ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನ ಸೆಲೆಯಾದ ವ್ಯವಸಾಯ...

Last Updated 19 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

‘ವ್ಯವಸಾಯ ಎಂಬುದು ಜೀವನ ಸೆಲೆ. ನಾವು ಹೆಚ್ಚು ಪ್ರೀತಿಸಿದಷ್ಟೂ ಅದು ನಮ್ಮನ್ನು ಪ್ರೀತಿಸುತ್ತದೆ, ನೆಮ್ಮದಿ ಕೊಡುತ್ತದೆ...’ ಎನ್ನುವ ಲಕ್ಷ್ಮಿದೇವಮ್ಮ ಅವರು, ಕೃಷಿಯಿಂದ ಹೇಗೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದು ಎನ್ನುವುದಕ್ಕೆ ಮಾದರಿಯಾಗಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಹೊಸಕೋಟೆ ಗ್ರಾಮದ ಲಕ್ಷ್ಮೀದೇವಮ್ಮ ಅವರು ಕೃಷಿ ಕುಟುಂಬದಲ್ಲಿ ಜನಿಸಿದವರು. ಪೋಸ್ಟ್‌ ಮಾಸ್ಟರ್‌ ಅವರನ್ನು ಕೈಹಿಡಿದ ನಂತರ ಹೊಲಿಗೆ ತರಬೇತಿ ಕೇಂದ್ರವನ್ನು ನಡೆಸುತ್ತಲೇ ಕೃಷಿಯನ್ನು ಅಪ್ಪಿಕೊಂಡಿದ್ದಾರೆ. ತಂದೆ ಕಾವೇರಿಗೌಡ ಅವರ ಪ್ರೇರೇಪಣೆಯಿಂದ ಹುಟ್ಟೂರು ಹೊಸಕೋಟೆ ಬಳಿಯ ಕಂಚನಹಳ್ಳಿಯಲ್ಲಿ ಮೂರು ಎಕರೆ ಭೂಮಿ ಖರೀದಿಸಿ ಕೃಷಿಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 20 ವರ್ಷಗಳ ಹಿಂದೆ ಆರಂಭಗೊಂಡಿರುವ ಇವರ ಕೃಷಿ ಬದುಕಿನ ಅನುಭವ ಸಾಗರವಿದ್ದಂತೆ.

ಎಲ್ಲವೂ ಉಂಟು!
ಇವರ ಬಳಿ ಇರುವುದು ಕೇವಲ 6.25 ಗುಂಟೆ ಜಮೀನು. ಆದರೆ ಈ ಜಮೀನಿನಲ್ಲಿ ಏನುಂಟು ಎಂದು ಕೇಳುವುದಕ್ಕಿಂತ ಏನಿಲ್ಲ ಎಂದು ಕೇಳುವುದೇ ಸೂಕ್ತ ಎನಿಸುತ್ತದೆ.ಮೊದಲ ಕೃಷಿಯಲ್ಲೇ ದಾಖಲೆಯ ಕಬ್ಬು ಬೆಳೆದು ಹಬ್ಬ ಆಚರಿಸಿರುವ ಇವರು, ಕಳೆದ ವರ್ಷವೂ 600 ಟನ್ ಕಬ್ಬು ಬೆಳೆದು ದಾಖಲೆ ಮಾಡಿದ್ದಾರೆ. ರಾಸಾಯನಿಕ ಗೊಬ್ಬರವನ್ನು ಇನಿತೂ ಸೋಕಿಸದೇ ಕೃಷಿ ಕೈಗೊಳ್ಳುತ್ತಿದ್ದಾರೆ.  ಹನಿನೀರಾವರಿ ಪದ್ಧತಿಯಲ್ಲಿ ಇವರ ಕೃಷಿ ಗರಿಗೆದರಿದೆ. ಸರ್ಕಾರದ ನೆರವು ಪಡೆದು ಜೈವಿಕ ಘಟಕ ಸ್ಥಾಪಿಸಿ ಅದರಿಂದ ದ್ರವರೂಪದ ಗೊಬ್ಬರವನ್ನು ಜಮೀನಿಗೆ ಪೈಪ್ ಮೂಲಕ ಹರಿಸುತ್ತಾರೆ.

ಜಮೀನಿನ  ಬದುಗಳಲ್ಲಿ  ತೆಂಗು, ಅಡಿಕೆ, ತೇಗ, ಸಿಲ್ವರ್, ಹರ್ಕ್ಯುಲೆಸ್, ಸಿಲ್ವರ್ ಗಿಡಗಳನ್ನು  ನೆಟ್ಟಿದ್ದಾರೆ. ಭತ್ತ, ಕಬ್ಬು, ರಾಗಿ,  ಸಾಮಾನ್ಯ ಬೆಳೆಯಾಗಿದ್ದರೆ   ಹವಾಮಾನಕ್ಕನುಗುಣವಾಗಿ ಅರಿಶಿಣ, ಶುಂಠಿ, ತೊಗರಿ, ಗೆಣಸು, ಮುಸುಕಿನ ಜೋಳ ಬೆಳೆಸಿದ್ದಾರೆ. ಎರಡು  ಸೇವಂತಿಗೆ ಗಿಡಗಳಿಗೆ ಒಂದರಂತೆ ನಡುವೆ ಗುಲಾಬಿ ಹೂವಿನ ಗಿಡಗಳನ್ನು ನೆಟ್ಟಿದ್ದು ಪುಷ್ಪ ಕೃಷಿಯನ್ನೂ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ ಪರಂಗಿ, ಬಾಳೆ, ದಾಳಿಂಬೆ, ಮಾವು, ಸಪೋಟ, ಹಲಸು, ಕಿತ್ತಳೆ, ಸೇಬು ಹಣ್ಣಿನ ಗಿಡಗಳೂ ಇವರ ಪಟ್ಟಿಯಲ್ಲಿವೆ!

ಇವುಗಳ ಜೊತೆ ಹೈನುಗಾರಿಕೆಯನ್ನೂ ನಡೆಸುತ್ತಿರುವ ಲಕ್ಷ್ಮೀದೇವಮ್ಮ ಅವರು 15 ಹಸುಗಳನ್ನು ಸಾಕಿದ್ದು ಪ್ರತಿನಿತ್ಯ 80 ಲೀಟರ್ ಹಾಲನ್ನು ಡೈರಿಗೆ ಹಾಕುತ್ತಾರೆ. ಕುರಿ, ಕೋಳಿ ಸಾಕಾಣಿಕೆಯಲ್ಲೂ ಇವರು ಮುಂದು.  ಜೇನು ಸಾಕಾಣಿಕೆಯಿಂದಾಗಿ  ತೋಟದಲೆಲ್ಲಾ ಜೇನುಗಳ ಝೇಂಕಾರ ಮಾರ್ದನಿಸುತ್ತಿದೆ. ಹೀಗೆ ಸಮಗ್ರ ವ್ಯವಸಾಯ ಪದ್ಧತಿ ಅಳವಡಿಸಿಕೊಂಡಿರುವ ಕಾರಣ ಖರ್ಚೆಲ್ಲಾ ಕಳೆದು ಪ್ರತಿವರ್ಷ ಏನಿಲ್ಲವೆಂದರೂ ಎಂಟು ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ‘ರೈತನಾದವ ಪ್ರತಿ ಗಳಿಗೆಯೂ ಯೋಚಿಸುತ್ತಿರಬೇಕು, ಋತುಮಾನಕ್ಕೆ ತಕ್ಕಂಥ ಬೆಳೆಗಳಿಗೆ ಒತ್ತು ನೀಡಬೇಕು’ ಎಂದು ತಮ್ಮ ಯಶಸ್ಸಿನ ಗುಟ್ಟನ್ನು ಲಕ್ಷ್ಮೀದೇವಮ್ಮ  ಹೇಳುತ್ತಾರೆ.

ತಮ್ಮ ಕೃಷಿ ನಂಟನ್ನು ಅವರು ವಿವರಿಸುವುದು ಹೀಗೆ... ‘ಆಕಾಶವಾಣಿಯಲ್ಲಿ ಬರುತ್ತಿದ್ದ ಕೃಷಿ ರಂಗದ ಕಾರ್ಯಕ್ರಮಗಳನ್ನು ಕೇಳುತ್ತಿದ್ದೆ. ಆ ಮೂಲಕ ರೈತರ ಪರಿಚಯ ಮಾಡಿಕೊಂಡೆ. ಸಮಗ್ರ ಕೃಷಿ ಲಾಭದಾಯಕವೆಂಬುದು ಈ ಮೂಲಕ ತಿಳಿಯಿತು. ಕೃಷಿ ಇಲಾಖೆಯ ಸಹಕಾರ ಕೋರಿದೆ. ಅಲ್ಲಿ ಸಿಗುವ ನೆರವುಗಳ ಬಗ್ಗೆ ಕೇಳಿ ತಿಳಿದುಕೊಂಡೆ.ಅದರ ಜೊತೆಗೆ ಕುಟುಂಬದವರ ಸಹಕಾರ... ಇವುಗಳಿಂದಾಗಿ ಇಷ್ಟೆಲ್ಲಾ ಸಾಧಿಸಲು ಸಾಧ್ಯವಾಯಿತು’. 

ಹಲವು ಪ್ರಶಸ್ತಿ –ಸನ್ಮಾನ
ಲಕ್ಷ್ಮೀದೇವಮ್ಮ ಅವರಿಗೆ ರಾಜ್ಯಮಟ್ಟದ ಕೃಷಿ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿ, ಆಕಾಶವಾಣಿ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳು ಸಿಕ್ಕಿವೆ. ವಿವಿಧ ಸಂಘ–ಸಂಸ್ಥೆಗಳು ಅಭಿನಂದಿಸಿ ಸನ್ಮಾನಿಸಿವೆ. ಪತ್ನಿಯ ಕೃಷಿಪ್ರೇಮಕ್ಕೆ ಮನಸೋತು ಬೆನ್ನೆಲುಬಾಗಿ ನಿಂತ ಪತಿ ರಾಮಕೃಷ್ಣ  ಈಗ ಇಲ್ಲ. ಒಬ್ಬ ಮಗ ಮತ್ತು ಮಗಳು ಮೈಸೂರು ಮುಕ್ತ ವಿಶ್ವವಿದ್ಯಾಲಯದಲ್ಲಿ ಕೆಲಸದಲ್ಲಿದ್ದಾರೆ. ಮತ್ತೊಬ್ಬ ಮಗಳು ಅಳಿಯ ಇವರ ಕೃಷಿ ಕಾಯಕದಲ್ಲಿ ಕೈಜೋಡಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT