ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯದತ್ತ ಚಿತ್ತ ನೆಟ್ಟ ನಿಕ್ಷೇಪ್

Last Updated 18 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

‘ಬರುವ ವರ್ಷದಿಂದ ಫ್ಯೂಚರ್ ಟೆನಿಸ್ ಸರಣಿಯ ಟೂರ್ನಿಗಳಲ್ಲಿ ಆಡಲು ಆರಂಭಿಸುತ್ತೇನೆ. ವೃತ್ತಿಪರ ಟೆನಿಸ್‌ನಲ್ಲಿ ಶ್ರೇಯಾಂಕದಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಉನ್ನತ ಸಾಧನೆ ಮಾಡುವುದು ನನ್ನ ಗುರಿ’ ಈ ಮಾತುಗಳನ್ನು ಹೇಳುವಾಗ ಆ ಹುಡುಗನ ಕಂಗಳಲ್ಲಿ ಕನಸುಗಳ ಹಂದರವಿತ್ತು. ತನ್ನ ಪ್ರತಿಭೆ ಮತ್ತು ಸಾಮರ್ಥ್ಯವನ್ನು ವರ್ಧಿಸುತ್ತ, ಸಾಧನೆಯ ವ್ಯಾಪ್ತಿಯನ್ನು  ಜಗದಗಲ ಹಿಗ್ಗಿಸುವ ಅದಮ್ಯವಾದ ಛಲವಿತ್ತು. 

ಬೆಂಗಳೂರಿನ ಬಿ.ಆರ್. ನಿಕ್ಷೇಪ್ ಅವರೇ ಆ ಪ್ರತಿಭಾನ್ವಿತ ಟೆನಿಸ್ ಆಟಗಾರ.  ಕಳೆದ ಒಂದು ದಶಕಗಳಿಂದ ಟೆನಿಸ್ ಅಂಗಳದಲ್ಲಿ ಹಲವು ಗಮನ ಸೆಳೆಯುವ ಸಾಧನೆ ಮಾಡಿರುವ ನಿಕ್ಷೇಪ್ ಅವರತ್ತ ರಾಜ್ಯದ ಟೆನಿಸ್‌ಪ್ರಿಯರು ಭರವಸೆಯ ಕಂಗಳು ನೆಟ್ಟಿದ್ದಾರೆ. ಅದಕ್ಕೆ ತಕ್ಕಂತೆ ಬೆಳೆಯುವ ಹಂಬಲದಲ್ಲಿ ನಿಕ್ಷೇಪ್ ಕೂಡ ಇದ್ದಾರೆ. 

ಜೂನಿಯರ್ ಮತ್ತು ಐಟಿಎಫ್ ಟೂರ್ನಿಗಳಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇತ್ತೀಚೆಗಷ್ಟೆ ಪುಣೆಯಲ್ಲಿ ಎಂಎಸ್‌ಎಲ್‌ಟಿಎ ಮತ್ತು ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ ಸಹಯೋಗದಲ್ಲಿ (ಐಟಿಎಫ್‌)  ನಡೆದ ಗ್ರೇಡ್‌–3 ಟೆನಿಸ್‌ ಟೂರ್ನಿಯ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಥಾಯ್ಲೆಂಡ್‌ನ ರಾಕಪುವಾಂಗ್‌ಚೊನ್‌ ವೊರಾಚೊನ್‌ ಅವರೊಂದಿಗೆ ಆಡಿದ್ದರು. ಈ ಸಂದರ್ಭದಲ್ಲಿ ‘ಪ್ರಜಾವಾಣಿ’ಯೊಂದಿಗೆ ತಮ್ಮ ಸಾಧನೆ ಮತ್ತು ಭವಿಷ್ಯದ ಯೋಜನೆಗಳನ್ನು ನಿಕ್ಷೇಪ್ ಹಂಚಿಕೊಂಡಿದ್ದಾರೆ.

* ಫ್ಯೂಚರ್ ಟೂರ್ನಿಯಲ್ಲಿ ಆಡುವುದರಿಂದ ನಿಮ್ಮ ಬೆಳವಣಿಗೆಗೆ  ಪ್ರಯೋಜನವಾಗಲಿದೆಯೇ?
2017ರ ಫೆಬ್ರುವರಿಯಿಂದ ಫ್ಯೂಚರ್ ಸರಣಿ ಆರಂಭವಾಗುತ್ತದೆ. ಭಾರತದಲ್ಲಿ ಐದು ಸುತ್ತು ಪಂದ್ಯಗಳು ನಡೆಯುತ್ತವೆ.  ಆ ಪಂದ್ಯಗಳಲ್ಲಿ ಗೆಲ್ಲುವುದರಿಂದ ಅಂತರ ರಾಷ್ಟ್ರೀಯಮಟ್ಟದ ಶ್ರೇಯಾಂಕಗಳು ದೊರೆಯುತ್ತವೆ. ಅದರಿಂದ ಸೀನಿಯರ್ ವಿಭಾಗದ ಉನ್ನತ ಟೂರ್ನಿಗಳಲ್ಲಿ ಆಡಲು ಅವಕಾಶ ಸಿಗುತ್ತದೆ. ವೃತ್ತಿಪರ ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಗಳಲ್ಲಿ ಆಡಲು ಫ್ಯೂಚರ್. ಎಟಿಪಿ ಮತ್ತಿತರ ಪ್ರತಿಷ್ಠಿತ ಟೂರ್ನಿಗಳಲ್ಲಿ ಉತ್ತಮ ಸಾಧನೆ ಮಾಡಬೇಕು.

* ಮುಂದಿನ ಯೋಜನೆಗಳು ಏನು?
ಉನ್ನತ ಮಟ್ಟದ ತರಬೇತಿಯ ಅಗತ್ಯವಿದೆ.  ನಮ್ಮ ದೇಶದಲ್ಲಿರುವ ಸೌಲಭ್ಯಗಳು ಮತ್ತು ತರಬೇತಿ ವ್ಯವಸ್ಥೆಗಳು ವಿದೇಶಗಳ ಮಟ್ಟದಲ್ಲಿ ಇಲ್ಲ.  ಇಲ್ಲಿ ಅಂತರರಾಷ್ಟ್ರೀಯ ಟೂರ್ನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುವುದಿಲ್ಲ. ಆದರೆ, ಯುರೋಪ್ ದೇಶಗಳಿಗೆ ಹೋಗಿ ತರಬೇತಿ ಪಡೆದರೆ ಸಾಕಷ್ಟು ಪ್ರಯೋಜನಗಳಿವೆ. ಅಂತರರಾಷ್ಟ್ರೀಯ ಶ್ರೇಯಾಂಕದಲ್ಲಿ ಹೆಚ್ಚು ಪಾಯಿಂಟ್‌ಗಳನ್ನು ಗಳಿಸಲು ಸಾಧ್ಯವಾಗುತ್ತದೆ. ಆದರೆ, ವೈಯಕ್ತಿಕ ಕೋಚ್ ನೆರವು ಪಡೆಯಲು ಬಹಳಷ್ಟು ದುಡ್ಡು ಬೇಕು.

ಪ್ರವಾಸ, ತರಬೇತಿ ಶುಲ್ಕ ಮತ್ತಿತರ ಖರ್ಚುಗಳು ಸೇರಿ ವರ್ಷಕ್ಕೆ ಕನಿಷ್ಠ 30 ಲಕ್ಷ ರೂಪಾಯಿ  ಬೇಕಾಗುತ್ತದೆ.  ಇಷ್ಟೊಂದು ಹಣ ಭರಿಸಲು ಪ್ರಾಯೋಜಕತ್ವದ ಅವಶ್ಯಕತೆ ಇದೆ.  ದೊಡ್ಡ ಸಾಧನೆ ಮಾಡಿದಾಗ ಮಾತ್ರ ಪ್ರಾಯೋಜಕರು ಹಣ ನೀಡಲು ಮುಂದೆ ಬರುತ್ತಾರೆ. ಆದರೆ ನಾವು ಬೆಳೆಯುವ ಹಂತದಲ್ಲಿ ಕೈಹಿಡಿಯಲು ದೊಡ್ಡ ಪ್ರಾಯೋಜಕರು ಬರುವುದಿಲ್ಲ. 

* ಈಗ ನಿಮಗೆ ಸಿಗುತ್ತಿರುವ ತರಬೇತಿಯ ಸ್ವರೂಪ ಏನು? ಅದಕ್ಕೆ ಆಗುತ್ತಿರುವ ವೆಚ್ಚ ಎಷ್ಟು?
ಬೆಂಗಳೂರಿನಲ್ಲಿದ್ದಾಗ ಸುಭಾಷ್ ದಾಸ್ ಅವರಲ್ಲಿ ತರಬೇತಿ ಪಡೆಯುತ್ತೇನೆ. ಆದರೆ, ಕೆಲವು ವರ್ಷಗಳಿಂದ ನಾನು ದೆಹಲಿಯ ಸಿರಿಪೋರ್ಟ್‌ನಲ್ಲಿ ತರಬೇತಿ ಪಡೆಯುತ್ತಿದ್ದೇನೆ.

ಅಲ್ಲಿ ಆದಿತ್ಯ ಸಚದೇವ್ ಕೋಚ್ ಆಗಿದ್ದಾರೆ.  ನಾನು ಓದುತ್ತಿರುವ ಸುರಾನಾ ಕಾಲೇಜಿನವರು ನಡೆಸುವ ಮೈಕ್ರೋಲ್ಯಾಬ್ಸ್‌ ಮೂಲಕ ನನಗೆ ನೆರವು ನೀಡುತ್ತಿದ್ದಾರೆ. ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (ಡಿವೈಎಸ್‌ಎಸ್) ಯೋಜನೆಗಳಲ್ಲಿ ಸ್ವಲ್ಪ ಸಹಾಯ ಸಿಗುತ್ತಿದೆ. ಉಳಿದಂತೆ ನನ್ನ ತಂದೆಯೇ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ.

* ಪುಣೆ ಟೂರ್ನಿಯ ಅನುಭವ ಹೇಗಿತ್ತು?
ಥಾಯ್ಲೆಂಡ್ ಆಟಗಾರ ರಾಕ್‌ಪುವಾಂಗ್‌ಚೋನ್ ಅವರೊಂದಿಗೆ ಮೊದಲ ಬಾರಿ ಡಬಲ್ಸ್ ನಲ್ಲಿ ಜೊತೆಯಾಗಿ ಅಡಿದೆ.   ಸರ್ವಿಸ್ ಮತ್ತು ವಾಲಿಯಲ್ಲಿ ಪರಿಣತ ಆಟಗಾರ ನಾಗಿದ್ದ ಚೋನ್ ಜೊತೆಗೆ ಉತ್ತಮ ಹೊಂದಾಣಿಕೆ ಏರ್ಪಟ್ಟಿತ್ತು. ಅದರಿಂದಾಗಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಯಿತು.

* ನೀವು ಟೆನಿಸ್ ಕ್ರೀಡೆಯನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ?
ಏಳು ವರ್ಷದವನಿದ್ದಾಗ ಟಿವಿಯಲ್ಲಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ ವೀಕ್ಷಿಸುತ್ತಿದ್ದೆ.  ಆಟಕ್ಕೆ ಆಕರ್ಷಿತನಾದೆ. ನನ್ನ ಆಸಕ್ತಿ ಗಮನಿಸಿದ ಅಪ್ಪ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ನಡೆಯುವ ತರಬೇತಿ ಕೇಂದ್ರಕ್ಕೆ ಸೇರಿಸಿದರು. ಅಲ್ಲಿ ಸುಭಾಷ್ ದಾಸ್ ಮತ್ತು ಜೋಸೆಫ್ ದಾಸ್  ಅವರು ನನಗೆ ತರಬೇತಿ ನೀಡಲಾರಂಭಿಸಿದರು. 

ಆರಂಭದಲ್ಲಿ ಅಷ್ಟೊಂದು ಗಂಭೀರ ಕಲಿಕೆ ಇರಲಿಲ್ಲ. ಆದರೆ, ದಿನಗಳೆದಂತೆ ಆಟದ ಬಗ್ಗೆ ಹೆಚ್ಚು ಆಸಕ್ತಿ ಬೆಳೆಯತೊಡಗಿತು.  10 ವರ್ಷದೊಳಗಿನವರ ರಾಜ್ಯಮಟ್ಟದ ಟೂರ್ನಿಯಲ್ಲಿ ಗೆದ್ದಿದ್ದು ಮತ್ತಷ್ಟು ಉತ್ಸಾಹ ತುಂಬಿತು. ಅಪ್ಪ–ಅಮ್ಮನೂ ಬೆಂಬಲಕ್ಕೆ ನಿಂತರು. ಶಾಲೆಯಿಂದಲೂ ಪ್ರೋತ್ಸಾಹ ಸಿಕ್ಕಿತು. ನಮ್ಮ ಕುಟುಂಬದಲ್ಲಿ ಕ್ರೀಡಾಪಟುಗಳಿಲ್ಲ. ಈಗ ನಾನು ಮತ್ತು ನನ್ನ ತಮ್ಮ ನಿನಾದ್ ಟೆನಿಸ್ ಆಡುತ್ತಿದ್ದೇವೆ.

* ಇಷ್ಟು ವರ್ಷಗಳಲ್ಲಿ ನಿಮಗೆ ವಿಶೇಷ ಅನುಭವ ನೀಡಿದ ಟೂರ್ನಿ ಯಾವುದು?
2011ರಲ್ಲಿ ಅಖಿಲ ಭಾರತ 14 ವರ್ಷದೊಳಗಿನವರ ಚಾಂಪಿಯನ್‌ಷಿಪ್ ಗೆದ್ದೆ. ಅಲ್ಲಿ ಭಾರತದ ಎರಡನೇ ಶ್ರೇಯಾಂಕದ ಆಟಗಾರರಾಗಿದ್ದ  ಸಚಿನ್ ಕುಮಾರ್ ಅವರನ್ನು ಫೈನಲ್‌ನಲ್ಲಿ ಸೋಲಿಸಿದ್ದೆ.  ಭಾರತ ತಂಡಕ್ಕೂ ಆಯ್ಕೆಯಾಗಿದ್ದೆ ಅದು ನನಗೆ ಅತ್ಯಂತ ಖುಷಿ ಕೊಟ್ಟ ಟೂರ್ನಿ. 

ಹೋದವರ್ಷ ಚೀನಾದಲ್ಲಿ ಗ್ರೇಡ್ –1 ಟೂರ್ನಿಯ ಡಬಲ್ಸ್‌ನಲ್ಲಿ ಅಲ್ಬರ್ಟೊ ಲಿಮ್ ಜೊತೆಗೂಡಿ ಗೆದ್ದಿದ್ದು. ಜೂನಿಯರ್ ಡೆವಿಸ್‌ ಕಪ್‌ನಲ್ಲಿ ಆಡಿದ್ದು, ಇತ್ತೀಚೆಗೆ ಮೆಲ್ಬರ್ನ್‌ನಲ್ಲಿ ನಡೆದಿದ್ದ ಜೂನಿಯರ್ ಗ್ರ್ಯಾಂಡ್‌ಸ್ಲಾಮ್‌ಗೆ (ಆಸ್ಟ್ರೇಲಿಯಾ ಓಪನ್) ಟೂರ್ನಿಯಲ್ಲಿ ಆಡಿದ್ದು ವಿಶೇಷ ಅನುಭವ ನೀಡಿವೆ. ಸಾಕಷ್ಟು ಕಲಿಯುವ ಅವಕಾಶ ನೀಡಿದ್ದವು. ಅದರಲ್ಲೂ ಮಣಿಕಟ್ಟಿನ ಗಾಯದಿಂದ ಚೇತರಿಸಿ ಕೊಳ್ಳುತ್ತಿದ್ದ ಸಂದರ್ಭದಲ್ಲಿ ಆಸ್ಟ್ರೇಲಿಯಾ ಓಪನ್ ಆಡಿದ್ದೆ. ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿಯೇ ಹೊರಬಿದ್ದಿದ್ದೆ. ಆದರೆ ಅಲ್ಲಿಯ ಸೌಲಭ್ಯಗಳು, ವ್ಯವಸ್ಥೆಯನ್ನು ನೋಡಿ ಬೆರಗಾಗಿದ್ದೆ.

* ಓದು ಮತ್ತು ಆಟವನ್ನು ಏಕಕಾಲದಲ್ಲಿ ಹೇಗೆ ನಿಭಾಯಿಸುತ್ತೀರಿ?
ಇಡೀ ದಿನ ಅಭ್ಯಾಸದಿಂದ ದಣಿದಿದ್ದರೂ ರಾತ್ರಿ 2–3 ಗಂಟೆಗಳ ಕಾಲ ಓದುವ ರೂಢಿಯಿದೆ. ಶಾಲಾ ದಿನಗಳಲ್ಲಿ ಶಿಕ್ಷಣದಲ್ಲಿ ಉತ್ತಮ ಫಲಿತಾಂಶ ಸಾಧನೆ ಮಾಡಿದ್ದೇನೆ.ಅದಕ್ಕೆ ನಾನು ಓದಿದ ಶ್ರೀವಾಣಿ ಶಾಲೆಯ ಶಿಕ್ಷಕರು ಮತ್ತು ಆಡಳಿತ ಮಂಡಳಿಯು ನೀಡಿದ ಬೆಂಬಲವೂ ಕಾರಣ. ಟೂರ್ನಿ ಆಡಲು ಹೋದ ದಿನಗಳಲ್ಲಿ ತಪ್ಪಿಸಿಕೊಂಡ ಪಾಠಗಳನ್ನು ವಿಶೇಷ ತರಗತಿಗಳ ಮೂಲಕ ನೀಡುತ್ತಿದ್ದರು. ಅದರಿಂದ ಓದಿನಲ್ಲಿ ಹಿಂದೆ ಬೀಳಲಿಲ್ಲ.

* ನೀವು ಯಾವ ಟೆನಿಸ್‌ ಆಟಗಾರನನ್ನು ಅನುಕರಿಸುತ್ತೀರಿ?
ರೋಜರ್ ಫೆಡರರ್ ನನ್ನ ನೆಚ್ಚಿನ ಆಟಗಾರ. ಅವರ ಆಟದ ಶೈಲಿ ಮತ್ತು ಆಟದಂಕಣದಲ್ಲಿ ಅವರ ನಡವಳಿಕೆಗಳು ಅನುಕರಣೀಯ. ನಮ್ಮ ದೇಶದ ಸೋಮದೇವ್ ವರ್ಮನ್ ಅವರ ಆಟವೂ ಇಷ್ಟ.

* ಅಭ್ಯಾಸ ಮತ್ತು ಫಿಟ್‌ನೆಸ್‌ ನಿರ್ವಹಣೆ ಕುರಿತು ಹೇಳಿ?
ಪ್ರತಿದಿನ ನಾಲ್ಕು ಗಂಟೆ ಟೆನಿಸ್ ಅಭ್ಯಾಸ ಮಾಡುತ್ತೇನೆ. ಅದರೊಂದಿಗೆ ಎರಡು ಗಂಟೆಗಳ ಕಾಲ ಫಿಟ್‌ನೆಸ್ ವ್ಯಾಯಾಮಗಳನ್ನು ಮಾಡುತ್ತೇನೆ. ಉನ್ನತ ಹಂತ ಮುಟ್ಟಿ
ದಂತೆ ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳುವುದೂ ಅವಶ್ಯಕ    

***
ವೈಯಕ್ತಿಕ ವಿವರ

ಹೆಸರು: ಬಿ.ಆರ್. ನಿಕ್ಷೇಪ್

ಕಾಲೇಜು: ಸುರಾನಾ ಕಾಲೇಜು (ಬಿ.ಕಾಂ 2 ವಿದ್ಯಾರ್ಥಿ)

ತಂದೆ: ರವಿಕುಮಾರ್
(ಸಿವಿಎಲ್ ಎಂಜಿನಿಯರ್)

ತಾಯಿ:  ಶೋಭಾ

ಸಹೋದರ: ನಿನಾದ್ (8ನೇ ತರಗತಿ)   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT