ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಗತಿಯ ಪಥದಲ್ಲಿ...

ಭಾರತದಲ್ಲಿ ಬಿಲಿಯರ್ಡ್ಸ್‌ ಮತ್ತು ಸ್ನೂಕರ್‌
Last Updated 18 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

‘ನಾನು ಆಡಲು ಆರಂಭಿಸಿದಾಗಿನ ದಿನಗಳಿಗೆ ಹೋಲಿಸಿದರೆ, ಈಗ ಪರಿಸ್ಥಿತಿ ತುಂಬಾ ಸುಧಾರಿಸಿದೆ.  ಇಂದು ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಕ್ರೀಡೆ ಜನ ಸಾಮಾನ್ಯರಿಗೆ ಹತ್ತಿರವಾಗತೊಡಗಿದೆ.  ಹೀಗಾಗಿ ನಮ್ಮವರು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ನಿರಂತರವಾಗಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗುತ್ತಿದೆ ’ ಹೀಗೆ ತಮ್ಮ ಮನದಾಳವನ್ನು ಬಿಚ್ಚಿಟ್ಟವರು ಕರ್ನಾಟಕದ ಅನುಭವಿ ಆಟಗಾರ ಬಿ. ಭಾಸ್ಕರ್‌.

ಕಾಮನ್‌ವೆಲ್ತ್‌ ದೇಶಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಕ್ರೀಡೆ ಭಾರತದ ನೆಲದಲ್ಲೂ ನಿಧಾನವಾಗಿ ತನ್ನ ಬೇರುಗಳನ್ನು ಇನ್ನೂ ಆಳಕ್ಕಿಳಿಸುತ್ತಿದೆ. ವಿಲ್ಸನ್‌ ಜೋನ್ಸ್‌, ಮೈಕಲ್‌ ಫೆರೇರಾ, ಅಶೋಕ್‌ ಶಾಂಡಿಲ್ಯ, ಗೀತ್‌ ಸೇಥಿ, ಪಂಕಜ್‌ ಅಡ್ವಾಣಿ  ಹೀಗೆ ಅನೇಕರು ಈ ಕ್ರೀಡೆಯಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಗಳನ್ನು ಮೂಡಿಸಿ ಭಾರತದ ಕೀರ್ತಿಯನ್ನು ವಿಶ್ವದ ಎತ್ತರಕ್ಕೆ ಕೊಂಡೊಯ್ದಿದ್ದಾರೆ.

ವಿಶ್ವ ಚಾಂಪಿಯನ್‌ಷಿಪ್‌ ಸೇರಿದಂತೆ ಇತರ ಅಂತರರಾಷ್ಟ್ರೀಯ ಕೂಟಗಳ ಜೂನಿಯರ್‌ ಮತ್ತು ಸೀನಿಯರ್‌ ವಿಭಾಗಗಳಲ್ಲಿ ಭಾರತದ ಮಹಿಳಾ ಮತ್ತು ಪುರುಷ ಸ್ಪರ್ಧಿಗಳು ಪಾರಮ್ಯ ಮೆರೆಯುತ್ತಿದ್ದಾರೆ. ಭಾರತದಲ್ಲಿ ಈ ಕ್ರೀಡೆ ನಿಧಾನವಾಗಿ ಛಾಪು ಮೂಡಿಸುತ್ತಿದೆ ಎಂಬುದಕ್ಕೆ ಇದು ನಿದರ್ಶನದಂತಿದೆ.

ಇತಿಹಾಸದ ಪುಟ ತಿರುವಿದಾಗ
ಭಾರತದಲ್ಲಿ ಬಿಲಿಯರ್ಡ್ಸ್‌ ಮತ್ತು ಸ್ನೂಕರ್‌ ಕ್ರೀಡೆಗೆ ದೊಡ್ಡ ಪರಂಪರೆ ಇದೆ. ಎಂ.ಎಂ. ಬೆಗ್‌ ಅವರ    ಪರಿಶ್ರಮದಿಂದ 1920ರಲ್ಲಿ ಭಾರತಕ್ಕೆ ಪರಿಚಿತವಾದ ಬಿಲಿಯರ್ಡ್ಸ್‌ ಕ್ರೀಡೆ ಆರಂಭದಲ್ಲಿ  ಏಳು ಬೀಳಿನ ಹಾದಿ ಸವೆಸಿತ್ತು. ಕ್ರಿಕೆಟ್‌ ಮತ್ತು ಹಾಕಿಯ ಜನಪ್ರಿಯತೆಯ ಪ್ರವಾಹದಲ್ಲಿ ಸಿಲುಕಿ ನಲುಗಿದ್ದ ಇತರೆ ಕ್ರೀಡೆಗಳ ಸಾಲಿನಲ್ಲಿ ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಕೂಡಾ ಸೇರಿತ್ತು.

1926ರ ನಂತರ ಈ ಕ್ರೀಡೆ  ಮರು ಜನ್ಮ ಪಡೆಯಿತು. ಆ ವರ್ಷ ಕಲ್ಕತ್ತದಲ್ಲಿ ಭಾರತ ಬಿಲಿಯರ್ಡ್ಸ್‌ ಮತ್ತು ಸ್ನೂಕರ್‌ ಫೆಡರೇಷನ್‌ ಅಸ್ತಿತ್ವಕ್ಕೆ ಬಂದಿತು. ಆ ಸಂಸ್ಥೆ ಯ ಹುಟ್ಟಿಗೆ ಕಾರಣರಾದವರು ಬೆಗ್‌.   

1955ರ ನಂತರದಲ್ಲಿ ಈ ಕ್ರೀಡೆ ನಿಧಾನವಾಗಿ ಉಸಿರಾಡಲು ಶುರುಮಾಡಿತು . 1958ರಲ್ಲಿ ಕಲ್ಕತ್ತದಲ್ಲಿ ನಡೆದಿದ್ದ ವಿಶ್ವ ಅಮೆಚೂರ್‌ ಬಿಲಿಯರ್ಡ್ಸ್‌ ಚಾಂಪಿಯನ್‌ ಷಿಪ್‌ನಲ್ಲಿ ವಿಲ್ಸನ್‌ ಜೋನ್ಸ್‌ ಅವರು ಪ್ರಶಸ್ತಿ ಗೆದ್ದು ಬಿಲಿಯರ್ಡ್ಸ್‌ ಮತ್ತು ಸ್ನೂಕರ್‌ ಲೋಕ ಭಾರತವನ್ನು ಬೆರಗು ಗಣ್ಣಿನಿಂದ ನೋಡುವಂತೆ ಮಾಡಿದ್ದರು. ಆ ಮೂಲಕ ಈ ಕ್ರೀಡೆಗೆ ಹೊಸ ದಿಕ್ಕು ತೋರಿಸಿದರು. ಬಳಿಕ ಸೇಥಿ, ಮೈಕಲ್‌ ಫೆರೇರಾ ಮತ್ತು ಪಂಕಜ್‌ ಅಡ್ವಾಣಿ ಅವರು ವಿಶ್ವ ಚಾಂಪಿಯನ್‌ಪಟ್ಟ ಮುಡಿಗೇರಿಸಿಕೊಂಡು ಈ ಕ್ರೀಡೆಯಲ್ಲಿ ಭಾರತ ದೊಡ್ಡ ಶಕ್ತಿಯಾಗಿ ಬೆಳೆಯಲು ನೆರವಾಗಿದ್ದು ಇತಿಹಾಸ.

ಬಿಎಸ್‌ಎಫ್‌ಐ ದಿಟ್ಟ ನಡೆ
‘ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆ ಯಿಲ್ಲ. ಆದರೆ ಅವರಿಗೆ ಸರಿಯಾದ ವೇದಿಕೆ ಸಿಗುತ್ತಿಲ್ಲ.  ಈ ಕ್ರೀಡೆಯನ್ನು ಆಸಕ್ತಿದಾಯಕಗೊಳಿಸಿ ಪ್ರೇಕ್ಷಕರನ್ನು ಸೆಳೆಯುವ ಕೆಲಸವೂ ಆಗುತ್ತಿಲ್ಲ’ ಎಂದು ಒಮ್ಮೆ ಗೀತ್‌ ಸೇಥಿ ಬೇಸರ ವ್ಯಕ್ತಪಡಿಸಿದ್ದರು.

ಅವರ ಮಾತು ಸತ್ಯ.  ಕ್ರಿಕೆಟ್‌, ಬ್ಯಾಡ್ಮಿಂಟನ್‌, ಕಬಡ್ಡಿ, ಫುಟ್‌ಬಾಲ್‌ ಹೀಗೆ ಅನೇಕ ಲೀಗ್‌ಗಳು ಇಂದು ಭಾರತದಲ್ಲಿ ಅಸಂಖ್ಯ ಅಭಿಮಾನಿಗಳನ್ನು ಸೆಳೆದು ಕೊಂಡಿವೆ. ಆದರೆ ಬಿಲಿಯರ್ಡ್ಸ್‌ ಮತ್ತು ಸ್ನೂಕರ್‌ ಮಾತ್ರ ಇದರಿಂದ ಹಿಂದೆ ಬಿದ್ದಿದೆ.

ಭಾರತ ಬಿಲಿಯರ್ಡ್ಸ್‌ ಮತ್ತು ಸ್ನೂಕರ್‌ ಫೆಡರೇಷನ್‌ ಈ ಕ್ರೀಡೆಯನ್ನು ಅಭಿವೃದ್ಧಿ ಪಡಿಸಲು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಆದರೆ ಈ ಕಾರ್ಯಕ್ಕೆ  ಸರ್ಕಾರದ ಬೆಂಬಲ ಸಿಗುತ್ತಿಲ್ಲ.

‘ಐದು ಬೆರಳುಗಳು ಒಂದಾದಾಗ ಮಾತ್ರ   ಮುಷ್ಠಿ ಕಟ್ಟಲು ಸಾಧ್ಯ.  ಬಿಲಿಯರ್ಡ್ಸ್‌ ಮತ್ತು ಸ್ನೂಕರ್‌ ಕ್ರೀಡೆಯ ಅಭಿವೃದ್ಧಿ ವಿಚಾರಕ್ಕೂ ಈ ಮಾತು ಅನ್ವಯಿಸುತ್ತದೆ. ಕ್ರೀಡೆಯ ಬೆಳವಣಿಗೆಗಾಗಿ ಫೆಡರೇಷನ್‌ ನಿರಂತರವಾಗಿ ಶ್ರಮಿಸುತ್ತಿದೆ.  ಈ ಕಾರ್ಯಕ್ಕೆ ಸರ್ಕಾರ ಕೈ ಜೋಡಿಸಬೇಕು. ಹಾಗೆಯೇ ಕಾರ್ಪೊರೇಟ್‌ ಕಂಪೆನಿಗಳು ನೆರವಿನ ಹಸ್ತ ಚಾಚಿದರೆ ಈ ಕಾರ್ಯ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ’ ಎಂದು ಭಾಸ್ಕರ್‌ ಅಭಿಪ್ರಾಯ ಪಡುತ್ತಾರೆ.

ಕ್ರೀಡೆಯನ್ನು ತಳಮಟ್ಟದಿಂದ ಬಲಪಡಿಸುವ ಗುರಿ ಇಟ್ಟುಕೊಂಡಿರುವ ಬಿಎಸ್‌ಎಫ್‌ಐ ಪ್ರತಿ ರಾಜ್ಯದಲ್ಲೂ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ. ರಾಜ್ಯ ಸಂಸ್ಥೆಗಳ ಸಹಭಾಗಿತ್ವದಲ್ಲಿ  ಜೂನಿಯರ್‌ ಮತ್ತು ಸೀನಿಯರ್‌ ವಿಭಾಗಗಳಲ್ಲಿ ವರ್ಷವ್ಯಾಪಿ ಒಂದಿಲ್ಲೊಂದು ಚಾಂಪಿಯನ್‌ಷಿಪ್‌ ಆಯೋಜಿಸುತ್ತಿದೆ. ಆ ಮೂಲಕ ಪ್ರತಿಭಾನ್ವೇಷಣೆಗೆ ಕೈ ಹಾಕಿದೆ. ಇದರ ಫಲವಾಗಿಯೇ, ಧ್ವಜ್‌ ಹರಿಯಾ, ಲಕ್ಷ್ಮಣ್‌ ರಾವತ್‌, ವರುಣ್‌ ಮದನ್‌, ವಿನಯ್‌ ಕೊಠಾರಿ ಅವರಂತಹ ಯುವಕರು ಪ್ರವರ್ಧಮಾನಕ್ಕೆ ಬಂದಿದ್ದಾರೆ’ ಎಂದೂ ಕರ್ನಾಟಕದ ಆಟಗಾರ ಹೇಳುತ್ತಾರೆ.

ವೃತ್ತಿಪರತೆಯ ಕೊರತೆ
ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಆಟಗಾರರಲ್ಲಿ ವೃತ್ತಿಪರತೆಯ ಕೊರತೆ ಎದ್ದು ಕಾಣುತ್ತಿದೆ.  ವಾರಾಂತ್ಯದ ದಿನಗಳಲ್ಲಿ ಮಾಲ್‌ಗಳಿಗೆ ಭೇಟಿ ನೀಡುವ ಬಹುತೇಕರು ಮನರಂಜನೆಗಾಗಿ ಮಾತ್ರ ಇದನ್ನು ಆಡುತ್ತಾರೆ. ಆದರೆ  ವೃತ್ತಿಪರ ಕ್ರೀಡೆಯನ್ನಾಗಿ ಸ್ವೀಕರಿಸಿ ಅದರಲ್ಲೇ ಎತ್ತರದ ಸಾಧನೆ ಮಾಡಬೇಕೆಂಬ ಹಂಬಲ ಹೊತ್ತವರು ಬೆರಳೆಣಿಕೆ ಮಂದಿ ಮಾತ್ರ.

ಪ್ರಮುಖ ನಗರಗಳಲ್ಲಿ ಇರುವ ಕೆಲವೇ ಕ್ಲಬ್‌ಗಳಲ್ಲಿ ಸ್ನೂಕರ್‌ ಮತ್ತು ಬಿಲಿ ಯರ್ಡ್ಸ್‌ ಬೋರ್ಡ್‌ಗಳ ವ್ಯವಸ್ಥೆ ಇದೆ. ಅಲ್ಲಿ ಗಂಟೆಗೆ ಇಂತಿಷ್ಟು ಹಣ ನೀಡಿ ಆಡಬೇಕಾಗುತ್ತದೆ. ನಿತ್ಯ ಅಷ್ಟು ಹಣ ನೀಡಿ  ಮಕ್ಕಳಿಗೆ ಆಟ ಕಲಿಸಲು ಪೋಷಕರು ಕೂಡಾ ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಗ್ರಾಮೀಣ ಭಾಗದವರಿಗೆ ಇದರ ಪರಿಚ ಯವೇ ಇಲ್ಲವಾಗಿದೆ. ಇದರಿಂದ ಕ್ರೀಡೆಯ ಬೆಳವಣಿಗೆಯ ವೇಗ ಕುಂಠಿತವಾಗುತ್ತಿದೆ.

‘ಇತ್ತೀಚಿನ ದಿನಗಳಲ್ಲಿ ರೈಲ್ವೆ, ಒಎನ್‌ಜಿಸಿ ಹೀಗೆ ಪ್ರಮುಖ ಇಲಾಖೆ ಹಾಗೂ ಕಂಪೆನಿಗಳಲ್ಲಿ ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಆಟಗಾರರಿಗೆ ವಿಶೇಷ ಕೋಟಾದಡಿ ಉದ್ಯೋಗವಕಾಶ ಕಲ್ಪಿಸಲಾಗುತ್ತಿದೆ. ಹೀಗಾಗಿ ಪೋಷಕರ ಮನೋಭಾವವೂ ಬದಲಾಗಿದ್ದು ಈಗ ಎಲ್ಲರೂ  ತಮ್ಮ ಮಕ್ಕಳಿಗೆ ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಕಲಿಸಲು ಮುಂದಾಗುತ್ತಿದ್ದಾರೆ’ ಎಂದೂ ಭಾಸ್ಕರ್ ಹೇಳುತ್ತಾರೆ.

ಹಿಂದೆ ಬೀಳದ ಮಹಿಳೆಯರು
ಪುರುಷರು ಮಾತ್ರವಲ್ಲದೆ ಮಹಿಳೆಯರೂ   ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಅಂಗಳದಲ್ಲಿ ಮಿಂಚುತ್ತಿರುವುದು ಗಮನಾರ್ಹ. ಚಿತ್ರಾ ಮಗಿಮೈರಾಜ್‌, ಅಮಿ ಕಾಮನಿ, ಆರ್‌. ಉಮಾದೇವಿ, ವಿದ್ಯಾ ಪಿಳ್ಳೈ, ಸುನಿತಿ ದಮಾನಿ, ಆಕಾಂಕ್ಷ ಎಸ್‌. ಠಾಕೂರ್‌, ವರ್ಷಾ ಸಂಜೀವ್‌, ಅನುಜಾ ಠಾಕೂರ್‌, ಅರಾಂಕ್ಸಾ ಸ್ಯಾಂಚಿಸ್‌ ಹೀಗೆ ಅನೇಕರೂ ಈ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. 

ಕರ್ನಾಟಕದಲ್ಲೂ ಪಸರಿಸಿದ ಕಂಪು
ಭಾರತದ ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ಗೆ ಕರ್ನಾಟಕದ ಕೊಡುಗೆ ಅಪಾರ. ಪಂಕಜ್‌ ಅಡ್ವಾಣಿ, ಬಿ. ಭಾಸ್ಕರ್‌, ಚಿತ್ರಾ ಮಗಿಮೈರಾಜ್‌, ಆರ್‌. ಉಮಾದೇವಿ ಹೀಗೆ ಅನೇಕರು ದೇಶವನ್ನು ಪ್ರತಿನಿಧಿಸಿ ಅನೇಕ ಪ್ರಶಸ್ತಿಗಳನ್ನು ಎತ್ತಿ ಹಿಡಿದಿದ್ದಾರೆ. ಇವರ ಸಾಧನೆಯ ಹಿಂದಿನ ಶಕ್ತಿ ಕರ್ನಾಟಕ ರಾಜ್ಯ ಬಿಲಿಯರ್ಡ್ಸ್‌ ಸಂಸ್ಥೆ (ಕೆಎಸ್‌ಬಿಎ).

67 ವರ್ಷಗಳ ಇತಿಹಾಸ ಹೊಂದಿರುವ ಕೆಎಸ್‌ಬಿಎ ಅತ್ಯಾಧುನಿಕ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ದೇಶದ ಏಕೈಕ ಸಂಸ್ಥೆ ಎನಿಸಿದೆ. ಈ ಸಂಸ್ಥೆ ಆರಂಭದಿಂದಲೂ ಸಬ್‌ ಜೂನಿಯರ್‌, ಜೂನಿಯರ್‌ ಹೀಗೆ ವಿವಿಧ ವಿಭಾಗಗಳಲ್ಲಿ ಲೀಗ್‌ಗಳನ್ನು ಆಯೋಜಿಸುತ್ತಿದೆ.

ಮಕ್ಕಳಲ್ಲಿ ಕ್ರೀಡೆಯ ಬಗೆಗೆ ಆಸಕ್ತಿ ಬೆಳೆಸುವ ಉದ್ದೇಶದಿಂದ ಶಾಲೆಗಳಿಗೆ ಉಚಿತವಾಗಿ ಬೋರ್ಡ್‌ಗಳನ್ನು ನೀಡುವ ಜೊತೆಗೆ ತರಬೇತುದಾರರನ್ನೂ ನೇಮಿಸುವ ಕಾರ್ಯಕ್ಕೆ ನಾಂದಿ ಹಾಡಿ, ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ.

‘ಗೋಲ್ಡನ್‌ ಬಾಯ್‌’ ಮುಡಿಗೆ ಮತ್ತೊಂದು ಗರಿ
ಸ್ನೂಕರ್ ಮತ್ತು ಬಿಲಿಯರ್ಡ್ಸ್‌ ಕ್ರೀಡೆಯ ಇತಿಹಾಸದ ಪುಟಗಳನ್ನು ಒಮ್ಮೆ  ತಿರುವಿ ಹಾಕಿದರೆ ಅಲ್ಲಿ ಪಂಕಜ್ ಅಡ್ವಾಣಿ ಅವರ ಹೆಸರು ರಾರಾಜಿಸುತ್ತದೆ. ಎಳವೆಯಿಂದಲೇ ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ನಲ್ಲಿ ಅಪಾರ ಆಸಕ್ತಿ ಹೊಂದಿದ್ದ ಕರ್ನಾಟಕದ  31 ವರ್ಷದ ಆಟಗಾರ ಈ ಕ್ರೀಡೆಯಲ್ಲಿ ಹಲವು ಮೈಲಿಗಲ್ಲುಗಳನ್ನು ನೆಟ್ಟಿದ್ದಾರೆ.

ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ವಲಯದಲ್ಲಿ ‘ದಿ ಪ್ರಿನ್ಸ್‌ ಆಫ್‌ ಇಂಡಿಯಾ’ ಮತ್ತು ‘ಗೋಲ್ಡನ್‌ ಬಾಯ್‌’ ಎಂದೇ ಹೆಸರಾಗಿರುವ ಪಂಕಜ್‌ ಅವರು ಬಿಲಿಯರ್ಡ್ಸ್‌ನಲ್ಲಿ ‘ಹ್ಯಾಟ್ರಿಕ್‌’ಗಳ ‘ಹ್ಯಾಟ್ರಿಕ್‌’ ಸಾಧನೆ ಮಾಡಿದ ಹಿರಿಮೆ ಹೊಂದಿದ್ದಾರೆ.

ಬೆಂಗಳೂರಿನ ಆಟಗಾರ 2005, 2008 ಮತ್ತು 2012ರಲ್ಲಿ ನಡೆದಿದ್ದ ವಿಶ್ವ, ಏಷ್ಯನ್‌ ಮತ್ತು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಪ್ರಶಸ್ತಿ ಗೆದ್ದು ಈ ಶ್ರೇಯಕ್ಕೆ ಪಾತ್ರರಾಗಿದ್ದರು. 2012ರಲ್ಲಿ ವೃತ್ತಿಪರ ಸ್ನೂಕರ್‌ಗೆ ಪದಾರ್ಪಣೆ ಮಾಡಿದ್ದ ಪಂಕಜ್‌, 2014ರಲ್ಲಿ ಐಬಿಎಸ್‌ಎಫ್‌ ವಿಶ್ವ 6 ರೆಡ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿ ಚೊಚ್ಚಲ ಪ್ರಯತ್ನದಲ್ಲೇ ಪ್ರಶಸ್ತಿ ಎತ್ತಿಹಿಡಿದಿದ್ದರು.

ಸ್ನೂಕರ್‌ನ ಲಾಂಗ್‌ ಅಪ್‌ ಮತ್ತು ಶಾರ್ಟ್‌ ಮಾದರಿಗಳಲ್ಲಿ ಹಾಗೂ ಬಿಲಿಯರ್ಡ್ಸ್‌ನ ಟೈಮ್‌ ಮತ್ತು ಪಾಯಿಂಟ್ಸ್‌ ಮಾದರಿಗಳಲ್ಲಿ ಪ್ರಶಸ್ತಿ ಗೆದ್ದ ವಿಶ್ವದ ಮೊದಲ ಮತ್ತು ಏಕೈಕ ಆಟಗಾರ ಎಂಬ ದಾಖಲೆಯೂ ಪಂಕಜ್‌ ಹೆಸರಿನಲ್ಲಿದೆ.

2014ರ ಆಗಸ್ಟ್‌ 14 ರಂದು ನಡೆದಿದ್ದ 6 ರೆಡ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ  ಗೌರವ ಹೊಂದಿರುವ ಪಂಕಜ್‌ ತಮ್ಮ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆ ಮಾಡಿಕೊಂಡಿದ್ದಾರೆ. ಹೋದ ವಾರ ತವರಿನಲ್ಲಿ ನಡೆದಿದ್ದ ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನ  ಪಾಯಿಂಟ್ಸ್‌ ಮಾದರಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಅವರು ಒಟ್ಟಾರೆ 16ನೇ ಟ್ರೋಫಿ ಎತ್ತಿ ಹಿಡಿದು ಈ ಕ್ರೀಡೆಯಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ.

45ರ ಹರೆಯದಲ್ಲೂ ಬತ್ತದ ಉತ್ಸಾಹ
ಸಾಧನೆಯ ಹಸಿವು ಇದ್ದವರಿಗೆ ವಯಸ್ಸು ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಕರ್ನಾಟಕದ ಕೆ. ಭಾಸ್ಕರ್‌ ಉತ್ತಮ ಉದಾಹರಣೆ. ಹೋದ ವಾರ ಉದ್ಯಾನನಗರಿಯಲ್ಲಿ ನಡೆದಿದ್ದ ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಅಮೋಘ ಆಟ ಆಡಿದ 45 ವರ್ಷದ ಭಾಸ್ಕರ್‌ ಎಲ್ಲರ ಗಮನ ಸೆಳೆದರು. ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ ಮತ್ತು ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚಿನ ಸಾಧನೆ ಮಾಡಿರುವ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

* ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಆಡಲು ಶುರುಮಾಡಿದ ದಿನಗಳ ಬಗ್ಗೆ ಹೇಳಿ?
ತಂದೆ ವಿ. ಬಾಲಚಂದ್ರ ಅವರು ಕೆಎಸ್‌ಬಿಎ ಉಪಾಧ್ಯಕ್ಷರಾಗಿದ್ದರು. ಚಿಕ್ಕವನಾಗಿದ್ದಾಗ ಅವರ ಜೊತೆಗೆ ಕ್ಲಬ್‌ಗೆ ಹೋಗುತ್ತಿದ್ದಾಗ ಅಲ್ಲಿ ಸಾಕಷ್ಟು ಜನ ಬಿಲಿಯರ್ಡ್ಸ್‌ ಆಡುತ್ತಿದ್ದುದನ್ನು ನೋಡುತ್ತಿದ್ದೆ.

18 ವರ್ಷದೊಳಗಿನವರಿಗೆ ಅಲ್ಲಿ ಆಡಲು ಅವಕಾಶ ಇರಲಿಲ್ಲ.18 ವರ್ಷದವನಾಗಿದ್ದಾಗ ಅಪ್ಪ ಮನೆಗೆ ಒಂದು ಬೋರ್ಡ್‌ ತಂದಿದ್ದರು. ಅದರಲ್ಲಿ ಒಬ್ಬನೇ ತಡ ರಾತ್ರಿವರೆಗೂ  ಆಡುತ್ತಿದ್ದೆ. ಹೀಗೆ ಇದರಲ್ಲಿ ಆಸಕ್ತಿ ಬೆಳೆಯಿತು.  ಬಳಿಕ ಸಬ್‌ ಜೂನಿಯರ್‌, ಜೂನಿಯರ್‌ ಹೀಗೆ ವಿವಿಧ ವಯೋಮಾನದ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದೆ. ನಂತರ ರಾಜ್ಯ ಮತ್ತು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲೂ ಶ್ರೇಷ್ಠ ಸಾಮರ್ಥ್ಯ ತೋರಿದೆ. 

* ಈ ಬಾರಿಯೂ ವಿಶ್ವ ಚಾಂಪಿಯನ್‌ಷಿಪ್‌ನ ಪ್ರಶಸ್ತಿಯ ಕನಸು ಕೈಗೂಡಲಿಲ್ಲವಲ್ಲ?
ತವರಿನ ಅಭಿಮಾನಿಗಳ ಎದುರು ಪ್ರಶಸ್ತಿ ಗೆಲ್ಲಬೇಕೆಂಬ ಕನಸು ಹೊತ್ತಿದ್ದೆ. ಕ್ವಾರ್ಟರ್ ಫೈನಲ್‌ನಲ್ಲೇ ಸೋತಿದ್ದರಿಂದ ತುಂಬಾ ಬೇಸರವಾಗಿದೆ. ಲೀಗ್‌ ಹಂತದಲ್ಲಿ ಚೆನ್ನಾಗಿ ಆಡಿದ್ದೆ.  ಎಂಟರ ಘಟ್ಟಕ್ಕೂ ಮುನ್ನ ತಕ್ಕ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. 

* 45ರ ಹರೆಯದಲ್ಲೂ ಯುವಕರನ್ನು ನಾಚಿಸುವಂತೆ ಆಡುತ್ತೀರಲ್ಲ. ಇದರ ಹಿಂದಿನ ಗುಟ್ಟು?
ಬಿಲಿಯರ್ಡ್ಸ್‌ ನನ್ನ ಉಸಿರು. ಈ ಕ್ರೀಡೆಯನ್ನು  ತುಂಬಾ ಪ್ರೀತಿಸುತ್ತೇನೆ. ಮುಖ್ಯವಾಗಿ ಫಿಟ್ನೆಸ್‌ಗೆ ಹೆಚ್ಚು ಒತ್ತು ನೀಡುತ್ತೇನೆ. ಹೀಗಾಗಿ ಈ ವಯಸ್ಸಿನಲ್ಲೂ ತುಂಬು ವಿಶ್ವಾಸದಿಂದ ಆಡಲು ಸಾಧ್ಯವಾಗುತ್ತಿದೆ.

* ಒಲಿಂಪಿಕ್ಸ್‌ನಲ್ಲಿ ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಕ್ರೀಡೆಯನ್ನು ಸೇರ್ಪಡೆ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆಯಲ್ಲಾ?
ಎಲ್ಲಾ ಕ್ರೀಡಾಪಟುಗಳ ಹಾಗೆ ನಮಗೂ ಒಲಿಂಪಿಕ್ಸ್‌ನಲ್ಲಿ ಆಡುವ ಮಹದಾಸೆ ಇದೆ. ಹೀಗಾಗಿ ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಅನ್ನು ಇದರಲ್ಲಿ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸುತ್ತಿದ್ದೇವೆ.  ಕೆಲ ರಾಜಕೀಯ ಕಾರಣಗಳಿಂದ  ಈ ಕ್ರೀಡೆಯ ಸೇರ್ಪಡೆಗೆ  ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಹಿಂದೇಟು ಹಾಕುತ್ತಿದೆ.

* ಮುಂದಿನ ಟೂರ್ನಿಗಳ ಬಗ್ಗೆ ಹೇಳಿ?
ಮುಂದಿನ ತಿಂಗಳು ಪುಣೆಯಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಇದೆ. ಅಲ್ಲಿ ಪ್ರಶಸ್ತಿ ಗೆಲ್ಲಬೇಕೆಂಬುದು ಸದ್ಯದ ಗುರಿ. ಅದಕ್ಕೆ ಸಿದ್ಧತೆ ನಡೆಯುತ್ತಿದೆ.          

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT