ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ, ಮನೆಗೆ ಹಾಲು ‘ಡೇಲಿನಿಂಜಾ’ ನೆರವು...

Last Updated 20 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಚಹ, ಕಾಫಿ ಪ್ರಿಯರಿಗೆ ಬೆಳಗಿನ ಹೊತ್ತು ಸಕಾಲದಲ್ಲಿ  ಮನೆ ಬಾಗಿಲಿಗೆ ಹಾಲು ಪೂರೈಕೆ ಆಗದಿದ್ದರೆ ಚಡಪಡಿಸುತ್ತ  ಹಾಲು ಪೂರೈಸುವವರನ್ನು ಶಪಿಸಲು ತೊಡಗುತ್ತಾರೆ.ಇನ್ನೊಂದೆಡೆ ಹಾಲು ಪೂರೈಕೆದಾರರು ಪ್ರತಿ ದಿನ ಹಲವಾರು ಬಗೆಯ ಸಮಸ್ಯೆಗಳಿಗೆ  ಮುಖಾಮುಖಿಯಾಗುತ್ತಲೇ ಇರುತ್ತಾರೆ. ದಿನವೊಂದಕ್ಕೆ ಎಷ್ಟು ಹಾಲು ಖರ್ಚಾಗಲಿದೆ ಎನ್ನುವ ಖಚಿತ ಲೆಕ್ಕ ಇಲ್ಲದೆ ತಿಂಗಳ ಲಾಭ – ನಷ್ಟದ ಲೆಕ್ಕಾಚಾರ ಹಾಕುವುದರಲ್ಲಿಯೇ ಅವರ ತಲೆ ಬಿಸಿಯಾಗಿರುತ್ತದೆ.

ಬಳಕೆದಾರರಿಗೂ ಒಮ್ಮೊಮ್ಮೆ ದಿಢೀರಾಗಿ ಮರು ದಿನ ಹೆಚ್ಚು ಹಾಲು ಬೇಕಾಗುತ್ತದೆ.  ಅನಿರೀಕ್ಷಿತವಾಗಿ ಊರಿಗೆ  ಹೋಗಬೇಕಾಗಿ ಬಂದರೆ, ಹಾಲಿನವರಿಗೆ  ಮುನ್ಸೂಚನೆ ಕೊಡದಿದ್ದರೆ ಮನೆ ಬಾಗಿಲಲ್ಲೇ ಹಾಲಿನ ಪ್ಯಾಕೆಟ್‌ ಅನಾಥವಾಗಿ ಬಿದ್ದಿರುತ್ತದೆ ಇಲ್ಲವೆ ಅನ್ಯರ  ಪಾಲಾಗಿರುತ್ತದೆ. ಕೆಲವೊಮ್ಮೆ ನಾಯಿ – ಬೆಕ್ಕುಗಳೂ ಪ್ಯಾಕೆಟ್‌ ಎಳೆದುಕೊಂಡು ಹೋಗಿರುತ್ತವೆ. ಇಂತಹ ಹತ್ತು ಹಲವು ಸಮಸ್ಯೆಗಳಿಗೆ ತಂತ್ರಜ್ಞರಿಬ್ಬರು ಸ್ಥಾಪಿಸಿರುವ ‘ಡೇಲಿ ನಿಂಜಾ’  (Daily Ninja) ಸ್ಟಾರ್ಟ್‌ಅಪ್‌ ಪರಿಹಾರ ಕಂಡುಕೊಂಡಿದೆ.

ಹಾಲಿನ ಬಳಕೆದಾರ ಮತ್ತು ಪೂರೈಕೆದಾರರ ಹತ್ತು ಹಲವು ಬಗೆಯ ಸಂಕಷ್ಟಗಳನ್ನೆಲ್ಲ  ದೂರ ಮಾಡಲು, ಸುಲಲಿತ ವಹಿವಾಟು ನಡೆಸಲು,  ಹಣ ಪಾವತಿ ಸುಲಭಗೊಳಿಸಲು ಡೇಲಿನಿಂಜಾ   ಸ್ಟಾರ್ಟ್‌ಅಪ್‌ ನೆರವಾಗುತ್ತಿದೆ. ಮನೆ ಬಾಗಿಲಿಗೆ ಹಾಲು ಬಂದ ಕೂಡಲೇ  ಮೊಬೈಲ್‌ ಆ್ಯಪ್‌ನಲ್ಲಿ ಸಂದೇಶ ಬರುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎನ್ನುವ ಕಲ್ಪನೆಯನ್ನೂ ‘ಡೇಲಿ ನಿಂಜಾ’ ಮೊಬೈಲ್‌ ಕಿರುತಂತ್ರಾಂಶವು ಸಾಕಾರಗೊಳಿಸಿದೆ.

ಸಾಗರ್‌ ಎರ್ನಾಲ್ಕರ್‌ ಮತ್ತು ಅನುರಾಗ್‌ ಗುಪ್ತಾ ಅವರು ಈ ಸ್ಟಾರ್ಟ್‌ಅಪ್‌ನ ಸ್ಥಾಪಕರು. ಬಿಟ್ಸ್‌ ಪಿಲಾನಿಯಲ್ಲಿ ಓದಿರುವ ಸಾಗರ್‌, ಇತರರಿಗೆ ಕಿರು ತಂತ್ರಾಂಶಗಳನ್ನು ಅಭಿವೃದ್ಧಿ ಮಾಡಿಕೊಡುತ್ತಿದ್ದ  ಆ್ಯಪ್‌ಸ್ಪೈರ್‌ (appspire) ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು.

ಅನುರಾಗ್ ಗುಪ್ತಾ ಅವರು ಗೋಲ್ಡ್‌ಮನ್ ಸ್ಯಾಚ್ಸ್‌ನಲ್ಲಿ  (goldman sachs)  ಉದ್ಯೋಗಿಯಾಗಿದ್ದರು.  ಬೆಂಗಳೂರಿನ ಅಲ್ಪೆನಿಕ್‌ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಇವರಿಗೆ ಹಾಲು ಪೂರೈಸುತ್ತಿದ್ದವರು, ತಮ್ಮೆಲ್ಲ ಸಂಕಷ್ಟ ಹೇಳಿಕೊಂಡು, ತಂತ್ರಜ್ಞಾನ ಪರಿಣತರಾಗಿರುವ ನೀವು ಅದಕ್ಕೊಂದು ಪರಿಹಾರ ಕಂಡು ಹಿಡಿಯಬೇಕು ಕೇಳಿಕೊಂಡಿದ್ದರು.

ಇತರ ಸರಕುಗಳ ಖರೀದಿ ಮತ್ತು ಹಣ ಪಾವತಿ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲು  ಉದ್ದೇಶಿಸಿದ್ದ ಅವರಿಬ್ಬರೂ  ಹಾಲು ಪೂರೈಕೆ ವಹಿವಾಟಿಗೂ ಪರಿಹಾರ ಕಂಡುಕೊಳ್ಳಲು ಮುಂದಾದರು. ಈ ವೃತ್ತಿಯ ಒಳ ಹೊರಗನ್ನೆಲ್ಲ ಸಮಗ್ರವಾಗಿ ತಿಳಿದುಕೊಂಡು ಅದಕ್ಕೊಂದು ಪರಿಹಾರ ಕಂಡುಕೊಳ್ಳಲು ಮೊಬೈಲ್‌   ಆ್ಯಪ್‌ ಅಭಿವೃದ್ಧಿಪಡಿಸಿದ್ದಾರೆ. 

ಆರಂಭದಲ್ಲಿ ಅವರು  ಬೆಂಗಳೂರು ಮಹಾನಗರದ ಹಾಲು ಪೂರೈಕೆ ಮತ್ತು ಬೇಡಿಕೆಯ ಲೆಕ್ಕಾಚಾರ ಹಾಕಿದರು. ಬೆಂಗಳೂರಿನಲ್ಲಿ ಪ್ರತಿ ದಿನ 45 ಲಕ್ಷ ಲೀಟರ್ ಹಾಲಿಗೆ ಬೇಡಿಕೆ ಇದೆ. ಇದರಲ್ಲಿ ಕನಿಷ್ಠ 1 ಲಕ್ಷ ಲೀಟರ್‌  ವಹಿವಾಟನ್ನು ಮೊಬೈಲ್‌ ವಹಿವಾಟು ವ್ಯಾಪ್ತಿಗೆ ತಂದರೂ ಸಾಕಷ್ಟು ಲಾಭದಾಯಕವಾಗಿ ನಡೆಸಬಹುದು ಎನ್ನುವುದು ಅವರ ಲೆಕ್ಕಚಾರವಾಗಿತ್ತು.

ಪ್ರತಿ ಲೀಟರ್‌ ಹಾಲಿನ ಬೆಲೆ ₹ 34 ರಿಂದ ₹ 35 ಇದ್ದರೂ, ಇದರಲ್ಲಿ ಲಾಭದ ಪ್ರಮಾಣ ತುಂಬ ( 50 ರಿಂದ 75 ಪೈಸೆ) ಕಡಿಮೆ. ಆದರೆ, ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ.  ಹಾಲಿನ ಬಾಳಿಕೆ ಅವಧಿ ಬರೀ 24 ಗಂಟೆ ಮಾತ್ರ. ಸೇವಾ ಶುಲ್ಕದ  ರೂಪದಲ್ಲಿ ₹ 1 ವಸೂಲಿಗೆ ಅವಕಾಶ ಇದೆ. ಇಂತಹ ಪ್ರತಿಕೂಲತೆಗಳಿದ್ದರೂ, ಹಾಲು ಪೂರೈಕೆ ಸಂಪರ್ಕ ಜಾಲದ ಜತೆಗೆ ಗ್ರಾಹಕರಿಗೆ ಬೇಕಾಗುವ ಇತರ ಸರಕುಗಳನ್ನೂ ಪೂರೈಸಿ ವಹಿವಾಟು ಕುದುರಿಸಬಹುದು ಎನ್ನುವುದು ಅವರ ಲೆಕ್ಕಾಚಾರವಾಗಿತ್ತು. ಆರಂಭದಲ್ಲಿ ಕೈಸುಟ್ಟುಕೊಂಡರೂ ಅದರಿಂದ ಧೃತಿಗೆಡಲಿಲ್ಲ.

ಬಳಕೆದಾರರ ಮನೆ ಬಾಗಿಲಿಗೆ ಸಂಸ್ಥೆಯು ಬ್ರ್ಯಾಂಡೆಡ್‌ ಹಾಲನ್ನು ಮಾತ್ರ ಪೂರೈಸುತ್ತಿದೆ. ಈ ವಹಿವಾಟಿನಲ್ಲಿ ಲಾಭದ ಪ್ರಮಾಣ ಹೆಚ್ಚಿಸಿಕೊಳ್ಳಲು ಸಂಸ್ಥೆ ಬರೀ ಹಾಲು ಪೂರೈಕೆಯನ್ನೇ ನೆಚ್ಚಿಕೊಂಡಿಲ್ಲ. ಹಾಲಿನ ಜತೆಗೆ ಬ್ರೆಡ್‌, ಬೆಣ್ಣೆ, ಮೊಟ್ಟೆ, ಹಣ್ಣು, ತಾಜಾ ಮಾಂಸ ಪೂರೈಕೆಗೂ ಸಂಸ್ಥೆ ಗಮನ ನೀಡಿತು. ಬ್ರಿಟಾನಿಯಾ, ಮಾಡರ್ನ್‌ – ಹೀಗೆ  ಗ್ರಾಹಕರು ಇಷ್ಟ ಪಟ್ಟ  ಬ್ರ್ಯಾಂಡ್‌್ ಸರಕುಗಳನ್ನೇ ಪೂರೈಸಲಾಗುತ್ತಿದೆ.

ಗ್ರಾಹಕರು ₹ 1,000 ಮೊತ್ತದ ಸರಕು ಆದೇಶಿಸಿದರೆ 200 ರಿಯಾಯ್ತಿ ನೀಡುವ ವಿಶೇಷ ಕೊಡುಗೆಗಳನ್ನೂ ನೀಡಲಾಗುತ್ತದೆ.  ಭಾರಿ ರಿಯಾಯ್ತಿ ಕೊಡುಗೆಗಳ ವಿವರಗಳೆಲ್ಲ ಕಾಲ ಕಾಲಕ್ಕೆ ಆ್ಯಪ್‌ನಲ್ಲಿ ಪ್ರಕಟಗೊಳ್ಳುತ್ತಲೇ ಇರುತ್ತವೆ.

‘ಇಲ್ಲಿ ಡೆಬಿಟ್‌, ಕ್ರೆಡಿಟ್‌, ಇಂಟರ್‌ನೆಟ್‌ ಬ್ಯಾಂಕ್‌ ಮೂಲಕ ಸುಲಭವಾಗಿ ಹಣಪಾವತಿಸಬಹುದು. ಪೇಟಿಎಂ ನಮ್ಮ ಹಣ ಪಾವತಿಯ ರಹದಾರಿಯಾಗಿದೆ. ಡಿಜಿಟಲ್‌ ಪಾವತಿ ರೂಢಿ ಇಲ್ಲದ ಹಿರಿಯ ನಾಗರಿಕರಿಂದ ನಗದು ಸ್ವೀಕರಿಸುವ ಸೌಲಭ್ಯವೂ ಇದೆ’ ಎಂದು ಸಂಸ್ಥೆಯ ವಹಿವಾಟು ಅಭಿವೃದ್ಧಿ ಮುಖ್ಯಸ್ಥ  ಶ್ರೀನಿವಾಸ್‌ ಮೂರ್ತಿ ಅವರು ಹೇಳುತ್ತಾರೆ.

ಕನಕಪುರ ರಸ್ತೆ, ವಿಜಯನಗರ, ಪೀಣ್ಯ, ಮಾನ್ಯತಾ ಟೆಕ್‌ ಪಾರ್ಕ್‌, ಪ್ರೆಸ್ಟೀಜ್‌ ಶಾಂತಿ ನಿಕೇತನ ಹೀಗೆ  ನಗರದ ಎಲ್ಲೆಡೆಗಳಲ್ಲಿ ಇರುವ 400 ಅಪಾರ್ಟ್‌ಮೆಂಟ್ಸ್‌ಗಳಿಗೆ ಸೇವೆ ಒದಗಿಸಲಾಗುತ್ತಿದೆ.

‘ಹಾಲು ಪೂರೈಕೆದಾರರನ್ನು ಸಂಪರ್ಕಿಸಿ, ಅವರಿಗೆ ತಂತ್ರಜ್ಞಾನ ಪರಿಚಯಿಸಿ, ತರಬೇತಿ ನೀಡಿ ಸಜ್ಜುಗೊಳಿಸಿದ ನಂತರವೇ ‘ಡೇಲಿ ನಿಂಜಾ’ ವ್ಯಾಪ್ತಿಗೆ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಮೂರ್ತಿ ಅವರು ಹೇಳುತ್ತಾರೆ.

ಆ್ಯಪ್‌ನ ಕ್ಯಾಲೆಂಡರ್‌ನಲ್ಲಿ ನಿರ್ದಿಷ್ಟ ತಾರೀಕಿಗೆ ಚುಕ್ಕೆ ಗುರುತು ಹಾಕಿದ್ದರೆ ಅಂದು ಆ ಗ್ರಾಹಕರಿಗೆ ಹಾಲು ಪೂರೈಕೆ ಆಗುವುದಿಲ್ಲ. ಹಾಲು ಪೂರೈಕೆದಾರರು ಸ್ಟೋರ್‌ ಪೇಜ್‌ ಲಾಗಿನ್‌ ಮೂಲಕ  ಮುಂಚಿತವಾಗಿಯೇ ಒಂದು ವಾರದ  ಅಂದಾಜು ಮಾಡಬಹುದು. ಮರುದಿನ ಎಷ್ಟು ಲೀಟರ್‌ ಹಾಲಿಗೆ ಬೇಡಿಕೆ ಇದೆ ಎನ್ನುವುದನ್ನು ಅಂತರ್ಜಾಲ ತಾಣದಲ್ಲಿಯೇ ತಿಳಿದುಕೊಳ್ಳಬಹುದು. ಗ್ರಾಹಕರು ಮರು ದಿನ ತಮಗೆ ಬೇಕಾದ ಹಾಲಿನ ಪ್ರಮಾಣದ ಬಗ್ಗೆ ಮಧ್ಯರಾತ್ರಿ 12 ಗಂಟೆಯವರೆಗೆ  ಬೇಡಿಕೆ ಸಲ್ಲಿಸಬಹುದಾಗಿದೆ. 

‘ಹಾಲಿನ ಜತೆಗೆ  ಪೂರೈಸುವ ಇತರ ಸರಕುಗಳನ್ನು ತಯಾರಕರಿಂದ ನೇರವಾಗಿ ಖರೀದಿಸುವುದರಿಂದ ರಿಯಾಯ್ತಿ ದರದಲ್ಲಿ ದೊರೆಯುತ್ತವೆ. ಅಲ್ಲಿಂದಲೂ ಸಂಸ್ಥೆಗೆ ಲಾಭ ಹರಿದು ಬರುತ್ತದೆ. ಸದ್ಯಕ್ಕೆ ಲಾಭವನ್ನೇ ಗುರಿಯಾಗಿರಿಸಿಕೊಂಡಿಲ್ಲ.  ವಹಿವಾಟು ವಿಸ್ತರಣೆ ಆಗುತ್ತಿದ್ದಂತೆ ಲಾಭದ ಪ್ರಮಾಣ ಹೆಚ್ಚಲಿದೆ’ ಎಂದು  ಶ್ರೀನಿವಾಸ ಮೂರ್ತಿ ಹೇಳುತ್ತಾರೆ.

ಕಾರ್ಯಾಚರಣೆ ವೈಖರಿ
ಮಧ್ಯರಾತ್ರಿ 12  ಗಂಟೆ ಆಗುತ್ತಿದ್ದಂತೆ ಎಲ್ಲ ಅಪಾರ್ಟ್‌ಮೆಂಟ್‌ಗಳ ಹಾಲು ಮತ್ತು ಇತರ ಉತ್ಪನ್ನಗಳ ಪೂರೈಕೆಯ ಕನ್ನಡದಲ್ಲಿನ ಮುದ್ರಿತ  ಪ್ರತಿಗಳು ಸ್ವಯಂಚಾಲಿತವಾಗಿ ಸಿದ್ಧಗೊಳ್ಳುತ್ತವೆ. ಈ ಮುದ್ರಿತ ಮಾಹಿತಿ ಮತ್ತು ಯಾವ ಅಪಾರ್ಟ್‌ಮೆಂಟ್‌ನ ಯಾವ ಮನೆಗೆ  ಹೆಚ್ಚುವರಿ ಉತನ್ನಗಳನ್ನು ತಲುಪಿಸಬೇಕಾದ  ಪ್ರತ್ಯೇಕ  ಕ್ರೇಟ್ಸ್‌ಗಳನ್ನು ಒಳಗೊಂಡ 12 ವಾಹನಗಳು ನಗರದ ಎಲ್ಲ ದಿಕ್ಕಿನಲ್ಲಿ ಸಂಚರಿಸುತ್ತವೆ. ನಸುಕಿನ 4 ಗಂಟೆಗಳಿಗೆಲ್ಲ  ಅಪಾರ್ಟ್‌ಮೆಂಟ್‌ ಬಳಿ ಹೆಚ್ಚುವರಿ ಸರಕು ಇಳಿಸಲಾಗಿರುತ್ತದೆ.

6 ಗಂಟೆ ಹೊತ್ತಿಗೆ ಹಾಲು ಮತ್ತು ಇತರ ಉತ್ಪನ್ನಗಳು ಗ್ರಾಹಕರ ಮನೆ ಬಾಗಿಲಲ್ಲಿ ಇರುತ್ತವೆ. ಈ ಹೊತ್ತಿಗೆ ಗ್ರಾಹಕರ ಮೊಬೈಲ್‌ ಆ್ಯಪ್‌ನಲ್ಲಿ ಸಂದೇಶ ರವಾನೆಯಾಗುತ್ತದೆ.  ಮಾಂಸವನ್ನು ಮಾತ್ರ ಬೇರೆ ಸಿಬ್ಬಂದಿ ಪ್ರತ್ಯೇಕವಾಗಿ ಪೂರೈಸುವ ವ್ಯವಸ್ಥೆ ಇಲ್ಲಿದೆ. ಗ್ರಾಹಕರ ದೂರುಗಳು ಏನಾದರೂ ಇದ್ದರೆ, ಅವುಗಳನ್ನು ಬಗೆಹರಿಸಲು ಹಾಲು ಪೂರೈಕೆದಾರರು 8 ಗಂಟೆಯವರೆಗೆ  ಅಪಾರ್ಟ್‌ಮೆಂಟ್‌ಗಳ ಆವರಣದಲ್ಲಿಯೇ ಕಡ್ಡಾಯವಾಗಿ ಇರುತ್ತಾರೆ. 

ಗ್ರಾಹಕರ ದೂರುಗಳನ್ನು ಆಲಿಸಲೆಂದೇ ಪ್ರತ್ಯೇಕ ಸಹಾಯವಾಣಿ ಕೇಂದ್ರ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. ಆ್ಯಪ್‌ನಲ್ಲಿನ ಚಾಟ್‌ ಸೌಲಭ್ಯದ ಮೂಲಕವೂ  ಗ್ರಾಹಕರು ಉಚಿತವಾಗಿ ದೂರು ಸಲ್ಲಿಸಬಹುದು. ಹಾಲು ಪೂರೈಕೆದಾರರ ಸಂಕಷ್ಟಗಳನ್ನೆಲ್ಲ ‘ಡೇಲಿ ನಿಂಜಾ’ ಸಂಸ್ಥೆಯೇ ಹೊತ್ತುಕೊಂಡಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ಹೇಗೆ ವರ್ತಿಸಬೇಕು ಎನ್ನುವುದರ ತರಬೇತಿಯನ್ನೂ ನೀಡಲಾಗಿರುತ್ತದೆ.

ಆರಂಭದಲ್ಲಿ ನವೋದ್ಯಮದ ಸ್ಥಾಪಕರೇ ಸ್ವಂತ ಹಣ ಹೂಡಿಕೆ ಮಾಡಿದ್ದರು. ವಹಿವಾಟು ವೃದ್ಧಿಯಾಗಿ, ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗುತ್ತಿದ್ದಂತೆ ವಹಿವಾಟು ವಿಸ್ತರಣೆಗೆ ಅಗತ್ಯವಾದ ಬಂಡವಾಳದ ನೆರವು ಹರಿದು ಬರುತ್ತಿದೆ.

‘ಅಪ್ರಮೇಯ ರಾಧಾಕೃಷ್ಣ,  ಎನ್‌ಯು ವೆಂಚರ್ಸ್‌, ಶಾದಿ ಡಾಟ್‌ಕಾಂನ  ಅನುಪಂ ಮಿತ್ತಲ್‌ ಮತ್ತು ಫ್ರೀಚಾರ್ಜ್‌ನ  ಕುನಾಲ್‌ ಶಾ ಸೇರಿದಂತೆ, ಈ ಸ್ಟಾರ್ಟ್‌ಅಪ್‌ನಲ್ಲಿ ಸದ್ಯಕ್ಕೆ 25 ರಿಂದ 30 ಮಂದಿ ಹೂಡಿಕೆದಾರರು ಇದ್ದಾರೆ. ಇನ್ನೂ ಮೂರು ವರ್ಷ ಹೂಡಿಕೆಯ ಅಗತ್ಯವೇ ಇಲ್ಲ. ‘ಬೆಂಗಳೂರಿನ ಪ್ರಯೋಗದಲ್ಲಿ ಒಂದು ಲಕ್ಷ ಲೀಟರ್‌ನಷ್ಟು ಹಾಲು ಪೂರೈಕೆ ಮಟ್ಟ ತಲುಪಿದ ನಂತರ, ಇತರ ಮಹಾನಗರಗಳಿಗೆ ವಹಿವಾಟು ವಿಸ್ತರಿಸಲು ಸಂಸ್ಥೆ ಉದ್ದೇಶಿಸಿದೆ. ಇದು ಮುಂದಿನ ವರ್ಷ ಕಾರ್ಯಗತಗೊಳ್ಳುವ ಸಾಧ್ಯತೆ ಇದೆ.  ಸಂಸ್ಥೆಯ ಹಣಕಾಸು ಪರಿಸ್ಥಿತಿ ಸುಭದ್ರವಾಗಿದೆ. ವಹಿವಾಟು ಕೂಡ ಸುರಕ್ಷಿತವಾಗಿದೆ.

‘ನಮಗೆ ಸದ್ಯಕ್ಕೆ ಸ್ಪರ್ಧೆ ಇಲ್ಲ. ಕೆಲವರು  ನಮ್ಮ ವಹಿವಾಟಿನ ಅನುಕರಣೆ ಮಾಡಲು ಹೋಗಿ ಯಶಸ್ವಿಯಾಗದೆ ಕೈಬಿಟ್ಟಿದ್ದಾರೆ.  ಆವ್ಸಲಿ (awzly) ಸಂಸ್ಥೆಯನ್ನು ನಾವೇ ಸ್ವಾಧೀನಪಡಿಸಿಕೊಂಡಿದ್ದೇವೆ’ ಎಂದು ಶ್ರೀನಿವಾಸ್‌ ಮೂರ್ತಿ ಹೇಳುತ್ತಾರೆ.

ಕನಿಷ್ಠ 1 ವರ್ಷದಿಂದ ಹಾಲು ಪೂರೈಕೆ ಮಾಡುತ್ತಿರುವ, ಎರಡು ಮೂರು ವರ್ಷಗಳ ಅನುಭವ ಇದ್ದವರು  ‘ಡೇಲಿನಿಂಜಾ’ದ ವಹಿವಾಟಿನಲ್ಲಿ ಸೇರಿಕೊಳ್ಳಬಹುದು.ಶೀಘ್ರದಲ್ಲಿಯೇ 50 ಸಾವಿರ ಬಳಕೆದಾರರನ್ನು  ತಲುಪುವ ಗುರಿ ತಲುಪುವ ನಿಟ್ಟಿನಲ್ಲಿ ಈ ಸ್ಟಾರ್ಟ್‌ಅಪ್‌ ದೃಢ ಹೆಜ್ಜೆ ಇರಿಸಿದೆ.  ಮಾಹಿತಿಗೆ   99004 71133  / contact@dailyninja.in ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT