ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ವೈಭವದ ದಿನಗಳತ್ತ ಭಾರತದ ಹಾಕಿ ದಾಪುಗಾಲು

Last Updated 20 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಭಾರತದ ಹಾಕಿಯಲ್ಲಿ ಮತ್ತೆ ಒಳ್ಳೆಯ ದಿನಗಳು ಬರುತ್ತಿವೆ. ಲಖನೌನಲ್ಲಿ ಈಚೆಗೆ ನಡೆದ ವಿಶ್ವಕಪ್‌ ಜೂನಿಯರ್‌ ಪುರುಷರ ಹಾಕಿಯಲ್ಲಿ ಭಾರತ ಪ್ರಶಸ್ತಿ ಗೆದ್ದಿರುವುದು ಚರಿತ್ರಾರ್ಹ. ಮುಂದಿನ ದಿನಗಳಲ್ಲಿ ಹಾಕಿ ‘ದೊಡ್ಡಣ್ಣ’ನಾಗುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗತೊಡಗಿವೆ. ಈ ಕ್ರೀಡೆಯಲ್ಲಿ ಮಸುಕಾಗಿದ್ದ ದೇಶದ ಘನತೆ ಮತ್ತೆ ಹೊಳೆಯತೊಡಗಿದೆ. ಎಂಟು ವರ್ಷಗಳ ಹಿಂದೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲವಾಗಿದ್ದ ಭಾರತ, ನಾಲ್ಕು ವರ್ಷಗಳ ಹಿಂದೆ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕೊನೆಯ ಸ್ಥಾನಕ್ಕೆ ಇಳಿದಿತ್ತು. ಇದೇ ವರ್ಷ ರಿಯೊ ಒಲಿಂಪಿಕ್ಸ್‌ನಲ್ಲಿ ಎಂಟರ ಘಟ್ಟಕ್ಕೆ ಏರಲು ಸಾಧ್ಯವಾಯಿತು. ಮುಂಬರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಎತ್ತರಕ್ಕೇರುವ ಹೆಗ್ಗನಸಿಗೆ ಇದೀಗ ರೆಕ್ಕೆಗಳು ಮೂಡಿವೆ. ಈ ವಿಶ್ವಕೂಟದಲ್ಲಿ ಕಿರಿಯ ಆಟಗಾರರು ಇಂಗ್ಲೆಂಡ್‌, ಕೆನಡಾ, ದಕ್ಷಿಣ ಆಫ್ರಿಕಾ, ಬೆಲ್ಜಿಯಂನಂತಹ ಘಟಾನುಘಟಿ ತಂಡಗಳನ್ನೇ ಮಣಿಸಿದ್ದಾರೆ. ಇಲ್ಲಿ ಮೊಳಗಿದ ವಿಜಯದುಂದುಭಿಯು ಭಾರತ ಹಾಕಿ ಪ್ರತಿಭಾವಂತರ ಅಕ್ಷಯಪಾತ್ರೆ ಎಂಬುದನ್ನು ಜಗತ್ತಿಗೆ ಸಾರಿ ಹೇಳಿದೆ.  1997ರಲ್ಲಿ ಇಂಗ್ಲೆಂಡ್‌ನ ಮಿಲ್ಟನ್‌ ಕೇನ್ಸ್‌ನಲ್ಲಿ ನಡೆದಿದ್ದ ಇದೇ ಟೂರ್ನಿಯ ಫೈನಲ್‌ನಲ್ಲಿ ಭಾರತ ಸೋತಿದ್ದರೆ, 2001ರಲ್ಲಿ ಆಸ್ಟ್ರೇಲಿಯಾದ ಹೋಬರ್ಟ್‌ನಲ್ಲಿ ನಡೆದಿದ್ದ ಕೂಟದಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಎತ್ತಿಕೊಂಡಿತ್ತು. ಇದೀಗ ಸರಿಯಾಗಿ ಒಂದೂವರೆ ದಶಕದ ನಂತರ ಈ ಟ್ರೋಫಿಯನ್ನು ಭಾರತ ತಂಡ ಮತ್ತೆ ಗೆದ್ದುಕೊಂಡಿದೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಟೂರ್ನಿಯು ಹಾಕಿ ಲೋಕದ ಪ್ರಮುಖ ತಂಡಗಳಿಗೆಲ್ಲಾ ಬಹಳ ಮಹತ್ವದ್ದೇ ಆಗಿದೆ. ಸೀನಿಯರ್‌ ವಿಭಾಗದಲ್ಲಿ ಅದೆಷ್ಟೇ ಪ್ರಬಲವಿದ್ದರೂ, ಕಿರಿಯರ ವಿಭಾಗದ ಸಾಮರ್ಥ್ಯದ ಮೇಲೆ ಆ ದೇಶದ ಭವಿಷ್ಯದ ಹಾಕಿ ಪ್ರಾಬಲ್ಯವನ್ನು ನಿರ್ಧರಿಸುವುದು ಸಹಜ. ಈ ದಿಸೆಯಲ್ಲಿ ಭಾರತದ ಹಾಕಿ ಭವಿಷ್ಯ ಆಶಾದಾಯಕವಾಗಿದೆ ಎಂಬುದು ಸಾಬೀತಾದಂತಾಗಿದೆ.

ಈ ದೇಶದಲ್ಲಿ ಹಾಕಿಯ ಆಡಳಿತವನ್ನು ‘ಹಾಕಿ ಇಂಡಿಯಾ’ ಕೈಗೆತ್ತಿಕೊಂಡ ಮೇಲೆ ಬಹಳಷ್ಟು ಪ್ರಗತಿಯಾಗಿದೆ. ದೇಶದೊಳಗೆ ನಡೆಯುವ ಪ್ರಮುಖ ಟೂರ್ನಿಗಳೆಲ್ಲಾ ಹೊಸ ಆಯಾಮ ಕಂಡುಕೊಂಡಿವೆ. ಕಿರಿಯರ ಮಟ್ಟಿಗಿನ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕೂಟಗಳು ಶಿಸ್ತುಬದ್ಧವಾಗಿ ನಡೆಯುತ್ತಿವೆ. ಹೀಗಾಗಿ ಪ್ರತಿಭಾನ್ವೇಷಣೆ ಪರಿಣಾಮಕಾರಿಯಾಗಿದೆ. ದೇಶದ ಮೂಲೆ ಮೂಲೆಗಳಲ್ಲಿ ಹಾಕಿ ಪ್ರತಿಭೆಗಳು ಹೊಳೆಯತೊಡಗಿವೆ. ತರಬೇತಿಯೂ ವ್ಯವಸ್ಥಿತ ಸ್ವರೂಪ ಕಂಡುಕೊಂಡಿದೆ. ವೃತ್ತಿಪರ ಲೀಗ್‌ ಕೂಡಾ ಹೆಚ್ಚು ಜನರನ್ನು ಆಕರ್ಷಿಸುವಲ್ಲಿ ಯಶಸ್ಸು ಕಂಡಿದೆ. ಅತ್ಯುತ್ತಮ ಆಟಗಾರರಿಗೆ ದೊಡ್ಡ ಮಟ್ಟದಲ್ಲೇ ಹಣ ಸಿಗುತ್ತಿದೆ. ರಾಷ್ಟ್ರೀಯ ತಂಡದ ಆಟಗಾರರಿಗೆ  ವಿದೇಶಗಳಲ್ಲಿ ನಡೆಯುವ ಟೂರ್ನಿಗಳಲ್ಲಿ ಆಡುವ ಅವಕಾಶಗಳೂ ಹೆಚ್ಚಾಗಿವೆ. ಇದರಿಂದ ಆಟಗಾರರ ಅನುಭವಕ್ಕೆ ಸಾಣೆ ಹಿಡಿದಂತಾಗುತ್ತಿದೆ. ಈ ಕ್ರೀಡೆಗೆ ಸಂಬಂಧಿಸಿದಂತೆ ಭಾರತದಲ್ಲಿ ತರಬೇತಿ ಹಿಂದೆಂದಿಗಿಂತಲೂ ಇಂದು ಹೆಚ್ಚು ವೈಜ್ಞಾನಿಕ ಸ್ವರೂಪ ಪಡೆದುಕೊಂಡಿದೆ. ಜಗತ್ತಿನ ಪ್ರಬಲ ತಂಡಗಳ ಆಟಗಾರರು ಆಡುವ ಪರಿ, ಬಳಸುವ ತಂತ್ರಗಾರಿಕೆಗಳ ವಿಡಿಯೊಗಳನ್ನಿರಿಸಿಕೊಂಡು ಇಲ್ಲಿನ ಆಟಗಾರರ ತಂತ್ರಗಳನ್ನು ಉತ್ತಮ ಪಡಿಸಲಾಗುತ್ತಿದೆ. ಇಂತಹ ಎಲ್ಲಾ ಬೆಳವಣಿಗೆಗಳು ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ.

ಭಾರತದ ಸೀನಿಯರ್‌ ತಂಡ ಕೂಡಾ ಈಚೆಗೆ ಒಂದರ ಮೇಲೊಂದರಂತೆ ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಟೂರ್ನಿಗಳಲ್ಲಿ ಎತ್ತರಕ್ಕೇರುತ್ತಿದೆ. ಕೇವಲ ಒಂದು ತಿಂಗಳ ಹಿಂದಷ್ಟೇ ಭಾರತದ ಆಟಗಾರರು ಏಷ್ಯನ್‌ ಹಾಕಿ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಏಷ್ಯಾದ ಬಲಿಷ್ಠ ತಂಡಗಳಲ್ಲಿ ಒಂದಾದ ಪಾಕಿಸ್ತಾನವನ್ನು ಮಣಿಸಿ ಪ್ರಶಸ್ತಿ ಗೆದ್ದಿದ್ದಾರೆ. ಇಂತಹ ಸಾಧನೆಗಳು ಈ ದೇಶದ ಕಿರಿಯ ಆಟಗಾರರಿಗೆ ಮಾದರಿ ಎನಿಸಿವೆ ಮತ್ತು ಕಿರಿಯರಲ್ಲಿ ಆತ್ಮಸ್ಥೈರ್ಯ ವೃದ್ಧಿಸುವಂತೆ ಮಾಡಿವೆ. ಲಖನೌನಲ್ಲಿ ಪ್ರಶಸ್ತಿ ಗೆದ್ದಿರುವ ಭಾರತದ ಸಾಧನೆಯ ಹಿಂದೆ ಇಂತಹ ಹತ್ತು ಹಲವು ಪರಿಶ್ರಮದ ಮೆಟ್ಟಲುಗಳ ಕಥೆ ಇವೆ. ಹಾಕಿ ಇಂಡಿಯಾದ ಈ ಎಲ್ಲಾ ಪ್ರಯತ್ನಗಳಿಗೆ ಭಾರತ ಕ್ರೀಡಾ ಪ್ರಾಧಿಕಾರವೂ ಹೆಗಲು ನೀಡಿದೆ. ಹಾಕಿ ಯಶೋಗಾಥೆ ಇದೇ ರೀತಿ ಮುಂದುವರಿದಲ್ಲಿ ಈ ದೇಶವು ಹಾಕಿ ಜಗತ್ತಿನಲ್ಲಿ ತನ್ನ  ಪರಂಪರೆಯನ್ನು ಮತ್ತೆ ಎತ್ತಿ ಹಿಡಿಯುವುದು ಖಚಿತ. 

ಬಲು ಹಿಂದೆ ಭಾರತದ ಆಟಗಾರರು ಒಲಿಂಪಿಕ್ಸ್‌ನಲ್ಲಿ ಎಂಟು ಚಿನ್ನದ ಪದಕಗಳನ್ನು ಗೆದ್ದಿದ್ದರೆ, ಒಂದು ಸಲ ವಿಶ್ವಕಪ್‌ ಜಯಿಸಿದ್ದರು.  ಏಷ್ಯನ್‌ ಕ್ರೀಡಾ ಕೂಟದಲ್ಲಿಯೂ ಮೂರು ಸಲ ಭಾರತ ಚಿನ್ನ ಗೆದ್ದಿತ್ತು. ಆದರೆ ಕಳೆದ ಮೂರು ದಶಕಗಳಿಂದ ಈ ದೇಶ ಅಂತರರಾಷ್ಟ್ರೀಯ ಹಾಕಿ ವಲಯದಲ್ಲಿ ಅತಿ ಎತ್ತರದಲ್ಲಿ ಮಿಂಚಿದ್ದು ಕಡಿಮೆಯೇ. ಆಸ್ಟ್ರೇಲಿಯ, ಜರ್ಮನಿ, ದಕ್ಷಿಣ ಕೊರಿಯ, ಅರ್ಜೆಂಟೀನಾ, ನೆದರ್ಲೆಂಡ್ಸ್‌ ಮುಂತಾದ ದೇಶಗಳ ಎದುರು ಕಳಾಹೀನಗೊಂಡಿದ್ದೇ ಹೆಚ್ಚು. ಪ್ರಸಕ್ತ ವಿಶ್ವ ಜೂನಿಯರ್‌ ಕೂಟವನ್ನು ಯಶಸ್ವಿಯಾಗಿ ಭಾರತ ಸಂಘಟಿಸಿದೆ. ಇದಲ್ಲದೆ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ ಚುಕ್ಕಾಣಿಯೂ ಈಗ ಭಾರತದ ನರೇಂದ್ರ ಬಾತ್ರಾ ಕೈಯಲ್ಲಿದೆ. ಜಗತ್ತಿನಲ್ಲಿ ಹಾಕಿ ಆಡುವ ದೇಶಗಳಲ್ಲೆಲ್ಲಾ ಇವತ್ತು ಭಾರತದ ಪ್ರತಿಷ್ಠೆ ಹೆಚ್ಚಾಗಿದೆ. ಇದೀಗ ಲಖನೌನಲ್ಲಿ ಬಂದ ಪ್ರಶಸ್ತಿ ಭಾರತದ ಯಶೋಗಾಥೆಯ ಹೊಸತೊಂದು ಅಧ್ಯಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT