ಅನಿಶ್ಚಿತತೆ ಕಾರಣಕ್ಕೆ ಕುಸಿದ ಬಂಡವಾಳ

ಅನೇಕ ನಕಾರಾತ್ಮಕ ಅಂಶ ಗಳ ಪ್ರಭಾವದಿಂದ ಸೋಮವಾರ ಪೇಟೆಯಲ್ಲಿ ಮಾರಾಟಕ್ಕೆ ಹೆಚ್ಚು ಒಲವು ಕಂಡಿತ್ತು. ಒಪೆಕ್ ದೇಶಗಳು ಜನವರಿಯಿಂದ ಕಚ್ಚಾ ತೈಲ ಉತ್ಪಾದನೆಯನ್ನು ತಗ್ಗಿಸಲಿರುವ ನಿರ್ಧಾರವು, ಕಚ್ಚಾ ತೈಲ ಅವಲಂಬಿತ ಕಂಪೆನಿಗಳಾದ ಏಷ್ಯನ್‌ ಪೈಂಟ್ಸ್‌, ಪಿಡಿಲೈಟ್, ಬರ್ಜರ್ ಪೈಂಟ್ಸ್‌, ತೈಲ ಮಾರಾಟ ಕಂಪೆನಿಗಳಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಅನೇಕ ವಿತ್ತೀಯ ಚಟುವಟಿಕೆ ನಡೆಸುವ ಕಂಪೆನಿಗಳ ಷೇರುಗಳು ಮಾರಾಟಕ್ಕೊಳಪಟ್ಟವು.

ಅನೇಕ ನಕಾರಾತ್ಮಕ ಅಂಶ ಗಳ ಪ್ರಭಾವದಿಂದ ಸೋಮವಾರ ಪೇಟೆಯಲ್ಲಿ ಮಾರಾಟಕ್ಕೆ ಹೆಚ್ಚು ಒಲವು ಕಂಡಿತ್ತು. ಒಪೆಕ್ ದೇಶಗಳು ಜನವರಿಯಿಂದ ಕಚ್ಚಾ ತೈಲ ಉತ್ಪಾದನೆಯನ್ನು ತಗ್ಗಿಸಲಿರುವ ನಿರ್ಧಾರವು, ಕಚ್ಚಾ ತೈಲ ಅವಲಂಬಿತ ಕಂಪೆನಿಗಳಾದ ಏಷ್ಯನ್‌ ಪೈಂಟ್ಸ್‌, ಪಿಡಿಲೈಟ್, ಬರ್ಜರ್ ಪೈಂಟ್ಸ್‌, ತೈಲ ಮಾರಾಟ ಕಂಪೆನಿಗಳಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಅನೇಕ ವಿತ್ತೀಯ ಚಟುವಟಿಕೆ ನಡೆಸುವ ಕಂಪೆನಿಗಳ ಷೇರುಗಳು ಮಾರಾಟಕ್ಕೊಳಪಟ್ಟವು. ಆದರೆ ತೈಲ ಬಾವಿ ಕಂಪೆನಿ ಅಬಾನ್ ಆಫ್ ಶೋರ್‌ನ ಷೇರು  ಸುಮಾರು ಶೇ5 ಏರಿಕೆ ಕಂಡಿತು.  

ಖಾಸಗಿ ವಲಯದ ಆ್ಯಕ್ಸಿಸ್ ಬ್ಯಾಂಕ್‌ನ ಪರವಾನಗಿಯನ್ನು ರದ್ದುಗೊಳಿಸಲಾಗುವುದೆಂಬ ಗಾಳಿ ಸುದ್ದಿಯು ಬ್ಯಾಂಕಿಂಗ್ ವಲಯದ ಕಂಪೆನಿಗಳ ಷೇರುಗಳ  ಮೇಲೆ ಮಾರಾಟದ  ಒತ್ತಡ ನಿರ್ಮಿಸಿತ್ತು. ಅದರೊಂದಿಗೆ ಅಮೆರಿಕದ ನಿಯೋಜಿತ ಅಧ್ಯಕ್ಷರ ಕ್ರಮದಿಂದ ವೀಸಾ ತೊಂದರೆ ಮತ್ತು ವಿದೇಶಿಗರ ನೌಕರಿಗೆ ಕುತ್ತು ಬರಬಹುದೆಂಬ ಕಾರಣದಿಂದ ತಾಂತ್ರಿಕ ವಲಯದ ಕಂಪೆನಿಯ ಷೇರುಗಳು ಮಾರಾಟದ ಭರಾಟೆಗೆ ಒಳಪಟ್ಟವು. ಈ ಮಧ್ಯೆ ರೋಲ್ಟಾ ಇಂಡಿಯಾ ಕಂಪೆನಿಯ ಕಳೆದ ತ್ರೈಮಾಸಿಕ ಫಲಿತಾಂಶವು ಆಕರ್ಷಕವಾಗಿದ್ದರಿಂದ ಷೇರಿನ ಬೆಲೆಯು ಶೇ20ರಷ್ಟು ಏರಿಕೆ ಪ್ರದರ್ಶಿಸಿದೆ. 

ಮಂಗಳವಾರ ಟಾಟಾ ಮೋಟಾರ್ ಕಂಪೆನಿಯ ಪ್ರವರ್ತಕ ಸಂಸ್ಥೆ ಟಾಟಾ ಸನ್ಸ್ ಶೇ 2 ರಷ್ಟು ಭಾಗಿತ್ವದ  ಷೇರುಗಳನ್ನು ₹2,430 ಕೋಟಿಗೆ  ಖರೀದಿಸಿತು. ಈ ಖರೀದಿಯು ₹486ರ ಸರಾಸರಿ ಬೆಲೆಯಲ್ಲಿ ನಡೆದಿದ್ದು,  ಈ ಷೇರಿನ ಬೆಲೆಯು ಅಂದು ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್‌ನಲ್ಲಿ ₹486 ರಿಂದ ₹462ರವರೆಗೂ ಏರಿಳಿತಗಳನ್ನು ಪ್ರದರ್ಶಿಸಿದೆ.  ಇದರಿಂದ ಪ್ರೇರಿತವಾಗಿ ಟಿವಿಎಸ್ ಮೋಟಾರ್ಸ್ ಷೇರಿನ ಬೆಲೆಯು ಸಹ ₹366 ರಿಂದ ₹381 ರವರೆಗೂ ಏರಿಕೆ ಕಂಡಿದೆ.

ಭಾರತ್ ಫೋರ್ಜ್ ಕಂಪೆನಿಯ ಷೇರಿನ ಬೆಲೆ ಬೇಡಿಕೆಯಿಂದ ₹1,002   ರವರೆಗೂ ಜಿಗಿತ ಕಂಡು ವಾರ್ಷಿಕ ಗರಿಷ್ಠ ಮಟ್ಟ ತಲುಪಿತು.  ಇದೇ ಷೇರು  ಒಂದು ತಿಂಗಳಲ್ಲಿ ₹844 ರಿಂದ ಏರಿಕೆ ಕಂಡಿದೆ. ಕೇವಲ ಐದಾರು ತಿಂಗಳಲ್ಲಿ ವಾರ್ಷಿಕ ಕನಿಷ್ಠ ₹686 ರ  ಸಮೀಪದಿಂದ ₹1,002 ರವರೆಗೂ ಜಿಗಿತ ಕಂಡಿರುವುದು ಕಂಪೆನಿಯ ಸಾಧನೆಗಿಂತ ವಹಿವಾಟುದಾರರ ಶೈಲಿಯೇ ಮುಖ್ಯವಾಗಿದೆ ಎನ್ನಬಹುದಾದ ಈ ಸಂದರ್ಭದಲ್ಲಿ ವ್ಯಾಲ್ಯೂ ಪಿಕ್ -ಪ್ರಾಫಿಟ್ ಬುಕ್ ಮಾದರಿಯ ಚಟುವಟಿಕೆ ಮಾತ್ರ ಅಲ್ಪಮಟ್ಟಿನ ಸುರಕ್ಷತೆ ಒದಗಿಸಬಹುದು.

ವೊಕಾರ್ಡ್ ಕಂಪೆನಿಯ ಷೇರಿನ ಬೆಲೆ ಬುಧವಾರ ಶೇ 5 ರಷ್ಟು ಏರಿಕೆ ಕಂಡಿತು. ಯೂರೋಪಿನ ‘ಮೆಡಿಸಿನ್ಸ್ ಆ್ಯಂಡ್ ಹೆಲ್ತ್ ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರಿ ಅಥಾರಿಟಿ' ಯು ಕಂಪೆನಿಯ ಡಾಮನ್ ಘಟಕದಲ್ಲಿ ತಯಾರಿಕಾ ನಿಯಮ  ಪಾಲಿಸುತ್ತಿರುವುದನ್ನು ದೃಢೀಕರಿಸಿತ್ತು. ಒಮ್ಮೆ  ಅಮೆರಿಕದ ನಿಯಂತ್ರಣ ಸಂಸ್ಥೆಯ ಎಚ್ಚರಿಕೆಯಿಂದ ಬೆಲೆ ಕುಸಿದರೆ ಮತ್ತೊಮ್ಮೆ ಯುರೋಪ್‌ ನಿಯಂತ್ರಣ ಸಂಸ್ಥೆಯ ನಿರ್ಧಾರವು ಬೆಲೆ ಏರಿಕೆಗೆ ಕಾರಣವಾಗಿದೆ. ಈ ರೀತಿಯ ಬೆಳವಣಿಗೆಗಳು ಅಸ್ಥಿರತೆಯನ್ನು ಸೃಷ್ಟಿಸುವುದರಿಂದಲೇ ಪ್ರತಿಯೊಂದು ಬೆಳವಣಿಗೆಗಳನ್ನು ಸದುಪಯೋಗ ಪಡಿಸಿಕೊಳ್ಳುವುದನ್ನು  ರೂಢಿಸಿಕೊಳ್ಳುವುದು ಅನಿವಾರ್ಯವಾಗಿದೆ. ಅದುವೇ ವ್ಯಾಲ್ಯೂ ಪಿಕ್ - ಪ್ರಾಫಿಟ್ ಬುಕ್ ವಿಧವಾಗಿದೆ.

ಗುರುವಾರ ಅಮೆರಿಕದ ಫೆಡರಲ್ ರಿಸರ್ವ್‌ ಬಡ್ಡಿದರ ಏರಿಕೆಯ ಕಾರಣ ಪೇಟೆಯ ಆರಂಭದ ಕ್ಷಣದಲ್ಲಿ  ಸಂವೇದಿ ಸೂಚ್ಯಂಕವು ಸುಮಾರು 195 ಅಂಶಗಳ ತೀವ್ರ ಕುಸಿತ ಕಂಡು ನಂತರ ರಭಸದ ವೇಗದಲ್ಲಿ 330 ಅಂಶಗಳ ಏರಿಕೆ  ಕಂಡಿತು. ಅಂದು ಒಟ್ಟು 550 ಅಂಶಗಳಷ್ಟು ಏರಿಳಿತ ಪ್ರದರ್ಶಿಸಿದ ಕಾರಣ ಅಂದಿನ ವಹಿವಾಟಿನ ಗಾತ್ರವು ಹಿಂದಿನ ದಿನದ ₹2.59ಲಕ್ಷ ಕೋಟಿಯಿಂದ  ₹6.86 ಲಕ್ಷ ಕೋಟಿಗೆ ಏರಿಕೆ ಕಂಡಿತು.  ತಾಂತ್ರಿಕ ವಲಯದ ಇನ್ಫೊಸಿಸ್, ಟಿಸಿಎಸ್ ಮುಂತಾದವು ಚುರುಕಾದ ಚಟುವಟಿಕೆ ಪ್ರದರ್ಶಿಸಿ ವಹಿವಾಟಿನ ಗಾತ್ರವನ್ನು ವೃದ್ಧಿಗೊಳಿಸಿದ್ದವು.  ಆ್ಯಕ್ಸಿಸ್ ಬ್ಯಾಂಕ್ ಅನೇಕ ನಕಾರಾತ್ಮಕವಾದ ಸುದ್ದಿಗಳ ನಡುವೆಯೂ ಏರಿಕೆ ಕಂಡಿತು. 

ಶುಕ್ರವಾರದ ಆರಂಭಿಕ ಕ್ಷಣಗಳಲ್ಲಿ ಕ್ಲಾರಿಯಂಟ್ ಕೆಮಿಕಲ್ಸ್ (ಇಂಡಿಯಾ) ಕಂಪೆನಿಯ ಷೇರುಗಳು ₹636 ರ ರಲ್ಲಿದ್ದು ಆ ಸಂದರ್ಭದಲ್ಲಿ ಎಸ್‌ಬಿಐ ಮ್ಯೂಚುವಲ್ ಫಂಡ್,  ಐಸಿಐಸಿಐ ಪ್ರುಡೆನ್ಶಿಯಲ್ ಮ್ಯೂಚುವಲ್ ಫಂಡ್, ಡಿ ಎಸ್‌ಪಿ ಬ್ಲಾಕ್ ರಾಕ್ ಮ್ಯೂಚುವಲ್ ಫಂಡ್, ಬಜಾಜ್ ಅಲಯನ್ಸ್ ಲೈಫ್ ಇನ್ಶುರನ್ಸ್, ಸುಂದರಂ ಬಿಎನ್‌ಪಿ ಪರಿಬಾಸ್ ಮ್ಯೂಚುವಲ್ ಫಂಡ್‌ಗಳು ಗಜ ಗಾತ್ರದ ವಹಿವಾಟಿನಲ್ಲಿ ಖರೀದಿಸಿವೆ. 

ಒಟ್ಟಾರೆ  ಪೇಟೆಯ  ಅನಿಶ್ಚತೆಯು ಸಂವೇದಿ ಸೂಚ್ಯಂಕವನ್ನು 257 ಅಂಶಗಳ ಕುಸಿತ ಕಾಣುವಂತೆ ಮಾಡಿತು. ಇದರೊಂದಿಗೆ ಮಧ್ಯಮ ಶ್ರೇಣಿಯ ಸೂಚ್ಯಂಕವು  298 ಅಂಶಗಳ, ಕೆಳ ಮಧ್ಯಮ ಶ್ರೇಣಿಯ ಸೂಚ್ಯಂಕ 206 ಅಂಶಗಳ ಕುಸಿತ ಕಾಣುವಂತಾಗಿ ಪೇಟೆಯ ಬಂಡವಾಳ ಮೌಲ್ಯವು ₹108 ಲಕ್ಷ ಕೋಟಿಯಿಂದ ₹106ಲಕ್ಷ ಕೋಟಿಗೆ ಕುಸಿಯುವಂತಾಯಿತು. ವಿದೇಶಿ ವಿತ್ತೀಯ ಸಂಸ್ಥೆಗಳು ₹3,610 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದರೆ, ಸ್ಥಳೀಯ ವಿತ್ತೀಯ ಸಂಸ್ಥೆಗಳು ₹23ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ.

ಹೊಸ ಷೇರು 
* ಇತ್ತೀಚಿಗೆ ಪ್ರತಿ ಷೇರಿಗೆ ₹70 ರಂತೆ ವಿತರಿಸಿದ  ಕರ್ಣಾಟಕ ಬ್ಯಾಂಕಿನ ಹಕ್ಕಿನ ಷೇರುಗಳು ಡಿ. 14 ರಿಂದ ವಹಿವಾಟಿಗೆ ಬಿಡುಗಡೆಯಾಗಿವೆ.
* ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ಬೇರ್ಪಡಿಸಲಾದ ಎಕ್ಸ್ ಪಿ ಎಸ್ ವಿಭಾಗವನ್ನು ಟಿ ಸಿ ಐ ಎಕ್ಸ್ ಪ್ರೆಸ್ ಲಿ.ನಲ್ಲಿ ವಿಲೀನಗೊಳಿಸಲಾಗಿದ್ದು, ಈ ಕಂಪೆನಿಯ ಷೇರುಗಳು ಡಿ.15 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಟಿ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಿವೆ.
* ಮಂಧನ ಇಂಡಸ್ಟ್ರೀಸ್ ಲಿ.ನ ರಿಟೇಲ್ ವ್ಯವಹಾರವನ್ನು ಬೇರ್ಪಡಿಸಿ ವಿಲೀನಗೊಳಿಸಿಕೊಂಡ ದಿ ಮಂಧನ ರಿಟೇಲ್ ವೆಂಚರ್ಸ್ ಲಿ. ಕಂಪೆನಿಯ ಷೇರುಗಳು ಡಿ. 14ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಟಿ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಿವೆ. ಈ  ಕಂಪೆನಿಯ ಷೇರುಗಳು ವಹಿವಾಟು ಆರಂಭದ ಎರಡು  ದಿನಗಳು ಗರಿಷ್ಟ ಆವರಣ ಮಿತಿ ತಲುಪಿ ಮೂರನೇ ದಿನ  ₹246 ರ ಗರಿಷ್ಠ ತಲುಪಿ ನಂತರ ಕುಸಿದು ₹226 ರಲ್ಲಿ ಕೊನೆಗೊಂಡಿದೆ.

ಕೋಲ್ ಇಂಡಿಯಾ ಕಂಪೆನಿಯ ಷೇರುಗಳು ವಹಿವಾಟಿಗೆ ಬಿಡುಗಡೆಯಾದ ನಂತರ ಷೇರಿನ ಬೆಲೆಯು ₹447 ರ ಗರಿಷ್ಠದವರೆಗೂ  ತಲುಪಿತ್ತು.  ಆ ಸಂದರ್ಭದಲ್ಲಿ ಕಂಪೆನಿಯ ಷೇರುಗಳು ವಿವಿಧ ವಿದೇಶಿ ಷೇರು ವಿನಿಮಯ ಕೇಂದ್ರಗಳಲ್ಲಿ  ವಹಿವಾಟಿಗೆ ನೋಂದಾಯಿಸಿಕೊಳ್ಳುವ ಸುದ್ದಿಯು ಷೇರಿನ ಬೆಲೆಯನ್ನು ಚುರುಕಾಗಿರಿಸಿತು. 

ವಾರದ ವಿಶೇಷ

ಸನ್ ಫಾರ್ಮಾಸ್ಯುಟಿಕಲ್ಸ್ ಕಂಪೆನಿಯ ಷೇರಿನ ಬೆಲೆಯು ₹990 ರ ಸಮೀಪದಲ್ಲಿದ್ದಾಗ ಕಂಪನಿಯ ಪೇಟೆ ಬಂಡವಾಳ ಮೌಲ್ಯವು ಇತರೆ ಅಗ್ರಮಾನ್ಯ ಫಾರ್ಮಾ ವಲಯದ ಕಂಪೆನಿಗಳಿಗಿಂತ ಹೆಚ್ಚಿದೆ, ಮುಂಬೈ ಷೇರು ವಿನಿಮಯ ಕೇಂದ್ರದ ಹೆಲ್ತ್ ಕೇರ್ ಸೂಚ್ಯಂಕ ಶೇ8 ರಷ್ಟು ಬೆಳವಣಿಗೆಯಾದರೆ ಕಂಪೆನಿಯ ವೃದ್ಧಿಯೂ ಶೇ35 ರಷ್ಟು ಕಂಡಿದೆ ಎಂದು ಗುಣಗಾನ ಮಾಡಲಾಯಿತು. ಆದರೆ ಈಗಿನ ಪರಿಸ್ಥಿತಿ ಗಮನಿಸಿದಾಗ ಪೇಟೆಯಲ್ಲಿ ಕಂಪನಿಗಳ ಷೇರಿನ ಬೆಲೆಗಳು ಉತ್ತುಂಗದಲ್ಲಿದ್ದಾಗ ಎಲ್ಲವೂ ಸಕಾರಾತ್ಮಕವಾದ ವಿಶ್ಲೇಷಣೆಗಳು ಕೇಳಿ ಬರುತ್ತವೆ. ಕುಸಿತದಲ್ಲಿ ಕೇಳುವವರಾರು ಇರುವುದೇ ಇಲ್ಲ. 

ಇಂತಹ ಸಮಯದಲ್ಲಿ ಸಣ್ಣ ಹೂಡಿಕೆದಾರರು  ಉಳಿತಾಯ ಮಾದರಿಯ ಹೂಡಿಕೆ ವಿಧ ಅನುಸರಿಸಬೇಕು. ಅಗ್ರಮಾನ್ಯ ಕಂಪೆನಿಗಳ  ಷೇರುಗಳ ಬೆಲೆಯು ಕುಸಿತ ಕಂಡಾಗ ವ್ಯಾಲ್ಯೂ ಪಿಕ್ ರೀತಿ ಖರೀದಿಸಿ ಹೂಡಿಕೆ ಮುಂದುವರೆಸಬೇಕು.  ಹೂಡಿಕೆ ಅವಧಿ ಹೆಚ್ಚಾದರೂ ಅದಕ್ಕೆ ಸೂಕ್ತವಾದ ಲಾಭಾಂಶ, ಬೋನಸ್ ಮುಂತಾದ ಕಾರ್ಪೊರೇಟ್ ಫಲಗಳು ಲಭಿಸುತ್ತವೆ.  ಮುಂದೆ ಷೇರಿನ ಬೆಲೆಗಳು ಏರಿಕೆ ಕಂಡಾಗ ಪ್ರಾಫಿಟ್ ಬುಕ್ ಮಾಡುವುದಾದರೆ ಹೂಡಿಕೆ ಹಣ ಸುರಕ್ಷಿತವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಪೇಟೆಯಲ್ಲಿ ಷೇರಿನ ಬೆಲೆಗಳು ಏರಿಕೆ ಕಂಡಾಗ ಕೇವಲ ಲಾಭದ ನಗದೀಕರಣಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳುವುದೇ ಯಶಸ್ಸಿನ ಗುಟ್ಟು.

ಮುಖಬೆಲೆ ಸೀಳಿಕೆ: ಗುಲ್ ಷನ್ ಪೋಲಿಯೊಲ್ಸ್ ಲಿ. ಕಂಪೆನಿ ಷೇರಿನ ಮುಖಬೆಲೆ ₹5 ರಿಂದ ₹1 ಕ್ಕೆ ಸೀಳಲು ಡಿ. 28 ನಿಗದಿತ ದಿನ.
ಕಂಪೆನಿ ಹೆಸರು ಬದಲಾವಣೆ: ಮ್ಯಾಕ್ಸ್‌ವೆಲ್  ಇಂಡಸ್ಟ್ರೀಸ್ ಲಿ.  ಕಂಪೆನಿ ಹೆಸರು ವಿಐಪಿ ಕ್ಲಾತಿಂಗ್ ಲಿ. ಎಂದು ಬದಲಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಒತ್ತಡದಲ್ಲಿ ಷೇರುಪೇಟೆ ವಹಿವಾಟು

ಷೇರು ಸಮಾಚಾರ
ಒತ್ತಡದಲ್ಲಿ ಷೇರುಪೇಟೆ ವಹಿವಾಟು

12 Mar, 2018
ಹೂಡಿಕೆದಾರರಲ್ಲಿ ಮೂಡಿದ ಗೊಂದಲ

ಷೇರು ಸಮಾಚಾರ
ಹೂಡಿಕೆದಾರರಲ್ಲಿ ಮೂಡಿದ ಗೊಂದಲ

5 Mar, 2018
ಎಣಿಕೆಗೆ ನಿಲುಕದ ಪೇಟೆಯ ಚಲನೆ

ಷೇರು ಸಮಾಚಾರ
ಎಣಿಕೆಗೆ ನಿಲುಕದ ಪೇಟೆಯ ಚಲನೆ

26 Feb, 2018

ಷೇರು ಸಮಾಚಾರ
ಲಾಭ ನಗದೀಕರಣಕ್ಕೆ ದೊರೆತ ಅವಕಾಶ

ಷೇರುಪೇಟೆಯಲ್ಲಿನ ಕೆಲವು ಬೆಳವಣಿಗೆಗಳು ಕೇವಲ ಭಾಷಣ, ವಿಶ್ಲೇಷಣೆಗೆ ಮಾತ್ರ ಸೀಮಿತವಾಗಿದ್ದು ಅವನ್ನು ಕೈಗೆ ಎಟುಕಿಸಿಕೊಳ್ಳಲು ಸಾಧ್ಯವಿಲ್ಲದಂತಿರುತ್ತವೆ.

18 Feb, 2018
ಸಣ್ಣ ಹೂಡಿಕೆದಾರರಿಗೆ ಉತ್ತಮ ಅವಕಾಶ

ಷೇರು ಸಮಾಚಾರ
ಸಣ್ಣ ಹೂಡಿಕೆದಾರರಿಗೆ ಉತ್ತಮ ಅವಕಾಶ

12 Feb, 2018