ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ ರಂಗದ ಸೋಲು, ಗೆಲುವುಗಳು..!

Last Updated 20 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ನೀವು ತಂತ್ರಜ್ಞಾನ ಸ್ನೇಹಿಯಾಗಿದ್ದರೆ,  ಪರಸ್ಪರ ಅಪ್ಪಿಕೊಂಡು ಅಭಿನಂದಿಸಿಕೊಳ್ಳಲು ಇದು ಸಕಾಲ. ಗ್ರಾಹಕರ ದೃಷ್ಟಿಯಿಂದ ನೋಡಿದರೆ, ಅಥವಾ ಗ್ರಾಹಕ ತಂತ್ರಜ್ಞಾನ ಕ್ಷೇತ್ರಕ್ಕೆ  2016 ಸವಾಲಿನ ವರ್ಷವಾಗಿತ್ತು.

ಸ್ಮಾರ್ಟ್‌ಫೋನ್‌ ಸೇರಿದಂತೆ ಕೆಲವು ಅತ್ಯಾಧುನಿಕ ಡಿವೈಸ್‌ಗಳ ಕುರಿತು ನಕಾರಾತ್ಮಕ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರಿಂದ, ಎಲೆಕ್ಟ್ರಾನಿಕ್ಸ್‌  ಮಾರುಕಟ್ಟೆ ನಿರೀಕ್ಷಿಸಿದಷ್ಟು ಮಟ್ಟದ ಪ್ರಗತಿ ಕಾಣಲಿಲ್ಲ.

ಅದರಲ್ಲೂ ವರ್ಷಾಂತ್ಯದ ವೇಳೆಗೆ, ಸ್ಯಾಮ್ಸಂಗ್‌, ಗೂಗಲ್‌ ಕಂಪೆನಿ ವಿರುದ್ಧ ಟೀಕೆಗಳ ಸುರಿಮಳೆಯಾಯಿತು. ಆದರೆ, ಕೃತಕ ಬುದ್ಧಿಮತ್ತೆ (ಎಐ),  ವರ್ಚುವಲ್‌ ರಿಯಾಲಿಟಿ ಮತ್ತು ಗೂಢಲಿಪಿ  ಕ್ಷೇತ್ರಗಳಿಗೆ ಸಂಬಂಧಿಸಿದ ವಿನೂತನ ಆವಿಷ್ಕಾರಗಳು ಹೊಸ ಇತಿಹಾಸ ಬರೆದವು. ತಂತ್ರಜ್ಞಾನ ಕ್ಷೇತ್ರದ 2016ರ ಏಳು–ಬೀಳುಗಳನ್ನು ಈ ಕೆಳಗಿನ ಅಂಶಗಳನ್ನು ಪ್ರಮುಖವಾಗಿಟ್ಟುಕೊಂಡು ವಿಶ್ಲೇಷಿಸಬಹುದು.

ಬಗೆಹರಿಯದ ಬ್ಯಾಟರಿ ಸಮಸ್ಯೆ
ಸ್ಮಾರ್ಟ್‌ಫೋನ್‌ ಬ್ಯಾಟರಿ ಬಾಳಿಕೆ ಹೆಚ್ಚಿಸಲು ನಿತ್ಯ ಹೊಸದೊಂದು ತಂತ್ರಜ್ಞಾನ ಆವಿಷ್ಕಾರವಾಗುತ್ತಿದೆ. ಆದರೆ, ಇದುವರೆಗೆ ಶೇ 100ರಷ್ಟು ಪರಿಹಾರ ಕೊಡುವ ತಂತ್ರಜ್ಞಾನ ಬಂದಿಲ್ಲ. ಕಳೆದೆರಡು ದಶಕಗಳಿಂದ ಗ್ರಾಹಕ ಎಲೆಕ್ಟ್ರಾನಿಕ್ಸ್‌ ಕ್ಷೇತ್ರದಲ್ಲಿ ಲೀಥಿಯಂ ಐಯಾನ್‌ ಬ್ಯಾಟರಿಗಳೇ ಏಕಸ್ವಾಮ್ಯ ಹೊಂದಿವೆ. ಇವುಗಳನ್ನು ಮರು ಉತ್ಪಾದಿಸುವುದು ಅಗ್ಗ ಮತ್ತು ಸುಲಭ. ಹೀಗಾಗಿ ಇದನ್ನೇ ಕೇಂದ್ರೀಕರಿಸಿ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಆದರೆ, ಲೀಥಿಯಂ ಬ್ಯಾಟರಿಗಳ ಸುರಕ್ಷತೆ ಕುರಿತು ಈಗ ಪ್ರಶ್ನೆಗಳು ಎದ್ದಿವೆ. 

ಸ್ಯಾಮ್ಸಂಗ್‌ ಕಂಪೆನಿ ಬ್ಯಾಟರಿ ಸಮಸ್ಯೆಯಿಂದಾಗಿಯೇ 25 ಲಕ್ಷಕ್ಕೂ ಹೆಚ್ಚು  ಗ್ಯಾಲಕ್ಸಿ ನೋಟ್‌–7  ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಯಿಂದ ವಾಪಸ್‌ ಪಡೆಯಿತು.ಬ್ಯಾಟರಿ ಬಾಳಿಕೆ ಸಾಮರ್ಥ್ಯ ಕಡಿಮೆ ಎನ್ನುವ ಕಾರಣದಿಂದಲೇ ಕಂಪೆನಿಗಳು ಮತ್ತು ಕಾಲೇಜುಗಳ ಕ್ಯಾಂಪಸ್‌ಗಳಲ್ಲಿ ಜನಪ್ರಿಯವಾಗಿದ್ದ  ಹೋವರ್‌ಬೋರ್ಡ್‌ಗಳ ಬಳಕೆ (self-balancing two-wheeled board) ನಿಧಾನವಾಗಿ ಆಕರ್ಷಣೆ ಕಳೆದುಕೊಂಡವು. ಪ್ರಸ್ತುತ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಲೀಥಿಯಂ ಬದಲಿಗೆ ಪರ್ಯಾಯ ಬ್ಯಾಟರಿ ಬಳಕೆ ಸಾಧ್ಯತೆಗಳ ಕುರಿತು ಸಂಶೋಧನೆ ನಡೆಯಬೇಕಿದೆ.

ಹೊತ್ತಿ ಉರಿದ ಸ್ಮಾರ್ಟ್‌ಫೋನ್‌
ಸ್ಯಾಮ್ಸಂಗ್‌ ಕಂಪೆನಿ 2016ರಲ್ಲಿ  ಸುರಕ್ಷತೆ ದೃಷ್ಟಿಯಿಂದ ಗ್ರಾಹಕ ಎಲೆಕ್ಟ್ರಾನಿಕ್ಸ್‌ ಕ್ಷೇತ್ರದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿತು. ಹಲವು ಡಿವೈಸ್‌ಗಳಲ್ಲಿ ತಾಂತ್ರಿಕ ಲೋಪದಿಂದ ಬೆಂಕಿ ಕಾಣಿಸಿಕೊಂಡಿತು. ಸ್ಮಾರ್ಟ್‌ಫೋನ್‌ ಮಾತ್ರವಲ್ಲ, ಕಂಪೆನಿಯು ಅಮೆರಿಕದ ಮಾರುಕಟ್ಟೆಯಿಂದ ಅಂದಾಜು 28 ಲಕ್ಷ ವಾಷಿಂಗ್‌ ಮಷಿನ್‌ಗಳನ್ನು ದುರಸ್ತಿಗಾಗಿ ವಾಪಸ್‌ ಪಡೆಯಿತು.

ಈ ವಾಷಿಂಗ್‌ ಮಷಿನ್‌ಗಳು ಚಾಲನೆಗೊಳ್ಳುತ್ತಿದ್ದಂತೆ ಅಗತ್ಯಕ್ಕಿಂತ ಹೆಚ್ಚಾಗಿ (abnormal vibrations) ಕಂಪಿಸುತ್ತಿದ್ದವು. ಗ್ಯಾಲಕ್ಸಿ ನೋಟ್‌–7 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನೂ ಕಂಪೆನಿ ಮಾರುಕಟ್ಟೆಯಿಂದ ವಾಪಸ್‌ ಪಡೆಯಿತು. ಆದರೆ, ಇವುಗಳಿಗೆ ನಿಖರ ಕಾರಣ ಕಂಡುಹಿಡಿದು, ಅದನ್ನು ಸರಿಪಡಿಸಿಕೊಡಲು ಕಂಪೆನಿಯಿಂದ ಕೊನೆಗೂ ಸಾಧ್ಯವಾಗಲಿಲ್ಲ. ಸ್ಯಾಮ್ಸಂಗ್‌ ಸೇರಿದಂತೆ ಇತರೆ ಕಂಪೆನಿಗಳ ಎಲೆಕ್ಟ್ರಾನಿಕ್‌ ಉತ್ಪನ್ನಗಳ ಗುಣಮಟ್ಟ ಮತ್ತು ಗ್ರಾಹಕರ ಸುರಕ್ಷತೆ ಖಾತ್ರಿಗೊಳಿಸುವ ತಂತ್ರಜ್ಞಾನ ಇನ್ನೂ ಬರಬೇಕಿದೆ ಎನ್ನುವ ಸತ್ಯವನ್ನು ಈ ಘಟನೆ ಬಹಿರಂಗಗೊಳಿಸಿತು.

ದಾರಿ ತಪ್ಪಿಸಿದ ಡಿಜಿಟಲ್‌ ಮಾರ್ಗದರ್ಶಕ
ಗೂಗಲ್‌ ಕಂಪೆನಿ ಅಭಿವೃದ್ಧಿಪಡಿಸಿದ ವರ್ಚುವಲ್‌ ಅಸಿಸ್ಟಂಟ್‌ ತಂತ್ರಜ್ಞಾನ 2016ರ ಪ್ರಮುಖ ಸಂಶೋಧನೆಗಳಲ್ಲಿ ಒಂದು. ಸ್ಯಾಮ್ಸಂಗ್‌ ಕಂಪೆನಿ ತಾಂತ್ರಿಕ ಲೋಪದಿಂದಾಗಿ ಗ್ಯಾಲಕ್ಸಿ ನೋಟ್‌ 7ಎಸ್‌ ಮಾದರಿಯನ್ನು ಮಾರುಕಟ್ಟೆಯಿಂದ ವಾಪಸ್‌ ಪಡೆದ ಬೆನ್ನಲ್ಲೇ ಗೂಗಲ್‌ ಈ ತಂತ್ರಜ್ಞಾನ ಹೊಂದಿದ ಹೈ ಎಂಡ್‌ ಸ್ಮಾರ್ಟ್‌ಫೋನ್‌ ಪಿಕ್ಸಲ್‌ ( Google Pixel) ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಉಳಿದ ಹೈ ಎಂಡ್‌ ಸ್ಮಾರ್ಟ್‌ಫೋನ್‌ಗಳಂತೆ ಪಿಕ್ಸಲ್‌ ಅಗ್ನಿ ಅನಾಹುತಗಳನ್ನು ಮಾಡುವುದಿಲ್ಲ.

ಮಕ್ಕಳು ಕೂಡ ಧೈರ್ಯವಾಗಿ ಈ ಹ್ಯಾಂಡ್‌ಸೆಟ್‌ ಬಳಸಬಹುದು ಎನ್ನುವುದು ಮಾರುಕಟ್ಟೆ ತಜ್ಞರ ಅಭಿಮತವಾಗಿತ್ತು. ಜತೆಗೆ ಇದರಲ್ಲಿ  ಧ್ವನಿ ಮೂಲಕ ದೃಶ್ಯಗಳನ್ನು ಗುರುತಿಸುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಕುರಿತು ವ್ಯಾಪಕ ಪ್ರಚಾರ ನಡೆದಿತ್ತು. ಆದರೆ, ವರ್ಚುವಲ್‌ ಅಸಿಸ್ಟಂಟ್‌ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಲಿಲ್ಲ. ಜತೆಗೆ ಬಳಕೆದಾರನ ಎಲ್ಲಾ ಪ್ರಶ್ನೆಗಳಿಗೂ ಈ ಡಿಜಿಟಲ್‌ ಮಾರ್ಗದರ್ಶಿ ಉತ್ತರ ನೀಡಿದರೂ,  ಹೆಚ್ಚಿನವು ಗೂಗಲ್‌ ಸರ್ಚ್‌ ಎಂಜಿನ್‌, ಮ್ಯಾಪ್‌ ಆಧರಿಸಿದ ಉತ್ತರಗಳಾಗಿದ್ದವು.

ಹೀಗಾಗಿ ನಿಖರ ಉತ್ತರಕ್ಕಿಂತ ಹೆಚ್ಚುವರಿ ಮಾಹಿತಿಗೆ ಮಾತ್ರ ಇದು ಸೀಮಿತಗೊಂಡಿತು. ಇದೇ ಬಗೆಯ ತಂತ್ರಜ್ಞಾನ ಹೊಂದಿರುವ ಆ್ಯಪಲ್‌ ಕಂಪೆನಿಯ ‘ಸಿರಿ’ ಮತ್ತು ಅಮೆಜಾನ್‌ ಕಂಪೆನಿಯ ‘ಅಲೆಕ್ಸಾ’ ಕೂಡ ನಿರೀಕ್ಷಿದಷ್ಟು ಯಶಸ್ವಿಯಾಗಲಿಲ್ಲ. ಒಟ್ಟಿನಲ್ಲಿ  ಡಿಜಿಟಲ್ ಮಾರ್ಗದರ್ಶಕ ತಂತ್ರಜ್ಞಾನ ದಾರಿ ತೋರಿಸಿದ್ದಕ್ಕಿಂತ, ದಾರಿತಪ್ಪಿಸಿದ ಪ್ರಕರಣಗಳೇ 2016ರಲ್ಲಿ ಹೆಚ್ಚಿದ್ದವು.

ವರ್ಚುವಲ್ ರಿಯಾಲಿಟಿ
ವರ್ಚುವಲ್  ರಿಯಾಲಿಟಿ ತಂತ್ರಜ್ಞಾನ ಮುಖ್ಯವಾಹಿನಿಗೆ ಬರಲು ಇನ್ನಷ್ಟು ದಿನಗಳು ಬೇಕಾಗಬಹುದು. ಆದರೆ, ಈ ವರ್ಷ ಇದು ಸಾಕಷ್ಟು ಸಂಚಲನ ಸೃಷ್ಟಿಸಿತು.  ಈ ತಂತ್ರಜ್ಞಾನ ಆಧರಿಸಿದ  ಪೋಕಿಮಾನ್‌  ಗೊ ಮೊಬೈಲ್‌ ಆಪ್ಲಿಕೇಷನ್‌ ಲಕ್ಷಾಂತರ ಜನರಿಗೆ ಹುಚ್ಚು ಹಿಡಿಸಿತು. ಈಗ ತಂತ್ರಜ್ಞಾನ ಆಧರಿಸಿದ ಡಿವೈಸ್‌ಗಳನ್ನು ಸೋನಿ,ಗೂಗಲ್‌, ಎಚ್‌ಟಿಸಿ ಕಂಪೆನಿಗಳೂ ಹೊರತರುತ್ತಿವೆ. ಇದು ಬಹುನಿರೀಕ್ಷೆ ಮೂಡಿಸಿರುವ ತಂತ್ರಜ್ಞಾನ.

ಗೂಢಲಿಪಿಗೆ ಜೈ
ಖಾಸಗಿತನ ರಕ್ಷಿಸುವ ಉದ್ದೇಶದಿಂದ ಹಲವು ಮೊಬೈಲ್‌ ಸೇವಾ ಸಂಸ್ಥೆಗಳು ಗೂಢಲಿಪಿ ತಂತ್ರಜ್ಞಾನ ಬಳಕೆಗೆ ತಂದಿವೆ.  ಗೂಢಲಿಪಿಯಲ್ಲಿರುವ ಐಫೋನ್‌ ದತ್ತಾಂಶ ತೆರೆದು ನೋಡಲು ತನಿಖಾ ಸಂಸ್ಥೆಗಳಿಗೆ ಅವಕಾಶ ಕೊಡಬಾರದು ಎಂಬ ವಾದ ನಡೆದು, ಆ್ಯಪಲ್‌ ಮತ್ತು ಎಫ್‌ಬಿಐ ನಡುವೆ ಕಾನೂನು ಸಂಘರ್ಷಕ್ಕೂ ಕಾರಣವಾಯಿತು.

ಆ್ಯಪಲ್‌ ಕಂಪೆನಿ ಗ್ರಾಹಕರ ಪರವಾಗಿ ನಿಂತಿತು. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಭಾರಿ ಚರ್ಚೆಗಳೂ ನಡೆದವು. ಇದು ಕಂಪೆನಿಯ ‘ಖಾಸಗಿತನ ಮತ್ತು ಸಾರ್ವಜನಿಕ ಭದ್ರತೆ’ ನೀತಿಗೆ ವಿರುದ್ಧವಾಗಿದೆ, ಗ್ರಾಹಕರ ಹಕ್ಕುಗಳನ್ನು ಸಂರಕ್ಷಿಸುವ ಉದ್ದೇಶದಿಂದ  ದತ್ತಾಂಶವನ್ನು ರಹಸ್ಯವಾಗಿ ಕಾಪಾಡಲಾಗುತ್ತದೆ, ಇದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಆ್ಯಪಲ್‌ ಸ್ಪಷ್ಟಪಡಿಸಿತು.

ಆನ್‌ಲೈನ್‌ ಸ್ಟ್ರೀಮಿಂಗ್‌
ಮೊಬೈಲ್‌ ಇಂಟರ್‌ನೆಟ್‌ ಬಳಕೆ ವ್ಯಾಪಕವಾದ  ಬೆನ್ನಲ್ಲೇ, ವಿಡಿಯೊ ಆನ್ ಡಿಮ್ಯಾಂಡ್‌ (VOD) ಸೇವೆಗೂ ಬೇಡಿಕೆ ಹೆಚ್ಚತೊಡಗಿದೆ. 2016ರಲ್ಲಿ ಈ ತಂತ್ರಜ್ಞಾನ ಮುನ್ನೆಲೆಗೆ ಬಂದಿತು. ಸಾಂಪ್ರದಾಯಿಕ ಟಿವಿಯಲ್ಲಿ ನೋಡುವುದಕ್ಕಿಂತಲೂ ಗರಿಷ್ಠ ಗುಣಮಟ್ಟದ ಎಚ್‌ಡಿ ಚಿತ್ರಗಳನ್ನು ಇಂದು ಮೊಬೈಲ್‌ ಸೇರಿದಂತೆ ಇತರೆ ಗ್ಯಾಡ್ಜೆಟ್‌ಗಳಲ್ಲಿ ವೀಕ್ಷಿಸಬಹುದು.

ಸ್ಮಾರ್ಟ್‌ಫೋನ್‌ ಮತ್ತು ಇಂಟರ್‌ನೆಟ್‌ ಮಾರುಕಟ್ಟೆ ಸೃಷ್ಟಿಸಿರುವ ಈ ಅನಂತ ಸಾಧ್ಯತೆಯಿಂದಾಗಿ  ನೆಟ್‌ಫ್ಲಿಕ್ಸ್‌, ಹೂಕ್‌ಟಿವಿ, ಬಿಗ್‌ಫ್ಲಿಕ್ಸ್‌, ಹಾಟ್‌ಸ್ಟಾರ್‌, ಅಮೆಜಾನ್‌ ವಿಡಿಯೊ, ಗೂಗಲ್‌ ಪ್ಲೇ ಮೂವೀಸ್‌, ವೇರ್‌ಎವೆರ್‌ ಟಿವಿ, ವ್ಹೀವ್‌ ಸ್ಟಾರ್‌ನಂತಹ ನೂರಾರು ಆನ್‌ಲೈನ್‌ ವಿಡಿಯೊ ಸ್ಟ್ರೀಮಿಂಗ್‌ ಕಂಪೆನಿಗಳು ಈ ಕ್ಷೇತ್ರದಲ್ಲಿ ಬಂಡವಾಳ ತೊಡಗಿಸಲು ಮುಂದೆ ಬಂದಿವೆ.

ಭಾರತದ ಇ–ಕಾಮರ್ಸ್‌ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ‘ಅಮೆಜಾನ್‌ ಡಾಟ್‌ ಕಾಂ’ ಕೂಡ ಭಾರತದ ವಿಡಿಯೊ ಸ್ಟ್ರೀಮಿಂಗ್‌ ಮಾರುಕಟ್ಟೆಗೆ ಶೀಘ್ರದಲ್ಲಿಯೇ  ಪ್ರವೇಶಿಸಲಿದೆ.  ಭಾರತೀಯ ಭಾಷೆಗಳಲ್ಲಿ ಕಡಿಮೆ ವೆಚ್ಚದಲ್ಲಿ ಹೇಗೆ ಗುಣಮಟ್ಟದ ವಿಡಿಯೊ ನೀಡಬಹುದು ಎನ್ನುವುದರ ಕುರಿತು ಕಂಪೆನಿ ಮಾರುಕಟ್ಟೆ ಅಧ್ಯಯನ ಕೈಗೊಂಡಿದೆ.

ಬ್ರೇನ್‌ ಎಕ್ಸ್‌ ಚೆನ್‌
ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT