ಇಷ್ಟೇ ಮುಜುಗರ ಸಾಕೇ ಅಥವಾ ಇನ್ನೂ ಬಾಕಿ ಇದೆಯೇ?

ಇದು ಶುದ್ಧ ಅವಿವೇಕವೇ? ಮನುಷ್ಯನನ್ನು ಸದಾ ಕಾಡುವ ಆದಿಮ ಆಸೆಯೇ? ವಿಶ್ವಾಸ ದ್ರೋಹವೇ? ಅಸಹಾಯಕತೆಯ ದುರುಪಯೋಗವೇ?  ಅಥವಾ ಇದು ಎಲ್ಲವೂ ಆಗಿರಬಹುದೇ? ಮಾಜಿ ಸಚಿವ ಹುಲ್ಲಪ್ಪ ಯಮನಪ್ಪ ಮೇಟಿ ತೀರಾ ತಳಮಟ್ಟದಿಂದ ರಾಜಕೀಯದಲ್ಲಿ ಮೇಲೆ ಬಂದವರು. ಒಂದು ಸಾರಿ ಸಂಸತ್ತನ್ನೂ ಕಂಡು ಬಂದವರು.

ಇಷ್ಟೇ ಮುಜುಗರ ಸಾಕೇ ಅಥವಾ ಇನ್ನೂ ಬಾಕಿ ಇದೆಯೇ?

ಇದು ಶುದ್ಧ ಅವಿವೇಕವೇ? ಮನುಷ್ಯನನ್ನು ಸದಾ ಕಾಡುವ ಆದಿಮ ಆಸೆಯೇ? ವಿಶ್ವಾಸ ದ್ರೋಹವೇ? ಅಸಹಾಯಕತೆಯ ದುರುಪಯೋಗವೇ?  ಅಥವಾ ಇದು ಎಲ್ಲವೂ ಆಗಿರಬಹುದೇ? ಮಾಜಿ ಸಚಿವ ಹುಲ್ಲಪ್ಪ ಯಮನಪ್ಪ ಮೇಟಿ ತೀರಾ ತಳಮಟ್ಟದಿಂದ ರಾಜಕೀಯದಲ್ಲಿ ಮೇಲೆ ಬಂದವರು. ಒಂದು ಸಾರಿ ಸಂಸತ್ತನ್ನೂ ಕಂಡು ಬಂದವರು. ‘ಕಂಬಳಿ ಬೀಸಿ ಮಳೆ ತರಿಸುವ’ ಕುರುಬ ಸಮುದಾಯದವರು. ಆಡಳಿತ ಕಾಂಗ್ರೆಸ್ಸಿನಲ್ಲಿ ಹಿರೀಕರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಂಡ ಮೂರು ವರ್ಷಗಳ ಕಾಲ ತಮ್ಮನ್ನು ಬಿಟ್ಟು ಕುರುಬ ಸಮುದಾಯದ ಬೇರೆ ಯಾರನ್ನೂ ಸಂಪುಟಕ್ಕೆ ಸೇರಿಸಿಕೊಂಡಿರಲಿಲ್ಲ. ‘ಸಮುದಾಯದ ಪ್ರತಿನಿಧಿಯಾಗಿ ನಾನು ಇದ್ದೇನಲ್ಲ ಸಾಕು’ ಎಂದುಕೊಂಡಿದ್ದರು. ಕೊನೆಗೂ, ಸರ್ಕಾರಕ್ಕೆ ಮೂರು ವರ್ಷ ತುಂಬಿದಾಗ ಮೇಟಿಯವರ ಹಿರಿತನವನ್ನು ಪರಿಗಣಿಸಿ ತಮ್ಮ ಜೊತೆಗೆ ಜನತಾದಳ (ಎಸ್‌) ತೊರೆದು ಕಾಂಗ್ರೆಸ್‌ ಸೇರಿದ್ದನ್ನು ನೆನಪು ಇಟ್ಟುಕೊಂಡು ಸಂಪುಟಕ್ಕೆ  ಸೇರಿಸಿಕೊಂಡಿದ್ದರು. ಮೇಟಿಯವರು ಅಂಥ ದಕ್ಷ ಎಂದು ಹೆಸರು ಮಾಡಿದವರೇನೂ ಅಲ್ಲ. ಆದರೂ ಅವರಿಗೆ ಸರ್ಕಾರಕ್ಕೆ ಭರ್ಜರಿ ಆದಾಯ ತಂದುಕೊಡುವ ಅಬ್ಕಾರಿ ಖಾತೆಯೇ ಸಿಕ್ಕಿತ್ತು.

ಯಾರೋ ಕೈ ಮೈ ತಿಕ್ಕುವವರು ಸಿಕ್ಕರು ಎಂದು ಮೇಟಿಯವರು ಮೈ ಮರೆಯುವಾಗ ಇದನ್ನೆಲ್ಲ ನೆನಪು ಇಟ್ಟುಕೊಳ್ಳಬೇಕಿತ್ತು. ತಮ್ಮ ಕೃತ್ಯಗಳು ಯಾರಿಗೆಲ್ಲ ಮುಜುಗರ ಮಾಡಬಹುದು ಎಂದು ಯೋಚಿಸಬೇಕಿತ್ತು. ಕೊನೆಯ ಪಕ್ಷ ತಮ್ಮ ಹೆಂಡತಿ ಮಕ್ಕಳು ಏನೆಂದುಕೊಂಡಾರು, ತನ್ನ ಮಗಳ ವಯಸ್ಸಿನ ಯುವತಿ ಜೊತೆಗೆ ಅನೈತಿಕ ಸಂಬಂಧ ಹೊಂದುವುದರಿಂದ ತಾವು ಏನೆಲ್ಲ ಬೆಲೆ ಕೊಡಬೇಕಾಗಬಹುದು ಮತ್ತು ತನ್ನನ್ನು ನಂಬಿದ ನಾಯಕನ ಪಾಡು ಏನಾಗಬಹುದು ಎಂದು ಒಂದು ಕ್ಷಣ ಯೋಚಿಸಿದ್ದರೂ ಅವರು ಈ ತಪ್ಪು ಮಾಡುತ್ತಿರಲಿಲ್ಲ.

ಬಹುಶಃ ಮೇಟಿಯವರು ಲೈಂಗಿಕ ತೃಷೆ ಎಂಬ ಹೊರಗೆ ಬರಲಾಗದ ಬಲೆಯೊಳಗೆ ಸಿಲುಕಿಕೊಂಡುದರ ಫಲವನ್ನು ಈಗ ಉಣ್ಣುತ್ತಿದ್ದಾರೆ. ಅದು ಜೇಡರ ಬಲೆಯೊಳಗೆ ಸಿಲುಕಿದ ನೊಣದ ಹಾಗಿನ ಸ್ಥಿತಿ. ಬಹಳ ಕಾಲ ವಿಲವಿಲ ಎಂದು ಒದ್ದಾಡುತ್ತಲೇ ಇರಬೇಕಾಗುತ್ತದೆ. ‘ಅಲ್ಪರ ಸಂಗ ಅಭಿಮಾನ ಭಂಗ’ ಎಂಬ ಹಿರಿಯರ ಮಾತಾದರೂ ಅವರಿಗೆ  ನೆನಪು ಇರಬೇಕಿತ್ತು.

ಅವರ ನಡವಳಿಕೆ ನೋಡಿದರೆ ಅವರಿಗೆ ಇಂಥ ಯಾವ ಖಬರೂ ಇದ್ದಂತೆ ಕಾಣುವುದಿಲ್ಲ. ಪ್ರಜೆಗಳಾಗಿ ನಮ್ಮ ದುರ್ದೈವ ಎಂಥದು ಎಂದರೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸದನದಲ್ಲಿ ‘ನೀಲಿ ಚಿತ್ರ’ವನ್ನು ನೋಡುವ ಸಚಿವರನ್ನು ನೋಡಿದ್ದೆವು. ಈಗಿನ ಸರ್ಕಾರದಲ್ಲಿ ತಾವೇ ಸ್ವತಃ ‘ನೀಲಿ ಚಿತ್ರ’ದಲ್ಲಿ ಭಾಗಿಯಾದ ಸಚಿವರನ್ನು ನೋಡಿದೆವು. ನಮ್ಮ ರಾಜಕಾರಣಿಗಳ ಮಟ್ಟ ಎಷ್ಟು ಅಧಃಪಾತಾಳಕ್ಕೆ ಇಳಿಯುತ್ತಿದೆಯಲ್ಲ! ಮುಂದೆ ಏನೇನು ನೋಡಬೇಕಿದೆಯೋ ಯಾರಿಗೆ ಗೊತ್ತು?

ಮೇಟಿಯವರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ದೃಶ್ಯಗಳು ಅವರನ್ನು ಕಾಡುತ್ತಿದ್ದುದು ಇಂದು ನಿನ್ನೆಯಿಂದ ಅಲ್ಲ. ಒಂದು ಸಾರಿ ತಾವು ಸಿಕ್ಕಿಬಿದ್ದುದು ಗೊತ್ತಾದ ನಂತರ ಅದರಿಂದ ಬಿಡಿಸಿಕೊಳ್ಳಲು ಅವರು ಏನೆಲ್ಲ ಪ್ರಯತ್ನ ಮಾಡಿರಬಹುದು, ಎಷ್ಟೆಲ್ಲ ಹಣ ಕಳೆದುಕೊಂಡಿರಬಹುದು ಎಂಬ ಸುದ್ದಿಗಳನ್ನು ನಂಬದಿರುವುದು ಕಷ್ಟ. ಲೈಂಗಿಕ  ಕ್ರಿಯೆಯಲ್ಲಿ ತೊಡಗಿದ ದೃಶ್ಯಗಳು ಬಿಡುಗಡೆಯಾಗುವುದಕ್ಕಿಂತ ಮುಂಚೆ, ಮೇಟಿಯವರನ್ನು ಬೇಟೆಯಾಡುತ್ತಿದ್ದವರು, ಒಂದು ಟ್ರೇಲರ್‌ ಅನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ಮುಂದೆ ಬರುವ ಅಪಾಯ ಏನು ಎಂಬ ಸೂಚನೆ ಸಿಗುತ್ತಿತ್ತು. ಅದರಲ್ಲಿ, ಒಂದು ಟೀಪಾಯ್‌  ಮೇಲೆ ಕುಳಿತು ವಿಜಯಲಕ್ಷ್ಮಿ ಮಾತನಾಡುವ ದೃಶ್ಯ ಈಗ ವಾಟ್ಸ್‌ಆ್ಯಪ್‌ ನಲ್ಲಿಯೂ ಓಡಾಡುತ್ತಿದೆ.

ವಿಜಯಲಕ್ಷ್ಮಿ ಮೈ ತುಂಬ ಬಟ್ಟೆ ಉಟ್ಟುಕೊಂಡೇ ಅದರಲ್ಲಿ ಮಾತನಾಡಿದ್ದಾರೆ. ಆದರೆ, ಅದು ಎಷ್ಟು ‘ಅಶ್ಲೀಲ’ವಾಗಿದೆ ಎಂದರೆ ಯಾವ ಗಂಡಸೂ ಕ್ಯಾಮೆರಾ ಮುಂದೆ ಹಾಗೆ ಮಾತನಾಡಲಾರ. ಕಾಣದ ಕೈಗಳು ಹೇಳಿಕೊಟ್ಟ  ಮಾತುಗಳನ್ನು ತಡಬಡಿಸುತ್ತ ಹೇಳುವ ವಿಜಯಲಕ್ಷ್ಮಿ, ಸಚಿವರಾಗಿ ಮೇಟಿಯವರ ವ್ಯಕ್ತಿತ್ವ ಎಂಥದು ಎಂಬುದನ್ನೂ ಹೇಳುತ್ತಾರೆ. ಸರ್ಕಾರ ಸೂಕ್ಷ್ಮವಾಗಿದ್ದರೆ, ಆ ದೃಶ್ಯ ಟೀವಿಗಳಲ್ಲಿ ಪ್ರಸಾರ ಆಗುತ್ತಿದ್ದಂತೆಯೇ ಮೇಟಿಯವರ ರಾಜೀನಾಮೆ ಪಡೆದಿದ್ದರೆ ಈಗ ಆಗಿರುವ ಮುಜುಗರದಿಂದ ಪಾರಾಗಬಹುದಿತ್ತು.

ಮೇಟಿಯವರಾದರೂ ತಕ್ಷಣ ರಾಜೀನಾಮೆ ಕೊಟ್ಟು ಬಿಟ್ಟಿದ್ದರೆ ಅವರ ವಿರುದ್ಧ ಬಲೆ ಬೀಸಿದವರು ನಿಶ್ಶಸ್ತ್ರರಾಗುತ್ತಿದ್ದರು. ಅವರ ಲೈಂಗಿಕ ದೃಶ್ಯ ಇರುವ ಸಿ.ಡಿ ಅಥವಾ ಪೆನ್‌ಡ್ರೈವ್‌ ಬಿಡುಗಡೆ ಆಗುತ್ತಿರಲಿಲ್ಲ. ಆಗಿದ್ದರೂ ಈಗಿನ ಹಾಗೆ ಅದು ಸರ್ಕಾರದ ಮೇಲೆ ದುಷ್ಪರಿಣಾಮ ಬೀರುತ್ತಿರಲಿಲ್ಲ. ಮುಖ್ಯಮಂತ್ರಿಗಳು ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ಎಡವಿದರೇ ಅಥವಾ ಮೇಟಿಯವರ ಬೆನ್ನು ಬಿದ್ದವರನ್ನು ‘ಸಮಾಧಾನ’ ಮಾಡಬಹುದು ಎಂದು  ಅಂದುಕೊಂಡರೇ? ಮುಖ್ಯಮಂತ್ರಿಗಳು ಇದಕ್ಕೆಲ್ಲ ಅವಕಾಶವನ್ನೇ ಕೊಡಬಾರದಿತ್ತು.

ಈಗ ಮೇಟಿಯವರಿಗೆ ‘ಛೀ’, ‘ಥೂ’ ಎಂದು ನಿಂದಿಸುವ ಬದಲು, ಅಂಥ ಚಟುವಟಿಕೆಯಲ್ಲಿ ಅವರು ತೊಡಗಿರುವುದು ಚಿತ್ರೀಕರಣ ಆಗಿದೆಯೆಂದು ತಿಳಿದಾಗಲೇ ಛೀಮಾರಿ ಹಾಕಿ ಸಂಪುಟದಿಂದ ವಜಾ ಮಾಡಬೇಕಿತ್ತು. ಅವರು ಹಾಗೆ  ಮಾಡಲಿಲ್ಲ ಎಂದೇ ಈಗ ಮೇಟಿಯವರನ್ನು ನೆಪವಾಗಿ  ಇಟ್ಟುಕೊಂಡು ಮುಖ್ಯಮಂತ್ರಿಗಳ ಕಡೆಗೇ ಗುಂಡು ಹಾರಿಸುವ ಕೆಲಸ ನಡೆದಿದೆ!

ಮೇಟಿಯವರು ಕುರುಬರು. ಅವರು ಸಿದ್ದರಾಮಯ್ಯನವರ ಜೊತೆಗೆ  ಕಾಂಗ್ರೆಸ್ಸಿಗೆ ಬಂದವರು. ಅಂದರೆ ಅವರು ವಲಸೆ ಕಾಂಗ್ರೆಸ್ಸಿಗರು. ಮೂಲ ಕಾಂಗ್ರೆಸ್ಸಿಗರಿಗೆ ಇಷ್ಟು ಸಾಕಲ್ಲವೇ? ಮೇಟಿಯವರು ಸಿಲುಕಿಕೊಂಡ ಲೈಂಗಿಕ ಹಗರಣದ ದೃಶ್ಯಗಳನ್ನು ಇಟ್ಟುಕೊಂಡು, ವಜಾ ಆದ ಡಿವೈಎಸ್‌ಪಿಯೊಬ್ಬರ ನೇಮಕಕ್ಕೆ ಕೋರಿಕೆ ಬಂದಾಗ ಗೃಹ ಸಚಿವರೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಅವರು ಒಪ್ಪಿಕೊಂಡಿದ್ದರೆ ಇದೆಲ್ಲ ಬಯಲಿಗೆ ಬರುತ್ತಿತ್ತೋ ಇಲ್ಲವೋ ತಿಳಿಯದು. ವಜಾ ಆದ ಡಿವೈಎಸ್‌ಪಿ ನೇಮಕಕ್ಕೆ ಗೃಹ ಸಚಿವ ಪರಮೇಶ್ವರ್‌ ನಿರಾಕರಿಸಿದ್ದಕ್ಕೆ ಸಕಾರಣಗಳು ಇವೆ. 

ಜೊತೆಗೆ, ಜನರ ಮುಂದೆ ಮೇಟಿ ಬೆತ್ತಲಾದರೆ ಮುಖ್ಯಮಂತ್ರಿಗೆ ಮುಜುಗರ ಆಗುತ್ತದೆ; ತಮ್ಮನ್ನು ಸಂಪುಟಕ್ಕೆ  ಸೇರಿಸಿಕೊಳ್ಳಲು ಅಷ್ಟೆಲ್ಲ ಸತಾಯಿಸಿದ ಮುಖ್ಯಮಂತ್ರಿಗೆ  ಮುಜುಗರವಾದರೆ ಒಳ್ಳೆಯದೇ  ಎಂದು ಪರಮೇಶ್ವರ್ ಅಂದುಕೊಂಡಿರಲಿಕ್ಕಿಲ್ಲವೇ? ಈಗಲೂ ಮೇಟಿಯವರ ಪ್ರಕರಣ ಜೀವಂತವಾಗಿ ಇದ್ದು ಅವರ ವಿರುದ್ಧ ಟೀಕೆ ಬಂದಷ್ಟೂ ಮುಖ್ಯಮಂತ್ರಿಗೆ ಮುಜುಗರ ಆಗುತ್ತದೆ. ಮುಖ್ಯಮಂತ್ರಿಗೆ  ಮುಜುಗರ ಆಗಲಿ ಎಂದೇ ಅಲ್ಲವೇ ಮೂಲ ಕಾಂಗ್ರೆಸ್ಸಿಗರು ಬಯಸುತ್ತಿರುವುದು!

‘ಮೇಟಿಯವರನ್ನು ಪಕ್ಷದಿಂದ ಅಮಾನತು ಮಾಡುವ, ಸಾಧ್ಯವಾದರೆ ಉಚ್ಚಾಟಿಸುವ’ ಮಾತುಗಳನ್ನು ಕೆಪಿಸಿಸಿ ಅಧ್ಯಕ್ಷರು ಮತ್ತೆ ಮತ್ತೆ ಏಕೆ ಪ್ರಸ್ತಾಪಿಸುತ್ತಿರಬಹುದು ಎಂದು ಯಾರಾದರೂ ಅರ್ಥ ಮಾಡಿಕೊಳ್ಳಬಹುದು.

ಮುಖ್ಯಮಂತ್ರಿ ಪದವಿಯಿಂದ ಸಿದ್ದರಾಮಯ್ಯನವರನ್ನು ಕೆಳಗೆ ಇಳಿಸಲು ಆಗದ ಮೂಲ ಕಾಂಗ್ರೆಸ್ಸಿಗರು ಹೀಗೆಲ್ಲ ಸಣ್ಣ ಪುಟ್ಟ ಖುಷಿಗಳಲ್ಲಿಯೇ ಸಂಭ್ರಮ ಪಡುತ್ತಿದ್ದರೆ ಅದೂ ಅರ್ಥ ಮಾಡಿಕೊಳ್ಳುವಂಥ ಸಂಗತಿಯೇ! ‘ಮೇಟಿ  ಪ್ರಕರಣ ಒಂದು ಷಡ್ಯಂತ್ರದಂತೆ ಭಾಸವಾಗುತ್ತದೆ’ ಎಂದು ಮುಖ್ಯಮಂತ್ರಿ ಹೇಳಿದ್ದರ ಹಿನ್ನೆಲೆ ಇದು!

ಆ ‘ಷಡ್ಯಂತ್ರ’ವನ್ನು ಭೇದಿಸಲು ಈಗ ಸಿಐಡಿ ವಿಚಾರಣೆ ಆರಂಭವಾಗಿದೆ. ಮೇಟಿಯವರ ಜೊತೆಗೆ ‘ಸಹಕರಿಸಿದ’ ವಿಜಯಲಕ್ಷ್ಮಿ, ಇಂಥ ‘ಸಹಕಾರವನ್ನು ಆಯೋಜಿಸಿದ’ ಬೆಂಗಾವಲುಗಾರ ಸುಭಾಷ ಮುಗಳಖೋಡ ಮತ್ತು ಇವರ ನೆರವಿಗೆ ನಿಂತ ಆರ್.ಟಿ.ಐ ಕಾರ್ಯಕರ್ತ ರಾಜಶೇಖರ್‌ ಮುಲಾಲಿ ಅವರನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಬಹುದು.

ಆದರೆ, ಈ ಒಟ್ಟು ಪ್ರಕರಣದಲ್ಲಿ ಇನ್ನೂ ಒಂದು ಆಗೀಗ ಕೇಳುವ ಧ್ವನಿ ಇದೆ. ಅದು ಸುದ್ದಿವಾಹಿನಿಯೊಂದರ ವರದಿಗಾರನದು. ಆ ವರದಿಗಾರ ಇಡೀ ಪ್ರಕರಣದಲ್ಲಿ ಮತ್ತೆ  ಮತ್ತೆ ಬಂದು ಹೋಗುವುದರಿಂದಲೇ ಒಟ್ಟಾರೆ ಸುದ್ದಿ ವಾಹಿನಿಗಳು ಒಂದೇ ದೃಷ್ಟಿಯಿಂದ ಈ ಪ್ರಕರಣವನ್ನು ವರದಿ ಮಾಡಿದುವು ಎಂದು ಅನಿಸುತ್ತದೆ.

ಇದು ‘ಸಚಿವರ ರಾಸಲೀಲೆ’ ಎಂದು ಅವು ಮತ್ತೆ ಮತ್ತೆ ಬಣ್ಣಿಸಿದುವು ಹಾಗೂ ಒಂದು ವಾಹಿನಿ ಬಿಟ್ಟು ಉಳಿದೆಲ್ಲ ವಾಹಿನಿಗಳು ಸಚಿವರ ಲೈಂಗಿಕ ಕ್ರಿಯೆಯನ್ನು ಹೆಚ್ಚು ಸ್ಪಷ್ಟವಾಗಿ ಕಾಣುವಂತೆ ಜನರ ಮಂದೆ ಇಟ್ಟುವು.  ಈಗಾಗಲೇ ವಾಹಿನಿಗಳ ಈ ಚರ್ಯೆ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಚರ್ಚೆಯಾಗುತ್ತಿದೆ ಮತ್ತು ತೀವ್ರ ಟೀಕೆಗೆ ಎಡೆ ಮಾಡಿದೆ.

ಇಡೀ ರಾಜ್ಯವನ್ನು ಪ್ರತಿನಿಧಿಸುವ ಒಬ್ಬ ಸಚಿವರಾಗಿ ಮೇಟಿಯವರ ನಡವಳಿಕೆ ಖಂಡನಾರ್ಹವಾದುದು ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಅವರನ್ನು ಯಾವುದೋ ಉದ್ದೇಶಕ್ಕಾಗಿ ಬಲೆಗೆ ಕೆಡವಲಾಯಿತೇ? ಬಲೆಗೆ ಕೆಡವಿದವರಿಗೆ ಸಚಿವರೊಬ್ಬರ ಇಂಥ ಆಕ್ಷೇಪಾರ್ಹ ನಡವಳಿಕೆಯನ್ನು ಜನರ ಮುಂದೆ ಇಟ್ಟು ಸಾರ್ವಜನಿಕ ಜೀವನದ ಮೌಲ್ಯಗಳನ್ನು ಕಾಪಾಡುವ ಉದ್ದೇಶವಿತ್ತೇ ಅಥವಾ ಭಾರಿ ಮೊತ್ತದ ಪ್ರತಿಫಲ ಕೇಳುವ ಹುನ್ನಾರವಿತ್ತೇ? ಆರ್‌.ಟಿ.ಐ ಕಾರ್ಯಕರ್ತ ರಾಜಶೇಖರ್‌ ಮುಲಾಲಿ ಮತ್ತು ಕಾನ್ಸ್ ಟೆಬಲ್‌ ಸುಭಾಷ ಮುಗಳಖೋಡ ಮಾತನಾಡಿದ್ದಾರೆ ಎನ್ನಲಾದ ಆಡಿಯೊದಲ್ಲಿ ಎರಡನೇ ಉದ್ದೇಶವೇ ಸ್ಪಷ್ಟವಾಗಿ ಕೇಳಿಬರುತ್ತದೆ.

ಈ ಒಟ್ಟು ಪ್ರಕರಣದಲ್ಲಿ ಅತ್ಯಂತ ಸೂಕ್ಷ್ಮವಾದ ವಿಚಾರ ಎಂದರೆ ಆ ದೃಶ್ಯದಲ್ಲಿ ಇದ್ದಾಳೆ ಎನ್ನಲಾದ ಮಹಿಳೆಯ ಮಾನ. ಆದರೆ, ಟ್ರೇಲರ್‌ ರೂಪದಲ್ಲಿ ಬಿಡುಗಡೆಯಾದ ಮಹಿಳೆಯ ಮಾತುಗಳನ್ನು ಒಳಗೊಂಡ ದೃಶ್ಯಾವಳಿ ಆ ಸೂಕ್ಷ್ಮತೆ ಜೊತೆಗೆ ರಾಜಿ ಮಾಡಿಕೊಂಡಿತು. ಸಚಿವ ಮೇಟಿಯವರಿಂದ ಏನೋ ಕೆಲಸ ಮಾಡಿಸಿಕೊಡಲು ಕೇಳುವವರು ಅದನ್ನು ಏಕೆ ಚಿತ್ರೀಕರಿಸಿಕೊಂಡರು ಎಂಬ ಒಂದು ಸಣ್ಣ ಅನುಮಾನವನ್ನೂ ಯಾರು ಎತ್ತದೇ ಇರುವುದು ಆಶ್ಚರ್ಯಕರವಾಗಿದೆ.

ಆ ದೃಶ್ಯ ಎಷ್ಟು ಕೃತಕವಾಗಿದೆ ಎಂದರೆ ಯಾರೋ ಮೇಟಿಯವರ ವಿರುದ್ಧ ಹೆಣೆಯುತ್ತಿರುವ ಬಲೆ ಹೇಗೆ ಬಿಚ್ಚಿಕೊಳ್ಳುತ್ತಿದೆ  ಎಂದೂ ಹೇಳುತ್ತದೆ. ಇತ್ತ,  ತಮ್ಮನ್ನು ಯಾರು ಬಳಸಿಕೊಳ್ಳುತ್ತಿದ್ದಾರೆ ಎಂಬುದೇ ಆ ಮಹಿಳೆಗೆ ಅರ್ಥವಾಗಲಿಲ್ಲ! ಅಥವಾ ಆಕೆ ಎಲ್ಲರ ಕೈಯ ದಾಳವಾಗಿದ್ದರು. ಇದು ಒಟ್ಟು, ಹೆಣ್ಣಿನ ದುರಂತಮಯ ಸ್ಥಿತಿಯ ಸಂಕೇತದಂತೆ ಕಾಣುತ್ತಿತ್ತು.

ಮಾಧ್ಯಮದವರಾಗಿ ನಾವು ಈ ಎಲ್ಲ ಮುಖಗಳನ್ನು ಜನರ ಮುಂದೆ ಇಡಬೇಕಿತ್ತು. ಆದರೆ,   ಕಾಮ, ಅಪರಾಧ ಮತ್ತು ಮೂಢನಂಬಿಕೆ ಎಂಬ ಅಸ್ವಸ್ಥ ಸರಕುಗಳ ಹಿಂದೆ ನಾವು ಬಿದ್ದಿದ್ದೇವೆ. ಇವೆಲ್ಲ ನಮಗೆ ಸಿಗುವುದು ಅಪರೂಪ. ಒಮ್ಮೆ ಸಿಕ್ಕುಬಿಟ್ಟರೆ ಸಾಕು ಇಡೀ ದಿನ ಅದನ್ನೇ ಎಳೆದಾಡಿ, ಎಳೆದಾಡಿ ಜನರಿಗೆ ರೇಜಿಗೆ ಹುಟ್ಟಿಸಿಬಿಡುತ್ತೇವೆ. ಓದುಗರ ಮತ್ತು ವೀಕ್ಷಕರ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುವ ಧಾವಂತದಲ್ಲಿ ಸತ್ಯವೂ ವಿಲ ವಿಲ ಒದ್ದಾಡುವುದು ನಮಗೆ  ಕಾಣುವುದಿಲ್ಲ.

ಒಂದು ವಾಹಿನಿಯ ವರದಿಗಾರರು ಬಹಳ ಸಂಭ್ರಮದಿಂದ ಆಡಳಿತ ಪಕ್ಷದ ವಿರೋಧಿಗಳನ್ನು ಮಾತನಾಡಿಸಿ ಅವರಿಗೆ ‘ಲೀಡಿಂಗ್‌’ ಆದ ಪ್ರಶ್ನೆಗಳನ್ನೇ ಕೇಳಿ ತಮಗೆ ಬೇಕಾದ ಉತ್ತರ ತೆಗೆದುಕೊಳ್ಳುತ್ತಿದ್ದುದರಲ್ಲಿಯೂ ಒಂದು ಮುಖದಿಂದ  ಮಾತ್ರ ಪ್ರಕರಣವನ್ನು ನೋಡುವ ‘ಉದ್ದೇಶದ ಪತ್ರಿಕೋದ್ಯಮ’ ಎದ್ದು ಕಾಣುತ್ತಿತ್ತು.  ಇಡೀ ಪ್ರಕರಣದಲ್ಲಿ ಯಾರಾದರೂ ಮಾಧ್ಯಮದವರು ಒಬ್ಬರು ಸಂಧಾನಕಾರರಾಗಿಯೋ, ಸಂವಹನಕಾರರಾಗಿಯೋ ಇದ್ದಾರೆ ಎಂದು ಸಿಐಡಿ ವಿಚಾರಣೆಯಲ್ಲಿ ಒಂದು ವೇಳೆ ಬಹಿರಂಗವಾದರೆ ನಮ್ಮ ಕಥೆ ಏನು?

ಇವೆಲ್ಲ ಒಟ್ಟು ಸಮಾಜ ತಲೆ ತಗ್ಗಿಸುವಂಥ ಮುಜುಗರದ ಸಂಗತಿಗಳು. ಎಲ್ಲ ಕ್ಷೇತ್ರಗಳಲ್ಲಿ ಮಟ್ಟಗಳು ಕುಸಿಯುತ್ತಿರುವ ಸಂಕೇತಗಳು. ಮೇಟಿಯವರ ಲೈಂಗಿಕ ಪ್ರಕರಣ ಒಂದು ಹಂತಕ್ಕೆ ಬಂತು ಎನಿಸುತ್ತಿರುವಾಗಲೇ ಭ್ರಷ್ಟ ಅಧಿಕಾರಿಗಳ ಅಕ್ರಮ ಸಂಪತ್ತಿನ ಕ್ರೋಡೀಕರಣ ಎಂಬ  ಇನ್ನೊಂದು ಬಗೆಯ ಆದಿಮ ಹಸಿವಿನ ಪ್ರಕರಣಗಳು ಬಯಲಿಗೆ ಬರುತ್ತಿವೆ.

ಅಲ್ಲಿಯೂ ಸಂಪುಟದ ಕೆಲವರು ಸಚಿವರ ಹೆಸರು ಕೇಳಿ ಬರುತ್ತಿವೆ. ಅವರೂ ಮುಖ್ಯಮಂತ್ರಿಗಳಿಗೆ ನಿಕಟರಾದವರು ಮತ್ತು ವಲಸೆ  ಕಾಂಗ್ರೆಸ್ಸಿಗರು ಎಂಬ ವದಂತಿ ಇದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಜಾರಿ ದಳ ಅಂಥ ಸಚಿವರ ವಿರುದ್ಧ ಬಲೆ ಬೀಸುತ್ತಿದೆ ಎಂಬ ಸುದ್ದಿಗಳೂ ಹರಿದಾಡುತ್ತಿವೆ. ಅಂದರೆ, ಈಗ ಆಗಿದ್ದು ಸಾಲದು ಎನ್ನುವಂತೆ ಮುಖ್ಯಮಂತ್ರಿಗಳು ಇನ್ನೂ ಮುಜುಗರಕ್ಕೆ ಈಡಾಗಲಿದ್ದಾರೆಯೇ? ಅವರು ಚಿಂತಿತರಾಗಿರುವುದನ್ನು ನೋಡಿದರೆ ಹಾಗೆಯೇ ಅನಿಸುತ್ತದೆ.

Comments
ಈ ವಿಭಾಗದಿಂದ ಇನ್ನಷ್ಟು
ಈಗ ದಾರಿಗಳು ಅಗಲುವ ಸಮಯ...

ನಾಲ್ಕನೇ ಆಯಾಮ
ಈಗ ದಾರಿಗಳು ಅಗಲುವ ಸಮಯ...

27 Aug, 2017
ಚಾರಿತ್ರಿಕ ಅಡ್ಡಿ ಮತ್ತು ಇಂದಿರಾ ಕ್ಯಾಂಟೀನ್...

ನಾಲ್ಕನೇ ಆಯಾಮ
ಚಾರಿತ್ರಿಕ ಅಡ್ಡಿ ಮತ್ತು ಇಂದಿರಾ ಕ್ಯಾಂಟೀನ್...

20 Aug, 2017
ಅಕಾಡೆಮಿಗಳ ಮೂಗುದಾರ ಬಿಚ್ಚುವುದು ಯಾವಾಗ?

ನಾಲ್ಕನೇ ಆಯಾಮ
ಅಕಾಡೆಮಿಗಳ ಮೂಗುದಾರ ಬಿಚ್ಚುವುದು ಯಾವಾಗ?

13 Aug, 2017
ಮತ್ತೆ ಜಲಸಂಕಟದೆಡೆಗೆ ಕರ್ನಾಟಕ...

ನಾಲ್ಕನೇ ಆಯಾಮ
ಮತ್ತೆ ಜಲಸಂಕಟದೆಡೆಗೆ ಕರ್ನಾಟಕ...

6 Aug, 2017
ಧರ್ಮಸಿಂಗ್‌ ಕುರಿತು ಹೀಗೊಂದಿಷ್ಟು ನೆನಪುಗಳು...

ನಾಲ್ಕನೇ ಆಯಾಮ
ಧರ್ಮಸಿಂಗ್‌ ಕುರಿತು ಹೀಗೊಂದಿಷ್ಟು ನೆನಪುಗಳು...

30 Jul, 2017