ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲದ ಆರೋಪಕ್ಕೂ ಶಿಕ್ಷೆಯಾಗಲಿ ಎಂದರು!

ಕಟಕಟೆ–45
Last Updated 17 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

2002ರಲ್ಲಿ ನಡೆದ ಘಟನೆ ಇದು. ಕೊಡಗು ಜಿಲ್ಲೆ ಕುಶಾಲನಗರದ ರಮ್ಯಾ, ಒಂಬತ್ತು ತಿಂಗಳ ಮಗುವಿನ ತಾಯಿ. ಅದಾಗಲೇ ಇನ್ನೊಮ್ಮೆ ಅವರು ಗರ್ಭವತಿಯಾದರು. ಇದನ್ನು ಆಕೆಯ ಗಂಡ ಹಾಗೂ ಅತ್ತೆ–ಮಾವ ಸಹಿಸದಾದರು. ಮೊದಲ ಮಗು ಇನ್ನೂ ಚಿಕ್ಕದಿರುವಾಗ ಮತ್ತೊಂದು ಮಗು ಬೇಡ ಎನ್ನುವುದು ಅವರ ಅಭಿಪ್ರಾಯ. ಆದರೆ ಮಾತೃ ಹೃದಯ ಕೇಳುತ್ತದೆಯೇ? ಮಗು ಹೊಟ್ಟೆಯಲ್ಲಿ ಬಿದ್ದಾಗಿದೆ, ಇದನ್ನು ಬೇಡವೆಂದರೆ ಹೇಗೆ ಎಂದ ರಮ್ಯಾ, ತಮಗೆ ಮಗು ಬೇಕೇ ಬೇಕೆಂದು ಹಟ ಹಿಡಿದರು.

ಇದೇ ವಿಷಯಕ್ಕೆ ಮನೆಯಲ್ಲಿ ಜಗಳವಾಯಿತು. ಜಗಳ ತಾರಕಕ್ಕೇರಿತು. ಜಪ್ಪಯ್ಯ ಎಂದರೂ ಮಗುವನ್ನು ತೆಗೆಸಲು ರಮ್ಯಾ ಒಪ್ಪಲಿಲ್ಲ. ಆದರೆ ಅದನ್ನು ತೆಗೆಸಿಯೇ ತೀರಬೇಕು ಎನ್ನುವುದು ಗಂಡನ ಮನೆಯವರ ಒತ್ತಾಯ. ಇದರಿಂದಾಗಿ ಗಂಡ ರಘು ಹಾಗೂ ಅತ್ತೆ–ಮಾವ, ರಮ್ಯಾ ಅವರ ಮೇಲೆ ಒತ್ತಡ ಹಾಕಲು ಶುರುವಿಟ್ಟುಕೊಂಡರು. ಗರ್ಭಪಾತ ಮಾಡಿಸಲೇಬೇಕೆಂದು ತಾಕೀತು ಮಾಡಿದರು.

ಹೀಗೆ, ಇವರ ನಡುವೆ ಗಲಾಟೆ ನಡೆಯುತ್ತಿರುವಾಗಲೇ ಅದೊಂದು ದಿನ ರಮ್ಯಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಮ್ಯಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವಿಷ ಇಡೀ ದೇಹವನ್ನು ಆಕ್ರಮಿಸಿದ್ದ ಕಾರಣ ರಮ್ಯಾ ಆಸ್ಪತ್ರೆಗೆ ದಾಖಲಿಸುವ ಮೊದಲೇ ತೀರಿಕೊಂಡರು.

ತಮ್ಮ ಮಗಳು ಸತ್ತುಹೋದ ಸುದ್ದಿಯಿಂದ ಅವರ ಪೋಷಕರಿಗೆ ಆಘಾತವಾಯಿತು. ಈ ಸುದ್ದಿಯನ್ನು ನಂಬುವ ಸ್ಥಿತಿಯಲ್ಲಿ ಅವರು ಇರಲಿಲ್ಲ. ಆಕೆಯ ಸಾವಿನ ಹಿಂದೆ ಗಂಡನ ಮನೆಯವರದ್ದೇ ಕೈವಾಡ ಇದೆ ಎಂಬ ಶಂಕೆ ಅವರಲ್ಲಿ ಮೂಡಿತು. ಆದ್ದರಿಂದ ಅವರು  ಮಗಳ ಸಾವಿಗೆ ಗಂಡನ ಮನೆಯವರೇ ಕಾರಣ ಎಂದು ಪೊಲೀಸರಲ್ಲಿ ದೂರು ದಾಖಲು ಮಾಡಿದರು.

‘ತಮ್ಮ ಮಗಳಿಗೆ ರಘು ಹಾಗೂ ಅವರ ಅಪ್ಪ–ಅಮ್ಮ ಚಿತ್ರಹಿಂಸೆ ನೀಡಿದ್ದಾರೆ, ವರದಕ್ಷಿಣೆ ತರುವಂತೆ ಆಕೆಯನ್ನು ಪೀಡಿಸುತ್ತಿದ್ದರು, ಇದೇ ಕಾರಣಕ್ಕೆ ದೌರ್ಜನ್ಯ ಎಸಗಿದ್ದಾರೆ...’ ಎಂದೆಲ್ಲಾ ರಮ್ಯಾ ಅವರ ಪೋಷಕರು ಗಂಡ, ಅತ್ತೆ ಹಾಗೂ ಮಾವನ ವಿರುದ್ಧ ದೂರು ದಾಖಲು ಮಾಡಿದರು.

ಮುಂದಿನದ್ದು ಪೊಲೀಸ್‌ ತನಿಖೆ. ರಮ್ಯಾ ಅವರ ಮರಣೋತ್ತರ ಪರೀಕ್ಷೆಯಲ್ಲಿ ಆಕೆಗೆ ಗರ್ಭಪಾತ ಮಾಡಿಸಿದ ವಿಷಯ ಪೊಲೀಸರಿಗೆ ತಿಳಿಯಿತು. ಅದರ ಬೆನ್ನತ್ತಿ ಪೊಲೀಸರು ಹೋದಾಗ ಮಗುವಿನ ವಿಷಯದಲ್ಲಿ ಮನೆಯಲ್ಲಿ ಜಗಳವಾಗಿದ್ದು, ಆಕೆ ಗರ್ಭಪಾತಕ್ಕೆ ಒಪ್ಪದೇ ಇದ್ದುದು, ಆದರೂ ಗಂಡನ ಮನೆಯವರೆಲ್ಲಾ ಸೇರಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯ ಮಾಡಿದ್ದು ಎಲ್ಲವೂ ಅಕ್ಕಪಕ್ಕದ ಮನೆಯವರಿಂದ ತಿಳಿಯಿತು. ಗರ್ಭಪಾತಕ್ಕೆ ರಮ್ಯಾ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ ಆಕೆಯ ಗರ್ಭಪಾತ ಆಗಿರುವ ವಿಷಯವೊಂದೇ ಪೊಲೀಸರಿಗೆ ಇಲ್ಲಿ ಏನೋ ಎಡವಟ್ಟು ನಡೆದಿದೆ ಎಂದು ಅಂದುಕೊಳ್ಳಲು ಸಾಕಾಯಿತು.

ಇನ್ನೇನು ಬೇಕು? ಪೊಲೀಸರು ಮೂವರ ವಿರುದ್ಧ ದೋಷಾರೋಪ ಪಟ್ಟಿ ತಯಾರಿಸಿ ಕೋರ್ಟ್‌ಗೆ ಸಲ್ಲಿಸಿದರು. ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಹಾಗೂ ಆತ್ಮಹತ್ಯೆಗೆ ಕುಮ್ಮಕ್ಕು... ಹೀಗೆ ಭಾರತೀಯ ದಂಡ ಸಂಹಿತೆಯ ಮೂರು ಕಲಮುಗಳ ಅಡಿ ಮೂವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಯಿತು.

ಸೆಷನ್ಸ್‌ ಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು. ಪ್ರತಿಯೊಂದು ದಾಖಲೆ, ಎಲ್ಲಾ ಸಾಕ್ಷ್ಯಾಧಾರಗಳು ಈ ಮೂವರು ಆರೋಪಿಗಳ ವಿರುದ್ಧವಾಗಿಯೇ ಇದ್ದವು.  ಅಕ್ಕಪಕ್ಕದ ಮನೆಯವರು ಕೂಡ ಆರೋಪಿಗಳ ವಿರುದ್ಧವಾಗಿಯೇ ಹೇಳಿಕೆ ನೀಡಿದರು,  ಗರ್ಭಪಾತದ ವಿಷಯದಲ್ಲಿ ಗಲಾಟೆ ಆಗಿದ್ದನ್ನೂ ತಿಳಿಸಿದರು.

‘ಗರ್ಭಪಾತ ಇಷ್ಟ ಇಲ್ಲದಿದ್ದರೆ ನೀನು ಸಾಯಿ ಹೋಗು’ ಎಂದು ಪದೇ ಪದೇ ರಮ್ಯಾ ಅವರಿಗೆ ಗಂಡನ ಮನೆಯವರು ಹೇಳುತ್ತಿದ್ದುದಾಗಿ ಒಬ್ಬರು ಹೇಳಿಕೆ ನೀಡಿದರು. ಇದರಿಂದ ನೊಂದು ರಮ್ಯಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿಸಿದರು. ಈ ಎಲ್ಲಾ ಹೇಳಿಕೆಗಳನ್ನು ದಾಖಲಿಸಿಕೊಂಡ ನ್ಯಾಯಾಧೀಶರು ಮೇಲೆ ತಿಳಿಸಿದ ಮೂರೂ ಆರೋಪಗಳ ಅಡಿ ತಲಾ ಐದು ವರ್ಷಗಳ ಶಿಕ್ಷೆ ವಿಧಿಸಿದರು.

ಈ ಆದೇಶ ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಅವರ ಪರವಾಗಿ ವಕಾಲತ್ತು ವಹಿಸುವಂತೆ ಅವರ ಸಂಬಂಧಿಯೊಬ್ಬರು ನನ್ನನ್ನು ಕೇಳಿಕೊಂಡಿದ್ದರಿಂದ ಅದಕ್ಕೆ ಒಪ್ಪಿಕೊಂಡೆ.

ದಾಖಲೆಗಳನ್ನು ಪರಿಶೀಲಿಸಿದಾಗ ಶಿಕ್ಷೆಯಿಂದ ಅವರನ್ನು ಬಚಾವು ಮಾಡುವುದು ಸ್ವಲ್ಪ ಕಷ್ಟವೇ ಎನ್ನಿಸಿತು. ಏಕೆಂದರೆ ಎಲ್ಲಾ ಸಾಕ್ಷ್ಯಾಧಾರಗಳೂ ಅವರ ವಿರುದ್ಧ ಆಗಿದ್ದವು. ಗರ್ಭಪಾತ ಮಾಡಿಸಿದುದಕ್ಕೆ ವೈದ್ಯಕೀಯ ವರದಿಯೂ ಇತ್ತು. ಹಾಗೆಂದು ನಾನು ಸುಮ್ಮನೇ ಕುಳಿತುಕೊಳ್ಳಲು ಆಗುವುದಿಲ್ಲವಲ್ಲ, ಕಕ್ಷಿದಾರರನ್ನು ಬಚಾವು ಮಾಡಲೇಬೇಕು. ಆದ್ದರಿಂದ ಇವರನ್ನು ಬಚಾವು ಮಾಡಲು ಏನಾದರೂ ಸಣ್ಣ ಸುಳಿವು ಸಿಗಬಹುದೇ ಎಂದು ನೋಡಿದೆ. ಸೆಷನ್ಸ್‌ ಕೋರ್ಟ್‌ನಲ್ಲಿ ಹೇಳಿಕೆ ನೀಡಿದ ಎಲ್ಲಾ ಸಾಕ್ಷಿದಾರರ ಹೇಳಿಕೆಗಳನ್ನು ಸೂಕ್ಷ್ಮವಾಗಿ ಓದಿದೆ. ಅಂತಹ ಗಂಭೀರವಾಗಿರುವಂಥ ಯಾವ ಸುಳಿವೂ ಸಿಗಲಿಲ್ಲ.

ಆದರೆ ಒಂದೇ ಒಂದು ಚಿಕ್ಕ ಸುಳಿವು ಸಿಕ್ಕಿತು. ಅದೇನೆಂದರೆ, ‘ನಿನಗೆ ಮಗು ಬೇಕೇಬೇಕು ಎಂದಾದರೆ ಸಾಯಿ ಹೋಗು ಎಂದು ರಮ್ಯಾ ಗಂಡನ ಮನೆಯವರು ಪದೇ ಪದೇ ಹೇಳುತ್ತಿದ್ದರು. ಈ ಮೂಲಕ ಎಲ್ಲರೂ ಆಕೆಗೆ ಸಾಯಲು ಪ್ರಚೋದನೆ ನೀಡಿದರು’ ಎಂದು ಒಬ್ಬರು ಹೇಳಿಕೆ ನೀಡಿದ್ದನ್ನು ನಾನು ನೋಡಿದೆ. ಈ ಹೇಳಿಕೆ ಆಧಾರದ ಮೇಲೆ ಸೆಷನ್ಸ್‌ ಕೋರ್ಟ್‌ ‘ಆತ್ಮಹತ್ಯೆಗೆ ಪ್ರಚೋದನೆ’ ಕಲಮಿನ ಅಡಿ ಶಿಕ್ಷೆ ವಿಧಿಸಿತ್ತು.

ಆಗ ನನಗೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪೊಂದು ನೆನಪಿಗೆ ಬಂತು. ಆ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌, ‘ನೀನು ಸಾಯಿ ಹೋಗು ಎಂದ ಮಾತ್ರಕ್ಕೆ ಅದು ಆತ್ಮಹತ್ಯೆಗೆ ಪ್ರಚೋದನೆ ಎನ್ನಲಾಗದು. ಆ ಆರೋಪದ ಅಡಿ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗದು’ ಎಂದು ಸ್ಪಷ್ಟಪಡಿಸಿತ್ತು. ಅದನ್ನೇ ನಾನು ನ್ಯಾಯಮೂರ್ತಿಗಳ ಮುಂದಿಟ್ಟೆ. ರಮ್ಯಾ ಅತ್ತೆ–ಮಾವ ಅವರ ಮೇಲೆ ದೌರ್ಜನ್ಯ ಎಸಗಿದ್ದನ್ನು ಹಾಗೂ ವರದಕ್ಷಿಣೆ ಕಿರುಕುಳ ನೀಡಿದ್ದನ್ನು ಪುಷ್ಟೀಕರಿಸುವ ಸಾಕ್ಷ್ಯಾಧಾರಗಳು ಇಲ್ಲ ಎಂಬ ಬಗ್ಗೆಯೂ ವಿವರಣೆ ನೀಡಿದೆ. ಆ ನನ್ನ ವಾದ, ಮೂವರು ಆರೋಪಿಗಳಿಗೆ ಜಾಮೀನು ದೊರಕಿಸಿಕೊಡಲು ಸಾಕಾಯಿತು. ನ್ಯಾಯಮೂರ್ತಿಗಳು ಮೂವರಿಗೂ ಜಾಮೀನು ನೀಡಿ ಆದೇಶಿಸಿದರು. ಮೂವರೂ ಜೈಲಿನಿಂದ ಬಿಡುಗಡೆಗೊಂಡರು.

ಅಲ್ಲಿಗೆ ಒಂದು ಹಂತ ಮುಗಿಯಿತು. ಆದರೆ ಮುಂದಿನದ್ದು ನನ್ನ ಕಕ್ಷಿದಾರರನ್ನು ನಿರಪರಾಧಿಗಳು ಎಂದು ಸಾಬೀತು ಮಾಡುವುದು. ಅಲ್ಲಿಯವರೆಗೆ ನಾನು ಆರೋಪಿಗಳನ್ನು ನೇರಾನೇರ ಭೇಟಿ ಮಾಡಿರಲಿಲ್ಲ. ಏನಿದ್ದರೂ ದಾಖಲೆಗಳನ್ನು ನೋಡಷ್ಟೇ ವಾದ ಮಂಡಿಸಿದ್ದೆ. ಏಕೆಂದರೆ ಶೀಘ್ರದಲ್ಲಿ ಅವರಿಗೆ ಜಾಮೀನು ದೊರಕಿಸಿಕೊಡಬೇಕಿತ್ತು. ಆನಂತರ ಮುಂದಿನ ಪ್ರಕ್ರಿಯೆ ನಡೆಯಬೇಕಿತ್ತು. ಆದ್ದರಿಂದ ಅದುವರೆಗೆ ನನಗೆ ನಿಜ ಏನು ಎಂದು ತಿಳಿದಿರಲಿಲ್ಲ. ನಿಜವಾಗಿ ನಡೆದುದು ಏನು, ಆಕೆಯ ಸಾವಿನ ಕಾರಣವೇನು ಎಂಬ ಸಂಪೂರ್ಣ ಸತ್ಯ ತಿಳಿದ ಮೇಲಷ್ಟೇ ನನ್ನ ಕಕ್ಷಿದಾರರ ಪರವಾಗಿ ವಾದ ಮಂಡಿಸಬೇಕಿತ್ತು.

ಆದ್ದರಿಂದ ಆರೋಪಿಗಳನ್ನು ಭೇಟಿ ಮಾಡಿದೆ. ರಮ್ಯಾ ಸತ್ತ ದಿನ ತಾವು ಊರಿನಲ್ಲಿ ಇರಲಿಲ್ಲ ಎಂದು ರಘು ಹೇಳಿದರೆ, ಆಕೆಗೆ ತಾವು ಯಾವುದೇ ರೀತಿಯ ಚಿತ್ರಹಿಂಸೆ ನೀಡಲಿಲ್ಲ, ಮಗು ಬೇಡವೆಂದು ಒತ್ತಾಯ ಮಾಡಿದ್ದೆವು ಅಷ್ಟೆ ಎಂದು ಅತ್ತೆ–ಮಾವ ಹೇಳಿದರು. ಆದರೆ ಆಕೆಯ ಇಚ್ಛೆಗೆ ವಿರುದ್ಧವಾಗಿ ಗರ್ಭಪಾತ ಮಾಡಿಸಿದ್ದು ಹೌದು ಎಂದು ರಘು ಒಪ್ಪಿಕೊಂಡರು. ಆದರೆ ಈ ಒಂದು ಚಿಕ್ಕ ಕಾರಣಕ್ಕೆ ರಮ್ಯಾ ಆತ್ಮಹತ್ಯೆಯಂಥ ಹಾದಿ ತುಳಿದಿರಲು ಸಾಧ್ಯವಿಲ್ಲ ಎಂದೂ ಅವರು ಹೇಳಿದರು.

ಇದನ್ನು ನಾನು ನಂಬಲೇಬೇಕಿತ್ತು. ಬೇರೆ ದಾರಿ ಇರಲಿಲ್ಲ. ಅಷ್ಟಕ್ಕೂ ಕಕ್ಷಿದಾರರು ತಮ್ಮ ವಕೀಲರ ಬಳಿ ಸುಳ್ಳು ಹೇಳುವುದಿಲ್ಲ ಎಂಬ ವಿಶ್ವಾಸ ಎಲ್ಲಾ ವಕೀಲರಲ್ಲೂ ಇದ್ದೇ ಇರುತ್ತದಲ್ಲ. ಆದರೆ ಇದನ್ನು ಕೋರ್ಟ್‌ನಲ್ಲಿ ಸಾಬೀತು ಮಾಡಲು ಸಾಕ್ಷ್ಯಾಧಾರಗಳು ಬೇಕಿತ್ತು. ಅದಕ್ಕಾಗಿ ಪುನಃ ಸೆಷನ್ಸ್‌ ಕೋರ್ಟ್‌ ಪ್ರಕ್ರಿಯೆಯನ್ನು ಮತ್ತೊಮ್ಮೆ ಪರಿಶೀಲಿಸಿದೆ.

ಈ ಮೊದಲು ಕಾಣದಿದ್ದ ಇನ್ನೊಂದು ಚಿಕ್ಕ ಸುಳಿವು ಅದರಲ್ಲಿ ನನಗೆ ಕಂಡಿತು. ಅದೇನೆಂದರೆ ರಮ್ಯಾ ಅವರಿಗೆ ವಿಪರೀತ ಹೊಟ್ಟೆನೋವಿನ ಸಮಸ್ಯೆ ಇದ್ದ ವಿಷಯ. ಅದನ್ನು ಅವರು ತಮ್ಮ ಪಕ್ಕದ ಮನೆಯ ಗೌರಿ ಎನ್ನುವವರಲ್ಲಿ ಆಗಾಗ ಹೇಳಿಕೊಳ್ಳುತ್ತಿದ್ದರು. ಗೌರಿ ಅವರು ಸೆಷನ್ಸ್‌ ಕೋರ್ಟ್‌ನಲ್ಲಿ ಸಾಕ್ಷಿ ನುಡಿಯುವಾಗ ಈ ವಿಷಯ ಪ್ರಸ್ತಾಪಿಸಿದ್ದರು. ಆದರೆ ಅವರ ಹೇಳಿಕೆಯನ್ನು ಕೋರ್ಟ್‌ ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ.  ನನಗೆ ಈ ಹೇಳಿಕೆಯಷ್ಟೇ ಸಾಕಾಯಿತು. ನನ್ನ ವಾದಕ್ಕೆ ಅದು ಇನ್ನಷ್ಟು ಜೀವ ತುಂಬಬಹುದು ಎನ್ನಿಸಿತು. ಹೊಟ್ಟೆನೋವಿನ ವಿಷಯದ  ಬಗ್ಗೆ ವಿಚಾರ ಮಾಡಿದಾಗ ಇನ್ನಷ್ಟು ಸಂಗತಿಗಳು ನನಗೆ ಸಿಕ್ಕವು. ಅದೇನೆಂದರೆ ರಮ್ಯಾ ಅವರಿಗೆ ಹೊಟ್ಟೆನೋವಿನ ಸಮಸ್ಯೆ ಮದುವೆಗೆ ಮುಂಚಿನಿಂದಲೂ ಇತ್ತು. ಆದರೆ ಈ ವಿಷಯವನ್ನು ಆಕೆಯ ಪೋಷಕರು ಮರೆಮಾಚಿ ಮದುವೆ ಮಾಡಿದ್ದರು ಎಂಬುದು.

ಇದೇ ವಿಷಯವನ್ನು ಕೋರ್ಟ್‌ ಗಮನಕ್ಕೆ ತಂದೆ. ಅದಕ್ಕೆ ಪೂರಕ ಎನಿಸುವ ಒಂದಿಷ್ಟು ಅಂಶಗಳನ್ನು ಹೇಳಿದೆ. ಹೊಟ್ಟೆನೋವು ತಾಳಲಾರದೇ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಅಲ್ಲಿಗೆ ಸಾಬೀತಾಯಿತು. ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ದೌರ್ಜನ್ಯ ಆರೋಪಗಳು ಸುಳ್ಳು ಎನ್ನುವುದನ್ನು ಕೂಡ ಕೆಲವು ಸಾಕ್ಷ್ಯಾಧಾರಗಳ ಸಹಿತವಾಗಿ ವಿವರಿಸಿದೆ. ಇದನ್ನು ಕೋರ್ಟ್‌ ಮಾನ್ಯ ಮಾಡಿತು. ಶಿಕ್ಷೆ ನೀಡಿದ್ದ ಸೆಷನ್ಸ್‌ ಕೋರ್ಟ್‌ ಆದೇಶವನ್ನು ಹೈಕೋರ್ಟ್‌ ರದ್ದು ಮಾಡಿತು. ಮೂವರ ಮೇಲಿದ್ದ ಆರೋಪಗಳು (ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಹಾಗೂ ಆತ್ಮಹತ್ಯೆಗೆ ಕುಮ್ಮಕ್ಕು) ರದ್ದಾದವು.

ಇರುವ ಆರೋಪಗಳೆಲ್ಲಾ ರದ್ದಾದ ಮೇಲೆ ಮೂವರೂ ಬಿಡುಗಡೆಗೊಂಡರು ಎಂದು ನೀವಂದುಕೊಂಡರೆ ಅದು ತಪ್ಪು. ಏಕೆಂದರೆ ಇಲ್ಲೇ ಇರುವುದು ಕುತೂಹಲಕರ ತಿರುವು. ಅದೇನೆಂದರೆ ರಮ್ಯಾ ಅವರ ಅತ್ತೆ–ಮಾವ ಅಷ್ಟೆ ಬಿಡುಗಡೆಗೊಂಡರು. ರಘುವಿಗೆ ಮಾತ್ರ ಹೈಕೋರ್ಟ್‌ ಶಿಕ್ಷೆ ಕೊಟ್ಟಿತು, ಅದೂ ಅವರ ಮೇಲೆ ಇಲ್ಲದ ಆರೋಪಕ್ಕೆ!

ಹೌದು. ಇದು ಅಪರೂಪ ಎನ್ನಬಹುದಾದ ಪ್ರಕರಣ. ಮೂರೂ ಆರೋಪಗಳಿಂದ ರಘು ಕೂಡ ಮುಕ್ತಗೊಂಡಿದ್ದರೂ, ಅವರು ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಗರ್ಭಪಾತ ಮಾಡಿಸಿದ್ದರಿಂದ ‘ಗರ್ಭಪಾತ ನಿಯಂತ್ರಣ ಕಾಯ್ದೆ’ ಅಡಿ ನ್ಯಾಯಮೂರ್ತಿಗಳು ಅವರಿಗೆ ಎರಡು ವರ್ಷಗಳ ಶಿಕ್ಷೆ ವಿಧಿಸಿದರು. ಅವರ ವಿರುದ್ಧ ಪೊಲೀಸರು ಈ ಆರೋಪದ ಅಡಿ ದೋಷಾರೋಪ ಪಟ್ಟಿ ಸಲ್ಲಿಸಿರಲಿಲ್ಲ. ಆದರೂ ಕೋರ್ಟ್‌ ಶಿಕ್ಷೆ ವಿಧಿಸಿತು.

ದಾಖಲಾಗದ ಆರೋಪದ ಅಡಿ ಶಿಕ್ಷೆ ವಿಧಿಸಿದ್ದರಿಂದ ಈ  ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರೆ, ರಘು ಬಿಡುಗಡೆಗೊಳ್ಳುವ ಎಲ್ಲಾ ಸಾಧ್ಯತೆಯೂ ಇತ್ತು. ನಾನು ಕೂಡ ಅದನ್ನೇ ರಘು ಅವರಿಗೆ ಹೇಳಿದೆ. ಆದರೆ ಅವರು ಹೇಳಿದ ಮಾತು ಮಾತ್ರ ನನ್ನನ್ನು ಇದುವರೆಗೂ ಕಾಡುತ್ತಿದೆ. ಅದೇನೆಂದರೆ, ‘ಬೇಡ ಸರ್‌... ನನ್ನ ಪರವಾಗಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಬಹುದೇನೊ. ಆದರೆ ನಾನು ತಪ್ಪು ಮಾಡಿದ್ದೇನೆ. ನನ್ನ ಹೆಂಡತಿಯ ಆಸೆಗೆ ವಿರುದ್ಧವಾಗಿ ನಡೆದುಕೊಂಡೆ. ಅವಳಿಗೆ ಗರ್ಭಪಾತ ಮಾಡಿಸಿದೆ. ಅವಳು ಆತ್ಮಹತ್ಯೆ ಮಾಡಿಕೊಂಡಿದ್ದು ಹೊಟ್ಟೆನೋವಿನಿಂದಲೇ ಇರಬಹುದು. ಆದರೆ ಗರ್ಭಪಾತ ಮಾಡಿಸಿದ ನೋವು ಮಾತ್ರ ನನ್ನನ್ನು ಕಾಡುತ್ತಿದೆ. ನನ್ನ ಈ ತಪ್ಪಿಗೆ ಕೋರ್ಟ್‌ ಸರಿಯಾದ ಶಿಕ್ಷೆ ನೀಡಿದೆ’ ಎಂದು ಜೈಲಿಗೆ ಹೋದರು!
ಲೇಖಕ ಹೈಕೋರ್ಟ್‌ ವಕೀಲ
(ಎಲ್ಲರ ಹೆಸರು ಬದಲಾಯಿಸಲಾಗಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT