ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರು ಜನರ ಆಶೋತ್ತರ ಗಮನದಲ್ಲಿಡಬೇಕು

ವಾರದ ಸಂದರ್ಶನ: ಅನಂತ ಕುಮಾರ್‌ ಕೇಂದ್ರ ಸಂಸದೀಯ ವ್ಯವಹಾರ ಸಚಿವ
Last Updated 17 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಸಂಸತ್‌ನ ಚಳಿಗಾಲದ ಅಧಿವೇಶನ ಶುಕ್ರವಾರ ಮುಕ್ತಾಯವಾಗಿದೆ. ಕೇಂದ್ರ ಸರ್ಕಾರದ ನೋಟು ರದ್ದತಿ ನಿರ್ಧಾರದ ಒಂದು ವಾರದ ನಂತರ ಆರಂಭವಾಗಿದ್ದ ಅಧಿವೇಶನದಲ್ಲಿ ಗಂಭೀರವಾದ ಚರ್ಚೆಗಳು ನಡೆಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. 21 ದಿನಗಳಲ್ಲಿ 94 ಗಂಟೆ ನಡೆಯಬೇಕಿದ್ದ ಸಂಸತ್‌ ಕಲಾಪ ಬಹುತೇಕ ವ್ಯರ್ಥವಾಗಿದೆ.

ಕಳೆದ 15 ವರ್ಷಗಳ ಅವಧಿಯಲ್ಲೇ ಅತ್ಯಂತ ಕಡಿಮೆ ಅವಧಿಯ (ಕೇವಲ ಒಂದೂವರೆ ಗಂಟೆ) ಕಲಾಪಕ್ಕೆ ಅವಕಾಶ ದೊರೆತ ದಾಖಲೆಗೆ ಈ ಅಧಿವೇಶನ ಪಾತ್ರವಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಸೂಕ್ತ ವೇದಿಕೆ ಇದ್ದರೂ ಆಡಳಿತ ಮತ್ತು ವಿರೋಧ ಪಕ್ಷಗಳ ಪ್ರತಿಷ್ಠೆಯಿಂದಾಗಿ ಮುಕ್ತ ಚರ್ಚೆ ನಡೆಯುತ್ತಿಲ್ಲ. ಈ ಕುರಿತು ಕೇಂದ್ರದ ಸಂಸದೀಯ ವ್ಯವಹಾರ ಸಚಿವ ಅನಂತ ಕುಮಾರ್‌ ‘ಪ್ರಜಾವಾಣಿ’ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

*  ನೋಟು ರದ್ದತಿಯಂತಹ ಮಹತ್ವದ ತೀರ್ಮಾನದ ಬಳಿಕ ನಡೆದ ಅಧಿವೇಶನ ಯಾವುದೇ ಚರ್ಚೆಗೆ ಸಾಕ್ಷಿಯಾಗದೆ ಪೂರ್ಣಗೊಂಡಿದೆ. ವಿರೋಧ ಪಕ್ಷಗಳ  ಮನವೊಲಿಸಲು ಸರ್ಕಾರ ಪ್ರಯತ್ನಿಸಲಿಲ್ಲವೇ?
ಸ್ವಾತಂತ್ರ್ಯಾನಂತರದ ಅವಧಿಯಲ್ಲಿ, ಚರ್ಚೆ ನಡೆಯದೆಯೇ ಅನೇಕ ಬಾರಿ ಅಧಿವೇಶನ ಪೂರ್ಣಗೊಂಡ ಉದಾಹರಣೆಗಳಿವೆ. 2010ರಲ್ಲಿ 2–ಜಿ ಸ್ಪೆಕ್ಟ್ರಂ, ಕಾಮನ್‌ವೆಲ್ತ್‌  ಕ್ರೀಡಾಕೂಟದ ಹಗರಣ ಬೆಳಕಿಗೆ ಬಂದಾಗಲೂ ಸಂಸತ್‌ನಲ್ಲಿ ದನಿ ಎತ್ತಿದ ವಿರೋಧ ಪಕ್ಷಗಳ ಬೇಡಿಕೆಗೆ ಬೆಲೆ ಕೊಡದೆ ಅಧಿವೇಶನವನ್ನು ಬಲಿಕೊಟ್ಟ ಉದಾಹರಣೆ ಇದೆ. ನೋಟು ರದ್ದತಿ ಕುರಿತು ಚರ್ಚೆಗೆ ಸಿದ್ಧ ಎಂದು ಆಡಳಿತಾರೂಢ ಪಕ್ಷ ವಿರೋಧ ಪಕ್ಷಗಳ ಮನ ಒಲಿಸಲು ಎಷ್ಟೇ ಪ್ರಯತ್ನಿಸಿದರೂ  ಸಾಧ್ಯವಾಗಲಿಲ್ಲ. ನೋಟು ರದ್ದತಿ ವಿಷಯವನ್ನು ಮತಕ್ಕೆ ಹಾಕುವ ನಿಯಮದಡಿ ಚರ್ಚಿಸಬೇಕು ಎಂದು ಅವಕಾಶ ಕೋರಿದ್ದೇ ಅಧಿವೇಶನ ಆಹುತಿಯಾಗಲು ಕಾರಣವಾಯಿತು.

* ಆಡಳಿತ ಪಕ್ಷ ಮತಕ್ಕೆ ಹಾಕುವ ಚರ್ಚೆಯನ್ನು ಬೇಡ ಎಂದಿದ್ದೇಕೆ?
ನಾವು ಚರ್ಚೆಗೆ ಸದಾ ಸಿದ್ಧ ಇದ್ದೆವು. ಬೇಡ ಎಂದು ಹೇಳಲಿಲ್ಲ. ಕಪ್ಪುಹಣ, ಭ್ರಷ್ಟಾಚಾರ, ನಕಲಿ ನೋಟು, ಭಯೋತ್ಪಾದನೆಯಂತಹ ವಿಷಯಗಳ ಬಗ್ಗೆ ಗಂಭೀರ ಚರ್ಚೆ ಅಗತ್ಯ. ಅದರಲ್ಲೂ ನೋಟು ರದ್ದತಿಯಂತಹ ವಿಷಯವು ಸಿದ್ಧಾಂತ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದ್ದು. ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ನಮ್ಮ ಯೋಧರು ನಡೆಸಿದ ನಿರ್ದಿಷ್ಟ ದಾಳಿಯಂತಹ ವಿಷಯವಾಗಲಿ ಅಥವಾ ಇಡೀ ರಾಷ್ಟ್ರದ ಅಭಿವೃದ್ಧಿಯ ದೃಷ್ಟಿಯಿಂದ ಕೈಗೊಂಡ ನೋಟು ರದ್ದತಿಯಂತಹ ಮಹತ್ವದ ನಿರ್ಧಾರವನ್ನಾಗಲಿ ಪ್ರಶ್ನಿಸಿ ಸಂಸತ್‌ನಲ್ಲಿ ಚರ್ಚೆ ನಡೆಸಿದರೆ ವೈರಿ ರಾಷ್ಟ್ರಗಳು ವಿಜಯೋತ್ಸವ ಆಚರಿಸುತ್ತವೆ.

ಇಂತಹ ಬೆಳವಣಿಗೆಗಳು ನಡೆದರೆ ನೆರೆಯ ಪಾಕಿಸ್ತಾನದಲ್ಲಿ ಜನರು ಪಟಾಕಿ ಹೊಡೆಯುವುದಿಲ್ಲವೇ? ಇದು ದೇಶದ, ಸರ್ಕಾರದ ಸಿದ್ಧಾಂತಕ್ಕೆ ಸಂಬಂಧಿಸಿದ್ದು. ಇನ್ನು ನೋಟು ರದ್ದತಿ ನಂತರ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಅನುಷ್ಠಾನ ಪ್ರಕ್ರಿಯೆ ಜಾರಿಯಲ್ಲಿದೆ. ಅದು ಪೂರ್ಣಗೊಂಡ ನಂತರ ವೈಫಲ್ಯಗಳು ಕಂಡುಬಂದಲ್ಲಿ ಎತ್ತಿ ತೋರಿಸಬಹುದು. ಅನುಷ್ಠಾನದ ವಿಷಯದಲ್ಲಿ ಸರ್ಕಾರ ಕೊಂಚ ವಿಳಂಬ ನೀತಿ ಅನುಸರಿಸಿದ್ದು ನಿಜವೂ ಇರಬಹುದು.

ಜನಸಾಮಾನ್ಯರಿಗೆ ತೊಂದರೆ ಆಗಿರುವುದನ್ನು ನಾವೂ ಒಪ್ಪಿಕೊಳ್ಳುತ್ತೇವೆ. ಆ ಕುರಿತೇ ವಿರೋಧ ಪಕ್ಷಗಳು ಮುಕ್ತವಾಗಿ ಚರ್ಚಿಸಿ ಸಾಧಕ– ಬಾಧಕಗಳನ್ನು ಒರೆಗೆ ಹಚ್ಚಬಹುದಿತ್ತು. ಆದರೆ, ಅದಕ್ಕೆ ತಯಾರಾಗದೆ ನಿಯಮ 56ರ(ಮಹತ್ವದ ವಿಷಯಗಳಿಗೆ ಸಂಬಂಧಿಸಿದ ನಿಲುವಳಿ ಸೂಚನೆ ಮಂಡನೆ – ಈ ನಿಯಮದಡಿ ಮತದಾನಕ್ಕೆ ಅವಕಾಶ ಇರುತ್ತದೆ) ಅಡಿ ಚರ್ಚೆ ನಡೆಸುವಂತೆ ಕೋರಲಾಯಿತು. ಕಾಂಗ್ರೆಸ್‌ ಪಕ್ಷ ಇಂತಹ ಮಹತ್ವದ ಸಂಗತಿಯನ್ನು ಮತಕ್ಕೆ ಹಾಕುವುದಕ್ಕೇ ಆದ್ಯತೆ ನೀಡಿತು. ಅದಕ್ಕೆ ಕಲಾಪ ಬಲಿಯಾಯಿತು.

* ಪ್ರಧಾನಿ ಉತ್ತರ ನೀಡಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆಯೂ ಈಡೇರಲಿಲ್ಲ. ಮಹತ್ವದ ನಿರ್ಧಾರ ಪ್ರಕಟಿಸಿದ ನರೇಂದ್ರ ಮೋದಿ ಅವರು ಮಾತನಾಡಲೇ ಇಲ್ಲವಲ್ಲ?
ನೋಟು ರದ್ದತಿಗೆ ಸಂಬಂಧಿಸಿದಂತೆ ಸಂಸತ್‌ನಲ್ಲಿ ಉತ್ತರ ನೀಡಬೇಕಿರುವುದು ಹಣಕಾಸು ಸಚಿವರು. ನಿತ್ಯವೂ ಅವರು ಉತ್ತರ ಸಿದ್ಧಪಡಿಸಿಕೊಂಡು ಬಂದು ಕೂತರೂ ವಿರೋಧ ಪಕ್ಷಗಳು ಕಿವಿಗೊಡಲಿಲ್ಲ. ಹಣಕಾಸು ಸಚಿವರು ಉತ್ತರ ನೀಡುವಾಗ ಪ್ರಧಾನಿ ಮಧ್ಯ ಪ್ರವೇಶಿಸಿ ಪ್ರತಿಕ್ರಿಯೆ
ನೀಡಬಹುದಷ್ಟೆ.

ಅವರ ಪ್ರತಿಕ್ರಿಯೆ ಎಲ್ಲ  ಪ್ರಶ್ನೆಗಳಿಗೂ ಉತ್ತರ ನೀಡಿ, ಎಲ್ಲ ಗೊಂದಲಗಳನ್ನೂ ನಿವಾರಿಸುವ ಮಾದರಿಯಲ್ಲಿಯೇ ಇರುತ್ತಿತ್ತು. ಅದಕ್ಕೆ ನರೇಂದ್ರ ಮೋದಿ ಅವರೂ ಸಿದ್ಧರಿದ್ದರು. ಈ ವಿಷಯದ ಬಗ್ಗೆ ಪ್ರಧಾನಿ ಕೇವಲ ಮಧ್ಯಸ್ಥಿಕೆ ವಹಿಸಬಹುದು ಎಂಬ ಸತ್ಯವೂ ಪ್ರತಿಪಕ್ಷಗಳಿಗೆ ಗೊತ್ತಿತ್ತು. ಈ ಹಿಂದೆ ನಾವು ವಿರೋಧ ಪಕ್ಷದಲ್ಲಿದ್ದಾಗಲೂ ನಮ್ಮ ಬೇಡಿಕೆಯನುಸಾರ ಚರ್ಚೆಗೆ ಅವಕಾಶ ನೀಡಲಾಗಿತ್ತೇ ಎಂಬುದನ್ನು ಅರಿತಿರುವ ಕಾಂಗ್ರೆಸ್‌ ಸದಸ್ಯರು ಸ್ವಲ್ಪ ಅರ್ಥ ಮಾಡಿಕೊಂಡಿದ್ದರೂ ಸುಗಮವಾದ ಚರ್ಚೆಗೆ ಅವಕಾಶ ದೊರೆಯುತ್ತಿತ್ತು.

* ಆಡಳಿತ ಪಕ್ಷವು ಉದ್ದೇಶಪೂರ್ವಕವಾಗಿಯೇ ಚರ್ಚೆಯ ಅವಕಾಶ ನಿರಾಕರಿಸಿತು ಎಂದು ವಿರೋಧ ಪಕ್ಷಗಳು ದೂರುತ್ತಿವೆಯಲ್ಲ?
ನೋಟು ರದ್ದತಿಯಂತಹ ಮಹತ್ವದ ನಿರ್ಧಾರವನ್ನು ‘ದೊಡ್ಡ ಮಟ್ಟದ ಹಗರಣ’  ಎಂದೆಲ್ಲ ಬಿಂಬಿಸುವ ವಿರೋಧ ಪಕ್ಷಗಳು ಇಲ್ಲಸಲ್ಲದ ಆರೋಪದಲ್ಲಿ ನಿರತವಾಗಿವೆ. ಅಂಥದ್ದನ್ನು ನಾವು ಒಪ್ಪಿಕೊಳ್ಳುವುದು ಸಾಧ್ಯವೇ? ಲೋಕಸಭೆಯ ನಿಯಮ 56ರ ಅಡಿ ನಿಲುವಳಿ ಸೂಚನೆಯ ಪ್ರಕಾರ ಚರ್ಚೆಗೆ ಅವಕಾಶ ನೀಡುವುದಕ್ಕೆ ಅವಕಾಶ ಇದೆ. ಅತ್ಯಂತ ತುರ್ತು ವಿಷಯದ ಬಗ್ಗೆ ಚರ್ಚೆ ನಡೆಸಬೇಕಿದ್ದಲ್ಲಿ ಉಳಿದೆಲ್ಲ ವಿಷಯಗಳನ್ನೂ ಕೈಬಿಟ್ಟು ಅವಕಾಶ ಒದಗಿಸಬಹುದು.

ಆದರೆ, ನಿಲುವಳಿ ಸೂಚನೆ ಪ್ರಕಾರ ಚರ್ಚೆಗೆ ಅವಕಾಶ ನೀಡುವುದು ಸ್ಪೀಕರ್‌ ವಿವೇಚನೆಗೆ ಬಿಟ್ಟದ್ದು. ಅದೂ ಅಲ್ಲದೆ ನಿಯಮ 58ರ ಪ್ರಕಾರ, ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವ ಯಾವುದೇ ವಿಷಯದ ಬಗ್ಗೆ ಸಂಸತ್‌ನಲ್ಲಿ ಚರ್ಚಿಸಿದರೆ ಅದು ಸಬ್‌ಜುಡಿಸ್‌
ಆಗುತ್ತದೆ. ಅದರಿಂದಾಗಿ ಸ್ಪೀಕರ್‌ ಅವಕಾಶ ನಿರಾಕರಿಸಿರುವ ಸಾಧ್ಯತೆ ಇದೆ.

* ವಿರೋಧ ಪಕ್ಷಗಳ ಮಾತಿಗೆ, ಬೇಡಿಕೆಗೆ ಬೆಲೆಯೇ ಇಲ್ಲವೇ?
ಹಾಗೇನೂ ಇಲ್ಲ. ಆ ಬೇಡಿಕೆಗಳು ನ್ಯಾಯಸಮ್ಮತವಾಗಿ ಇರಬೇಕಷ್ಟೆ. ಇಡೀ ದೇಶದ ಗಮನ ಸೆಳೆದಿರುವ ವಿಷಯದ ಬಗ್ಗೆ ಅವರೂ ಗಂಭೀರವಾಗಿ ಇರಬೇಕಿತ್ತು. ಪ್ರತಿಭಟನೆ, ಧರಣಿ, ಕೋಲಾಹಲ, ಸಭಾತ್ಯಾಗದಂತಹ ಬೆಳವಣಿಗೆಗಳು ನಾಲ್ಕು ದಿನ ಅಥವಾ ಒಂದು ವಾರಕ್ಕೆ ಸೀಮಿತವಾಗಬೇಕಿತ್ತು.

ವಿರೋಧಿ ಬಣದಲ್ಲಿ ಒಟ್ಟು 115 ಸದಸ್ಯರು ಈಗ ಇದ್ದಾರೆ. ಏಕ ಸದಸ್ಯ ಪಕ್ಷಗಳೂ ಸೇರಿ 15 ಪಕ್ಷಗಳು ವಿರೋಧಿ ಸ್ಥಾನದಲ್ಲಿವೆ. ನಮ್ಮ ಪರ ಇರುವ ಐದು ಪಕ್ಷಗಳು ಎನ್‌ಡಿಎ ಭಾಗವಾಗಿಲ್ಲ. ಅವರನ್ನು ಹೊರತುಪಡಿಸಿ, ಎನ್‌ಡಿಎಯಲ್ಲಿರುವ ಮಿತ್ರಪಕ್ಷಗಳ ಸಂಖ್ಯೆ 13. ಜಯಲಲಿತಾ ಅವರ ಎಐಎಡಿಎಂಕೆ ಸದಸ್ಯರು ತಮ್ಮ ಜಾಗದಲ್ಲೇ ಎದ್ದುನಿಂತು ಮೌನ ಪ್ರತಿಭಟನೆ ನಡೆಸಿದರು. ಅವರು ಘೋಷಣೆ ಕೂಗುವುದಕ್ಕೂ ಹೋಗಲಿಲ್ಲ. ಎಡಪಕ್ಷಗಳೂ ಕೋಲಾಹಲಕ್ಕೆ ಮುಂದಾಗಲಿಲ್ಲ. ಮೊದಲು ಚರ್ಚೆಗೆ ಒಪ್ಪಿಕೊಂಡಿದ್ದ ವಿರೋಧ ಪಕ್ಷಗಳು ನಂತರ ರಾಗ ಬದಲಿಸಿದವು. ರಾಹುಲ್‌ ಗಾಂಧಿ ಹಟಕ್ಕೆ ಕಲಾಪ ಬಲಿಯಾದಂತಾಯಿತು.

ಇದೇ ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ಮೊದಲು ಚರ್ಚೆ ಆರಂಭಿಸಿ, ನಂತರ ಧರಣಿ ಆರಂಭಿಸಿದವು. ಲೋಕಸಭೆಯಲ್ಲಿ ಮೊದಲ ದಿನದಿಂದಲೂ ಗದ್ದಲ ನಡೆಸಿದವು. ವಿರೋಧ ಪಕ್ಷಗಳ ನಿಲುವು ಎರಡೂ ಸದನಗಳಲ್ಲಿ ಒಂದೇ ರೀತಿಯಲ್ಲಿ ಇರಬೇಕಲ್ಲವೇ? ಕೇವಲ ಚರ್ಚೆ ಮಾತ್ರವಲ್ಲ, ಅಧಿವೇಶನದಲ್ಲಿ ಮಹತ್ವದ ಮಸೂದೆಗಳನ್ನು ಅನುಮೋದಿಸಬೇಕಿತ್ತು. ಗದ್ದಲದ ನಡುವೆಯೇ ತೆರಿಗೆ ಕುರಿತ ಮಸೂದೆಯನ್ನು ಮಂಡಿಸಲಾಯಿತು. ಕೊನೆಯ ದಿನ ಅಂಗವಿಕಲರ ಹಕ್ಕುಗಳ ಮಸೂದೆಗೆ ಅನುಮೋದನೆ ನೀಡಲಾಯಿತು.  ಹೆರಿಗೆ ಸೌಲಭ್ಯಗಳ ಸಂಬಂಧಿತ  ಇನ್ನೊಂದು ಮಹತ್ವದ ಮಸೂದೆಗೆ ಈ ಬಾರಿ  ಅನುಮೋದನೆ ಅಗತ್ಯವಿತ್ತು. ಲೋಕಸಭೆಯಲ್ಲಿ ಕೋಲಾಹಲ ಸೃಷ್ಟಿಯಾಗಿದ್ದರಿಂದ ಅದು ನನೆಗುದಿಗೆ ಬಿತ್ತು.

* ನಿಯಮರಹಿತ ಚರ್ಚೆಗೆ ಸಿದ್ಧವಿರುವುದಾಗಿ ವಿರೋಧ ಪಕ್ಷಗಳು ತಿಳಿಸಿದರೂ ಅವಕಾಶ ನೀಡಲಿಲ್ಲವೇಕೆ?
ನಿಯಮ 193ರ(ಈ ನಿಯಮದಡಿ ಚರ್ಚೆಗೆ ಮಾತ್ರ ಅವಕಾಶ- ಮತದಾನಕ್ಕೆ ಆಸ್ಪದವಿರುವುದಿಲ್ಲ)ಅಡಿ ಚರ್ಚಿಸೋಣ ಎಂದು ಮೊದಲಿನಿಂದಲೂ ನಾವು ಹೇಳಿದರೂ ಅವರು ಕೇಳಲಿಲ್ಲ. ಆದರೆ, ಅಧಿವೇಶನದ ಕೊನೆಯ ಮೂರು ದಿನಗಳ ಅವಧಿಯಲ್ಲಿ ನಿಯಮರಹಿತವಾಗಿಯೇ ಚರ್ಚೆಗೆ ಸಿದ್ಧವಾದರು.

ಮುಖ್ಯವಾಗಿ ಸಂಸತ್‌ನಲ್ಲಿ ಯಾವುದೇ ಸದಸ್ಯ ನಿರ್ದಿಷ್ಟ ಆಪಾದನೆ ಮಾಡುವ ಮೊದಲು ಆ ಕುರಿತು ಸ್ಪೀಕರ್‌ಗೆ ತಿಳಿಸಿ, ಅನುಮತಿ ಪಡೆದು ಮಾತನಾಡಬೇಕಾಗುತ್ತದೆ. ಅದು ಕಾಂಗ್ರೆಸ್‌ ಪಕ್ಷದ ಸದಸ್ಯರಿಗೆ ಗೊತ್ತಿಲ್ಲದ ವಿಷಯವೇನಲ್ಲ. ‘ಪ್ರಧಾನಿ ವಿರುದ್ಧ ಭೂಕಂಪವೇ ಸಂಭವಿಸುವಂತಹ ಹೇಳಿಕೆ ನೀಡುತ್ತೇನೆ’ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮೊದಲೇ ತಿಳಿಸಿದ್ದರಾದರೂ ಆ ಬಗ್ಗೆ ಅನುಮತಿ ಪಡೆದಿರಲಿಲ್ಲ. ಲೋಕಸಭೆಯಲ್ಲಿ ರಾಹುಲ್‌ ಮಾತನಾಡಿದ ನಂತರ ಮತ್ತೆ ಧರಣಿ ನಡೆಸಿ, ಸಭಾಧ್ಯಕ್ಷರ ಪೀಠದೆದುರು ನುಗ್ಗಿ ಕಲಾಪ ಬಲಿಕೊಡುವ ಮೂಲಕ ಪ್ರಚಾರ ಗಿಟ್ಟಿಸುವ ಇರಾದೆ ಕಾಂಗ್ರೆಸ್‌ನದ್ದಾಗಿತ್ತು. ಅದು ಸಾಧ್ಯವಾಗಲಿಲ್ಲ.

* ಪ್ರಶ್ನೋತ್ತರ ಹಾಗೂ ಶೂನ್ಯ ವೇಳೆ ಬಳಿಕ ಮಹತ್ವದ ವಿಷಯಕ್ಕೆ ಸಂಬಂಧಿಸಿದ ನಿಲುವಳಿ ಸೂಚನೆ ಮತ್ತು ಗಮನ ಸೆಳೆಯುವ ಸೂಚನೆ ಮಂಡಿಸುವ ನಿಟ್ಟಿನಲ್ಲಿ ಸದನದ ನಿಯಮಗಳಿಗೆ ತಿದ್ದುಪಡಿ ತರುವ ಆಲೋಚನೆ ಇದೆಯೇ?
ಇಂಥ ಆಲೋಚನೆ ಇಲ್ಲ. ಪ್ರಶ್ನೋತ್ತರ ವೇಳೆ, ಶೂನ್ಯ ವೇಳೆಯ ವಿಷಯಗಳಿಗೆ ಮೊದಲೇ ಅವಕಾಶ ನೀಡುವಂತಾಗಬೇಕು. ಮಹತ್ವದ ಸಮಯವನ್ನು ಹಾಳುಗೆಡಹುವಂತಹ ಪ್ರಕ್ರಿಯೆಯನ್ನು ತಡೆಯುವ ಅಗತ್ಯವೂ ಇದೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಮಹತ್ವವಿದೆ. ಆರೋಗ್ಯಕರ ಚರ್ಚೆಗೆ ಧಕ್ಕೆ ಬರದಂತೆ ಸಂಸದರೇ ಮುಂದಾಗುವ ಮೂಲಕ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು. ಜನರ ಆಶೋತ್ತರಗಳನ್ನೂ ಗಮನದಲ್ಲಿ ಇರಿಸಿಕೊಳ್ಳಬೇಕು.. 

* ಸದನ ನಡೆಯದಿರುವುದಕ್ಕೆ ಬಿಜೆಪಿಯ ಹಿರಿಯ ಮುಖಂಡ ಎಲ್‌.ಕೆ.ಅಡ್ವಾಣಿ ಅವರೂ ಕೆಂಡಾಮಂಡಲವಾದರಲ್ಲ?
ಅವರು ಹಿರಿಯರು. ಅವರ ಮಾರ್ಗದರ್ಶನದಲ್ಲೇ ನಾವೆಲ್ಲ ಮುನ್ನಡೆಯುತ್ತಿದ್ದೇವೆ. ಅಟಲ್‌ ಬಿಹಾರಿ ವಾಜಪೇಯಿ ಅವರೂ ಈಗ ಸಂಸತ್‌ ಸದಸ್ಯರಾಗಿದ್ದರೆ ಅವರಿಗೂ ನೋವಾಗುತ್ತಿತ್ತು ಎಂದು ಅಡ್ವಾಣಿ ಹೇಳಿದರು. ಸಂಸತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು ಅನ್ನಿಸುತ್ತಿದೆ ಎಂದೂ ಅವರು ಹೇಳಿದರು.

ಪ್ರತಿನಿತ್ಯ ಕೋಲಾಹಲದ ನಂತರ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಅಧಿವೇಶನವನ್ನು ಒಂದೊಂದು ಗಂಟೆಯ ಅವಧಿಗೆ ಮುಂದೂಡುತ್ತಿದ್ದುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ಯಾಕೆ ಸದನ ಅನಿರ್ದಿಷ್ಟ ಅವಧಿಗೆ ಮುಂದಕ್ಕೆ ಹೋಗುತ್ತಿಲ್ಲ ಎಂದು ಕೇಳಿದರು. ಆ ಮೂಲಕ ಅವರು ವಿರೋಧ ಪಕ್ಷಗಳಿಗೇ ಕಿವಿಮಾತು ಹೇಳಿರಬಹುದು.

ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರೂ ಅಧಿವೇಶನದ ಸಂದರ್ಭದಲ್ಲಿ ಗದ್ದಲದಲ್ಲಿ ಭಾಗಿಯಾದ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಕೋಲಾಹಲ ಎಬ್ಬಿಸುವುದು ಎಂದರೆ ಬಹುಮತ  ಇರುವವರನ್ನು ದಮನಿಸುವುದು ಎಂದರ್ಥ ಎಂದೇ ಅವರು ಮಾರ್ಮಿಕವಾಗಿ ನುಡಿದರು. ಇವೆಲ್ಲವನ್ನೂ ವಿರೋಧ ಪಕ್ಷಗಳು ಅರ್ಥ ಮಾಡಿಕೊಳ್ಳದಿದ್ದರೆ ಜನರ ನಿರೀಕ್ಷೆಗಳು ಹುಸಿಯಾಗುತ್ತವೆ. ಚರ್ಚೆಗೇ ಮೀಸಲಿರುವ ಸಂಸತ್‌ನಲ್ಲಿ ಚರ್ಚೆಯೇ  ನಡೆಯದಿದ್ದಲ್ಲಿ ಜನರ ತೆರಿಗೆ ಹಣವೂ ಪೋಲಾದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT