ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚತುರ ಸಂಧಾನಕಾರ ಟಿಲ್ಲರ್‌ಸನ್

ವ್ಯಕ್ತಿ
Last Updated 17 ಡಿಸೆಂಬರ್ 2016, 20:11 IST
ಅಕ್ಷರ ಗಾತ್ರ

ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯಾವುದೇ ನಿರ್ಧಾರ ಅಚ್ಚರಿ ಹುಟ್ಟಿಸುವುದಿಲ್ಲ. ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೇ ದೊಡ್ಡ ಅಚ್ಚರಿ ಮತ್ತು ಅನಿರೀಕ್ಷಿತ. ಹಾಗಾಗಿ ಮುಂದಿನ ನಿರ್ಧಾರಗಳೆಲ್ಲವೂ ಅನಿರೀಕ್ಷಿತ ಮತ್ತು ಅಚ್ಚರಿದಾಯಕ ಆಗದೇ ಇದ್ದರೆ ಮಾತ್ರ ಅಚ್ಚರಿ.

ರಾಜಕೀಯದಲ್ಲಿ ಯಾವ ಅನುಭವವೂ ಇಲ್ಲದ ಉದ್ಯಮಿ ಟ್ರಂಪ್, ಜಗತ್ತಿನ ಇನ್ನೊಂದು ಪ್ರಭಾವಿ ಹುದ್ದೆಯಾದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆ ಮಾಡಿದ್ದು ಇನ್ನೊಬ್ಬ ಉದ್ಯಮಿ ರೆಕ್ಸ್ ಟಿಲ್ಲರ್‌ಸನ್ ಅವರನ್ನು. ಜಗತ್ತಿನ ಆರನೇ ಅತ್ಯಂತ ದೊಡ್ಡ ಕಂಪೆನಿ ಎಕ್ಸಾನ್ ಮೊಬಿಲ್‌ನ ಅಧ್ಯಕ್ಷ ಟಿಲ್ಲರ್‌ಸನ್. ಈ ಆಯ್ಕೆಗೆ ಕಾರಣವೇನು ಎಂಬುದನ್ನು ಟ್ರಂಪ್ ಎಲ್ಲೂ ಹೇಳಿಲ್ಲ. ಆದರೆ ಆಯ್ಕೆಯ ಹಿಂದೆ ಇರುವ ಮುಖ್ಯ ಕಾರಣ ಅಮೆರಿಕದ ಪರಂಪರಾಗತ ವೈರಿ ರಷ್ಯಾ ಎಂಬ ವಾದ ಇದೆ.

1975ರಿಂದಲೇ ಎಕ್ಸಾನ್ ಮೊಬಿಲ್‌ನಲ್ಲಿ ಕೆಲಸ ಮಾಡುತ್ತಿರುವ ಟಿಲ್ಲರ್‌ಸನ್‌ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆತ್ಮೀಯ ಗೆಳೆಯ. ಪುಟಿನ್ ಅವರ ಮತ್ತೊಬ್ಬ ಗೆಳೆಯ ಐಗೊರ್ ಸೆಚಿನ್ ನೇತೃತ್ವದ ರಾಸ್‌ನೆಫ್ಟ್ ಕಂಪೆನಿಯ ಜತೆ ಸೇರಿ ರಷ್ಯಾದಲ್ಲಿ ಎಕ್ಸಾನ್ ಮೊಬಿಲ್ ಹಲವು ಸಹಭಾಗಿ ತೈಲ ಯೋಜನೆಗಳನ್ನು ಹೊಂದಿದೆ. ಆದರೆ ಅವೆಲ್ಲವೂ ಈಗ ಸ್ಥಗಿತಗೊಂಡಿವೆ. ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ನಂತರ 2014ರಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ರಷ್ಯಾದ ಜತೆಗಿನ ತೈಲ ವ್ಯವಹಾರಗಳ ಮೇಲೆ ನಿರ್ಬಂಧ ಹೇರಿದ್ದಾರೆ. ಅದು ಈಗಲೂ ಜಾರಿಯಲ್ಲಿದೆ.

2013ರಲ್ಲಿ ಟಿಲ್ಲರ್‌ಸನ್‌ಗೆ ರಷ್ಯಾದ ‘ಆರ್ಡರ್ ಆಫ್ ಫ್ರೆಂಡ್‌ಶಿಫ್’ ಪ್ರಶಸ್ತಿ ನೀಡಿ ಪುಟಿನ್ ಗೌರವಿಸಿದ್ದಾರೆ. ಈ ಪ್ರಶಸ್ತಿ ನೀಡಲು ದೊಡ್ಡ ಮಾನದಂಡಗಳೇನೂ ಇಲ್ಲ. ಪುಟಿನ್ ಅವರಿಗೆ ಇಷ್ಟವಿರುವ ಯಾವುದೇ ವ್ಯಕ್ತಿಗೆ ಈ ಪ್ರಶಸ್ತಿಯನ್ನು ಯಾವಾಗ ಬೇಕಾದರೂ ನೀಡಬಹುದು.

ಟ್ರಂಪ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೆ ರಷ್ಯಾ ತೆರೆಯ ಹಿಂದೆ ಮತ್ತು ಮುಂದೆ ಸಾಕಷ್ಟು ಕೆಲಸ ಮಾಡಿದೆ ಎಂದು ಹೇಳಲಾಗುತ್ತಿದೆ. ನಾಲ್ಕು ಬಾರಿ ದಿವಾಳಿತನ ಘೋಷಿಸಿಕೊಂಡಿರುವ ಟ್ರಂಪ್ ಅವರ ಯೋಜನೆಗಳಿಗೆ ಅಮೆರಿಕದ ಬ್ಯಾಂಕುಗಳು ಸಾಲ ನೀಡದ ಒಂದು ಕಾಲ ಇತ್ತು. ಆಗ ಪುಟಿನ್ ಅವರ ಆತ್ಮೀಯ ವಲಯದ ವ್ಯಕ್ತಿಗಳು ಮತ್ತು ಸಂಸ್ಥೆಗಳು ಟ್ರಂಪ್ ಅವರ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆ ಮಾಡಿದ್ದಾರೆ.

ರಷ್ಯಾವನ್ನು ಅಸ್ಪೃಶ್ಯ ದೇಶವಾಗಿ ಯಾಕೆ ನೋಡಬೇಕು, ನ್ಯಾಟೊ ಪಡೆಗಳ ವೆಚ್ಚದಲ್ಲಿ ಬಹುಭಾಗವನ್ನು ಅಮೆರಿಕ ಯಾಕೆ ಭರಿಸಬೇಕು, ಮಧ್ಯಪ್ರಾಚ್ಯದಲ್ಲಿ ಇಸ್ಲಾಮಿಕ್ ಸ್ಟೇಟ್‌ನಂತಹ ಉಗ್ರರ ವಿರುದ್ಧ ಹೋರಾಡಲು ರಷ್ಯಾ ಜತೆ ಕೈಜೋಡಿಸಿದರೆ ತಪ್ಪೇನು ಎಂಬಂತಹ ಪ್ರಶ್ನೆಗಳನ್ನು ಟ್ರಂಪ್ ಕೇಳಿದ್ದಾರೆ. ಬಹುಶಃ ಇದು ಅವರ ವಿದೇಶಾಂಗ ನೀತಿಯನ್ನು ನಿರ್ಧರಿಸುವ ಅಂಶಗಳಾಗಬಹುದು. ಅದರ ಭಾಗವಾಗಿಯೇ ಟಿಲ್ಲರ್‌ಸನ್ ನೇಮಕ ಆಗಿರಬಹುದು.

64 ವರ್ಷದ ಟಿಲ್ಲರ್‌ಸನ್‌ಗೆ ದುಂಡು ಮೇಜಿನ ಮುಂದೆ ಕುಳಿತು ರಾಜಕೀಯ ಒಪ್ಪಂದಗಳನ್ನು ಮಾಡಿದ ಅನುಭವ ಇಲ್ಲ ಎಂಬುದು ಅವರ ಹಿನ್ನೆಲೆ ನೋಡಿದರೆ ಕೊರತೆ ಎಂದು ಅನಿಸದು. 50ಕ್ಕೂ ಹೆಚ್ಚು ದೇಶಗಳಲ್ಲಿ ಸಾಮ್ರಾಜ್ಯ ವಿಸ್ತರಿಸಿರುವ ಎಕ್ಸಾನ್ ಮೊಬಿಲ್, ರಷ್ಯಾದ ಪೂರ್ವ ತುದಿಯ ಸಖಲಿನ್ ಮಂಜುಗಡ್ಡೆ ದ್ವೀಪದಿಂದ ಮಧ್ಯ ಆಫ್ರಿಕಾದ ಕಡು ಬಡ ದೇಶ ಚಾಡ್‌ವರೆಗೆ ವಿಸ್ತರಿಸಿದೆ. ಪುಟಿನ್‌ರಿಂದ ಹಿಡಿದು ವೆನೆಜುವೆಲಾದ ಹ್ಯೂಗೊ ಚಾವೆಜ್ ಅವರವರೆಗೆ ಭಿನ್ನ ಧ್ರುವಗಳಂತಿರುವ ಜನರ ಜತೆಗೆ ಟಿಲ್ಲರ್‌ಸನ್ ಯಶಸ್ವಿ ಸಂಧಾನ ನಡೆಸಿ ತಮ್ಮ ವ್ಯಾಪಾರ ವೃದ್ಧಿಸಿಕೊಂಡಿದ್ದಾರೆ.

ಚತುರ ಸಂಧಾನಕಾರ ಟಿಲ್ಲರ್‌ಸನ್, ವಿದೇಶಾಂಗ ನೀತಿಗೆ, ವ್ಯವಹಾರಕ್ಕೆ ವ್ಯಾಪಾರದ ವೃತ್ತಿಪರತೆ ತರಬಹುದು. ಲಾಭದ ಮೇಲೆಯೇ ಕಣ್ಣಿರುವ ಈ ವ್ಯಾಪಾರಿ, ಅಮೆರಿಕಕ್ಕೆ ಲಾಭ ತರದ ಯಾವ ವ್ಯವಹಾರಕ್ಕೂ ಕೈ ಹಾಕದಿರಬಹುದು.

ಆದರೆ ಇದು ಅಷ್ಟು ಸುಲಭವಲ್ಲ. ಜಗತ್ತಿನಾದ್ಯಂತ ಅಮೆರಿಕವೇ ಸೃಷ್ಟಿಸಿಕೊಂಡಿರುವ ಹಲವು ಸಿಕ್ಕುಗಳಿಂದ ಸುಲಭವಾಗಿ ಬಿಡಿಸಿಕೊಳ್ಳಲಾಗದು. ಅದರ ಜತೆಗೆ ಟಿಲ್ಲರ್‌ಸನ್ ಅವರೂ ಒಂದು ಸಿಕ್ಕು ಸೃಷ್ಟಿಸಿದ್ದಾರೆ. ಒಬಾಮ ಹೇರಿರುವ ನಿರ್ಬಂಧಗಳಿಂದಾಗಿ ಎಕ್ಸಾನ್ ಮೊಬಿಲ್‌ನ ರಷ್ಯಾದ ಹೂಡಿಕೆ ತ್ರಿಶಂಕು ಸ್ಥಿತಿಯಲ್ಲಿದೆ. ಈ ನಿರ್ಬಂಧ ಹೇರಿಕೆ ಸಂದರ್ಭದಲ್ಲಿಯೇ ಟಿಲ್ಲರ್‌ಸನ್ ಅದನ್ನು ವಿರೋಧಿಸಿದ್ದರು.

ಈಗ ಟ್ರಂಪ್ ಅವರು ನಿರ್ಬಂಧ ಹಿಂದಕ್ಕೆ ಪಡೆಯುವ ಸುಳಿವು ನೀಡಿದ್ದಾರೆ. ನಿರ್ಬಂಧ ಹಿಂದಕ್ಕೆ ಪಡೆಯಲು ಟಿಲ್ಲರ್‌ಸನ್ ಬಲವಾಗಿ ಪ್ರತಿಪಾದಿಸಬಹುದು. ನಿರ್ಬಂಧ ಹಿಂದಕ್ಕೆ ಪಡೆದರೆ ರಷ್ಯಾದ ದಮನಕ್ಕೆ ಒಳಗಾಗಿರುವ ಉಕ್ರೇನ್ ಅನಾಥವಾಗುತ್ತದೆ. ರಷ್ಯಾವನ್ನು ವಿರೋಧಿಸಿಕೊಂಡೇ ಬಂದಿರುವ ಯುರೋಪ್‌ನ ದೇಶಗಳು ಅಮೆರಿಕದ ಜತೆಗಿನ ಸಂಬಂಧವನ್ನು ಎಷ್ಟು ಬೇಕೋ ಅಷ್ಟಕ್ಕೆ ಸೀಮಿತಗೊಳಿಸಲು ಯತ್ನಿಸಬಹುದು. ಅಮೆರಿಕದಲ್ಲಿಯೂ ರಷ್ಯಾವನ್ನು ವಿರೋಧಿಸುವ ದೊಡ್ಡ ವರ್ಗವೇ ಇದೆ. ಎಲ್ಲರ ಜತೆ ಸಮತೋಲನ ಕಾಯ್ದುಕೊಳ್ಳಲು ಟಿಲ್ಲರ್‌ಸನ್ ಸಾಕಷ್ಟು ಬೆವರು ಹರಿಸಬೇಕಾದೀತು.

ಟಿಲ್ಲರ್‌ಸನ್ ಕೆಲವು ವಿಷಯಗಳಲ್ಲಿ ಟ್ರಂಪ್ ಅವರನ್ನು ಹೋಲುತ್ತಾರೆ. ಆದರೆ ಹಲವು ವಿಚಾರಗಳಲ್ಲಿ ಅವರು ಭಿನ್ನ ಕೂಡ. ಅವಿರತ ದುಡಿಮೆಯಲ್ಲಿಯೇ ಸುಖ ಕಾಣುವ ಟಿಲ್ಲರ್‌ಸನ್ ಶ್ರೀಮಂತಿಕೆಯ ದೌಲತ್ತು ತೋರಿದವರಲ್ಲ. ಬಿಡುವಿನ ವೇಳೆಯಲ್ಲಿ ಮನೆಯ ಹಿತ್ತಿಲಲ್ಲಿ ಏನಾದರೂ ಕೆಲಸ ಮಾಡುತ್ತಿರುವ ಟಿಲ್ಲರ್‌ಸನ್ ಅವರನ್ನು ಕಾಣಬಹುದು. ಅವರ ಮಾತು ನೇರ. ತಮಗೆ ಸರಿ ಅನಿಸಿದ್ದನ್ನು ಅವರು ಟ್ರಂಪ್ ಅವರ ಮುಂದೆಯೂ ಯಾವ ಹಿಂಜರಿಕೆ ಇಲ್ಲದೆ ಹೇಳಬಲ್ಲರು ಎಂದು ಅವರನ್ನು ಹತ್ತಿರದಿಂದ ನೋಡಿದವರು ಹೇಳುತ್ತಾರೆ.

ಹಸಿರು ಮನೆ ಅನಿಲ ಉತ್ಪಾದನೆ ಕಡಿಮೆ ಮಾಡುವ ಹವಾಮಾನ ಒಪ್ಪಂದ ಜಾರಿಗೆ ಬಾರದಂತೆ ತಡೆಯಲು ಟಿಲ್ಲರ್‌ಸನ್ ಭಾರಿ ಲಾಬಿ ನಡೆಸಿದ್ದಾರೆ. ಅವರ ಕಂಪೆನಿ ಕಾರ್ಯಾಚರಣೆ ನಡೆಸುವಲ್ಲೆಲ್ಲ ಜನರ ಮೇಲೆ ದೌರ್ಜನ್ಯ ನಡೆಸಿದ ಹಲವು ಪ್ರಕರಣಗಳಿವೆ ಎಂಬುದು ಅವರ ಮೇಲಿನ ಕಪ್ಪುಚುಕ್ಕೆ.

ಭಾರತದ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿ ಒಎನ್‌ಜಿಸಿ ವಿದೇಶ್, ರಷ್ಯಾದ ಸಖಲಿನ್ ಯೋಜನೆಯಲ್ಲಿ 2001ರಲ್ಲಿ ಸುಮಾರು 20 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಿದೆ. ಆಗ ಸಖಲಿನ್ ಯೋಜನೆಯ ಚುಕ್ಕಾಣಿ ಹಿಡಿದಿದ್ದದ್ದು ಟಿಲ್ಲರ್‌ಸನ್ ಅವರ ಎಕ್ಸಾನ್ ಮೊಬಿಲ್. ಹಾಗಾಗಿ ಭಾರತದ ಜತೆಗೂ ಅವರಿಗೆ ನಂಟಿದೆ.

ಎಂಜಿನಿಯರಿಂಗ್ ಪದವಿ ಪಡೆದ ಟಿಲ್ಲರ್‌ಸನ್ 1975ರಲ್ಲಿ ಎಕ್ಸಾನ್ ಮೊಬಿಲ್ ಸೇರಿದವರು ಇಂದಿಗೂ ಅಲ್ಲಿಯೇ ಇದ್ದಾರೆ. ಅವರ ನಿಷ್ಠೆ ಮತ್ತು ಬದ್ಧತೆಯ ಬಗ್ಗೆ ಯಾರಿಗೂ ಶಂಕೆ ಇಲ್ಲ. ಆದರೆ ಎಕ್ಸಾನ್ ಮೊಬಿಲ್‌ಗೆ ಅಮೆರಿಕಕ್ಕಿಂತ ಹೆಚ್ಚು ಹಿತಾಸಕ್ತಿ ರಷ್ಯಾದಲ್ಲಿದೆ. ಹಾಗಾಗಿ ಹಿತಾಸಕ್ತಿ ಸಂಘರ್ಷದ ಪ್ರಶ್ನೆ ಏಳುವುದು ಸಹಜ.

ಪ್ರಜಾಪ್ರಭುತ್ವ, ನಿರಂಕುಶಾಧಿಪತ್ಯ ಸೇರಿ ಎಲ್ಲ ರೀತಿಯ ಸರ್ಕಾರಗಳ ಮುಖ್ಯಸ್ಥರ ಜತೆ ಕೆಲಸ ಮಾಡಿರುವ ಅನುಭವ ಟಿಲ್ಲರ್‌ಸನ್‌ಗೆ ಇದೆ. ಜಾಗತಿಕ ನಾಯಕರನ್ನು ಟಿಲ್ಲರ್‌ಸನ್ ರಾಜಕಾರಣಿಗಳಿಗಿಂತ ಭಿನ್ನವಾಗಿ ನೋಡಿದ್ದಾರೆ. ಅವರ ಒಳಗುಟ್ಟುಗಳೂ ಅವರಿಗೆ ಚೆನ್ನಾಗಿ ಗೊತ್ತಿವೆ. ಇದು ಸಂಧಾನಕ್ಕೆ ಕೂತಾಗ ಟಿಲ್ಲರ್‌ಸನ್ ಅವರ ದೊಡ್ಡ ಶಕ್ತಿಯಾಗಬಹುದು.

ಅಚ್ಚರಿ ಮತ್ತು ಅನಿರೀಕ್ಷಿತವಾದ ನಿರ್ಧಾರವನ್ನು ಅನುಮಾನದಿಂದ ನೋಡಬೇಕೆಂದಿಲ್ಲ. ಸ್ವಹಿತಾಸಕ್ತಿಯನ್ನು ಮೆಟ್ಟಿ ನಿಲ್ಲಲು ಸಾಧ್ಯವಾದರೆ ವಿದೇಶಾಂಗ ನೀತಿಗೆ ಹೊಸ ಹೊಳಪು ನೀಡಲು ಟಿಲ್ಲರ್‌ಸನ್‌ಗೆ ಸಾಧ್ಯವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT