ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರ ಹಕ್ಕುಗಳ ಅನುಷ್ಠಾನಕ್ಕೆ ಮುಖ್ಯ ಹೆಜ್ಜೆ

Last Updated 18 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಅಂಗವಿಕಲರನ್ನು ತಾರತಮ್ಯದಿಂದ ನಡೆಸಿಕೊಂಡವರಿಗೆ ಗರಿಷ್ಠ ಎರಡು ವರ್ಷದವರೆಗೆ ಸಜೆ ಹಾಗೂ  ₹5 ಲಕ್ಷದವರೆಗೂ ದಂಡ ವಿಧಿಸಲು ಅವಕಾಶ ಇರುವ ಅಂಗವಿಕಲರ ಹಕ್ಕುಗಳ ಮಸೂದೆಯನ್ನು ಚಳಿಗಾಲದ ಅಧಿವೇಶನದ ಕಡೆಯ ದಿನ ಸಂಸತ್ತು ಅಂಗೀಕರಿಸಿದೆ.  ಅಂಗವಿಕಲರ ಹಕ್ಕುಗಳನ್ನು ಅನುಷ್ಠಾನಗೊಳಿಸುವಲ್ಲಿ ಇದು ಮಹತ್ವದ ಹೆಜ್ಜೆ.  ಅಂಗವಿಕಲರಿಗೆ ಸಂಬಂಧಿಸಿದ ಸಮಗ್ರ ಕಾನೂನಿಗಾಗಿ ಅಂಗವಿಕಲರ ಹಕ್ಕುಗಳಿಗಾಗಿ ಹೋರಾಡುವ ಕಾರ್ಯಕರ್ತರು ಅನೇಕ ವರ್ಷಗಳಿಂದ ಸೆಣಸುತ್ತಲೇ ಬಂದಿದ್ದಾರೆ. 

ಕಲಾಪಗಳೇ ಸರಿಯಾಗಿ ನಡೆಯದ  ಸಂಸತ್ತಿನ ಚಳಿಗಾಲದ ಅಧಿವೇಶನದ ಕಡೆಯ ದಿನ ಅಂತೂ ಈ ಮಸೂದೆಗೆ ಲೋಕಸಭೆ ಅನುಮೋದನೆ ನೀಡಿದೆ,  ಇದಕ್ಕೆ ಮುಂಚೆ ಎರಡು ದಿನ ಮೊದಲು ರಾಜ್ಯಸಭೆಯೂ ಈ ಮಸೂದೆಗೆ ಅನುಮೋದನೆ ನೀಡಿತ್ತು.  1995ರ ಅಂಗವಿಕಲ ವ್ಯಕ್ತಿಗಳ (ಸಮಾನ ಅವಕಾಶ, ಹಕ್ಕುಗಳ ರಕ್ಷಣೆ ಹಾಗೂ ಪೂರ್ಣ ಪಾಲ್ಗೊಳ್ಳುವಿಕೆ) ಕಾಯಿದೆಯ ಬದಲಿಗೆ ಅಸ್ತಿತ್ವಕ್ಕೆ ಬರಲಿರುವ ಈ ಹೊಸ ಮಸೂದೆ ಭಾರತದ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಸಂರಕ್ಷಣೆಯಲ್ಲಿ ದೊಡ್ಡ ಹೆಜ್ಜೆಯಾಗಲಿದೆ.

ಅಂಗವಿಕಲ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ನಿರ್ಣಯಗಳನ್ನು  2007ರಲ್ಲಿ ಭಾರತ ಅನುಮೋದಿಸಿದ ನಂತರದ ಪ್ರಕ್ರಿಯೆಗಳ ಫಲ ಈ ಮಸೂದೆ. ಅಂಗವಿಕಲರನ್ನು ಕುರಿತ ದೃಷ್ಟಿಕೋನಗಳಲ್ಲಿ  ಸಮಾಜದಲ್ಲಿ ದೊಡ್ಡ  ಪರಿವರ್ತನೆಗೆ ಈ ಮಸೂದೆ ಮೆಟ್ಟಿಲಾಗಬಹುದು ಎಂಬಂತಹ ಆಶಯ ಮಹತ್ವದ್ದು. 1995ರ ಕಾಯಿದೆಯಲ್ಲಿ ಏಳು ಬಗೆಯ ನ್ಯೂನತೆಗಳನ್ನು ಮಾತ್ರ ಅಂಗವೈಕಲ್ಯ ಎಂದು ಗುರುತಿಸಲಾಗಿತ್ತು. ಈಗ 21 ವೈಕಲ್ಯಗಳು ಅಥವಾ ನ್ಯೂನತೆಗಳನ್ನು ಹೊಸ ಮಸೂದೆ ವ್ಯಾಪ್ತಿಗೆ ತರಲಾಗುತ್ತದೆ.

ಪಾರ್ಕಿನ್‍ಸನ್, ಆಟಿಸಂ, ಮಾನಸಿಕ ಅಸ್ವಾಸ್ಥ್ಯ, ಮಿದುಳು ಲಕ್ವ, ಸ್ನಾಯು ಬೆಳವಣಿಗೆ ಕುಂಠಿತ, ಹಿಮೊಫೀಲಿಯಾ,  ಆ್ಯಸಿಡ್ ದಾಳಿಯಿಂದಾಗುವ ವೈಕಲ್ಯ ಇತ್ಯಾದಿಗಳನ್ನೂ ಅಂಗವೈಕಲ್ಯದ ಪಟ್ಟಿಗೆ ಸೇರಿಸಲಾಗಿದೆ. ಹೀಗಾದಾಗ ರಾಷ್ಟ್ರದಲ್ಲಿ ಅಂಗವಿಕಲರ ಸಂಖ್ಯೆಯ ಅಂದಾಜು ಇನ್ನೂ ಹೆಚ್ಚಾಗಲಿದೆ. 2011ರ ಜನಗಣತಿಯ ಪ್ರಕಾರ ರಾಷ್ಟ್ರದಲ್ಲಿ 2.68 ಕೋಟಿ ಅಂಗವಿಕಲರಿದ್ದಾರೆ.

ಅಂಗವಿಕಲರಿಗೆ ಸಂಬಂಧಿಸಿದಂತೆ ತಾರತಮ್ಯದ ವಿವರಣೆಯನ್ನು ಮೊದಲ ಬಾರಿಗೆ ಈ ಮಸೂದೆಯಲ್ಲಿ ನೀಡಲಾಗಿದೆ ಎಂಬುದೂ ಮಹತ್ವದ್ದು. ಅಂಗವಿಕಲ ಮಹಿಳೆಯರು ಹಾಗೂ ಮಕ್ಕಳು ಎದುರಿಸುತ್ತಿರುವ ಸವಾಲುಗಳ  ಬಗ್ಗೆ ವಿಶೇಷ ಒತ್ತು ನೀಡಲಾಗಿದೆ. ತಾರತಮ್ಯ ಮಾಡುವವರ ವಿರುದ್ಧ ಶಿಕ್ಷೆಗೆ ಅವಕಾಶ ನೀಡಿರುವುದು ಕಾನೂನು ಜಾರಿಯನ್ನು ಪರಿಣಾಮಕಾರಿಯಾಗಿಸುವಲ್ಲಿ ಸಹಾಯಕವಾಗಬಹುದು ಎಂಬುದು ದೊಡ್ಡ ನಿರೀಕ್ಷೆಯಾಗಿದೆ.

ಎಲ್ಲಾ ನಿರೀಕ್ಷೆಗಳೂ ಈ ಮಸೂದೆಯಲ್ಲಿ ಬಿಂಬಿತವಾಗಲಿಲ್ಲ ಎಂಬ ಅಸಮಾಧಾನವೂ ಅಂಗವಿಕಲರ ಪರ ಹೋರಾಡುತ್ತಿದ್ದ ಕಾರ್ಯಕರ್ತರಿಗಿದೆ. ವಿಶೇಷವಾಗಿ ಉದ್ಯೋಗ ಮೀಸಲು ಪ್ರಮಾಣದಲ್ಲಿನ ಏರಿಕೆ, ಹೋರಾಟಗಾರರ ನಿರೀಕ್ಷೆಗೆ ಅನುಗುಣವಾಗಿಲ್ಲ. ಅಂಗವಿಕಲರಿಗೆ ಉದ್ಯೋಗ ಸಾಧ್ಯತೆಗಳನ್ನು ನಿರ್ಧರಿಸಲು ಸೂಕ್ಷ್ಮ ಹಾಗೂ ಮುಕ್ತ ಮನಸ್ಥಿತಿ ಅಗತ್ಯ. ಈ ಹಿಂದೆಲ್ಲಾ ಅಂಗವಿಕಲರು ನಿರ್ವಹಿಸಲು ಸಾಧ್ಯವಾಗದಿದ್ದ ಕೆಲಸಗಳನ್ನು ತಂತ್ರಜ್ಞಾನ ಅಭಿವೃದ್ಧಿಯಿಂದ ನಿರ್ವಹಿಸುವುದು ಸಾಧ್ಯವಾಗಿದೆ ಎಂಬುದನ್ನು ಗಮನಿಸಬೇಕು.

ಅಂಗವಿಕಲರ ಕುಂದುಕೊರತೆಗಳನ್ನು ಆಲಿಸಲು ರಾಷ್ಟ್ರ ಹಾಗೂ ರಾಜ್ಯ ಮಟ್ಟಗಳಲ್ಲಿ ಶಾಸನಬದ್ಧ ಆಯೋಗಗಳ ರಚನೆಯೂ ಸಾಧ್ಯವಾಗದಿರುವುದು ಹಿನ್ನಡೆ. ಬದಲಿಗೆ ಅಂಗವಿಕಲರ ಮುಖ್ಯ ಆಯುಕ್ತರು, ರಾಜ್ಯ ಆಯುಕ್ತರ ಕಚೇರಿಗಳೇ ನಿಯಂತ್ರಣ ಸಮಿತಿಗಳಾಗಿ ಕೆಲಸ ಮಾಡುವಂತೆ ಬಲಪಡಿಸಲಾಗಿದೆ. ಆದರೆ ತಾರತಮ್ಯಗಳ ವಿರುದ್ಧ ಹೋರಾಡಲು ಇವು  ಪರಿಣಾಮಕಾರಿಯಾಗಿರುತ್ತವೆ ಎಂದು ಹೇಳಲಾಗುವುದಿಲ್ಲ.

ಅಂಗವಿಕಲರ ವಿರುದ್ಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪೂರ್ವಗ್ರಹ ದೃಷ್ಟಿಕೋನಗಳದ್ದೇ ದೊಡ್ಡ ಸಮಸ್ಯೆ. ಅಂಗವಿಕಲರಿಗಾಗಿ ವಿಶೇಷ ಸೌಲಭ್ಯಗಳಿರುವ ಶೌಚಾಲಯಗಳೂ ಭಾರತದಲ್ಲಿ ಅಪರೂಪ. ಇಂತಹ ಸಂದರ್ಭದಲ್ಲಿ ಎಲ್ಲಾ  ಸಾರ್ವಜನಿಕ ಕಟ್ಟಡಗಳು ಹಾಗೂ ಸೌಲಭ್ಯಗಳು ಅಂಗವಿಕಲ ಸ್ನೇಹಿಯಾಗಬೇಕಿವೆ. ಬರೀ ಕಾನೂನು ಅಷ್ಟೇ ಸಾಲದು. ಸಂವೇದನಾಶೀಲತೆ ಮೂಡಿಸಲು ಸಾಮಾಜಿಕ ಜಾಗೃತಿಗೂ ಶ್ರಮಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT