ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಂಡಿ ಭಾವಬಂಡಿ

Last Updated 19 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಳಗಿನ ಆರುಕಾಲು. ಚುಕುಬುಕು ಎನ್ನುತ್ತಾ ಸದ್ದು ಮಾಡುವ ‘ಚಾಮುಂಡಿ’ ಅಲ್ಲಿ ಬರುತ್ತದೆ. ಅದು ನಿಲ್ಲುವ ಮೊದಲೇ ಸೀಟು ದಕ್ಕಿಸಿಕೊಳ್ಳಲು ಪ್ರಯಾಣಿಕರ ಪೈಪೋಟಿ.ನಾಮುಂದು... ತಾಮುಂದು ಎನ್ನುತ್ತಾ ಮುನ್ನುಗ್ಗಿ ಸೀಟು ಭದ್ರ ಮಾಡಿಕೊಂಡ ಮೇಲೆ ನಿಟ್ಟುಸಿರು. ಸೀಟು ಸಿಕ್ಕರೆ ಮುಂದಿನದ್ದು ಚಹಾ ಹೀರುವ ಕಾರ್ಯ.

ಆರಾಮಾಗಿ ಕಾಲು ಚಾಚಿ ಸೀಟುಗಳಲ್ಲಿ ಒರಗಿ, ಒಂದು ಕೈಯಲ್ಲಿ ಪೇಪರ್‌ ಹಿಡಿದು, ಇನ್ನೊಂದರಲ್ಲಿ ಚಹಾ ಹೀರುತ್ತಾರೆ. ಅಷ್ಟರಲ್ಲಿ ‘ನಿಮ್ಮ ಪಕ್ಕದಲ್ಲಿ ಯಾರಾದರೂ ಇದ್ದಾರಾ...?’ ದನಿ ತೇಲಿ ಬರುತ್ತದೆ. ‘ಹ್ಞೂಂ’ ಎನ್ನುವ ಚುಟುಕು ಉತ್ತರ ಕುಳಿತವರದ್ದು. ‘ಯಾವಾಗ ಬರ್ತಾರೆ?’ ‘ಬಂದ ಮೇಲೆ ನೋಡುವ ಬಿಡಿ. ಈಗ ಆ ಕಡೆ ಜರುಗಿ...’ ಎನ್ನುತ್ತಲೇ ಸರಕ್ಕೆಂದು ಆಸನ ಊರಿಯೇ ಬಿಡುತ್ತಾರೆ ನಿಂತವರು. ಕಣ್ಣು ಕೆಂಪಗೆ ಮಾಡಿಕೊಳ್ಳುವ ಸ್ಥಿತಿ ಕುಳಿತವರದ್ದು. ಇದರ ನಡುವೆ ಆಗೀಗ ಒಂದಿಷ್ಟು ವಾಗ್ವಿವಾದ.

ಹೇಗೋ ತಮಗೆ ಸ್ನೇಹಿತರು ಸೀಟು ಕಾದಿರಿಸಿಕೊಂಡಿರುತ್ತಾರೆ ಎಂದುಕೊಳ್ಳುತ್ತಾ ಬೀಗುತ್ತಾ ಬರುವವರದ್ದು ಮಾತ್ರ ಪೆಚ್ಚು ಮೋರೆ. ಅವರು ಬಂದಾಗ ಸೀಟು ‘ಆಕ್ರಮಣ’ ಮಾಡಿಕೊಂಡವರು ಸೀಟು ಕೊಟ್ಟರೆ ಅವರ ಪುಣ್ಯ, ಇಲ್ಲದಿದ್ದರೆ ಮತ್ತೊಂದಿಷ್ಟು ಜಗಳ, ಕಾದಾಟ, ಸೆಣಸಾಟ.

ಇದರ ನಡುವೆಯೇ ಗಂಟೆಯ ಮುಳ್ಳು 6.45ರತ್ತ ಹೊರಳುತ್ತದೆ. ಶಿಳ್ಳೆ ಹೊಡೆಯುತ್ತದೆ. ಇತ್ತ ಚಾಮುಂಡಿ ಗಡ್‌ಗಡ್‌ ಎನ್ನುತ್ತಾ ಹೊರಡುತ್ತದೆ. ಅತ್ತ ಕುಳಿತವರಿಗೆ ನಿದ್ರಾದೇವಿ ಆವರಿಸಿಕೊಳ್ಳುತ್ತಾಳೆ. ನಿಂತವರು ನಿಂತಲ್ಲೇ ತೂಕಡಿಸುತ್ತಾರೆ. ಇದು ಮೈಸೂರು ನಿಲ್ದಾಣದಿಂದ ನಿತ್ಯ ಹೊರಡುವ ‘ಚಾಮುಂಡಿ ಎಕ್ಸ್‌ಪ್ರೆಸ್‌’ ರೈಲಿಗೆ ಹೊರಡುವವರ ಕಥೆ.

ಇಲ್ಲಿ ಜಗಳವಷ್ಟೇ ಅಲ್ಲ, ಸ್ನೇಹದ ಕಥೆಯೂ ಇದೆ. ಈ ರೈಲಿನಲ್ಲಿ ನಿತ್ಯ ಪಯಣಿಸುವವರದ್ದು ವಿಶೇಷ ಸ್ನೇಹ ಸಂಬಂಧ. ಈ ಸ್ನೇಹಿತರ ಹುಟ್ಟುಹಬ್ಬದ ಆಚರಣೆಯೂ ಇಲ್ಲಿ ನಡೆಯುತ್ತದೆ. ನಿವೃತ್ತಿಯಾದ ಗೆಳೆಯರಿಗೆ ಬೀಳ್ಕೊಡುಗೆಯೂ ನಡೆಯುತ್ತದೆ. 

ಬೆಂಗಳೂರಿನ ಭವಿಷ್ಯನಿಧಿ ಕಚೇರಿಯಲ್ಲಿ ಉದ್ಯೋಗಿಯಾಗಿರುವ ಎಸ್‌.ನಂಜಪ್ಪ ಅವರು ನಾಲ್ಕೈದು ವರ್ಷಗಳಿಂದ ತಮ್ಮ ಬೋಗಿಯಲ್ಲಿ ಬರುವವರೊಂದಿಗೆ ಪ್ರತಿವರ್ಷ ರಾಜ್ಯೋತ್ಸವ ಆಚರಿಸುತ್ತಾರೆ. ‘ರಾಜ್ಯೋತ್ಸವ ನೆಪದಲ್ಲಿ ನಮ್ಮ ಬೋಗಿಯನ್ನು ಹೂವಿನಿಂದ ಅಲಂಕಾರ ಮಾಡ್ತೀವಿ. ಭುವನೇಶ್ವರಿ ಫೋಟೊ ತಂದು ಪೂಜೆ ಮಾಡ್ತೀವಿ.

ಆಮೇಲೆ ಸಿಹಿತಿಂಡಿ, ಕಡ್ಲೆಪುರಿ (ಚುರುಮುರಿ) ಹಂಚ್ತೀವಿ’ ಎಂದು ರಾಮನಗರದಿಂದ ಲೋಕೋಪಯೋಗಿ ಇಲಾಖೆಯಲ್ಲಿ ಉದ್ಯೋಗಿ ಯಶೋದಮ್ಮ. ಬಂಧುಗಳಿಗಿಂತ ಮಿಗಿಲಾಗಿ ರೈಲಿನ ಗೆಳೆಯರಲ್ಲಿಯೇ ಕಷ್ಟಸುಖ ಹಂಚಿಕೊಳ್ಳುತ್ತೇನೆ’ ಎನ್ನುತ್ತಾರೆ ವೆಂಕಟೇಶ್‌ . 20 ವರ್ಷಗಳಿಂದ ಇದೇ ರೈಲಿನಲ್ಲಿ ಪ್ರಯಾಣಿಸುತ್ತಿರುವ ಮಲ್ಲಿಕಾರ್ಜುನಸ್ವಾಮಿ, ಕೃಷ್ಣೇಗೌಡ ಅವರು ‘ನಮಗೆ ರೈಲಲ್ಲೇ ವಯಸ್ಸಾಯಿತು’ ಎಂದು ನಗುತ್ತಾರೆ. ‘ನನ್ನ ಮೊಮ್ಮಗಳಿಗೆ ರೈಲಿನಲ್ಲಿಯೇ ಸ್ವೆಟರ್‌ ಹೆಣೆದು ಮುಗಿಸಿದ್ದೇನೆ’ ಎನ್ನುತ್ತಾರೆ ಉಷಾ ರಾಘವೇಂದ್ರ!

ನಿತ್ಯ ಓಡಾಡುವವರ ಜೊತೆಗೆ ವಾರಕ್ಕೊಮ್ಮೆ ಸಂಚರಿಸುವ ಐಟಿ/ಬಿಟಿ ಉದ್ಯೋಗಿಗಳು ಇದೇ ರೈಲನ್ನು ನೆಚ್ಚಿಕೊಂಡಿದ್ದಾರೆ. ವಾರದಲ್ಲಿ ಮೂರು ದಿನ ಮೈಸೂರಿನಿಂದ ವಾರಾಣಸಿ ಹಾಗೂ ದಭಾಂಗ್‌ ರೈಲುಗಳಿರುವುದರಿಂದ ಅನೇಕರು ಅದರಲ್ಲಿ ಹೋಗುತ್ತಾರೆ. ಉಳಿದ ದಿನ ಚಾಮುಂಡಿ ಎಕ್ಸ್‌ಪ್ರೆಸ್ಸೇ ಗತಿ. ಮೈಸೂರಿನಿಂದ ಹೊರಟ ಅನೇಕರಿಗೆ ಸೀಟು ಸಿಗುತ್ತವೆ. ಉಳಿದವರ ಸ್ಥಿತಿ ಅಯೋಮಯ. ಕೆಲ ಬಾರಿ ನಿಲ್ಲಲೂ ಸ್ಥಳವಿರುವುದಿಲ್ಲ. ಮದ್ದೂರಿನಲ್ಲಿ ಹತ್ತುವವರ ಸಂಖ್ಯೆ ಹೆಚ್ಚಾದರೆ, ಚನ್ನಪಟ್ಟಣದಲ್ಲಿ ಜೋರು ಗದ್ದಲ. ರಾಮನಗರದಲ್ಲಿ ಗಜಗರ್ಭವಾಗುತ್ತದೆ ಬೋಗಿ. ಇಷ್ಟೆಲ್ಲಾ ಪ್ರಯಾಸದಿಂದ ಕಚೇರಿ ಸೇರುವ ತವಕ...

ಬೆಂಗಳೂರಿನಿಂದ ಸಂಜೆ 6.15ಕ್ಕೆ ಹೊರಡುವ ‘ಚಾಮುಂಡಿ’ ಕಥೆಯೂ ಚಿಕ್ಕದೇನಲ್ಲ. ಇಲ್ಲೂ ಸೀಟಿನದ್ದು ಅದೇ ಕಥೆ–ವ್ಯಥೆ. ಆದರೆ ಮನೆಗೆ ವಾಪಸ್‌ ಹೋಗುವ ಸಂತಸದ ಕಳೆ ಮಾತ್ರ ಅವರ ಮೊಗದಲ್ಲಿ ತುಂಬಿರುತ್ತದೆ. ಸೀಟು ಸಿಗದೇ ನಿಂತು ಕಾಲು ನೋಯಿಸಿಕೊಂಡವರು ‘ವಸಿ ಒತ್ತಿ’ ಎಂದು ಹೇಳುತ್ತ ಕುಳಿತೇ ಬಿಡುತ್ತಾರೆ. ಇಕ್ಕಟ್ಟಾಗಿ ಕುಳಿತವರಲ್ಲಿ ಒಬ್ಬರು ‘ರೆಸ್ಟ್‌ರೂಮಿಗೆ ಹೋಗಿ ಬರ್ತೀನಿ’ ಎಂದು ಎದ್ದುಬಿಟ್ಟರೆ ಮುಗಿಯಿತು, ಆ ಸೀಟಲ್ಲಿ ಕುಳಿತುಕೊಳ್ಳಲು ಮುಗಿಬೀಳುತ್ತಾರೆ ಅನೇಕರು.

‘ಕೈಲಿ ಹಿಡಿದ್ರೆ ಮುರ್ದು ಹೋಗ್ಬೇಕು, ಬಾಯಲಿಟ್ರೆ ಕರಗಿ ಹೋಗ್ಬೇಕು’ ಎನ್ನುತ್ತಾ ಅಲ್ಲಿ ಹುಡುಗನೊಬ್ಬ ಬರುತ್ತಾನೆ.  ಮದ್ದೂರು ವಡಾ ಮಾರಾಟ ಮಾಡುವ ಪರಿ ಇದು! ‘ವಡಾ ತಿನ್ನಿ, ಮನೆವ್ರಿಗೆ ತಿನ್ನಿಸಿ’ ಎಂದು ಸಲಹೆಯನ್ನೂ ಕೊಡುತ್ತಾನೆ.

ಇನ್ನೊಬ್ಬರು ‘ವಡೆ ತಗೊಂಡ್ರೆ ಕರಿಬೇವು ಫ್ರಿ ಇದೆ’ ಎಂದು ಗಮನ ಸೆಳೆಯುತ್ತಾರೆ. ಇಳಿಯುವ ಹೊತ್ತಿಗೆ ಬುಟ್ಟಿ ಖಾಲಿ ಮಾಡಬೇಕೆಂಬ ಸಂಕಲ್ಪ ಅವರದು. ವಡೆ ಕೈಯಲ್ಲಿ ಹಿಡಿದು ಟಿ.ವಿಯಲ್ಲಿ ಬರುವ ಸಿನಿಮಾ ನೋಡುವವರು ಹಲವರು. ವಾಟ್ಸ್‌ಆ್ಯಪ್‌ ಸಂದೇಶ, ವಿಡಿಯೊ ನೋಡಲು ಇನ್ನು ಕೆಲವರಿಗೆ ಇದು ಒಳ್ಳೆಯ ವೇಳೆ. ಎಲ್ಲಾ ಆದ ಮೇಲೆ ಮೊಬೈಲಿನಲ್ಲಿ ಗೇಮ್‌ ಶುರು. ಮಹಿಳೆಯರು ಕಚೇರಿಯ ಸುದ್ದಿ, ಗಾಸಿಪ್‌ ಹೇಳುತ್ತಾ ಕಾಲ ಕಳೆಯುತ್ತಾರೆ.

ಜೊತೆಗೆ ಮನೆಗೆ ಹೋಗಿ ಏನು ಅಡುಗೆ ಮಾಡಬೇಕು ಎಂಬ ಚಿಂತೆಯನ್ನೂ ಮನದಲ್ಲಿಯೇ ಲೆಕ್ಕ ಹಾಕುತ್ತಿರುತ್ತಾರೆ! ಬಿಡದಿ, ರಾಮನಗರ, ಚನ್ನಪಟ್ಟಣ ಬಂದ ಮೇಲೆ ರಶ್‌ ಕಡಿಮೆಯಾಗುತ್ತದೆ. ಅದುವರೆಗೆ ನಿಂತವರಿಗೆ ಸೀಟುಗಳೂ ಸಿಗುತ್ತವೆ. ಮಂಡ್ಯ ಬಂದರಂತೂ ಸೀಟುಗಳ ಮೇಲೆ ಮಲಗಿ ಮೈಸೂರು ತಲುಪುವವರೇ ಹೆಚ್ಚು. ಶ್ರೀರಂಗಪಟ್ಟಣ ಬಂದ ಕೂಡಲೇ ಮನೆಗೆ ಸೇರುವ ಧಾವಂತ ಹೆಚ್ಚುತ್ತದೆ.

ರೈಲು ಕಥನ
‘ಚಾಮುಂಡಿ’ಯಲ್ಲಿ ಮರೆಯಲಾಗದ ಘಟನೆಗಳನ್ನು ಅಂಗವಿಕಲರ ಅಭಿವೃದ್ಧಿ ಇಲಾಖೆ ಉದ್ಯೋಗಿ ಸುನಂತಿ ನೆನಪಿಸಿಕೊಳ್ಳುವುದು ಹೀಗೆ:
ಘಟನೆ–1: ಒಮ್ಮೆ ವೃದ್ಧೆಯೊಬ್ಬರು ಬೆಂಗಳೂರಿನಿಂದ ನಮ್ಮ ಬೋಗಿ ಹತ್ತಿದರು. ಅವರು ವಿಚಲಿತರಾಗಿದ್ದರು. ಪದೇ ಪದೇ ಮೈಸೂರು ಬಂತಾ ಎಂದು ಅರೆಬರೆ ಕನ್ನಡದಲ್ಲಿ ಕೇಳುತ್ತಿದ್ದರು. ಎಲ್ಲಿಗೆ ಹೋಗಬೇಕೆಂದು ಕೇಳಿದಾಗ ದೇವಸ್ಥಾನಕ್ಕೆ  ಎಂದರು. ಅವರಿಗೆ ನೆನಪಿನ ಶಕ್ತಿ ಇರಲಿಲ್ಲ.

ಅವರನ್ನು ನಮ್ಮ ಮನೆಗೆ ಕರೆದೊಯ್ಯಲು ಕಾನೂನಿನ ಸಮಸ್ಯೆ. ಇದಕ್ಕಾಗಿ ಮಂಡ್ಯ ಬಿಟ್ಟ ಮೇಲೆ ಮೈಸೂರಿನ ರೈಲ್ವೆ ಪೊಲೀಸರಿಗೆ ಒಪ್ಪಿಸಿದೆವು. ಮರುದಿನ ಮಹಿಳಾ ಕಾನ್‌ಸ್ಟೆಬಲ್ ಸಹಾಯದೊಂದಿಗೆ ಬೆಂಗಳೂರಿನಲ್ಲಿ ರೈಲ್ವೆ ಪೊಲೀಸರಿಗೆ ಒಪ್ಪಿಸಿದೆವು. ಅದಾಗಲೇ ಅವರ ಮಗಳು ಅಮ್ಮ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಆತಂಕದಲ್ಲಿ ಬಂದ ಅವರು ಅಮ್ಮನನ್ನು ಕಂಡು ‘ನೀವು ಇಲ್ಲದಿದ್ದರೆ ನಮ್ಮ ತಾಯಿ ಸಿಗುತ್ತಿರಲಿಲ್ಲ’ ಎಂದು ಅತ್ತರು.

ಘಟನೆ–2: ಬೆಂಗಳೂರಿನಿಂದ ಬರುವಾಗ ಹುಡುಗನೊಬ್ಬ ಶಾಲಾ ಬ್ಯಾಗ್‌ ಸಮೇತ ನಮ್ಮ ಬೋಗಿಯಲ್ಲಿ ಕುಳಿತಿದ್ದ. ವಿಚಾರಿಸಿದಾಗ ಚಿಕ್ಕಪ್ಪನ ಮನೆಗೆ ಹೋಗ್ತಿದ್ದೀನಿ ಎಂದು ಹೇಳಿದ. ಅವನು ಸುಳ್ಳು ಹೇಳುತ್ತಿದ್ದಾನೆಂದು ಗೊತ್ತಾಯಿತು. ಪಾಂಡವಪುರ ಬಂದಾಗ ಪೊಲೀಸರಿಗೆ ಹಿಡಿದು ಕೊಡ್ತೀವಿ ಎಂದು ಗದರಿಸಿದಾಗ ತನ್ನ ಮನೆಯವರ ಫೋನ್ ಸಂಖ್ಯೆ ಕೊಟ್ಟ. ಫೋನ್‌ ಮಾಡಿದಾಗ ಮನೆ ಬಿಟ್ಟು ಬಂದದ್ದು ತಿಳಿಯಿತು. ಆಮೇಲೆ ಮೈಸೂರಿನಲ್ಲಿ ಅವರ ಸಂಬಂಧಿಕರಿಗೆ ಒಪ್ಪಿಸಿದೆವು.

ಘಟನೆ–3: ‘ಇಬ್ಬರು ಮಕ್ಕಳೊಂದಿಗೆ ತಾಯಿಯೊಬ್ಬರು ನಮ್ಮ ಬೋಗಿಯಲ್ಲಿ ಅಳುತ್ತ ಕುಳಿತಿದ್ದರು. ವಿಚಾರಿಸಿದಾಗ ಮನೆಯಲ್ಲಿ ಆತ್ಮಹತ್ಯೆಗೆ ಮುಂದಾಗಿದ್ದು ತಿಳಿಯಿತು. ಸಮಾಧಾನ ಮಾಡಿ, ರೈಲ್ವೆ ಪೊಲೀಸರಿಗೆ ಒಪ್ಪಿಸಿದೆವು. ಆಮೇಲೆ ಅವರ ಗಂಡ ಬಂದಾಗ ಗದರಿಸಿದ ಪೊಲೀಸರು ತಿಳಿವಳಿಕೆ ಹೇಳಿ ಕಳಿಸಿದ್ದರು. ಆತ್ಮಹತ್ಯೆಗೆ ಮುಂದಾಗಿದ್ದ ಅವರನ್ನು ಉಳಿಸಿದ್ದು ಮರೆಯಲಾಗದು.

ಪ್ರೇಮ ಕಾವ್ಯ...
ರೈಲಿನಲ್ಲಿ ಇರುವ ಟಿ.ವಿಯಲ್ಲಿ ಪ್ರೇಮದ ಹಾಡುಗಳು, ದೃಶ್ಯಗಳು ಬರುತ್ತಿದ್ದಂತೆಯೇ ರೈಲಿನಲ್ಲಿಯೇ ಪರಿಚಯವಾದ ಹುಡುಗ/ಹುಡುಗಿಯರು ಏನೋ ನೆನಪು ಮಾಡಿಕೊಂಡು ಮುಗುಳ್ನಗುತ್ತಾರೆ, ಕಣ್ಣಲ್ಲಿ ಮಾತನಾಡಿಕೊಳ್ಳುತ್ತಾರೆ. ಅಲ್ಲಿ ಬರುವ ದುಃಖದ ಹಾಡುಗಳನ್ನು ಕೇಳಿ ಕೆಲವರು ರೈಲಿನಲ್ಲಿಯೇ ಪರಿಚಯವಾಗಿ, ದೂರವಾದ ‘ಪ್ರೇಮಿ’ಯನ್ನು ನೆನೆಸಿಕೊಂಡು ದುಃಖಿಸುತ್ತಾರೆ! ಈ ಪ್ರೇಮಿಗಳಲ್ಲಿ ವಿರಸ ಆಗಿದ್ದರೆ ಹುಡುಗಿ, ಹುಡುಗನಿಗೆ ಕಾಣಿಸುವ ಹಾಗೆ ಬೇರೆ ಬೋಗಿಗೆ ಹೋಗುವ ಮೂಲಕ ಅಸಮಾಧಾನ ವ್ಯಕ್ತಪಡಿಸುವುದೂ ಇದೆ. ಆಕೆಯನ್ನು ಸಮಾಧಾನಪಡಿಸಲು ಹುಡುಗ ಹರಸಾಹಸಪಡುವುದೂ ನಡೆದೇ ಇರುತ್ತದೆ.

ನಿನ್ನೆ ಬಿರಿಯಾನಿ, ಐಸ್‌ಕ್ರೀಂ ತಿನ್ನಿಸುವೆನೆಂದು ಭರವಸೆ ಕೊಟ್ಟ ಹುಡುಗ ಕೈಕೊಟ್ಟಿದ್ದಕ್ಕೆ ಇವತ್ತು ಹುಡುಗನನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಳ್ಳುವುದು, ಆಕೆಯನ್ನು ಸಮಾಧಾನಪಡಿಸಲು ಹುಡುಗ ‘ಆ್ಯಕ್ಚುಲಿ...’ ಎಂದ ಕೂಡಲೇ ಈಕೆ ‘ಷಟ್‌ ಅಪ್‌’ ಎನ್ನುವುದು... ಎಲ್ಲವೂ ನಡೆಯುತ್ತದೆ.

ಲಿನಲ್ಲಿ ನೋಡಿದ್ದೇ ಒದ್ದೆಕಣ್ಣುಗಳ ಪ್ರೀತಿಯಿಂದ ನೋಡುವ ಹುಡುಗಿ ಹತ್ತಿರ ಬಂದು ತೋಳು ಹಿಡಿದು ಸಂತೈಸುವುದು... ಈ ದೃಶ್ಯಗಳೂ ಇಲ್ಲಿ ಮಾಮೂಲು.  

ಮಾನಿನಿಯರ ಲೋಕ...
ಮಹಿಳೆಯರ ಬೋಗಿಯದ್ದು ಬೇರೆಯದ್ದೇ ಲೋಕ. ಇಲ್ಲಿ ಸ್ಕಾರ್ಫ್, ಸ್ವೆಟರ್, ಜರ್ಕಿನ್, ಶಾಲು, ವೇಲು ಹೊದ್ದು ಎಲ್ಲ ನಿದ್ದೆಗೆ ಜಾರಿರುತ್ತಾರೆ. ಚಹಾ, ಕಾಫಿ, ತಟ್ಟೆ ಇಡ್ಲಿ, ದೋಸೆ, ಮದ್ದೂರು ವಡೆ ಮಾರುವವರ ಕೂಗಿಗೂ ಕ್ಯಾರೇ ಎನ್ನುವುದಿಲ್ಲ. ನಸುಕಿನ ನಾಲ್ಕು ಗಂಟೆಗೆ ಎದ್ದು ಅಡುಗೆ ಮಾಡಿ, ಮಕ್ಕಳು, ಗಂಡನಿಗೆ ಬುತ್ತಿ ಕಟ್ಟಿ ಉಸ್ಸಪ್ಪಾ ಎನ್ನುತ್ತಾ ರೈಲಿನವರೆಗೆ ಬರುವ ಇವರಿಗೆ ರೈಲಿನಲ್ಲಿ ಸೀಟು ಸಿಕ್ಕರೆ ಮುಖ್ಯಮಂತ್ರಿಯ ಸೀಟು ದಕ್ಕಿದಷ್ಟೇ ಖುಷಿ. ಮಂಡ್ಯ ಬರುವವರೆಗೆ ನಿದ್ದೆ ಮಾಡಿ ಎದ್ದರೆ ಗಂಟೆ ಎಂಟಾಗಿರುತ್ತದೆ.

ಆಮೇಲೆ ಡಬ್ಬಿ ತೆಗೆದು, ಪಕ್ಕದಲ್ಲಿದ್ದವರೊಂದಿಗೆ ಹಂಚಿಕೊಂಡು ತಿಂಡಿ ತಿಂದು ಮತ್ತೊಂದು ರೌಂಡ್‌ ನಿದ್ದೆಗೆ ಅಣಿಯಾಗುತ್ತಾರೆ. ಬೆಳಿಗ್ಗೆ ಮನೆಯಲ್ಲಿ ತಯಾರಾಗಿ ಬರಲು ಆಗದವರಿಗೆ ರೈಲೇ ‘ರೆಡಿ ರೂಂ’. ತಲೆಸ್ನಾನ ಮಾಡಿ ಬಂದವರು ಕೂದಲು ಹರವಿಕೊಂಡು ನಿಲ್ಲುತ್ತಾರೆ. ಇಳಿಯುವ ನಿಲ್ದಾಣ ಹತ್ತಿರ ಬಂದಾಗ ಬಾಚಿಕೊಳ್ಳುತ್ತಾರೆ. ಇನ್ನು ಕೆಲವರು ಕೆಂಗೇರಿ ನಿಲ್ದಾಣ ಹತ್ತಿರವಾದ ಹಾಗೆ ವ್ಯಾನಿಟಿ ಬ್ಯಾಗಿನಿಂದ ಪುಟ್ಟ ಕನ್ನಡಿ ತೆಗೆದು, ಸ್ನೋ, ಪೌಡರ್‌ ಹಚ್ಚಿಕೊಳ್ಳುತ್ತಾರೆ. ಕನ್ನಡಿ ಇಲ್ಲದವರು ಮೊಬೈಲ್‌ ಫೋನ್‌ ನೋಡಿಕೊಂಡು ಅಣಿಯಾಗುತ್ತಾರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT