತೆ ಶಬರಿಮಲೆ ನೋಡಿಬರಲು ಬೇರೆ ದಾರಿಗಳೂ ಇವೆ. ‘ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್’ (ಐಆರ್‌ಸಿಟಿಸಿ) ಬೆಂಗಳೂರಿನಿಂದ ಶಬರಿಮಲೆಗೆ ಪ್ರವಾಸದ ಪ್ಯಾಕೇಜ್‌ ಸೌಲಭ್ಯ ಕಲ್ಪಿಸುತ್ತದೆ. ನಾಲ್ಕು ದಿನಗಳ ಪ್ರವಾಸಕ್ಕೆ ತಲಾ ₹ 2,400 ಶುಲ್ಕ ಭರಿಸಿದರೆ ಮುಗಿಯಿತು – ರೈಲು, ರಸ್ತೆ ಪ್ರಯಾಣ ಹಾಗೂ ವಸತಿ ಸೌಲಭ್ಯವನ್ನು ‘ಐಆರ್‌ಸಿಟಿಸಿ’ಯೇ ಒದಗಿಸುತ್ತದೆ. ‘ಐಆರ್‌ಸಿಟಿಸಿ’ಯಲ್ಲಿ ಸೀಟುಗಳು ಭರ್ತಿಯಾಗಿವೆ ಎಂದಾದರೆ ರಾಜ್ಯದಿಂದ ಕೇರಳದ ಎರ್ನಾಕುಲಂವರೆಗೆ ರೈಲು ಸೌಕರ್ಯ ಚೆನ್ನಾಗಿದೆ. ಅಲ್ಲಿಂದ ಶಬರಿಮಲೆಗೆ ಬೇಕಾದಷ್ಟು ಬಸ್‌ಗಳಿವೆ. ರೈಲು ಬೇಡವೆಂದರೆ ರಾಜ್ಯದ ಪ್ರಮುಖ ನಗರಗಳಿಂದ ಬಸ್‌ಗಳ ಸೌಲಭ್ಯವಿದೆ.

ಭಕ್ತರು ತುಂಬಾ ಹೊತ್ತು ಸರದಿಯಲ್ಲಿ ನಿಂತು ಆಯಾಸ ಪಡುವುದನ್ನು ತಪ್ಪಿಸಲು ಕೇರಳದ ಪೊಲೀಸರು ‘ವರ್ಚ್ಯುವಲ್‌ ಕ್ಯೂ’ ಎಂಬ ಆ್ಯಪ್‌ ಅಭಿವೃದ್ಧಿಪಡಿಸಿದ್ದಾರೆ. ಈ ಆ್ಯಪ್‌ ಮೂಲಕ ಪ್ರತಿದಿನ ಸುಲಭ ದರ್ಶನದ ಸಾವಿರಾರು ಕೂಪನ್‌ಗಳನ್ನು ಸೃಜಿಸಿ ಕೊಡಲಾಗುತ್ತದೆ. ಪಂಪಾ ನದಿತೀರಕ್ಕೆ ತಲುಪುವ ನಿಖರ ಸಮಯ ಗೊತ್ತಿದ್ದರೆ, ಆ ವೇಳೆಯಲ್ಲಿ ಕೂಪನ್‌ಗಳು ಲಭ್ಯವಿವೆಯೇ ಎಂದು ಆ್ಯಪ್‌ನಲ್ಲಿ ಪರಿಶೀಲಿಸಿ, ಹೆಸರು ನೋಂದಣಿ ಮಾಡಿಕೊಳ್ಳಬಹುದು. ಹನುಮನ ಬಾಲದಂತಹ ಸರದಿಯಲ್ಲಿ ಕಾಯುವುದನ್ನು ತಪ್ಪಿಸಿಕೊಂಡು ಸುಲಭವಾಗಿ ಅಯ್ಯಪ್ಪನ ದರ್ಶನ ಪಡೆಯಬಹುದು.

ರಾಜ್ಯದ ಯಾತ್ರಿಗಳು ಶಬರಿಮಲೆಗೆ ಹೋದಾಗ ತಂಗಲು ಸರ್ಕಾರ ₹ 20 ಕೋಟಿ ವೆಚ್ಚದಲ್ಲಿ ಯಾತ್ರಿ ಭವನ ನಿರ್ಮಿಸಲು ಮುಂದಾಗಿದೆ. ಆದರೆ, ಜೀವವೈವಿಧ್ಯದ ಈ ತಾಣದಲ್ಲಿ ನಿರ್ಮಾಣ ಕಾಮಗಾರಿಗಳಿಗೆ ಕಡಿವಾಣ ಹಾಕುವಂತೆ ಅಲ್ಲಿನ ಹೈಕೋರ್ಟ್‌ ನಿರ್ದೇಶನ ನೀಡಿದ್ದರಿಂದ ಯೋಜನೆ ನನೆಗುದಿಗೆ ಬಿದ್ದಿದೆ.

ಯಾತ್ರೆಗೆ ಹೋಗುವಾಗ ಭಕ್ತಿಯ ಪರಾಕಾಷ್ಠೆಯನ್ನೇ ಮೆರೆಯುವ ಜನ, ವಾಪಸು ಬರುವಾಗ ಅದೇ ಪ್ರಮಾಣದ ಮೋಜು ಬಯಸುತ್ತಾರೆ ಎನ್ನುವುದು ಲಾಗಾಯ್ತಿನಿಂದಲೂ ಕೇಳಿಬರುತ್ತಿರುವ ದೂರು. ಅವರು ಊರಿಗೆ ಮರಳುವಾಗ ಮೈಮರೆತು ವರ್ತಿಸುವುದರಿಂದ ಹೆಚ್ಚಿನ ರಸ್ತೆ ಅಪಘಾತಗಳು ಸಂಭವಿಸುತ್ತವೆ ಎನ್ನುವುದು ದೂರಿನ ಹಿಂದಿರುವ ಸಮರ್ಥನೆ.

ವಸತಿ ಸೌಲಭ್ಯ ಸರಿಯಾಗಿಲ್ಲ, ಚಳಿಗೆ ನಡುಗುವುದು ತಪ್ಪಲ್ಲ, ಪಂಪಾ ನದಿಯಲ್ಲಿ ಮುಳುಗದೆ ವಿಧಿಯಿಲ್ಲ, ಉದ್ದಕ್ಕೂ ಕಲ್ಲು–ಮುಳ್ಳಿನ ಹಾದಿಯೇ ಇದೆಯಲ್ಲ – ಇಂತಹ ಹತ್ತಾರು ಗೊಣಗಾಟಗಳು ಯಾತ್ರಿಗಳ ಪಾಲಿಗೆ ಗೌಣ. ಅಯ್ಯಪ್ಪನೇ ಅವರಿಗೆ ಪರಮಪ್ರಿಯ. ಹದಿನೆಂಟು ಮೆಟ್ಟಿಲುಗಳನ್ನೇರಿ, ಒಮ್ಮೆ ಸ್ವಾಮಿಯ ದರ್ಶನ ಪಡೆದು, ‘ಹರಿವರಾಸನಂ ವಿಶ್ವಮೋಹನಂ’ ಹಾಡು ಕೇಳುತ್ತಾ, ಅರವಣ ಪಾಯಸ ಮೆಲ್ಲುತ್ತಾ ತಂಗಾಳಿಗೆ ಮೈಯೊಡ್ಡಿದಾಗ ಶಬರಿಮಲೆಯೇ ಅವರ ಪಾಲಿಗೆ ಸ್ವರ್ಗ!

*
ಕಳೆದ ‘ಮಂಡಲಂ ಮಕರವಿಳಕ್ಕು’ ಋತುವಿನಲ್ಲಿ (2015ರ ನವೆಂಬರ್‌ನಿಂದ 2016ರ ಜನವರಿ) ದೇವಾಲಯದ ಹುಂಡಿಗಳಲ್ಲಿ  ₹ 175 ಕೋಟಿ ಸಂಗ್ರಹವಾಗಿತ್ತು. ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿಯಿಂದ ದೇಣಿಗೆ ಸಂಗ್ರಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು ಎಂಬ ಮುಂದಾಲೋಚನೆಯಿಂದ ಮಂಡಳಿ ಈಗ ‘ಇ–ಹುಂಡಿ’ ವ್ಯವಸ್ಥೆ ಮಾಡಿದೆ.

*
ಜಗತ್ತಿನಲ್ಲೇ ಅಪರೂಪವಾದ ಅಗಲಬಾಲದ ಪಕ್ಷಿಗಳು, ‘ಕೃಷ್ಣ ಪರುಂದು’ಗಳು (ಹದ್ದುಗಳು), ಮಲಬಾರ್‌ ಹಾರ್ನ್‌ಬಿಲ್‌ಗಳು, ನೀಲಗಿರಿ ಮುಸುವಗಳು, ದೈತ್ಯಗಾತ್ರದ ಅಳಿಲುಗಳ ಬಿಡಾರಗಳು ಇಲ್ಲಿವೆ. ಯಾತ್ರಿಗಳ ಅದೃಷ್ಟ ಚೆನ್ನಾಗಿದ್ದರೆ ಅಯ್ಯಪ್ಪ ಸ್ವಾಮಿಗಿಂತ ಮುಂಚೆಯೇ ಅವುಗಳ ದರ್ಶನ ಆಗುತ್ತದೆ. ಪಕ್ಷಿಪ್ರಿಯರು ಇಲ್ಲಿನ ಹುಲ್ಲುಗಾವಲು ಪ್ರದೇಶದಲ್ಲಿ ಅವುಗಳಿಗಾಗಿ ಜಪಿಸಿ ಕೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT